ಪದ್ಯ ೩೧: ದ್ರೌಪದಿಯನ್ನು ಕೀಚಕ ಹೇಗೆ ಬಯ್ದನು?

ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತರ
ಬಲುಹು ಮಾನ್ಯರ ನಿರಿಯವೇ ತಂಗಾಳಿ ಧಾರ್ಮಿಕನೇ
ಖಳನಲಾ ಮಾಕಂದ ಲೋಕದ
ಕೊಲೆಗಡಿಕನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇ ಎಂದ (ವಿರಾಟ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸೈರಂಧ್ರಿ, ದುಂಬಿಯು ಕ್ಷುದ್ರಕೀಟವಲ್ಲವೇ? ಕೋಗಿಲೆಯು ಬಾಯ್ಬಡುಕನಲ್ಲವೇ? ವಸಂತ ಚಂದ್ರರು ಇವನು ಸಜ್ಜನ ಎಂದು ಬಿಡುವರೇ? ಅವರನ್ನು ಪೀಡಿಸುವುದಿಲ್ಲವೇ? ತಂಗಾಳಿಯು ಧಾರ್ಮಿಕ ಮನೋಭಾವವನ್ನು ಹೊಂದಿದೆಯೇ? ಇವರೆಲ್ಲರ ಸಹಾಯ ಪಡೆದ ಮನ್ಮಥನು ಕೊಲೆಗಡಿಕನಲ್ಲವೇ? ಅವನನ್ನು ತಿರಸ್ಕರಿಸಲು ಆಗುವುದೇ? ಪಾಪೀ ನನಗೆ ಒಲಿಯದೆ ನನ್ನನ್ನು ಕೊಲ್ಲಬಹುದೇ ಎಂದು ಕೀಚಕನು ಕೇಳಿದನು.

ಅರ್ಥ:
ಹುಳುಕು: ಕ್ಷುದ್ರವಾದ, ನೀಚವಾದ; ತುಂಬಿ: ದುಂಬಿ, ಜೇನು ನೊಣ; ಕೋಗಿಲೆ: ಪಿಕ; ಗಳಹ: ಮಾತಾಳಿ; ಶಶಿ: ಚಂದ್ರ; ಬಲುಹು: ಬಲ, ಶಕ್ತಿ; ಮಾನ್ಯ: ಸಜ್ಜನ; ನಿರಿ: ಕೊಲ್ಲು, ಸಾಯಿಸು; ತಂಗಾಳಿ: ತಂಪಾದ ವಾಯು; ಧಾರ್ಮಿಕ: ಸಜ್ಜನ; ಖಳ: ದುಷ್ಟ; ಮಾಕಂದ: ಮಾವಿನಮರ; ಲೋಕ: ಜಗತ್ತು; ಕೊಲೆ: ಸಾಯಿಸು; ಮನೋಭವ: ಕಾಮ, ಮನ್ಮಥ; ಇಳಿಕೆ: ತಿರಸ್ಕಾರ, ತಾತ್ಸಾರ; ಪಾಪಿ: ದುಷ್ಟ; ಒಲಿ: ಪ್ರೀತಿ; ಕೊಲು: ಸಾಯಿಸು;

ಪದವಿಂಗಡಣೆ:
ಹುಳುಕನಲ್ಲಾ+ ತುಂಬಿ +ಕೋಗಿಲೆ
ಗಳಹನಲ್ಲಾ+ ಶಶಿ+ ವಸಂತರ
ಬಲುಹು+ ಮಾನ್ಯರ+ ನಿರಿಯವೇ+ ತಂಗಾಳಿ +ಧಾರ್ಮಿಕನೇ
ಖಳನಲಾ +ಮಾಕಂದ +ಲೋಕದ
ಕೊಲೆಗಡಿಕನಲ್ಲಾ +ಮನೋಭವನ್
ಇಳಿಕೆ+ಕೊಂಬರೆ +ಪಾಪಿ+ಒಲಿಯದೆ+ ಕೊಲುವರೇ +ಎಂದ

ಅಚ್ಚರಿ:
(೧) ಮನ್ಮಥನನ್ನು ವರ್ಣಿಸುವ ಪರಿ – ಲೋಕದ ಕೊಲೆಗಡಿಕನಲ್ಲಾ ಮನೋಭವ ನಿಳಿಕೆಗೊಂಬರೆ

ಪದ್ಯ ೩೦: ಕೀಚಕನು ದ್ರೌಪದಿಯನ್ನು ಹೇಗೆ ಹೆದರಿಸಿದನು?

ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೇನನೇಗುವರು
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆಯಾ
ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ (ವಿರಾಟ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ಉತ್ತರವನ್ನು ನೀಡುತ್ತಾ ಕೀಚಕನು, ನನ್ನ ಪರಾಕ್ರಮವನ್ನು ನೀನು ತಿಳಿದಿಲ್ಲ. ಬಡವರ ಸಿಟ್ಟು ದವಡೆಗೆ ಮೂಲ ಎಂದು ಕೇಳಿರುವೆ ತಾನೆ? ನಿನ್ನ ಪತಿಗಳು ಏನು ಮಾಡಲು ಸಾಧ್ಯ, ಅವರನ್ನು ನಾನು ಎದುರಿಸಬಲ್ಲೆ, ನೀನು ನನಗೊಲಿದರೆ ಸಾಕು, ಶಿವನೇ ಬಂದರೂ ನಾನು ಹಿಂಜರಿಯುವುದಿಲ್ಲ ಎಂದನು.

ಅರ್ಥ:
ಖಳ: ದುಷ್ಟ; ನುಡಿ: ಮಾತು; ಆಟೋಪ: ದರ್ಪ, ಆವೇಶ; ಅರಿ: ತಿಳಿ; ಬಡವ: ನಿರ್ಗತಿಕ; ಕೋಪ: ಖತಿ; ಔಡು: ಹಲ್ಲಿನಿಂದ ಕಚ್ಚು, ಕೆಳತುಟಿ; ಮೃತ್ಯು: ಸಾವು; ಏಗು: ಮಾಡು; ಓಪು: ಪ್ರೀತಿ, ಸ್ನೇಹ; ಸಾಕು: ಅಗತ್ಯ ಪೂರೈಸು; ಮಲೆತ: ಕೊಬ್ಬಿದ; ಅಡೆ: ಒದಗು, ಮುಚ್ಚಿಹೋಗಿರು; ಪಿನಾಕಿ: ಶಿವ; ತೆರಳು: ಹೋಗು; ಬಳಿಕ: ನಂತರ; ನೋಡು: ವೀಕ್ಷಿಸು; ಆಪು: ಶಕ್ತಿ, ಬಲ, ಸಾಮರ್ಥ್ಯ;

ಪದವಿಂಗಡಣೆ:
ದ್ರೌಪದಿಗೆ +ಖಳ+ ನುಡಿದನ್+ಎನ
ಆಟೋಪವನು +ನೀನರಿಯೆ +ಬಡವರ
ಕೋಪವ್+ಔಡಿಗೆ+ ಮೃತ್ಯು +ನಿನ್ನವರ್+ಏನನ್+ಏಗುವರು
ಆಪೆನ್+ಅವರಂತಿರಲಿ+ ನೀನ್+ಎನಗ್
ಓಪಳಾದರೆ +ಸಾಕು +ಮಲೆತಡೆ+ಆ+
ಪಿನಾಕಿಗೆ +ತೆರಳುವೆನೆ +ಬಳಿಕಲ್ಲಿ +ನೋಡೆಂದ

ಅಚ್ಚರಿ:
(೧) ಗಾದೆಯ ಬಳಕೆ – ಬಡವರ ಕೋಪವೌಡಿಗೆ ಮೃತ್ಯು

ಪದ್ಯ ೨೯: ದ್ರೌಪದಿಯು ಹುಲ್ಲುಕಡ್ಡಿಯನ್ನು ಹಿಡಿದು ಏನೆಂದು ಹೇಳಿದಳು?

ಮರುಳುತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು (ವಿರಾಟ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎಲೈ ಮೂರ್ಖ, ನಾನು ಗಂಧರ್ವರ ಹೆಂಡತಿ, ನಿನ್ನ ದುಷ್ಟತನವನ್ನು ನನ್ನ ಪತಿಯರು ಸೈರಿಸುವುದಿಲ್ಲ. ಅವರು ಮಹಾ ಪರಾಕ್ರಮಿಗಳು. ಆದುದರಿಂದ ಈ ಹುಚ್ಚನ್ನು ಬಿಟ್ಟು ಬಿಡು. ಅಪಕೀರ್ತಿ ನಾರಿಯನ್ನು ಸೇರಬೇಡ. ನಿನ್ನ ಮನೆಗೆ ತೆರಳುವುದೇ ಒಳಿತು ಎಂದು ದ್ರೌಪದಿಯು ಒಂದು ಹುಲ್ಲುಕಡ್ದಿಯನ್ನು ಹಿಡಿದು ಹೇಳಿದಳು.

ಅರ್ಥ:
ಮರುಳು: ಮೂಢ; ಬೇಡ: ತೊರೆ; ಗಂಧರ್ವ: ಖಚರ; ಹೆಂಡತಿ: ಸತಿ, ಭಾರ್ಯ; ದುರುಳ: ದುಷ್ಟ; ಸೈರಿಸು: ತಾಳು, ಸಹನೆ; ಬಲ್ಲ: ತಿಳಿದ; ಸೊರಹು: ಅತಿಯಾಗಿ ಮಾತನಾಡುವಿಕೆ, ಗಳಹು; ಅಪಕೀರ್ತಿ: ಅಪಯಶಸ್ಸು; ನೆರೆ: ಜೊತೆಗೂಡು; ನಿಳಯ: ಮನೆ; ಮರಳು: ಹಿಂದಿರುಗು; ಲೇಸು: ಒಳಿತು; ತೃಣ: ಹುಲ್ಲು; ಹಿಡಿ: ಗ್ರಹಿಸು; ಸಾರು: ಪ್ರಕಟಿಸು;

ಪದವಿಂಗಡಣೆ:
ಮರುಳುತನ +ಬೇಡ್+ಎಲವೊ +ಗಂಧ
ರ್ವರಿಗೆ+ ಹೆಂಡತಿ+ ತಾನು +ನಿನ್ನಯ
ದುರುಳತನವನು+ ಸೈರಿಸರು +ತನ್ನವರು +ಬಲ್ಲಿದರು
ಸೊರಹದಿರು +ಅಪಕೀರ್ತಿ+ನಾರಿಯ
ನೆರೆಯದಿರು+ ನೀ +ನಿನ್ನ +ನಿಳಯಕೆ
ಮರಳುವುದು +ಲೇಸೆಂದು +ತೃಣವನು+ ಹಿಡಿದು +ಸಾರಿದಳು

ಅಚ್ಚರಿ:
(೧) ನ ಕಾರದ ಸಾಲು ಪದ – ನಾರಿಯ ನೆರೆಯದಿರು ನೀ ನಿನ್ನ ನಿಳಯಕೆ
(೨) ಮರುಳು, ಮರಳು – ಪದಗಳ ಬಳಕೆ

ಪದ್ಯ ೨೮: ಕೀಚಕನು ದ್ರೌಪದಿಯನ್ನು ಹೇಗೆ ಬೇಡಿದ?

ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನಗೆ ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೀಚಕನ ವಿವೇಕವು ಮಾಸಿಹೋದವು, ಸೈರಂಧ್ರಿ ಹೇಗಿದ್ದರೂ ನನಗೆ ಸಾವು ತಪ್ಪುವುದಿಲ್ಲ, ಮನ್ಮಥನ ತಾಪ ಬಲು ಹೆಚ್ಚಿನದು. ನಿನ್ನನ್ನು ಕೂಡಿಯೇ ಸಾಯುತ್ತೇನೆ, ಕಾಮನ ಬಾಣಗಳಿಗೆ ಈ ದೇಹವನ್ನು ಬಲಿಕೊಡುವುದಿಲ್ಲ. ಸುಂದರಿ, ನನ್ನನ್ನು ತಿರಸ್ಕರಿಸಬೇಡ. ಕಮಲವದನೆ ನನ್ನ ಮೇಲೆ ಕೃಪೆಮಾಡು, ಎಂದು ಕೀಚಕನು ದ್ರೌಪದಿಗೆ ಕೈಮುಗಿದನು.

ಅರ್ಥ:
ಸಾವು: ಮರಣ; ತಪ್ಪದು: ಖಂಡಿತವಾಗಿ ಬರುತ್ತದೆ; ಕಾಮ: ಮನ್ಮಥ; ಡಾವರ: ತೀವ್ರತೆ, ರಭಸ; ಘನ: ಶ್ರೇಷ್ಠ; ನೆರೆ:ಸೇರು, ಜೊತೆಗೂಡು; ಅಂಬು: ಬಾಣ; ಒಡಲು: ದೇಹ; ಒಪ್ಪಿಸು: ಸಮ್ಮತಿಸು, ನೀಡು; ಭಾವೆ: ಸುಂದರಿ; ನೂಕು: ತಳ್ಳು; ವರ: ಶ್ರೇಷ್ಠ; ರಾಜೀವಮುಖಿ: ಕಮಲದಂತ ಮುಖವುಳ್ಳವಳು; ಕೃಪೆ: ದಯೆ; ಜೀವ: ಪ್ರಾಣ; ಉಳುಹು: ರಕ್ಷಿಸು; ಕಮಲಾನನೆ: ಕಮಲದಂತ ಮುಖವುಳ್ಳವಳು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಸಾವು+ ತಪ್ಪದು +ತನಗೆ +ಕಾಮನ
ಡಾವರವು +ಘನ +ನಿನ್ನ +ನೆರೆದೇ
ಸಾವೆನ್+ಅಲ್ಲದೆ+ ಕಾಮನ್+ಅಂಬಿಂಗ್+ಒಡಲನ್+ಒಪ್ಪಿಸೆನು
ಭಾವೆ +ನೂಕದಿರ್+ಎನ್ನ +ವರ +ರಾ
ಜೀವಮುಖಿ +ಕೃಪೆ+ ಮಾಡು +ತನ್ನಯ
ಜೀವನವನ್+ಉಳುಹೆನುತ+ ಕಮಲಾನನಗೆ+ ಕೈಮುಗಿದ

ಅಚ್ಚರಿ:
(೧) ರಾಜೀವಮುಖಿ, ಕಮಲಾನನೆ, ಭಾವೆ – ದ್ರೌಪದಿಯನ್ನು ಕರೆದ ಪರಿ

ಪದ್ಯ ೨೭: ದ್ರೌಪದಿಯು ಕೀಚಕನಿಗೆ ತನ್ನ ಪತಿಗಳ ಬಗ್ಗೆ ಏನು ಹೇಳಿದಳು?

ಕಾತರಿಸದಿರು ಮಂದಿವಾಳದ
ಮಾತುಗಳು ಬೇಡಕಟ ಕೆಡದಿರು
ಸೋತರೇನದು ಮನುಜಧರ್ಮವು ಚಿತ್ತ ಚಂಚಲವು
ಈತತುಕ್ಷಣವಾರು ಕೇಳಿದೊ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದಳಿಂದುಮುಖಿ (ವಿರಾಟ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕಾತರದಿಂದ ಬೀದಿ ಹೋಕರಂತೆ ಮಾತನಾಡಬೇಡ. ಹಾಗೆ ಮಾಡಿ ಕೆಡಬೇಡ. ನನ್ನನ್ನು ನೀನು ಬಯಸಿರುವುದು ಮನುಷ್ಯ ಧರ್ಮ. ಮನುಷ್ಯನ ಮನಸ್ಸು ಚಂಚಲ. ನೀನು ನನ್ನೊಡನೆ ಆಡಿರುವ ಮಾತುಗಳನ್ನು ನನ್ನ ಐವರು ಪತಿಗಳಲ್ಲಿ ಯಾರು ಕೇಳಿದರೂ ಅವರು ಸೈರಿಸುವುದಿಲ್ಲ. ನನ್ನ ಪತಿಗಳು ದೇವತೆಗಳಲ್ಲಿ ಮಹಾ ಬಲಶಾಲಿಗಳು ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಕಾತರ: ಕಳವಳ; ಮಂದಿ: ಜನ; ಮಂದಿವಾಳ: ಬೀದಿಜನ; ಮಾತು: ವಾಣಿ; ಬೇಡ: ತಡೆ; ಅಕಟ: ಅಯ್ಯೋ; ಕೆಡು: ಹಾಳು; ಸೋಲು: ಪರಾಭವ; ಮನುಜ: ಮಾನವ; ಧರ್ಮ: ಧಾರಣೆ ಮಾಡಿದುದು; ಚಿತ್ತ: ಮನಸ್ಸು; ಚಂಚಲ: ಅಲುಗಾಡು; ಉಕ್ಷಣ: ಚಿಮುಕಿಸುವುದು, ಸಿಂಪಡಿಸುವುದು; ಕೇಳು: ಆಲಿಸು; ಸೈರಿಸು: ತಾಳು; ದೇವ: ದೇವತೆ; ವ್ರಾತ: ಗುಂಪು; ಬಲ್ಲು: ತಿಳಿ; ಇಂದುಮುಖಿ: ಚಂದ್ರನಂತಿರುವ ಮುಖ;

ಪದವಿಂಗಡಣೆ:
ಕಾತರಿಸದಿರು+ ಮಂದಿವಾಳದ
ಮಾತುಗಳು +ಬೇಡ್+ಅಕಟ+ ಕೆಡದಿರು
ಸೋತರೇನದು +ಮನುಜ+ಧರ್ಮವು +ಚಿತ್ತ +ಚಂಚಲವು
ಈತತ್+ಉಕ್ಷಣವ್+ಆರು+ ಕೇಳಿದೊಡ್
ಆತಗಳು +ಸೈರಿಸರು+ ದೇವ
ವ್ರಾತದಲಿ +ಬಲ್ಲಿದರು+ ತನ್ನವರೆಂದಳ್+ಇಂದುಮುಖಿ

ಚ್ಚರಿ:
(೧) ಮನುಜಧರ್ಮದ ಗುಣ – ಮನುಜಧರ್ಮವು ಚಿತ್ತ ಚಂಚಲವು