ಪದ್ಯ ೭: ಗಣಿಕೆಯರು ಯಾವ ಬಲೆಯನ್ನು ಹರಡಿದರು?

ಹೊಕ್ಕರಿವರಾಶ್ರಮದ ತುರುಗಿದ
ತಕ್ಕರಂತಃಕರಣ ತುರಗಕೆ
ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ
ಸಿಕ್ಕಿದವು ದಾಳಿಯಲಿ ಧೈರ್ಯದ
ದಕ್ಕಡರ ಮನ ಹರಹಿನಲಿ ಹಾ
ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ (ಅರಣ್ಯ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಗಣಿಕೆಯರು ಋಷ್ಯಾಶ್ರಮಗಳನ್ನು ಹೊಕ್ಕು ಅಲ್ಲಿನ ಆಚಾರವಂತರ ಸಮೂಹದ ಮನಸ್ಸಿನ ಕುದುರೆಗೆ ಕಡಿವಾಣವನ್ನು ಹಾಕಿದರು, ಎರಡೂ ಕಡೆ ಲಗಾಮನ್ನೆಳೆದರು. ಆ ಋಷಿಗಳ ಬಲಶಾಲಿಯಾದ ಧೈರ್ಯಕ್ಕೆ ತಮ್ಮ ಕಣ್ನೋಟಗಳೆಂಬ ಬಲೆಗಳನ್ನು ವಿಸ್ತಾರವಾಗಿ ಹರಡಿದರು.

ಅರ್ಥ:
ಹೊಕ್ಕು: ಸೇರು; ಆಶ್ರಮ: ಕುಟೀರ; ತುರುಗು: ಹೆಚ್ಚಾಗು, ಎದುರಿಸು; ಅಂತಃಕರಣ: ಮನಸ್ಸು; ತುರಗ: ಕುದುರೆ; ದುಕ್ಕುಡಿ: ಕಡಿವಾಣ; ತಿರುಹು: ತಿರುಗಿಸು; ವಾಘೆ: ಲಗಾಮು; ಸಿಕ್ಕು: ಪಡೆ; ದಾಳಿ: ಲಗ್ಗೆ; ಧೈರ್ಯ: ಎದೆಗಾರಿಕೆ, ಕೆಚ್ಚು; ದಕ್ಕಡ: ಸಮರ್ಥ, ಬಲಶಾಲಿ; ಮನ: ಮನಸ್ಸು; ಹರಹು: ಹರಡು; ಹಾಯ್ಕು: ಇಡು, ಇರಿಸು; ಕಡೆಗಣ್ಣು: ಕುಡಿನೋಟ; ಬಲೆ: ಜಾಲ; ಮುನಿ: ಋಷಿ; ಮೃಗ: ಪ್ರಾಣಿ; ಆವಳಿ: ಗುಂಪು;

ಪದವಿಂಗಡಣೆ:
ಹೊಕ್ಕರ್+ಇವರ್+ಆಶ್ರಮದ +ತುರುಗಿದ
ತಕ್ಕರ್+ಅಂತಃಕರಣ +ತುರಗಕೆ
ದುಕ್ಕುಡಿಯನ್+ಇಕ್ಕಿದರು +ತಿರುಹಿದರ್+ಎರಡು +ವಾಘೆಯಲಿ
ಸಿಕ್ಕಿದವು +ದಾಳಿಯಲಿ +ಧೈರ್ಯದ
ದಕ್ಕಡರ +ಮನ +ಹರಹಿನಲಿ +ಹಾ
ಯಿಕ್ಕಿದರು +ಕಡೆಗಣ್ಣ+ ಬಲೆಗಳ+ ಮುನಿ +ಮೃಗಾವಳಿಗೆ

ಅಚ್ಚರಿ:
(೧) ಗಣಿಕೆಯರ ಕುಡಿನೋಟದ ವರ್ಣನೆ: ಹಾಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ

ಪದ್ಯ ೬: ಗಣಿಕೆಯರ ಸುಗಂಧವು ಹೇಗೆ ಪರಿಣಾಮ ಬೀರಿತು?

ನೇವುರದ ದನಿ ದಟ್ಟಿಸಿತು ವೇ
ದಾವಳಿಯ ನಿರ್ಘೋಷವನು ನಾ
ನಾ ವಿಭೂಷಣ ಕಾಂತಿ ಕೆಣಕಿತು ಮುನಿ ಸಮಾಧಿಗಳ
ಆ ವಧೂಜನದಂಗಗಂಧ
ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ (ಅರಣ್ಯ ಪರ್ವ, ೧೯ ಸಂಧಿ, ೬ ಪದ್ಯ)

ತಾತ್ಪರ್ಯ:
ವೇದ ಘೋಷದ ಧ್ವನಿಯನ್ನು ಗಣಿಕೆಯರ ಕಾಲಂದುಗೆಯ ಸದ್ದು ತಡೆಯಿತು. ಅವರು ಧರಿಸಿದ್ದ ನಾನಾ ಆಭರಣಗಳ ಕಾಂತಿಯು ಮುನಿಗಳ ಸಮಾಧಿಯನ್ನು ಕೆಣಕಿತು. ಆ ತರುಣಿಯರ ದೇಹ ಗಂಧವು ಬ್ರಾಹ್ಮಣರು ಹೋಮ ಮಾಡಿದ್ದ ಚರು ಪುರೋಡಾಶಗಳ ಕಂಪನ್ನು ಆವರಿಸಿತು.

ಅರ್ಥ:
ನೇವುರ: ಅಂದುಗೆ, ನೂಪುರ; ದನಿ: ಶಬ್ದ; ದಟ್ಟ: ಒತ್ತಾದುದು, ಸಾಂದ್ರವಾದುದು; ವೇದ: ಶೃತಿ; ಆವಳಿ: ಗುಂಪು, ಸಾಲು; ನಿರ್ಘೋಷ: ದೊಡ್ಡ ಘೋಷಣೆ; ನಾನಾ: ಬಹಳ; ವಿಭೂಷಣ: ಒಡವೆ, ಆಭರಣ; ಕಾಂತಿ: ಪ್ರಕಾಶ; ಕೆಣಕು: ರೇಗಿಸು; ಮುನಿ: ಋಷಿ; ಸಮಾಧಿ: ಏಕಾಗ್ರತೆ, ತನ್ಮಯತೆ; ವಧು: ಹೆಂಗಸು, ಸ್ತ್ರೀ; ಅಂಗ: ದೇಹದ ಭಾಗ; ಗಂಧ: ಪರಿಮಳ; ಪ್ರಾವರಣ: ಮೇಲುಹೊದಿಕೆ; ಹುತ: ಹವಿಸ್ಸು; ಚರು: ನೈವೇದ್ಯ, ಹವಿಸ್ಸು; ಪುರೋಡಾಶ: ಯಜ್ಞ ಯಾಗಾದಿಗಳಲ್ಲಿ ಅರ್ಪಿಸುವ ಹವಿಸ್ಸು; ಆವಳಿ: ಗುಂಪು, ಸಾಲು; ಸೌರಭ: ಸುಗಂಧ; ಮುಸುಕು: ಆವರಿಸು; ವನ: ಕಾಡು; ವಳಯ: ಆವರಣ;

ಪದವಿಂಗಡಣೆ:
ನೇವುರದ +ದನಿ +ದಟ್ಟಿಸಿತು +ವೇ
ದಾವಳಿಯ +ನಿರ್ಘೋಷವನು +ನಾ
ನಾ +ವಿಭೂಷಣ +ಕಾಂತಿ +ಕೆಣಕಿತು +ಮುನಿ +ಸಮಾಧಿಗಳ
ಆ +ವಧೂಜನದ್+ಅಂಗ+ಗಂಧ
ಪ್ರಾವರಣ+ ಹುತ +ಚರು+ ಪುರೋಡಾ
ಶಾವಳಿಯ +ಸೌರಭವ +ಮುಸುಕಿತು +ವನದ +ವಳಯದಲಿ

ಅಚ್ಚರಿ:
(೧) ವೇದಾವಳಿ, ಪುರೋಡಾಶಾವಳಿ- ಆವಳಿ ಪದದ ಬಳಕೆ
(೨) ಸುಗಂಧ ಹರಡುವ ಪರಿ – ವಧೂಜನದಂಗಗಂಧ ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ

ಪದ್ಯ ೫: ಗಣಿಕೆಯರು ಯಾರಮೇಲೆ ದಾಳಿ ಮಾಡಿದರು?

ಪಾರಿವದುಪಾಧ್ಯರನು ನಮಿಸುತೆ
ವಾರನಾರಿಯರಾನನದಲಿ ಚ
ಕೋರಗಳ ಚಾಲೈಸಿದರು ಕೆಲರಂಗಪರಿಮಳಕೆ
ಸಾರಿದರೆ ಮರಿದುಂಬಿಗಳ ಸುಖ
ಪಾರಣೆಯ ಬೆಸಗೊಳುತ ನಗುತ ವಿ
ಕಾರಿಗಳು ವೇಡೈಸಿದರು ನೃಪ ಮುನಿ ನಿಜಾಶ್ರಮವ (ಅರಣ್ಯ ಪರ್ವ, ೧೯ ಸಂಧಿ, ೫ ಪದ್ಯ)

ತಾತ್ಪರ್ಯ:
ಗಣಿಕೆಯರು ಪಾರಿವಾಳದ ಉಪಾಧ್ಯಾರರಿಗೆ ಕೈಮುಗಿದು, ಮುಖದಿಂದ ಚಕೋರ ಪಕ್ಷಿಗಳ ಅನುಕರಣ ಮಾಡಿದರು. ಅವರ ಅಂಗ ಪರಿಮಳಕ್ಕೆ ಬಂದ ದುಂಬಿಗಳನ್ನು ಊಟವಾಯಿತೇ ಎಂದು ಕೇಳಿದರು. ಇಂತಹ ಸುಂದರ ಗಣಿಕೆಯರು ರಾಜಾ ಮತ್ತು ಮುನಿಗಳ ಆಶ್ರಯಕ್ಕೆ ದಾಳಿಯಿಟ್ಟರು.

ಅರ್ಥ:
ಪಾರಿವ: ಪಾರಿವಾಳ; ಉಪಾಧ್ಯ: ಉಪಾಧ್ಯಾಯ; ನಮಿಸು: ಎರಗು, ಗೌರವಿಸು; ವಾರನಾರಿ: ಗಣಿಕೆ, ವೇಶ್ಯೆ; ಆನನ: ಮುಖ; ಚಕೋರ: ಜೊನ್ನ ವಕ್ಕಿ, ಬೆಳದಿಂಗಳನ್ನೇ ಸೇವಿಸಿ ಬದುಕುವುದೆಂದು ನಂಬಲಾದ ಒಂದು ಪಕ್ಷಿ; ಚಾಳೈಸು: ಚಲಿಸುವಂತೆ ಮಾಡು; ಕೆಲರು: ಕೆಲವರು; ಅಂಗ: ದೇಹದ ಭಾಗ; ಪರಿಮಳ: ಸುಗಂಧ; ಸಾರು: ಹರಡು; ಮರಿದುಂಬಿ: ಚಿಕ್ಕ ಭ್ರಮರ; ಸುಖ: ನೆಮ್ಮದಿ; ಪಾರಣೆ: ತೃಪ್ತಿ, ಸಂತೋಷ; ಬೆಸ: ಕೆಲಸ, ಕಾರ್ಯ; ನಗುತ: ಹರ್ಷ; ವಿಕಾರ: ಬದಲಾವಣೆ, ಮಾರ್ಪಾಟು; ವೇಡೈಸು: ಸುತ್ತುವರಿ; ನೃಪ: ರಾಜ; ಮುನಿ: ಋಷಿ; ಆಶ್ರಮ: ಕುಟೀರ;

ಪದವಿಂಗಡಣೆ:
ಪಾರಿವದ್+ಉಪಾಧ್ಯರನು +ನಮಿಸುತೆ
ವಾರನಾರಿಯರ್+ಆನನದಲಿ +ಚ
ಕೋರಗಳ+ ಚಾಲೈಸಿದರು+ ಕೆಲರ್+ಅಂಗ+ಪರಿಮಳಕೆ
ಸಾರಿದರೆ +ಮರಿದುಂಬಿಗಳ +ಸುಖ
ಪಾರಣೆಯ +ಬೆಸಗೊಳುತ +ನಗುತ +ವಿ
ಕಾರಿಗಳು +ವೇಡೈಸಿದರು +ನೃಪ +ಮುನಿ +ನಿಜಾಶ್ರಮವ

ಅಚ್ಚರಿ:
(೧) ಗಣಿಕೆಯರ ಸೌಂದರ್ಯ – ಅಂಗಪರಿಮಳಕೆ ಸಾರಿದರೆ ಮರಿದುಂಬಿಗಳ ಸುಖಪಾರಣೆಯ ಬೆಸಗೊಳುತ