ಪದ್ಯ ೫೦: ಕರ್ಣನು ಯಾವ ಅಸ್ತ್ರವನ್ನು ತೆಗೆದನು?

ಕಾರಿಸುವೆನಿವನಸುವನಿವ ಮೈ
ದೋರಿ ನಿಂದರೆ ನಿಮಿಷದಲಿ ಬಾ
ಯಾರದಿರಿ ಕಳ್ಳೇರುಕಾರನ ಕರುಳ ಹರಹುವೆನು
ಜಾರದಿರಿಯೆನುತಭಯಹಸ್ತವ
ತೋರಿ ತುಡುಕಿದನುಗ್ರಧಾರೆಯ
ತೂರುಗಿಡಿಗಳ ತುರುಗಿದುರಿಯ ಮಹಾಸ್ತ್ರವನು ಕರ್ಣ (ದ್ರೋಣ ಪರ್ವ, ೧೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸೈನಿಕರ ಈ ಮಾತನ್ನು ಕೇಳಿ ಕರ್ಣನು, ಇವನು ಇದಿರು ನಿಂತರೆ ಇವನ ಪ್ರಾಣವನ್ನು ತೆಗೆಯುತ್ತೇನೆ, ಅಲ್ಲಿಯವರೆಗೆ ಬಾಯಿಗೆ ಬಂದಂತೆ ಮಾತಾಡಬೇಡಿ, ಓಡಿಹೋಗಬೇಡಿ, ಮದ್ಯಪಾಯಿಯ (ರಾಕ್ಷಸ) ಕರುಳನ್ನು ನೆಲದಮೇಲೆ ಹರಡುತ್ತೇನೆ, ಎಂದು ತನ್ನವರಿಗೆ ಅಭಯಹಸ್ತವನ್ನು ತೋರಿಸಿದನು. ಉಗ್ರಧಾರೆಯುಳ್ಳ, ಕಿಡಿಯುಗುಳುವ, ಉರಿಯುಗುಳುವ ಮಹಾಸ್ತ್ರವನ್ನು ಕರ್ಣನು ಬತ್ತಳಿಕೆಯಿಂದ ಎಳೆದನು.

ಅರ್ಥ:
ಅಸು: ಪ್ರಾಣ; ಮೈ; ತನು, ದೇಹ; ತೋರು: ಗೋಚರಿಸು; ನಿಂದು: ನಿಲ್ಲು; ನಿಮಿಷ: ಕ್ಷಣ; ಕರುಳು: ಪಚನಾಂಗ; ಹರಹು: ವಿಸ್ತಾರ, ವೈಶಾಲ್ಯ; ಜಾರು: ಕೆಳಕ್ಕೆ ಬೀಳು; ಅಭಯ: ನಿರ್ಭಯತೆ, ರಕ್ಷಣೆ; ಹಸ್ತ: ಕೈ; ತೋರು: ಗೋಚರಿಸು; ತುಡುಕು: ಹೋರಾಡು, ಸೆಣಸು; ಉಗ್ರ: ಪ್ರಚಂಡತೆ, ಭಯಂಕರ; ಧಾರೆ: ಮಳೆ; ತೂರು: ಹೊರಸೂಸು; ಕಿಡಿ: ಬೆಂಕಿ; ತುರುಗು: ಸಂದಣಿಸು; ಮಹಾಸ್ತ್ರ: ದೊಡ್ಡ ಅಸ್ತ್ರ; ಕಳ್ಳೇರು: ಕಪಟ; ಕಳ್ಳೇರುಕಾರ: ಕಪಟ ಯುದ್ಧ ಮಾಡುವವ;

ಪದವಿಂಗಡಣೆ:
ಕಾರಿಸುವೆನಿವನ್+ಅಸುವನ್+ಇವ+ ಮೈ
ದೋರಿ +ನಿಂದರೆ +ನಿಮಿಷದಲಿ+ ಬಾ
ಯಾರದಿರಿ+ ಕಳ್ಳೇರುಕಾರನ +ಕರುಳ +ಹರಹುವೆನು
ಜಾರದಿರಿ+ಎನುತ್+ಅಭಯ+ಹಸ್ತವ
ತೋರಿ +ತುಡುಕಿದನ್+ಉಗ್ರಧಾರೆಯ
ತೂರು+ಕಿಡಿಗಳ +ತುರುಗಿದ್+ಉರಿಯ +ಮಹಾಸ್ತ್ರವನು +ಕರ್ಣ

ಅಚ್ಚರಿ:
(೧) ಘಟೋತ್ಕಚನನ್ನು ಕಳ್ಳೇರುಕಾರ ಎಂದು ಕರೆದಿರುವುದು
(೨) ತ ಕಾರದ ಸಾಲು ಪದ – ತೋರಿ ತುಡುಕಿದನುಗ್ರಧಾರೆಯ ತೂರುಗಿಡಿಗಳ ತುರುಗಿದುರಿಯ

ಪದ್ಯ ೪೯: ಕರ್ಣನನ್ನು ಹೇಗೆ ಹೊಗಳಿದರು?

ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರೆತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು (ದ್ರೋಣ ಪರ್ವ, ೧೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕೌರವ ಯೋಧರು, ಬರಿಯ ಕಕುಲಾತಿಯಿಂದ ಕರ್ಣನ ಮರೆಹೊಕ್ಕೆವು, ಕರ್ಣನು ಇವನನ್ನು ತಡೆದು ನಿಲ್ಲಿಸಿದ. ಆದರೆ ಅವನ ಬಳಿಯಿರುವ ಶಕ್ತ್ಯಾಯುಧವೆಲ್ಲಿ ಎಂದು ಕೆಲವರು, ಮತ್ಸರವೇಕೆ ನಮ್ಮ ಪುಣ್ಯಹೀನವಾದರೆ ಕರ್ಣನೇನು ಮಾಡಲು ಸಾಧ್ಯ? ಘಟೋತ್ಕಚನ ಇರಿತಕ್ಕೆ ಹೆದರಿದ ನಾವೇ ಬಾರಿರರು ಎಂದು ಇನ್ನು ಕೆಲವರು ಮಾತನಾಡಿಕೊಂಡರು.

ಅರ್ಥ:
ಕಕ್ಕುಲಿತೆ: ಚಿಂತೆ; ಮರೆ: ಅಡ್ಡಿ, ತಡೆ; ಹೊಕ್ಕು: ಸೇರು; ತರುಬು: ತಡೆ, ನಿಲ್ಲಿಸು; ಶಕ್ತಿ: ಬಲ; ಕರುಬು: ಹೊಟ್ಟೆಕಿಚ್ಚು ಪಡು; ಅಕಟ: ಅಯ್ಯೋ; ಪುಣ್ಯ: ಸದಾಚಾರ; ಕೊರತೆ: ಕಡಮೆ; ಏಗು: ಸಾಗಿಸು; ಇರಿ: ಚುಚ್ಚು; ಅಂಜು: ಹೆದರು; ಬಾಹಿರ: ಹೊರಗೆ; ಉಳಿದ: ಮಿಕ್ಕ;

ಪದವಿಂಗಡಣೆ:
ಬರಿಯ +ಕಕ್ಕುಲಿತೆಯಲಿ +ಕರ್ಣನ
ಮರೆಯ +ಹೊಕ್ಕೆವು +ಕರ್ಣನ್+ಈತನ
ತರುಬಿದನಲಾ+ ಶಕ್ತಿಯಾವೆಡೆ+ಎಂದು+ ಕೆಲಕೆಲರು
ಕರುಬುತನವೇಕ್+ಅಕಟ +ಪುಣ್ಯದ
ಕೊರೆತೆ +ನಮ್ಮದು +ಕರ್ಣನೇಗುವನ್
ಇರಿತಕ್+ಅಂಜಿದ +ನಾವೆ +ಬಾಹಿರರ್+ಎಂದರ್+ಉಳಿದವರು

ಅಚ್ಚರಿ:
(೧) ಪುಣ್ಯದ ಮಹಿಮೆ – ಕರುಬುತನವೇಕಕಟ ಪುಣ್ಯದ ಕೊರೆತೆ ನಮ್ಮದು

ಪದ್ಯ ೪೮: ಘಟೋತ್ಕಚನ ಯುದ್ಧವು ಹೇಗೆ ರಣರಂಗವನ್ನು ತಲ್ಲಣಗೊಳಿಸಿತು?

ಅಣೆದನಶ್ವತ್ಥಾಮನನು ತ
ಕ್ಷಣದೊಳರಸನ ತಾಗಿ ದ್ರೋಣನ
ಕೆಣಕಿ ದುಶ್ಯಾಸನನ ಮಸೆಗಾಣಿಸಿ ಕೃಪಾದಿಗಳ
ರಣದೊಳೋಡಿಸಿ ಮುರಿದು ಕರ್ಣನ
ಸೆಣಸಿ ನಿಂದನು ಮತ್ತೆ ಸಮರಾಂ
ಗಣದ ಚೌಪಟಮಲ್ಲನಿತ್ತನು ಪಡೆಗೆ ತಲ್ಲಣವ (ದ್ರೋಣ ಪರ್ವ, ೧೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ತಿವಿದು, ಅದೇ ಕ್ಷಣದಲ್ಲಿ ಕೌರವನನ್ನು ಹೊಡೆದು, ದ್ರೋಣನನ್ನು ಕೆಣಕಿ, ದುಶ್ಯಾಸನನಿಗೆ ಗಾಯಮಾಡಿ, ಕೃಪಾದಿಗಳನ್ನು ಓಡಿಸಿ ಹಿಂದಿರುಗಿ ಬಂದು ಕರ್ಣನೊಡನೆ ಸಮರಕ್ಕೆ ನಿಂತು ರಣರಂಗವು ತಲ್ಲಣಿಸುವಂತೆ ಮಾಡಿದನು.

ಅರ್ಥ:
ಅಣೆ: ತಿವಿ, ಹೊಡೆ; ತಕ್ಷಣ: ಕೂಡಲೆ; ಅರಸ: ರಾಜ; ತಾಗು: ಹೊಡೆತ, ಪೆಟ್ಟು; ಕೆಣಕು: ರೇಗಿಸು; ಮಸೆ: ಹರಿತವಾದುದು; ರಣ: ಯುದ್ಧ; ಓಡು: ಧಾವಿಸು; ಮುರಿ: ಸೀಳು; ಸೆಣಸು: ಯುದ್ಧಮಾಡು; ನಿಂದು: ನಿಲ್ಲು; ಸಮರಾಂಗಣ: ಯುದ್ಧಭೂಮಿ; ಚೌಪಟಮಲ್ಲ: ಪರಾಕ್ರಮಿ; ಪಡೆ: ಸೈನ್ಯ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಅಣೆದನ್+ಅಶ್ವತ್ಥಾಮನನು +ತ
ಕ್ಷಣದೊಳ್+ಅರಸನ +ತಾಗಿ +ದ್ರೋಣನ
ಕೆಣಕಿ +ದುಶ್ಯಾಸನನ +ಮಸೆಗಾಣಿಸಿ +ಕೃಪಾದಿಗಳ
ರಣದೊಳ್+ಓಡಿಸಿ +ಮುರಿದು +ಕರ್ಣನ
ಸೆಣಸಿ +ನಿಂದನು +ಮತ್ತೆ +ಸಮರಾಂ
ಗಣದ +ಚೌಪಟಮಲ್ಲನ್+ಇತ್ತನು +ಪಡೆಗೆ +ತಲ್ಲಣವ

ಅಚ್ಚರಿ:
(೧) ಘಟೋತ್ಕಚನ ಪರಾಕ್ರಮವನ್ನು ವರ್ಣಿಸುವ ಪರಿ – ಸಮರಾಂಗಣದ ಚೌಪಟಮಲ್ಲ

ಪದ್ಯ ೪೭: ಯುದ್ಧರಂಗವು ಯಾರಿಂದ ಆವರಿಸಿತು?

ಚಾರಿವರಿದನು ದನುಜ ಮಡ್ಡು ಕ
ಠಾರಿಯಲಿ ಕರ್ಣಾಸ್ತ್ರಧಾರಾ
ಸಾರದಲಿ ಮೈನನೆದು ಹೊನಲಿದುವರುಣವಾರಿಯಲಿ
ಆರಿವನು ಹೈಡಿಂಬನೀಚೆಯ
ಲಾರು ಭೀಮಜನಿತ್ತಲಾರು ಬ
ಕಾರಿನಂದನನೆನಲು ಬಲವಿರುಳಸುರಮಯವಾಯ್ತು (ದ್ರೋಣ ಪರ್ವ, ೧೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೈತ್ಯನು ಕಠಾರಿಯನ್ನು ಹಿಡಿದು ಕೌರವಸೈನ್ಯದಲ್ಲಿ ಚಾತುರ್ಯದಿಂದ ಓಡಾಡುತ್ತಿದ್ದನು. ಅವನ ಮೈಯಿಂದ ರಕ್ತದ ಹೊನಲು ಹರಿಯುತ್ತಿತ್ತು. ಸೈನಿಕರು ಯಾರಿವನು ಎಂದರೆ ಅಲ್ಲಿಯೇ ಹಿಡಿಂಬೆಯ ಮಗ, ಇವನಾರು ಎಂದರೆ ಭೀಮನ ಮಗ, ಇತ್ತ ಬಂದವರಾರು ಎಂದರೆ ಬಕಾರಿಯ ಮಗ ಎನ್ನುತ್ತಿರಲು ಯುದ್ಧರಂಗವೇ ಘಟೋತ್ಕಚ ಮಯವಾಯಿತು.

ಅರ್ಥ:
ಚಾರಿವರಿ: ಉಪಾಯದಿಂದ ಮುಂದುವರಿ; ದನುಜ: ರಾಕ್ಷಸ; ಮಡ್ಡು: ಸೊಕ್ಕು, ಅಹಂಕಾರ; ಕಠಾರಿ: ಚೂರಿ, ಕತ್ತಿ; ಅಸ್ತ್ರ: ಶಸ್ತ್ರ, ಆಯುಧ; ಧಾರಾಸಾರ: ವರ್ಷ; ಮೈ: ತನು; ನೆನೆ: ಒದ್ದೆಯಾಗು; ಹೊನಲು: ಪ್ರವಾಹ; ಅರುಣ: ಕೆಂಪು; ವಾರಿ: ನೀರು; ಬಲ: ಸೈನ್ಯ; ಅಸುರ: ರಾಕ್ಷಸ;

ಪದವಿಂಗಡಣೆ:
ಚಾರಿವರಿದನು +ದನುಜ +ಮಡ್ಡು +ಕ
ಠಾರಿಯಲಿ +ಕರ್ಣಾಸ್ತ್ರ+ಧಾರಾ
ಸಾರದಲಿ +ಮೈ+ನನೆದು +ಹೊನಲಿದುವ್+ಅರುಣ+ವಾರಿಯಲಿ
ಆರಿವನು +ಹೈಡಿಂಬನ್+ಈಚೆಯಲ್
ಆರು+ ಭೀಮಜನ್+ಇತ್ತಲಾರು +ಬ
ಕಾರಿನಂದನನ್+ಎನಲು +ಬಲವಿರುಳ್+ಅಸುರಮಯವಾಯ್ತು

ಅಚ್ಚರಿ:
(೧) ಘಟೋತ್ಕಚನನ್ನು ಕರೆದ ಪರಿ – ಹೈಡಿಂಬ, ಭೀಮಜ, ಬಕಾರಿನಂದನ