ಪದ್ಯ ೩: ಧರ್ಮಜನು ಏಕೆ ದುಃಖಿತನಾಗಿದ್ದನು?

ಎಹಗೆ ಸೈರಿಸಿ ನಿಂದರೋ ವ್ರಜ
ಮಹಿಳೆಯರು ಕೃಷ್ಣಾಂಘ್ರಿವಿರಹದ
ದಹನ ತಾಪಸ್ತಂಭಕೌಷಧದಾನಶೌಂಡರಿಗೆ
ಅಹಹ ಕೊಡುವೆನು ನನ್ನನೆನುತು
ಮ್ಮಹದ ಮೊನೆಮುರಿದವನಿಪತಿ ನಿ
ಸ್ಪೃಹೆಯಲಿದ್ದನು ರಾಜಕಾರ್ಯ ವಿಹಾರ ಲೀಲೆಗಳ (ಅರಣ್ಯ ಪರ್ವ, ೧೮ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮಜನು ಯೋಚಿಸುತ್ತಾ, ಗೋಪಿಕೆಯರ ಗುಂಪು ಶ್ರೀಕೃಷ್ಣನ ಅಗಲಿಕೆಯನ್ನು ಹೇಗೆ ಸಹಿಸಿದರೋ ಏನೋ! ಕೃಷ್ಣನ ಪಾದಕಮಲದ ವಿರಹದ ತಾಪಕ್ಕೆ ಔಷಧವನ್ನು ಕೊಡುವವರಿಗೆ ನನ್ನನ್ನೇ ತೆತ್ತೆನು ಎಂದು ಚಿಂತಿಸುತ್ತಾ, ಸಂತೋಷ ಸಂಭ್ರಮವು ಮುರಿದು ಹೋಗಲು, ರಾಜಕಾರಣ ವಿಹಾರಗಳೆಲ್ಲವನ್ನೂ ಒಲ್ಲದೆ ಸುಮ್ಮನ್ನಿದ್ದನು.

ಅರ್ಥ:
ಎಹಗೆ: ಹೇಗೆ; ಸೈರಿಸು: ತಾಳು, ಸಹಿಸು; ನಿಂದು: ನಿಲ್ಲು; ವ್ರಜ: ಗುಂಪು; ಮಹಿಳೆ: ಸ್ತ್ರೀ; ಅಂಘ್ರಿ: ಪಾದ; ವಿರಹ: ಬೇರೆ, ಅಗಲಿಕೆ; ದಹನ: ಸುಡುವಿಕೆ; ತಾಪ: ಬಿಸಿ; ಸ್ತಂಭ: ನಿರೋಧ; ಔಷಧ: ಮದ್ದು; ಶೌಂಡ: ಆಸಕ್ತಿಯುಳ್ಳವನು; ಕೊಡು: ನೀಡು; ಉಮ್ಮಹ: ಉತ್ಸಾಹ; ಮೊನೆ: ಮುಖ; ಮುರಿ: ಸೀಳು; ಅವನಿಪತಿ: ರಾಜ; ನಿಸ್ಪೃಹ: ಆಸೆ ಇಲ್ಲದವ; ರಾಜಕಾರ್ಯ: ರಾಜಕಾರಣ; ವಿಹಾರ: ಅಲೆದಾಟ; ಲೀಲೆ: ಆನಂದ, ಕ್ರೀಡೆ;

ಪದವಿಂಗಡಣೆ:
ಎಹಗೆ+ ಸೈರಿಸಿ +ನಿಂದರೋ +ವ್ರಜ
ಮಹಿಳೆಯರು +ಕೃಷ್ಣಾಂಘ್ರಿ+ವಿರಹದ
ದಹನ+ ತಾಪಸ್ತಂಭಕ್+ಔಷಧ+ದಾನ+ಶೌಂಡರಿಗೆ
ಅಹಹ+ ಕೊಡುವೆನು+ ನನ್ನನ್+ಎನುತ್
ಉಮ್ಮಹದ +ಮೊನೆ+ಮುರಿದ್+ಅವನಿಪತಿ +ನಿ
ಸ್ಪೃಹೆಯಲಿದ್ದನು +ರಾಜಕಾರ್ಯ +ವಿಹಾರ +ಲೀಲೆಗಳ

ಅಚ್ಚರಿ:
(೧) ಹೋಲಿಕೆಯನ್ನು ತೋರುವ ಪರಿ – ಎಹಗೆ ಸೈರಿಸಿ ನಿಂದರೋ ವ್ರಜಮಹಿಳೆಯರು ಕೃಷ್ಣಾಂಘ್ರಿವಿರಹದ ದಹನ

ನಿಮ್ಮ ಟಿಪ್ಪಣಿ ಬರೆಯಿರಿ