ಪದ್ಯ ೧: ಪಾಂಡವರು ಯಾವ ಸ್ಥಿತಿಯಲ್ಲಿದ್ದರು?

ಕೇಳು ಜನಮೇಜಯ ಧರಿತ್ರೀ
ಪಾಲ ನಿಜ ನಗರಕ್ಕೆ ಲಕ್ಷ್ಮೀ
ಲೋಲ ಬಿಜಯಂಗೈದನಿತ್ತಲು ಪಾಂಡು ನಂದನರು
ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು
ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ (ಅರಣ್ಯ ಪರ್ವ, ೧೮ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಶ್ರೀಕೃಷ್ಣನು ತನ್ನ ನಗರವಾದ ದ್ವಾರಕೆಗೆ ತೆರಳಿದನು, ಇತ್ತ ಪಾಂಡವರು ಮುಖದಲ್ಲಿ ಚಿಂತೆಯ ಜಾಲ ವ್ಯಕ್ತವಾಯಿತು, ಮನಸ್ಸು ಭಾರವಗಿ ಮತ್ತೆ ಮತ್ತೆ ನಿಟ್ಟುಸಿರು ಹೊರಹೊಮ್ಮುತ್ತಾ ಮೂಗಿನ ಮೇಲೆ ಬೆರಳಿಟ್ಟು ಚಿಂತಿಸುತ್ತಿದ್ದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ನಿಜ: ತನ್ನ; ನಗರ: ಊರು; ಲಕ್ಷ್ಮೀಲೋಲ: ಲಕ್ಷ್ಮಿಗೆ ಪ್ರಿಯನಾದವ (ಕೃಷ್ಣ); ಬಿಜಯಂಗೈ: ತೆರಳು; ನಂದನ: ಮಕ್ಕಳು; ಮೇಲು: ಹೆಚ್ಚಿನ; ದುಗುಡ: ದುಃಖ; ಮುಖ: ಆನನ; ಚಿಂತೆ: ಯೋಚನೆ; ಜಾಲ: ಬಲೆ, ಕಪಟ; ಜಡ: ಆಲಸ್ಯ, ಜಡತ್ವ; ಮನ: ಮನಸ್ಸು; ಸೂಳು: ಸರದಿ, ಸಮಯ, ಆರ್ಭಟ; ಸುಯ್ಲು: ನಿಟ್ಟುಸಿರು; ಹೊಯ್ಲ: ಏಟು, ಹೊಡೆತ; ನಾಸಾಪುಟ: ಮೂಗಿನ ಮೇಲೆ; ಬೆರಳು: ಅಂಗುಲಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ನಿಜ +ನಗರಕ್ಕೆ+ ಲಕ್ಷ್ಮೀ
ಲೋಲ +ಬಿಜಯಂಗೈದನ್+ಇತ್ತಲು +ಪಾಂಡು +ನಂದನರು
ಮೇಲು +ದುಗುಡದ +ಮುಖದ +ಚಿಂತೆಯ
ಜಾಳಿಗೆಯ +ಜಡಮನದಲ್+ಇದ್ದರು
ಸೂಳು +ಸುಯ್ಲಿನ +ಹೊಯ್ಲ +ನಾಸಾಪುಟದ+ ಬೆರಳಿನಲಿ

ಅಚ್ಚರಿ:
(೧) ಚಿಂತೆಯನ್ನು ವಿವರಿಸುವ ಪರಿ – ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ

ನಿಮ್ಮ ಟಿಪ್ಪಣಿ ಬರೆಯಿರಿ