ಪದ್ಯ ೯: ಧೃತರಾಷ್ಟ್ರನು ಕೌರವನಿಗೇನು ಬುದ್ಧಿ ಹೇಳಿದ್ದನು?

ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರೆವುದು ಬಂಧು ವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ (ದ್ರೋಣ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಾತನ್ನು ಮುಂದುವರಿಸುತ್ತಾ, ಮಗನೇ ಪಾಂಡವರೊಡನೆ ಸಂಧಿಯನ್ನು ಮಾಡಿಕೋ, ದ್ವೇಷವನ್ನು ಬೆಳೆಸಬೇಡ, ಶ್ರೀಕೃಷ್ಣನೊಡನೆ ಕದನ ಮಾಡುವುದು ಒಳಿತಲ್ಲ, ಅವನು ಪರಮಾತ್ಮ, ನಮ್ಮ ಹವಣಿಕೆ ತಪ್ಪಿದ ಮೇಲೆ ವಿನಯದಿಂದ ಸಂಧಿಯನ್ನು ಮಾಡಿಕೊಳ್ಳಬೇಕು, ಬಂಧುಗಳೊಡನೆ ಛಲ ಸ್ಪರ್ಧೆ ಸಲ್ಲದು ಎಂದು ನಾನವನಿಗೆ ಹೇಳಿದುದು ನಿನಗೆ ತಿಳಿದಿಲ್ಲವೇ ಎಂದು ಕೇಳಿದನು.

ಅರ್ಥ:
ಬೇಡ: ತ್ಯಜಿಸು; ಮಗ: ಸುತ; ಸಂಧಿ: ಒಡಂಬಡಿಕೆ; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಕೂಡೆ: ಜೊತೆ; ವಿಗ್ರಹ: ಯುದ್ಧ; ಹಗೆ: ವೈರ; ಹೊಲ್ಲ: ಕೆಟ್ಟುದು; ದೈವ: ಭಗವಂತ; ಪಾಡು: ಸ್ಥಿತಿ; ಬಳಿಕ: ನಂತರ; ವಿನಯ: ಸೌಜನ್ಯ; ಮೆರೆ: ಹೊಳೆ; ಬಂಧು: ಸಂಬಂಧಿಕರು; ವರ್ಗ: ಗುಂಪು; ವಾಸಿ: ಸ್ಪರ್ಧೆ; ಮನ: ಮನಸ್ಸು; ಅರಿ: ತಿಳಿ;

ಪದವಿಂಗಡಣೆ:
ಬೇಡ+ ಮಗನೇ +ಪಾಂಡು+ಸುತರಲಿ
ಮಾಡು +ಸಂಧಿಯನ್+ಅಸುರರಿಪುವಿನ
ಕೂಡೆ +ವಿಗ್ರಹವ್+ಒಳ್ಳಿತೇ +ಹಗೆ +ಹೊಲ್ಲ +ದೈವದಲಿ
ಪಾಡು +ತಪ್ಪಿದ+ ಬಳಿಕ+ ವಿನಯವ
ಮಾಡಿ +ಮೆರೆವುದು +ಬಂಧು +ವರ್ಗದ
ಕೂಡೆ +ವಾಸಿಗಳೇತಕ್+ಎನ್ನೆನೆ +ನಿನ್ನ +ಮನವರಿಯೆ

ಅಚ್ಚರಿ:
(೧) ಬುದ್ಧಿಮಾತು – ಹಗೆ ಹೊಲ್ಲ ದೈವದಲಿ; ಬಂಧು ವರ್ಗದ ಕೂಡೆ ವಾಸಿಗಳೇತಕೆ

ಪದ್ಯ ೮: ಧೃತರಾಷ್ಟ್ರನು ಹೇಗೆ ದುಃಖಿಸಿದನು?

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧನೃಪ (ದ್ರೋಣ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಂಜಯ, ನಾನು ಬಹಳವಾಗಿ ನೊಂದಿದ್ದೇನೆ, ದುರ್ಯೋಧನನು ಉದ್ಧಾರವಾಗಬಹುದೆಂಬ ಆಶೆ ಬಿಟ್ಟುಹೋಗಿದೆ, ಸುಟ್ಟಗಾಯದ ಮೇಲೆ ಸಾಸಿವೆಯ ಪುಡಿಯನ್ನು ಬಳಿಯಬೇಡ, ನಿನಗೆ ದಯೆಯಿಲ್ಲ, ನಿಮಗೆ ಎಷ್ಟು ಬಲವಿದ್ದರೂ ಶ್ರೀಕೃಷ್ಣನ ವಿರೋಧಿಗಳಾಗಿದ್ದೀರಿ ಎಂದು ಎಷ್ಟು ಬಾರಿ ಎಷ್ಟು ಬಗೆಯಿಂದ ಹೇಳಿದರು ಕೇಳದೇ ಹೋದ ನನ್ನ ಮಗ, ನಾನೇನು ಮಾಡಲಿ ಎಂದು ನೊಂದುಕೊಂಡನು.

ಅರ್ಥ:
ಘಾಸಿ: ದಣಿವು, ಆಯಾಸ; ಮಗ: ಸುತ; ಆಸೆ: ಇಚ್ಛೆ; ಬೀತು: ಕಡಿಮೆಯಾಗು, ಬತ್ತು; ಬೆಂದು: ಪಕ್ವ; ಹುಣ್ಣು: ಗಾಯ; ಬಳಿ: ಹರಡು; ದಯೆ: ಕರುಣೆ; ಬಲುಹು: ಶಕ್ತಿ; ಹಗೆ: ವೈರ; ಹರಿಬ: ಕಾಳಗ; ಏಸು: ಎಷ್ಟು; ಒರಲು: ಹೇಳು ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಘಾಸಿಯಾದೆನು +ಮಗನ +ಮೇಲಿನ್
ಆಸೆ +ಬೀತುದು +ಬೆಂದ +ಹುಣ್ಣಲಿ
ಸಾಸಿವೆಯ +ಬಳಿಯದಿರು +ಸಂಜಯ +ನಿನಗೆ +ದಯವಿಲ್ಲ
ಏಸು+ ಬಲುಹುಂಟಾದರೆಯು+ ಹಗೆ
ವಾಸುದೇವನ +ಹರಿಬವ್+ಎಂದಾನ್
ಏಸನ್+ಒರಲಿದೆನ್+ಏನ +ಮಾಡುವೆನ್+ಎಂದನ್+ಅಂಧನೃಪ

ಅಚ್ಚರಿ:
(೧) ಲೋಕ ನುಡಿ – ಬೆಂದ ಹುಣ್ಣಲಿ ಸಾಸಿವೆಯ ಬಳಿಯದಿರು

ಪದ್ಯ ೭: ಕೌರವ ಸೈನ್ಯದ ಸ್ಥಿತಿ ಹೇಗಿತ್ತು?

ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡ ಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ (ದ್ರೋಣ ಪರ್ವ, ೧ ಸಂಧಿ, ೭ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧವನ್ನು ವಿವರಿಸುತ್ತಾ, ನಿನ್ನ ಸೇನೆಯು ಓಡಿಹೋಯಿತು, ಕೆರೆ ಬತ್ತಿದಮೇಲೆ ಮೀನು ಹಿಡಿಯಲು ಬಲೆಯೇಕೆ ಬೇಕು? ಶತ್ರುವು ನುಗ್ಗಿ ಇರಿದರೆ ನಿನ್ನ ಮಕ್ಕಳನ್ನು ರಕ್ಷಿಸಲು ಅಡ್ಡಬರುವವರು ಯಾರು? ಸುಮ್ಮನೆ ದುಃಖಿಸಬೇಡ, ಎಚ್ಚರ್ಗೊಳ್ಳು ಎಂದು ಸಂಜಯನು ಹೇಳಲು ಧೃತರಾಷ್ಟ್ರನು ಸಾವರಿಸಿಕೊಂಡು ಹೀಗೆಂದನು.

ಅರ್ಥ:
ಹರಿ: ಸೀಳು, ಒಡೆದುಹೋಗು; ಬತ್ತು: ಆವಿಯಾಗು, ಒಣಗು; ಕೆರೆ: ಸರೋವರ; ಬಲೆ: ಜಾಲ; ಹಗೆ: ವೈರ; ಹೊಕ್ಕು: ಸೇರು; ಇರಿ: ಚುಚ್ಚು; ಅಡ್ಡ: ಮಧ್ಯ; ಬೀಳು: ಬಾಗು; ಮಕ್ಕಳು: ಸುತರು; ಬರಿ: ಕೇವಲ; ಮನ: ಮನಸ್ಸು; ನೋವು: ಪೆಟ್ಟು; ಸಾಕು: ನಿಲ್ಲಿಸು; ಎಚ್ಚರ: ಗಮನವಿಡು; ಹದುಳ: ಸೌಖ್ಯ, ಕ್ಷೇಮ ; ಹೃದಯ: ಎದೆ; ಮಾತು: ವಾಣಿ;

ಪದವಿಂಗಡಣೆ:
ಹರಿದುದೈ +ಕುರುಸೇನೆ +ಬತ್ತಿದ
ಕೆರೆಯೊಳಗೆ +ಬಲೆಯೇಕೆ +ಹಗೆ +ಹೊಕ್ಕ್
ಇರಿವರ್+ಇನ್ನಾರ್+ಅಡ್ಡ+ ಬೀಳ್ವರು +ನಿನ್ನ +ಮಕ್ಕಳಿಗೆ
ಬರಿದೆ+ ಮನ +ನೋಯದಿರು +ಸಾಕ್
ಎಚ್ಚರುವುದ್+ಎನೆ +ತನ್ನೊಳಗೆ +ಹದುಳಿಸಿ
ಸರಿ+ಹೃದಯನೀ +ಮಾತನೆಂದನು +ಮತ್ತೆ +ಸಂಜಯಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬತ್ತಿದ ಕೆರೆಯೊಳಗೆ ಬಲೆಯೇಕೆ

ಪದ್ಯ ೬: ಕೌರವನು ಯಾರನ್ನು ತನ್ನ ಬಳಿ ನೇಮಿಸಿದನು?

ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ (ದ್ರೋಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಯಾರು ದುರ್ಜನರೋ, ಯಾರು ನೀಚರೋ, ನೀತಿಬಿಟ್ಟವರಾರೋ, ಯಾರು ದುರ್ಬಲರೋ, ಅವರೇ ನಿನ್ನ ಅರಮನೆಯ ಮಂತ್ರಿಗಳು, ಹಿತವರು, ನೀತಿಯನ್ನು ಚೆನ್ನಾಗಿ ಬಲ್ಲವರು, ಸುಜನರು, ಮಹಾಪರಾಕ್ರಮಿಗಳು ಯಾರಿರುವರೋ ಅವರನ್ನು ಹೊರಗಿಡಬೇಕು ಎನ್ನುವುದೇ ನಿನ್ನ ನಿರ್ಧಾರ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಕುಹಕ: ಮೋಸ, ವಂಚನೆ; ದುರ್ಜನ: ದುಷ್ಟ; ಖುಲ್ಲ: ದುಷ್ಟ, ನೀಚ; ಬಾಹಿರ: ಹೊರಗಿನವ; ದುರ್ಬಲ: ಬಲಹೀನವಾದ, ಶಕ್ತಿಹೀನ; ಅರಮನೆ: ರಾಜರ ಆಲಯ; ಮಂತ್ರಿ: ಸಚಿವ; ಹಿತ: ಒಳ್ಳೆಯದು, ಪ್ರಿಯಕರವಾದ; ನೀತಿ: ನಿಯಮ; ಕೋವಿದ: ಪಂಡಿತ; ಸುಜನ: ಒಳ್ಳೆಯ ಜನ,ಸಜ್ಜನ; ಪರಾಕ್ರಮ: ಕಲಿತನ, ಶೌರ್ಯ; ಕಾಬುದು: ಕಾಣಬೇಕು; ಮತ: ಅಭಿಪ್ರಾಯ, ಆಶಯ;

ಪದವಿಂಗಡಣೆ:
ಆರು +ಕುಹಕಿಗಳ್+ಆರು +ದುರ್ಜನರ್
ಆರು +ಖುಲ್ಲರು +ನೀತಿ +ಬಾಹಿರರ್
ಆರು +ದುರ್ಬಲರ್+ಅವರು +ನಿನ್ನ್+ಅರಮನೆಯ +ಮಂತ್ರಿಗಳು
ಆರು +ಹಿತವರು +ನೀತಿ +ಕೋವಿದರ್
ಆರು +ಸುಜನರು +ಬಹು +ಪರಾಕ್ರಮರ್
ಆರ್+ಅವರ+ ಹೊರಬೀಸಿ +ಕಾಬುದು +ನಿನ್ನ +ಮತವೆಂದ

ಅಚ್ಚರಿ:
(೧) ಆರು ಪದದ ಬಳಕೆ – ೧-೬ ಸಾಲಿನ ಮೊದಲ ಪದ
(೨) ದುಷ್ಟರನ್ನು ಹೇಳಲು ಬಳಸಿದ ಪದ – ಕುಹಕಿ, ದುರ್ಜನ, ಖುಲ್ಲ