ಪದ್ಯ ೫೭: ಇಂದ್ರನು ಬಾಲೆಯರಿಗೆ ಏನು ಹೇಳಿದನು?

ಕೇಳಿದನು ಹರುಷಾಶ್ರು ಹೊದಿಸಿ ದು
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ
ಬಾಲೆಯರ ಬರಹೇಳು ರತ್ನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿ ಮಂಡಿತ ಚರಣನೆದ್ದನು ಬಂದನಿದಿರಾಗಿ (ಅರಣ್ಯ ಪರ್ವ, ೧೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ದೇವೇಂದ್ರನು ಸಂತೋಷದ ವಿಷಯವನ್ನು ಕೇಳಿ ಅವನ ಸಾವಿರ ಕಣ್ಣುಗಳು ಆನಂದಾಶ್ರುಗಳನ್ನು ಹೊರಸೂಸಿದವು. ಅವನು ರೋಮಾಂಚನಗೊಂಡು ಸಂಪೂರ್ಣ ಸಂತೋಷದಲ್ಲಿ ಮುಳುಗಿದನು. ರತ್ನದಾರತಿಗಳನ್ನು ತೆಗೆದುಕೊಂಡು ಯುವತಿಯರು ಬರಲಿ, ಅರ್ಜುನನಿಗೆ ದೃಷ್ಟಿತೆಗೆಯಲಿ ಎನ್ನುತ್ತಾ ದೇವೆಂದ್ರನು ಎದ್ದು ನನಗಿದಿರಾಗಿ ಬಂದನು.

ಅರ್ಥ:
ಕೇಳು: ಆಲಿಸು; ಹರುಷ: ಸಂತಸ; ಆಶ್ರು: ಕಣ್ಣಿರು; ಹೊದಿ: ಧರಿಸಿಕೊಳ್ಳು; ಆಲಿ: ಕಣ್ಣು; ಸಾವಿರ: ಸಹಸ್ರ; ಉಬ್ಬು: ಹಿಗ್ಗು; ಮೇಲು: ಹೆಚ್ಚಾದ; ಮದ: ಮತ್ತು, ಸೊಕ್ಕು; ರೋಮ: ಕೂದಲ; ಪುಳಕ: ರೋಮಾಂಚನ; ಪೂರ್ಣ: ತುಂಬ; ಸೌಖ್ಯ: ಸುಖ; ಬಾಲೆ: ಹೆಣ್ಣು; ಬರಹೇಳು: ಆಗಮಿಸು; ರತ್ನ: ಬೆಲೆಬಾಳುವ ಮಣಿ; ನಿವಾಳಿಸು: ದೃಷ್ಟಿತೆಗೆಯುವುದು; ತರಹೇಳು: ಬರೆಮಾಡು; ಸುರಮೌಳಿ: ಇಂದ್ರ; ಮಂಡಿತ: ಅಲಂಕೃತವಾದ; ಚರಣ: ಪಾದ; ಎದ್ದು; ಮೇಲೇಳು; ಬಂದು: ಆಗಮಿಸು; ಇದಿರು: ಎದುರು;

ಪದವಿಂಗಡಣೆ:
ಕೇಳಿದನು +ಹರುಷ+ಆಶ್ರು+ ಹೊದಿಸಿದುವ್
ಆಲಿಗಳ+ ಸಾವಿರವನ್+ಉಬ್ಬಿದ
ಮೇಲು+ಮದದ+ ಸರೋಮ+ಪುಳಕದ+ ಪೂರ್ಣ+ಸೌಖ್ಯದಲಿ
ಬಾಲೆಯರ+ ಬರಹೇಳು +ರತ್ನ+ ನಿ
ವಾಳಿಗಳ+ ತರಹೇಳ್+ಎನುತ +ಸುರ
ಮೌಳಿ+ ಮಂಡಿತ+ ಚರಣನೆದ್ದನು+ ಬಂದನ್+ಇದಿರಾಗಿ

ಅಚ್ಚರಿ:
(೧) ಇಂದ್ರನನ್ನು ಕರೆದ ಪರಿ – ಸುರಮೌಳಿ, ಆಲಿಗಳ ಸಾವಿರವನ್;
(೨) ಸಂತೋಷಗೊಂಡನೆಂದು ಹೇಳುವ ಪರಿ – ಹರುಷಾಶ್ರು ಹೊದಿಸಿ ದುವಾಲಿಗಳ ಸಾವಿರವನುಬ್ಬಿದ ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ

ಪದ್ಯ ೫೬: ದೂತರು ಇಂದ್ರನಿಗೆ ಯಾವುದನ್ನು ತೆರೆಯಲು ಕೇಳಿದರು?

ಪುರದ ಬಾಹೆಯ ಕೋರಡಿಯ ಸಂ
ವರಣೆ ತೆಗೆಯಲಿ ನಿರ್ಭಯದಿ ಸಂ
ಚರಿಸುವುದು ನಂದನದೊಳಗೆ ನಿಮ್ಮದಿಯ ರಾಣಿಯರು
ತರತರದ ಕೊತ್ತಳದ ಕಾಹಿನ
ಸುರಭಟರು ಸುಖ ನಿದ್ರೆಗೈಯಲಿ
ನಿರುತವಿದು ನಿಜನಿಅಳಯದೊಳಗೆಂದುದು ಸುರವ್ರಾತ (ಅರಣ್ಯ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಊರ ಹೊರಗಿನಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸು, ನಿಮ್ಮ ರಾಣಿಯರು ತೋಟದೊಳಗೆ ಭಯವಿಲ್ಲದೆ ವಿಹರಿಸಲಿ. ಕೋಟೆಯ ಬುರುಜಿನ ಕಾವಲುಗಾರರು ತಮ್ಮ ಮನೆಯಲ್ಲಿ ಸುಖ ನಿದ್ರೆ ಮಾಡಲಿ, ಎಂದು ದೂತರು ಹೇಳಿದರು.

ಅರ್ಥ:
ಪುರ: ಊರು; ಬಾಹೆ: ಹೊರಗೆ; ಕೋರಡಿ: ನಿರ್ಬಂಧ, ವೇಗ; ಸಂವರಣೆ: ಕಾಪು, ರಕ್ಷಣೆ ; ತೆಗೆ: ಹೊರತರು; ನಿರ್ಭಯ: ಭಯವಿಲ್ಲದ ಸ್ಥಿತಿ; ಸಂಚರಿಸು: ತಿರುಗಾಟ; ನಂದನ: ತೋಟ; ನಿಮ್ಮಡಿ: ನಿಮ್ಮ ಅಧೀನ; ರಾಣಿ: ಅರಸಿ; ತರ: ವಿಧ; ಕೊತ್ತಳ: ಕೋಟೆ; ಕಾಹು: ರಕ್ಷಣೆ; ಸುರಭಟ: ದೇವತೆಗಳ ಸೈನಿಕ; ಸುಖ: ನೆಮ್ಮದಿ; ನಿದ್ರೆ: ಶಯನ; ನಿರುತ: ಸತ್ಯ, ನಿಶ್ಚಯ; ನಿಜ: ದಿಟ; ನಿಳಯ: ಆಲಯ; ಸುರ: ದೇವತೆ; ವ್ರಾತ: ಗುಂಪು;

ಪದವಿಂಗಡಣೆ:
ಪುರದ+ ಬಾಹೆಯ +ಕೋರಡಿಯ +ಸಂ
ವರಣೆ+ ತೆಗೆಯಲಿ +ನಿರ್ಭಯದಿ+ ಸಂ
ಚರಿಸುವುದು +ನಂದನದೊಳಗೆ+ ನಿಮ್ಮಡಿಯ+ ರಾಣಿಯರು
ತರತರದ +ಕೊತ್ತಳದ +ಕಾಹಿನ
ಸುರಭಟರು +ಸುಖ +ನಿದ್ರೆಗೈಯಲಿ
ನಿರುತವಿದು +ನಿಜನಿಳಯದೊಳಗ್+ಎಂದುದು +ಸುರವ್ರಾತ

ಅಚ್ಚರಿ:
(೧) ಸಂವರಣೆ, ಸಂಚರಿಸು – ‘ಸಂ’ ಪದದ ಬಳಕೆ
(೨) ನಿದ್ರೆಗೈಯಲಿ, ನಿರುತವಿದು, ನಿಜನಿಳಯ, ನಿಮ್ಮಡಿ, ನಿರ್ಭಯ – ನಿ ಕಾರದ ಪದಗಳು

ಪದ್ಯ ೫೫: ದೇವತೆಗಳ ಸೇವಕರು ಏನೆಂದು ಹೇಳಿದರು?

ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯುದಿವಿಜರ
ಸೂಳೆಯರು ಸೆರೆಬಿಟ್ಟು ಬಂದರು ಯಕ್ಷಕಿನ್ನರರ
ಕಾಲ ಸಂಕಲೆ ಕಡಿದವಾ ಖಳ
ರೂಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯ ಕಾಹುತೆಗೆಯಲಿಯೆಂದರಾ ಚರರು (ಅರಣ್ಯ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ದೇವತೆಗಳ ಸೇವಕರು ಇಂದ್ರನ ಬಳಿ ನಿವೇದಿಸಿದರು. ಕಾಲಕೇಯರ ರಾಜಧಾನಿಯಲ್ಲಿ ಮೃತ್ಯುವು ನುಗ್ಗಿತು. ಅಪ್ಸರೆಅ ಸ್ತ್ರೀಯರು ಸೆರೆಯಿಂದ ಬಿಡುಗಡೆಯಾದರು. ದೇವತೆಗಳ ಕಾಲ ಸರಪಳಿಗಳು ಕಡಿದು ಹೋದವು. ಅವರ ಜೀತದ ಬಾಳು ಮುಗಿಯಿತು. ಇನ್ನು ಅಮರಾವತಿಯ ಕೋಟೆಯ ಕಾವಲನ್ನು ತೆಗೆಸಿಬಿಡು ಎಂದು ಹೇಳಿದರು.

ಅರ್ಥ:
ನಗರ: ಊರು; ದುವ್ವಾಳಿಸು: ಕುದುರೆ ಸವಾರಿ ಮಾಡು; ಮೃತ್ಯು: ಸಾವು; ದಿವಿಜ: ದೇವತೆ, ಸುರರು; ದಿವಿಜರ ಸೂಳೆಯರು: ಅಪ್ಸರೆ; ಸೆರೆ: ಬಂಧನ; ಬಿಟ್ಟು: ತೊರೆದು; ಬಂದರು: ಆಗಮಿಸು; ಕಾಲ: ಸಮಯ; ಸಂಕಲೆ: ಸೆರೆ, ಬಂಧನ; ಖಳ: ದುಷ್ಟ; ಊಳಿಗ:ಕೆಲಸ, ಕಾರ್ಯ; ಕಡೆ: ಕೊನೆ; ಸುರಪುರ: ಅಮರಾವತಿ; ಆಳುವೇರಿ: ಕೋಟೆಯ ಸುತ್ತಣ ಗೋಡೆ; ಕಾಹು: ರಕ್ಷಿಸುವವ; ತೆಗೆ: ಹೊರತರು; ಚರ: ಸೇವಕ;

ಪದವಿಂಗಡಣೆ:
ಕಾಲಕೇಯರ +ನಗರಿಯಲಿ +ದು
ವ್ವಾಳಿಸಿತಲೇ +ಮೃತ್ಯು+ದಿವಿಜರ
ಸೂಳೆಯರು +ಸೆರೆಬಿಟ್ಟು +ಬಂದರು +ಯಕ್ಷ+ಕಿನ್ನರರ
ಕಾಲ +ಸಂಕಲೆ +ಕಡಿದವ್+ಆ+ ಖಳರ್
ಊಳಿಗಕೆ +ಕಡೆಯಾಯ್ತು +ಸುರಪುರದ್
ಆಳುವೇರಿಯ+ ಕಾಹು+ತೆಗೆಯಲಿ+ಎಂದರಾ +ಚರರು

ಅಚ್ಚರಿ:
(೧) ಕಾಲಕೇಯರು ಸೋತರು ಎಂದು ಹೇಳುವ ಪರಿ – ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು
(೨) ಅಪ್ಸರೆಯರನ್ನು ಕರೆಯುವ ಪರಿ – ದಿವಿಜರ ಸೂಳೆಯರು