ಪದ್ಯ ೯೫: ಕೀಚಕನ ತಮ್ಮಂದಿರು ಹೇಗೆ ಬಂದರು?

ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ದಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ಬಿಡುತ (ವಿರಾಟ ಪರ್ವ, ೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ಕಾವಲಿನವರು ತಮ್ಮ ಕೈಯಲ್ಲಿ ದೀವಟಿಗೆ ಗಳನ್ನು ಹಿಡಿದು ಕೀಚಕನ ಶವವನ್ನು ನೋಡಿ,ಅವನ ತಮ್ಮಂದಿರಿಗೆ ಈ ಸುದ್ದಿಯನ್ನು ಬೇಗನೆ ತಿಳಿಸಿದರು. ಅವನ ತಮ್ಮಂದಿರು ಈ ವಿಷಯವನ್ನು ತಿಳಿದ ಕೂಡಲೆ ಬಾಯಿಬಡಿದುಕೊಂಡು, ಎದೆಯಲ್ಲಿ ಜ್ವಾಲೆಯು ಹೆಚ್ಚಾಗಿ, ತಲೆಗೆದರಿಕೊಂಡು ಬಾಯಿ ಬಿಡುತ್ತಾ ಬಂದರು.

ಅರ್ಥ:
ಅರಸಿ: ಹುಡುಕಿ; ದೀವಿಗೆ: ಸೊಡರು, ದೀಪಿಕೆ; ಕೈದೀವಿಗೆ: ಕೈಯಲ್ಲಿ ಹಿಡಿಯುವ ದೀಪ; ಪರಿ: ರೀತಿ; ಕಂಡು: ನೋಡು; ಕಾಹಿನ: ರಕ್ಷಿಸುವವ; ಹರಿ: ನೆರೆದುದು; ಹೇಳು: ತಿಳಿಸು; ಅನುಜಾತ: ಒಡಹುಟ್ಟಿದವರು; ಬೇಗ: ಶೀಘ್ರ; ಕರ: ಹಸ್ತ; ಹೊಯ್ದು: ಹೊಡೆದು; ಹೃದಯ: ಎದೆ; ಉರಿ: ಜ್ವಾಲೆ; ಚಡಾಳ: ಹೆಚ್ಚಳ; ಬಿಟ್ಟ: ತೊರೆದ; ಮಡೆ: ತಲೆ; ಬಂದು: ಆಗಮಿಸು; ಸೋದರ: ತಮ್ಮ;

ಪದವಿಂಗಡಣೆ:
ಅರಸಿ +ಕೈದೀವಿಗೆಯಲ್+ಅವನ್+ಇಹ
ಪರಿಯ +ಕಂಡರು +ಕಾಹಿನವದಿರು
ಹರಿದು+ ಹೇಳಿದರ್+ಆತನ್+ಅನುಜಾತರಿಗೆ +ಬೇಗದಲಿ
ಕರದಿ +ಬಾಯ್ಗಳ +ಹೊಯ್ದು +ಹೃದಯದೊಳ್
ಉರಿ +ಚಡಾಳಿಸೆ +ಬಿಟ್ಟ +ಮಂಡೆಯೊಳ್
ಇರದೆ +ಬಂದರು +ಕೀಚಕನ+ ಸೋದರರು +ಬಾಯ್ಬಿಡುತ

ಅಚ್ಚರಿ:
(೧) ಅನುಜಾತ, ಸೋದರ – ಸಮನಾರ್ಥಕ ಪದ

ಪದ್ಯ ೯೪: ದ್ರೌಪದಿ ಕಾವಲುಗಾರರಿಗೆ ಏನು ಹೇಳಿದಳು?

ತರುಣಿ ಬಿಡು ಸಾರೆನುತ ಪವನಜ್
ಸರಿದನತ್ತಲು ದ್ರುಪದ ನಂದನೆ
ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ
ದುರುಳ ಬಲುಹಿಂದೆನ್ನನೆಳೆದೊಡೆ
ಕೆರಳಿದರು ಗಂಧರ್ವರೀತಗೆ
ಹರುವ ಕಂಡರು ನೋಡಿಯೆನೆ ಹರಿತಂದಳವರೊಡನೆ (ವಿರಾಟ ಪರ್ವ, ೩ ಸಂಧಿ, ೯೪ ಪದ್ಯ)

ತಾತ್ಪರ್ಯ:
ದ್ರೌಪದಿ, ನನ್ನನ್ನು ಬಿಡು, ಹೋಗು, ಎಂದು ಭೀಮನು ಹೊರಟು ಹೋದನು. ದ್ರೌಪದಿಯು ಕಾವಲಿನವರನ್ನು ಕರೆದು, ಈ ದುಷ್ಟನು ನನ್ನನ್ನು ಎಳೆದುದರಿಂದ ನನ್ನ ಪತಿಗಳಾದ ಗಂಧರ್ವರು ಕೆರಳಿ ಇವನನ್ನು ಕೊಂದರು ನೋಡಿ ಎಂದು ಕೀಚಕನ ಮೃತ ದೇಹವನ್ನು ತೋರಿಸಿದಳು.

ಅರ್ಥ:
ತರುಣಿ: ಹೆಣ್ಣು; ಬಿಡು: ತೊರೆ; ಸಾರು: ಹತ್ತಿರಕ್ಕೆ ಬರು; ಪವನಜ: ವಾಯು ಪುತ್ರ; ಸರಿ: ದೂರ ಹೋಗು; ನಂದನೆ: ಮಗಳು; ಕರೆ: ಬರೆಮಾಡು; ನುಡಿ: ಮಾತು; ಕಾಹಿ: ರಕ್ಷಿಸುವ; ಹದ: ಸ್ಥಿತಿ; ದುರುಳ: ದುಷ್ಟ; ಬಲು: ಬಲ, ಶಕ್ತಿ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೆರಳು: ಕೋಪಗೊಳ್ಳು; ಹರುವ: ನಾಶ, ಕೊನೆ; ಕಂಡು: ನೋಡು; ಹರಿ: ಪ್ರವಹಿಸು, ಹೇಳು;

ಪದವಿಂಗಡಣೆ:
ತರುಣಿ+ ಬಿಡು +ಸಾರೆನುತ+ ಪವನಜ
ಸರಿದನ್+ಅತ್ತಲು +ದ್ರುಪದ+ ನಂದನೆ
ಕರೆದು+ ನುಡಿದಳು +ಕಾಹಿನವರಿಗೆ+ ಕೀಚಕನ +ಹದನ
ದುರುಳ +ಬಲುಹಿಂದ್+ಎನ್ನನ್+ಎಳೆದೊಡೆ
ಕೆರಳಿದರು +ಗಂಧರ್ವರ್+ಈತಗೆ
ಹರುವ+ ಕಂಡರು +ನೋಡಿ+ಎನೆ +ಹರಿತಂದಳ್+ಅವರೊಡನೆ

ಅಚ್ಚರಿ:
(೧) ತರುಣಿ, ದ್ರುಪದ ನಂದನೆ – ದ್ರೌಪದಿಯನ್ನು ಕರೆದ ಪರಿ

ಪದ್ಯ ೯೩: ದ್ರೌಪದಿಯು ಏಕೆ ಕಳಕಳಿಸಿದಳು?

ತಲೆಯ ನೆದೆಯೊಳಗಿಕ್ಕಿ ಕೈಕಾ
ಲ್ಗಳನು ಬಸುರೊಳಗಿಕ್ಕಿ ದೂರಕೆ
ತೊಲಗಿದನು ತೋರಿದನು ರಮಣಿಗೆ ಕಿಚಕನ ಹದನ
ಖಳನು ಕಾಲನ ಕೋಣ ತುಳಿದಂ
ತಿಳೆಯೊಳೊರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನಪ್ಪಿ ಮುಂಡಾಡಿ (ವಿರಾಟ ಪರ್ವ, ೩ ಸಂಧಿ, ೯೩ ಪದ್ಯ)

ತಾತ್ಪರ್ಯ:
ಕೀಚಕನ ತಲೆಯನ್ನು ಎದೆಯೊಳಗೆ ತುರುಕಿ, ಕೈ ಕಾಲುಗಳನ್ನು ಹೊಟ್ಟೆಯಲ್ಲಿ ಸಿಕ್ಕಿಸಿ ಭೀಮನು ದೂರ ನಿಮ್ತು ಕೀಚಕನ ದುಸ್ಥಿತಿಯನ್ನು ದ್ರೌಪದಿಗೆ ತೋರಿಸಿದನು. ಯಮನ ಕೋಣವು ತುಳಿಯಿತೋ ಎಂಬಂತೆ ಕಿಚಕನ ದೇಹ ಅಲ್ಲಿ ಬಿದ್ದಿತ್ತು. ದ್ರೌಪದಿಯು ಅದನ್ನು ಕಂಡು ಅತಿಶಯ ಸಂತೋಷಗೊಂಡು ಭೀಮನನ್ನು ಬಿಗಿದಪ್ಪಿ ಅವನ ತಲೆಯನ್ನು ಸವರಿದಳು.

ಅರ್ಥ:
ತಲೆ: ಶಿರ; ಎದೆ: ಹೃದಯ; ಇಕ್ಕು: ಸೇರಿಸು; ಕೈ: ಹಸ್ತ; ಕಾಲು: ಪಾದ; ಬಸುರು: ಹೊಟ್ಟೆ; ಸಿಕ್ಕಿ: ತುರುಕು; ದೂರ: ಬಹಳ ಅಂತರ; ತೊಲಗು: ದೂರ ಸರಿ; ತೋರು: ಪ್ರದರ್ಶಿಸು; ರಮಣಿ: ಪ್ರಿಯತಮೆ; ಹದ: ಸ್ಥಿತಿ; ಖಳ: ದುಷ್ಟ; ಕಾಲ: ಯಮ; ಕೋಣ: ಎಮ್ಮೆ; ತುಳಿ: ಮೆಟ್ಟು; ಇಳೆ: ಭೂಮಿ; ಒರಗು: ಮಲಗು; ಕಂಡು: ನೋಡು; ಕಾಮಿನಿ: ಹೆಣ್ಣು; ಕಳಕಳಿಸು: ಹರ್ಷಿಸು; ಅಪ್ಪು: ಆಲಿಂಗನ; ಮುಂಡಾಡು: ತಲೆಯನ್ನು ನೇವರಿಸು;

ಪದವಿಂಗಡಣೆ:
ತಲೆಯನ್ + ಎದೆಯೊಳಗಿಕ್ಕಿ +ಕೈ+ಕಾ
ಲ್ಗಳನು+ ಬಸುರೊಳಗಿಕ್ಕಿ+ ದೂರಕೆ
ತೊಲಗಿದನು +ತೋರಿದನು+ ರಮಣಿಗೆ +ಕಿಚಕನ +ಹದನ
ಖಳನು+ ಕಾಲನ +ಕೋಣ +ತುಳಿದಂತ್
ಇಳೆಯೊಳ್+ಒರಗಿರೆ +ಕಂಡು +ಕಾಮಿನಿ
ಕಳಕಳಿಸಿದಳು+ ಭೀಮಸೇನನ್+ಅಪ್ಪಿ+ ಮುಂಡಾಡಿ

ಅಚ್ಚರಿ:
(೧) ಕೀಚಕನ ದೇಹದ ಸ್ಥಿತಿ – ತಲೆಯ ನೆದೆಯೊಳಗಿಕ್ಕಿ ಕೈಕಾಲ್ಗಳನು ಬಸುರೊಳಗಿಕ್ಕಿ
(೨) ಉಪಮಾನದ ಪ್ರಯೋಗ – ಖಳನು ಕಾಲನ ಕೋಣ ತುಳಿದಂತಿಳೆಯೊಳೊರಗಿರೆ

ಪದ್ಯ ೯೨: ಕೀಚಕನ ಅಂತ್ಯವು ಹೇಗಾಯಿತು?

ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ
ಬರಿದು ವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ (ವಿರಾಟ ಪರ್ವ, ೩ ಸಂಧಿ, ೯೨ ಪದ್ಯ)

ತಾತ್ಪರ್ಯ:
ಭೀಮನು ಹಿಮ್ಮೆಟ್ಟಿ, ಕೀಚಕನ ವಿಶಾಲವಾದ ಎದೆಯನ್ನು ಮತ್ತೆ ತಿವಿಯಲು ಎದೆಯು ಸೀಳಿತು, ಕೀಚಕನು ಕರುಳನ್ನು ಹೊಟ್ಟೆಯಿಂದ ತೆಗೆದನು, ಕಣ್ಣುಗುಡ್ಡೆ ನೆಟ್ಟುಕೊಂಡಿತು, ದೇಹವು ಆಚೆ ಈಚೆ ಅಲುಗಾಡಿ ಒಮ್ಮೆಲೆ ಜೋರಾಗಿ ಕೆಳಕ್ಕೆ ಬಿದ್ದು ಪಕ್ಕಕ್ಕೆ ತಿರುಗಿತು. ಕೀಚಕನ ಪ್ರಾಣವು ಆತನ ದೇಹದಿಂದ ಹಾರಿಹೋಯಿತು.

ಅರ್ಥ:
ತಿರುಗಿ: ಸುತ್ತು, ದಿಕ್ಕನ್ನು ಬದಲಾಯಿಸು; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪವನಜ: ಭೀಮ, ವಾಯುಪುತ್ರ; ಮರಳಿ: ಪುನಃ; ತಿವಿ: ಚುಚ್ಚು; ಪೇರುರ: ವಿಶಾಲವಾದ ಎದೆ; ಎದೆ: ಹೃದಯ; ಜರ್ಝರಿತ: ಭಗ್ನ, ಚೂರು; ಕಾರು: ಅಗೆದದ್ದು, ಕೊಲ್ಲಿ; ಕರುಳು: ಪಚನಾಂಗದ ಭಾಗ; ಬಿರಿ: ಸೀಳು; ಆಲಿ: ಕಣ್ಣು ಗುಡ್ಡೆ; ಒಲೆ: ತೂಗಾಡು; ಕಣ್ಣು: ನಯನ; ಉರುಗು: ಬಾಗು; ಧೊಪ್ಪನೆ: ಜೋರಾಗಿ, ಒಮ್ಮೆಲೆ; ಕೆಡೆ: ಬೀಳು; ನಿಮಿಷ: ಕ್ಷಣಮಾತ್ರ; ಹೊರಳು: ಉರುಳು, ತಿರುಗು; ಹರಣ: ಜೀವ, ಪ್ರಾಣ; ಕಳುಹು: ತೆರಳು; ಕಳೆ: ತೊರೆ; ಕಾಯ: ದೇಹ;

ಪದವಿಂಗಡಣೆ:
ತಿರುಗಿ +ಪೈಸರವೋಗಿ +ಪವನಜ
ಮರಳಿ+ ತಿವಿದನು +ಕೀಚಕನ+ ಪೇ
ರುರವನ್+ಎದೆ +ಜರ್ಝರಿತವಾಗಲು +ಕಾರಿದನು +ಕರುಳ
ಬರಿದುವ್ + ಆಲಿಗಳ್+ಒಲೆದೊಲೆದು +ಕಣ್ಣ್
ಉರುಗಿ+ ಧೊಪ್ಪನೆ +ಕೆಡೆದು +ನಿಮಿಷಕೆ
ಹೊರಳಿ +ಹರಣವ+ ಕಳುಹಿ +ಕಳೆದುದು +ಕಾಯ +ಕೀಚಕನ

ಅಚ್ಚರಿ:
(೧) ಕ ಕಾರದ ಸಾಲು ಪದ – ಕಳುಹಿ ಕಳೆದುದು ಕಾಯ ಕೀಚಕನ

ಪದ್ಯ ೯೧: ಕೀಚಕನು ಮತ್ತೆ ಹೇಗೆ ಭೀಮನ ಮೇಲೆ ಎರಗಿದನು?

ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲಮೆಲ್ಲನೆಯಸುವ ಪಸರಿಸುತ
ಕೆರಳಿ ಕರಿ ಕೇಸರಿಯ ಹೊಯ್ದರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳರಾಯ ಹಲುಮೊರೆದ (ವಿರಾಟ ಪರ್ವ, ೩ ಸಂಧಿ, ೯೧ ಪದ್ಯ)

ತಾತ್ಪರ್ಯ:
ಶತ್ರುವಿನ ಮುಷ್ಟಿಯ ಪೆಟ್ಟಿಗೆ ಕೀಚಕನ ತಲೆ ಬಿರಿಯಿತು, ಅವನ ದೇಹ ತರತರನೆ ನಡುಗಿತು, ಕಣ್ಣುಗಳು ತಿರುಗಿ ಅಲ್ಲಾಡುತ್ತಿದ್ದವು, ಆದರೂ ಕಿಚಕನು ನಿಧಾನವಾಗಿ ಶಕ್ತಿಯನ್ನು ತಂದುಕೊಂಡು, ಆನೆಯು ಸಿಂಹವನ್ನು ಹೊಡೆಯಲೆತ್ನಿಸುವ ಪರಿ ಹಲ್ಲುಕಡಿದ್ಯ್ ಬೀಳು ಎಂದು ಕೂಗುತ್ತಾ ಭೀಮನನ್ನು ತಿವಿದನು.

ಅರ್ಥ:
ಅರಿ: ವೈರಿ; ಮುಷ್ಟಿ: ಮುಚ್ಚಿದ ಅಂಗೈ; ಗಾಯ: ಪೆಟ್ಟು; ತಲೆ: ಶಿರ; ಬಿರಿ: ಬಿರುಕು, ಸೀಳು; ತನು: ದೇಹ; ಡೆಂಡಣಿಸು: ಕಂಪಿಸು; ಕಂಗಳು: ನಯನ; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಜೋಲು: ಅಲ್ಲಾಡು; ಮೆಲ್ಲನೆ: ನಿಧಾನ; ಅಸು: ಪ್ರಾಣ; ಪಸರಿಸು: ಹರಡು; ಕೆರಳು: ಕೆದರು, ಹರಡು; ಕರಿ: ಆನೆ; ಕೇಸರಿ: ಸಿಂಹ; ಹೊಯ್ದು: ಹೊಡೆ; ತಿರುಗು: ದಿಕ್ಕನ್ನು ಬದಲಾಯಿಸು; ಬರಿ:ಪಕ್ಕ, ಬದಿ; ತಿವಿ: ಚುಚು; ಬೀಳು: ಕೆಳಕ್ಕೆ – ಕೆಡೆ; ಖಳ: ದುಷ್ಟ; ರಾಯ: ರಾಜ; ಹಲುಮೊರೆ: ಹಲ್ಲನ್ನು ಕಡಿದು;

ಪದವಿಂಗಡಣೆ:
ಅರಿಯ +ಮುಷ್ಟಿಯ +ಗಾಯದಲಿ +ತಲೆ
ಬಿರಿಯೆ +ತನು +ಡೆಂಡಣಿಸಿ+ ಕಂಗಳು
ತಿರುಗಿ +ಜೋಲಿದು +ಮೆಲ್ಲಮೆಲ್ಲನೆ+ಅಸುವ +ಪಸರಿಸುತ
ಕೆರಳಿ+ ಕರಿ+ ಕೇಸರಿಯ +ಹೊಯ್ದರೆ
ತಿರುಗುವಂತಿರೆ+ ಭೀಮಸೇನನ
ಬರಿಯ +ತಿವಿದನು +ಬೀಳೆನುತ+ ಖಳರಾಯ +ಹಲುಮೊರೆದ

ಅಚ್ಚರಿ:
(೧) ಅರಿ, ಖಳರಾಯ – ಕೀಚಕನನ್ನು ಕರೆದ ಪರಿ
(೨) ಉಪಮಾನದ ಪ್ರಯೋಗ – ಕೆರಳಿ ಕರಿ ಕೇಸರಿಯ ಹೊಯ್ದರೆ ತಿರುಗುವಂತಿರೆ