ಪದ್ಯ ೨: ಕೌರವನ ಕುಟೀರವು ಹೇಗೆ ಹೊಳೆಯುತ್ತಿತ್ತು?

ಲಾಯ ನೀಡಿತು ಮುಂದೆ ರಾವುತ
ಪಾಯಕರಿಗೆಡವಂಕ ಮಂತ್ರಿ ಪ
ಸಾಯತರು ಕರ್ಣಾದಿಗಳಿಗೆಡೆಯಾಯ್ತು ಬಲವಂಕ
ರಾಯನರಮನೆ ಮೌಕ್ತಿಕದ ಕಳ
ಶಾಯತದ ಬೆಳಗಿನಲಿ ಪಾಂಡವ
ರಾಯ ನೆಲೆವನೆಗಳನು ನಗುತಿದ್ದುದು ನವಾಯಿಯಲಿ (ಅರಣ್ಯ ಪರ್ವ, ೧೯ ಸಂಧಿ, ೨ ಪದ್ಯ)

ತಾತ್ಪರ್ಯ:
ಮುಂದೆ ಆನೆ ಕುದುರೆಗಳ ಲಾಯಗಳಿದ್ದವು, ಪದಾತಿಗಳು, ರಾವುತರು ಅರಮನೆಯ ಎಡಕ್ಕಿದ್ದವು, ಕರ್ಣಾದಿಗಳ ಅರಮನೆಯು ಬಲಭಾಗಕ್ಕಿದ್ದವು. ಕೌರವನ ಅರಮನೆಗೆ ಮುತ್ತಿನ ಕಳಶದಿಂದ ಅಲಂಕರಿಸಲಾಗಿತ್ತು, ಆ ಕಲಶದ ಕಾಂತಿಯು ಪಾಂಡವರ ಕುಟೀರವನ್ನು ನೋಡಿ ನಗುತ್ತಿದ್ದವೋ ಎನ್ನುವಂತಿತ್ತು.

ಅರ್ಥ:
ಲಾಯ: ಆನೆ ಕುದುರೆಗಳನ್ನು ಕಟ್ಟುವ ಸ್ಥಳ, ಅಶ್ವಶಾಲೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಪಸಾಯ: ಉಡುಗೊರೆ, ಬಹುಮಾನ; ಆದಿ: ಮುಂತಾದ; ಎಡೆ: ಅವಕಾಶ, ಸಂದರ್ಭ; ಅಂಕ: ವಿಭಾಗ; ರಾಯ: ರಾಜ; ಅರಮನೆ: ರಾಜರ ಆಲಯ; ಮೌಕ್ತಿಕ: ನವರತ್ನಗಳಲ್ಲಿ ಒಂದು ಮುತ್ತು; ಕಳಶ: ಕುಂಭ; ಆಯತ: ವಾಸಸ್ಥಾನ, ನೆಲೆ; ಬೆಳಗು: ಮುಂಜಾವ, ಪ್ರಾತಃಕಾಲ; ನೆಲೆ: ಸ್ಥಾನ; ನಗು: ಹರ್ಷ; ನವಾಯಿ: ಠೀವಿ;

ಪದವಿಂಗಡಣೆ:
ಲಾಯ +ನೀಡಿತು +ಮುಂದೆ +ರಾವುತ
ಪಾಯಕರಿಗ್+ಎಡವಂಕ +ಮಂತ್ರಿ +ಪ
ಸಾಯತರು +ಕರ್ಣಾದಿಗಳಿಗ್+ಎಡೆಯಾಯ್ತು +ಬಲವಂಕ
ರಾಯನ್+ಅರಮನೆ +ಮೌಕ್ತಿಕದ +ಕಳಶ
ಆಯತದ +ಬೆಳಗಿನಲಿ +ಪಾಂಡವ
ರಾಯ +ನೆಲೆವನೆಗಳನು +ನಗುತಿದ್ದುದು +ನವಾಯಿಯಲಿ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವರ್ಣಿಸುವ ಪರಿ – ರಾಯನರಮನೆ ಮೌಕ್ತಿಕದ ಕಳ
ಶಾಯತದ ಬೆಳಗಿನಲಿ ಪಾಂಡವರಾಯ ನೆಲೆವನೆಗಳನು ನಗುತಿದ್ದುದು ನವಾಯಿಯಲಿ

ನುಡಿಮುತ್ತುಗಳು: ಅರಣ್ಯ ಪರ್ವ ೧೯ ಸಂಧಿ

  • ರಾಯನರಮನೆ ಮೌಕ್ತಿಕದ ಕಳಶಾಯತದ ಬೆಳಗಿನಲಿ ಪಾಂಡವರಾಯ ನೆಲೆವನೆಗಳನು ನಗುತಿದ್ದುದು ನವಾಯಿಯಲಿ – ಪದ್ಯ ೨
  • ವನದಲಿ ತರಳೆಯರು ತುಂಬಿದರು ಮರಿದುಂಬಿಗಳ ಡೊಂಬಿನಲಿ – ಪದ್ಯ ೩
  • ಕೊಡಹಿ ಮೊಲೆಗಳ ಮೇಲುದಿನ ನಿರಿಯ – ಪದ್ಯ ೪
  • ಗಿಳಿಗೆ ಹಾರದ ಬಲೆಗಳನು ಹಾಯ್ಕಿದರು ಕೊಂಬಿನಲಿ – ಪದ್ಯ ೪
  • ಅಂಗಪರಿಮಳಕೆ ಸಾರಿದರೆ ಮರಿದುಂಬಿಗಳ ಸುಖಪಾರಣೆಯ ಬೆಸಗೊಳುತ – ಪದ್ಯ ೫
  • ವಧೂಜನದಂಗಗಂಧ ಪ್ರಾವರಣ ಹುತ ಚರು ಪುರೋಡಾಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ – ಪದ್ಯ ೬
  • ಹಾಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ – ಪದ್ಯ ೭
  • ಮುನಿವಟು ನಿಕರ ಶಿರದಲಿ ಕುಣಿಸಿದರು ಕುಂಚಿತ ಕರಾಂಗುಲಿಯ – ಪದ್ಯ ೮
  • ಬಾಯಲೆಂಜಲಗಿಡಿಯ ಬಗೆದರಲಾ – ಪದ್ಯ ೯
  • ಒದೆದು ಪದದಲಿ ಕೆಂದಳಿರ ತೋರಿದೆವಶೋಕೆಗೆ – ಪದ್ಯ ೧೩
  • ಮದ್ಯಗಂಡೂಷದಲಿ ಬಕುಳದ ಮರನ ಭುಲ್ಲವಿಸಿದೆವು – ಪದ್ಯ ೧೩
  • ಔಡುಗಚ್ಚಿದನಂಘ್ರಿಯಲಿ ನೆಲಬೀಡ ಬಿಡಲೊದೆದನು ಕರಾಂಗುಲಿಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ – ಪದ್ಯ ೨೦
  • ಸರಿದಿಳಿವ ನಿರಿಯೊಂದು ಕೈಯಲಿ ಸುರಿವರಳ ಮುಡಿಯೊಂದು ಕೈಯಲಿಭರದೆ ಗಮನ ಸ್ವೇದ ಜಲ ಮಘಮಘಿಸೆ ದೆಸೆದೆಸೆಗೆ – ಪದ್ಯ ೨೧
  • ಬಲುಮೊಲೆಗಳಳ್ಳಿರಿಯಲೇಕಾವಳಿಗಳನು ಕೆಲಕೊತ್ತಿ ಮೇಲುದಕಳಚಿ ನಡುಗಿಸಿ ನಡುವನಂಜಿಸಿ ಜಘನ ಮಂಡಲವ –ಪದ್ಯ ೨೨
  • ತಾರಕೆಗಳುಳಿದಂಬರದ ವಿಸ್ತಾರವೋ ಗತಹಂಸಕುಲ ಕಾಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ – ಪದ್ಯ ೨೩
  • ಅಲರ್ದ ಹೊಂದಾವರೆಯ ಹಂತಿಯೊ; ತಳಿತ ಮಾವಿನ ಬನವೊ; ಮಿಗೆ ಕತ್ತಲಿಪ ಬಹಳ ತಮಾಲ ಕಾನನವೋ; ಹೊಳೆವ ವಿದ್ರುಮವನವೊ; ಕುಸುಮೋಚ್ಚಳಿತ ಕೇತಕಿದಳವೊ; ರಂಭಾವಳಿಯೊ – ಪದ್ಯ ೨೪
  • ವಾರಿಕೇಳಿಯ ಮರೆದು ಶೋಣಿತವಾರಿ ಕೇಳಿಗೆ ಬನ್ನಿ ನೀವೆನುತ – ಪದ್ಯ ೩೨
  • ಕೌರವವೃಂದವನು ಕರೆದರು ವಿನೋದಕೆ ಬಂದಿರೈ ನಾರಾಚಸಲಿಲ ಕ್ರೀಡೆಯಿದೆಯೆನುತ – ಪದ್ಯ ೩೪
  • ಔಕಿದರಂತಕನ ಪುರದೆಲ್ಲೆಯಲಿ – ಪದ್ಯ ೩೬
  • ಪದಘಾತ ಧೂಳೀಪಟಲ ಪರಿಚುಂಬಿಸಿದುದಂಬರವ – ಪದ್ಯ ೪೧
  • ವಿಗಡರೆಸುಗೆಯ ಭೂರಿ ಬಾಣದ ಹಿಂಡು ತರಿದವು ಹೊಗುವ ಗಂಡಿಗರ – ಪದ್ಯ ೪೨

ಪದ್ಯ ೧: ದುರ್ಯೋಧನನು ಎಲ್ಲಿ ಬಂದು ಪಾಳೆಯನ್ನು ಸ್ಥಾಪಿಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ತುರುಪಳ್ಳಿಗಳ ನೋಡಿ ವ
ನಾಳಿ ತಪ್ಪದೆ ಬೇಟೆಯಾಡಿ ಸಮಸ್ತ ಬಲ ಸಹಿತ
ಲೀಲೆ ಮಿಗಲಾ ಪಾಂಡವರ ವನ
ವೇಲೆಯಲಿ ನಿಸ್ಸಾಳ ರಭಸದ
ಸೂಳ ಸಂಕೇತದಲಿ ನೃಪ ಬಿಡಿಸಿದನು ಪಾಳೆಯವ (ಅರಣ್ಯ ಪರ್ವ, ೧೯ ಸಂಧಿ, ೧ ಪದ್ಯ)

ತಾತ್ಪರ್ಯ:
ಕೌರವನು ಕುರುಹಳ್ಳಿಗಳನ್ನು ನೋಡಿ, ಬೇಟೆಯಾಡಿ, ತನ್ನ ಸೈನ್ಯ ಸಮೇತ ಪಾಂಡವರು ಬೀಡು ಬಿಟ್ಟ ಪ್ರದೇಶದ ಎಲ್ಲೆಗೆ ಬಂದನು. ಮತ್ತೆ ಮತ್ತೆ ಮೊಳಗುವ ನಿಸ್ಸಾಳ ಸದ್ದಿನ ನಡುವೆ ತನ್ನ ಪಾಳೆಯವನ್ನು ಬಿಟ್ಟನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ತುರು: ಹಸು; ಪಳ್ಳಿ: ಹಳ್ಳಿ; ನೋಡು: ವೀಕ್ಷಿಸು; ವನ: ಕಾಡು; ಆಳಿ: ಗುಂಪು; ಬೇಟೆ: ವನ್ಯ ಮೃಗಗಳನ್ನು ಕೊಲ್ಲುವ ಕ್ರೀಡೆ; ಸಮಸ್ತ: ಎಲ್ಲಾ; ಬಲ: ಶಕ್ತಿ, ಸೈನ್ಯ; ಸಹಿತ: ಜೊತೆ; ಲೀಲೆ: ಆನಂದ, ಸಂತೋಷ; ಮಿಗೆ: ಅಧಿಕವಾಗಿ; ವೇಲೆ: ಸರಹದ್ದು; ನಿಸ್ಸಾಳ: ಚರ್ಮವಾದ್ಯ; ರಭಸ: ವೇಗ; ಸೂಳು: ಆರ್ಭಟ, ಬೊಬ್ಬೆ; ಸಂಕೇತ: ಸೂಚನೆ, ಸುಳಿವು; ನೃಪ: ರಾಜ; ಬಿಡಿಸು: ಹರಡು ; ಪಾಳೆ: ಸೀಮೆ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ತುರುಪಳ್ಳಿಗಳ +ನೋಡಿ +ವ
ನಾಳಿ +ತಪ್ಪದೆ +ಬೇಟೆಯಾಡಿ +ಸಮಸ್ತ +ಬಲ +ಸಹಿತ
ಲೀಲೆ +ಮಿಗಲ್+ಆ+ ಪಾಂಡವರ+ ವನ
ವೇಲೆಯಲಿ +ನಿಸ್ಸಾಳ +ರಭಸದ
ಸೂಳ +ಸಂಕೇತದಲಿ +ನೃಪ +ಬಿಡಿಸಿದನು +ಪಾಳೆಯವ

ಅಚ್ಚರಿ:
(೧) ವನಾಳಿ, ವನವೇಲೆ – ಪದಗಳ ಬಳಕೆ