ಪದ್ಯ ೧೮: ವಿರಾಟನ ಮುಂದೆ ಯಾರು ಬಂದರು?

ಬಂದು ಕಂಡು ವಿರಾಟರಾಯಗೆ
ನಿಂದು ಕರಗಳ ಮುಗಿದು ಮಲ್ಲರು
ಬಂದು ಪುರಬಾಹೆಯಲಿ ಬಿಟ್ಟುದ ಹೇಳಿದನು ನೃಪಗೆ
ಮುಂದೆ ಕಳುಹಿದರೆನಲು ನೃಪತಾ
ನೆಂದನಾ ದಾರುಕನ ಕರೆಯೆನ
ಲಂದು ವುರವಣಿಸಿದನು ಭೂಮೀಪಾಲನೋಲಗಕೆ (ವಿರಾಟ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ದ್ವಾರಪಾಲಕನು ಬಂದು, ಕೌರವನ ಮಲ್ಲರು ಊರ ಹೊರಗೆ ಬಿಡಾರ ಬಿಟ್ಟಿದ್ದಾರೆ, ಸುದ್ದಿಯನ್ನು ಹೇಳಲು ನನ್ನನ್ನು ಕಳಿಸಿದ್ದಾರೆ ಎಂದು ಹೇಳಲು, ವಿರಾಟ ರಾಜನು ತನ್ನ ಸೇವಕ ದಾರುಕನಿಗೆ ಹೇಳಿಕಳಿಸಿ ಅವನು ರಾಜನ ಮುಂದೆ ನಿಂತನು.

ಅರ್ಥ:
ಬಂದು: ಆಗಮಿಸು; ಕಂಡು: ನೋಡು; ರಾಯ: ರಾಜ; ನಿಂದು: ನಿಲ್ಲು; ಕರ: ಕೈ, ಹಸ್ತ; ಕರಮುಗಿದು: ನಮಸ್ಕರಿಸಿ; ಮಲ್ಲ: ಜಟ್ಟಿ; ಪುರ: ಊರು; ಬಾಹೆ: ಹೊರಗೆ; ನೃಪ: ರಾಜ; ಮುಂದೆ: ಎದುರು; ಕರೆ: ಬರೆಮಾಡು; ಉರವಣೆ: ಆತುರ, ಅವಸರ; ಭೂಮೀಪಾಲ: ರಾಜ; ಓಲಗ: ದರ್ಬಾರು;

ಪದವಿಂಗಡಣೆ:
ಬಂದು +ಕಂಡು +ವಿರಾಟರಾಯಗೆ
ನಿಂದು +ಕರಗಳ+ ಮುಗಿದು +ಮಲ್ಲರು
ಬಂದು +ಪುರಬಾಹೆಯಲಿ +ಬಿಟ್ಟುದ +ಹೇಳಿದನು +ನೃಪಗೆ
ಮುಂದೆ +ಕಳುಹಿದರೆನಲು +ನೃಪ+ತಾನ್
ಎಂದನ್+ಆ +ದಾರುಕನ +ಕರೆ+ಎನಲ್
ಅಂದು +ಉರವಣಿಸಿದನು +ಭೂಮೀಪಾಲನ್+ಓಲಗಕೆ

ಅಚ್ಚರಿ:
(೧) ರಾಯ, ನೃಪ, ಭೂಮೀಪಾಲ – ಸಮನಾರ್ಥಕ ಪದ
(೨) ಬಂದು, ನಿಂದು, ಅಂದು – ಪ್ರಾಸ ಪದಗಳು

ಪದ್ಯ ೧೭: ರಾಜಂಗಣಕ್ಕೆ ಸುದ್ದಿಯನ್ನು ಹೇಗೆ ತಲುಪಿಸಿದರು?

ಹಲವು ಪಯಣದ ಮೇಲೆ ಮತ್ಸ್ಯನ
ಹೊಳಲಿಗಿವರಿಅತಂದು ಭಟರನು
ಕಳುಹಿದರು ಪುರದರಸಗೆಮ್ಮಯ ಬರವನರುಹೆನುತ
ನಲವು ಮಿಗಲೈತಂದು ಕೋಟೆಯ
ವಳಯದಲಿ ಹೊಕ್ಕವರು ರಾಜಾಂ
ಗಳವ ಸಾರುತೆ ತಿಳುಹಿದರು ಬಾಗಿಲಿನ ಸುಭಟರಿಗೆ (ವಿರಾಟ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅನೇಕ ದಿನಗಳ ಪ್ರಯಾಣವನ್ನು ಮಾಡಿ, ಕೌರವನ ಮಲ್ಲರು ವಿರಾಟನಗರಕ್ಕೆ ಬಂದು ರಾಜರಿಗೆ ನಾವು ಬಂದಿರುವುದನ್ನು ತಿಳಿಸು ಎಂದು ಭಟರನ್ನು ಕಳಿಸಿದರು. ಮಲ್ಲರ ಸಂತಸವು ಹೆಚ್ಚಿತು, ಕೋಟೆಯ ಭಟರು ರಾಜಾಂಗಣಕ್ಕೆ ಹೋಗಿ ಬಾಗಿಲಿನ ಕಾವುಲುಗಾರನಿಗೆ ಈ ಸುದ್ದಿಯನ್ನು ತಲುಪಿಸಿದನು.

ಅರ್ಥ:
ಹಲವು: ಬಹಳ; ಪಯಣ: ಪ್ರಯಾಣ; ಹೊಳಲು: ಪಟ್ಟಣ; ಐತಂದು: ಬಂದು ಸೇರು; ಭಟ: ಸೈನಿಕ; ಕಳುಹು: ತೆರಳು; ಪುರ: ಊರು; ಅರಸ: ರಾಜ; ಬರವ: ಬಂದು ಸೇರು, ಆಗಮಿಸು; ಅರುಹು: ತಿಳಿಸು; ನಲವು: ಸಂತಸ; ಮಿಗಲು: ಹೆಚ್ಚು; ಕೋಟೆ: ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ವಳಯ: ಅಂಗಳ; ಹೊಕ್ಕು: ಸೇರು; ಅಂಗಳ: ಮನೆಗೆ ಸೇರಿರುವ ಆವರಣದ ಬಯಲು; ಸಾರು: ಡಂಗುರ ಹೊಡೆಸು, ಪ್ರಕಟಿಸು; ಬಾಗಿಲು: ಕದ; ಭಟ: ಸೈನಿಕ;

ಪದವಿಂಗಡಣೆ:
ಹಲವು +ಪಯಣದ +ಮೇಲೆ +ಮತ್ಸ್ಯನ
ಹೊಳಲಿಗ್+ಇವರ್+ಐತಂದು +ಭಟರನು
ಕಳುಹಿದರು +ಪುರದ್+ಅರಸಗ್+ಎಮ್ಮಯ +ಬರವನ್+ಅರುಹೆನುತ
ನಲವು+ ಮಿಗಲೈತಂದು +ಕೋಟೆಯ
ವಳಯದಲಿ +ಹೊಕ್ಕವರು +ರಾಜಾಂ
ಗಳವ +ಸಾರುತೆ +ತಿಳುಹಿದರು +ಬಾಗಿಲಿನ +ಸುಭಟರಿಗೆ

ಅಚ್ಚರಿ:
(೧) ಹೊಳಲು, ಪುರ – ಸಮನಾರ್ಥಕ ಪದ

ಪದ್ಯ ೧೬: ಜೀಮೂತನು ಮಲ್ಲರಿಗೆ ಯಾವ ಆದೇಶವನ್ನು ನೀಡಿದನು?

ಕಾಲಗತಿಯೆಂತಹುದೊ ರಿಪುಗಳು
ಶೀಲವುಳ್ಳವರೆಂದು ನುಡಿವರು
ಮೇಲೆಯಪಜಯವಹುದು ರಣದಲಿ ಸಾಕದಂತಿರಲಿ
ಕೇಳುತಾ ಜೀಮೂತಮಲ್ಲನು
ಹೇಳು ಹೇಳಿನ್ನೊಮ್ಮೆ ಸಿಡಿಲು ಛ
ಡಾಳದಲಿ ನೆರೆಯೆರಗಿತೇ ಸಟೆಯೆನುತ ನಡೆಗೊಂಡ (ವಿರಾಟ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕನಸು ಕಂಡವನು ಮುಂದೇನಾಗುವುದೋ, ನಮ್ಮ ರಾಜನ ಶತ್ರುಗಳು ಸುಶೀಲರೆಂದು ಜನರು ಮಾತನಾಡಿಕೊಳ್ಳುತ್ತಾರೆ, ಮುಂದೆ ಬರುವ ಮಲ್ಲ ಯುದ್ಧದಲ್ಲಿ ನಾವು ಸೋಲುತ್ತೇವೆ ಎನ್ನುವ ಮಾತನ್ನು ಜೀಮೂತನು ಕೇಳಿ, ಹೇಳು ಇನ್ನೊಮ್ಮೆ ಹೇಳು, ಬರಸಿಡಿಲು ಬಡಿಯಿತೇ ಸುಳ್ಳು ಎಂದು ಅವರ ಮಾತನ್ನು ಮನ್ನಿಸದೆ ಪ್ರಯಾಣವನ್ನು ಮುನ್ನಡೆಸಲು ಸೂಚಿಸಿದನು.

ಅರ್ಥ:
ಕಾಲ: ಸಮಯ; ಗತಿ: ವೇಗ; ರಿಪು: ವೈರಿ; ಶೀಲ: ಗುಣ; ನುಡಿ: ಮಾತು; ಅಪಜಯ: ಸೋಲು; ರಣ: ಯುದ್ಧ; ಕೇಳು: ಆಲಿಸು; ಮಲ್ಲ: ಜಟ್ಟಿ; ಹೇಳು: ತಿಳಿಸು; ಸಿಡಿಲು: ಅಶನಿ; ಛಡಾಳ: ಹೆಚ್ಚಳ, ಆಧಿಕ್ಯ; ನೆರೆ: ಗುಂಪು; ಎರಗು: ಬೀಳು; ಸಟೆ: ಹುಸಿ, ಸುಳ್ಳು; ನಡೆ: ಚಲಿಸು;

ಪದವಿಂಗಡಣೆ:
ಕಾಲಗತಿ+ಎಂತಹುದೊ +ರಿಪುಗಳು
ಶೀಲವುಳ್ಳವರೆಂದು +ನುಡಿವರು
ಮೇಲೆ+ಅಪಜಯವಹುದು +ರಣದಲಿ +ಸಾಕದಂತಿರಲಿ
ಕೇಳುತಾ +ಜೀಮೂತ+ಮಲ್ಲನು
ಹೇಳು+ ಹೇಳಿನ್ನೊಮ್ಮೆ +ಸಿಡಿಲು+ ಛ
ಡಾಳದಲಿ+ ನೆರೆ+ಎರಗಿತೇ +ಸಟೆ+ಎನುತ +ನಡೆಗೊಂಡ

ಅಚ್ಚರಿ:
(೧) ಜೀಮೂತನ ಪ್ರತಿಕ್ರಿಯೆ – ಹೇಳು ಹೇಳಿನ್ನೊಮ್ಮೆ ಸಿಡಿಲು ಛಡಾಳದಲಿ ನೆರೆಯೆರಗಿತೇ ಸಟೆಯೆನುತ

ಪದ್ಯ ೧೫: ಮಲ್ಲರಲ್ಲೊಬ್ಬ ಯಾವ ಕನಸನ್ನು ಕಂಡ?

ಕಾಲವಲ್ಲದಕಾಲ ಬರಸಿಡಿ
ಲೇಳಿಗೆಯಲುಬ್ಬೆದ್ದು ಮಲ್ಲರ
ಪಾಳೆಯವನೆರಗುವುದನದ ನಾ ಕಂಡೆ ಸ್ವಪ್ನದಲಿ
ಕಾಳುಗಿಚ್ಚಿನ ಬಲುಮೆಯಂತಿರೆ
ಧಾಳಿ ಬಂದುದು ಮೇಲೆ ಮತ್ತದ
ಹೇಳುವರೆ ಭಯಗೊಂಬೆನೆಂದನದೊಬ್ಬ ಮಲ್ಲರಿಗೆ (ವಿರಾಟ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಕಾಲವಲ್ಲದ ಕಾಲದಲ್ಲಿ, ಅಕಾಲದಲ್ಲಿ ಬರಸಿಡಿಲು ನಮ್ಮ ಪಾಳೆಯನ್ನು ಅಪ್ಪಳಿಸಿತು, ಕಾಡ್ಗಿಚ್ಚಿನಂತೆ ಭಯಂಕರವಾದ ದಾಳಿಯು ನಮ್ಮ ಮೇಲೆರಗಿದುದನ್ನು ನನ್ನ ಕನಸಿನಲ್ಲಿ ಕಂಡೆ ಎಂದು ಒಬ್ಬ ಮಲ್ಲನು ಹೇಳಿದನು.

ಅರ್ಥ:
ಕಾಲ: ಸಮಯ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಏಳಿಗೆ: ಅಧಿಕ; ಉಬ್ಬು: ಹೆಚ್ಚು, ಹಿಗ್ಗು; ಮಲ್ಲ: ಜಟ್ಟಿ; ಪಾಳೆ: ಬೀಡು; ಎರಗು: ಬೀಳು; ಕಂಡೆ: ನೋಡಿದೆ; ಸ್ವಪ್ನ: ಕನಸು; ಕಾಳುಗಿಚ್ಚು: ಅಡವಿ ಬೆಂಕಿ; ಬಲುಮೆ: ಶಕ್ತಿ; ಧಾಳಿ: ಲಗ್ಗೆ, ಮುತ್ತಿಗೆ; ಬಂದು: ಆಗಮಿಸು; ಭಯ: ಅಂಜು;

ಪದವಿಂಗಡಣೆ:
ಕಾಲವಲ್ಲದಕಾಲ+ ಬರಸಿಡಿಲ್
ಏಳಿಗೆಯಲ್+ಉಬ್ಬೆದ್ದು +ಮಲ್ಲರ
ಪಾಳೆಯವನ್+ಎರಗುವುದನ್+ಅದ+ ನಾ +ಕಂಡೆ +ಸ್ವಪ್ನದಲಿ
ಕಾಳುಗಿಚ್ಚಿನ +ಬಲುಮೆ+ಯಂತಿರೆ
ಧಾಳಿ +ಬಂದುದು +ಮೇಲೆ +ಮತ್ತದ
ಹೇಳುವರೆ+ ಭಯಗೊಂಬೆನ್+ಎಂದನದೊಬ್ಬ+ ಮಲ್ಲರಿಗೆ

ಅಚ್ಚರಿ:
(೧) ಅಕಾಲ ಎಂದು ಹೇಳಲು – ಕಾಲವಲ್ಲದಕಾಲ ಪದದ ಬಳಕೆ
(೨) ಉಪಮಾನದ ಪ್ರಯೋಗ – ಕಾಳುಗಿಚ್ಚಿನ ಬಲುಮೆಯಂತಿರೆ ಧಾಳಿ ಬಂದುದು ಮೇಲೆ

ನುಡಿಮುತ್ತುಗಳು: ವಿರಾಟ ಪರ್ವ ೪ ಸಂಧಿ

  • ಕಾಳುಗಿಚ್ಚಿನ ಬಲುಮೆಯಂತಿರೆ ಧಾಳಿ ಬಂದುದು ಮೇಲೆ – ಪದ್ಯ ೧೫
  • ನಲಿದು ಹರುಷದಲಂದು ಬಾಹಪ್ಪಳಿಸಿ ಮುಷ್ಟಿಯ ಜಡಿದು ಕದನಕ್ಕೆಳಸಿದರು – ಪದ್ಯ ೨೮
  • ವುರಿಯ ನೂಕಿದೆ ಉಳಿದ ಮಲ್ಲರನೆಂದನಾ ಕಂಕ – ಪದ್ಯ ೩೪
  • ಪವನಸುತನಿಂ ಬಲುಮೆಯೀತನು ಜವಕೆ ಜವವೊದಗುವನು – ಪದ್ಯ ೩೬
  • ಮರುತಜನು ಕದನಕ್ಕೆ ಕಾಲನ ಕರೆವವೊಲು ನಡೆತಂದು ನಿಂದನು – ಪದ್ಯ ೩೯
  • ಕಾಣುವೆನವರ ಜೀವದ ನೆಲಕಡೆಯನೆಲ್ಲ – ಪದ್ಯ ೪೨
  • ನಿರಿನಿಟಿಲು ನಿಟಿಲೆಂದು ನಿಟ್ಟೆಲು ಮುರಿಯೆ – ಪದ್ಯ ೪೬
  • ಕಲಿ ಭೀಮನದಕುಬ್ಬೆದ್ದು ಗೋಣನು ತಿರುಹಿ ಬಸುರೊಳಗದ್ದಯಿಸಿಯರೆಯರೆದು ಕಾಲಲಿ ತಿಕ್ಕಿದನು ಭೀಮ – ಪದ್ಯ ೪೭
  • ಅದುರಿತಂಘ್ರಿಗೆ ಭೂಮಿ ದಿಕ್ಕರಿಯೊದರಿತಹಿಪತಿಯಳುಕೆ ಕೂರ್ಮನುಬೆದರಿ ಬಿದ್ದನು ಭೀಮ ಜೀಮೂತಕರ ಪದಹತಿಗೆ – ಪದ್ಯ ೫೧
  • ಕಡಲು ಕಡಲೊಳು ಹಳಚುವಂತಿರೆ ಸಿಡಿಲು ಸಿಡಿಲಿನೊಳೆರಗುವಂತಿರೆ ಕಡುಹುಮಿಗೆ ಜೀಮೂತ ಭೀಮರ ಹೊಯ್ಲಹೋರಟೆಯ – ಪದ್ಯ ೫೪
  • ಹೊಯ್ದು ಭರದಲಿ ನಿಟ್ಟೆಲುವು ಹುಡಿಯಾಯ್ತು ಕಂಡನು ಮನೆಯೊಳಾ ಯಮನ – ಪದ್ಯ ೫೮
  • ನಿಖಿಳ ಮಲ್ಲರ ಜಯಿಸಿ ಜಯಸಿರಿಯಮಾನಿನಿಯ ಕೈವಿಡಿದು – ಪದ್ಯ ೬೦
  • ವೀರನಾರಾಯಣನ ಕರುಣಾವಾರಿಧಿಯ ಕಾಲುವೆಯ ಭಾಗ್ಯದ ಚಾರು ಶಾಲೀವನದ ವೀರರು ತೊಳಗಿ ಬೆಳಗಿದರು – ಪದ್ಯ ೬೨

ಪದ್ಯ ೧೪: ಮಲ್ಲರು ಏಕೆ ದೆಸೆದೆಸೆಗೆ ಓಡಿದರು?

ತಳೆದುದಾ ದಿವಸದಲಿ ಮಲ್ಲರ
ಬಳಗ ರಾತ್ರಿಯೊಳೊಂದುದಿನ ನೆರೆ
ಯಳಿದು ಸಾವುದ ಕಂಡು ಮೈಮುರಿದೆದ್ದು ಕಳವಳಿಸಿ
ಚಲಿಸಿ ಬೆದರಿದರೇನು ಬೊಬ್ಬಿರಿ
ದೊಳಗೆ ಹೊಕ್ಕಿತೊ ಸಿಂಹವೆನೆ ಕಳ
ವಳಿಸಿ ಮಲ್ಲರು ಮಬ್ಬಿನಲಿ ತೂಳಿದರು ದೆಸೆದೆಸೆಗೆ (ವಿರಾಟ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪ್ರಯಾಣದ ದಾರಿಯಲ್ಲಿ ಒಂದಾನೊಂದು ರಾತ್ರಿಯಲ್ಲಿ ಮಲ್ಲರು ಮಲಗಿದ್ದರು. ಅವರಲ್ಲಿ ಒಬ್ಬನು ತಮ್ಮ ಜೊತೆಯವನೊಬ್ಬ ಸತ್ತಿರುವ ಹಾಗೆ ಕನಸನ್ನು ಕಂಡು ಗೊಂದಲಕ್ಕೀಡಾಗಿ ಮೈಮುರಿಯುತ್ತಾ ಎದ್ದು ಜೋರಾಗಿ ಕೂಗಲು, ಸಿಂಹವೇನಾದರು ನಮ್ಮ ಪಾಳಯಕ್ಕೆ ನುಗ್ಗಿತೋ ಎಂದು ಗಾಬರಿಯಲ್ಲಿ ಮಲ್ಲರು ಎದ್ದು ದಿಕ್ಕು ದಿಕ್ಕಿಗೆ ಓಡಿದರು.

ಅರ್ಥ:
ತಳೆ: ಪಡೆ, ಹೊಂದು; ದಿವಸ: ದಿನ; ಮಲ್ಲ: ಜಟ್ಟಿ; ಬಳಗ: ಗುಂಪು; ರಾತ್ರಿ: ಇರುಳು; ನೆರೆ: ಗುಂಪು; ಅಳಿ:ನಾಶ; ಸಾವು: ಮರಣ; ಕಂಡು: ನೋಡು; ಎದ್ದು: ಮೇಲೇಳು; ಕಳವಳ: ಗೊಂದಲ; ಚಲಿಸು: ನಡೆ; ಬೆದರು: ಹೆದರು; ಬೊಬ್ಬಿರಿ: ಗರ್ಜಿಸು; ಹೊಕ್ಕು: ಸೇರು; ಸಿಂಹ: ಕೇಸರಿ; ಮಲ್ಲ: ಜಟ್ಟಿ; ಮಬ್ಬು: ನಸುಗತ್ತಲೆ, ಮಸುಕು; ತೂಳು: ಆವೇಶ, ಉನ್ಮಾದ; ದೆಸೆ: ದಿಕ್ಕು;

ಪದವಿಂಗಡಣೆ:
ತಳೆದುದಾ +ದಿವಸದಲಿ+ ಮಲ್ಲರ
ಬಳಗ +ರಾತ್ರಿಯೊಳ್+ಒಂದು+ದಿನ +ನೆರೆ
ಯಳಿದು +ಸಾವುದ+ ಕಂಡು +ಮೈಮುರಿದೆದ್ದು +ಕಳವಳಿಸಿ
ಚಲಿಸಿ +ಬೆದರಿದರ್+ಏನು +ಬೊಬ್ಬಿರಿದ್
ಒಳಗೆ+ ಹೊಕ್ಕಿತೊ +ಸಿಂಹವ್+ಎನೆ+ ಕಳ
ವಳಿಸಿ +ಮಲ್ಲರು +ಮಬ್ಬಿನಲಿ +ತೂಳಿದರು +ದೆಸೆದೆಸೆಗೆ

ಅಚ್ಚರಿ:
(೧) ಕಳವಳಿಸಿ, ದೆಸೆದೆಸೆಗೆ – ಪದಗಳ ಬಳಕೆ