ಪದ್ಯ ೩: ದೂತರು ಕೀಚಕನ ವಧೆಯ ಬಗ್ಗೆ ಏನು ಹೇಳಿದರು?

ತಂದು ಹರಹಿದ ಕೀಚಕನ ಮೃತಿ
ಯಂದವನು ನೃಪ ಕೇಳಿ ದೂತಂ
ಗೆಂದ ಮಡುಹಿದ ವೀರನಾವನು ಮರ್ತ್ಯಜಾತಿಯಲಿ
ಇಂದುಮುಖಿಯನು ಕೆಣಕಲಾಗಲೆ
ಬಂದು ಗಂಧರ್ವಕರು ಕೀಚಕ
ವೃಂದವನು ಸವರಿದರು ಕೌರವರಾಯ ಚಿತ್ತೈಸು (ವಿರಾಟ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ದೂತರು ಕೀಚಕನ ವಧೆಯ ವೃತ್ತಾಂತವನ್ನು ಕೇಳಿ, ಕೀಚಕನನ್ನು ಕೊಂದ ವೀರನಾರು ಎಂದು ಕೇಳಲು, ದೂತನು ಉತ್ತರಿಸುತ್ತಾ, ಕೀಚಕನು ಒಬ್ಬ ಹೆಂಗಸನ್ನು ಕೆಣಕಿದನು, ಆ ಕ್ಷಣದಲ್ಲೇ ಗಂಧರ್ವರು ಬಂದು ಕೀಚಕರ ವಂಶವನ್ನೇ ಸಂಹರಿಸಿದರು ಎಂದು ಹೇಳಿದನು.

ಅರ್ಥ:
ತಂದು: ಬಂದು, ಆಗಮಿಸು; ಹರಹು: ಪ್ರವಹಿಸು; ಮೃತಿ: ಸಾವು; ನೃಪ: ರಾಜ; ಕೇಳಿ: ಆಲಿಸು; ದೂತ: ಸೇವಕ, ಚರ; ಮಡುಹು: ಕೊಲ್ಲು, ಸಾಯಿಸು; ವೀರ: ಶೂರ, ಪರಾಕ್ರಮಿ; ಮರ್ತ್ಯ: ಮನುಷ್ಯ; ಜಾತಿ: ವಂಶ, ಕುಲ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಸುಂದರಿ; ಕೆಣಕು: ರೇಗಿಸು; ಗಂಧರ್ವ: ಖಚರ, ದೇವತೆಗಳ ಒಂದು ವರ್ಗ; ವೃಂದ: ಗುಂಪು; ಸವರು: ನಾಶಮಾಡು; ರಾಯ: ರಾಜ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ತಂದು +ಹರಹಿದ+ ಕೀಚಕನ +ಮೃತಿ
ಯಂದವನು +ನೃಪ +ಕೇಳಿ+ ದೂತಂಗ್
ಎಂದ +ಮಡುಹಿದ +ವೀರನಾವನು +ಮರ್ತ್ಯ+ಜಾತಿಯಲಿ
ಇಂದುಮುಖಿಯನು +ಕೆಣಕಲ್+ಆಗಲೆ
ಬಂದು +ಗಂಧರ್ವಕರು +ಕೀಚಕ
ವೃಂದವನು +ಸವರಿದರು+ ಕೌರವರಾಯ +ಚಿತ್ತೈಸು

ಅಚ್ಚರಿ:
(೧) ಮೃತಿ, ಮಡುಹು, ಸವರು; ನೃಪ, ರಾಯ – ಸಾಮ್ಯಾರ್ಥಪದಗಳು

ಪದ್ಯ ೨: ದೂತನು ಯಾವ ದೇಶದ ವಿಷಯವನ್ನು ತಂದನು?

ದ್ರೋಣ ಗೌತಮವರ್ಯ ಗಂಗಾ
ಸೂನುವಶ್ವತ್ಥಾಮನೆನಿಪ ಮ
ಹಾನುಭಾವರು ದುಷ್ಟಮಂತ್ರಿ ಚತುಷ್ಟಯರು ತಾವು
ಸಾನುರಾಗದಲಿರೆ ನೃಪತಿಸು
ಮ್ಮಾನದಿಂದೋಲಗದೊಳಿರುತಿರೆ
ವೀನದೇಶಾಧಿಪನ ಪುರದಿಂ ಬಂದನೋರ್ವ ಚರ (ವಿರಾಟ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ದ್ರೋಣ, ಕೃಪಾಚಾರ್ಯರು, ಭೀಷ್ಮ, ಅಶ್ವತ್ಥಾಮರಂತ ಶ್ರೇಷ್ಠರೊಡನೆ ದುರ್ಯೋಧನನು ದುಶ್ಯಾಸನ, ಸೈಂಧವ, ಕರ್ಣ, ಶಕುನಿಗಳೊಡನೆ ಸಂತೋಷದಲ್ಲಿ ಓಲಗದೊಳಗಿರುವಾಗ ಮತ್ಸ್ಯದೇಶದಿಂದ ಒಬ್ಬ ದೂತನು ಬಂದನು.

ಅರ್ಥ:
ಸೂನು: ಮಗ; ವರ್ಯ: ಶ್ರೇಷ್ಠ; ಮಹಾನುಭಾವ: ಶ್ರೇಷ್ಠ, ಪರಾಕ್ರಮಿ; ದುಷ್ಟ: ದುರುಳ; ಅನುರಾಗ: ಪ್ರೀತಿ; ನೃಪತಿ: ರಾಜ; ಸುಮ್ಮಾನ: ಸಂತೋಷ; ಓಲಗ: ದರ್ಬಾರು; ಮೀನದೇಶ: ವಿರಾಟ ದೇಶ; ಅಧಿಪ: ರಾಜ; ಪುರ: ಊರು; ಬಂದನು: ಆಗಮಿಸು; ಚರ: ದೂತ;

ಪದವಿಂಗಡಣೆ:
ದ್ರೋಣ +ಗೌತಮವರ್ಯ +ಗಂಗಾ
ಸೂನು+ಅಶ್ವತ್ಥಾಮನ್+ಎನಿಪ +ಮ
ಹಾನುಭಾವರು+ ದುಷ್ಟಮಂತ್ರಿ +ಚತುಷ್ಟಯರು +ತಾವು
ಸಾನುರಾಗದಲ್+ಇರೆ+ ನೃಪತಿ+ಸು
ಮ್ಮಾನದಿಂದ್+ಓಲಗದೊಳ್+ಇರುತಿರೆ
ಮೀನ+ ದೇಶಾಧಿಪನ +ಪುರದಿಂ +ಬಂದನ್+ಓರ್ವ +ಚರ

ಅಚ್ಚರಿ:
(೧) ಚತುಷ್ಟಯ – ದುಶ್ಯಾಸನ, ದುರ್ಯೋಧನ, ಕರ್ಣ, ಸೈಂಧವ
(೨) ದುಷ್ಟಮಂತ್ರಿ – ಶಕುನಿ

ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಡವಿಯ
ಬೀಳು ಕೊಂಡಜ್ಞಾತವಾಸದೊಳಿರಲು ಕೌರವನು
ಕಾಲ ಸವೆದುದು ಪಾಂಡುಸುತರಿಗೆ
ಮೇಲೆ ನೆಗಳುವುದಾವ ರಾಯರ
ಊಳಿಗವು ತಾನೆನುತ ತಿಳಿಹಿದನವನು ಭೀಷ್ಮಂಗೆ (ವಿರಾಟ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ಮಹಾರಾಜ ಕೇಳು, ಪಾಂಡವರು ವನವಾಸ ಮುಗಿಸಿ ಅಜ್ಞಾತವಾಸದ ಒಂದು ವರ್ಷವು ಮುಗಿಯುತ್ತಾ ಬರಲು, ದುರ್ಯೋಧನನು ಭೀಷ್ಮರನ್ನು ಕಂಡು, ಪಾಂಡವರು ಯಾವ ರಾಜನ ಸೇವೆಯಲ್ಲಿರುವರೋ ತಿಳಿದು ಕೊಳ್ಳಬೇಕೆಂದು ಹೇಳಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಕುಮಾರ: ಮಕ್ಕಳು; ಅಡವಿ: ಕಾಡು; ಬೀಳು: ಕುಸಿ, ಎರಗು; ಅಜ್ಞಾತ: ಯಾರಿಗೂ ತಿಳಿಯದ ಸ್ಥಿತಿ; ಕಾಲ: ಸಮಯ; ಸವೆದು: ಕಳೆ, ನೀಗು; ಸುತ: ಮಕ್ಕಳು; ನೆಗಳು:ಉಂಟಾಗು, ಕೈಗೊಳ್ಳು; ತಿಳುಹು: ತಿಳಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾಂಡುಕುಮಾರರ್+ಅಡವಿಯ
ಬೀಳು +ಕೊಂಡ್+ಅಜ್ಞಾತವಾಸದೊಳ್+ಇರಲು +ಕೌರವನು
ಕಾಲ +ಸವೆದುದು +ಪಾಂಡುಸುತರಿಗೆ
ಮೇಲೆ +ನೆಗಳುವುದ್+ಆವ +ರಾಯರ
ಊಳಿಗವು +ತಾನೆನುತ +ತಿಳಿಹಿದನ್+ಅವನು +ಭೀಷ್ಮಂಗೆ

ಅಚ್ಚರಿ:
(೧) ಕೇಳು, ಬೀಳು – ಪ್ರಾಸ ಪದ
(೨) ಸುತ, ಕುಮಾರ – ಸಮನಾರ್ಥಕ ಪದ

ಪದ್ಯ ೧೧೦: ದ್ರೌಪದಿಯು ಸುದೇಷ್ಣೆಗೆ ಯಾವ ಅಭಯವನ್ನು ನೀಡಿದಳು?

ಅಳುಕದಿರಿ ಹದಿಮೂರು ದಿವಸವ
ಕಳೆದ ಬಳಿಕೆಮಗೆಲ್ಲ ಲೇಸಹು
ದಳಿದು ಹೋದರು ದುಷ್ಟರಾದವರಿನ್ನು ಭಯ ಬೇಡ
ಕಲಹದವರಾವಲ್ಲೆನುತ ನಿಜ
ನಿಳಯವನು ಸಾರಿದಳು ದ್ರೌಪದಿ
ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು (ವಿರಾಟ ಪರ್ವ, ೩ ಸಂಧಿ, ೧೧೦ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹೆದರ ಬೇಡಿರಿ, ಹದಿಮೂರು ದಿನಗಳು ಕಳೆದ ಬಳಿಕ ನಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ. ದುಷ್ಟರು ನಾಶವಾದರು, ಇನ್ನು ಭಯ ಪಡಬೇಕಾದುದಿಲ್ಲ ನಾವು ಕಲಹ ಮಾಡುವವರಲ್ಲ ಎಂದು ಹೇಳಿ ತನ್ನ ಮನೆಗೆ ಹೋದಳು, ಕ್ಷಣ ಕ್ಷಣಕ್ಕೂ ಕೀಚಕನ ವೃತ್ತಾಂತವು ಎಲ್ಲೆಡೆ ಹರಡಿತು.

ಅರ್ಥ:
ಅಳುಕು: ಹೆದರು; ದಿವಸ: ದಿನ; ಕಳೆದ: ತೀರಿದ; ಬಳಿಕ: ನಂತರ; ಲೇಸು: ಒಳಿತು; ಅಳಿ: ತೀರು, ನಾಶ; ದುಷ್ಟ: ದುರುಳ; ಭಯ: ಅಂಜಿಕೆ; ಬೇಡ:ಕೂಡದು; ಕಲಹ: ಜಗಳ; ನಿಳಯ: ಮನೆ; ಸಾರು: ಸಮೀಪಿಸು; ಗಳಿಗೆ: ಸಮಯ, ಕ್ಷಣ; ವೃತ್ತಾಂತ: ವಿಷಯ; ಪಸರಿಸು: ಹರಡು;

ಪದವಿಂಗಡಣೆ:
ಅಳುಕದಿರಿ +ಹದಿಮೂರು +ದಿವಸವ
ಕಳೆದ+ ಬಳಿಕ್+ಎಮಗೆಲ್ಲ+ ಲೇಸಹುದ್
ಅಳಿದು +ಹೋದರು +ದುಷ್ಟರಾದವರ್+ಇನ್ನು +ಭಯ +ಬೇಡ
ಕಲಹದವರ್+ಆವಲ್ಲೆನುತ +ನಿಜ
ನಿಳಯವನು +ಸಾರಿದಳು +ದ್ರೌಪದಿ
ಗಳಿಗೆ+ ಗಳಿಗೆಗೆ+ ಕೀಚಕನ +ವೃತ್ತಾಂತ +ಪಸರಿಸಿತು

ಅಚ್ಚರಿ:
(೧) ವಿಷಯ್ ಬೇಗೆ ಹಬ್ಬಿತು ಎಂದು ಹೇಳಲು – ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು

ಪದ್ಯ ೧೦೯: ಎಷ್ಟು ದಿನವಿರಲು ಸೈರಂಧ್ರಿ ಕೇಳಿದಳು?

ತಾವು ತಮ್ಮಿಂದಳಿದರದು ಸಾ
ಕಾವು ನಿಮಗಂಜುವೆವು ನಿಮ್ಮಲಿ
ಯಾವುದೂ ತಪ್ಪಿಲ್ಲ ನೀವಿಲ್ಲಿರಲು ಬೇಡೆನಲು
ನಾವು ಮುನ್ನಿಹರಲ್ಲ ನಿಮ್ಮಯ
ಸೇವೆಯಲಿ ಹದಿಮೂರು ದಿವಸವು
ನೀವು ನೂಕಿದೊಡಿರದೆ ಮಾಣೆವು ದೇವಿ ಚಿತ್ತೈಸು (ವಿರಾಟ ಪರ್ವ, ೩ ಸಂಧಿ, ೧೦೯ ಪದ್ಯ)

ತಾತ್ಪರ್ಯ:
ದುಷ್ಟರು ತಮ್ಮಿಂದ ತಾವೇ ಸತ್ತರು, ಆದರೂ ನಾವು ನಿನಗೆ ಹೆದರುತ್ತೇವೆ, ನೀವು ಯಾವ ತಪ್ಪೂ ಮಾಡಿಲ್ಲ, ಆದರೂ ನೀವು ಇಲ್ಲಿರುವುದು ಬೇಡ ಎಂದು ಸುದೇಷ್ಣೆಯು ಹೇಳಲು, ಸೈರಂಧ್ರಿಯು, ನೀವು ಕರೆದರೂ ನಾವಿಲ್ಲಿಯೇ ಇರುವವರಲ್ಲ, ನಿಮ್ಮ ಸೇವೆಯಲ್ಲಿ ಇನ್ನು ಹದಿಮೂರು ದಿನಗಳವರೆಗೆ ಇರುತ್ತೇವೆ, ನೀವು ನೂಕಿದರೂ ನಾವು ಇಲ್ಲಿ ಇರದೆ ಬಿಡುವುದಿಲ್ಲ ಎಂದು ಉತ್ತರಿಸಿದಳು.

ಅರ್ಥ:
ಅಳಿ: ಸಾವು; ಸಾಕು: ನಿಲ್ಲಿಸು; ಅಂಜು: ಹೆದರು; ತಪ್ಪು: ಸರಿಯಿಲ್ಲದ; ಇರು: ವಾಸಮಾಡು; ಬೇಡ: ಸಲ್ಲದು; ಮುನ್ನ: ಮುಂಚೆ; ಸೇವೆ: ಊಳಿಗ, ಚಾಕರಿ; ದಿವಸ: ದಿನ; ನೂಕು: ತಳ್ಳು; ಮಾಣು: ನಿಲ್ಲು; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ತಾವು +ತಮ್ಮಿಂದ್+ಅಳಿದರ್+ಅದು+ ಸಾಕ್
ಆವು+ ನಿಮಗ್+ಅಂಜುವೆವು +ನಿಮ್ಮಲಿ
ಯಾವುದೂ +ತಪ್ಪಿಲ್ಲ +ನೀವಿಲ್ಲಿರಲು +ಬೇಡ್+ಎನಲು
ನಾವು+ ಮುನ್ನಿಹರಲ್ಲ+ ನಿಮ್ಮಯ
ಸೇವೆಯಲಿ +ಹದಿಮೂರು +ದಿವಸವು
ನೀವು +ನೂಕಿದೊಡ್+ಇರದೆ+ ಮಾಣೆವು +ದೇವಿ +ಚಿತ್ತೈಸು

ಅಚ್ಚರಿ:
(೧) ತಾವು, ನಾವು, ಆವು, ನೀವು – ಪ್ರಾಸ ಪದಗಳು

ಪದ್ಯ ೧೦೮: ಸೈರಂಧ್ರಿಯು ಸುದೇಷ್ಣೆಗೇನು ಹೇಳಿದಳು?

ಎಮ್ಮದೇನಪರಾಧ ದೇವಿಯೆ
ನಿಮ್ಮ ತಮ್ಮನು ತಪ್ಪಿನಡೆದೊಡೆ
ಯೆಮ್ಮರಮಣರು ಸೈರಿಸದೆ ಸೀಳಿದರು ದುರ್ಜನರ
ನಿಮ್ಮ ನಾವೋಲೈಸಿ ಮರಳಿದು
ನಿಮ್ಮ ಕೆಡಿಸುವರಲ್ಲ ದೂರ್ತರು
ತಮ್ಮ ಕತದಲಿ ತಾವೆ ಕೆಟ್ಟರು ನೀತಿ ಬಾಹಿರರು (ವಿರಾಟ ಪರ್ವ, ೩ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ದೇವಿ, ಇದರಲ್ಲಿ ನನ್ನದೇನು ತಪ್ಪಿದೆ, ನಿಮ್ಮ ತಮ್ಮನು ತಪ್ಪಿನಡೆದಿದ್ದರಿಂದ ನನ್ನ ಪತಿಗಳು ದುರ್ಜನರನ್ನು ಸೀಳಿದರು. ನಿಮ್ಮ ಸೇವೆಯಲ್ಲಿದ್ದು ನಿಮ್ಮನ್ನು ಕೆಡಿಸುವವರು ನಾವಲ್ಲ. ದೂರ್ತರಾದವರು ತಮ್ಮ ದುಷ್ಕೃತ್ಯದಿಂದ ತಾವು ಕೆಟ್ಟರು, ನೀತಿ ಬಾಹಿರರಿಗೆ ಆಗುವುದು ಹೀಗೆ ಎಂದು ಸೈರಂಧ್ರಿಯು ಹೇಳಿದಳು.

ಅರ್ಥ:
ಅಪರಾಧ: ತಪ್ಪು; ತಮ್ಮ: ಸಹೋದರ; ತಪ್ಪು: ಸರಿಯಲ್ಲದ; ನಡೆ: ನಡಗೆ; ರಮಣ: ಪ್ರಿಯತಮ; ಸೈರಿಸು: ತಾಳು, ಸಹಿಸು; ಸೀಳು: ಹರಿ; ದುರ್ಜನ: ದುಷ್ಟ; ಓಲೈಸು: ಉಪಚರಿಸು; ಮರಳಿ: ಮತ್ತೆ, ಹಿಂದಿರುತು; ಕೆಡಿಸು: ಹಾಳುಮಾದು; ಧೂರ್ತ: ದುಷ್ಟ; ಕತ: ಕಾರಣ, ನಿಮಿತ್ತ; ಕೆಡು: ಹಾಳಾಗು; ನೀತಿ: ಒಳ್ಳೆಯ ನಡತೆ; ಬಾಹಿರ: ಹೊರಗಿನವ;

ಪದವಿಂಗಡಣೆ:
ಎಮ್ಮದೇನ್+ಅಪರಾಧ +ದೇವಿಯೆ
ನಿಮ್ಮ +ತಮ್ಮನು +ತಪ್ಪಿ+ನಡೆದೊಡೆ
ಎಮ್ಮ+ರಮಣರು +ಸೈರಿಸದೆ+ ಸೀಳಿದರು +ದುರ್ಜನರ
ನಿಮ್ಮ +ನಾವ್+ಓಲೈಸಿ+ ಮರಳಿದು
ನಿಮ್ಮ +ಕೆಡಿಸುವರಲ್ಲ+ ದೂರ್ತರು
ತಮ್ಮ +ಕತದಲಿ +ತಾವೆ +ಕೆಟ್ಟರು +ನೀತಿ +ಬಾಹಿರರು

ಅಚ್ಚರಿ:
(೧) ನಿಮ್ಮ, ತಮ್ಮ, ಎಮ್ಮ – ಪ್ರಾಸ ಪದಗಳು
(೨) ತ, ಕ ಪದಗಳ ಜೋಡಣೆ – ತಮ್ಮ ಕತದಲಿ ತಾವೆ ಕೆಟ್ಟರು