ಪದ್ಯ ೧೭: ಭೀಷ್ಮರ ಸಾವಿಗೆ ಯಾರು ಕಣ್ಣೀರಿಟ್ಟರು?

ಕುದುರೆ ಕಂಬನಿಯಿಕ್ಕಿದವು ಮೈ
ಬಿದಿರಿದವು ದಂತಿಗಳು ಕಾಲಾ
ಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
ಬೆದರ ಬಂದಿಗೆ ಸಿಲುಕಿತವನಿಪ
ನದಟು ವಿಕ್ರಮವಹ್ನಿ ತಂಪೇ
ರಿದುದು ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ (ಭೀಷ್ಮ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕುದುರೆಗಳು ಕಂಬನಿಗರೆದವು. ಆನೆಗಳು ಮೈ ಕೊಡವಿದವು. ಕಾಲಾಳುಗಳು ಒದರಿ ಕೆಳಕ್ಕೆ ಬಿದ್ದರು. ಮೈಯ ಸತ್ವ ಮನಸ್ಸಿನ ಪರಾಕ್ರಮಗಳು ಕುಂದಿಹೋದವು. ಕೌರವನ ಪರಾಕ್ರಮವು ಹೆದರಿಕೆಗೆ ಸೆರೆಯಾಯಿತು. ವಿಕ್ರಮಾಗ್ನಿಯು ತಣ್ಣಗಾಯಿತು ಎರಡೂ ಸೈನ್ಯಗಳು ದುಃಖದಲ್ಲಿ ಮುಳುಗಿದವು.

ಅರ್ಥ:
ಕುದುರೆ: ಅಶ್ವ; ಕಂಬನಿ: ಕಣ್ಣೀರು; ಮೈ: ದೇಹ; ಬಿದಿರು: ಕೆದರು; ದಂತಿ: ಆನೆ; ಕಾಲಾಳು: ಸೈನಿಕ; ಒದರು: ಕೊಡಹು; ಕೆಡೆ:ಬೀಳು, ಕುಸಿ; ಕುಂದು: ಕೊರತೆ, ನೂನ್ಯತೆ; ಕೈ: ಹಸ್ತ; ಮನ: ಮನಸ್ಸು; ಕಡುಹು: ಸಾಹಸ, ಹುರುಪು; ಬೆದರು: ಹೆದರು; ಬಂದಿ: ಸೆರೆ, ಬಂಧನ; ಸಿಲುಕು: ಕಟ್ಟು; ಅವನಿಪ: ರಾಜ; ಅದಟು: ಪರಾಕ್ರಮ, ಶೌರ್ಯ; ವಿಕ್ರಮ: ಶೌರ್ಯ; ವಹ್ನಿ: ಬೆಂಕಿ; ತಂಪು: ತಣಿವು, ಶೈತ್ಯ; ಏರು: ಹೆಚ್ಚಾಗು; ಕದು: ಬಹಳ; ದುಮ್ಮಾನ: ದುಃಖ; ಕೇಣಿ: ಗುತ್ತಿಗೆ, ಗೇಣಿ, ಗೆಳೆತನ; ಹಿಡಿ: ಗ್ರಹಿಸು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಕುದುರೆ+ ಕಂಬನಿ+ಇಕ್ಕಿದವು +ಮೈ
ಬಿದಿರಿದವು +ದಂತಿಗಳು +ಕಾಲಾಳ್
ಒದರಿ +ಕೆಡೆದವು +ಕುಂದಿದವು +ಕೈ+ಮನದ +ಕಡುಹುಗಳು
ಬೆದರ +ಬಂದಿಗೆ +ಸಿಲುಕಿತ್+ಅವನಿಪನ್
ಅದಟು +ವಿಕ್ರಮ+ವಹ್ನಿ +ತಂಪ್
ಏರಿದುದು +ಕಡು+ದುಮ್ಮಾನ +ಕೇಣಿಯ +ಹಿಡಿದುದ್+ಉಭಯಬಲ

ಅಚ್ಚರಿ:
(೧) ಕ ಕಾರದ ಸಾಲು ಪದ – ಕಾಲಾಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
(೨) ದುಃಖಿತರಾದರು ಎಂದು ಹೇಳುವ ಪರಿ – ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ
(೩) ಕೌರವನ ಪರಾಕ್ರಮ ತಣ್ಣಗಾಯಿತು ಎಂದು ಹೇಳುವ ಪರಿ – ಅವನಿಪನದಟು ವಿಕ್ರಮವಹ್ನಿ ತಂಪೇರಿದುದು
ರಿದುದು

ಪದ್ಯ ೧೬: ಭೀಷ್ಮರನ್ನು ನೋಡಲು ಯಾರು ಬಂದರು?

ಎಡೆ ಮುರಿದುದೈಶ್ವರ್ಯವಿನ್ನೇ
ನೊಡೆಯ ಭಿತ್ತಿಯ ಚಿತ್ರವಾದನು
ಕಡೆಗೆ ಬಂದುದೆ ಕೌರವಾನ್ವಯ ಶಿವಶಿವಾ ಎನುತ
ಹಿಡಿದ ದುಗುಡದ ಕವಿದ ಮುಸುಕಿನ
ಗಡಣದಲಿ ಗುರು ಕೃಪ ಜಯದ್ರಥ
ರೊಡನೊಡನೆ ಬರುತಿರ್ದುದಖಿಲ ಮಹೀಶ ಪರಿವಾರ (ಭೀಷ್ಮ ಪರ್ವ, ೧೦ ಸಂಧಿ, ೧೬ ಪದ್ಯ
)

ತಾತ್ಪರ್ಯ:
ಐಶ್ವರ್ಯವು ಮಧ್ಯದಲ್ಲೇ ಮುರಿದು ಹೋಯಿತು. ದೊರೆಯು ಭಿತ್ತಿಯ ಮೇಲೆ ಬರೆದ ಚಿತ್ರದಂತಾದನು. ಕೌರವ ವಂಶಕ್ಕೆ ಶಿವ ಶಿವಾ ಕೊನೆ ಬಂದಿತೇ ಎನ್ನುತ್ತಾ ದುಃಖಿಸುತ್ತಾ ಮುಖಕ್ಕೆ ಮುಸುಕನ್ನು ಹಾಕಿಕೋಂಡು ದ್ರೋಣ, ಕೃಪ ಮೊದಲಾದವರೊಡನೆ ಕೌರವ ಪರಿವಾರವು ಬಂದಿತು.

ಅರ್ಥ:
ಎಡೆ: ಭೂಮಿ; ಮುರಿ: ಸೀಳು; ಐಶ್ವರ್ಯ: ಸಂಪತ್ತು; ಒಡೆ: ಸೀಳು, ಬಿರಿ; ಭಿತ್ತಿ: ಮುರಿಯುವುದು; ಚಿತ್ರ: ಪಟ; ಕಡೆ: ಕೊನೆ; ಬಂದು: ಆಗಮಿಸು; ಅನ್ವಯ: ವಂಶ; ಹಿಡಿ: ಗ್ರಹಿಸು; ದುಗುಡ: ದುಃಖ; ಕವಿ: ಆವರಿಸು; ಮುಸುಕು: ಹೊದಿಕೆ; ಗಡಣ: ಕೂಡಿಸುವಿಕೆ; ಗುರು: ಆಚಾರ್ಯ; ಒಡನೊಡನೆ: ಜೊತೆ; ಬರುತಿರ್ದು: ಆಗಮಿಸು; ಅಖಿಲ: ಎಲ್ಲಾ; ಮಹೀಶ: ರಾಜ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಎಡೆ +ಮುರಿದುದ್+ಐಶ್ವರ್ಯವ್+ಇನ್ನೇನ್
ಒಡೆಯ +ಭಿತ್ತಿಯ +ಚಿತ್ರವಾದನು
ಕಡೆಗೆ +ಬಂದುದೆ +ಕೌರವ+ಅನ್ವಯ +ಶಿವಶಿವಾ +ಎನುತ
ಹಿಡಿದ +ದುಗುಡದ +ಕವಿದ +ಮುಸುಕಿನ
ಗಡಣದಲಿ +ಗುರು +ಕೃಪ +ಜಯದ್ರಥರ್
ಒಡನೊಡನೆ +ಬರುತಿರ್ದುದ್+ಅಖಿಲ +ಮಹೀಶ +ಪರಿವಾರ

ಅಚ್ಚರಿ:
(೧) ಕೌರವನ ಸ್ಥಿತಿ – ಒಡೆಯ ಭಿತ್ತಿಯ ಚಿತ್ರವಾದನು
(೨) ದುಃಖಿತರಾದರು ಎಂದು ಹೇಳಲು – ಹಿಡಿದ ದುಗುಡದ ಕವಿದ ಮುಸುಕಿನ ಗಡಣದಲಿ

ಪದ್ಯ ೧೫: ಭೀಷ್ಮರ ಸಾವು ಕೇಳಿ ದುರ್ಯೋಧನನ ಸ್ಥಿತಿ ಹೇಗಾಯಿತು?

ಮಲಗಿದನು ಕಲಿ ಭೀಷ್ಮನೆನೆ ತ
ಲ್ಲಳಿಸಿದನು ಕುರುರಾಯನುದರದೊ
ಳಿಳಿದುದಾಯುಧವೆಂಬ ತೆರದಲಿ ತಳ್ಳುವಾರಿದನು
ಬಲಿದುಸುರ ಬಿಸುಸುಯಿಲ ಹಬ್ಬಿದ
ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ (ಭೀಷ್ಮ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಸರಳ ಮಂಚದ ಮೇಲೆ ಮಲಗಿದ ಸುದ್ದಿಯನ್ನು ಕೇಳಿ ಕೌರವನಿಗೆ ದೇಹದಲ್ಲಿ ಆಯುಧವು ಪೂರ್ಣವಾಗಿ ನಾಟಿದಂತಾಗಿ ತಲ್ಲಣಿಸಿ ಶಕ್ತಿಗುಂದಿದನು. ಅವನ ನಿಟ್ಟುಸಿರು ಹೆಚ್ಚಿ ಕಂಬನಿಯ ಕಿರುಹೊನಲು ಕೆನ್ನೆಯ ಮೇಲೆ ಹರಿದು ದುಃಖಿಸುತ್ತಾ ಭೀಷ್ಮನೆಡೆಗೆ ಬಂದನು.

ಅರ್ಥ:
ಮಲಗು: ಶಯನ; ಕಲಿ: ಶೂರ; ತಲ್ಲಣ: ಅಂಜಿಕೆ, ಭಯ; ರಾಯ: ರಾಜ; ಉದರ: ಹೊಟ್ಟೆ; ಇಳಿ: ಬಾಗು; ಆಯುಧ: ಶಸ್ತ್ರ; ತೆರ: ರೀತಿ; ತಳ್ಳುವಾರು: ಶಕ್ತಿಗುಂದು; ಬಲಿ: ಹೆಚ್ಚಾಗು; ಉಸುರು: ಪ್ರಾಣ; ಬಿಸುಸುಯಿ: ಏದುಸಿರು; ಹಬ್ಬು: ಹರಡು; ಕಳಕಳ: ಗೊಂದಲ; ಕಂಬನಿ: ಕಣ್ಣೀರು; ಕಿಬ್ಬೊನಲು: ಚಿಕ್ಕ ಹೊಳೆ; ಕದಪು: ಕೆನ್ನೆ; ಹೊತ್ತು: ಧರಿಸು; ದುಗುಡ: ದುಃಖ; ಮುಖ: ಆನನ; ಐತಂದ: ಬಂದು ಸೇರು;

ಪದವಿಂಗಡಣೆ:
ಮಲಗಿದನು +ಕಲಿ +ಭೀಷ್ಮನ್+ಎನೆ +ತ
ಲ್ಲಳಿಸಿದನು +ಕುರುರಾಯನ್+ಉದರದೊಳ್
ಇಳಿದುದ್+ಆಯುಧವೆಂಬ +ತೆರದಲಿ +ತಳ್ಳುವಾರಿದನು
ಬಲಿದ್+ಉಸುರ +ಬಿಸುಸುಯಿಲ +ಹಬ್ಬಿದ
ಕಳಕಳದ +ಕಂಬನಿಯ +ಕಿಬ್ಬೊನಲ್
ಇಳಿವ +ಕದಪಿನ +ಹೊತ್ತ +ದುಗುಡದ+ ಮುಖದೊಳ್+ಐತಂದ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಬಲಿದುಸುರ ಬಿಸುಸುಯಿಲ ಹಬ್ಬಿದ ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ
(೨) ಕ ಕಾರದ ಸಾಲು ಪದ – ಕಳಕಳದ ಕಂಬನಿಯ ಕಿಬ್ಬೊನಲಿಳಿವ ಕದಪಿನ

ಪದ್ಯ ೧೪: ಪಾಂಡವರ ಪಡೆಯಲ್ಲಿ ಯಾವ ಸ್ಥಿತಿಯಿತ್ತು?

ಭೀತಿ ಬೀತುದು ಹರುಷವಲ್ಲರಿ
ಹೂತುದವರಿಗೆ ವಿಜಯ ಕಾಮಿನಿ
ದೂತಿಯರ ಕಳುಹಿದಳು ತನಿ ಹೊಗರೇರಿತುತ್ಸಾಹ
ಸೋತುದಾಹವ ಚಿಂತೆ ಜರಿದುದು
ಕಾತರತೆ ನುಡಿಗೆಡೆಗುಡದೆ ಭಾ
ವಾತಿಶಯವೊಂದಾಯ್ತು ಪಾಂಡವ ಬಲದ ಸುಭಟರಿಗೆ (ಭೀಷ್ಮ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಂಡವರಿಗಾದರೋ ಭೀತಿ ಬಿಟ್ಟುಹೋಯಿತು. ಹರ್ಷದ ಬಳ್ಳಿಯು ಹೂಬಿಟ್ಟಿತು, ವಿಜಯ ಸ್ತ್ರೀಯು ಕೆಳೆಯನ್ನು ಬೇಡಿ ತನ್ನ ಸೇವಕರನ್ನು ಅವರ ಬಳಿಗೆ ಕಳುಹಿಸಿದಳು. ಉತ್ಸಾಹವು ತಾನೇ ತಾನಾಗಿ ಹೊಳೆಯಿತು. ಯುದ್ಧದ ಚಿಂತೆ ಬಿಟ್ಟಿತು, ಕಾತರವು ಜಾರಿಹೋಯಿತು. ಮಾತೇ ಇಲ್ಲದ ಸುಮ್ಮಾನದ ಭಾವವು ಪಾಂಡವ ಬಲದ ಭಟರಿಗೆ ಉಕ್ಕೇರಿತು.

ಅರ್ಥ:
ಭೀತಿ: ಹೆದರಿಕೆ; ಬೀತುದು: ಹೋಯಿತು; ಹರುಷ: ಸಂತಸ; ವಲ್ಲರಿ: ಬಳ್ಳಿ; ಹೂತು: ಹೂವು ಬಿಡು; ವಿಜಯ: ಗೆಲುವು; ಕಾಮಿನಿ: ಹೆಣ್ಣು; ದೂತಿ: ಸೇವಕಳು; ಕಳುಹು: ಬೀಳ್ಕೊಡು; ತನಿ: ಚೆನ್ನಾಗಿ ಬೆಳೆದುದು; ಹೊಗರು: ಕಾಂತಿ, ಪ್ರಕಾಶ; ಏರು: ಹೆಚ್ಚಾಗು; ಉತ್ಸಾಹ: ಶಕ್ತಿ, ಬಲ; ಸೋತು: ಪರಾಭವ; ಆಹವ: ಯುದ್ಧ; ಚಿಂತೆ: ಯೋಚನೆ; ಜರಿ: ಬಯ್ಯು; ಕಾತರತೆ: ಉತ್ಸುಕತೆ; ನುಡಿ: ಮಾತು; ಕೆಡೆ: ಹಾಳು; ಭಾವ: ಭಾವನೆ, ಚಿತ್ತವೃತ್ತಿ; ಅತಿಶಯ: ಹೆಚ್ಚು; ಬಲ: ಸೈನ್ಯ; ಸುಭಟ: ಪರಾಕ್ರಮಿ, ಸೈನಿಕ;

ಪದವಿಂಗಡಣೆ:
ಭೀತಿ +ಬೀತುದು +ಹರುಷ+ ವಲ್ಲರಿ
ಹೂತುದ್+ಅವರಿಗೆ +ವಿಜಯ +ಕಾಮಿನಿ
ದೂತಿಯರ +ಕಳುಹಿದಳು +ತನಿ +ಹೊಗರ್+ಏರಿತ್+ಉತ್ಸಾಹ
ಸೋತುದ್+ಆಹವ +ಚಿಂತೆ +ಜರಿದುದು
ಕಾತರತೆ+ ನುಡಿ+ಕೆಡೆಗುಡದೆ +ಭಾವ
ಅತಿಶಯವ್+ಒಂದಾಯ್ತು +ಪಾಂಡವ +ಬಲದ +ಸುಭಟರಿಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಹರುಷವಲ್ಲರಿಹೂತುದವರಿಗೆ
(೨) ವಿಜಯವು ಹತ್ತಿರವಾಯಿತು ಎಂದು ಹೇಳುವ ಪರಿ – ವಿಜಯ ಕಾಮಿನಿ ದೂತಿಯರ ಕಳುಹಿದಳು

ಪದ್ಯ ೧೩: ಭೀಷ್ಮರ ಸಾವಿನ ನಂತರ ಕೌರವರ ಪರಿಸ್ಥಿತಿ ಹೇಗಾಯಿತು?

ಬೆದರು ತವನಿಧಿಯಾಯ್ತು ಪಟು ಭಟ
ರೆದೆಗಳಿಬ್ಬಗಿಯಾಯ್ತು ವೀರಾ
ಭ್ಯುದಯ ಕೈಸೆರೆಯೋಯ್ತು ಸುಕ್ಕಿತು ಮನದ ಸುಮ್ಮಾನ
ಹೊದರೊಡೆದು ಕುರುಸೇನೆ ತೆಗೆದೋ
ಡಿದುದು ಭಯಜಲಧಿಯಲಿ ತೇಕಾ
ಡಿದರು ಕೌರವ ಜನಪರೀ ಭೀಷ್ಮಾವಸಾನದಲಿ (ಭೀಷ್ಮ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಷ್ಮರ ಅವಸಾನವಾಗಲು, ಭಯವು ತೀರದ ನಿಧಿಯಾಯಿತು, ವೀರರ ಎದೆಗಳು ಎರದು ಹೋಳಾದವು, ಕೌರವ ವೀರರ ಏಳಿಗೆಯು ಕೈಸೂರೆಯಾಯಿತು. ಮನಸ್ಸಿನ ಸಂತೋಷ ಸುಕ್ಕಿತು. ಕೌರವ ಸೇನೆಯು ಗುಂಪಾಗಿರುವುದನ್ನು ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿಹೋಯಿತು. ಕೌರವರಾಜರು ಭಯ ಸಮುದ್ರದಲ್ಲಿ ತೇಲಿದರು.

ಅರ್ಥ:
ಬೆದರು: ಹೆದರು; ತವ: ನಿನ್ನ; ತವನಿಧಿ: ಕೊನೆಯಾಗದ ಭಂಡಾರ; ನಿಧಿ: ಐಶ್ವರ್ಯ; ಪಟುಭಟ: ಪರಾಕ್ರಮಿ; ಎದೆ: ವಕ್ಷಸ್ಥಳ; ಇಬ್ಬಗಿ: ಎರಡು ಹೋಳು; ವೀರ: ಶೂರ; ಅಭ್ಯುದಯ: ಏಳಿಗೆ; ಕೈಸೆರೆ: ಬಂಧನ; ಸುಕ್ಕು: ತೆರೆಗಟ್ಟಿರುವುದು; ಮನ: ಮನಸ್ಸು; ಸುಮ್ಮಾನ: ಸಂತೋಷ, ಹಿಗ್ಗು; ಹೊದರು: ತೊಡಕು, ತೊಂದರೆ; ಒಡೆ: ಸೀಳು; ಓಡು: ಧಾವಿಸು; ಭಯ: ಅಂಜಿಕೆ; ಜಲಧಿ: ಸಾಗರ; ತೇಕು: ತೇಲು, ಏಗು; ಜನಪ: ರಾಜ; ಅವಸಾನ: ಸಾವು, ಅಂತ್ಯ;

ಪದವಿಂಗಡಣೆ:
ಬೆದರು+ ತವನಿಧಿಯಾಯ್ತು +ಪಟು +ಭಟರ್
ಎದೆಗಳ್+ಇಬ್ಬಗಿಯಾಯ್ತು +ವೀರ
ಅಭ್ಯುದಯ +ಕೈಸೆರೆಯೋಯ್ತು +ಸುಕ್ಕಿತು +ಮನದ +ಸುಮ್ಮಾನ
ಹೊದರೊಡೆದು +ಕುರುಸೇನೆ +ತೆಗೆದ್
ಓಡಿದುದು +ಭಯಜಲಧಿಯಲಿ +ತೇಕಾ
ಡಿದರು +ಕೌರವ +ಜನಪರ್+ಈ+ ಭೀಷ್ಮ+ಅವಸಾನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಯಜಲಧಿಯಲಿ ತೇಕಾಡಿದರು ಕೌರವ ಜನಪ