ಪದ್ಯ ೪೯: ಧರ್ಮಜನು ದೂರ್ವಾಸ ಮುನಿಗಳಿಗೆ ಏನು ಹೇಳಿದನು?

ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಖಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನ ಸಖನಪರಾಂಬುರಾಶಿಯ
ನಿಲುಕುತೈದನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆಂದ ಯಮಸೂನು (ಅರಣ್ಯ ಪರ್ವ, ೧೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧರ್ಮಜನು ಮುನಿಗಳ ಮಾತುಗಳನ್ನು ಕೇಳಿ, ಮುನೀಶ್ವರ ನಿಮ್ಮ ಮಾತು ತಪ್ಪದೆ ನಿಲ್ಲುವಂತಹದು, ಈ ಲೋಕ ಪರಲೋಕಗಳ ತಗಿಯ ನಿಮ್ಮ ಭಕ್ತಿ ಕೃಷ್ನನ ಒಲುಮೆಗಳಿರುವಾಗ ನಿಶ್ಚಿತವಾಗಿ ದೊರಕುತ್ತದೆ, ನಿಮಗೆ ಅಸಾಧ್ಯವೆನ್ನುವುದಿಲ್ಲ. ಈಗ ಸೂರ್ಯನು ಇನ್ನೇನು ಮುಳುಗಲಿದ್ದಾನೆ, ಮುನಿವೃಂದವು ಹಸಿದಿದೆ. ದಯೆಯಿಟ್ಟು ಊಟಕ್ಕೆ ದಯಮಾಡಿ ಎಂದು ಧರ್ಮಜನು ಮುನಿವೃಂದವನ್ನು ಆಹ್ವಾನಿಸಿದನು.

ಅರ್ಥ:
ಮುನಿ: ಋಷಿ; ನುಡಿ: ಮಾತು; ಸ್ಖಲಿತ: ತಪ್ಪಾದ; ಇಹಪರ: ಈ ಲೋಕ ಮತ್ತು ಪರಲೋಕ; ಗತಿ: ಇರುವ ಸ್ಥಿತಿ, ಅವಸ್ಥೆ; ಒಲವು: ಸ್ನೇಹ, ಪ್ರೀತಿ; ಕೂರ್ಮೆ: ಪ್ರೀತಿ, ನಲ್ಮೆ; ಅರಿ: ನಾಶಮಾಡು; ನಳಿನ: ಕಮಲ; ಸಖ: ಸ್ನೇಹಿತ; ಅಪರ: ಪಶ್ಚಿಮದಿಕ್ಕು; ಅಂಬುರಾಶಿ: ಸಮುದ್ರ; ಅಂಬು: ನೀರು; ನಿಲುಕು: ಹತ್ತಿರ, ಸನ್ನಿಹಿತ; ಐದು: ಹೋಗಿಸೇರು; ಹಸಿ:ಆಹಾರವನ್ನು ಬಯಸು, ಹಸಿವಾಗು; ಮುನಿ: ಋಷಿ; ಬಳಗ: ಗುಂಪು; ಆರೋಗಣೆ: ಊಟ, ಭೋಜನ; ಚಿತ್ತವಿಸು: ಗಮನಕೊಡು; ಸೂನು: ಮಗ;

ಪದವಿಂಗಡಣೆ:
ಎಲೆ +ಮುನೀಶ್ವರ +ನಿಮ್ಮ +ನುಡಿಯ
ಸ್ಖಲಿತವಿದು +ಇಹಪರದ +ಗತಿ +ನಿನ್
ಒಲವು +ಕೃಷ್ಣನ +ಕೂರ್ಮೆಯಿರಲ್+ಇನ್ನಾವುದ್+ಅರಿದೆಮಗೆ
ನಳಿನ +ಸಖನ್+ಅಪರ+ಅಂಬುರಾಶಿಯ
ನಿಲುಕುತ್+ಐದನೆ +ಹಸಿದುದೀ+ ಮುನಿ
ಬಳಗವ್+ಆರೋಗಣೆಗೆ +ಚಿತ್ತವಿಸೆಂದ +ಯಮಸೂನು

ಅಚ್ಚರಿ:
(೧) ಸಂಜೆಯಾಯಿತು ಎಂದು ಹೇಳಲು – ನಳಿನಸಖನಪರಾಂಬುರಾಶಿಯನಿಲುಕುತೈದನೆ
(೨) ಸಮುದ್ರವನ್ನು ಅಂಬುರಾಶಿ, ಸೂರ್ಯನನ್ನು ನಳಿನಸಖ ಎಂದು ಕರೆದಿರುವುದು

ಪದ್ಯ ೪೮: ದೂರ್ವಾಸ ಮುನಿಗಳು ಪಾಂಡವರಿಗೆ ಏನು ಹೇಳಿದರು?

ಮೈವಶವ ಮಾಡಿದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ
ಕಾವನೈ ನಿಮ್ಮೈವರನು ಕೈ
ಗಾವನೈ ವರರಾಜ್ಯಲಕುಮಿಯ
ಕೈವಿಡಿವ ಸಂಕಲ್ಪ ಸಿದ್ಧಿಪುದೆಂದನಾ ಮುನಿಪ (ಅರಣ್ಯ ಪರ್ವ, ೧೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ನೀವು ಪರದೈವವನ್ನು ಕೈವಶಪಡಿಸಿಕೊಂಡಿರುವಿರಿ, ಶ್ರೀಕೃಷ್ಣನು ಭೀಮಾರ್ಜುನರ ಅಸ್ತ್ರಗಳಿಂದ ಕುರುಕುಲದ ಬೇರನ್ನೇ ಕೊಯ್ಯುತ್ತಾನೆ. ನಿಮ್ಮನ್ನು ಕಾಪಾಡುತ್ತಾನೆ, ರಾಜ್ಯಲಕ್ಷ್ಮಿಯನ್ನು ಕೈಹಿಡಿಯುವ ನಿಮ್ಮ ಸಂಕಲ್ಪ ಸಿದ್ಧಿಸುತ್ತದೆ ಎಂದು ದೂರ್ವಾಸನು ಹೇಳಿದನು.

ಅರ್ಥ:
ಮೈವಶ: ಅಧೀನವಾಗು; ಪರದೈವ: ಭಗವಂತ; ಕುಲ: ವಂಶ; ಕೊಯ್: ಸಿಳು; ಹರಿ: ವಿಷ್ಣು; ಬಳಿ: ಹತ್ತಿರ; ಸಲಿಸು: ಪೂರೈಸು; ಅಸ್ತ್ರ: ಆಯುಧ; ಕಾವು: ರಕ್ಷಿಸು; ಕೈಗಾವು: ದೊರಕು; ವರ: ಶ್ರೇಷ್ಠ; ರಾಜ್ಯ: ದೇಶ; ಲಕುಮಿ: ಲಕ್ಷ್ಮಿ, ಐಶ್ವರ್ಯ; ಕೈವಿಡಿ: ದೊರಕು; ಸಂಕಲ್ಪ: ನಿರ್ಧಾರ, ನಿರ್ಣಯ; ಸಿದ್ಧಿಸು: ಈಡೇರು; ಮುನಿ: ಋಷಿ;

ಪದವಿಂಗಡಣೆ:
ಮೈವಶವ+ ಮಾಡಿದಿರಲೇ +ಪರ
ದೈವವನು +ಕುರುಕುಲದ+ ಬೇರನು
ಕೊಯ್ವನೀ +ಹರಿ+ ಬಳಿಸಲಿಸಿ+ ಭೀಮಾರ್ಜುನ+ಅಸ್ತ್ರದಲಿ
ಕಾವನೈ +ನಿಮ್ಮೈವರನು +ಕೈ
ಗಾವನೈ+ ವರರಾಜ್ಯ+ಲಕುಮಿಯ
ಕೈವಿಡಿವ +ಸಂಕಲ್ಪ +ಸಿದ್ಧಿಪುದೆಂದನಾ +ಮುನಿಪ

ಅಚ್ಚರಿ:
(೧) ಕೈಗಾವನೈ, ಕೈವಿಡಿ – ಪದಗಳ ಬಳಕೆ

ಪದ್ಯ ೪೭: ದೂರ್ವಾಸ ಮುನಿಗಳು ದ್ರೌಪದಿಯನ್ನು ಹೇಗೆ ಹರಸಿದರು?

ತುಂಬಿ ಕುಳ್ಳಿರ್ದಖಿಳಮುನಿ ನಿಕು
ರುಂಬ ಸಭೆಯೊಳಗಿರ್ದ ಮುನಿಪಂ
ಗಂಬುಜಾನನೆ ನಮಿಸೆ ಹರಸಿದನೈದೆಯಾಗೆನುತ
ಹಂಬಲಿಸುತಿಹ ನಿಗಮಶಾಸ್ತ್ರಗ
ಳಿಂಬುಗಾಣದ ಗಾಢದೈವದ
ಬೆಂಬಳಿಯಲಿರಲಿನ್ನದಾವುದಸಾಧ್ಯ ನಿಮಗೆಂದ (ಅರಣ್ಯ ಪರ್ವ, ೧೭ ಸಂಧಿ, ೪೭ ಪದ್ಯ)

ತಾತ್ಪರ್ಯ:
ತುಂಬಿದ ಋಷಿಸಭೆಯಲ್ಲಿದ್ದ ಮುನಿಶ್ರೇಷ್ಠನಾದ ದೂರ್ವಾಸನಿಗೆ ದ್ರೌಪದಿಯು ನಮಸ್ಕರಿಸಲು ಸುಮಂಗಲಿಯಾಗು ಎಂದು ಹರಸಿದನು. ಪಾಂಡವರಿಗೆ ವೇದ ಶಾಸ್ತ್ರಗಳು ಹಂಬಲಿಸಿದರೂ ಯಾವ ಪರಮಾತ್ಮನನ್ನು ಕಾಣಲಿಲ್ಲವೋ, ಅಂತಹವನು ನಿಮ್ಮ ಬೆನ್ನಹಿಂದಿರಲು ನಿಮಗೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ ಎಂದು ಹೇಳಿದನು.

ಅರ್ಥ:
ತುಂಬು: ಭರ್ತಿ; ಕುಳ್ಳಿರ್ದು: ಆಸೀನನಾಗು; ಮುನಿ: ಋಷಿ; ನಿಕುರುಂಬ: ಸಮೂಹ; ಸಭೆ: ಓಲಗ, ದರ್ಬಾರು; ಮುನಿ: ಋಷಿ; ಅಂಬುಜಾನನೆ: ಕಮಲದಂತ ಮುಖ; ನಮಿಸು: ಕೈಮುಗಿ; ಹರಸು: ಆಶೀರ್ವದಿಸು; ಐದೆ: ಮುತ್ತೈದೆ; ಹಂಬಲಿಸು: ಹಾತೊರೆ; ನಿಗಮ: ವೇದ; ಶಾಸ್ತ್ರ: ಧಾರ್ಮಿಕ ವಿಷಯ, ತತ್ವಗಳ ಬಗೆಗೆ ಬರೆದ ಪ್ರಮಾಣ ಗ್ರಂಥ; ಇಂಬು: ಎಡೆ, ಆಶ್ರಯ; ಗಾಢ: ಹೆಚ್ಚಳ, ಅತಿಶಯ; ದೈವ: ಭಗವಂತ; ಬೆಂಬಳಿ: ಬೆನ್ನಹಿಂದೆ ರಕ್ಷಣೆ; ಅಸಾಧ್ಯ: ಶಕ್ಯವಲ್ಲದುದು;

ಪದವಿಂಗಡಣೆ:
ತುಂಬಿ +ಕುಳ್ಳಿರ್ದ್+ಅಖಿಳ+ಮುನಿ +ನಿಕು
ರುಂಬ +ಸಭೆಯೊಳಗಿರ್ದ+ ಮುನಿಪಂಗ್
ಅಂಬುಜಾನನೆ +ನಮಿಸೆ +ಹರಸಿದನ್ +ಐದೆಯಾಗೆನುತ
ಹಂಬಲಿಸುತಿಹ+ ನಿಗಮ+ಶಾಸ್ತ್ರಗಳ್
ಇಂಬುಗಾಣದ +ಗಾಢ+ದೈವದ
ಬೆಂಬಳಿಯಲ್+ಇರಲ್+ಇನ್ನದಾವುದ್+ಅಸಾಧ್ಯ +ನಿಮಗೆಂದ

ಅಚ್ಚರಿ:
(೧) ಹರಸುವ ಪರಿ – ಐದೆಯಾಗೆನುತ
(೨) ಅಸಾಧ್ಯ ಕಾರ್ಯ ಎಂದು ಸಾಧಿಸಬಹುದು – ಗಾಢದೈವದಬೆಂಬಳಿಯಲಿರಲಿನ್ನದಾವುದಸಾಧ್ಯ

ಪದ್ಯ ೪೬: ದೂರ್ವಾಸ ಮುನಿಗಳು ಎಲ್ಲಿ ಆಸೀನರಾದರು?

ಮುನಿಪನಿರ್ದನು ಕುಶೆಯ ಪೀಠದ
ದನುಜಹರ ಕೆಲಕಡೆಯಲಾತನ
ಕೊನೆಯಲೈವರು ಬಳಿಕ ಬುಧಜನರವರ ಮಧ್ಯದಲಿ
ತನತನಗೆ ದೂರ್ವಾಸನಾಜ್ಞೆಯೊ
ಳನಿತು ಅಷ್ಠಾಶೀತಿ ಸಾವಿರ
ಮುನಿಗಳಿರಲಂದಬಲೆ ಬಂದಳು ಹರುಷಭಾವದಲಿ (ಅರಣ್ಯ ಪರ್ವ, ೧೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಕುಶಾಸ್ತರಣದ ಮೇಲೆ ಕುಳಿತರು. ಪಕ್ಕದಲ್ಲಿ ಶ್ರೀಕೃಷ್ಣ, ಅವನ ಪಕ್ಕದಲ್ಲಿ ಪಾಂಡವರು, ಬಳಿಕ ಧರ್ಮಜನ ಪರಿವಾರದ ಬ್ರಾಹ್ಮಣರೂ, ಎಂಬತ್ತೆಂಟು ಸಾವಿರ ಋಷಿಗಳು ದೂರ್ವಾಸನಾಜ್ಞೆಯಂತೆ ಕುಳಿತರು. ಆಗ ದ್ರೌಪದಿಯು ಹರ್ಷದಿಂದ ಅಲ್ಲಿಗೆ ಬಂದಳು.

ಅರ್ಥ:
ಮುನಿ: ಋಷಿ; ಕುಶೆ: ದರ್ಬೆ; ಪೀಠ: ಆಸನ; ದನುಜ: ರಾಕ್ಷಸ; ಕೆಲ: ಪಕ್ಕ, ಮಗ್ಗುಲು; ಕೊನೆ: ಅಂತ್ಯ; ಬಳಿಕ: ನಂತರ; ಬುಧಜನ: ಬ್ರಾಹ್ಮಣ; ಮಧ್ಯ: ನಡುವೆ; ಅಷ್ಟಾಶೀತಿ: ಎಂಬತ್ತೆಂಟು ಸಾವಿರ; ಸಾವಿರ: ಸಹಸ್ರ; ಮುನಿ: ಋಷಿ; ಅಬಲೆ: ಹೆಣ್ಣು; ಬಂದಳು: ಆಗಮಿಸು; ಹರುಷ: ಸಂತಸ; ಭಾವ: ಮನೋಧರ್ಮ;

ಪದವಿಂಗಡಣೆ:
ಮುನಿಪನಿರ್ದನು +ಕುಶೆಯ +ಪೀಠದ
ದನುಜಹರ+ ಕೆಲಕಡೆಯಲ್+ಆತನ
ಕೊನೆಯಲ್+ಐವರು +ಬಳಿಕ+ ಬುಧಜನರ್+ಅವರ +ಮಧ್ಯದಲಿ
ತನತನಗೆ +ದೂರ್ವಾಸನ್+ಆಜ್ಞೆಯೊಳ್
ಅನಿತು +ಅಷ್ಠಾಶೀತಿ+ ಸಾವಿರ
ಮುನಿಗಳಿರಲಂದ್+ಅಬಲೆ +ಬಂದಳು +ಹರುಷ+ಭಾವದಲಿ

ಅಚ್ಚರಿ:
(೧) ಕೃಷ್ಣನನ್ನು ದನುಜಹರ, ದ್ರೌಪದಿಯನ್ನು ಅಬಲೆ ಎಂದು ಕರೆದಿರುವುದು

ಪದ್ಯ ೪೫: ದೂರ್ವಾಸ ಮುನಿಗಳು ಕೃಷ್ಣನನ್ನು ಕುಳಿತುಕೋಳ್ಳಲು ಏಕೆ ಹೇಳಿದರು?

ಯತಿಗಳೈತರೆ ಗಾರುಹಸ್ತ್ಯ
ವ್ರತಿಯು ವಂದಿಸಬೇಹುದಾ ಪ
ದ್ಧತಿ ತೋರುವ ಪಥವಿದೈ ಸಲೆ ನೀನು ವಂದಿಪುದು
ಅತಿ ಸಹಜವೈ ಕೃಷ್ಣ ಕುಳ್ಳಿರು
ಶ್ರುತಿ ಶಿರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತವೆ ಮನಿಪ ಮಂಡಿಸಿದ (ಅರಣ್ಯ ಪರ್ವ, ೧೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಕೃಷ್ಣನು ನಮಸ್ಕರಿಸಿದುದನ್ನು ಕಂಡು, ಯತಿಗಳನ್ನು ಕಂಡೊಡನೆ, ಗೃಹಸ್ಥಾಶ್ರಮಿಯು ವಂದಿಸಬೇಕೆಂಬುದು ಪದ್ಧತಿ, ಅದನ್ನು ನೀನು ತೋರಿಸುತ್ತಿರುವೆ, ನಿನ್ನ ವರ್ತನೆ ಸಹಜವೇ? ಕೃಷ್ನ ನೀನು ಉಪನಿಷ್ತ್ಪ್ರತಿಪಾದ್ಯನಾದ ಪರಬ್ರಹ್ಮನೇ ಆಗಿರುವೆ, ನೀನು ಕುಳಿತುಕೋ, ಗೃಹಸ್ಥನೆಂದು ನತಿಸುವವನೇ ಕುಳಿತುಕೋ ಎಂದು ಶ್ರೀಕೃಷ್ಣನಿಗೆ ಹೇಳಿದರು.

ಅರ್ಥ:
ಯತಿ: ಮುನಿ; ಐತರು: ಬಂದು ಸೇರು; ಗಾರುಹಸ್ತ್ಯ: ಗೃಹಸ್ತ; ವ್ರತಿ: ವ್ರತವನ್ನು ಪಾಲಿಸುವವ; ವಂದಿಸು: ನಮಸ್ಕರಿಸು; ಪದ್ಧತಿ: ರೂಢಿ; ತೋರು: ಗೋಚರಿಸು; ಪಥ: ಮಾರ್ಗ; ಸಲೆ: ಸರಿಯಾಗಿ, ತಕ್ಕಂತೆ; ವಂದಿಸು: ನಮಸ್ಕರಿಸು; ಸಹಜ: ಸ್ವಾಭಾವಿಕವಾದುದು; ಕುಳ್ಳಿರು: ಕೂತುಕೋ; ಶ್ರುತಿ: ವೇದ; ಶಿರೋಮಣಿ: ತಿಲಕಪ್ರಾಯ; ವ್ಯಾಹೃತಿ: ಯಜ್ಞಸಮಯದಲ್ಲಿ ಉಚ್ಚರಿಸುವ, ಭೋ, ಬುವಃ ಸ್ವಃ ಇತ್ಯಾದಿ ಶಬ್ದಗಳು; ಗೃಹಸ್ತ: ಗೃಹಸ್ಥಾಶ್ರಮವನ್ನು ಪಾಲಿಸುವವ; ಮುನಿ: ಋಷಿ; ಮಂಡಿಸು: ಕುಳಿತುಕೊಳ್ಳು;

ಪದವಿಂಗಡಣೆ:
ಯತಿಗಳ್+ಐತರೆ +ಗಾರುಹಸ್ತ್ಯ
ವ್ರತಿಯು +ವಂದಿಸಬೇಹುದಾ +ಪ
ದ್ಧತಿ +ತೋರುವ +ಪಥವಿದೈ+ ಸಲೆ+ ನೀನು +ವಂದಿಪುದು
ಅತಿ+ ಸಹಜವೈ +ಕೃಷ್ಣ +ಕುಳ್ಳಿರು
ಶ್ರುತಿ+ ಶಿರೋಮಣಿ +ಕುಳ್ಳಿರೈ +ವ್ಯಾ
ಹೃತ +ಗೃಹಸ್ಥನು +ಕುಳ್ಳಿರ್+ಎನುತವೆ +ಮನಿಪ +ಮಂಡಿಸಿದ

ಅಚ್ಚರಿ:
(೧) ಕೃಷ್ಣನನ್ನು ಕುಳ್ಳಿರೆಂದು ಹೇಳುವ ಪರಿ – ಕೃಷ್ಣ ಕುಳ್ಳಿರು ಶ್ರುತಿ ಶಿರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತ

ಪದ್ಯ ೪೩: ದೂರ್ವಾಸ ಮುನಿಗಳು ಯಾರನ್ನು ಭೇಟಿ ಮಾಡಿದರು?

ಬಂದನೇ ಗೋವಿಂದ ಭಕ್ತರ
ಬಂಧುವಲ್ಲಾತನೊಳು ಮನಸಿಗೆ
ಸಂದ ಮನುಜರ ಸೆಣಸಮಾಡುವರಾರು ಭುವನದಲಿ
ಎಂದೆನುತ ದೂರ್ವಾಸ ಮುನಿಪತಿ
ಬಂದು ಕಂಡನು ಕೃಷ್ಣರಾಯನ
ನಂದು ಕುಂತೀಸುತ ಸಹಾಯನ ಪರ್ಣಶಾಲೆಯಲಿ (ಅರಣ್ಯ ಪರ್ವ, ೧೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನನ್ನು ತನ್ನ ದಿವ್ಯ ದೃಷ್ಟಿಯಲ್ಲಿ ನೋಡಿದ ದೂರ್ವಾಸರು, ಶ್ರೀಕೃಷ್ಣನು ಆಗಮಿಸಿದನಲ್ಲವೇ? ಅವನು ಭಕ್ತರ ಬಂಧು. ಅವನು ಮನಸ್ಸಿನಲ್ಲಿ ಮೆಚ್ಚಿದ ಭಕ್ತರೊಡನೆ ಲೋಕದಲ್ಲಿ ಸೆಣಸುವವರಾರು? ಎಂದು ಯೋಚಿಸುತ್ತಾ ದೂರ್ವಾಸನು ಧರ್ಮರಾಯನ ಪರ್ಣಶಾಲೆಗೆ ಬಂದು ಕುಂತೀಸುತರಿಗೆ ಸಹಾಯಕನಾದ ಶ್ರೀಕೃಷ್ಣನನ್ನು ನೋಡಿದನು.

ಅರ್ಥ:
ಬಂದು: ಆಗಮಿಸು; ಗೋವಿಂದ: ಕೃಷ್ಣ; ಭಕ್ತ: ಆರಾಧಕ; ಬಂಧು: ಹತ್ತಿರದವ, ಸಂಬಂಧಿಕ; ಮನಸು: ಮನಸ್ಸು; ಸಂದ: ಮೆಚ್ಚು; ಮನುಜ: ಮಾನವ; ಸೆಣಸು: ಹೋರಾಡು; ಭುವನ: ಭೂಮಿ; ಮುನಿ: ಋಷಿ; ಕಂಡು: ನೋಡು; ರಾಯ: ರಾಜ; ಸುತ: ಮಕ್ಕಳು; ಸಹಾಯ: ನೆರವು; ಪರ್ಣಶಾಲೆ: ಕುಟೀರ;

ಪದವಿಂಗಡಣೆ:
ಬಂದನೇ +ಗೋವಿಂದ +ಭಕ್ತರ
ಬಂಧುವಲ್ಲಾ+ಆತನೊಳು +ಮನಸಿಗೆ
ಸಂದ +ಮನುಜರ +ಸೆಣಸ+ಮಾಡುವರಾರು+ ಭುವನದಲಿ
ಎಂದೆನುತ+ ದೂರ್ವಾಸ +ಮುನಿಪತಿ
ಬಂದು +ಕಂಡನು +ಕೃಷ್ಣ+ರಾಯನನ್
ಅಂದು +ಕುಂತೀಸುತ +ಸಹಾಯನ +ಪರ್ಣಶಾಲೆಯಲಿ

ಅಚ್ಚರಿ:
(೧) ಬಂದು, ಅಂದು, ಬಂಧು – ಪ್ರಾಸ ಪದಗಳು
(೨) ಕೃಷ್ಣನನ್ನು ಹೊಗಳುವ ಪರಿ – ಭಕ್ತರ ಬಂಧು, ಕುಂತೀಸುತ ಸಹಾಯನ

ಪದ್ಯ ೪೪: ದೂರ್ವಾಸನು ಕೃಷ್ಣನನ್ನು ಹೇಗೆ ಭೇಟಿಯಾದನು?

ಕಾಣುತಿದಿರೆದ್ದಸುರ ಮರ್ದನ
ಕಾಣಿಕೆಯನಿತ್ತೆರಗಿ ಹೋ ಹೋ
ಸ್ಥಾಣುವಿನ ಬರವೆತ್ತಣಿಂದಾಯ್ತೆನುತ ಕೈಮುಗಿಯೆ
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ (ಅರಣ್ಯ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ದೂರ್ವಾಸನು ಬಂದುದನ್ನು ನೋಡಿ, ಶ್ರೀಕೃಷ್ಣನು ಎದುರಾಗಿ ಹೋಗಿ ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿ, ಹೋ ಹೋ ಸ್ಥಾಣುವಿನ ಬರವು ಯಾವ ಕಡೆಯಿಂದ ಆಯಿತು ಎನ್ನಲು, ದೂರ್ವಾಸನು, ಕೃಷ್ಣ ಮಾನವ ಅವತಾರದಲ್ಲಿ ನಾಟಕವಾಡಿ ನಮ್ಮನ್ನು ನಾಚಿಸಬೇಡ. ನೀನು ಬಹು ಜಾಣ ಎಂದು ಮುನ್ನುಗ್ಗಿ ಕೃಷ್ಣನನ್ನು ಅಪ್ಪಿಕೊಂಡನು.

ಅರ್ಥ:
ಕಾಣು: ತೋರು; ಅಸುರ: ರಾಕ್ಷಸ; ಮರ್ದನ: ನಾಶ, ಸಾವು; ಕಾಣಿಕೆ: ಉಡುಗೊರೆ; ಎರಗು: ನಮಸ್ಕರಿಸು; ಸ್ಥಾಣು: ಶಿವ, ಭದ್ರವಾದ; ಬರವು: ಆಗಮನ; ಕೈಮುಗಿ: ನಮಸ್ಕರಿಸು; ಮಾಣು: ನಿಲ್ಲು; ಮಾಧವ: ಕೃಷ್ಣ; ನಿಲ್ಲು: ತಡೆ; ಮಾನವ: ಮನುಷ್ಯ; ಆಣೆ: ಅಪ್ಪಣೆ; ನಾಟಕ: ನಟನೆ, ನಿಜವಲ್ಲದ; ನುಡಿ: ಮಾತು; ಜಾಣ: ಬುದ್ಧಿವಂತ; ಮುನಿ: ಋಷಿ; ಹಾಯ್ದು: ಚಾಚು, ಮೇಲೆಬೀಳು; ಅಪ್ಪು: ತಬ್ಬಿಕೋ; ಹರಿ: ಕೃಷ್ಣ;

ಪದವಿಂಗಡಣೆ:
ಕಾಣುತ್+ಇದಿರೆದ್+ಅಸುರ +ಮರ್ದನ
ಕಾಣಿಕೆಯನಿತ್+ಎರಗಿ+ ಹೋ +ಹೋ
ಸ್ಥಾಣುವಿನ+ ಬರವ್+ಎತ್ತಣಿಂದಾಯ್ತ್+ಎನುತ +ಕೈಮುಗಿಯೆ
ಮಾಣು +ಮಾಧವ +ನಿಲ್ಲು +ಮಾನವನ್
ಆಣೆಯದ +ನಾಟಕದ+ ನುಡಿಯಿದು
ಜಾಣ+ ನೀನಹೆ+ಎನುತ +ಮುನಿ +ಹಾಯ್ದಪ್ಪಿದನು +ಹರಿಯ

ಅಚ್ಚರಿ:
(೧) ಅಸುರಮರ್ದನ, ಮಾಧವ, ಹರಿ – ಕೃಷ್ಣನನ್ನು ಕರೆದ ಪರಿ
(೨) ಎರಗು, ಕೈಮುಗಿ – ಸಮನಾರ್ಥಕ ಪದಗಳು