ಪದ್ಯ ೭: ಸಾರಥಿಯು ಯಾರು ಬಂದಿದ್ದಾರೆಂದು ಹೇಳಿದನು?

ತಂದು ಸಾರಥಿ ರಥವನೀತನ
ಮುಂದೆ ನಿಲಿಸಿದ ಬಿದ್ದನಂಘ್ರಿಯೊ
ಳಂದು ಗೋಳಿಟ್ಟೊರಲಿದುದು ಕಳಶಜನ ಪರಿವಾರ
ತಂದೆಯೈದನೆ ಚಾಪವೇದಮು
ಕುಂದನೈದನೆ ನಿನ್ನ ಕಾಣಲು
ಬಂದನಯ್ಯನನಪ್ಪಿಕೊಳು ಮಾತಾಡಿ ನೋಡೆಂದ (ದ್ರೋಣ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಸಾರಥಿಯು ರಥವನ್ನು ತಂದು ಅಶ್ವತ್ಥಾಮನ ಮುಂದೆ ನಿಲ್ಲಿಸಿದನು. ಅವನ ಪಾದದ ಮೇಲೆ ಬಿದ್ದು ದ್ರೋಣನ ಪರಿವಾರದವರು ಗೋಳಿಟ್ಟರು. ತಂದೆ ಬಂದಿದ್ದಾನೆ, ಧನುರ್ವೇದದ ನಾರಾಯಣನು ನಿನ್ನನ್ನು ನೋಡಲು ಬಂದಿದ್ದಾನೆ, ಅವನನ್ನು ನೋಡಿ ಆಲಂಗಿಸಿ ಮಾತಾಡಿಸು ಎಂದು ಸಾರಥಿಯು ಅಳುತ್ತಾ ಹೇಳಿದನು.

ಅರ್ಥ:
ತಂದು: ಬಂದು ಸೇರು; ಸಾರಥಿ: ಸೂತ; ರಥ: ಬಂಡಿ; ಮುಂದೆ: ಎದುರು; ನಿಲಿಸು: ನಿಲ್ಲು, ತಡೆ; ಬಿದ್ದು: ಬೀಳು; ಅಂಘ್ರಿ: ಪಾದ; ಗೋಳಿಡು: ಅಳು, ದುಃಖಿಸು; ಒರಲು: ಅರಚು, ಕೂಗಿಕೊಳ್ಳು; ಕಳಶಜ: ದ್ರೋಣ; ಪರಿವಾರ: ಬಂಧು ಬಳಗ; ತಂದೆ: ಅಯ್ಯ, ಪಿತ; ಐದು: ಬಂದುಸೇರು; ಚಾಪ: ಬಿಲ್ಲು; ಮುಕುಂದ: ಕೃಷ್ಣ; ಕಾಣು: ತೋರು; ಅಯ್ಯ: ತಂದೆ; ಅಪ್ಪು: ಆಲಂಗಿಸು; ಮಾತು: ವಾಣಿ; ನೋಡು: ವೀಕ್ಷಿಸು;

ಪದವಿಂಗಡಣೆ:
ತಂದು +ಸಾರಥಿ +ರಥವನ್+ಈತನ
ಮುಂದೆ +ನಿಲಿಸಿದ+ ಬಿದ್ದನ್+ಅಂಘ್ರಿಯೊಳ್
ಅಂದು +ಗೋಳಿಟ್ಟ್+ಒರಲಿದುದು +ಕಳಶಜನ +ಪರಿವಾರ
ತಂದೆ+ಐದನೆ +ಚಾಪವೇದ+ಮು
ಕುಂದನ್+ಐದನೆ +ನಿನ್ನ +ಕಾಣಲು
ಬಂದನ್+ಅಯ್ಯನನ್+ಅಪ್ಪಿಕೊಳು +ಮಾತಾಡಿ +ನೋಡೆಂದ

ಅಚ್ಚರಿ:
(೧) ದ್ರೋಣರನ್ನು ವಿವರಿಸಿದ ಪರಿ – ತಂದೆಯೈದನೆ ಚಾಪವೇದಮುಕುಂದನೈದನೆ

ನಿಮ್ಮ ಟಿಪ್ಪಣಿ ಬರೆಯಿರಿ