ಪದ್ಯ ೨೮: ಸೈನ್ಯವು ಏಕೆ ಮತ್ತೆ ಒಟ್ಟುಗೂಡಿತು?

ಮಾತು ಹಿಂಚಿತು ತೇರು ಸೇನಾ
ವ್ರಾತವನು ಹಿಂದಿಕ್ಕಿ ಗಂಗಾ
ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ
ಸೋತು ಚೆಲ್ಲಿದ ಸೇನೆ ಹರ್ಷದೊ
ಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ ಕೇಳು ಜನಮೇಜಯ ಮಹೀಪಾಲ (ಭೀಷ್ಮ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ಮಾತು ಮುಗಿಯುವುದರೊಳಗಾಗಿ ಶ್ರೀಕೃಷ್ಣನು ಅರ್ಜುನನ ರಥವನ್ನು ಭೀಷ್ಮನೆದುರಿನಲ್ಲಿ ನಿಲ್ಲಿಸಿದನು. ಆ ಮಹಾದ್ಭುತವನ್ನು ಕಂಡು, ಸೋತು ಓಡಿಹೋಗಿದ್ದ ಸೈನ್ಯವು ಮತ್ತೆ ಒಟ್ಟಾಗಿ ನಿಂತಿತು. ಇನ್ನು ಸೋಲೆಂಬ ಮಾತೆಲ್ಲಿ ಉಳಿಯಿತು.

ಅರ್ಥ:
ಮಾತು: ನುಡಿ; ಹಿಂಚು: ತಡ, ಸಾವಕಾಶ; ತೇರು: ಬಂಡಿ; ಸೇನೆ: ಸೈನ್ಯ; ವ್ರಾತ: ಗುಂಪು; ಹಿಂದೆ: ಹಿಂಬದಿ; ಗಂಗಾಜಾತ: ಗಂಗೆಯಲ್ಲಿ ಹುಟ್ಟಿದ (ಭೀಷ್ಮ); ನಿಂದು: ನಿಲ್ಲು; ಅದ್ಭುತ: ಆಶ್ಚರ್ಯ; ಸೋತು: ಪರಾಭವ; ಚೆಲ್ಲು: ಹರಡು; ಹರ್ಷ: ಸಮ್ತಸ; ನಿಂದು: ನಿಲ್ಲು; ಭಂಗ: ಮುರಿಯುವಿಕೆ; ಕೇಳು: ಆಲಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಮಾತು +ಹಿಂಚಿತು +ತೇರು +ಸೇನಾ
ವ್ರಾತವನು +ಹಿಂದಿಕ್ಕಿ +ಗಂಗಾ
ಜಾತನಿದಿರಲಿ+ ನಿಂದುದ್+ಏನೆಂಬೆನು+ ಮಹಾದ್ಭುತವ
ಸೋತು +ಚೆಲ್ಲಿದ +ಸೇನೆ +ಹರ್ಷದೊಳ್
ಆತು +ನಿಂದುದು+ ಮತ್ತೆ+ ಭಂಗದ
ಮಾತದ್+ಏತಕೆ +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ಸೈನ್ಯವು ಹುರಿದುಂಬಿದ ಪರಿ – ಸೋತು ಚೆಲ್ಲಿದ ಸೇನೆ ಹರ್ಷದೊಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ

ಪದ್ಯ ೨೭: ಭೀಷ್ಮನು ಯಾರ ಎದುರು ರಥವನ್ನು ನಿಲ್ಲಿಸಲು ಹೇಳಿದನು?

ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ (ಭೀಷ್ಮ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲ್ಲಾ ದಿಕ್ಕುಗಳಿಂದಲೂ ಓಡಿ ಬರುತ್ತಿದ್ದ ತಮ್ಮ ಸೈನ್ಯವನ್ನು ಅರ್ಜುನನು ನೋಡಿ ಶ್ರೀಕೃಷ್ಣನಿಗೆ ತೋರಿಸೆ, ನಮ್ಮವರ ವಿಧಿಯನ್ನು ನೋಡಿದೆಯಾ? ನಕುಲ, ಭೀಮ, ಸಾತ್ಯಕಿ, ಧೃಷ್ಟದ್ಯುಮ್ನರು ಅಲ್ಲಿಲ್ಲವೇ ಅಥವಾ ಭ್ರಮೆಗೊಂಡು ಓಡಿ ಹೋದರೇ? ಕೃಷ್ಣಾ ಭೀಷ್ಮನೆದುರಿಗೆ ರಥವನ್ನು ನಿಲ್ಲಿಸು ಎಂದು ಹೇಳಿದನು.

ಅರ್ಥ:
ಸಕಲ: ಎಲ್ಲಾ; ದೆಸೆ: ದಿಕ್ಕು; ಮುರಿ: ಸೀಳು; ಬಹ: ಬಹಳ; ನಾಯಕ: ಒಡೆಯ; ಕಂಡು: ನೋಡು; ಅಸುರ: ರಾಕ್ಷಸ; ಅಂತಕ: ಯಮ; ತೋರು: ಗೋಚರಿಸು; ಅಕಟ: ಅಯ್ಯೋ; ನೋಡು: ವೀಕ್ಷಿಸು; ವಿಧಿ: ನಿಯಮ; ಕಟಕಟ: ಅಯ್ಯಯ್ಯೋ; ವಿಕಳ: ಭ್ರಮೆ, ಭ್ರಾಂತಿ; ಓಡು: ಧಾವಿಸು; ಇದಿರು: ಎದುರು; ರಥ: ಬಂಡಿ; ಹರಿಸು: ಚಲಿಸು;

ಪದವಿಂಗಡಣೆ:
ಸಕಲ+ ದೆಸೆಯಲಿ +ಮುರಿದು +ಬಹ +ನಾ
ಯಕರ +ಕಂಡನು +ಪಾರ್ಥನ್+ಅಸುರಾಂ
ತಕಗೆ +ತೋರಿದನ್+ಅಕಟ +ನೋಡಿದಿರ್+ಎಮ್ಮವರ +ವಿಧಿಯ
ನಕುಲನ್+ಇಲ್ಲಾ +ಭೀಮನೋ +ಸಾ
ತ್ಯಕಿಯೊ +ಸೇನಾಪತಿಯೊ +ಕಟಕಟ
ವಿಕಳರ್+ಓಡಿದರ್+ಓಡಲ್+ಇದಿರಿಗೆ +ರಥವ+ ಹರಿಸೆಂದ

ಅಚ್ಚರಿ:
(೧) ಅಕಟ, ಕಟಕಟ – ಪದಗಳ ಬಳಕೆ
(೨) ವಿಕಳರೋಡಿದರೋಡಲಿದಿರಿಗೆ – ಪದದ ಬಳಕೆ

ಪದ್ಯ ೨೬: ಸುಯೋಧನನ ಅಭ್ಯುದಯವು ಹೇಗೆ ಕಂಡಿತು?

ಹದುಳವಿಡುವವರಿಲ್ಲ ಸೇನೆಯ
ಮೊದಲಿಗರು ಮುನ್ನೋಟವಿಕ್ಕಿತು
ಕದನದಲಿ ಕೈಸೂರೆಗೊಟ್ಟರು ಜಯವ ತಮತಮಗೆ
ಎದೆಯ ನೀವಿದನಹಿತ ನೃಪನ
ಭ್ಯುದಯವೆರಡೆಲೆಯಾಯ್ತು ಸಾಹಸಿ
ಸದೆದನೋ ಕಲಿ ಭೀಷ್ಮನೆಂದುದು ಮೇಲೆ ಸುರಕಟಕ (ಭೀಷ್ಮ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸೈನ್ಯವನ್ನು ರಕ್ಷಿಸುವವರೇ ಇಲ್ಲ. ನಾಯಕರೇ ಕದನದಲ್ಲಿ ಸೋತು ಭೀಷ್ಮನಿಗೆ ಜಯವನ್ನು ಕೊಟ್ಟರು. ಎದೆಯನ್ನು ನೀವಿಕೊಂಡರು. ಸುಯೋಧನನ ಅಭ್ಯುದಯವು ಎರಡೆಲೆ ಬಿಟ್ಟಿತು. ಸಾಹಸಿಯಾದ ಭೀಷ್ಮನು ಶತ್ರುಗಳನ್ನು ಸದೆದ ಎಂದು ದೇವತೆಗಳು ಮಾತನಾಡಿಕೊಂಡರು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ಸೇನೆ: ಸೈನ್ಯ; ಮೊದಲಿಗ: ಮುಂಚೂಣಿ; ಮುನ್ನೋಟ: ಮುಂದೆ ಪ್ರದರ್ಶಿತವಾಗುವ ದೃಶ್ಯ; ಕದನ: ಯುದ್ಧ; ಸೂರೆ: ಲೂಟಿ, ಸುಲಿಗೆ; ಜಯ: ಗೆಲುವು; ಎದೆ: ವಕ್ಷಸ್ಥಳ; ನೀವು: ಮೃದುವಾಗಿ ಸವರು, ನೇವರಿಸು; ಅಹಿತ: ಶತ್ರು; ನೃಪ: ರಾಜ; ಅಭ್ಯುದಯ: ಏಳಿಗೆ; ಎರಡೆಲೆ: ಚಿಗುರು; ಸಾಹಸಿ: ಪರಾಕ್ರಮಿ; ಕಲಿ: ಶೂರ; ಸುರ: ದೇವತೆ; ಕಟಕ: ಗುಂಪು; ಸದೆ: ಕುಟ್ಟು, ಪುಡಿಮಾಡು, ಕೊಲ್ಲು;

ಪದವಿಂಗಡಣೆ:
ಹದುಳವ್+ಇಡುವವರಿಲ್ಲ +ಸೇನೆಯ
ಮೊದಲಿಗರು +ಮುನ್ನೋಟವ್+ಇಕ್ಕಿತು
ಕದನದಲಿ +ಕೈಸೂರೆಗೊಟ್ಟರು+ ಜಯವ +ತಮತಮಗೆ
ಎದೆಯ+ ನೀವಿದನ್+ಅಹಿತ +ನೃಪನ್
ಅಭ್ಯುದಯವ್+ಎರಡೆಲೆಯಾಯ್ತು +ಸಾಹಸಿ
ಸದೆದನೋ+ ಕಲಿ +ಭೀಷ್ಮನೆಂದುದು +ಮೇಲೆ +ಸುರಕಟಕ

ಅಚ್ಚರಿ:
(೧) ದುರ್ಯೋಧನ ಗೆಲುವು ಚಿಗುರಿತು ಎಂದು ಹೇಳಲು – ಎದೆಯ ನೀವಿದನಹಿತ ನೃಪನ ಭ್ಯುದಯವೆರಡೆಲೆಯಾಯ್ತು

ಪದ್ಯ ೨೫: ಪಾಂಡವ ನಾಯಕರೇಕೆ ಅನುಚಿತವನ್ನು ಚಿಂತಿಸಿದರು?

ಬಲವ ನಿಲಿಸಲು ನೂಕದನಿಲಜ
ನಳುಕಿದನು ಸಹದೇವ ಹಿಂದಣಿ
ಗೊಲೆದ ಧೃಷ್ಟದ್ಯುಮ್ನ ನಕುಲರು ನೆನೆದರನುಚಿತವ
ಕಲಿ ಘಟೋತ್ಕಚನಧಮ ಧರ್ಮವ
ಬಳಸಿದನು ಪಾಂಚಾಲ ಮತ್ಸ್ಯರು
ಹಲರು ನಡೆದುದೆ ಮಾರ್ಗವೆಂದೇ ಮುರುಹಿದರು ಮುಖವ (ಭೀಷ್ಮ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸೈನ್ಯವನ್ನು ನಿಲ್ಲಿಸಲು ಸಾಧ್ಯವಾಗದೆ ಭೀಮನು ಅಳುಕಿದನು, ಸಹದೇವನು ಹಿಂದಕ್ಕೆ ಹೋದನು. ಧೃಷ್ಟದ್ಯುಮ್ನ ನಕುಲರು ಯುದ್ಧದಲ್ಲಿ ಪಲಾಯನವನ್ನು ಚಿಂತಿಸಿದರು. ವೀರನಾದ ಘಟೋತ್ಕಚನು ನೀಚರ ಧರ್ಮವಾದ ಬೆನ್ನು ತೋರಿಸಿ ಓಡುವುದನ್ನು ಬಳಸಿದನು. ಹಲವರು ನಡೆದುದೇ ಮಾರ್ಗವೆಂದು ಪಾಂಚಾಲರೂ ಮತ್ಸ್ಯರೂ ಮುಖದಿರುವಿದರು.

ಅರ್ಥ:
ಬಲ: ಸೈನ್ಯ; ನಿಲಿಸು: ತಡೆ; ನೂಕು: ತಳ್ಳು; ಅನಿಲಜ: ವಾಯುಪುತ್ರ (ಭೀಮ); ಅಳುಕು: ಹೆದರು, ಅಂಜು; ಹಿಂದಣಿ: ಹಿಂದೆ; ಒಲೆದು: ತೂಗಾಡು; ನೆನೆ: ಜ್ಞಾಪಿಸು; ಅನುಚಿತ: ಸರಿಯಲ್ಲದ; ಕಲಿ: ಶೂರ; ಅಧಮ: ಕೀಳು, ನೀಚ; ಬಳಸು: ಉಪಯೋಗಿಸು; ಹಲರು: ಬಹಳ, ಹಲವಾರು; ನಡೆ: ಚಲಿಸು; ಮಾರ್ಗ: ದಾರಿ; ಮುರುಹು: ತಿರುಗಿಸು; ಮುಖ: ಆನನ;

ಪದವಿಂಗಡಣೆ:
ಬಲವ+ ನಿಲಿಸಲು +ನೂಕದ್+ಅನಿಲಜನ್
ಅಳುಕಿದನು +ಸಹದೇವ +ಹಿಂದಣಿಗ್
ಒಲೆದ +ಧೃಷ್ಟದ್ಯುಮ್ನ +ನಕುಲರು +ನೆನೆದರ್+ಅನುಚಿತವ
ಕಲಿ+ ಘಟೋತ್ಕಚನ್+ಅಧಮ +ಧರ್ಮವ
ಬಳಸಿದನು +ಪಾಂಚಾಲ +ಮತ್ಸ್ಯರು
ಹಲರು+ ನಡೆದುದೆ+ ಮಾರ್ಗವೆಂದೇ+ ಮುರುಹಿದರು +ಮುಖವ

ಅಚ್ಚರಿ:
(೧) ಪಲಾಯನ, ಬೆನ್ನು ತೋರು ಎಂದು ಹೇಳುವ ಪರಿ – ನೆನೆದರನುಚಿತವ, ಅಧಮ ಧರ್ಮವ ಬಳಸಿದನು

ಪದ್ಯ ೨೪: ಪಾಂಡವ ಸೈನ್ಯದವರು ಏನು ಮಾತಾಡಿದರು?

ಕಡುಹು ಹಿರಿದೋ ಕಾಲರುದ್ರನ
ಪಡೆಯಲಾಡುವನೀತನೋ ಮೈ
ಗೊಡದಿರೋ ಬಲಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ
ತಡೆಯಲರಿದೋ ತಡವು ಮಾಡದಿ
ರೊಡಲ ಬದುಕಿಸಿಕೊಳ್ಳಿ ನೋಡುವೆ
ವೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ (ಭೀಷ್ಮ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯದ ಯೋಧರು ಭೀಷ್ಮನ ರಭಸವು ಬಹಳ ಹೆಚ್ಚಾಗಿದೆ, ಇವನು ಕಾಲರುದ್ರನ ಸೈನ್ಯದ ವೀರನೇ ಇರಬೇಕು, ಇವನ ಹೊಡೆತಕ್ಕೆ ನಿಮ್ಮ ದೇಹವನ್ನು ಅರ್ಪಿಸಿಕೊಳ್ಳಬೇಡಿ, ಸೈನ್ಯವು ವ್ಯೂಹವನ್ನು ಬಿಟ್ಟು ದಿಕ್ಕಾಪಾಲಾಗಿ ಓಡಲಿ, ಭೀಷ್ಮನನ್ನು ತಡೆಯಲು ಆಗುವುದಿಲ್ಲ, ತಡ ಮಾಡದೆ ಓಡಿ ಹೋಗಿ, ಈಗ ಬದುಕಿಕೊಳ್ಳೋಣ, ಆಮೇಲೆ ನಮ್ಮ ಒಡೆಯರಿಗೆ ಒಂದು ಸಬೂಬು ಹೇಳಿದರಾಯಿತು ಎಂದು ಪಾಂಡವರ ಸೈನ್ಯದವರು ಮಾತಾಡಿದರು.

ಅರ್ಥ:
ಕಡುಹು: ಸಾಹಸ, ಹುರುಪು, ಉತ್ಸಾಹ; ಹಿರಿದು: ಹೆಚ್ಚಿನದು; ಕಾಲರುದ್ರ: ಪ್ರಳಯಕಾಲದ ಶಿವನ ರೂಪ; ಪಡೆ: ಸೈನ್ಯ; ಮೈಗೊಡು: ಶರೀರವನ್ನು ನೀಡು; ಬಲ: ಸೈನ್ಯ; ಹೊರಳು: ಉರುಳಾಡು, ಉರುಳು; ಒಡೆ: ಸೀಳು; ದೆಸೆ: ದಿಕ್ಕು; ತಡೆ: ನಿಲ್ಲು; ಅರಿ: ತಿಳಿ; ತಡವು: ಕೆಣಕು; ತಡೆ; ಮಾಡು: ಈಡೇರಿಸು; ಒಡಲು: ದೇಹ; ಬದುಕು: ಜೀವಿಸು; ನೋಡು: ವೀಕ್ಷಿಸು; ಒಡೆಯ: ರಾಜ; ಬಳಿಕ: ನಂತರ; ಮುರಿ: ಸೀಳು; ಸುತ: ಮಕ್ಕಳು; ಸೇನೆ: ಸೈನ್ಯ;

ಪದವಿಂಗಡಣೆ:
ಕಡುಹು+ ಹಿರಿದೋ +ಕಾಲರುದ್ರನ
ಪಡೆಯಲ್+ಆಡುವನ್+ಈತನೋ +ಮೈ
ಗೊಡದಿರೋ+ ಬಲ+ಹೊರಳಿ+ಒಡೆಯಲಿ +ಹೋಗಿ +ದೆಸೆದೆಸೆಗೆ
ತಡೆಯಲ್+ಅರಿದೋ +ತಡವು +ಮಾಡದಿರ್
ಒಡಲ +ಬದುಕಿಸಿಕೊಳ್ಳಿ +ನೋಡುವೆ
ಒಡೆಯರನು +ಬಳಿಕ+ಎನುತ +ಮುರಿದುದು +ಪಾಂಡುಸುತ+ಸೇನೆ

ಅಚ್ಚರಿ:
(೧) ಜೀವ ಉಳಿಸಿಕೊಳ್ಳಿ ಎಂದು ಹೇಳುವ ಪರಿ – ಒಡಲ ಬದುಕಿಸಿಕೊಳ್ಳಿ ನೋಡುವೆ ಒಡೆಯರನು ಬಳಿಕ
(೨) ಭೀಷ್ಮನ ರೌದ್ರವನ್ನು ವಿವರಿಸುವ ಪರಿ – ಕಡುಹು ಹಿರಿದೋ ಕಾಲರುದ್ರನಪಡೆಯಲಾಡುವನೀತನೋ

ಪದ್ಯ ೨೩: ಭೀಷ್ಮನು ಎಲ್ಲಿ ರಕ್ತದ ಹೊಳೆಯನ್ನು ಹರಿಸಿದನು?

ಬಲವನದ ಹೊದರೆಲ್ಲಿ ಸೇನಾ
ಜಲನಿಧಿಯ ಸುಳಿವೆಲ್ಲಿ ಸುಭಟರ
ಕಳಕಳದ ಕಡುಹೆಲ್ಲಿ ಖರೆಯದ ರಥಿಕರವರೆಲ್ಲಿ
ಹೊಳೆದು ಮೊಳಗಿದನಲ್ಲಿ ಬಾಣದ
ಬಲೆಯ ಬೀಸಿದನಲ್ಲಿ ರಕುತದ
ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ (ಭೀಷ್ಮ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲ್ಲಿ ಒತ್ತು ಕಟ್ಟಾಗಿ ಸೈನ್ಯ ನಿಂತಿತ್ತೋ, ಸೈನ್ಯ ಸಮುದ್ರದ ಸುಳಿವು ಎಲ್ಲಿ ಕಾಣಿಸಿತೋ, ಎಲ್ಲಿ ಅವರ ಸದ್ದು ಕೇಳಿತೋ, ಎಲ್ಲಿ ನಿಷ್ಠುರ ಸತ್ವ ಸಾಹಸದ ರಥಿಕರಿದ್ದರೋ ಅಲ್ಲಿಗೆ ಗರ್ಜಿಸುತ್ತಾ ಹೋಗಿ, ಬಾಣಗಳ ಬಲೆಯನ್ನು ಹರಡಿ ಭೀಷ್ಮನು ರಕ್ತದ ಹೊಳೆಯನ್ನು ಹರಿಸಿದನು.

ಅರ್ಥ:
ಬಲ: ಶಕ್ತಿ, ಸೈನ್ಯ; ವನ: ಕಾಡು; ಹೊದರು: ಗುಂಪು, ಸಮೂಹ; ಜಲನಿಧಿ: ಸಾಗರ; ಸುಳಿವು: ಗುರುತು; ಸುಭಟ: ಸೈನಿಕ, ಪರಾಕ್ರಮಿ; ಕಳಕಳ: ಗೊಂದಲ; ಕಡುಹು: ಸಾಹಸ, ಹುರುಪು, ಉತ್ಸಾಹ; ಖರೆ: ನಿಜ, ಸತ್ಯ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಹೊಳೆ: ಪ್ರಕಾಶ; ಮೊಳಗು: ಧ್ವನಿಮಾಡು; ಬಾಣ: ಅಂಬು; ಬಲೆ: ಜಾಲ, ಬಂಧನ; ಬೀಸು: ಸಂಚಾರ, ತೂಗು; ರಕುತ: ನೆತ್ತರು; ಹರಿಸು: ಹರಡು, ವಿಸ್ತಾರ; ಸೂನು: ಮಗ; ಖಾತಿ: ಕೋಪ, ಕ್ರೋಧ;

ಪದವಿಂಗಡಣೆ:
ಬಲ+ವನದ +ಹೊದರೆಲ್ಲಿ +ಸೇನಾ
ಜಲನಿಧಿಯ+ ಸುಳಿವೆಲ್ಲಿ+ ಸುಭಟರ
ಕಳಕಳದ +ಕಡುಹೆಲ್ಲಿ+ ಖರೆಯದ+ ರಥಿಕರ್+ಅವರೆಲ್ಲಿ
ಹೊಳೆದು+ ಮೊಳಗಿದನಲ್ಲಿ+ ಬಾಣದ
ಬಲೆಯ+ ಬೀಸಿದನಲ್ಲಿ +ರಕುತದ
ಹೊಳೆಯ +ಹರಿಸಿದನಲ್ಲಿ+ ಗಂಗಾಸೂನು +ಖಾತಿಯಲಿ

ಅಚ್ಚರಿ:
(೧) ಎಲ್ಲಿ ಅಲ್ಲಿ ಪದಗಳ ಬಳಕೆ
(೨) ಭೀಷ್ಮನ ಪರಾಕ್ರಮ – ಬಾಣದ ಬಲೆಯ ಬೀಸಿದನಲ್ಲಿ ರಕುತದ ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ