ಪದ್ಯ ೨: ಭೀಷ್ಮರು ದುರ್ಯೋಧನನಿಗೆ ಏನೆಂದು ಉತ್ತರಿಸಿದರು?

ಅರಸ ಹೊಲ್ಲೆಹವೇನು ಪಾರ್ಥನ
ಸರಿಸದಲಿ ನಿಲುವೆದೆಯ ಬಲುಹು
ಳ್ಳರನು ದೇವಾಸುರರೊಳರಿಯೆನು ಮನುಜರೇನಹರು
ತಿರುಗಬೇಕವಗಡಿಸಿದರೆ ಸಂ
ಗರವ ಹೊಗುವುದು ಸರಿದರಿದಿರುವ
ನರಿದು ಕಾದುವುದಿದರಲಾವುದು ಕೊರತೆ ಹೇಳೆಂದ (ಭೀಷ್ಮ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಷ್ಮನು ಸುಯೋಧನನಿಗೆ ಉತ್ತರಿಸುತ್ತಾ, ರಾಜ, ಇದರಲ್ಲಿ ತಪ್ಪೇನು ಬಂತು? ಅರ್ಜುನನಿಗೆ ಸರಿ ಸಮಾನರಾದವರು ದೇವತೆಗಳಲ್ಲಾಗಲಿ, ರಾಕ್ಷಸರಲ್ಲಾಗಲಿ ಇಲ್ಲ, ಇನ್ನು ಮನುಷ್ಯರ ಗತಿಯೇನು ಅವನು ಮುನ್ನುಗ್ಗಿದರೆ ಹಿಮ್ಮೆಟ್ಟಬೇಕು, ಹಿಂದಕ್ಕೆ ಸರಿದರೆ ಮುನ್ನುಗ್ಗಬೇಕು, ಎದುರಾಳಿಯನ್ನು ನೋಡಿ ಹೋರಾಡಬೇಕು ಇದರಲ್ಲೇನಿದೆ ಕೊರತೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಅರಸ: ರಾಜ; ಹೊಲ್ಲೆಹ: ದೋಷ; ಸರಿಸ: ನೇರ, ಸರಳ, ಯೋಗ್ಯ; ನಿಲುವು: ಘನತೆ, ಔನ್ನತ್ಯ; ಬಲುಹು: ಶಕ್ತಿ; ದೇವ: ಅಮರರು; ಅಸುರ: ರಾಕ್ಷಸ; ಅರಿ: ತಿಳಿ; ಮನುಜ: ನರ; ತಿರುಗು: ಚಲಿಸು, ಸುತ್ತು; ಅವಗಡಿಸು: ಕಡೆಗಣಿಸು, ಸೋಲಿಸು; ಸಂಗರ: ಯುದ್ಧ; ಹೊಗು: ಸೇರು; ಸರಿ: ಆಚೆ ಹೋಗು; ಕಾದು: ಹೋರಾಡು; ಕೊರತೆ: ನ್ಯೂನತೆ; ಹೇಳು: ತಿಳಿಸು; ನಿಲುವೆದೆ: ಶೂರ;

ಪದವಿಂಗಡಣೆ:
ಅರಸ +ಹೊಲ್ಲೆಹವೇನು +ಪಾರ್ಥನ
ಸರಿಸದಲಿ+ ನಿಲುವೆದೆಯ+ ಬಲುಹು
ಳ್ಳರನು +ದೇವ+ಅಸುರರೊಳ್+ಅರಿಯೆನು+ ಮನುಜರೇನಹರು
ತಿರುಗಬೇಕ್+ಅವಗಡಿಸಿದರೆ+ ಸಂ
ಗರವ+ ಹೊಗುವುದು +ಸರಿದರ್+ಇದಿರುವನ್
ಅರಿದು +ಕಾದುವುದ್+ಇದರಲಾವುದು +ಕೊರತೆ +ಹೇಳೆಂದ

ಅಚ್ಚರಿ:
(೧) ಪಾರ್ಥನ ಹಿರಿಮೆ – ಪಾರ್ಥನ ಸರಿಸದಲಿ ನಿಲುವೆದೆಯ ಬಲುಹುಳ್ಳರನು ದೇವಾಸುರರೊಳರಿಯೆನು ಮನುಜರೇನಹರು

ನುಡಿಮುತ್ತುಗಳು: ಭೀಷ್ಮ ಪರ್ವ ೯ ಸಂಧಿ

  • ಪಾರ್ಥನ ಸರಿಸದಲಿ ನಿಲುವೆದೆಯ ಬಲುಹುಳ್ಳರನು ದೇವಾಸುರರೊಳರಿಯೆನು ಮನುಜರೇನಹರು – ಪದ್ಯ ೨
  • ನಡುಹೊಳೆಯ ಹರಿಗೋಲ ಮೂಲೆಯ ಕಡಿದಿರಾದರೆ ನಮ್ಮ ಪುಣ್ಯದ ಬಿಡುಗಡೆಯ ಕಾಲವು – ಪದ್ಯ ೩
  • ಕ್ಷತಿಯ ಹೊರೆಕಾರರಿಗೆ ಸೌಖ್ಯಸ್ಥಿತಿಯ ಮಾಡುವೆನ್ – ಪದ್ಯ ೪
  • ವೈರಿಸೇನೆಯ ಕಿತ್ತು ಬಿಸುಡವೆ ಯಮಪುರಕೆ – ಪದ್ಯ ೬
  • ಬಿಲ್ಲಿಂದುಗುಳಿಸಿದನಂಬುಗಳನಳವಿಗೆ – ಪದ್ಯ ೭
  • ಬಲ ವಾರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು – ಪದ್ಯ ೧೦
  • ಕೇಣವಿಲ್ಲದೆ ತರಿದನರಿಬಲವ – ಪದ್ಯ ೧೨
  • ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು – ಪದ್ಯ ೧೩
  • ಹೆಣ ಸಾಲನೆಡಹಿದರರುಣವಾರಿಯ ತೊರೆಯನೀಸಿದರು – ಪದ್ಯ ೧೫
  • ಚಾಳ ನೂಕಿಸಿ ಹೊತ್ತುಗಳೆವರು ಹೇಳಿ ಫಲವೇನಿನ್ನು – ಪದ್ಯ ೧೬
  • ದಿವಿಜ ನಗರಿಯ ಸೂಳೆಗೇರಿಗೆಕವಿವ ಮನವೇ – ಪದ್ಯ ೧೭
  • ಕಾಯದತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ – ಪದ್ಯ ೧೮
  • ಅಂಗವಿಸಿ ಮರಿಹುಲ್ಲೆ ಖುರದಲಿ ಸಿಂಗವನು ಹೊಯ್ವಂತೆ – ಪದ್ಯ ೨೦
  • ದಿವಿಜಾಂಗನಾ ಕಾಮುಕರ ಮಾಡಿಯಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ – ಪದ್ಯ ೨೦
  • ಕಡುಹು ಹಿರಿದೋ ಕಾಲರುದ್ರನಪಡೆಯಲಾಡುವನೀತನೋ – ಪದ್ಯ ೨೪
  • ಎದೆಯ ನೀವಿದನಹಿತ ನೃಪನ ಭ್ಯುದಯವೆರಡೆಲೆಯಾಯ್ತು – ಪದ್ಯ ೨೬
  • ಬಲವನಾಯಕವೇ ವೃಥಾ ಹುಲುದಳದೊಳಗೆ ನಿಮ್ಮಗ್ಗಳಿಕೆ – ಪದ್ಯ ೩೦
  • ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು – ಪದ್ಯ ೩೧
  • ನೀವಾಹವ ಸುವಿದ್ಯಾ ದುರ್ವಿದಗ್ಧರು – ಪದ್ಯ ೩೨
  • ಹೆರಿಸಿರೇ ನಾರಿಯನು ನಿಮ್ಮಯ ಬಾಣಗರ್ಭಿಣಿಯ – ಪದ್ಯ ೩
  • ಒಳ್ಳೆಗರನೋಡಿಸಿದ ಸಹಸವನಿಲ್ಲಿ ತೋರಲು ನೆನೆದಿರೇ – ಪದ್ಯ ೩
  • ಇದು ಹೊಸತು ಬಾಣಾಬ್ಧಿ ವೇಲೆಯನೊದೆದು ಹಾಯ್ದುದೊ ಭುವನವಳಿವಂದುದಯಿಸಿದ ಮಳೆಗಾಲವೋ – ಪದ್ಯ ೩
  • ಪಾರ್ಥನ ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ – ಪದ್ಯ ೩
  • ಖಾತಿಯ ಮಸಕದಲಿ ಕೈಮರೆದು ಮಿಗೆ ದಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು – ಪದ್ಯ ೩
  • ಮುತ್ತಿದವು ನರನಂಬು ಫಣಿಗಳು ಹುತ್ತ ಹೊಗುವಂದದಲಿ – ಪದ್ಯ ೩೯
  • ಸಾರಥಿಗಳನು ಹೂಡಿತಂತಕ ಪುರಿಗೆ – ಪದ್ಯ ೪೦
  • ತೇಜಿಗಳಸುವ ಕಾರಿದವು – ಪದ್ಯ ೪೦
  • ಕಲಿ ಭೀಷ್ಮ ಮುನಿದರೆ ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು – ಪದ್ಯ ೪೧

ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ (ಭೀಷ್ಮ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಭೀಷ್ಮರಲ್ಲಿ ಬಂದು, ಜೀಯಾ ಎಲ್ಲಾ ಸೇನಾನಾಯಕರು ಮೋರೆಗಳಿಗೆ ಮುಸುಕು ಹಾಕಿಕೊಂಡುದನ್ನು ನೋಡಿದಿರಾ? ಯುದ್ಧಕ್ಕೆ ಹೊರಡುವ ಮೊದಲು ಅವರು ಹೊಗಳಿಸಿಕೊಂಡ ಬಿರುದುಗಳ ಆರ್ಭಟವನ್ನು ಕೇಳಿದ್ದಿರಲ್ಲವೇ? ಜಠರ ಪರಾಯಣ ಪರಿಣತರಾದ ಇವರ ಪಲಾಯನದ ಹೆಬ್ಬೆಳಸನ್ನು ನೋಡಿರಿ ಇಂಥವರನ್ನು ಕಳಿಸಿ ನೀವು ಕ್ಷತ್ರಿಯ ಧರ್ಮವನ್ನು ಕಾಪಾಡಿದಿರಲ್ಲವೇ ಎಂದು ಭೀಷ್ಮನಿಗೆ ಹೇಳಲು, ಭೀಷ್ಮನು ಹೀಗೆ ಉತ್ತರಿಸಿದನು.

ಅರ್ಥ:
ಜೀಯ: ಒಡೆಯ; ಚಿತ್ತೈಸು: ಆಲಿಸು; ನಾಯಕ: ಒಡೆಯ; ಮೋರೆ: ಮುಖ, ಆನನ; ಮುಸುಕು: ಹೊದಿಕೆ; ಆಯತ: ವಿಶಾಲವಾದ; ಹೊತ್ತು: ಸಮಯ; ಮುನ್ನ: ಮೊದಲು; ಬಿರು: ಬಿರುಸು, ಕಠೋರ; ಉಬ್ಬಟೆ: ಅತಿಶಯ, ಹಿರಿಮೆ; ಕಾಯಿ: ರಕ್ಷಿಸು; ಜಠರ: ಹೊಟ್ಟೆ; ಪರಾಯಣ: ಪೂರ್ಣವಾದುದು, ತಲ್ಲೀನವಾದ; ಪರಿಣತೆ: ಚಾತುರ್ಯ; ಪಲಾಯನ: ಓಡುವಿಕೆ, ಪರಾರಿ; ಹೆಬ್ಬೆಳಸು: ಸಮೃದ್ಧ ಫಸಲು; ನೋಡು: ವೀಕ್ಷಿಸು;

ಪದವಿಂಗಡಣೆ:
ಜೀಯ +ಚಿತ್ತೈಸಿದರೆ+ ಸೇನಾ
ನಾಯಕರ +ಮೋರೆಗಳ +ಮುಸುಕುಗಳ್
ಆಯತವನ್+ಈ+ ಹೊತ್ತು +ಮುನ್ನಿನ +ಬಿರುದಿನ್+ಉಬ್ಬಟೆಯ
ಕಾಯಿದಿರೆ +ಧರ್ಮವನು +ಜಠರ+ ಪ
ರಾಯಣರ+ ಪರಿಣತೆಯಲಾದ +ಪ
ಲಾಯನದ +ಹೆಬ್ಬೆಳಸ+ ನೋಡ್+ಎನೆ+ ಭೀಷ್ಮನ್+ಇಂತೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪರಾಯಣರ ಪರಿಣತೆಯಲಾದ ಪಲಾಯನದ

ಪದ್ಯ ೬೭: ದುರ್ಯೋಧನನು ಯಾರ ಮೊರೆಗೆ ಹೋದನು?

ಆನೆಗಳು ಮರಳಿದವು ಸುಭಟ ನಿ
ಧಾನರೋಸರಿಸಿದರು ಫಡ ಸುರ
ಧೇನುಗಳಲಾ ಕರೆಯರೇ ಪರಬಲಕೆ ವಾಂಛಿತವ
ಈ ನಪುಂಸಕರುಗಲ ನಂಬಿದ
ನಾನು ನೀತಿಜ್ಞನೆ ಮಹಾದೇ
ವೇನ ಹೇಳುವೆನೆನುತ ಭೀಷ್ಮನ ಹೊರೆಗೆ ನಡೆತಂದ (ಭೀಷ್ಮ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಆನೆಗಳು ಹಿಂದಿರುಗಿ ಬಂದವು, ಮಹಾವೀರರು ಹಿಮ್ಮೆಟ್ಟಿದರು, ಇವರೆಲ್ಲರೂ ಶತ್ರು ಸೈನ್ಯವು ಬೇಡಿದುದನ್ನೆಲ್ಲಾ ಕೊಡವ ಕಾಮಧೇನುಗಳಲ್ಲವೇ? ಈ ನಪುಂಸಕರನ್ನು ನಂಬಿದ ನಾನು ರಾಜನೀತಿಯನ್ನು ಬಲ್ಲವನೆಂದು ಹೇಗೆ ಹೇಳಿಕೊಳ್ಳಲಿ ಶಿವಶಿವಾ ಎಂದುಕೊಂಡು ದುರ್ಯೋಧನನು ಭೀಷ್ಮನ ಬಳಿಗೆ ಹೋದನು.

ಅರ್ಥ:
ಆನೆ: ಕರಿ;ಮರಳು: ಹಿಂದಿರುಗು; ಸುಭಟ: ಪರಾಕ್ರಮಿ; ನಿಧಾನ: ನಿರ್ಧಾರ, ಸಾವಕಾಶ; ಓಸರಿಸು: ಓರೆಮಾಡು, ಹಿಂಜರಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸುರಧೇನು: ಕಾಮಧೇನು; ಕರೆ: ಬರೆಮಾಡು; ಪರಬಲ: ವೈರಿಸೈನ್ಯ; ವಾಂಛಿತ: ಬಯಸಿದುದು; ನಪುಂಸಕ: ಷಂಡ, ಬಲಹೀನ; ನಂಬು: ವಿಶ್ವಾಸವಿಡು; ನೀತಿ: ಒಳ್ಳೆಯ ಉಪದೇಶ; ಹೇಳು: ತಿಳಿಸು; ಹೊರೆ: ಆಶ್ರಯ; ನಡೆತಂದು: ಬಂದುಸೇರು;

ಪದವಿಂಗಡಣೆ:
ಆನೆಗಳು +ಮರಳಿದವು +ಸುಭಟ +ನಿ
ಧಾನರ್+ಓಸರಿಸಿದರು +ಫಡ +ಸುರ
ಧೇನುಗಳಲಾ +ಕರೆಯರೇ +ಪರಬಲಕೆ+ ವಾಂಛಿತವ
ಈ +ನಪುಂಸಕರುಗಲ +ನಂಬಿದ
ನಾನು +ನೀತಿಜ್ಞನೆ+ ಮಹಾದೇವ
ಏನ +ಹೇಳುವೆನ್+ಎನುತ +ಭೀಷ್ಮನ +ಹೊರೆಗೆ +ನಡೆತಂದ

ಅಚ್ಚರಿ:
(೧) ದುರ್ಯೋಧನನು ಬೇಸರ ಪಡುವ ಪರಿ – ಈ ನಪುಂಸಕರುಗಲ ನಂಬಿದ ನಾನು ನೀತಿಜ್ಞನೆ ಮಹಾದೇವ

ಪದ್ಯ ೬೬: ದುರ್ಯೋಧನನು ಹೇಗೆ ಮೂದಲಿಸಿದನು?

ಹೊರೆದವನ ಕಾರ್ಯಾರ್ಥಲಾಭವ
ಸರಕುಮಾಡರು ಜಯವಧುವನೆ
ದ್ದೆರಗಿ ನೋಡರು ವಾರ್ತೆಗೆಯ್ಯರು ಮುಕ್ತಿವಧುವಿಂಗೆ
ಧರೆಯ ಪರಮಖ್ಯಾತಿ ಪೂಜೆಯ
ಸರಕು ಗಣಿಸರು ಶಿವಶಿವಾ ಸಂ
ಗರಕೆ ದ್ರೋಣಾದಿಗಳವೋಲು ವಿರಕ್ತರಾರೆಂದ (ಭೀಷ್ಮ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ಕಾಪಾಡಿದ ಒಡೆಯನ ಕೆಲಸವನ್ನು ಗೆಲ್ಲಿಸಿಕೊಡುವುದಿಲ್ಲ, ಜಯವಧುವನ್ನು ಕಣ್ಣೆತ್ತಿಯೂ ನೋಡುವುದಿಲ್ಲ, ಮುಕ್ತಿವನಿತೆಯೊಡನೆ ಸಲ್ಲಾಪವನ್ನೂ ಒಲ್ಲರು, ಲೋಕದಲ್ಲಿ ಸತ್ಕೀರ್ತಿವಂತರಾಗಿ ಪೂಜೆ ಪಡೆಯುವುದು ಅವರಿಗೆ ಬೇಡ. ದ್ರೋಣನೇ ಮೊದಲಾದವರಂತೆ ಸಂಗ್ರಾಮವಿರಕ್ತರು ಯಾರಿದ್ದಾರೆ ಎಂದು ದುರ್ಯೋಧನನು ಮೂದಲಿಸಿದನು.

ಅರ್ಥ:
ಹೊರೆ: ಭಾರ; ಕಾರ್ಯ: ಕೆಲಸ; ಲಾಭ: ಪ್ರಯೊಜನ; ಸರಕು: ಸಾಮಾನು, ಸಾಮಗ್ರಿ; ಜಯವಧು: ವಿಜಯಲಕ್ಷ್ಮಿ; ಧರೆ: ಭೂಮಿ; ಪರಮ: ಶ್ರೇಷ್ಠ; ಖ್ಯಾತಿ: ಪ್ರಸಿದ್ಧಿ; ಪೂಜೆ: ಆರಾಧನೆ; ಗಣಿಸು: ಲೆಕ್ಕಿಸು; ಸಂಗರ: ಯುದ್ಧ; ವಿರಕ್ತ: ವಿರಾಗಿ, ಸನ್ಯಾಸಿ;

ಪದವಿಂಗಡಣೆ:
ಹೊರೆದವನ +ಕಾರ್ಯಾರ್ಥ+ಲಾಭವ
ಸರಕು+ಮಾಡರು +ಜಯವಧುವನ್
ಎದ್ದೆರಗಿ+ ನೋಡರು+ ವಾರ್ತೆಗೆಯ್ಯರು +ಮುಕ್ತಿವಧುವಿಂಗೆ
ಧರೆಯ +ಪರಮಖ್ಯಾತಿ +ಪೂಜೆಯ
ಸರಕು +ಗಣಿಸರು +ಶಿವಶಿವಾ +ಸಂ
ಗರಕೆ +ದ್ರೋಣಾದಿಗಳವೋಲು +ವಿರಕ್ತರಾರೆಂದ

ಅಚ್ಚರಿ:
(೧) ಸರಕು ಪದದ ಬಳಕೆ – ೨, ೫ ಸಾಲಿನ ಮೊದಲ ಪದ
(೨) ಜಯವಧು, ಮುಕ್ತಿವಧು – ವಧು ಪದದ ಬಳಕೆ

ಪದ್ಯ ೬೫: ದುರ್ಯೋಧನನು ಯಾವ ಪ್ರಶ್ನೆಗಳನ್ನು ಕೇಳಲು ಮುಂದಾದನು?

ಹೊರಳಿಯೊಡೆದು ಮಹಾಪ್ರಧಾನರು
ಮರಳಿದರಲಾ ಪೂತು ಮಝ ಧರ
ಧುರವ ಮಾಡಿದರೇಕೆ ಕರೆಕರೆ ಬಿರುದ ಬೆಸಗೊಂಬ
ಗುರುತನಯನೋ ಚಾಪವಿದ್ಯಾ
ಧರನೊ ಶಲ್ಯನೊ ಕೃಪನೊ ಶಕುನಿಯೊ
ವರಮಹಾರಥರಿದ್ದರೋಡುವರಲ್ಲ ದಿಟವೆಂದ (ಭೀಷ್ಮ ಪರ್ವ, ೮ ಸಂಧಿ, ೬೫ ಪದ್ಯ)

ತಾತ್ಪರ್ಯ:
ಮುನ್ನುಗ್ಗುವುದನ್ನು ಬಿಟ್ಟು ಮಹಾಪ್ರಧಾನರು ಹಿಮ್ಮೆಟ್ಟಿದರಲ್ಲವೇ! ಭಲೇ! ಯುದ್ಧಕ್ಕೇಕೆ ಬಂದರು ಕೇಳೋಣ, ಅವರ ಬಿರುದುಗಳೇನು ಕೇಳೋಣ, ವಿದ್ಯೆಯಲ್ಲಿ ಧುರಂಧರರೂ ಮಹಾರಥರಾದ ಅಶ್ವತ್ಥಾಮ, ದ್ರೋಣ, ಶಲ್ಯ, ಶಕುನಿ ಮೊದಲಾದವರು ಸೋತು ಓಡಿ ಹೋಗುವವರಲ್ಲ ತಾನೇ? ಏಕೆ ಓಡಿ ಬಂದರು ಕೇಳೋಣ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಹೊರಳು:ತಿರುವು, ಬಾಗು; ಒಡೆ: ಸೀಳು; ಮಹಾ: ದೊಡ್ಡ, ಶ್ರೇಷ್ಠ; ಪ್ರಧಾನ: ಮುಖ್ಯವಾದುದು; ಮರಳು: ಹಿಂದಿರುಗು; ಪೂತು: ಭಲೆ; ಮಝ: ಕೊಂಡಾಟದ ಮಾತು; ಧರಧುರ: ಆರ್ಭಟ, ಕೋಲಾಹಲ; ಕರೆ: ಬರೆಮಾಡು; ಬಿರುದು: ಗೌರವಸೂಚಕ ಹೆಸರು; ಬೆಸ: ಕೆಲಸ; ಗುರು: ಆಚಾರ್ಯ; ತನಯ: ಮಗ; ಚಾಪ: ಬಿಲ್ಲು; ವಿದ್ಯೆ: ಜ್ಞಾನ; ಧರ: ಧರಿಸಿದ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಓಡು: ಪಲಾಯನ; ದಿಟ: ಸತ್ಯ;

ಪದವಿಂಗಡಣೆ:
ಹೊರಳಿ+ಒಡೆದು +ಮಹಾ+ಪ್ರಧಾನರು
ಮರಳಿದರಲಾ+ ಪೂತು+ ಮಝ +ಧರ
ಧುರವ +ಮಾಡಿದರೇಕೆ+ ಕರೆ+ಕರೆ +ಬಿರುದ +ಬೆಸಗೊಂಬ
ಗುರುತನಯನೋ +ಚಾಪವಿದ್ಯಾ
ಧರನೊ +ಶಲ್ಯನೊ +ಕೃಪನೊ +ಶಕುನಿಯೊ
ವರ+ಮಹಾರಥರ್+ಇದ್ದರ್+ಓಡುವರಲ್ಲ +ದಿಟವೆಂದ

ಅಚ್ಚರಿ:
(೧) ಹೊರಳಿ, ಮರಳಿ – ಪ್ರಾಸ ಪದ
(೨) ಮಹಾರಥರನ್ನು ಹಂಗಿಸುವ ಪರಿ – ಹೊರಳಿಯೊಡೆದು ಮಹಾಪ್ರಧಾನರು ಮರಳಿದರಲಾ ಪೂತು ಮಝ

ಪದ್ಯ ೬೪: ಕೌರವ ಸೈನ್ಯದ ದುಃಸ್ಥಿತಿಯನ್ನು ಯಾರು ಕಂಡರು?

ಒಟ್ಟಿದವು ಕೈದುಗಳು ಸತ್ತಿಗೆ
ಬೆಟ್ಟವಾದವು ಸಿಂಧಸೆಳೆಗಳು
ನಟ್ಟಡವಿ ಪವಡಿಸಿದ ತೆರನಾದುದು ರಣಾಗ್ರದಲಿ
ಥಟ್ಟು ಮುರಿದುದು ಕೂಡೆ ತೆರೆ ಸಾ
ಲಿಟ್ಟ ಸಾಗರದಂತೆ ರಾಯಘ
ರಟ್ಟ ಕಂಡನು ಕೌರವೇಶ್ವರ ಸಕಲ ಮೋಹರವ (ಭೀಷ್ಮ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಶಸ್ತ್ರಾಸ್ತ್ರಗಳೂ, ಧ್ವಜಗಳೂ ಬೆಟ್ಟದಮ್ತೆ ಬಿದ್ದವು. ರಣರಂಗವು ಮರಗಿಡಗಳು ಮಲಗಿದ ಅಡವಿಯಂತೆ ಕಾಣುತ್ತಿತ್ತು. ಸೈನ್ಯವು ಚಲ್ಲಾಪಿಲ್ಲಿಯಾಯಿತು. ಹಿಮ್ಮೆಟ್ಟುವ ಸೈನ್ಯವು ಸಮುದ್ರದ ತೆರೆಗಳಂತೆ ತೋರಿತು. ತನ್ನ ಸಮಸ್ತ ಸೈನ್ಯದ ದುಃಸ್ಥಿತಿಯನ್ನು ಕೌರವನು ನೋಡಿದನು.

ಅರ್ಥ:
ಒಟ್ಟು: ಗುಂಪು; ಕೈದು: ಆಯುಧ; ಸತ್ತಿಗೆ: ಕೊಡೆ, ಛತ್ರಿ; ಬೆಟ್ಟ: ಗಿರಿ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸೆಳೆ: ಜಗ್ಗು, ಎಳೆ; ಅಡವಿ: ಕಾಡು; ಪವಡಿಸು: ಮಲಗು; ತೆರ: ಪದ್ಧತಿ, ತರಹ; ರಣಾಗ್ರ: ಯುದ್ಧದ ಮುಂಭಾಗ; ಥಟ್ಟು: ಗುಂಪು; ಮುರಿ: ಸೀಳು; ಕೂಡೆ: ಜೊತೆ; ತೆರೆ: ತೆಗೆ, ಬಿಚ್ಚು; ಸಾಲು: ಆವಳಿ, ಗುಂಪು; ಸಾಗರ: ಅಂಬುಧಿ, ಸಮುದ್ರ; ರಾಯ: ರಾಜ; ಅಘ: ಪಾಪ; ಕಂಡು: ತೋರು; ಸಕಲ: ಎಲ್ಲಾ; ಮೋಹರ: ಯುದ್ಧ;

ಪದವಿಂಗಡಣೆ:
ಒಟ್ಟಿದವು +ಕೈದುಗಳು +ಸತ್ತಿಗೆ
ಬೆಟ್ಟವಾದವು +ಸಿಂಧ+ಸೆಳೆಗಳು
ನಟ್ಟಡವಿ +ಪವಡಿಸಿದ+ ತೆರನಾದುದು +ರಣಾಗ್ರದಲಿ
ಥಟ್ಟು +ಮುರಿದುದು +ಕೂಡೆ +ತೆರೆ +ಸಾ
ಲಿಟ್ಟ +ಸಾಗರದಂತೆ +ರಾಯಘ
ರಟ್ಟ +ಕಂಡನು +ಕೌರವೇಶ್ವರ +ಸಕಲ +ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಟ್ಟಿದವು ಕೈದುಗಳು ಸತ್ತಿಗೆ ಬೆಟ್ಟವಾದವು; ಥಟ್ಟು ಮುರಿದುದು ಕೂಡೆ ತೆರೆ ಸಾಲಿಟ್ಟ ಸಾಗರದಂತೆ

ಪದ್ಯ ೬೩: ಕೌರವ ವೀರರು ಹೇಗೆ ಹಿಂದಿರುಗಿದರು?

ಉಲಿವ ಭಟ್ಟರ ಬಾಯ ಹೊಯ್ ರಥ
ದೊಳಗೆ ಕೆಡಹಲಿ ಧ್ವಜದ ಕಂಭವ
ನುಲುಕದಂತಿರೆ ರಥವ ಹರಿಸಲಿ ಸೂತಕುನ್ನಿಗಳು
ತಲೆಮುಸುಕನಿಡಿ ಛತ್ರ ಚಮರವ
ನೆಲಕೆ ಬಿಸುಡಲಿ ಹೆಸರುಗೊಂಡರ
ನುಳುಹಲಾಗದು ಬೀಳಗುತ್ತು ವದೆನುತ ತಿರುಗಿದರು (ಭೀಷ್ಮ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಬಿರುದನ್ನು ಹೊಗಳುವ ಭಟ್ಟರ ಬಾಯಿಗೆ ಬಡಿಯಿರಿ, ಧ್ವಜಸ್ತಂಭವನ್ನು ರಥದೊಳಗೇ ಇಡಿರಿ, ಚಲಿಸುತ್ತಿರುವುದು ಗೊತ್ತಾಗದಂತೆ ಕುನ್ನಿಗಳಾದ ಸೂತರು ರಥವನ್ನು ಹಿಂದಕ್ಕೆ ಹೊಡೆಯಲಿ, ತಲೆಗೆ ಮುಸುಕು ಹಾಕಿಕೊಳ್ಳಿ, ಛತ್ರ ಚಾಮರಗಳನ್ನು ನೆಲಕ್ಕೆಸೆಯಿರಿ, ಬಿರುದು ಹೊತ್ತವರನ್ನು ಉಳಿಸದೆ ಕೆಳಕ್ಕೆ ಕೆಡಹಿರಿ ಎನ್ನುತ್ತಾ ಕೌರವ ವೀರರು ಹಿಂದಿರುಗಿದರು.

ಅರ್ಥ:
ಉಲಿ: ಶಬ್ದ; ಭಟ್ಟ: ಹೊಗಳುಭಟ್ಟ; ಹೊಯ್: ಹೊಡೆ; ರಥ: ಬಂಡಿ; ಕೆಡಹು: ನಾಶಮಾಡು; ಧ್ವಜ: ಬಾವುಟ, ಪತಾಕೆ; ಕಂಭ: ಕೋಲು, ಆಧಾರ; ಉಲುಕು:ಅಲ್ಲಾಡು; ಹರಿಸು: ಚಲಿಸು; ಸೂತ: ರಥವನ್ನು ನಡೆಸುವವನು; ಕುನ್ನಿ: ನಾಯಿ; ತಲೆ: ಶಿರ; ಮುಸುಕು: ಹೊದಿಕೆ; ಛತ್ರ: ಕೊಡೆ; ಚಮರ: ಚಾಮರ; ನೆಲ: ಭೂಮಿ; ಬಿಸುಡು: ಹೊರಹಾಕು; ಹೆಸರು: ನಾಮ; ಉಳುಹು: ಕಾಪಾಡು; ಬೀಳು: ಕುಸಿ; ತಿರುಗು: ಅಲೆದಾಡು, ಸುತ್ತು; ಕುತ್ತು: ತೊಂದರೆ, ಆಪತ್ತು;

ಪದವಿಂಗಡಣೆ:
ಉಲಿವ +ಭಟ್ಟರ +ಬಾಯ +ಹೊಯ್ +ರಥ
ದೊಳಗೆ +ಕೆಡಹಲಿ +ಧ್ವಜದ +ಕಂಭವನ್
ಉಲುಕದಂತಿರೆ +ರಥವ+ ಹರಿಸಲಿ +ಸೂತ+ಕುನ್ನಿಗಳು
ತಲೆ+ಮುಸುಕನ್+ಇಡಿ +ಛತ್ರ +ಚಮರವ
ನೆಲಕೆ +ಬಿಸುಡಲಿ +ಹೆಸರುಗೊಂಡರನ್
ಉಳುಹಲಾಗದು +ಬೀಳಗುತ್ತುವದ್+ಎನುತ+ ತಿರುಗಿದರು

ಅಚ್ಚರಿ:
(೧) ಹೊಗಳುವುದನ್ನು ನಿಲ್ಲಿಸಿ ಎಂದು ಹೇಳುವ ಪರಿ – ಉಲಿವ ಭಟ್ಟರ ಬಾಯ ಹೊಯ್