ಪದ್ಯ ೬: ಅರ್ಜುನನು ಸೇನೆಯಲ್ಲಿ ಯಾವ ವಿಷಯವನ್ನು ಸಾರಿದನು?

ಬಳಲಿದಿರಿ ಹಗಲಿರುಳಕಾಳೆಗ
ದೊಳಗೆ ಕೈಮಾಡಿದಿರಿ ಕಗ್ಗ
ತ್ತಲೆಯ ಬಲುಗಂಡಿಯಲಿ ಸಿಲುಕಿತು ಕಂಗಳಂಗವಣೆ
ನಳಿನರಿಪುವುದಯಿಸಲಿ ಬೆಳುದಿಂ
ಗಳಲಿ ಕೈದುವ ಕೊಳ್ಳಿ ನಿದ್ರೆಯ
ನಿಳಿಯಬಿಡಬೇಕೆಂದು ಸೇನೆಗೆ ಸಾರಿದನು ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಹಗಲೂ, ಇರುಳು ಯುದ್ಧಮಾಡಿ ಬಳಲಿದ್ದೀರಿ. ಕಗ್ಗತ್ತಲಿನಲ್ಲಿ ಕಣ್ಣು ಕಾಣಿಸುತ್ತಿಲ್ಲ, ಚಂದ್ರನು ಹುಟ್ಟಿದ ಮೇಲೆ ಆಯುಧಗಳನ್ನು ಹಿಡಿಯಿರಿ. ನಿದ್ರಿಸಬೇಡಿ, ಎಂದು ಅರ್ಜುನನು ಸೇನೆಯಲ್ಲಿ ಸಾರಿದನು.

ಅರ್ಥ:
ಬಳಲು: ಆಯಾಸಗೊಳ್ಳು; ಹಗಲು: ದಿನ; ಇರುಳು: ರಾತ್ರಿ; ಕಾಳೆಗ: ಯುದ್ಧ; ಕೈಮಾಡು: ಹೋರಾದು; ಕಗ್ಗತ್ತಲೆ: ದಟ್ಟವಾದ ಅಂಧಕಾರ; ಕಂಡಿ: ರಂಧ್ರ, ತೂತು; ಸಿಲುಕು: ಬಂಧನಕ್ಕೊಳಗಾಗು; ಕಂಗಳು: ಕಣ್ಣು; ಅಂಗವಣೆ: ರೀತಿ, ಬಯಕೆ; ನಳಿನ: ಕಮಲ; ರಿಪು: ವೈರಿ; ಉದಯ: ಹುಟ್ಟು; ಬೆಳುದಿಂಗಳು: ಹುಣ್ಣಿಮೆ; ಕೈದು: ಆಯುಧ; ಕೊಳ್ಳು: ತೆಗೆದುಕೋ; ನಿದ್ರೆ: ಶಯನ; ಇಳಿ: ಜಾರು; ಸೇನೆ: ಸೈನ್ಯ; ಸಾರು: ಪಸರಿಸು;

ಪದವಿಂಗಡಣೆ:
ಬಳಲಿದಿರಿ +ಹಗಲಿರುಳ+ಕಾಳೆಗ
ದೊಳಗೆ +ಕೈಮಾಡಿದಿರಿ +ಕಗ್ಗ
ತ್ತಲೆಯ +ಬಲುಗಂಡಿಯಲಿ +ಸಿಲುಕಿತು +ಕಂಗಳ್+ಅಂಗವಣೆ
ನಳಿನರಿಪು+ಉದಯಿಸಲಿ +ಬೆಳುದಿಂ
ಗಳಲಿ +ಕೈದುವ +ಕೊಳ್ಳಿ +ನಿದ್ರೆಯನ್
ಇಳಿಯಬಿಡಬೇಕೆಂದು +ಸೇನೆಗೆ +ಸಾರಿದನು +ಪಾರ್ಥ

ಅಚ್ಚರಿ:
(೧) ಚಂದ್ರನನ್ನು ನಳಿನರಿಪು ಎಂದು ಕರೆದಿರುವುದು
(೨) ಹಗಲು, ಇರುಳು – ವಿರುದ್ಧ ಪದಗಳು

ಪದ್ಯ ೫: ಅರ್ಜುನನು ಏನೆಂದು ಘೋಷಿಸಿದನು?

ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಶಿವಶಿವಾ ಸೈನ್ಯವು ಹೋರಾಡಿ ಬಳಲಿದೆ, ನಿದ್ದೆಯ ಕಾಟ ಹೆಚ್ಚಿದೆ, ಕತ್ತಲು ಹೋಗುವವರೆಗೂ ಯುದ್ಧಬೇಡ, ಎಂದು ಚಿಂತಿಸಿ ಸೈನ್ಯಕ್ಕೆ ಲಗ್ಗೆಯನ್ನು ನಿಲ್ಲಿಸಿ ಎಂದು ಅರ್ಜುನನು ಗಂಭೀರ ಘೋಷ ಮಾಡಿದನು.

ಅರ್ಥ:
ಬಳಲು: ಆಯಾಸಗೊಳ್ಳು; ಅವಗಡಿಸು: ಕಡೆಗಣಿಸು; ನಿದ್ದೆ: ಶಯನ; ನೂಕು: ತಳ್ಳು; ಬವರ: ಕಾಳಗ, ಯುದ್ಧ; ಉಬ್ಬು: ಹೆಚ್ಚಾಗು; ತಿಮಿರ: ಕತ್ತಲೆ; ಸಾಕು: ನಿಲ್ಲು ರಣ: ಯುಚ್ಛ; ದಿವಿಜಪತಿ: ದೇವತೆಗಳ ಒಡೆಯ (ಇಂದ್ರ); ಸುತ: ಪುತ್ರ; ಎದ್ದು: ಮೇಲೇಳು; ನಿವಹ: ಗುಂಪು; ಸಾರು: ಹತ್ತಿರಕ್ಕೆ ಬರು; ಲಗ್ಗೆ: ಆಕ್ರಮಣ; ರವ: ಶಬ್ದ; ನಿಲಿಸು: ನಿಲ್ಲು; ಘನ: ಗಟ್ಟಿ; ಗಂಭೀರ: ಆಳವಾದ, ಗಹನವಾದ; ನಾದ: ಶಬ್ದ;

ಪದವಿಂಗಡಣೆ:
ಶಿವಶಿವಾ +ಬಳಲಿದುದು +ಬಲವಗಿದ್
ಅವಗಡಿಸಿದುದು +ನಿದ್ದೆ +ನೂಕದು
ಬವರವ್+ಉಬ್ಬಿದ +ತಿಮಿರವಳಿಯಲಿ +ಸಾಕು +ರಣವೆನುತ
ದಿವಿಜಪತಿಸುತನ್+ಎದ್ದು +ಸೇನಾ
ನಿವಹದಲಿ +ಸಾರಿದನು +ಲಗ್ಗೆಯ
ರವವ+ ನಿಲಿಸಿದನ್+ಅಖಿಳ +ಘನಗಂಭೀರ+ನಾದದಲಿ +ಪಾರ್ಥ

ಅಚ್ಚರಿ:
(೧) ಅರ್ಜುನನನ್ನು ದಿವಿಜಪತಿಸುತ ಎಂದು ಕರೆದಿರುವುದು
(೨) ಬವರ, ರಣ – ಸಮಾನಾರ್ಥಕ ಪದಗಳು

ಪದ್ಯ ೪: ಅರ್ಜುನನು ಏನನ್ನು ನೋಡಿದನು?

ಒಳಗೊಳಗೆ ಹೊಯಿದಾಡಿ ಹೊರಳುವ
ಬಲುಭಟರನಗಿದೊಗುವ ಬಲುಗ
ತ್ತಲೆಯ ಕೋಳಾಹಳವನುಭಯದ ಚಾತುರಂಗದಲಿ
ಬಲಿದ ತೂಕಡಿಕೆಗಳ ನಸು ಬೆದ
ರೊಲಹುಗಳ ಜವವೆದ್ದ ಝೊಮ್ಮಿನ
ಬಲೆಗೆ ಸಿಲುಕಿದ ಬಲವನರ್ಜುನದೇವನೀಕ್ಷಿಸಿದ (ದ್ರೋಣ ಪರ್ವ, ೧೭ ಸಂಧಿ, ೪ ಪದ್ಯ)

ತಾತ್ಪರ್ಯ:
ತಮ್ಮ ತಮ್ಮಲ್ಲೇ ಹೊಯ್ದಾಡಿ ಸತ್ತು ಬೀಳುವ ವೀರರನ್ನೂ, ಉಭಯ ಸೈನ್ಯವನ್ನೂ ಮುತ್ತುವ ಕತ್ತಲೆಯನ್ನೂ, ಯೋಧರು ತೂಕಡಿಸುವುದನ್ನೂ, ಮೈ ಝೊಮ್ಮಿನಿಂದ ಬೆದರಿ ಬಳಲುವ ಸೈನ್ಯವನ್ನೂ ಅರ್ಜುನನು ನೋಡಿದನು.

ಅರ್ಥ:
ಒಳಗೆ: ಅಂತರ್ಯ; ಹೊಯಿದಾಡು: ಹೋರಾಡು; ಹೊರಳು: ತಿರುವು, ಬಾಗು; ಬಲು: ಶಕ್ತಿ; ಭಟ: ಸೈನಿಕ; ಅಗಿ: ತೋಡು; ಬಲುಗತ್ತಲೆ: ಬಹಳ ಅಂಧಕಾರ; ಕೋಳಾಹಳ: ಗೊಂದಲ; ಉಭಯ: ಎರಡು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲಿ: ಗಟ್ಟಿಯಾದ; ತೂಕಡಿಕೆ: ನಿದ್ದೆ ಬಂದ ಸ್ಥಿತಿ; ನಸು: ಕೊಂಚ, ಸ್ವಲ್ಪ; ಬೆದರು: ಹೆದರು; ಒಲಹು: ಪ್ರೀತಿ; ಜವ: ಯಮ, ವೇಗ; ಝೊಮ್ಮು: ಪುಳುಕಿತ; ಬಲೆ: ಜಾಲ; ಸಿಲುಕು: ಬಂಧಿಸು; ಬಲ: ಶಕ್ತಿ; ಈಕ್ಷಿಸು: ನೋಡು;

ಪದವಿಂಗಡಣೆ:
ಒಳಗೊಳಗೆ +ಹೊಯಿದಾಡಿ +ಹೊರಳುವ
ಬಲು+ಭಟರನ್+ಅಗಿದೊಗುವ +ಬಲುಗ
ತ್ತಲೆಯ +ಕೋಳಾಹಳವನ್+ಉಭಯದ +ಚಾತುರಂಗದಲಿ
ಬಲಿದ +ತೂಕಡಿಕೆಗಳ +ನಸು +ಬೆದರ್
ಒಲಹುಗಳ +ಜವವೆದ್ದ +ಝೊಮ್ಮಿನ
ಬಲೆಗೆ +ಸಿಲುಕಿದ +ಬಲವನ್+ಅರ್ಜುನದೇವನ್+ಈಕ್ಷಿಸಿದ

ಅಚ್ಚರಿ:
(೧) ಬಲುಭಟ, ಬಲುಗತ್ತಲೆ – ಬಲು ಪದದ ಬಳಕೆ

ಪದ್ಯ ೩: ಸುಭಟರು ಹೇಗೆ ಕಾದಿದರು?

ಅಂಗವಣೆ ಮನದಲ್ಲಿ ಪದದಲಿ
ಮುಂಗುಡಿಯ ದುವ್ವಾಳಿ ಕಯ್ಯಲಿ
ಸಿಂಗದಾಯತ ಸವೆಯದೆರಡೊಡ್ಡಿನಲಿ ಸುಭಟರಿಗೆ
ಕಂಗಳನು ಕಾರಿರುಳು ರಕ್ಕಸಿ
ನುಂಗಿದಳು ನಾನೇನನುಸುರುವೆ
ನಂಗವಿಸಿ ಕಡುಗಲಿಗಳಿರಿದಾಡಿದರು ತಮ್ಮೊಳಗೆ (ದ್ರೋಣ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ಸೈನಿಕರಿಗೆ ಮನಸ್ಸಿನಲ್ಲಿ ಉತ್ಸಾಹ, ಕಾಲುಗಳಿಗೆ ಮುನ್ನುಗ್ಗುವ ತವಕ, ಕೈಯಲ್ಲಿ ಸಿಂಹಬಲ ಕಡಿಮೆಯೇ ಆಗಲಿಲ್ಲ. ಆದರೆ ಕಣ್ಣುಗಳನ್ನು ಕಾರಿರುಳಿನ ರಾಕ್ಷಸಿ ನುಂಗಿದಳು. ಏನು ಹೇಳಲಿ ವೀರರು ತಮ್ಮೊಳಗೆ ಇರಿದಾಡಿದರು.

ಅರ್ಥ:
ಅಂಗವಣೆ: ರೀತಿ, ಬಯಕೆ; ಮನ: ಮನಸ್ಸು; ಪದ: ಚರಣ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಕಯ್ಯಲಿ: ಹಸ್ತದಲ್ಲಿ; ಸಿಂಗ: ಸಿಂಹ; ಆಯತ: ಅಣಿಗೊಳಿಸು, ಸಿದ್ಧ, ಸಹಜ; ಸವೆ: ತೀರು; ಒಡ್ಡು: ಸೈನ್ಯ; ಸುಭಟ: ಸೈನಿಕ, ಪರಾಕ್ರಮಿ; ಕಂಗಳು: ಕಣ್ಣು; ಕಾರಿರುಳು: ದಟ್ಟವಾದ ಕತ್ತಲು; ರಕ್ಕಸಿ: ರಾಕ್ಷಸಿ; ನುಂಗು: ತಿನ್ನು; ಉಸುರುವೆ: ಹೇಳು; ಅಂಗವಿಸು: ಬಯಸು; ಕಡುಗಲಿ: ಮಹಾಶೂರ; ಇರಿ: ಚುಚ್ಚು;

ಪದವಿಂಗಡಣೆ:
ಅಂಗವಣೆ +ಮನದಲ್ಲಿ +ಪದದಲಿ
ಮುಂಗುಡಿಯ +ದುವ್ವಾಳಿ +ಕಯ್ಯಲಿ
ಸಿಂಗದಾಯತ +ಸವೆಯದ್+ಎರಡ್+ಒಡ್ಡಿನಲಿ +ಸುಭಟರಿಗೆ
ಕಂಗಳನು+ ಕಾರಿರುಳು +ರಕ್ಕಸಿ
ನುಂಗಿದಳು +ನಾನೇನನ್+ಉಸುರುವೆನ್
ಅಂಗವಿಸಿ+ ಕಡುಗಲಿಗಳ್+ಇರಿದಾಡಿದರು+ ತಮ್ಮೊಳಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಕಂಗಳನು ಕಾರಿರುಳು ರಕ್ಕಸಿ ನುಂಗಿದಳು

ಪದ್ಯ ೨: ಪಾಂಡವರ ಸೈನ್ಯವು ಕರ್ಣನನ್ನು ಹೇಗೆ ಕೊಲ್ಲುತ್ತೇವೆಂದರು?

ಇನ್ನು ಬದುಕಿದೆವಮಮ ರಕ್ಕಸ
ಕುನ್ನಿಯೂಳಿಗವಡಗಿತೆಂದೇ
ನಿನ್ನವರ ಸುಮ್ಮಾನವುಕ್ಕಿತು ಸುಕ್ಕಿತತಿಭೀತಿ
ಇನ್ನು ಫಡಫಡ ಸೂತತನುಜನ
ಬೆನ್ನಲುಗಿವೆವು ಕರುಳನಾಹವ
ಕೆನ್ನ ಬಿಡುಬಿಡು ಎನುತ ಗರ್ಜಿಸಿ ಹೊಕ್ಕುದರಿಸೇನೆ (ದ್ರೋಣ ಪರ್ವ, ೧೭ ಸಂಧಿ, ೨ ಪದ್ಯ)

ತಾತ್ಪರ್ಯ:
ನಾವಿನ್ನು ಬದುಕಿದೆವು. ಈ ರಾಕ್ಷಸ ಕುನ್ನಿಯ ಅಬ್ಬರದ ಕಾಟ ನಿಂತು ಹೋಯಿತು ಎಂದು ಕೌರವರ ಭಯವು ಹೋಗಿ ಸಂತೋಷವುಕ್ಕಿತು. ಪಾಂಡವರ ಸೈನ್ಯವು ಫಡ ಫಡ ಸೂತಪುತ್ರನ ಬೆನ್ನಲ್ಲಿ ಕರುಳನ್ನು ತೆಗೆಯುತ್ತೇವೆ. ಯುದ್ಧಕ್ಕೆ ನನ್ನನ್ನು ಬಿಡು ತನ್ನನ್ನು ಬಿಡು ಎಂದು ಗರ್ಜಿಸಿ ರಣರಂಗದಲ್ಲಿ ಮುನ್ನುಗ್ಗಿತು.

ಅರ್ಥ:
ಬದುಕು: ಜೀವಿಸು; ಅಮಮ: ಅಬ್ಬಬ್ಬಾ; ರಕ್ಕಸ: ರಾಕ್ಷಸ; ಕುನ್ನಿ: ನಾಯಿ; ಊಳಿಗ: ಕೆಲಸ, ಕಾರ್ಯ; ಅಡಗು: ಅವಿತುಕೊಳ್ಳು; ಸುಮ್ಮಾನ: ಸಂತೋಷ; ಉಕ್ಕು: ಹೆಚ್ಚಾಗು; ಸುಕ್ಕು: ತೆರೆಗಟ್ಟಿರುವುದು; ಭೀತಿ: ಭಯ; ಫಡ: ತಿರಸ್ಕಾರದ ಮಾತು; ಸೂತ: ಸಾರಥಿ; ತನುಜ: ಮಗ; ಬೆನ್ನು: ಹಿಂಭಾಗ; ಅಲಗು: ಆಯುಧದ ಮೊನೆ, ಕತ್ತಿ; ಕರುಳು: ಪಚನಾಂಗ; ಆಹವ: ಯುದ್ಧ; ಬಿಡು: ತೊರೆ; ಗರ್ಜಿಸು: ಆರ್ಭಟಿಸು; ಹೊಕ್ಕು: ಸೇರು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಇನ್ನು +ಬದುಕಿದೆವ್+ಅಮಮ +ರಕ್ಕಸ
ಕುನ್ನಿ+ಊಳಿಗವ್+ಅಡಗಿತೆಂದೇ
ನಿನ್ನವರ +ಸುಮ್ಮಾನವ್+ಉಕ್ಕಿತು+ ಸುಕ್ಕಿತ್+ಅತಿಭೀತಿ
ಇನ್ನು +ಫಡಫಡ +ಸೂತ+ತನುಜನ
ಬೆನ್ನಲುಗಿವೆವು+ ಕರುಳನ್+ಆಹವಕ್
ಎನ್ನ +ಬಿಡುಬಿಡು +ಎನುತ +ಗರ್ಜಿಸಿ +ಹೊಕ್ಕುದ್+ಅರಿಸೇನೆ

ಅಚ್ಚರಿ:
(೧) ಬಯ್ಯುವ ಪರಿ – ರಕ್ಕಸ ಕುನ್ನಿ
(೨) ಫಡಫಡ, ಬಿಡುಬಿಡು – ಜೋಡಿ ಪದಗಳ ಬಳಕೆ