ಪದ್ಯ ೧೭: ಭೀಮನು ಏನೆಂದು ಗರ್ಜಿಸಿದನು?

ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ
ಒದೆದಡದ್ರಿಗಳಳಿವವೆನ್ನಂ
ಗದಲಿ ನಾ ಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಬಾಲವನ್ನು ಗದೆಯ ತುದಿಯಿಂದ ನೂಕಿದನು, ಅವನ ಆಶ್ಚರ್ಯಕ್ಕೆ ಬಾಲದ ಕೂದಲೂ ಸಹ ಅಲ್ಲಾಡಲಿಲ್ಲ, ಈ ವಿಚಿತ್ರವನ್ನು ಕಂಡು ಬೆರಗಾಗಿ, ನಾನು ಕಾಲಿನಿಂದ ಒದೆದರೆ ಬೆಟ್ಟಗಳು ನಾಶವಾಗುತ್ತವೆ, ನಾನು ಮಹಾ ಬಲಶಾಲಿ, ನಿನ್ನ ಬಾಲವನ್ನು ದಾರಿಯಿಂದ ಎಳೆದುಕೋ ಎಂದು ಹನುಮನಿಗೆ ಹೇಳಿದನು.

ಅರ್ಥ:
ಗದೆ: ಮುದ್ಗರ; ಮೊನೆ: ತುದಿ; ನೂಕು: ತಳ್ಳು; ರೋಮ: ಕೂದಲು; ಚಲಿಸು: ಅಲ್ಲಾಡು; ಬಾಲ: ಪುಚ್ಛ; ನೋಡು: ವೀಕ್ಷಿಸು; ವಿಚಿತ್ರ: ಆಶ್ಚರ್ಯ; ನುಡಿಸು: ಮಾತನಾಡಿಸು; ಕಪಿ: ಹನುಮ; ಒದೆ: ಕಾಲಿನಿಂದ ಹೊಡೆ, ನೂಕು; ಅದ್ರಿ: ಬೆಟ್ಟ; ಅಳಿ: ನಾಶ; ಅಂಗ: ದೇಹದ ಭಾಗ; ಬಲ್ಲಿದ: ಬಲಿಷ್ಠ; ಕದ: ಬಾಗಿಲು; ತೆಗೆ: ಈಚೆಗೆ ತರು, ಹೊರತರು; ಬಟ್ಟೆ: ಹಾದಿ, ಮಾರ್ಗ; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಗದೆಯ +ಮೊನೆಯಲಿ +ನೂಕಿದನು +ರೋ
ಮದಲಿ +ಚಲಿಸದು +ಬಾಲ +ನೋಡಿದನ್
ಇದು +ವಿಚಿತ್ರವಲಾ+ಎನುತ +ನುಡಿಸಿದನು +ಕಪಿವರನ
ಒದೆದಡ್+ಅದ್ರಿಗಳ್+ಅಳಿವವ್+ಎನ್ನಂ
ಗದಲಿ+ ನಾ +ಬಲ್ಲಿದನು+ ಬಾಲದ
ಕದವ +ತೆಗೆ +ಬಟ್ಟೆಯಲೆನುತ +ಗರ್ಜಿಸಿದನಾ +ಭೀಮ

ಅಚ್ಚರಿ:
(೧) ಬಾಲವನ್ನು ತೆಗೆ ಎಂದು ಹೇಳುವ ಪರಿ – ಬಾಲದ ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ

ಪದ್ಯ ೧೬: ಭೀಮನ ಮಾರ್ಗವನ್ನು ಯಾರು ನಿಲ್ಲಿಸಿದರು?

ನಾವು ಮರ್ತ್ಯರು ದೂರದಲಿ ರಾ
ಜೀವಗಂಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ಮನೋರಥದ
ತಾವರೆಯ ತಹೆನೆನುತ ಸಿಂಹಾ
ರಾವದಲಿ ವಿಕ್ರಮಿಸೆ ವಿಗಡನ
ಡಾವರವ ಬಲು ಬಾಲ ತಡೆದುದು ಪವನಜನ ಪಥವ (ಅರಣ್ಯ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಹನುಮನಿಗೆ ಉತ್ತರಿಸುತ್ತಾ, ನಾವು ಮನುಷ್ಯರು, ದೂರದಿಂದ ಬೀಸುವ ಕಮಲಗಂಧದ ಸೊಗಸನ್ನು ನನ್ನ ಪತ್ನಿಯು ಇಷ್ಟಪಟ್ಟಳು. ಆ ಪುಷ್ಪವನ್ನು ನೋಡಬೇಕೆಂದು ಬಯಸಿದಳು. ಅವಳ ಮನೋರಥವನ್ನು ಪೂರೈಸಲು ಹೊರಟಿದ್ದೇನೆ, ಎಂದು ಹೇಳಿ ಮುಂದುವರೆಯಲು ಅವನ ಗಮನವನ್ನು ಹನುಮಂತನ ಬಾಲವು ತಡೆಯಿತು.

ಅರ್ಥ:
ಮರ್ತ್ಯ: ಮನುಷ್ಯ; ದೂರ: ಅಂತರ; ರಾಜೀವ: ಕಮಲ; ಗಂಧ: ಪರಿಮಳ; ಸಮೀರ: ವಾಯು; ಸಂಭಾವನೆ: ಮನ್ನಣೆ, ಅಭಿಪ್ರಾಯ; ಸೊಗಸು: ಚೆಲುವು; ಸತಿ: ಹೆಂಡತಿ; ಮನೋರಥ: ಇಚ್ಛೆ; ತಾವರೆ: ಕಮಲ; ತಹೆ: ತಂದುಕೊಡು; ಸಿಂಹಾರವ: ಗರ್ಜನೆ; ವಿಕ್ರಮ: ಗತಿ, ಗಮನ, ಹೆಜ್ಜೆ; ವಿಗಡ: ಶೌರ್ಯ, ಪರಾಕ್ರಮ; ಡಾವರ: ತೀವ್ರತೆ, ರಭಸ; ಬಲು: ದೊಡ್ಡ; ಬಾಲ: ಪುಚ್ಛ; ತಡೆ: ನಿಲ್ಲಿಸು; ಪವನಜ: ವಾಯುಪುತ್ರ; ಪಥ: ಮಾರ್ಗ;

ಪದವಿಂಗಡಣೆ:
ನಾವು +ಮರ್ತ್ಯರು +ದೂರದಲಿ+ ರಾ
ಜೀವ+ಗಂಧ +ಸಮೀರಣನ +ಸಂ
ಭಾವನೆಗೆ +ಸೊಗಸಿದಳು +ಸತಿ+ಆಕೆಯ +ಮನೋರಥದ
ತಾವರೆಯ +ತಹೆನೆನುತ+ ಸಿಂಹಾ
ರಾವದಲಿ +ವಿಕ್ರಮಿಸೆ+ ವಿಗಡನ
ಡಾವರವ+ ಬಲು+ ಬಾಲ+ ತಡೆದುದು+ ಪವನಜನ +ಪಥವ

ಅಚ್ಚರಿ:
(೧) ರಾಜೀವ, ತಾವರೆ – ಸಮನಾರ್ಥಕ ಪದ
(೨) ಸ ಕಾರದ ಸಾಲು ಪದ – ಸಮೀರಣನ ಸಂಭಾವನೆಗೆ ಸೊಗಸಿದಳು ಸತಿ

ಪದ್ಯ ೧೫: ಹನುಮಂತ ಭೀಮನಲ್ಲಿ ಯಾವ ಪ್ರಶ್ನೆಯನ್ನು ಕೇಳಿದ?

ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೊ ದೈತ್ಯನೊದಿವಿಜನೋಕಿ
ನ್ನರನೊ ನೀನಾರೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಮೇಲೆ ಹನುಮಂತನು ಮಗ್ಗುಲಾಗಿ ಒಂದು ದೊಡ್ಡ ಮರಕ್ಕೆ ಬೆನ್ನು ನೀಡಿ ಸ್ವಲ್ಪ ಆ ಮರವು ಬೀಳದಂತೆ, ಅವನ ದೇಹವು ತಗುಲಿರುವಂತೆ ಕುಳಿತುಕೊಂಡನು. ವೇಗವಾಗಿ ಬರುತ್ತಿದ್ದ ಭೀಮನನ್ನು ಕಂಡು ಎಲ್ಲಿಗೆ ಹೋಗುತ್ತಿರುವೆ, ನೀನು ಮನುಷ್ಯನೋ, ಖೇಚರನೋ, ರಾಕ್ಷಸನೋ, ದೇವನೋ, ಕಿಂಪುರುಷನೋ, ನೀನಾರೆಂದು ಹನುಮನು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಲಘು: ಹಗುರ; ಹೆಮ್ಮರ: ದೊಡ್ಡ ವೃಕ್ಷ; ಒಯ್ಯನೆ: ಮೆಲ್ಲಗೆ; ನೆಮ್ಮು: ಆಧಾರವನ್ನು ಪಡೆ; ಕುಳ್ಳಿರ್ದ: ಆಸೀನನಾದ; ಅರಿ: ವೈರಿ; ದಿಶಾಪಟ: ಎಲ್ಲಾ ದಿಕ್ಕುಗಳಿಗೆ ಓಡಿಸುವವ; ನುಡಿಸು: ಮಾತಾಡು; ಪವಮಾನ: ಗಾಳಿ, ವಾಯು; ನಂದನ: ಮಗ; ಭರ: ರಭಸ; ಮರ್ತ್ಯ: ಮನುಷ್ಯ; ಖೇಚರ: ಗಂಧರ್ವ; ದೈತ್ಯ: ರಾಕ್ಷಸ; ದಿವಿಜ: ಸುರ, ದೇವತೆ; ಕಿನ್ನರ: ಕಿಂಪುರುಷ; ನುಡಿಸು: ಮಾತಾಡು;

ಪದವಿಂಗಡಣೆ:
ಮುರಿಯದಂತಿರೆ +ಲಘುವಿನಲಿ +ಹೆ
ಮ್ಮರನನ್+ಒಯ್ಯನೆ +ನೆಮ್ಮಿ +ಕುಳ್ಳಿರ್ದ್
ಅರಿದಿಶಾಪಟ+ ನುಡಿಸಿದನು +ಪವಮಾನ +ನಂದನನ
ಭರವಿದ್+ಎಲ್ಲಿಗೆ +ಮರ್ತ್ಯನೋ +ಖೇ
ಚರನೊ+ ದೈತ್ಯನೊ+ದಿವಿಜನೋ+ಕಿ
ನ್ನರನೊ +ನೀನಾರೆಂದು +ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಹನುಮನನ್ನು ಕರೆದ ಪರಿ – ಅರಿದಿಶಾಪಟ
(೨) ಹಲವು ಬಗೆಯ ಜನರ ಪರಿಚಯ – ಮರ್ತ್ಯ, ಖೇಚರ, ದೈತ್ಯ, ದಿವಿಜ, ಕಿನ್ನರ

ಪದ್ಯ ೧೪: ಹನುಮನು ಭೀಮನ ಬಲವನ್ನು ಪರೀಕ್ಷಿಸಲು ಏನು ಮಾಡಿದ?

ನಿರಿನಿರಿಲು ನಿರಿಲೆನುತ ಹೆಮ್ಮರ
ಮುರಿದುದಾತನ ರೋಮ ಸೋಂಕಿನ
ಲಿರಿಕಿಲಾದುದು ಧರಣಿಯನಿಲಜ ಮುರಿದ ಮಗ್ಗುಲಲಿ
ಉರುವ ಬಾಲವ ಬೆಳೆಸಿ ದಾರಿಯ
ತೆರಹುಗೊಡದೆಡೆಯೊಡ್ಡಿ ಮನುಜನ
ಮುರುಕವನು ತಾ ಕಾಂಬೆನಿನ್ನೆನುತಿರ್ದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹನುಮಂತನು ತನ್ನ ಬಾಲವನ್ನು ಬೆಳಸಿದನು. ಆ ಬಾಲದ ಮೇಲಿನ ಕೂದಲುಗಳಿಗೆ ತಾಕಿ ದೊಡ್ಡ ಮರಗಳು ನಿರಿ ನಿರಿ ಎಂದು ಸದ್ದು ಮಾಡುತ್ತಾ ಉರುಳಿದವು. ಬಾಲವು ಬೆಳೆದ ಚಾಚಿದಾಗ ಭೂಮಿಯು ಇಕ್ಕಟ್ಟಾಯಿತು. ಹನುಮಂತನು ಈ ಮನುಷ್ಯನ ಸತ್ವ ಸಾಹಸಗಳನ್ನು ನೋಡೋಣ ಎಂದು ಕೊಂಡನು.

ಅರ್ಥ:
ಹೆಮ್ಮರ: ದೊಡ್ಡ ವೃಕ್ಷ; ಮುರಿ: ಸೀಳು; ರೋಮ: ಕೂದಲು; ಸೋಂಕು: ತಾಗು; ಇರಿಕು: ಇಕ್ಕಟ್ಟು; ಧರಣಿ: ಭೂಮಿ; ಅನಿಲಜ: ವಾಯುಪುತ್ರ (ಭೀಮ); ಮಗ್ಗುಲ: ಪಕ್ಕ; ಉರುವ: ಶ್ರೇಷ್ಠ; ಬಾಲ: ಪುಚ್ಛ; ಬೆಳೆಸು: ವೃದ್ಧಿಸು, ದೊಡ್ಡದಾಗು; ದಾರಿ: ಮಾರ್ಗ; ತೆರಹು: ಬಿಚ್ಚು, ತೆರೆ; ಎಡೆ: ಷ್ಟವಾಗಿ ಕಾಣು, ನಡುವೆ; ಮನುಜ: ಮನುಷ್ಯ; ಮುರುಕ: ಬಿಂಕ, ಬಿನ್ನಾಣ, ಸೊಕ್ಕು; ಕಾಂಬೆ: ನೋಡು; ಹನುಮ: ಆಂಜನೇಯ;

ಪದವಿಂಗಡಣೆ:
ನಿರಿನಿರಿಲು +ನಿರಿಲೆನುತ +ಹೆಮ್ಮರ
ಮುರಿದುದ್+ಆತನ +ರೋಮ +ಸೋಂಕಿನಲ್
ಇರಿಕಿಲಾದುದು +ಧರಣಿ+ಅನಿಲಜ+ ಮುರಿದ+ ಮಗ್ಗುಲಲಿ
ಉರುವ+ ಬಾಲವ +ಬೆಳೆಸಿ+ ದಾರಿಯ
ತೆರಹುಗೊಡದ್+ಎಡೆಯೊಡ್ಡಿ+ ಮನುಜನ
ಮುರುಕವನು +ತಾ +ಕಾಂಬೆನಿನ್+ಎನುತಿರ್ದನಾ+ ಹನುಮ

ಅಚ್ಚರಿ:
(೧) ಮರಮುರಿಯುವುದನ್ನು ಹೇಳುವ ಪರಿ – ನಿರಿನಿರಿಲು ನಿರಿಲೆನುತ ಹೆಮ್ಮರ ಮುರಿದುದಾತನ ರೋಮ ಸೋಂಕಿನಲ್

ಪದ್ಯ ೧೩: ಹನುಮನೇಕೆ ಮಿಡುಕಿದನು?

ಏನಿದೆತ್ತಣ ರಭಸವೀ ಗಿರಿ
ಸಾನುವಿದಮಾನುಷ ವಿಹಾರ
ಸ್ಥಾನವಿವನಾರೋ ಮಹಾದೇವಾ ಪ್ರಚಂಡನಲ
ಈ ನಿನದವೆಮ್ಮಂದಿನಗ್ಗದ
ವಾನರರ ಗರ್ಜನೆಗೆ ಗುರುವಾ
ಯ್ತೇನನೆಂಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಮನ ಗರ್ಜನೆಯನ್ನು ಕೇಳಿ ಹನುಮಂತನು, ಈ ಸದ್ದಿನ ರಭಸ ಇಲ್ಲಿಗೆ ಎಲ್ಲಿಂದ ಬಂತು? ಈ ಪರ್ವತ ಪ್ರದೇಶದ ಅರಣ್ಯವು ಮನುಷ್ಯರು ಓಡಾಡುವ ಪ್ರದೇಶವಿಲ್ಲ. ಹೀಗೆ ಗರ್ಜಿಸುವ ಇವನಾರೋ ಮಹಾ ಪ್ರಚಂಡನಿರಬೇಕು, ಹಿಂದೆ ತ್ರೇತಾಯುಗದಲ್ಲಿ ನನ್ನೊಡನಿದ್ದ ವಾನರರ ಗರ್ಜನೆಗೆ ಇವನ ಗರ್ಜನೆಯು ಗುರುವಿನಂತಿದೆ, ಎಂದು ಚಿಂತಿಸುತ್ತಾ ಮಿಡುಕಿದನು.

ಅರ್ಥ:
ರಭಸ: ವೇಗ; ಗಿರಿ: ಬೆಟ್ಟ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ; ಮಾನುಷ: ಮನುಷ್ಯರು, ಜನರು; ಪ್ರಚಂಡ: ಭಯಂಕರ, ನಿಪುಣ; ನಿನದ: ಶಬ್ದ; ಅಗ್ಗ: ಶ್ರೇಷ್ಠ; ವಾನರ: ಕಪಿ, ಹನುಮ; ಗರ್ಜನೆ: ಗಟ್ಟಿಯಾದ ಕೂಗು, ಆರ್ಭಟ; ಗುರು: ದೊಡ್ಡ; ಮೆಲ್ಲನೆ: ನಿಧಾನ; ಮಿಡುಕು: ಅಲುಗಾಟ, ಚಲನೆ; ಹನುಮ: ಆಂಜನೇಯ;

ಪದವಿಂಗಡಣೆ:
ಏನಿದ್+ಎತ್ತಣ +ರಭಸವ್+ಈ+ ಗಿರಿ
ಸಾನುವಿದ+ಮಾನುಷ +ವಿಹಾರ
ಸ್ಥಾನವ್+ಇವನ್+ಆರೋ +ಮಹಾದೇವಾ +ಪ್ರಚಂಡನಲ
ಈ +ನಿನದವ್+ಎಮ್ಮಂದಿನ್+ಅಗ್ಗದ
ವಾನರರ+ ಗರ್ಜನೆಗೆ+ ಗುರುವಾಯ್ತ್
ಏನನೆಂಬೆನ್+ಎನುತ್ತ +ಮೆಲ್ಲನೆ +ಮಿಡುಕಿದನು +ಹನುಮ

ಅಚ್ಚರಿ:
(೧) ಭೀಮನ ಗರ್ಜನೆಯನ್ನು ವಿವರಿಸುವ ಪರಿ – ಈ ನಿನದವೆಮ್ಮಂದಿನಗ್ಗದವಾನರರ ಗರ್ಜನೆಗೆ ಗುರುವಾಯ್ತ್

ಪದ್ಯ ೧೨: ಕದಳೀವನದಲ್ಲಿ ಯಾರು ಮಲಗಿದ್ದರು?

ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀಷಂಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮ ವಿಕ್ರಮನಿದ್ದನೀಯು
ದ್ದಾಮ ಸಿಂಹಧ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ದಂದೆರೆದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆ ಮಹಾಪರ್ವತದ ತಪ್ಪಲಿನಲ್ಲಿದ್ದ ಮೇರೆಯಿಲ್ಲದ ಬಾಳೆಯ ವನದಲ್ಲಿ ಶ್ರೀರಾಮನಾಮವನ್ನು ಜಪಿಸುತ್ತಾ, ಅಮೃತೋಪಮ ಸುಖವನ್ನನುಭವಿಸುತ್ತಾ, ಮಹಾಪರಾಕ್ರಮಿಯಾದ ಆಂಜನೇಯನು ಕುಳಿತಿದ್ದನು. ಭೀಮನ ಸಿಂಹಗರ್ಜನೆಗೆ ಆತನ ನಿದ್ರೆಯ ಮದವು ಅಡಗಿ ಹನುಮಂತನು ಕಣ್ಣನ್ನು ತೆರೆದನು.

ಅರ್ಥ:
ಅದ್ರಿ: ಬೆಟ್ಟ; ತಪ್ಪಲು: ಬೆಟ್ಟದ ಹತ್ತಿರದ ಸಮತಟ್ಟಿನ ಪ್ರದೇಶ; ನಿಸ್ಸೀಮ: ಅತಿಶೂರ, ಪರಾಕ್ರಮಿ; ಕದಳೀ: ಬಾಳೆ; ಷಂಡ: ಅಡವಿ; ನಾಮ: ಹೆಸರು; ಸುಧ: ಅಮೃತ; ಅಭಿಷೇಕ: ಮಂಗಳಸ್ನಾನ; ಸಮಗ್ರ: ಎಲ್ಲಾ; ಸೌಖ್ಯ: ಸುಖ, ನೆಮ್ಮದಿ; ಭೀಮ: ಭಯಂಕರ, ಭೀಕರ; ವಿಕ್ರಮ: ಶೂರ, ಸಾಹಸ; ಉದ್ದಾಮ: ಶ್ರೇಷ್ಠ; ಸಿಂಹಧ್ವನಿ: ಗರ್ಜನೆ; ನಿದ್ರೆ: ಶಯನ; ತಾಮಸ: ಜಡತೆ; ತನಿ: ಹೆಚ್ಚಾಗು, ಅತಿಶಯವಾಗು; ಮದ: ಮತ್ತು, ಅಮಲು, ಸೊಕ್ಕು; ಅಡಗು: ಮರೆಯಾಗು; ಕಂದೆರೆ: ಕಣ್ಣನ್ನು ಬಿಡು; ಹನುಮ: ಆಂಜನೇಯ;

ಪದವಿಂಗಡಣೆ:
ಆ+ ಮಹಾದ್ರಿಯ +ತಪ್ಪಲಲಿ+ ನಿ
ಸ್ಸೀಮ +ಕದಳೀ+ಷಂಡದಲಿ +ರಘು
ರಾಮನಾಮ +ಸುಧಾಭಿಷೇಕ+ ಸಮಗ್ರ +ಸೌಖ್ಯದಲಿ
ಭೀಮ +ವಿಕ್ರಮನಿದ್ದನ್+ಈ+
ಉದ್ದಾಮ +ಸಿಂಹಧ್ವನಿಗೆ +ನಿದ್ರಾ
ತಾಮಸದ+ ತನಿಮದವ್+ಅಡಗೆ +ಕಂದೆರೆದನಾ +ಹನುಮ

ಅಚ್ಚರಿ:
(೧) ಹನುಮನು ಎಚ್ಚರವಾದ ಪರಿ – ಈ ಉದ್ದಾಮ ಸಿಂಹಧ್ವನಿಗೆ ನಿದ್ರಾತಾಮಸದ ತನಿಮದವಡಗೆ ದಂದೆರೆದನಾ ಹನುಮ

ಪದ್ಯ ೧೧: ಭೀಮನ ಗರ್ಜನೆ ಹೇಗಿತ್ತು?

ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲಂಗಳಿಲ್ಲ ವಿಲೋಚನಾಂತ್ಯದಲಿ
ಮರಗಿರನ ಮೃಗಗಿಗನ ಪಾಡೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ (ಅರಣ್ಯ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಬೊಬ್ಬೆಗೆ ಬೆಟ್ಟಗಳು ಬಿರಿದವು. ಶರಭ, ಹುಲಿ ಮೊದಲಾದ ಪ್ರಾಣಿಗಳು ಕಣ್ಣಿಗೆ ಕಾಣದಂತೆ ಓಡಿದವು. ಜನಮೇಜಯ ರಾಜ ಇನ್ನು ಮರಗಿರ, ಮೃಗಗಿಗಳ ಪಾಡೇನು? ಭೀಮನ ಗರ್ಜನೆಗೆ ಬೆಟ್ಟದ ಗುಹೆಗಳೇ ಪ್ರತಿಧ್ವನಿಸುತ್ತಾ ನಿಂತವು.

ಅರ್ಥ:
ಬಿರಿ: ಬಿರುಕು, ಸೀಳು; ಅದ್ರಿ: ಬೆಟ್ಟ; ಅನಿಲಸುತ: ವಾಯುಪುತ್ರ (ಭೀಮ); ಉಬ್ಬರ: ಅತಿಶಯ; ಬೊಬ್ಬೆ: ಕೂಗು; ಮಿಕ್ಕ: ಉಳಿದ ಮೃಗ: ಪ್ರಾಣಿ; ತತಿ: ಗುಂಪು; ಶರಭ:ಎಂಟು ಕಾಲುಗಳುಳ್ಳ ಒಂದು ವಿಲಕ್ಷಣ ಪ್ರಾಣಿ; ಶಾರ್ದೂಲ: ಹುಲಿ, ವ್ಯಾಘ್ರ; ವಿಲೋಚನ: ಕಣ್ಣು; ಅಂತ: ಕೊನೆ; ಮರ: ತರು, ವೃಕ್ಷ; ಮೃಗ: ಪ್ರಾಣಿ; ಪಾಡು: ಅವಸ್ಥೆ; ಅರಸ: ರಾಜ; ದನಿ: ಧ್ವನಿ, ಶಬ್ದ; ಬೆಚ್ಚು: ಹೆದರು; ಗಿರಿ: ಬೆಟ್ಟ; ಗುಹೆ: ಗವಿ; ಮಲೆ: ಎದುರಿಸು; ನಿಲ್ಲು: ಸ್ಥಿತವಾಗಿರು; ಕೂಡು: ಜೊತೆಯಾಗು;

ಪದವಿಂಗಡಣೆ:
ಬಿರಿದವ್+ಅದ್ರಿಗಳ್+ಅನಿಲಸುತನ್
ಉಬ್ಬರದ +ಬೊಬ್ಬೆಗೆ +ಮಿಕ್ಕ +ಮೃಗ+ತತಿ
ಶರಭ+ ಶಾರ್ದೂಲಂಗಳಿಲ್ಲ +ವಿಲೋಚನ+ಅಂತ್ಯದಲಿ
ಮರಗಿರನ +ಮೃಗಗಿಗನ+ ಪಾಡೇನ್
ಅರಸ+ ಭೀಮನ +ದನಿಗೆ +ಬೆಚ್ಚದೆ
ಗಿರಿ+ಗುಹೆಗಳೇ +ಮಲೆತು +ನಿಂತವು+ ದನಿಗೆ+ ದನಿಗೂಡುತ

ಅಚ್ಚರಿ:
(೧) ಭೀಮನಿಗೆ ಎದುರು ನಿಂತವರಾರು – ಭೀಮನ ದನಿಗೆ ಬೆಚ್ಚದೆ ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ

ಪದ್ಯ ೧೦: ಭೀಮನು ಕಾಡಿನ ಮಧ್ಯಭಾಗಕ್ಕೆ ಹೇಗೆ ಬಂದನು?

ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿಮುರಿದು
ಹಳುವ ತಳಪಟವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ (ಅರಣ್ಯ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಜೋರಾದ ಕೂಗಿಗೆ ಒಂದು ಯೋಜನ ವಲಯದಲ್ಲಿದ್ದ ಹುಲಿ, ಕರಡಿ, ಕಾಡಾನೆ, ಸಿಂಹ ಮುಂತಾದ ಕಾಡು ಪ್ರಾಣಿಗಳು ಹಿಂದಿರುಗಿ ನೋಡುತ್ತಾ ಓಡಿ ಹೋದವು. ಭೀಮನ ತುಳಿತಕ್ಕೆ ಕಾಡು ಕಡಿದ ಬಾಳೆಯ ತೋಟದಂತೆ ಬಯಲಾಗಿ ಕಾಣುತ್ತಿತ್ತು. ಹೀಗೆ ಮಹಾಪರಾಕ್ರಮಿಯಾದ ಭೀಮನು ಕಾಡಿನ ಮಧ್ಯಕ್ಕೆ ಬಂದನು.

ಅರ್ಥ:
ಹುಲಿ: ವ್ಯಾಘ್ರ; ಆನೆ: ಕರಿ, ಗಜ; ಕಾಡು: ಅರಣ್ಯ; ಸಿಂಹ: ಕೇಸರಿ; ಆವಳಿ: ಗುಂಪು; ದನಿ: ಧ್ವನಿ, ಶಬ್ದ; ಯೋಜನ: ಅಳತೆಯ ಪ್ರಮಾಣ; ಹಾಯು: ದಾಟು; ಓಡು: ಶೀಘ್ರವಾಗಿ ಚಲಿಸು; ನೋಡು: ವೀಕ್ಷಿಸು; ಮುರಿ: ಸೀಳು; ಹಳುವ: ಕಾಡು; ತಳಪಟ: ಅಂಗಾತವಾಗಿ ಬೀಳು, ಸೋಲು; ದಿಗ್ಗಜ: ಉದ್ದಾಮ ವ್ಯಕ್ತಿ, ಶ್ರೇಷ್ಠ; ತುಳಿ: ಮೆಟ್ಟು; ಬಾಳೆ: ಕದಳಿ; ವನ: ಕಾಡು; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಕಲಿ: ಶೂರ; ಬಂದನು: ಆಗಮಿಸು; ವನ: ಕಾಡು; ಮಧ್ಯ; ನಡುಭಾಗ;

ಪದವಿಂಗಡಣೆ:
ಹುಲಿ +ಕರಡಿ +ಕಾಡಾನೆ +ಸಿಂಹಾ
ವಳಿಗಳ್+ಈತನ +ದನಿಗೆ +ಯೋಜನ
ವಳೆಯದಲಿ+ ಹಾಯ್ದ್+ಓಡಿದವು +ನೋಡುತ್ತ +ಮುರಿಮುರಿದು
ಹಳುವ +ತಳಪಟವಾಯ್ತು +ದಿಗ್ಗಜ
ತುಳಿದ +ಬಾಳೆಯ +ವನದವೊಲು +ವೆ
ಗ್ಗಳೆಯನೈ+ ಕಲಿ+ಭೀಮ +ಬಂದನು +ವನದ +ಮಧ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಳುವ ತಳಪಟವಾಯ್ತು ದಿಗ್ಗಜತುಳಿದ ಬಾಳೆಯ ವನದವೊಲು
(೨) ಕಾಡು, ಹಳುವ, ವನ – ಸಮನಾರ್ಥಕ ಪದಗಳು

ಪದ್ಯ ೯: ಭೀಮನು ಅಡವಿಯಲ್ಲಿ ಹೇಗೆ ನಡೆದನು?

ಮುಡುಹು ಸೋಂಕಿದೊಡಾ ಮಹಾದ್ರಿಗ
ಳೊಡನೆ ತೋರಹ ತರು ಕೆಡೆದುವಡಿ
ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು
ಒಡೆದುದಿಳೆ ಬೊಬ್ಬಿರಿತಕೀತನ
ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು ಮೀರಿ ನಡೆದನು ಭೀಮನಡವಿಯಲಿ (ಅರಣ್ಯ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಭುಜದ ತುದಿಯು ಸೋಂಕಿದ ಮಾತ್ರಕ್ಕೆ ಮಹಾ ಪರ್ವತಗಳು, ವೃಕ್ಷಗಳು ಕೆಳಕ್ಕೆ ಬಿದ್ದವು. ಹೆಜ್ಜೆಯನ್ನಿಟ್ಟ ಮಾತ್ರಕ್ಕೆ ಚಿಕ್ಕ ಪುಟ್ಟ ದಿನ್ನೆಗಳು ಭೂಮಿಯೂ ತಗ್ಗಿ ಹೋದವು. ಇವನು ಹಾಕಿದ ಕೇಕೆಗೆ ಭೂಮಿ ಬಿರುಕು ಬಿಟ್ಟಿತು. ಇವನ ತೊಡೆಯ ಗಾಳಿಗೆ ಚಿಕ್ಕ ಮರಗಳು, ಗಿಡಗಳು, ಹಾರಿಹೋದವು. ಈ ರೀತಿ ಭೀಮನು ಅಡವಿಯಲ್ಲಿ ದಾಟುತ್ತಾ ನಡೆದನು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಸೋಂಕು: ಮುಟ್ಟು, ಸ್ಪರ್ಶ; ಮಹಾದ್ರಿ: ದೊಡ್ಡ ಬೆಟ್ಟ; ತೋರು: ಗೋಚರಿಸು; ತರು: ಮರ; ಕೆಡೆ: ಬೀಳು, ಕುಸಿ; ಅಡಿಯಿಡು: ಹೆಜ್ಜೆಯಿಡು; ಹೆಜ್ಜೆ: ಪಾದ; ತಗ್ಗು: ಹಳ್ಳ, ಗುಣಿ; ನೆಲ: ಭೂಮಿ; ಸಹಿತ: ಜೊತೆ; ಹೆದ್ದೆವರು: ದೊಡ್ಡ ದಿಣ್ಣೆ; ಒಡೆದು: ಸೀಳು; ಇಳೆ: ಭೂಮಿ; ಬೊಬ್ಬಿರಿತ: ಜೋರಾದ ಕೂಗು, ಗರ್ಜನೆ; ತೊಡೆ: ಊರು; ಗಾಳಿ: ವಾಯು; ಹಾರು: ಲಂಘಿಸು; ಕಿರುಗಿಡ: ಚಿಕ್ಕ ಗಿಡ; ಮರ: ತರು; ಮೀರು: ದಾಟು, ಹಾದುಹೋಗು; ನಡೆ: ಚಲಿಸು; ಅಡವಿ: ಕಾಡು;

ಪದವಿಂಗಡಣೆ:
ಮುಡುಹು +ಸೋಂಕಿದೊಡ್+ಆ+ ಮಹಾದ್ರಿಗಳ್
ಒಡನೆ +ತೋರಹ +ತರು +ಕೆಡೆದುವ್+ಅಡಿ
ಯಿಡಲು +ಹೆಜ್ಜೆಗೆ +ತಗ್ಗಿದುದು +ನೆಲ +ಸಹಿತ+ ಹೆದ್ದೆವರು
ಒಡೆದುದ್+ಇಳೆ +ಬೊಬ್ಬಿರಿತಕ್+ಈತನ
ತೊಡೆಯ +ಗಾಳಿಗೆ +ಹಾರಿದವು +ಕಿರು
ಗಿಡ +ಮರಂಗಳು +ಮೀರಿ +ನಡೆದನು +ಭೀಮನ್+ಅಡವಿಯಲಿ

ಅಚ್ಚರಿ:
(೧) ಭೀಮನ ನಡೆತದ ರಭಸ – ಒಡೆದುದಿಳೆ ಬೊಬ್ಬಿರಿತಕೀತನ ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು

ಪದ್ಯ ೮: ಭೀಮನ ಓಡಾಟವು ಅಡವಿಯನ್ನು ಹೇಗೆ ನಡುಗಿಸಿತು?

ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿ
ದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು
ಗದೆಯ ಹೊಯ್ಲಿನ ಗಂಡಶೈಲವೊ
ಕದಳಿಗಳೊ ತಾವರಿಯೆವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ (ಅರಣ್ಯ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನು ಅಬ್ಬರಿಸಿದರೆ ಪರ್ವತ ಶಿಖರಗಳಲ್ಲಿದ್ದ ದೊಡ್ಡ ಗುಂಡುಗಳು ಉದುರಿದವು. ಕಾಲು ಝಾಡಿಸಿದರೆ ಮಹಾವೃಕ್ಷಗಳು ಬೇರು ಸಹಿತ ಉರುಳಿದವು. ಗದೆಯ ಹೊಡೆತಕ್ಕೆ ಬೆಟ್ಟದ ಕಲ್ಲುಗಳು ಬಾಳೆಯ ಗಿಡಗಳಂತೆ ಮುರಿದುಬಿದ್ದವು. ಮದೊನ್ಮತ್ತನಾದ ಭೀಮನ ಚಲನವು ಬೆಟ್ಟ, ಅಡವಿಗಳನ್ನು ನಡುಗಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು, ಕೂಗು; ಪರ್ವತ: ಬೆಟ್ಟ; ಶಿಖರ: ತುದಿ; ಉದುರು: ಕೆಳಕ್ಕೆ ಬೀಳು; ಹೆಗ್ಗುಂಡು: ದೊಡ್ಡ ಬಂಡೆ; ಮುರಿ: ಸೀಳು; ಒದೆ: ಕಾಲಿನಿಂದ ತಳ್ಳು; ಬಿದ್ದು: ಕೆಳಗೆ ಜಾರು; ಬೇರು: ಮೂಲ; ಸಹಿತ: ಜೊತೆ; ದ್ರುಮ: ಮರ,ವೃಕ್ಷ; ಆಳಿ: ಸಾಲು, ಗುಂಪು; ಗದೆ: ಮುದ್ಗರ; ಹೊಯ್ಲು: ಹೊಡೆತ; ಗಂಡಶೈಲ: ಬೆಟ್ಟದಿಂದ ಉರುಳಿಬಿದ್ದ ದೊಡ್ಡಬಂಡೆ; ಕದಳಿ: ಬಾಳೆ; ಉಬ್ಬು: ಹೆಚ್ಚು; ಮದ: ಮತ್ತು, ಅಮಲು; ಮುಖ: ಆನನ; ಮಸಕ: ಆಧಿಕ್ಯ, ಹೆಚ್ಚಳ, ವೇಗ; ಗಿರಿ: ಬೆಟ್ಟ; ತರು: ಮರ; ವ್ರಜ: ಗುಂಪು;

ಪದವಿಂಗಡಣೆ:
ಒದರಿದರೆ +ಪರ್ವತದ +ಶಿಖರದಲ್
ಉದುರಿದವು +ಹೆಗ್ಗುಂಡುಗಳು +ಮುರಿದ್
ಒದೆಯೆ +ಬಿದ್ದವು +ಬೇರು +ಸಹಿತ +ಮಹಾದ್ರುಮಾಳಿಗಳು
ಗದೆಯ +ಹೊಯ್ಲಿನ +ಗಂಡಶೈಲವೊ
ಕದಳಿಗಳೊ +ತಾವರಿಯೆ+ಉಬ್ಬಿದ
ಮದಮುಖನ +ಪರಿಮಸಕ +ಮುರಿದುದು +ಗಿರಿ+ತರು+ವ್ರಜವ

ಅಚ್ಚರಿ:
(೧) ಭೀಮನ ಶಕ್ತಿಯನ್ನು ವಿವರಿಸುವ ಪರಿ – ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು