ಪದ್ಯ ೨೧: ಗಣಿಕೆಯರು ಎಲ್ಲಿಗೆ ಹಿಂದಿರುಗಿದರು?

ಕರೆಸಿದನು ನೃಪ ವಾರಿಕೇಳಿಗೆ
ವರ ವಧೂವರ್ಗವನು ಕೇಳಿದು
ತಿರುಗಿತಂಗಜ ಥಟ್ಟು ಝಣ ಝಣರವರ ರಭಸದಲಿ
ಸರಿದಿಳಿವ ನಿರಿಯೊಂದು ಕೈಯಲಿ
ಸುರಿವರಳ ಮುಡಿಯೊಂದು ಕೈಯಲಿ
ಭರದೆ ಗಮನ ಸ್ವೇದ ಜಲ ಮಘಮಘಿಸೆ ದೆಸೆದೆಸೆಗೆ (ಅರಣ್ಯ ಪರ್ವ, ೧೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಷ್ಟರಲ್ಲಿ ಕೌರವನು ಜಲಕ್ರೀಡೆಗೆ ಬರಬೇಕೆಂದು ಹೇಳಿಕಳಿಸಿದುದರಿಂದ, ಮನ್ಮಥನ ಸೈನ್ಯದ ಆಳುಗಳಂತಿದ್ದ ಕಾಮಿನಿಯರು ಝಣಝಣತ್ಕಾರ ಮಾದುತ್ತಾ ಹಿಂದಿರುಗಿದರು. ಕೆಳಗಿಳಿಯುವ ಸೀರೆಯನ್ನು ಒಂದು ಕೈಯಲ್ಲಿ ಹಿಡಿದು ಹಿಂದೆ ಜಾರುತ್ತಿರುವ ಹೂಗಳ ಜಡೆಯನ್ನು ಇನ್ನೊಂದು ಕೈಯಲಿ ಹಿಡಿದು ತರುಣಿಯರು ವೇಗದಿಂದ ನಡೆಯಲು ಅವರ ಮೈಬೆವರಿನ ಸುಗಂಧವು ದಿಕ್ಕು ದಿಕ್ಕಿಗೆ ಹರಡಿತು.

ಅರ್ಥ:
ಕರೆಸು: ಬರೆಮಾಡು; ನೃಪ: ರಾಜ; ವಾರಿಕೇಳಿ: ಗಣಿಕೆ; ವರ: ಶ್ರೇಷ್ಠ; ವಧೂ: ಹೆಣ್ಣು; ವರ್ಗ: ಗುಂಪು; ಕೇಳಿ: ತಿಳಿದು, ಆಲಿಸು; ತಿರುಗು: ಹಿಂದಿರುಗು; ಅಂಗಜ: ಮನ್ಮಥ; ಥಟ್ಟು: ಪಡೆ; ಝಣ: ಶಬ್ದವನ್ನು ಸೂಚಿಸುವ ಪದ; ರವ: ಶಬ್ದ; ರಭಸ: ವೇಗ; ನಿರಿ:ಸೀರೆಯ ಮಡಿಕೆ; ಇಳಿ: ಕೆಳಕ್ಕೆ ಬರು; ಕೈ: ಹಸ್ತ; ಸುರಿ: ವರ್ಷಿಸು; ಅರಲು: ಹೂವು; ಮುಡಿ: ತಲೆಗೂದಲು; ಭರದೆ: ಹೆಚ್ಚಳ; ಗಮನ: ಚಲನ; ಸ್ವೇದಜಲ: ಬೆವರು; ಮಘಮಘಿಸು: ಸುವಾಸನೆಯನ್ನು ಬೀರು; ದೆಸೆ: ದಿಕ್ಕು;

ಪದವಿಂಗಡಣೆ:
ಕರೆಸಿದನು +ನೃಪ+ ವಾರಿಕೇಳಿಗೆ
ವರ+ ವಧೂ+ವರ್ಗವನು +ಕೇಳಿದು
ತಿರುಗಿತ್+ಅಂಗಜ+ ಥಟ್ಟು+ ಝಣ +ಝಣ+ರವರ+ ರಭಸದಲಿ
ಸರಿದ್+ಇಳಿವ +ನಿರಿಯೊಂದು +ಕೈಯಲಿ
ಸುರಿವ್+ಅರಳ+ ಮುಡಿಯೊಂದು+ ಕೈಯಲಿ
ಭರದೆ +ಗಮನ +ಸ್ವೇದ +ಜಲ+ ಮಘಮಘಿಸೆ +ದೆಸೆದೆಸೆಗೆ

ಅಚ್ಚರಿ:
(೧) ಗಣಿಕೆಯರ ಚಲನೆಯನ್ನು ಚಿತ್ರಿಸುವ ಪರಿ – ಸರಿದಿಳಿವ ನಿರಿಯೊಂದು ಕೈಯಲಿ
ಸುರಿವರಳ ಮುಡಿಯೊಂದು ಕೈಯಲಿಭರದೆ ಗಮನ ಸ್ವೇದ ಜಲ ಮಘಮಘಿಸೆ ದೆಸೆದೆಸೆಗೆ

ಪದ್ಯ ೨೦: ಧರ್ಮಜನ ನುಡಿಗೆ ಭೀಮನು ಹೇಗೆ ಪ್ರತಿಕ್ರಯಿಸಿದನು?

ಔಡುಗಚ್ಚಿದನಂಘ್ರಿಯಲಿ ನೆಲ
ಬೀಡ ಬಿಡಲೊದೆದನು ಕರಾಂಗುಲಿ
ಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ
ನೋಡಿದನು ಕುರುರಾಯನಲಿ ಹೊ
ಯ್ದಾಡಿ ಬರಬೇಕೆಂಬ ಭೀಮನ
ಮೋಡಿಯನು ನೃಪನರಿದು ಸಂತೈಸಿದನು ಸಾಮದಲಿ (ಅರಣ್ಯ ಪರ್ವ, ೧೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ಧರ್ಮಜನ ಮಾತನ್ನು ಕೇಳಿ ಕೋಪದಿಂದ ತನ್ನ ಹಲ್ಲನ್ನು ಕಡಿದು, ನೆಲವನ್ನೊದೆಯಲು, ಆ ನೆಲವು ತಗ್ಗುಬಿದ್ದಿತು. ಸಿಟ್ಟಿನಿಂದ ಗದಾಯುಧವನ್ನು ಹಿಡಿದು ಬೆರಳುಗಳನ್ನು ಒತ್ತಿದನು. ಕೌರವನೊಡನೆ ಯುದ್ಧಕ್ಕೆ ಹೋಗಿ ಹೊಯ್ದಾಡಿ ಬರಬೇಕೆಂಬ ಭೀಮನ ಬಗೆಯನ್ನು ಅರಿತ ಧರ್ಮಜನು ಅವನನ್ನು ಸಮಾಧಾನ ಪಡಿಸಿದನು.

ಅರ್ಥ:
ಔಡು: ಹಲ್ಲಿನಿಂದ ಕಚ್ಚು; ಕಚ್ಚು: ಹಲ್ಲಿನಿಂದ ಹಿಡಿ; ಅಂಘ್ರಿ: ಪಾದ; ನೆಲ: ಭೂಮಿ; ಬೀಡು: ವಸತಿ; ಒದೆ: ಕಾಲಲ್ಲಿ ನೂಕು; ಕರ: ಹಸ್ತ; ಅಂಗುಲಿ: ಬೆರಳು; ಕೂಡು: ಜೊತೆಯಾಗು; ಮುರಿ: ಸೀಳು; ಔಕು: ನೂಕು; ಖತಿ: ಕೋಪ; ನಿಜ: ದಿಟ, ತನ್ನ; ಗದೆ: ಮುದ್ಗರ; ಆಯುಧ: ಶಸ್ತ್ರ; ನೋಡು: ವೀಕ್ಷಿಸು; ರಾಯ: ರಾಜ; ಹೊಯ್ದಾಡು: ಹೋರಾಡು; ಬರಬೇಕು: ಆಗಮನ; ಮೋಡಿ: ಬಿಂಕ, ಬೆಡಗು; ನೃಪ: ರಾಜ; ಅರಿ: ತಿಳಿ; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ;

ಪದವಿಂಗಡಣೆ:
ಔಡುಗಚ್ಚಿದನ್ +ಅಂಘ್ರಿಯಲಿ +ನೆಲ
ಬೀಡ +ಬಿಡಲ್+ಒದೆದನು +ಕರಾಂಗುಲಿ
ಗೂಡಿ +ಮುರಿದ್+ಔಕಿದನು +ಖತಿಯಲಿ+ ನಿಜ +ಗದಾಯುಧವ
ನೋಡಿದನು+ ಕುರುರಾಯನಲಿ+ ಹೊ
ಯ್ದಾಡಿ +ಬರಬೇಕೆಂಬ +ಭೀಮನ
ಮೋಡಿಯನು +ನೃಪನರಿದು +ಸಂತೈಸಿದನು +ಸಾಮದಲಿ

ಅಚ್ಚರಿ:
(೧) ಭೀಮನ ಕೋಪದ ಚಿತ್ರಣ: ಔಡುಗಚ್ಚಿದನಂಘ್ರಿಯಲಿ ನೆಲಬೀಡ ಬಿಡಲೊದೆದನು ಕರಾಂಗುಲಿ
ಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ

ಪದ್ಯ ೧೯: ಧರ್ಮಜನು ಮುನಿಗಳಿಗೆ ಏನು ಹೇಳಿದನು?

ಅರಸಲಾ ಕುರುರಾಯನಾತನ
ಬರವು ತುರುಪಳ್ಳಿಗಳ ಗೋವಿ
ಸ್ತರಣ ಕೋಸುಗವೈಸೆ ಪಾಳೆಯ ಸಾರ್ವಭೌಮನದು
ಪರಿಸರದಲಿದ್ದುದು ವಿನೋದಕೆ
ತರುಣಿಯರು ಬರಲೇಕೆ ನೀವ
ಬ್ಬರಿಸುವಿರಿ ನಮ್ಮವರಲಾಯೆಂದನು ಮಹೀಪಾಲ (ಅರಣ್ಯ ಪರ್ವ, ೧೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮುನಿಗಳೇ, ಈ ದೇಶದ ದೊರೆ ದುರ್ಯೋಧನ. ದನಕರುಗಳ ಹಳ್ಳಿಗಳಿಗೆ ಬಂದು ಗೋವುಗಳನ್ನು ನೋಡಬೇಕೆಂದು ಅವನಿಲ್ಲಿ ಪಾಳೆಯ ಬಿಟ್ಟಿದ್ದಾನೆ, ಸುತ್ತ ಮುತ್ತಲಿನ ಪ್ರದೇಶವನ್ನು ನೋಡಿಕೊಂಡು ಹೋಗಲು ಆ ತರುಣಿಯರು ಬಂದರೆ ನೀವೇಕೆ ಅಬ್ಬರಿಸುತ್ತಿರುವಿರಿ, ಅವರು ನಮ್ಮವರೇ ಅಲ್ಲವೇ ಎಂದು ಧರ್ಮಜನು ಮುನಿಗಳಿಗೆ ಹೇಳಿದನು.

ಅರ್ಥ:
ಅರಸ: ರಾಜ; ರಾಯ: ರಾಜ; ಬರವು: ಆಗಮನ; ತುರು: ದನಕರು; ಪಳ್ಳಿ: ಹಳ್ಳಿ; ಗೋ: ಗೋವು; ವಿಸ್ತರಣ: ಹರಹು, ವಿಸ್ತಾರ; ಐಸೆ: ಅಷ್ಟು; ಪಾಳೆ:ಸೀಮೆ; ಸಾರ್ವಭೌಮ: ಸಮಸ್ತ ಭೂಮಂಡಲಕ್ಕೆ ಸಂಬಂಧಿಸಿದ್ದು; ಪರಿಸರ: ಸುತ್ತಲೂ ಇರುವ ಸನ್ನಿವೇಶ, ಆವರಣ; ವಿನೋದ: ಸಂತೋಷ, ಹಿಗ್ಗು; ತರುಣಿ: ಹೆಣ್ಣು; ಬರಲು: ಆಗಮನ; ಅಬ್ಬರಿಸು: ಆರ್ಬಟ; ಮಹೀಪಾಲ: ರಾಜ;

ಪದವಿಂಗಡಣೆ:
ಅರಸಲಾ +ಕುರುರಾಯನ್+ಆತನ
ಬರವು +ತುರು+ಪಳ್ಳಿಗಳ +ಗೋ+ವಿ
ಸ್ತರಣ +ಕೋಸುಗವ್+ಐಸೆ +ಪಾಳೆಯ +ಸಾರ್ವಭೌಮನದು
ಪರಿಸರದಲ್+ಇದ್ದುದು +ವಿನೋದಕೆ
ತರುಣಿಯರು +ಬರಲ್+ಏಕೆ+ ನೀವ್
ಅಬ್ಬರಿಸುವಿರಿ +ನಮ್ಮವರಲಾ+ಎಂದನು +ಮಹೀಪಾಲ

ಅಚ್ಚರಿ:
(೧) ಧರ್ಮಜನ ವಿಶಾಲತೆ – ನಮ್ಮವರಲಾಯೆಂದನು ಮಹೀಪಾಲ, ಅರಸಲಾ ಕುರುರಾಯ
(೨) ಅರಸ, ರಾಯ, ಮಹೀಪಾಲ, ಸಾರ್ವಭೌಮ – ಸಾಮ್ಯಾರ್ಥ ಪದಗಳು

ಪದ್ಯ ೧೮: ಋಷಿಗಳು ಪಾಂಡವರ ಬಳಿ ಏನು ಬೇಡಿದರು?

ಬಳಿಯಲೈದಿತು ಮುನಿಗಳಿವರುಪ
ಟಳವನರಸಂಗರುಹಿದರು ವೆ
ಗ್ಗಳಿಸಿ ಭೀಮಂಗೆಂದರರ್ಜುನ ಯಮಳರಿದಿರಿನಲಿ
ಉಳಿದರೆಮಗೀ ವನ ವಿಟಾಳ
ಪ್ರಳಯವಾದುದು ಕಾನನಾಂತರ
ನಿಳಯದಲಿ ನಿಲಿಸೆಮ್ಮನೆಂದುದು ಸಕಲ ಮುನಿನಿಕರ (ಅರಣ್ಯ ಪರ್ವ, ೧೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮುನಿಗಳು ಒಟ್ಟಾಗಿ ಹೋಗಿ ಧರ್ಮಜನಿಗೆ ತಮಗಾದ ಕಷ್ಟಗಳನ್ನು ಹೇಳಿಕೊಂಡರು. ಅರ್ಜುನ, ನಕುಲ ಸಹದೇವರಿದಿರಿನಲ್ಲಿ ಭೀಮನಿಗೆ, ಇಲ್ಲಿರುವೆವೆಂದರೆ ಅಪವಿತ್ರತೆಯ ಪ್ರಳಯವಾಯಿತು. ನಮ್ಮನ್ನು ಕಾಡಿನ ನಡುವೆ ಇನ್ನೆಲ್ಲಿಗಾದರೂ ಕರೆದೊಯ್ಯಬೇಕು ಎಂದು ಬೇಡಿಕೊಂಡರು.

ಅರ್ಥ:
ಬಳಿ: ಸಮೀಪ; ಐದು: ಬಂದು ಸೇರು; ಮುನಿ: ಋಷಿ; ಉಪಟಳ: ತೊಂದರೆ, ಹಿಂಸೆ; ಅರಸ: ರಾಜ; ಅರುಹು: ತಿಳಿಸು, ಹೇಳು; ವೆಗ್ಗಳ: ಶ್ರೇಷ್ಠತೆ; ಯಮಳ: ಅವಳಿ ಮಕ್ಕಳು; ಇದಿರು: ಎದುರು; ಉಳಿದ: ಮಿಕ್ಕ; ವನ: ಕಾಡು; ವಿಟಾಳ: ಅಪವಿತ್ರತೆ, ಮಾಲಿನ್ಯ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ; ಕಾನನ: ಕಾಡು; ನಿಳಯ: ಮನೆ, ಆಲಯ; ನಿಲಿಸು: ತಡೆ; ಸಕಲ: ಎಲ್ಲಾ; ಮುನಿ: ಋಷಿ; ನಿಕರ: ಗುಂಪು;

ಪದವಿಂಗಡಣೆ:
ಬಳಿಯಲ್+ಐದಿತು +ಮುನಿಗಳ್+ಇವರ್+ಉಪ
ಟಳವನ್+ಅರಸಂಗ್+ಅರುಹಿದರು +ವೆ
ಗ್ಗಳಿಸಿ +ಭೀಮಂಗ್+ಎಂದರ್+ಅರ್ಜುನ +ಯಮಳರ್+ಇದಿರಿನಲಿ
ಉಳಿದರ್+ಎಮಗೀ+ ವನ+ ವಿಟಾಳ
ಪ್ರಳಯವಾದುದು +ಕಾನನಾಂತರ
ನಿಳಯದಲಿ +ನಿಲಿಸೆಮ್ಮನ್+ಎಂದುದು +ಸಕಲ +ಮುನಿ+ನಿಕರ

ಅಚ್ಚರಿ:
(೧) ಈ ಜಾಗ ಸೂಕ್ತವಲ್ಲ ವೆಂದು ಹೇಳಲು – ಎಮಗೀ ವನ ವಿಟಾಳಪ್ರಳಯವಾದುದು

ಪದ್ಯ ೧೭: ಗಣಿಕೆಯರು ಹೇಗೆ ಶಬ್ದವನ್ನು ಮಾಡುತ್ತಿದ್ದರು?

ಕುಣಿವರಂದುಗೆ ಕಾಲಝಣ ಝಣ
ಝಣ ಝಣತ್ಕೃತಿ
ರಭಸಮಿಗೆ ಕಂ
ಕಣದ ದನಿತೋರುವರು ನುಡಿನುಡಿ ಸೇರದಂದದಲಿ
ಮಣಿಮಯದ ಕುಂಡಲವನಲುಗಿಸಿ
ಯೆಣಿಸುವಂತಿರೆ ಕೊರಳ ಹಾರದ
ಮಣಿಗಳು ಮುತ್ತುಗಳ ಮೆರೆವರು ಮುರಿದ ಮೌಳಿಯಲಿ (ಅರಣ್ಯ ಪರ್ವ, ೧೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕಾಲಗೆಜ್ಜೆಯ ನೂಪುರಗಳ ಝಣತ್ಕಾರವು ಹಬ್ಬುವಂತೆ ಆ ಸಖೀಜನರು ಕುಣಿಯುವರು, ಮಾತು ಕೇಳದಮ್ತೆ ಕಂಕಣದ ಸದ್ದು ಮಾಡುವರು, ಕುಂಡಲಗಳನ್ನಲುಗಿಸುತ್ತಾ ಕತ್ತು ಓರೆ ಮಾಡಿ ಮುತ್ತುಗಳನ್ನು ಎಣಿಸುವಂತೆ ನಟಿಸುವರು.

ಅರ್ಥ:
ಕುಣಿ: ನರ್ತಿಸು; ಅಂದುಗೆ: ಚೆಲುವು; ಕಾಲ: ಪಾದ; ಝಣತ್ಕೃತಿ: ಝಣ ಝಣ ಶಬ್ದ; ರಭಸ: ವೇಗ; ಮಿಗೆ: ಅಧಿಕ; ಕಂಕಣ: ಬಳೆ; ದನಿ: ಶಬ್ದ; ತೋರು: ಗೋಚರಿಸು; ನುಡಿ: ಮಾತಾಡು; ಸೇರು: ಜೊತೆಗೂಡು; ಮಣಿ: ಮಾಣಿಕ್ಯ; ಕುಂಡಲ: ಕಿವಿಯ ಆಭರಣ; ಅಲುಗಿಸು: ಅಲ್ಲಾಡು; ಎಣಿಸು: ಲೆಕ್ಕ ಹಾಕು; ಕೊರಳು: ಕತ್ತು; ಹಾರ: ಸರ; ಮುತ್ತು: ಮೌಕ್ತಿಕ; ಮೆರೆ: ಶೋಭಿಸು; ಮುರಿ: ಸೀಳು; ಮೌಳಿ: ಶಿರ;

ಪದವಿಂಗಡಣೆ:
ಕುಣಿವರ್+ಅಂದುಗೆ +ಕಾಲ+ಝಣ +ಝಣ
ಝಣ +ಝಣತ್ಕೃತಿ+ರಭಸ+ಮಿಗೆ+ ಕಂ
ಕಣದ+ ದನಿ+ತೋರುವರು+ ನುಡಿ+ನುಡಿ+ ಸೇರದಂದದಲಿ
ಮಣಿಮಯದ +ಕುಂಡಲವನ್+ಅಲುಗಿಸಿ
ಎಣಿಸುವಂತಿರೆ +ಕೊರಳ +ಹಾರದ
ಮಣಿಗಳು +ಮುತ್ತುಗಳ +ಮೆರೆವರು+ ಮುರಿದ+ ಮೌಳಿಯಲಿ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮಣಿಗಳು ಮುತ್ತುಗಳ ಮೆರೆವರು ಮುರಿದ ಮೌಳಿಯಲಿ
(೨) ಜೋಡಿ ಪದಗಳು – ಝಣಝಣ, ನುಡಿನುಡಿ

ಪದ್ಯ ೧೬: ಗಣಿಕೆಯರು ದ್ರೌಪದಿಯ ಬಗ್ಗೆ ಏನು ಮಾತಾಡಿದರು?

ಈಕೆ ಪಾಂಡವಸತಿ ಕಣಾ ತೆಗೆ
ಯೀಕೆಯತಿ ದಾರಿದ್ರಮಾನುಷೆ
ಯೀಕೆಯಲ್ಲೊಳಗಿಹಳು ರಾಣೀವಾಸವೆಂಬರಲೆ
ಈಕೆಯಹುದಲ್ಲಿದಕೆ ಪಣವೇ
ನೀಕೆ ಬಣಗಕಟೆಂದು ಕಾಂತಾ
ನೀಕೆ ತಮ್ಮೊಳು ನುಡಿವುತಿದ್ದುದು ತೋರಿ ಬೆರಳಿನಲಿ (ಅರಣ್ಯ ಪರ್ವ, ೧೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಮುಂದೆ ನಿಂತು ಆ ಸಖಿಯರಲ್ಲಿ ಒಬ್ಬೊಬ್ಬರು ಒಂದು ಮಾತನಾಡಿದರು, ಇವಳೇ ಪಾಂಡವರ ಸತಿ, ಅಲ್ಲ ಇವಳು ಅತಿ ದರಿದ್ರ ಹೆಣ್ಣು, ಇವಳು ದ್ರೌಪದಿಯೇ ಅಲ್ಲ, ಅವಳು ಒಳಗಿದ್ದಾಳೆ, ಇವಳೇ ದ್ರೌಪದಿ, ಇವಳು ದ್ರೌಪದಿಯಲ್ಲ, ಏನು ಪಣ ಕಟ್ಟುವಿರಿ, ಇವಳು ಒಬ್ಬ ಕ್ಷುಲ್ಲಕ ಹೆಣ್ಣು, ಒಬ್ಬೊಬ್ಬರೂ ದ್ರೌಪದಿಯನ್ನು ಬೆರಳಿನಿಂದ ತೋರಿಸಿ ಹಂಗಿಸುತ್ತಾ ಮಾತಾಡಿಕೊಳ್ಳುತ್ತಿದ್ದರು.

ಅರ್ಥ:
ಸತಿ: ಹೆಂಡತಿ, ಸ್ತ್ರೀ; ತೆಗೆ: ಹೊರತರು; ಅತಿ: ಬಹಳ; ದಾರಿದ್ರ: ಬಡವ; ಮಾನುಷೆ: ಹೆಂಗಸು; ರಾಣಿ: ಅರಸಿ; ಪಣ: ಜಾತಿ, ವರ್ಣ; ಬಣ: ಗುಂಪು; ಅಕಟ: ಅಯ್ಯೋ; ಕಾಂತಾ: ಸ್ತ್ರೀ; ನುಡಿ: ಮಾತಾಡು; ತೋರು: ಪ್ರಕಟಿಸು; ಬೆರಳು: ಅಂಗುಲಿ;

ಪದವಿಂಗಡಣೆ:
ಈಕೆ +ಪಾಂಡವ+ಸತಿ+ ಕಣಾ +ತೆಗೆ
ಈಕೆ+ಅತಿ+ ದಾರಿದ್ರ+ಮಾನುಷೆ
ಈಕೆ+ಅಲ್ಲ+ಒಳಗಿಹಳು+ ರಾಣೀವಾಸವೆಂಬರಲೆ
ಈಕೆ+ಅಹುದ್+ಅಲ್ಲ+ಇದಕೆ +ಪಣವೇನ್
ಈಕೆ +ಬಣಗ್+ಅಕಟೆಂದು +ಕಾಂತಾನ್
ಈಕೆ+ ತಮ್ಮೊಳು +ನುಡಿವುತಿದ್ದುದು +ತೋರಿ +ಬೆರಳಿನಲಿ

ಅಚ್ಚರಿ:
(೧) ಈಕೆ – ಎಲ್ಲಾ ೬ ಸಾಲುಗಳ ಮೊದಲ ಪದ

ಪದ್ಯ ೧೫: ಗಣಿಕೆಯರು ಯಾರ ಬಳಿ ಬಂದರು?

ಎನುತ ಕವಿದುದು ಮತ್ತೆ ಕಾಂತಾ
ಜನ ಸುಯೋಧನನರಮನೆಯ ಸೊಂ
ಪಿನ ಸಖೀ ನಿಕುರುಂಬ ತುಂಬಿತು ವರ ತಪೋವನವ
ಮನಸಿಜನ ದಳ ನೂಕಿತೇಳೇ
ಳೆನುತ ಚೆಲ್ಲಿತು ಮುನಿನಿಕರ ನೃಪ
ವನಿತೆಯಿದಿರಲಿ ಸುಳಿದವರಿವರದಿರು ಮಂದಿ ಸಂದಣಿಸಿ (ಅರಣ್ಯ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಹೀಗೆ ಆಶ್ರಮವಾಸಿಗಳೆದುರಿನಲ್ಲಿ ವಾದಿಸಿ, ದುರ್ಯೋಧನನ ಅರಮನೆಯ ರಾಣಿಯರ ಸಖಿಯರ ತಂಡವು ತಪೋವನವನ್ನು ತುಂಬಿತು, ಕಾಮನ ಸೈನ್ಯವು ನುತ್ತಿ ಬರುತ್ತಿದೆ ಏಳಿರಿ ಎಂದು ಮುನಿಗಳು ಓಡಿದರು. ಸಖಿಯರ ಗುಂಪು ದ್ರೌಪದಿಯ ಇದಿರಿನಲ್ಲಿ ಸುಳಿದಿತು.

ಅರ್ಥ:
ಕವಿ: ಆವರಿಸು; ಕಾಂತಾಜನ: ಹೆಣ್ಣು; ಸ್ತ್ರೀಯರ ಗುಂಪು; ಅರಮನೆ: ರಾಜರ ಆಲಯ; ಸೊಂಪು: ಸೊಗಸು, ಚೆಲುವು; ಸಖಿ: ಗೆಳತಿ, ಸ್ನೇಹಿತೆ; ನಿಕುರುಂಬ: ಗುಂಪು, ಸಮೂಹ; ತುಂಬು: ಪೂರ್ಣವಾಗು; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಕಾಡು; ಮನಸಿಜ: ಮದನ, ಕಾಮ; ದಳ: ಸೈನ್ಯ; ನೂಕು: ತಳ್ಳು; ಏಳು: ಮೇಲೇಳು; ಚೆಲ್ಲು: ಹರಡು, ಚದರಿ ಹೋಗು; ಮುನಿ: ಋಷಿ; ನಿಕರ: ಗುಂಪು; ನೃಪ: ರಾಜ; ವನಿತೆ: ಹೆಣ್ಣು; ಸುಳಿ:ಕಾಣಿಸಿಕೊಳ್ಳು; ಮಂದಿ: ಜನ, ಜನಸಮೂಹ; ಸಂದಣಿ: ಗುಂಪು, ಸಮೂಹ; ಇವರದಿರು: ಇವರೆದುರು;

ಪದವಿಂಗಡಣೆ:
ಎನುತ +ಕವಿದುದು +ಮತ್ತೆ +ಕಾಂತಾ
ಜನ +ಸುಯೋಧನನ್+ಅರಮನೆಯ +ಸೊಂ
ಪಿನ+ ಸಖೀ +ನಿಕುರುಂಬ +ತುಂಬಿತು +ವರ+ ತಪೋವನವ
ಮನಸಿಜನ +ದಳ +ನೂಕಿತ್+ಏಳೇಳ್
ಎನುತ +ಚೆಲ್ಲಿತು +ಮುನಿನಿಕರ+ ನೃಪ
ವನಿತೆ+ಇದಿರಲಿ+ ಸುಳಿದವರ್+ಇವರದಿರು+ ಮಂದಿ +ಸಂದಣಿಸಿ

ಅಚ್ಚರಿ:
(೧) ಸಂದಣಿಸಿ, ನಿಕರ, ನಿಕುರುಂಬ – ಸಾಮ್ಯಾರ್ಥ ಪದಗಳು