ಪದ್ಯ ೩೫: ಕೌರವನೇಕೆ ಕುಪಿತನಾದನು?

ಮುರಿಯಿಸುತ ಗಂಧರ್ವ ಬಲ ಮು
ಕ್ಕುರಿಕಿ ಕೌರವ ಬಲವ ತತ್ತರ
ದರಿದು ತರಹರವಿಲ್ಲೆನಿಸಿ ಹೊಗಿಸಿದರು ಪಾಳೆಯವ
ಹೊರಗುಡಿಯ ಹೊರಪಾಳೆಯದ ಭಟ
ರರುಹಿದರು ಕುರುಪತಿಗೆ ಖತಿಯಲಿ
ಜರಿದು ಜೋಡಿಸಿ ಬಿಟ್ಟನಕ್ಷೋಹಿಣಿಯ ನಾಯಕರ (ಅರಣ್ಯ ಪರ್ವ, ೧೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಗಂಧರ್ವರು ಕೌರವ ಬಲವನ್ನು ಮುರಿದರು. ತಮ್ಮ ಬಾಣಗಳಿಂದ ಕತ್ತರಿಸಿ ಅವರೆಲ್ಲರೂ ತಮ್ಮ ಪಾಳೆಯಕ್ಕೆ ಹೋಗುವಂತೆ ಹೊಡೆದೋಡಿಸಿದರು. ಪಾಳೆಯದ ಹೊರಗಿದ್ದವರು ಕೌರವನಿಗೆ ಸೋಲಿನ ಸುದ್ದಿಯನ್ನು ತಿಳಿಸಲು, ಕೌರವನು ಅವರನ್ನು ಜರೆದು ಅಕ್ಷೋಹಿಣಿಯ ಅಧಿಪತಿಗಳನ್ನು ಕಾಳಗಕ್ಕೆ ಕಳುಹಿಸಿದನು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಮುಕ್ಕುರಿಸು: ಆತುರಪಡು, ಶ್ರಮಿಸು; ತತ್ತರ: ನಡುಕ, ಕಂಪನ; ಅರಿ: ಕತ್ತರಿಸು; ತರಹರ: ತಂಗುವಿಕೆ, ನಿಲ್ಲುವಿಕೆ; ಹೊಗಿಸು: ಒಳಹೋಗಿಸು; ಪಾಳೆ: ಸೀಮೆ; ಹೊರಗುಡಿ: ಹೊರಗಿನ ಧ್ವಜ; ಹೊರ: ಆಚೆ; ಪಾಳೆಯ: ಬೀಡು, ಶಿಬಿರ; ಭಟ: ಸೈನಿಕ; ಅರುಹು: ತಿಳಿಸು; ಖತಿ: ಕೋಪ; ಜರಿ: ಬಯ್ದು; ಜೋಡಿಸು: ಕೂಡಿಸು; ಬಿಡು: ಹೊರತರು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನಾಯಕ: ಒಡೆಯ;

ಪದವಿಂಗಡಣೆ:
ಮುರಿಯಿಸುತ +ಗಂಧರ್ವ +ಬಲ +ಮು
ಕ್ಕುರಿಕಿ +ಕೌರವ +ಬಲವ +ತತ್ತರದ್
ಅರಿದು+ ತರಹರವಿಲ್ಲೆನಿಸಿ +ಹೊಗಿಸಿದರು +ಪಾಳೆಯವ
ಹೊರಗುಡಿಯ +ಹೊರಪಾಳೆಯದ +ಭಟರ್
ಅರುಹಿದರು +ಕುರುಪತಿಗೆ +ಖತಿಯಲಿ
ಜರಿದು +ಜೋಡಿಸಿ +ಬಿಟ್ಟನ್+ಅಕ್ಷೋಹಿಣಿಯ +ನಾಯಕರ

ಅಚ್ಚರಿ:
(೧) ಮು – ೧ ಸಾಲಿನ ಮೊದಲ ಹಾಗು ಕೊನೆ ಪದ
(೨) ಹೊರ ಪದದ ಬಳಕೆ – ಹೊರಗುಡಿಯ ಹೊರಪಾಳೆಯದ

ಪದ್ಯ ೩೪: ಗಂಧರ್ವರು ಕೌರವರನ್ನು ಯಾವ ಕ್ರೀಡೆಗೆ ಆಹ್ವಾನಿಸಿದರು?

ಬಂದ ಬಲ ಹೇರಾಳ ತೆಗೆತೆಗೆ
ಯೆಂದು ತೋಪಿನ ಕಡೆಗೆ ಹಾಯಿದು
ನಿಂದು ನೆರಹಿದರಕಟ ಗಂಧರ್ವರು ಭಟವ್ರಜವ
ಬಂದದು ನಡುವನಕೆ ಕೌರವ
ವೃಂದವನು ಕರೆದರು ವಿನೋದಕೆ
ಬಂದಿರೈ ನಾರಾಚಸಲಿಲ ಕ್ರೀಡೆಯಿದೆಯೆನುತ (ಅರಣ್ಯ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಬಹಳ ದೊಡ್ಡ ಸೈನ್ಯ ಬಂದಿದೆ ತೆಗೆಯಿರಿ, ಎಂದು ಗಂಧರ್ವರು ವನದ ನಡುವಿಗೆ ಹೋಗಿ ಗಂಧರ್ವರ ಸೈನ್ಯವನ್ನು ಒಟ್ಟುಗೂಡಿಸಿದರು. ಅವರು ವನದ ಮಧ್ಯ ಭಾಗಕ್ಕೆ ಬಂದು ಕೌರವರನ್ನು ವಿನೋದ ವಿಹಾರಕ್ಕೆ ಬಂದಿರಲ್ಲವೇ? ಇದೋ ಬಾಣಜಲದ ಕ್ರೀಡೆ ಎಂದು ಯುದ್ಧಕ್ಕೆ ಕರೆದರು.

ಅರ್ಥ:
ಬಂದು: ಆಗಮಿಸು; ಬಲ: ಸೈನ್ಯ; ಹೇರಾಳ: ದೊಡ್ಡ; ತೆಗೆ: ಹೊರತರು; ತೋಪು: ಗುಂಪು; ಕಡೆ: ಪಕ್ಕಕ್ಕೆ; ಹಾಯಿ: ಮೇಲೆಬೀಳು, ಚಾಚು; ನಿಂದು: ನಿಲ್ಲು; ನೆರೆಹಿಸು: ಒಟ್ಟುಗೂಡಿಸು; ಗಂಧರ್ವ: ದೇವತೆಗಳ ಒಂದು ಪಂಗಡ; ಭಟ: ಸೈನ್ಯ; ವ್ರಜ: ಗುಂಪು; ನಡು: ಮಧ್ಯ; ವನ: ಕಾಡು; ವೃಂದ: ಗುಂಪು; ಕರೆ: ಬರೆಮಾಡು; ವಿನೋದ: ಸಂತಸ; ನಾರಾಚ: ಬಾಣ, ಸರಳು; ಸಲಿಲ: ನೀರು; ಕ್ರೀಡೆ: ಆಟ;

ಪದವಿಂಗಡಣೆ:
ಬಂದ +ಬಲ +ಹೇರಾಳ +ತೆಗೆತೆಗೆ
ಎಂದು+ ತೋಪಿನ +ಕಡೆಗೆ +ಹಾಯಿದು
ನಿಂದು +ನೆರಹಿದರ್+ಅಕಟ +ಗಂಧರ್ವರು +ಭಟ+ವ್ರಜವ
ಬಂದದು +ನಡು+ವನಕೆ+ ಕೌರವ
ವೃಂದವನು +ಕರೆದರು +ವಿನೋದಕೆ
ಬಂದಿರೈ +ನಾರಾಚ+ಸಲಿಲ+ ಕ್ರೀಡೆಯಿದೆ+ಎನುತ

ಅಚ್ಚರಿ:
(೧) ಕ್ರೀಡೆಯ ಬಗ್ಗೆ ಹೇಳುವ ಪರಿ – ಕೌರವವೃಂದವನು ಕರೆದರು ವಿನೋದಕೆ
ಬಂದಿರೈ ನಾರಾಚಸಲಿಲ ಕ್ರೀಡೆಯಿದೆಯೆನುತ

ಪದ್ಯ ೩೩: ಗಂಧರ್ವರು ಕಾಡಿನ ಒಳಕ್ಕೆ ಏಕೆ ಹೋದರು?

ನೃಪಸುತರ ಪಡಿಬಲಕೆ ಬಂದುದು
ವಿಪುಲಬಲ ಹಲ್ಲಣಿಸಿ ಹೊಯ್ ಹೊ
ಯ್ಯಪಸದರ ಗಂಧರ್ವಸುಭಟರನೆನುತ ಸೂಟಿಯಲಿ
ಕುಪಿತರರೆಯಟ್ಟಿದರು ತೋಪಿನ
ಕಪಿಗಳಾವೆಡೆ ಕಾಣಬಹುದೆನು
ತುಪಚರಿತರೊಳಸರಿಯೆ ಹೊಗಿಸಿದರವರನಾ ವನವ (ಅರಣ್ಯ ಪರ್ವ, ೧೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ರಾಜಪುತ್ರರ ಸಹಾಯಕ್ಕೆ ಬಹಳ ಸಂಖ್ಯೆಯ ಸೈನ್ಯವು ಸಜ್ಜಾಗಿ ಬಂದು ಕ್ಷುಲ್ಲಕರಾದ ಗಂಧರ್ವ ಭಟರನ್ನು ಹೊಡೆಯಿರಿ, ಎನ್ನುತ್ತಾ ಕೋಪದಿಂದ ಗಂಧರ್ವರನ್ನು ಅಟ್ಟಿಸಿಕೊಂಡು ಹೋಗಿ, ಈ ತೋಪಿನ ಕಪಿಗಳಲ್ಲಿ ಅವರು ಬಂದು ನೋಡಲಿ, ಎಂದು ಗರ್ಜಿಸಲು, ಒದೆತಿಂದ ಗಂಧರ್ವರು ತೋಪಿನೊಳು ಹಿಂದಕ್ಕೆ ಸರಿದು, ಕೌರವ ಸೈನ್ಯಗಳನ್ನು ಒಳಕ್ಕೆ ಬಿಟ್ಟಿಕೊಂಡರು.

ಅರ್ಥ:
ನೃಪ: ರಾಜ; ಸುತ: ಮಕ್ಕಳು; ಪಡಿ: ಸಮಾನವಾದುದು; ಬಲ: ಪ್ರಾಬಲ್ಯ, ಶಕ್ತಿ; ಬಂದು: ಆಗಮಿಸು; ವಿಪುಲ: ಬಹಳ; ಹಲ್ಲಣಿಸು: ಧರಿಸು, ತೊಡು; ಅಪಸದ: ನೀಚ, ಕೀಳವಾದ; ಗಂಧರ್ವ: ದೇವತೆಗಳ ಒಂದು ವರ್ಗ; ಸುಭಟ: ಒಳ್ಳೆಯ ಸೈನಿಕ; ಸೂಟಿ: ವೇಗ, ರಭಸ; ಕುಪಿತ: ಕೋಪ; ಅಟ್ಟು: ಬೆನ್ನುಹತ್ತಿ ಹೋಗು; ತೋಪು: ಗುಂಪು; ಕಪಿ: ಮಮ್ಗ; ಕಾಣು: ತೋರು; ಉಪಚರಿತ: ಉಪಚಾರ ಮಾಡಲ್ಪಟ್ಟ; ಒಳ: ಒಳಕ್ಕೆ ಸರಿ: ತೆರಳು; ಹೊಗು: ಒಳಸೇರು, ಪ್ರವೇಶಿಸು; ವನ: ಕಾಡು;

ಪದವಿಂಗಡಣೆ:
ನೃಪ+ಸುತರ +ಪಡಿಬಲಕೆ+ ಬಂದುದು
ವಿಪುಲ+ಬಲ +ಹಲ್ಲಣಿಸಿ +ಹೊಯ್ +ಹೊಯ್
ಅಪಸದರ +ಗಂಧರ್ವ+ಸುಭಟರನ್+ಎನುತ +ಸೂಟಿಯಲಿ
ಕುಪಿತರರೆ+ಅಟ್ಟಿದರು +ತೋಪಿನ
ಕಪಿಗಳ್+ಆವೆಡೆ +ಕಾಣಬಹುದ್+ಎನುತ್
ಉಪಚರಿತರ್+ಒಳಸರಿಯೆ +ಹೊಗಿಸಿದರ್+ಅವರನ್+ಆ+ ವನವ

ಅಚ್ಚರಿ:
(೧) ಪಡಿಬಲ, ವಿಪುಲಬಲ – ಪದಗಳ ಬಳಕೆ