ಪದ್ಯ ೭೧: ಪಾಂಡವರು ಯಾವ ಸುದ್ದಿಯನ್ನು ಕೇಳಿದರು?

ಕೇಳಿದರು ಪಾಂಡವರು ಕುರು ಭೂ
ಪಾಲಕನ ಸಂಕಲ್ಪವನು ಪಾ
ತಾಳದಲಿ ಸುರವೈರಿ ವರ್ಗದ ಸತ್ಯ ಸಂಗತಿಯ
ಮೇಲಣಧ್ವರ ಕರ್ಮವನು ನಗು
ತಾಲಿಸಿದರಡಿಗಡಿಗೆ ಲಕ್ಷ್ಮೀ
ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ (ಅರಣ್ಯ ಪರ್ವ, ೨೨ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕೌರವನು ಪಾತಾಳದಲ್ಲಿ ದೈತ್ಯರ ಸ್ನೇಹ ಮಾಡಿದುದನ್ನೂ, ಅವನು ರಾಜ್ಯವನ್ನು ಕೊಡದಿರುವ ಸಂಕಲ್ಪವನ್ನೂ ಕೇಳಿದರು. ಅವನು ಯಜ್ಣಮಾಡಿದ ಸುದ್ದಿಯನ್ನೂ ನಗುತ್ತಾ ಕೇಳಿದರು. ಲಕ್ಷ್ಮೀರಮಣನಾದ ವೀರನಾರಾಯಣನ ಪಾದಕಮಲಗಳನ್ನು ನೆನೆಯುತ್ತಿದ್ದರು.

ಅರ್ಥ:
ಕೇಳು: ಆಲಿಸು; ಭೂಪಾಲ: ರಾಜ; ಸಂಕಲ್ಪ: ನಿರ್ಧಾರ; ಪಾತಾಳ: ಅಧೋಲೋಕ; ಸುರವೈರಿ: ರಾಕ್ಷಸ; ವರ್ಗ: ಗುಂಪು; ಸತ್ಯ: ನಿಜ; ಸಂಗತಿ: ವಿಚಾರ; ಮೇಲಣ: ಆನಂತರ; ಅಧ್ವರ: ಯಾಗ; ಕರ್ಮ: ಕಾರ್ಯ; ನಗುತ: ಸಂತಸ; ಆಲಿಸು: ಕೇಳು; ಅಡಿಗಡಿಗೆ: ಮತ್ತೆ ಮತ್ತೆ; ನೆನೆ: ಜ್ಞಾಪಿಸು;

ಪದವಿಂಗಡಣೆ:
ಕೇಳಿದರು +ಪಾಂಡವರು +ಕುರು +ಭೂ
ಪಾಲಕನ +ಸಂಕಲ್ಪವನು +ಪಾ
ತಾಳದಲಿ +ಸುರವೈರಿ +ವರ್ಗದ +ಸತ್ಯ +ಸಂಗತಿಯ
ಮೇಲಣ್+ಅಧ್ವರ +ಕರ್ಮವನು +ನಗುತ
ಆಲಿಸಿದರ್+ಅಡಿಗಡಿಗೆ +ಲಕ್ಷ್ಮೀ
ಲೋಲನ್+ಅಂಘ್ರಿಯ +ನೆನೆವುತಿದ್ದರು +ವೀರ +ನರಯಣನ

ಅಚ್ಚರಿ:
(೧) ರಾಕ್ಷಸರು ಎಂದು ಹೇಳಲು – ಪಾತಾಳದಲಿ ಸುರವೈರಿ ವರ್ಗ

ಪದ್ಯ ೭೦: ಕೌರವನು ಯಾವ ಯಜ್ಞವನ್ನು ಮಾಡಿದನು?

ಮರೆದು ಕಳೆದನು ಬಂದಲಜ್ಜೆಯ
ಬರನ ದಿನವನು ಮುಂದಣುಪಹತಿ
ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು
ಮುರಿದುದಿನ್ನೇ ನಹಿತ ದರ್ಪದ
ಹೊರಿಗೆಯೆಂದುತ್ಸವದಲವನಿಪ
ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ (ಅರಣ್ಯ ಪರ್ವ, ೨೨ ಸಂಧಿ, ೭೦ ಪದ್ಯ)

ತಾತ್ಪರ್ಯ:
ಹಿಂದೆ ಒದಗಿದ್ದ ನಾಚಿಕೆಗೇಡಿನ ಮಾನಭಂಗವನ್ನು ದುರ್ಯೋಧನನು ಮರೆತನು. ಮುಂದಿನ ಯುದ್ಧದಲ್ಲಿ ದೈತ್ಯರ ಬೆಮ್ಬಲವಿರುವುದನ್ನು ನೆನೆದು ಹಿಗ್ಗಿದನು. ಶತುಗಲ ದರ್ಪವು ಇನ್ನೇನು ಮುರಿಯಿತೆಂಬ ಉತ್ಸಾಹದಿಂದ ಕೌರವನು ಯಾಗಶಾಲೆಯಲ್ಲಿ ಮಹಾಯಜ್ಞವನ್ನು ಮಾಡಿದನು.

ಅರ್ಥ:
ಮರೆ: ಗುಟ್ಟು, ರಹಸ್ಯ; ಕಳೆ:ತೊರೆ; ಲಜ್ಜೆ: ನಾಚಿಕೆ, ಅವಮಾನ; ಬರ: ಕ್ಷಾಮ; ದಿನ: ದಿವಸ; ಮುಂದು: ಮುಂದೆ; ಉಪಹತಿ: ಹೊಡೆತ; ಗುರುವ: ಅಹಂಕಾರ; ದೈತ್ಯ: ರಾಕ್ಷಸ; ಮೈತ್ರಿ: ಸ್ನೇಹ; ನೆನೆ: ಜ್ಞಾಪಿಸಿಕೊಳ್ಳು; ಹಿಗ್ಗು: ಸಂತೋಷ, ಆನಂದ; ಮುರಿ: ಸೀಳು; ಅಹಿತ: ಶತ್ರು; ದರ್ಪ: ಅಹಂಕಾರ; ಹೊರಿಗೆ: ಭಾರ, ಹೊರೆ; ಉತ್ಸವ: ಸಂಭ್ರಮ; ಅವನಿಪ: ರಾಜ; ಮೆರೆ: ಹೊಳೆ, ಪ್ರಕಾಶಿಸು; ಅಧ್ವರ: ಯಜ್ಞ, ಯಾಗ; ಶಾಲೆ: ಮನೆ; ಕ್ರತು: ಯಾಗ, ಯಜ್ಞ;

ಪದವಿಂಗಡಣೆ:
ಮರೆದು +ಕಳೆದನು +ಬಂದ+ಲಜ್ಜೆಯ
ಬರನ +ದಿನವನು +ಮುಂದಣ್+ಉಪಹತಿ
ಗುರುವ +ದೈತ್ಯರ +ಮೈತ್ರಿಯನು +ನೆನೆ +ನೆನೆದು +ಹಿಗ್ಗಿದನು
ಮುರಿದುದ್+ಇನ್ನೇನ್+ಅಹಿತ +ದರ್ಪದ
ಹೊರಿಗೆಯೆಂದ್+ಉತ್ಸವದಲ್+ಅವನಿಪ
ಮೆರೆದನ್+ಅಧ್ವರ +ಶಾಲೆಯಲಿ +ಮಾಡಿದ +ಮಹಾಕ್ರತುವ

ಅಚ್ಚರಿ:
(೧) ದುರ್ಯೋಧನನು ಹಿಗ್ಗಲು ಕಾರಣ – ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು

ಪದ್ಯ ೬೯: ದುರ್ಯೋಧನನ ಆಗಮನವು ಯಾವುದನ್ನು ಸೂಚಿಸಿತು?

ಮತ್ತೆ ನೆಗ್ಗಿತು ನಯವಧರ್ಮದ
ಕುತ್ತುದಲೆ ನೆಗಹಿದುದು ಸತ್ಯದ
ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ
ನೆತ್ತಿಗಣ್ಣಾಯ್ತಧಮತೆಗೆ ನಗೆ
ಯೊತ್ತಿ ತಾರಡಿ ಸುಜನಮಾರ್ಗವ
ಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ (ಅರಣ್ಯ ಪರ್ವ, ೨೨ ಸಂಧಿ, ೬೯ ಪದ್ಯ)

ತಾತ್ಪರ್ಯ:
ದುರ್ಯೋಧನನು ನಾಡಿಗೆ ಬಂದುದರಿಂದ ನ್ಯಾಯವು ನೆಗ್ಗಿ ಹೋಯಿತು, ತಗ್ಗಿಸಿದ್ದ ಅಧರ್ಮದ ತಲೆ ಮೇಲೆತ್ತಿತು, ಸತ್ಯದ ಬೀಜ ಹುರಿದುಹೋಯಿತು, ಕೃತಘ್ನತೆಗೆ ಪಟ್ಟಗಟ್ಟಿತು, ಅಧಮತನಕ್ಕೆ ನೆತ್ತಿಯಲ್ಲಿ ಕಣ್ಣು ಬಂದಿತು, ವಂಚನೆಯು ನಕ್ಕಿತು, ಸುಳ್ಳು ಮೋಸಗಳು ಸಜ್ಜನರ ಮಾರ್ಗವನ್ನು ಕೆತ್ತಿ ಹಾಕಿದವು.

ಅರ್ಥ:
ಮತ್ತೆ: ಪುನಃ; ನೆಗ್ಗು: ತಗ್ಗು, ಬೀಳು; ನಯ:ನುಣುಪು, ಮೃದುತ್ವ; ಕುತ್ತು: ತೊಂದರೆ, ಆಪತ್ತು; ನೆಗಹು: ಮೇಲೆತ್ತು; ಸತ್ಯ: ನಿಜ; ಬಿತ್ತು: ಬೀಜ; ಹುರಿ: ಕಾಯಿಸು; ಪಟ್ಟ:ಹಣೆಗಟ್ಟು; ಕೃತಘ್ನತೆ: ಉಪಕಾರವನ್ನು ಮರೆಯುವವನು; ನೆತ್ತಿ: ಶಿರ; ಕಣ್ಣು: ನಯನ; ಅಧಮ: ಕೀಳು, ನೀಚ; ನಗೆ:ಅಪಹಾಸ್ಯ, ಕುಚೋದ್ಯ; ಆರಡಿ: ಕಿರುಕುಳ, ಮೋಸ; ಸುಜನ: ಒಳ್ಳೆಯತನ, ಸುಜನ; ಮಾರ್ಗ: ದಾರಿ; ಕೆತ್ತು: ಖಂಡಿಸು, ಸುಲಿ; ಅಟಮಟ: ಮೋಸ; ಸೌಮನಸ್ಯ: ಒಳ್ಳೆಯ ಮನಸ್ಸುಳ್ಳವ;

ಪದವಿಂಗಡಣೆ:
ಮತ್ತೆ +ನೆಗ್ಗಿತು +ನಯವ್+ಅಧರ್ಮದ
ಕುತ್ತು+ತಲೆ+ ನೆಗಹಿದುದು +ಸತ್ಯದ
ಬಿತ್ತು +ಹುರಿದುದು +ಪಟ್ಟಗಟ್ಟಿದುದಾ +ಕೃತಘ್ನತೆಗೆ
ನೆತ್ತಿ+ಕಣ್ಣಾಯ್ತ್+ಅಧಮತೆಗೆ +ನಗೆ
ಯೊತ್ತಿತ್ + ಆರಡಿ +ಸುಜನ+ಮಾರ್ಗವ
ಕೆತ್ತುದ್+ಅಟಮಟವ್+ಈ+ಸುಯೋಧನ +ಸೌಮನಸ್ಯದಲಿ

ಅಚ್ಚರಿ:
(೧) ಸತ್ಯ, ನ್ಯಾಯ ದೂರವಾಯಿತು ಎಂದು ಹೇಳುವ ಪರಿ – ನೆತ್ತಿಗಣ್ಣಾಯ್ತಧಮತೆಗೆ; ಸುಜನಮಾರ್ಗವಕೆತ್ತುದಟಮಟವ್;

ಪದ್ಯ ೬೮: ಹಸ್ತಿನಾಪುರದಲ್ಲೇಕೆ ಆನಂದ ತುಂಬಿತು?

ಎಂದು ಭೂಪನ ತಿಳುಹಿ ಕಳುಹಲು
ಬಂದು ಮರಳಿ ಮಹೀತಳಕೆ ತ
ನ್ನಿಂದು ವದನೆಯ ಮಾತಿನಲಿ ನಿಂದವನು ತಾನಾಗಿ
ಬಂದನರಮನೆಗಖಿಳಜನವಾ
ನಂದ ರಸದಲಿ ಮುಳುಗೆ ಪುರದಲಿ
ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ (ಅರಣ್ಯ ಪರ್ವ, ೨೨ ಸಂಧಿ, ೬೮ ಪದ್ಯ)

ತಾತ್ಪರ್ಯ:
ದುರ್ಯೋಧನನಿಗೆ ಧೈರ್ಯ ತುಂಬಿ ರಾಕ್ಷಸರು ಅವನನ್ನು ಮತ್ತೆ ಭೂಮಿಗೆ ತಂದು ಬಿಟ್ಟರು. ಭಾನುಮತಿಯ ಮಾತಿನಂತೆ ಅವನು ಅರಮನೆಗೆ ಮತ್ತೆ ಬಂದನು. ಹಸ್ತಿನಾಪುರದಲ್ಲಿ ಆನಂದ ತುಂಬಿತು. ಚಕ್ರವರ್ತಿಯು ಬಂದನೆಂಬ ಶುಭವಾರ್ತೆಯು ಆನಂದೋತ್ಸವವನ್ನುಂಟು ಮಾಡಿತು.

ಅರ್ಥ:
ಭೂಪ: ರಾಜ; ತಿಳುಹಿ: ತಿಳಿಸಿ; ಕಳುಹು: ತೆರಳು; ಬಂದು: ಆಗಮಿಸು; ಮರಳಿ: ಮತ್ತೆ; ಮಹೀತಳ: ಭೂಮಿ; ಇಂದುವದನೆ: ಚಂದ್ರನಂತ ಮುಖವುಳ್ಳವಳು; ಮಾತು: ನುಡಿ; ನಿಂದು: ನಿಲ್ಲು; ಬಂದು: ಆಗಮಿಸು; ಅರಮನೆ: ರಾಜರ ಆಲಯ; ಅಖಿಳ: ಎಲ್ಲಾ; ಜನ: ಮನುಷ್ಯ; ಆನಂದ: ಸಂತಸ; ರಸ: ಸಾರ; ಮುಳುಗು: ಮುಚ್ಚಿಹೋಗು; ಪುರ: ಊರು; ಸಂದಣಿಸು: ಒಟ್ಟಾಗು; ಗುಡಿ:ಕುಟೀರ, ಮನೆ; ಒಸಗೆ: ಶುಭ, ಮಂಗಳಕಾರ್ಯ; ಲಳಿ: ರಭಸ; ಲಗ್ಗೆ: ಮುತ್ತಿಗೆ, ಆಕ್ರಮಣ;

ಪದವಿಂಗಡಣೆ:
ಎಂದು +ಭೂಪನ +ತಿಳುಹಿ +ಕಳುಹಲು
ಬಂದು +ಮರಳಿ +ಮಹೀತಳಕೆ +ತನ್ನ್
ಇಂದು ವದನೆಯ +ಮಾತಿನಲಿ +ನಿಂದವನು +ತಾನಾಗಿ
ಬಂದನ್+ಅರಮನೆಗ್+ಅಖಿಳ+ಜನವ್
ಆನಂದ +ರಸದಲಿ +ಮುಳುಗೆ +ಪುರದಲಿ
ಸಂದಣಿಸಿದವು +ಗುಡಿಗಳ್+ಒಸಗೆಯ +ಲಳಿಯ +ಲಗ್ಗೆಗಳ

ಅಚ್ಚರಿ:
(೧) ಭಾನುಮತಿಯನ್ನು ಇಂದುವದನೆೆ ಎಂದು ಕರೆದಿರಿವುದು