ಪದ್ಯ ೩೨: ಸುರಭಟರು ಯಾವ ಕೇಳಿಗೆ ಕರೆದರು?

ಬಿರಿಯ ಮಕ್ಕಳ ತಂಡವೇ ಹೊ
ಕ್ಕಿರಿದುದವದಿರನುರುಬಿ ದಿವಿಜರು
ಜರೆದು ನೂಕಿತು ತೋಪಿನೊಳಬಿದ್ದವರ ಹೊರವಡಿಸಿ
ಮುರಿದ ತಳಿಗಳ ಬಲಿದು ಬಾಗಿಲ
ಹೊರಗೆ ನಿಂದರು ವಾರಿ ಕೇಳಿಯ
ಮರೆದು ಶೋಣಿತವಾರಿ ಕೇಳಿಗೆ ಬನ್ನಿ ನೀವೆನುತ (ಅರಣ್ಯ ಪರ್ವ, ೧೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕೌರವನ ಮಕ್ಕಳ ತಂಡವು ಒಳ ಹೊಕ್ಕು ಯುದ್ಧ ಮಾಡಲು ದೇವತೆಗಳು ಅವರನ್ನು ತಡೆದು ವನದ ಹೊರಕ್ಕೆ ದಬ್ಬಿದರು. ಮುರಿದಿದ್ದ ಮರದ ಕೊರಡಗಳನ್ನು ಜೋಡಿಸಿ, ಭದ್ರಪಡಿಸಿ, ಬಾಗಿಲು ಹಾಕಿ ಹೊರಕ್ಕೆ ಬಂದು ನಿಂತು ನೀವು ಜಲ ಕೇಳಿಯನ್ನು ಮರೆತು ರಕ್ತ ಕೇಳಿಗೆ ಬನ್ನಿ ಎಂದು ಕರೆದರು.

ಅರ್ಥ:
ಬರಿ: ಕೇವಲ; ಮಕ್ಕಳ: ಕುಮಾರ; ತಂಡ: ಗುಂಪು; ಹೊಕ್ಕು: ಓತ; ಅವದಿರು: ಅವರು; ಉರುಬು: ಊಬಿ; ದಿವಿಜ: ದೇವ; ಜರೆ: ಬಯ್ಯು; ನೂಕು: ತಳ್ಳು; ತೋಪು: ಗುಂಪು; ಹೊರವಡಿಸು: ಹೊರಕ್ಕೆ ತಬ್ಬು; ಮುರಿ: ಸೀಳು; ತಳಿ: ಚೆಲ್ಲು; ಬಲಿ: ಗಟ್ಟಿ, ದೃಢ; ಬಾಗಿಲು: ಕದ; ಹೊರಗೆ: ಆಚೆಗೆ; ನಿಂದು: ನಿಲ್ಲು; ವಾರಿಕೇಳಿ: ಜಲಕ್ರೀಡೆ; ಮರೆ: ಗುಟ್ಟು, ರಹಸ್ಯ; ಶೋಣಿತವಾರಿ: ರಕ್ತದ ಕ್ರೀಡೆ; ಬನ್ನಿ: ಆಗಮಿಸಿ;

ಪದವಿಂಗಡಣೆ:
ಬಿರಿಯ +ಮಕ್ಕಳ +ತಂಡವೇ +ಹೊ
ಕ್ಕಿರಿದುದ್+ಅವದಿರನ್+ಉರುಬಿ+ ದಿವಿಜರು
ಜರೆದು +ನೂಕಿತು +ತೋಪಿನೊಳಬಿದ್ದವರ +ಹೊರವಡಿಸಿ
ಮುರಿದ +ತಳಿಗಳ +ಬಲಿದು +ಬಾಗಿಲ
ಹೊರಗೆ +ನಿಂದರು +ವಾರಿ +ಕೇಳಿಯ
ಮರೆದು +ಶೋಣಿತವಾರಿ+ ಕೇಳಿಗೆ+ ಬನ್ನಿ+ ನೀವೆನುತ

ಅಚ್ಚರಿ:
(೧) ಯುದ್ಧಕ್ಕೆ ಆಮಂತ್ರಣ ನೀಡುವ ಪರಿ – ವಾರಿಕೇಳಿಯ ಮರೆದು ಶೋಣಿತವಾರಿ ಕೇಳಿಗೆ ಬನ್ನಿ ನೀವೆನುತ

ಪದ್ಯ ೩೧: ಕಾಮುಕರು ಎಲ್ಲಿಗೆ ಓಡಿ ಹೋದರು?

ಚೆಲ್ಲಿದರು ಚಪಳೆಯರು ಮುನಿಜನ
ವೆಲ್ಲ ಪಾಂಡವರಾಶ್ರಮದ ಮೊದ
ಲಲ್ಲಿ ಮೊನೆಗಣೆ ಮೊರೆದು ಮುರಿದವು ಮೊನೆಯ ಮುಂಬಿಗರ
ಚಲ್ಲೆಗಂಗಳ ಯುವತಿಯರ ನಾ
ನಲ್ಲಿ ಕಾಣೆನು ಕಾಮುಕರು ನಿಂ
ದಲ್ಲಿ ನಿಲ್ಲದೆ ಹರಿದರವನೀಪತಿಯ ಪಾಳೆಯಕೆ (ಅರಣ್ಯ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಯುವತಿಯರು ನಿಲ್ಲದ ಓಡಿ ಹೋದರು, ಯಾರೂ ಕಾಣಲಿಲ್ಲ, ಪಾಂಡವರ ಆಶ್ರಮದ ಮುಂದೆ ಮೊದಲ ಸಾಲಿನ ಸೈನಿಕರು ಶತ್ರುಗಳ ಹೊಡೆತಕ್ಕೆ ಬಲಿಯಾದರು. ಜಲಕ್ರೀಡೆಗೆ ಬಂದ ಕಾಮುಕರು ಕೌರವನ ಪಾಳೆಯಕ್ಕೆ ಓಡಿ ಹೋದರು.

ಅರ್ಥ:
ಚೆಲ್ಲು: ಹರಡು; ಚಪಳೆ: ಚಂಚಲ ಸ್ವಭಾವದವಳು; ಮುನಿ: ಋಷಿ; ಮೊನೆ: ಮುಂದೆ, ಅಗ್ರ; ಆಶ್ರಮ: ಕುಟೀರ; ಮೊರೆ: ಗೋಳಾಟ, ಹುಯ್ಯಲು; ಮುರಿ: ಸೀಳು; ಮುಂಬಿಗ: ಮೊದಲಿಗ; ಚಲ್ಲೆ: ಹರಡು; ಕಂಗಳು: ಕಣ್ಣು; ಯುವತಿ: ಹೆಣ್ಣು; ಕಾಣು: ತೋರು; ಕಾಮುಕ: ಲಂಪಟ; ನಿಂದು: ನಿಲ್ಲು; ಹರಿ: ಚಲಿಸು, ಸಾಗು; ಅವನೀಪತಿ: ರಾಜ; ಪಾಳೆಯ: ಬೀಡು, ಶಿಬಿರ;

ಪದವಿಂಗಡಣೆ:
ಚೆಲ್ಲಿದರು +ಚಪಳೆಯರು +ಮುನಿಜನ
ವೆಲ್ಲ +ಪಾಂಡವರ್+ಆಶ್ರಮದ +ಮೊದ
ಲಲ್ಲಿ +ಮೊನೆಗಣೆ+ ಮೊರೆದು+ ಮುರಿದವು +ಮೊನೆಯ +ಮುಂಬಿಗರ
ಚಲ್ಲೆಗಂಗಳ+ ಯುವತಿಯರ +ನಾ
ನಲ್ಲಿ +ಕಾಣೆನು +ಕಾಮುಕರು +ನಿಂ
ದಲ್ಲಿ +ನಿಲ್ಲದೆ +ಹರಿದರ್+ಅವನೀಪತಿಯ+ ಪಾಳೆಯಕೆ

ಅಚ್ಚರಿ:
(೧) ಮ ಕಾರದ ಸಾಲು ಪದ – ಮೊದಲಲ್ಲಿ ಮೊನೆಗಣೆ ಮೊರೆದು ಮುರಿದವು ಮೊನೆಯ ಮುಂಬಿಗರ

ಪದ್ಯ ೩೦: ಯುದ್ಧವು ಹೇಗೆ ಪ್ರಾರಂಭವಾಯಿತು?

ಒರಲಿದವು ಕಹಳೆಗಳು ಕಾಹಿನ
ಸುರಭಟರು ನೆರೆದಸಿ ಮುಸುಂಡಿಯ
ಪರಶು ಮುದ್ಗರ ಚಾಪಮಾರ್ಗಣ ಸಬಲ ಸೂನಗಿಯ
ಹರಿಗೆ ಖಡ್ಗದಲರಿಭಟರ ಚ
ಪ್ಪರಿಸಿದರು ಗಂಧರ್ವ ಭಟರಿಗೆ
ಕುರುಪತಿಯ ಸುಭಟರಿಗೆ ತೊಡಕಿತು ತೋಟಿ ತೋಪಿನಲಿ (ಅರಣ್ಯ ಪರ್ವ, ೧೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೂಡಲೆ ಕಹಳೆಗಳನ್ನು ಊದಲು, ಕಾವಲಿನ ಭಟರೆಲ್ಲರೂ ಬಂದು ಸೇರಿ ಕತ್ತಿ, ಮುಸುಂಡಿ, ಕೊಡಲಿ, ಗದೆ, ಬಿಲ್ಲು, ಬಾಣ, ಈಟಿ, ಸೂನಗಿ ಮೊದಲಾದ ಆಯುಧಗಳನ್ನು ಹಿಡಿದು ಬಂದು, ಕತ್ತಿ ಗುರಾಣಿಗಳಿಂದ ಕೌರವನ ಸೈನ್ಯದ ಮೇಲೆರಗಿದರು. ಆಗ ಯುದ್ಧ ಪ್ರಾರಂಭವಾಯಿತು.

ಅರ್ಥ:
ಒರಲು: ಅರಚು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಕಾಹಿ: ರಕ್ಷಿಸುವವ; ಸುರಭಟ: ದೇವತೆಗಳ ಸೈನಿಕ; ನೆರೆದು: ಸೇರಿ; ಅಸಿ: ಕತ್ತಿ; ಪರಶು: ಕೊಡಲಿ, ಕುಠಾರ; ಮುದ್ಗರ: ಗದೆ; ಚಾಪ: ಬಿಲ್ಲು; ಮಾರ್ಗಣ: ಬಾಣ; ಸಬಳ: ಈಟಿ, ಭರ್ಜಿ; ಖಡ್ಗ: ಕತ್ತಿ, ಕರವಾಳ; ಅರಿ: ವೈರಿ; ಭಟ: ಸೈನಿಕ; ಚಪ್ಪರಿಸು: ಆನಂದಿಸು; ತೊಡಕು: ಗೊಂದಲ, ಅಡಚಣೆ; ತೋಟಿ: ಕಲಹ, ಜಗಳ; ತೋಪು: ಗುಂಪು, ಸಮೂಹ;

ಪದವಿಂಗಡಣೆ:
ಒರಲಿದವು+ ಕಹಳೆಗಳು +ಕಾಹಿನ
ಸುರಭಟರು +ನೆರೆದ್+ಅಸಿ +ಮುಸುಂಡಿಯ
ಪರಶು +ಮುದ್ಗರ +ಚಾಪ+ಮಾರ್ಗಣ +ಸಬಲ +ಸೂನಗಿಯ
ಹರಿಗೆ +ಖಡ್ಗದಲ್+ಅರಿ+ಭಟರ +ಚ
ಪ್ಪರಿಸಿದರು +ಗಂಧರ್ವ +ಭಟರಿಗೆ
ಕುರುಪತಿಯ +ಸುಭಟರಿಗೆ +ತೊಡಕಿತು +ತೋಟಿ +ತೋಪಿನಲಿ

ಅಚ್ಚರಿ:
(೧) ಆಯುಧಗಳ ಹೆಸರು – ಅಸಿ, ಮುಸುಂಡಿ, ಪರಶು, ಮುದ್ಗರ, ಚಾಪ, ಮಾರ್ಗಣ, ಸಬಲ ಸೂನಗಿ, ಖಡ್ಗ
(೨) ತ ಕಾರದ ತ್ರಿವಳಿ ಪದ – ತೊಡಕಿತು ತೋಟಿ ತೋಪಿನಲಿ

ಪದ್ಯ ೨೯: ಗಣಿಕೆಯರು ಸರೋವರವನ್ನು ಹೇಗೆ ಪ್ರವೇಶಿಸಿದರು?

ಹೋಗಬಹುದೆ ಗಂಧರ್ವ ರಾಯನ
ಮಗನ ಬನವಿದು ನೋಡಿದರೆ ದೃ
ಗ್ಯುಗಳದೆವೆ ಸೀವುದು ಕಣಾ ಫಡ ಹೋಗಿ ಹೋಗಿಯೆನೆ
ತೆಗೆ ವಿಕಾರವೆ ನಮ್ಮೊಡನೆ ತೆಗೆ
ತೆಗೆ ಕದವ ಗಂಧರ್ವನಾರಿಗೆ
ಮಗನದಾವವನೆನುತ ಹೊಕ್ಕರು ತಳಿಯ ಮುರಿದೊಗೆದು (ಅರಣ್ಯ ಪರ್ವ, ೧೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕಾವಲಿನವರು, ನೀವು ಇಲ್ಲಿ ಹೋಗಬಹುದೇ? ಇದು ಗಂಧರ್ವ ರಾಜನ ಮಗನ ಉದ್ಯಾನವನ, ನೋಡಿದರೆ ಸಾಕು ಕಣ್ಣು ಸೀದೀತು, ಛೇ, ಹೊರಟು ಹೋಗಿ ಎಂದು ಹೇಳಲು, ಯುವತಿಯರು ನಿಮ್ಮ ಗಂಧರ್ವನು ಯಾವನು? ಮಗನು ಯಾರು? ಎನ್ನುತ್ತಾ ಮರದ ದಿಮ್ಮಿಗಳನ್ನು ಒದೆದು ಒಳನುಗ್ಗಿದರು.

ಅರ್ಥ:
ಹೊಗು: ಒಳಸೇರು; ಗಂಧರ್ವ: ದೇವತೆಗಳ ಒಂದು ಪಂಗಡ; ರಾಯ: ರಾಜ; ಮಗ: ಸುತ; ಬನ: ಕಾದು; ನೋಡು: ವೀಕ್ಷಿಸು; ದೃಗು: ದೃಕ್ಕು, ನೋಟ; ಯುಗಳ: ಎರಡು; ಸೀವುದು: ಸೀದು, ಕರಕಲಾಗು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೋಗು: ತೆರಳು; ತೆಗೆ: ಹೊರತರು; ವಿಕಾರ: ಮನಸ್ಸಿನ ವಿಕೃತಿ; ಕದ: ಬಾಗಿಲು; ನಾರಿ: ಹೆಣ್ಣು; ಮಗ: ಸುತ; ಹೊಕ್ಕು: ಸೇರು; ತಳಿಯ: ಮರದ ದಿಮ್ಮಿಗಳನ್ನು ನೆಟ್ಟ ಬೇಲಿ; ಮುರಿ: ಸೀಳು;

ಪದವಿಂಗಡಣೆ:
ಹೋಗಬಹುದೆ +ಗಂಧರ್ವ +ರಾಯನ
ಮಗನ+ ಬನವಿದು +ನೋಡಿದರೆ+ ದೃಗ್
ಯುಗಳದೆವೆ+ ಸೀವುದು +ಕಣಾ +ಫಡ +ಹೋಗಿ +ಹೋಗಿಯೆನೆ
ತೆಗೆ+ ವಿಕಾರವೆ+ ನಮ್ಮೊಡನೆ +ತೆಗೆ
ತೆಗೆ+ ಕದವ+ ಗಂಧರ್ವನಾರಿಗೆ
ಮಗನದ್+ಆವವನ್ +ಎನುತ +ಹೊಕ್ಕರು +ತಳಿಯ +ಮುರಿದೊಗೆದು

ಅಚ್ಚರಿ:
(೧) ಕಣ್ಣು ಸುಡುವುದೆಂದು ಹೇಳಲು – ದೃಗ್ಯುಗಳದೆವೆ ಸೀವುದು

ಪದ್ಯ ೨೮: ಗಣಿಕೆಯರು ಕಾವಲುಗಾರರಿಗೆ ಏನು ಹೇಳಿದರು?

ಆರಿವರು ಕರೆವವರೆನುತ ಸುರ
ವೀರರೌಕಿತು ಬಾಗಿಲಲಿ ನೀ
ವಾರೆನಲು ತೆಗೆ ಕದವನರಿಯಾ ರಾಯಕುರುಪತಿಯ
ವಾರನಾರಿಯರವನಿಪತಿಯ ಕು
ಮಾರರಿದೆ ಬೇಹವರು ಸರಸಿಯ
ವಾರಿಕೇಳಿಗೆ ಬಂದೆವೆಂದರು ಗಜರಿ ಗರ್ಜಿಸುತ (ಅರಣ್ಯ ಪರ್ವ, ೧೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ದೇವತೆಗಳು ಹೊರಬಂದು, ಯಾರಿವರು ನಮ್ಮನ್ನು ಕರೆಯುತ್ತಿರುವವರು ಎಂದು ಕೇಳಲು, ಅಲ್ಲಿ ನೆರೆದಿದ್ದ ಗಣಿಕೆಯರು ದೇವತೆಗಳನ್ನು ಬೆದರಿಸುತ್ತಾ, ನಿನಗೆ ತಿಳಿಯದೇ, ನಾವು ಕೌರವನ ವಾರನಾರಿಯರು, ರಾಜಕುಮಾರರು, ರಾಜನ ಆಪ್ತರು ಎಲ್ಲರೂ ಜಲಕ್ರೀಡೆಯಾಡಲು ಬಂದಿದ್ದೇವೆ ಎಂದು ಬೆದರಿಸುವ ಧ್ವನಿಯಲ್ಲಿ ಗರ್ಜಿಸಿದರು.

ಅರ್ಥ:
ಕರೆ: ಬರೆಮಾಡು; ಸುರ: ದೇವತೆ; ವೀರ: ಪರಾಕ್ರಮಿ; ಔಕು: ಒತ್ತು; ಬಾಗಿಲು: ಕದ; ತೆಗೆ: ಹೊರತರು; ಕದ: ಬಾಗಿಲು; ಅರಿ: ತಿಳಿ; ರಾಯ: ರಾಜ; ವಾರನಾರಿ: ಗಣಿಕೆ; ಅವನಿಪತಿ: ರಾಜ; ಕುಮಾರ: ಮಕ್ಕಳು; ಬೇಹ: ಬೇಕಾದ; ಸರಸಿ: ನೀರು, ಸರೋವರ; ವಾರಿಕೇಳಿ: ಜಲಕ್ರೀಡೆ; ಬಂದೆವು: ಆಗಮಿಸು; ಗಜರು: ಬೆದರಿಸು; ಗರ್ಜಿಸು: ಆರ್ಭಟಿಸು;

ಪದವಿಂಗಡಣೆ:
ಆರಿವರು+ ಕರೆವವರ್+ಎನುತ +ಸುರ
ವೀರರ್+ಔಕಿತು +ಬಾಗಿಲಲಿ +ನೀವ್
ಆರೆನಲು +ತೆಗೆ +ಕದವನ್+ಅರಿಯಾ+ ರಾಯ+ಕುರುಪತಿಯ
ವಾರನಾರಿಯರ್+ಅವನಿಪತಿಯ+ ಕು
ಮಾರರಿದೆ+ ಬೇಹವರು+ ಸರಸಿಯ
ವಾರಿಕೇಳಿಗೆ+ ಬಂದೆವೆಂದರು +ಗಜರಿ +ಗರ್ಜಿಸುತ

ಅಚ್ಚರಿ:
(೧) ಅವನಿಪತಿ, ರಾಯ; ಸರಸಿ, ವಾರಿ – ಸಮನಾರ್ಥಕ ಪದ
(೨) ಜಲಕ್ರೀಡೆಗೆ ವಾರಿಕೇಳಿ ಎಂಬ ಪದ ಪ್ರಯೋಗ

ಪದ್ಯ ೨೭: ಯುವತಿಯರು ಯಾವ ವನಕ್ಕೆ ಪ್ರವೇಶ ಮಾಡಿದರು?

ತವಗತಳಿ ಮುಳುವೇಲಿ ಬಾಗಿಲ
ಜವಳಿಗದ ಬೀಯಗದಲಿದ್ದುದು
ದಿವಿಜವನಪುದ್ದಂಡತರ ಪರಿಮಳದ ಪೂರದಲಿ
ಯುವತಿಯರ ದಳ ನೂಕಿತುದಕೋ
ತ್ಸವ ವೃಥಾ ಕೇಳಿಯಲಿ ಕನಕೋ
ದ್ಭವ ಕವಾಟವನೊದೆದು ಕರೆದರು ಕಾಹಿನವರುಗಳ (ಅರಣ್ಯ ಪರ್ವ, ೧೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸುತ್ತಲೂಕಟ್ಟೆ, ಮರದ ದಿಮ್ಮಿಗಳು, ಮುಳ್ಳಿನ ಬೇಲಿ, ಬಾಗಿಲಿಗೆ ಹಾಕಿದ ಎರಡು ಬೀಗಗಳಿರಲು, ದೇವತೆಗಳ ವನವು ಮಹಾ ಸುಗಂಧಪೂರಿತವಾಗಿತ್ತು. ಜಲಕ್ರೀಡೆಗಾಗಿ ಯುವತಿಯರ ದಂಡು ಬಂದು ಬಂಗಾರದ ಬಾಗಿಲನ್ನು ಒದ್ದು ಕಾವಲುಗಾರರನ್ನು ಕರೆದರು.

ಅರ್ಥ:
ತವಗ: ಕಟ್ಟೆ, ಜಗಲಿ; ತಳಿ: ಹರಡು; ಮುಳು: ಮುಳ್ಳು; ವೇಲಿ: ಬೇಲಿ; ಬಾಗಿಲು: ಕದ; ಜವಳಿ: ಜೊತೆ; ಬೀಯಗ: ಬೀಗ; ದಿವಿಜ: ದೇವತೆ; ವನ: ಕಾಡು; ಉದ್ದಂಡ: ಪ್ರಬಲವಾದ, ಪ್ರಚಂಡವಾದ; ಪರಿಮಳ: ಸುಗಂಧ; ಪೂರ: ತುಂಬುವುದು; ಯುವತಿ: ಹೆಣ್ಣು; ದಳ: ಗುಂಪು; ನೂಕು: ತಳ್ಳು; ಉದಕ: ನೀರು; ಉದಕೋತ್ಸವ: ಜಲಕ್ರೀಡೆ; ವೃಥ: ಸುಮ್ಮನೆ; ಕೇಳಿ: ಸಾಲು, ಪಂಕ್ತಿ, ವಿನೋದ; ಕನಕ: ಚಿನ್ನ; ಉದ್ಭವ: ಹುಟ್ಟು; ಕವಾಟ: ಬಾಗಿಲು, ಕದ; ಒದೆ: ಕಾಲಿನಿಂದ ಹೊಡೆ; ಕರೆ: ಆಹ್ವಾನ ಮಾಡು; ಕಾಹಿ: ಕಾಯುವವ, ರಕ್ಷಿಸುವವ;

ಪದವಿಂಗಡಣೆ:
ತವಗತಳಿ + ಮುಳುವೇಲಿ +ಬಾಗಿಲ
ಜವಳಿ+ಕದ+ ಬೀಯಕದಲ್+ಇದ್ದುದು
ದಿವಿಜ+ವನವ್+ಉದ್ದಂಡತರ+ ಪರಿಮಳದ+ ಪೂರದಲಿ
ಯುವತಿಯರ +ದಳ +ನೂಕಿತ್+ಉದಕೋ
ತ್ಸವ +ವೃಥಾ +ಕೇಳಿಯಲಿ +ಕನಕೋ
ದ್ಭವ +ಕವಾಟವನ್+ಒದೆದು +ಕರೆದರು+ ಕಾಹಿನವರುಗಳ

ಅಚ್ಚರಿ:
(೧) ಜಲಕ್ರೀಡೆಗೆ – ಉದಕೋತ್ಸವ ಎಂದು ಕರೆದಿರುವುದು
(೨) ಕ ಕಾರದ ಸಾಲು ಪದ – ಕೇಳಿಯಲಿ ಕನಕೋದ್ಭವ ಕವಾಟವನೊದೆದು ಕರೆದರು ಕಾಹಿನವರುಗಳ