ಪದ್ಯ ೧೯: ಮಾರ್ಕಂಡೇಯ ಮುನಿಗಳು ಎಲ್ಲಿಗೆ ಪ್ರಯಾಣ ಬಳಸಿದರು?

ಎಂದು ಮಾರ್ಕಂಡೇಯ ಮುನಿ ಯಮ
ನಂದನನನಿತಿಹಾಸ ಕಥೆಗಳ
ಲಂದವಿಟ್ಟನು ಚಿತ್ತವನು ಖಯಖೋಡಿಗಳ ಕಳೆದು
ಕಂದು ಕಸರಿಕೆಯೇಕೆ ನಿಮಗೆ ಮು
ಕುಂದನೊಲವಿದೆ ಬಯಕೆ ಬೇರೇ
ಕೆಂದು ಮಾರ್ಕಂಡೇಯ ನಾರದರಡರಿದರು ನಭವ (ಅರಣ್ಯ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಹೀಗೆ ಮಾರ್ಕಂಡೇಯ ಮುನಿಯು ಇತಿಹಾಸ ಕಥೆಗಳಿಂದ ಧರ್ಮಜನ ಮನಸ್ಸಿನ ಚಿಂತೆ, ಕಳವಳಗಳನ್ನು ಕಳೆದು ಸಂತೋಷ ಪಡಿಸಿದನು. ನಿಮಗೆ ಶ್ರೀಕೃಷ್ಣನ ಒಲವಿದೆ. ಮನಸ್ಸಿನಲ್ಲಿ ಚಿಂತೆ ದುಗುಡಗಳು ಬೇಡ, ಅವನೊಲವಿದ್ದ ಮೇಲೆ ಏತಕ್ಕೂ ಚಿಂತಿಸಬೇಡಿರಿ ಎಂದು ಹೇಳಿ ಮಾರ್ಕಂಡೇಯ ಮುನಿಗಳು ಮತ್ತು ನಾರದರು ಆಕಾಶಮಾರ್ಗದಲ್ಲಿ ಹೊರಟು ಹೋದರು.

ಅರ್ಥ:
ಮುನಿ: ಋಷಿ; ನಂದನ: ಮಗ; ಇತಿಹಾಸ: ಚರಿತ್ರೆ; ಕಥೆ: ವೃತ್ತಾಮ್ತ; ಅಂದವಿಡು: ಅಲಂಕರಿಸು; ಚಿತ್ತ: ಮನಸ್ಸು; ಖಯಖೋಡಿ: ಅಳುಕು, ಅಂಜಿಕೆ; ಕಳೆದು: ದೂರಮಾಡು; ಕಂದು: ಕಳಾಹೀನ; ಕಸರು: ತೊಂದರೆ; ಒಲವು: ಪ್ರೀತಿ; ಬಯಕೆ: ಇಷ್ಟ; ಅಡರು: ಮೇಲಕ್ಕೆ ಹತ್ತು; ನಭ: ಆಗಸ;

ಪದವಿಂಗಡಣೆ:
ಎಂದು +ಮಾರ್ಕಂಡೇಯ +ಮುನಿ +ಯಮ
ನಂದನನನ್+ಇತಿಹಾಸ +ಕಥೆಗಳಲ್
ಅಂದವಿಟ್ಟನು +ಚಿತ್ತವನು +ಖಯಖೋಡಿಗಳ +ಕಳೆದು
ಕಂದು +ಕಸರಿಕೆ+ಏಕೆ +ನಿಮಗೆ+ ಮು
ಕುಂದನ್+ಒಲವಿದೆ +ಬಯಕೆ+ ಬೇರೇ
ಕೆಂದು+ ಮಾರ್ಕಂಡೇಯ +ನಾರದರ್+ಅಡರಿದರು +ನಭವ

ಅಚ್ಚರಿ:
(೧) ಎಂದು, ಕಂದು; ನಂದನ, ಮುಕುಂದನ – ಪದಗಳ ಬಳಕೆ

ಪದ್ಯ ೧೮: ಯಾರ ಬೆನ್ನಲ್ಲಿ ಜಯವಿರುತ್ತದೆ?

ಬಾಹುಬಲ ಬಲವಲ್ಲ ದೈವ
ದ್ರೋಹಿಗಳಿಗೆ ಸುಧರ್ಮನಿಷ್ಠರ
ಸಾಹಸವು ಇರದಾದಡೆಯು ಕೊಯ್ವರು ವಿರೋಧಿಗಳ
ಆ ಹರಾತ್ಮಜ ಹಸುಳೆ ತನದ
ವ್ಯೂಹದಲಿ ತಾರಕನನಿಕ್ಕನೆ
ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ (ಅರಣ್ಯ ಪರ್ವ, ೧೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ದೈವದ್ರೋಹಿಗಳ ಬಾಹುಬಲವು ಬಲವಲ್ಲ. ಧರ್ಮನಿಷ್ಠರ ಬಲವು ಸ್ವಲ್ಪವಾದರೂ ವಿರೋಧಿಗಳನ್ನು ಸಂಹರಿಸುತ್ತಾರೆ. ಶಿವನ ಪುತ್ರನಾದ ಗುಹನು ಶಿಶುವಾಗಿದ್ದಾಗಲೇ ಮಹಾಬಲಶಾಲಿಯಾದ ತಾರಕನನ್ನು ಸಂಹರಿಸಲಿಲ್ಲವೇ? ಯುದ್ಧದಲ್ಲಿ ಧರ್ಮಕ್ಕೆ ಜಯವು ದೊರಕುತ್ತದೆ, ಧರ್ಮದ ಬೆನ್ನಲ್ಲಿ ಜಯ ಎಂದು ಮಾರ್ಕಂಡೆಯ ಮುನಿಗಳು ಹೇಳಿದರು.

ಅರ್ಥ:
ಬಾಹುಬಲ: ತೋಳ್ಬಲ; ಬಲ: ಶಕ್ತಿ; ದೈವ: ಭಗವಂತ; ದ್ರೋಹಿ: ವಂಚಕ; ಸುಧರ್ಮ: ಒಳ್ಳೆಯ ನಡತೆ; ನಿಷ್ಠ: ಶ್ರದ್ಧೆ; ಸಾಹಸ: ಪರಾಕ್ರಮ; ಕೊಯ್ವು: ಕೊಲ್ಲು; ವಿರೋಧಿ: ಶತ್ರು; ಹರಾತ್ಮಜ: ಶಿವನ ಮಗ (ಷಣ್ಮುಖ); ಹಸುಳೆ: ಚಿಕ್ಕ ಮಗು; ವ್ಯೂಹ: ತಂತ್ರ, ಕೈವಾಡ; ಇಕ್ಕು: ಇರಿ; ಆಹವ: ಯುದ್ಧ; ಜಯ: ಗೆಲುವು; ಸಿರಿ: ಐಶ್ವರ್ಯ; ಬೆನ್ನು: ಹಿಂಭಾಗ;

ಪದವಿಂಗಡಣೆ:
ಬಾಹುಬಲ+ ಬಲವಲ್ಲ +ದೈವ
ದ್ರೋಹಿಗಳಿಗೆ +ಸುಧರ್ಮನಿಷ್ಠರ
ಸಾಹಸವು +ಇರದಾದಡೆಯು +ಕೊಯ್ವರು +ವಿರೋಧಿಗಳ
ಆ +ಹರಾತ್ಮಜ+ ಹಸುಳೆತನದ
ವ್ಯೂಹದಲಿ +ತಾರಕನನ್+ಇಕ್ಕನೆ
ಆಹವದ+ ಜಯಸಿರಿಯು +ಧರ್ಮದ +ಬೆನ್ನಲಿಹುದೆಂದ

ಅಚ್ಚರಿ:
(೧) ಜಯಸಿರಿ ಯಾರನ್ನು ಹಿಂಬಾಲಿಸುತ್ತಾಳೆ – ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ
(೨) ಸುಬ್ರಹ್ಮಣ್ಯನ ಸಾಹಸವನ್ನು ಹೇಳುವ ಪರಿ – ಆ ಹರಾತ್ಮಜ ಹಸುಳೆ ತನದ
ವ್ಯೂಹದಲಿ ತಾರಕನನಿಕ್ಕನೆ

ಪದ್ಯ ೧೭: ಮಾರ್ಕಂಡೇಯ ಮುನಿಗಳು ಧರ್ಮಜನಿಗೆ ಏನು ಹೇಳಿದರು?

ಈ ಪರಿಯಲುರು ಧರ್ಮಕಥನಾ
ಳಾಪದಲಿ ಮುನಿಸುತಗೆ ಸಂದೇ
ಹಾಪನೋದವ ಗೈದು ತಿಳುಹಿದನಾ ಮಹೀಸುರನ
ಭೂಪಕೇಳೈ ಕ್ಷತ್ರ ಧರ್ಮಕ
ಳಾಪದಲಿ ನಿನಗಿಲ್ಲ ಕೊರತೆ ಕೃ
ತಾಪರಾಧರು ಕೌರವರು ನಿರ್ನಾಮರಹರೆಂದ (ಅರಣ್ಯ ಪರ್ವ, ೧೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಧರ್ಮವ್ಯಾಧನು ಬ್ರಹ್ಮಚಾರಿಗೆ ಧರ್ಮಭೋದನೆಯನ್ನು ಮಾಡಿ, ಸಂಶಯವನ್ನು ಬಿಡಿಸಿದನು. ಧರ್ಮಜ, ನೀನು ಕ್ಷತ್ರಿಯ ಧರ್ಮಾನುಸಾರವಾಗಿ ಸ್ವಲ್ಪವೂ ತಪ್ಪದೆ ನಡೆಯುತ್ತಿರುವೆ, ಕೌರವರು ಅಪರಾಧವನ್ನು ಮಾಡಿದ್ದಾರೆ, ಅವರು ನಿರ್ನಾಮವಾಗುತ್ತಾರೆ ಎಂದು ಮಾರ್ಕಂಡೇಯ ಮುನಿಗಳು ತಿಳಿಸಿದರು.

ಅರ್ಥ:
ಪರಿ: ರೀತಿ; ಉರು: ಹೆಚ್ಚು, ಅಧಿಕ; ಧರ್ಮ: ಧಾರಣೆ ಮಾಡಿದುದು; ಕಥ: ವಿವರಣೆ; ಮುನಿ: ಋಷಿ; ಸುತ: ಮಗ; ಸಂದೇಹ: ಸಂಶಯ; ಐದು: ಬಂದು ಸೇರು; ತಿಳುಹು: ಹೇಳು; ಮಹೀಸುರ: ಬ್ರಾಹ್ಮಣ; ಭೂಪ: ರಾಜ; ಕೇಳು: ಆಲಿಸು; ಕ್ಷತ್ರ: ಕ್ಷತ್ರಿಯ; ಕಳಾಪ: ಕಾರ್ಯ; ಕೊರತೆ: ನ್ಯೂನ್ಯತೆ; ಕೃತ: ಮಾಡಿದ; ಅಪರಾಧ: ತಪ್ಪು; ನಿರ್ನಾಮ: ನಾಶ; ಆಲಾಪ: ಮಾತು, ಸಂಭಾಷಣೆ;

ಪದವಿಂಗಡಣೆ:
ಈ +ಪರಿಯಲ್+ಉರು +ಧರ್ಮ+ಕಥನ
ಆಳಾಪದಲಿ +ಮುನಿಸುತಗೆ +ಸಂದೇಹ
ಅಪನೋದವ+ ಗೈದು+ ತಿಳುಹಿದನ್+ಆ +ಮಹೀಸುರನ
ಭೂಪಕೇಳೈ +ಕ್ಷತ್ರ +ಧರ್ಮ+ಕ
ಳಾಪದಲಿ+ ನಿನಗಿಲ್ಲ +ಕೊರತೆ +ಕೃತ
ಅಪರಾಧರು+ ಕೌರವರು+ ನಿರ್ನಾಮರಹರೆಂದ

ಅಚ್ಚರಿ:
(೧) ಕಥನಾಳಾಪ, ಧರ್ಮಕಳಾಪ – ಪದಗಳ ಬಳಕೆ