ಪದ್ಯ ೧: ಅರ್ಜುನನು ಆಯುಧಶಾಲೆಯಲ್ಲಿ ಯಾವ ಆಯುಧಗಳನ್ನು ತೆಗೆಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ (ದ್ರೋಣ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನು ಆಯುಧಶಾಲೆಯನ್ನು ಹೊಕ್ಕು, ಬಿಲ್ಲು ಮೊದಲಾದ ಎಲ್ಲಾ ಆಯುಧಗಳನ್ನು ತೆಗೆಸಿದನು. ಚೂಪಾದ ಬಾಣಗಳು, ಬಿಲ್ಲು, ಗಂಡುಗೊಡಲಿ, ತ್ರಿಶೂಲ, ಕತ್ತಿ, ಮುದ್ಗರ, ಚಕ್ರ, ಶಲ್ಯ, ಶಕ್ತಿ, ತೋಮರಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಹೊಕ್ಕು: ಸೇರು; ಆಯುಧ: ಶಸ್ತ್ರ; ಶಾಲೆ: ಪಾಠಶಾಲೆ, ಆಲಯ; ತೆಗೆಸು: ಹೊರತರು; ಧನು: ಬಿಲ್ಲು; ಕೈದು: ಆಯುಧ, ಶಸ್ತ್ರ; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಚಾಪ: ಬಿಲ್ಲು; ಕೃಪಾಣ: ಕತ್ತಿ, ಖಡ್ಗ; ಪರಶು: ಕೊಡಲಿ, ಕುಠಾರ; ತ್ರಿಶೂಲ: ಮೂರು ಮೊನೆಗಳುಳ್ಳ ಆಯುಧ, ಪಿನಾಕ; ಮುದ್ಗರ: ಗದೆ; ಶಕುತಿ: ಶಕ್ತಿ, ಬಲ; ತೋಮರ: ಈಟಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಫಲುಗುಣ +ಹೊಕ್ಕನ್+ಆಯುಧ
ಶಾಲೆಯನು +ತೆಗೆಸಿದನು +ಧನು+ ಮೊದಲಾದ +ಕೈದುಗಳ
ಸಾಲರಿದು +ನಿಲಿಸಿದನು +ನಿಶಿತ +ಶ
ರಾಳಿ +ಚಾಪ +ಕೃಪಾಣ +ಪರಶು +ತ್ರಿ
ಶೂಲ +ಮುದ್ಗರ+ ಚಕ್ರ +ಸೆಲ್ಲೆಹ +ಶಕುತಿ +ತೋಮರವ

ಅಚ್ಚರಿ:
(೧) ಆಯುಧಗಳ ಹೆಸರು – ಶರಾಳಿ, ಚಾಪ, ಕೃಪಾಣ, ಪರಶು, ತ್ರಿಶೂಲ, ಮುದ್ಗರ, ಚಕ್ರ, ತೋಮರ

ನಿಮ್ಮ ಟಿಪ್ಪಣಿ ಬರೆಯಿರಿ