ಪದ್ಯ ೨: ಧರ್ಮಜನನಿಗೆ ಯಾವ ಚಿಂತೆ ಕಾಡಿತು?

ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿನ ಹದನು ತಮಗಿ
ನ್ನೊಂದಬುದವಜ್ಞಾತವುತ್ಕಟವಾಯ್ತುಲಾಯೆಂದ (ವಿರಾಟ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಪಾಂಡವರು ದ್ರೌಪದಿಯೊಡನೆ ಆಲದ ಮರದ ಕೆಳಗೆ ಬಳಲಿಕೆಯಿಮ್ದ ಸ್ವಲ್ಪಕಾಲ ವಿಶ್ರಮಿಸಿಕೊಂಡರು. ಬಳಿಕ ಯುಧಿಷ್ಠಿರನು ಚಿಂತಿಸಿ, ಈ ಹಿಂದೆ ಹನ್ನೆರಡು ವರ್ಷಗಳು ಕಳೆದವು. ಮುಂದೆ ಬರುವ ಯಾತನೆಯು ಅಜ್ಞಾತವಾಸ. ಇದು ಬಹು ಕಷ್ಟ ಇದನ್ನು ಹೇಗೆ ಕಳೆಬೇಕೆಂದು ಕೇಳಿದನು.

ಅರ್ಥ:
ಬಂದು: ಆಗಮಿಸು; ವಟಕುಜ: ಆಲದಮರ; ಅಡಿ: ಕೆಳಗೆ; ಅನಿಬರು: ಅಷ್ಟು ಜನ; ನಿಂದು: ನಿಲ್ಲು ದುರುಪದಿ: ದ್ರೌಪದಿ; ಸಹಿತ: ಜೊತೆ; ಬಳಲಿಕೆ: ಆಯಾಸ; ವಿಶ್ರಮ: ವಿರಾಮ; ಚಿಂತಿಸು: ಯೋಚಿಸು; ನಂದನ: ಮಗ; ಹಿಂದೆ: ನಡೆದ; ಅಬುದ: ವರ್ಷ; ಸವೆದು: ಕಳೆದು; ಮುಂದಣ: ಮುಂದಿನ; ಅನುವು: ರೀತಿ; ಹದ: ಸ್ಥಿತಿ; ಅಜ್ಞಾತ: ಯಾರಿಗೂ ತಿಳಿಯದ; ಉತ್ಕಟ: ಉಗ್ರತೆ, ಆಧಿಕ್ಯ;

ಪದವಿಂಗಡಣೆ:
ಬಂದು +ವಟಕುಜದ್+ಅಡಿಯಲ್+ಅನಿಬರು
ನಿಂದು +ದುರುಪದಿ+ ಸಹಿತ+ ಬಳಲಿಕೆ
ಯಿಂದ +ವಿಶ್ರಮಿಸಿದರು +ಚಿಂತಿಸಿ +ಧರ್ಮ+ನಂದನನು
ಹಿಂದೆ +ಹನ್ನೆರಡ್+ಅಬುದ +ಸವೆದವು
ಮುಂದಣನುವಿನ +ಹದನು +ತಮಗಿನ್
ಒಂದ್+ಅಬುದವ್+ಅಜ್ಞಾತವ್+ಉತ್ಕಟವಾಯ್ತಲಾಯೆಂದ

ಅಚ್ಚರಿ:
(೧) ಬಂದು, ನಿಂದು – ಪ್ರಾಸ ಪದ
(೨) ಹಿಂದೆ, ಮುಂದಣ – ವಿರುದ್ಧ ಪದ

ಪದ್ಯ ೧: ಪಾಂಡವರು ಎಲ್ಲಿಗೆ ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರುನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸೇರಿದರೊಂದು ವಟಕುಜವ (ವಿರಾಟ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಯುಧಿಷ್ಠಿರನು ವನವಾಸದ ಅವಧಿ ಮುಗಿದ ಮೇಲೆ ತನ್ನೊಡನಿದ್ದ ಮುನಿಗಳನ್ನೂ, ಮಿತ್ರರಾಜರನ್ನೂ ಬೀಳ್ಕೊಟ್ಟನು. ಅಗ್ನಿಯನ್ನು ಪ್ರದಕ್ಷಿಣೆ ಮಾಡಿ ಹೊರಟನು. ದಾರಿಯಲ್ಲಿ ಶುಭಶಕುನಗಳನ್ನು ನೋಡುತ್ತಾ, ಇಂಪಾದ ಶಬ್ದವನ್ನು ಕೇಳುತ್ತಾ ತಮ್ಮಂದಿರೊಡನೆ ಒಂದು ಆಲದ ಮರದ ಬಳಿಗೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಮುನಿ: ಋಷಿ; ನೃಪ: ರಾಜ; ಬೀಳುಗೊಡು: ತೆರಳು; ಭೂಮಿಪತಿ: ರಾಜ; ಬಲವಂದು: ಪ್ರದಕ್ಷಿಣೆ; ಹುತವಹ: ಅಗ್ನಿ; ಶಕುನ: ನಿಮಿತ್ತ, ಭವಿಷ್ಯ; ಚಾರು: ಸುಂದರ; ನಿನದ: ಶಬ್ದ; ಆಲಿಸು: ಕೇಳು; ಸಹಿತ: ಜೊತೆ; ಸೋದರ: ಅಣ್ಣ ತಮ್ಮಂದಿರು; ಸಹಿತ: ಜೊತೆ; ವನಾಲಯ: ಕಾಡಿನ ವಾಸಸ್ಥಾನ; ಹೊರವಂಟು: ಹೊರಡು; ಸೇರು: ಜೊತೆಗೂಡು; ವಟ: ಆಲದ ಮರ; ಕುಜ: ಗಿಡ, ಮರ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಮುನಿಜನ +ನೃಪ+ಜನಂಗಳ
ಬೀಳುಗೊಟ್ಟನು+ ಭೂಮಿಪತಿ +ಬಲವಂದು +ಹುತವಹನ
ಮೇಲು +ಶಕುನದ +ಚಾರು+ನಿನದವನ್
ಆಲಿಸುತ +ಸೋದರರು +ಸಹಿತ +ವ
ನಾಲಯವ+ ಹೊರವಂಟು +ಸೇರಿದರೊಂದು +ವಟಕುಜವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀಳುಗೊಟ್ಟನು ಭೂಮಿಪತಿ ಬಲವಂದು
(೨) ಧರಿತ್ರೀಪಾಲ, ಭೂಮಿಪತಿ, ನೃಪ – ಸಮನಾರ್ಥಕ ಪದ