ಪದ್ಯ ೪: ದ್ರೌಪದಿಯು ಆಶ್ಚರ್ಯಪಟ್ಟಿದುದೇಕೆ?

ಮೇಲು ತರದತಿ ಪರಿಮಳದ ವೈ
ಹಾಳಿಯಲಿ ಸಲೆ ಬೀದಿವರಿದು ಚ
ಡಾಳಿಸುವ ಸೊಗಸಿನಲಿ ಸೊಂಪಾದಳು ಸರೋಜಮುಖಿ
ಸೋಲಿಸಿತಲಾ ಚೂಣಿಯಲಿ ಸಂ
ಪಾಳಿಸಿದ ಸೌಗಂಧವಿನ್ನು ವಿ
ಶಾಲ ಪದುಮವದೆಂತುಟೆನುತವೆ ತೂಗಿದಳು ಶಿರವ (ಅರಣ್ಯ ಪರ್ವ, ೧೧ ಸಂಧಿ, ೪ ಪದ್ಯ)

ತಾತ್ಪರ್ಯ:
ಅತ್ಯಂತ ಶ್ರೇಷ್ಠವಾದ ಪರಿಮಳವು ಗಾಳಿಯನ್ನು ತುಂಬಿ ಬರುತಿರಲು, ಅದನ್ನು ಆಘ್ರಾಣಿಸಿದ ದ್ರೌಪದಿಯು ಅತ್ಯಂತ ಸಂತೋಷಗೊಂಡಳು. ಗಾಳಿಯಲ್ಲಿ ಬರುವ ಈ ಪರಿಮಳವೇ ನನ್ನ ಮನಸ್ಸನ್ನು ಗೆದ್ದು ಬಿಟ್ಟಿತು, ಇನ್ನು ಈ ಕಮಲ ಪುಷ್ಪ ಹೇಗಿರಬಹುದೆಂದುಕೊಂಡು ಆಶ್ಚರ್ಯಪಟ್ಟು ತಲೆತೂಗಿದಳು.

ಅರ್ಥ:
ಮೇಲು: ಎತ್ತರ, ಶ್ರೇಷ್ಠ; ತರ: ರೀತಿ; ಅತಿ: ಬಹಳ; ಪರಿಮಳ: ಸುಗಂಧ; ವೈಹಾಳಿ: ಸಂಚಾರ, ವಿಹಾರ; ಸಲೆ: ಒಂದೇ ಸಮನೆ; ಬೀದಿ: ದಾರಿ, ಮಾರ್ಗ; ಚಡಾಳಿಸು: ಜೋಡಿಸು, ಅಧಿಕವಾಗು; ಸೊಗಸು: ಅಂದ; ಸೊಂಪು: ಸೊಗಸು; ಸರೋಜಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಸೋಲಿಸು: ಪರಾಭವಗೊಳ್ಳು; ಚೂಣಿ: ಮುಂದಿನ ಸಾಲು, ಮುಂಭಾಗ; ಸಂಪು: ಸೊಂಪು, ಸೊಗಸು; ಸಂಪಾಳಿಸು: ಸಂತಸವನ್ನು ನೀಡು; ಸೌಗಂಧ: ಸುಗಂಧ, ಪರಿಮಳ; ವಿಶಾಲ: ವಿಸ್ತಾರ, ಹರಹು; ಪದುಮ: ಪದ್ಮ, ಕಮಲ; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ಮೇಲುತರದ್+ಅತಿ+ ಪರಿಮಳದ+ ವೈ
ಹಾಳಿಯಲಿ +ಸಲೆ +ಬೀದಿವರಿದು +ಚ
ಡಾಳಿಸುವ +ಸೊಗಸಿನಲಿ+ ಸೊಂಪಾದಳು +ಸರೋಜಮುಖಿ
ಸೋಲಿಸಿತಲಾ +ಚೂಣಿಯಲಿ +ಸಂ
ಪಾಳಿಸಿದ+ ಸೌಗಂಧವಿನ್ನು +ವಿ
ಶಾಲ +ಪದುಮವ್+ಅದೆಂತುಟ್+ಎನುತವೆ+ ತೂಗಿದಳು+ ಶಿರವ

ಅಚ್ಚರಿ:
(೧) ವೈಹಾಳಿ, ಚಡಾಳಿ, ಸಂಪಾಳಿ – ಪ್ರಾಸ ಪದಗಳು
(೨) ಸ ಕಾರದ ತ್ರಿವಳಿ ಪದ – ಸೊಗಸಿನಲಿ ಸೊಂಪಾದಳು ಸರೋಜಮುಖಿ

ಪದ್ಯ ೩: ಸುಗಂಧವು ಹೇಗೆ ಮುನಿಜನರನ್ನು ಮೋಹಿಸಿತು?

ಸರಸ ಸೌಗಂಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾ ಮೋಡಿಯಲಿಡಾ
ವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ (ಅರಣ್ಯ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಚೆಲುವಾದ ಸೌಗಂಧಿಕ ಪುಷ್ಪದ ಪರಿಮಳವು, ಅದು ಬೆಳೆದ ಸರೋವರದ ತೆರೆಗಳಿಂದೆದ್ದ ನೀರಿನ ತುಂತುರಿನಿಂದಲೂ, ಸದ್ದು ಮಾಡುವ ದುಂಬಿಗಳ ಹಿಂಡುಗಳಿಂದಲೂ ಆಶ್ಚರ್ಯಕರವಾಗಿ ಸಕಲ ಮುನಿಗಳ ಇಂದ್ರಿಯಗಳನ್ನು ಮೋಹಿಸಿತು.

ಅರ್ಥ:
ಸರಸ: ಚೆಲ್ಲಾಟ, ವಿನೋದ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪರಿಮಳ: ಸುಗಂಧ; ಭರ:ಭಾರ, ಹೆಚ್ಚಳ; ಭಾರವಣೆ: ಘನತೆ, ಗೌರವ; ಉರುಬು: ರಭಸ, ವೇಗ; ತಿಳಿ: ನಿರ್ಮಲ, ಶುದ್ಧ; ಎರೆ: ಸುರಿ; ತಿವಿಗುಳಿ: ತಿವಿತ, ಚುಚ್ಚು; ತುಂತುರು: ಸಣ್ಣ ಸಣ್ಣ ಹನಿ; ತುಷಾರ: ಹಿಮ, ಮಂಜು; ಮೊರೆ:ದುಂಬಿಯ ಧ್ವನಿ, ಝೇಂಕಾರ; ಮರಿ: ಚಿಕ್ಕ; ದುಂಬಿ: ಭ್ರಮರ; ಮೋಹರ: ದಂಡು, ಸೈನ್ಯ; ಮೋಡಾಮೋಡಿ: ಆಶ್ಚರ್ಯಕರ; ಆವರಿಸು: ಸುತ್ತು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಸಕಲ: ಎಲ್ಲಾ; ಮುನಿಜನ: ಋಷಿಗಳ ಗುಂಪು; ಒಂದು: ಕೂಡು;

ಪದವಿಂಗಡಣೆ:
ಸರಸ +ಸೌಗಂಧಿಕದ +ಪರಿಮಳ
ಭರದ +ಭಾರವಣೆಯಲಿ +ತಿಳಿಗೊಳನ್
ಉರುಬುದ್+ಎರೆಗಳ +ತಿವಿಗುಳಿನ +ತುಂತುರು +ತುಷಾರದಲಿ
ಮೊರೆದೊಗುವ +ಮರಿದುಂಬಿಗಳ+ ಮೋ
ಹರದ +ಮೋಡಾಮೋಡಿಯಲಿಡ್+
ಆವರಿಸಿತೈದ್+ಇಂದ್ರಿಯದಲ್+ಒಂದಿರೆ+ ಸಕಲ+ ಮುನಿಜನವ

ಅಚ್ಚರಿ:
(೧) ತ ಕಾರದ ಸಾಲು ಪದ – ತಿಳಿಗೊಳನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
(೨) ಮ ಕಾರದ ಸಾಲು ಪದ – ಮೊರೆದೊಗುವ ಮರಿದುಂಬಿಗಳ ಮೋಹರದ ಮೋಡಾ ಮೋಡಿಯಲಿಡಾವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ

ಪದ್ಯ ೨: ಪರ್ವತ ಪ್ರದೇಶದಲ್ಲಿ ಯಾವ ಗಾಳಿಯು ಬೀಸಿತು?

ಪರಮ ಧರ್ಮಶ್ರವಣ ಸೌಖ್ಯದೊ
ಳರಸನಿರೆ ಬದರಿಯಲಿ ಪೂರ್ವೋ
ತ್ತರದ ದೆಸೆವಿಡಿದೆಸೆಗಿತತಿಶಯ ಗಂಧ ಬಂಧುರದ
ಭರಣಿ ಮನ್ಮಥ ಪೋತವಣಿಜನ
ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ (ಅರಣ್ಯ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಬದರಿಕಾಶ್ರಮದಲ್ಲಿ ಯುಧಿಷ್ಠಿರನು ಧರ್ಮಶಾಸ್ತ್ರವನ್ನು ಶ್ರವಣ ಮಾಡುತ್ತಾ ಸುಖದಿಂದಿರಲು ಈಶಾನ್ಯ ದಿಕ್ಕಿನಿಂದ ಅತಿಶಯ ಸುಗಂಧ ದ್ರವ್ಯದ ಭರಣಿಯೋ, ಮರಿಮನ್ಮಥನೆಂಬ ವ್ಯಾಪಾರಿಯ ಸರಕುತುಂಬಿದ ದೋಣಿಯೋ ಮರಿದುಂಬಿಗಳ ಹಿಂಡಿನ ಸರಣಿಯೋ ಎನ್ನುವಂತಹ ಸುಗಂಧವಾಯುವು ಆ ಪರ್ವತ ಪ್ರದೇಶದಲ್ಲಿ ಬೀಸಿತು.

ಅರ್ಥ:
ಪರಮ: ಶ್ರೇಷ್ಠ; ಧರ್ಮ: ಧಾರಣೆ ಮಾಡಿದುದು; ಶ್ರವಣ: ಕೇಳು; ಸೌಖ್ಯ: ನೆಮ್ಮದಿ; ಅರಸ: ರಾಜ; ಪೂರ್ವೋತ್ತರ: ಈಶಾನ್ಯ; ದೆಸೆ: ದಿಕ್ಕು; ಎಸೆ: ತೋರು; ಅತಿಶಯ: ಹೆಚ್ಚು; ಗಂಧ: ಸುವಾಸನೆ; ಬಂಧುರ: ಚೆಲುವಾದ, ಸುಂದರವಾದ; ಭರಣಿ: ಕರಂಡಕ; ಮನ್ಮಥ: ಕಾಮ; ಪೋತ: ಮರಿ, ದೋಣಿ, ನಾವೆ; ತರಣಿ: ಸೂರ್ಯ,ದೋಣಿ, ಹರಿಗೋಲು; ತರುಣ: ಯೌವ್ವನ, ಚಿಕ್ಕವಯಸ್ಸಿನ; ಭ್ರಮರ: ದುಂಬಿ; ಸೇವೆ: ಚಾಕರಿ; ಸರಣಿ: ದಾರಿ, ಹಾದಿ; ಸುಳಿ: ಬೀಸು, ತೀಡು; ಸಮೀರ: ವಾಯು; ಅದ್ರಿ: ಬೆಟ್ಟ; ಮಹಾ: ದೊಡ್ಡ, ಶ್ರೇಷ್ಠ;

ಪದವಿಂಗಡಣೆ:
ಪರಮ+ ಧರ್ಮ+ಶ್ರವಣ +ಸೌಖ್ಯದೊಳ್
ಅರಸನಿರೆ+ ಬದರಿಯಲಿ +ಪೂರ್ವೋ
ತ್ತರದ +ದೆಸೆವಿಡಿದ್+ಎಸೆಗಿತ್+ಅತಿಶಯ +ಗಂಧ +ಬಂಧುರದ
ಭರಣಿ +ಮನ್ಮಥ +ಪೋತವಣಿಜನ
ತರಣಿ+ ತರುಣ+ ಭ್ರಮರ +ಸೇವಾ
ಸರಣಿಯೆನೆ +ಸುಳಿದುದು +ಸಮಿರಣನ್+ಆ+ಮಹ+ಅದ್ರಿಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭರಣಿ ಮನ್ಮಥ ಪೋತವಣಿಜನ ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ

ಪದ್ಯ ೧: ಯಾವ ಸಾಮ್ರಾಜ್ಯವನ್ನು ಪಾಂಡವರು ಆಳಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ನರನಾರಾಯಣಾಶ್ರಮ
ಕೂಲವತಿಗಳ ನಂದನದ ನಿರ್ಮಳ ಸರೋವರದ
ಕೇಳಿಕೆಯ ನವಿಲುಗಳ ತುಂಬಿಯ
ಮೇಳವದ ಗೀತದ ವಿನೋದದ
ಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ (ಅರಣ್ಯ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬದರಿಕಾಶ್ರಮದ ನದಿ, ಸರೋವರಗಳ ನಿರ್ಮಲ ಸ್ಥಾನಗಳು, ನವಿಲುಗಳ, ದುಂಬಿಗಳ ಸಂಗೀತಕ್ಕೆ ಸೊಗಸುತ್ತಾ ಪಾಂಡವರು ವನವಾಸ ಸಾಮ್ರಾಜ್ಯವನ್ನಾಳಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಆಶ್ರಮ: ಕುಟೀರ; ಕೂಲವತಿ: ನದಿ; ನಂದನ: ಸಂತಸ; ನಿರ್ಮಳ: ಶುದ್ಧ; ಸರೋವರ: ನದಿ; ಕೇಳಿಕೆ: ಶ್ರವಣ; ನವಿಲು: ಮಯೂರ; ತುಂಬಿ: ದುಂಬಿ; ಮೇಳ: ಗುಂಪು; ಗೀತ: ಹಾಡು; ವಿನೋದ: ವಿಹಾರ, ಸಂತೋಷ; ಆಳು: ಅಧಿಕಾರ ನಡೆಸು; ವನವಾಸ: ಕಾಡಿನಲ್ಲಿರುವ ಸ್ಥಿತಿ; ಸಾಮ್ರಾಜ್ಯ: ಚಕ್ರಾಧಿಪತ್ಯ; ಸೊಗಸು: ಅಂದ;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ನರನಾರಾಯಣಾಶ್ರಮ
ಕೂಲವತಿಗಳ+ ನಂದನದ +ನಿರ್ಮಳ +ಸರೋವರದ
ಕೇಳಿಕೆಯ +ನವಿಲುಗಳ +ತುಂಬಿಯ
ಮೇಳವದ +ಗೀತದ +ವಿನೋದದಲ್
ಆಳಿದರು +ವನವಾಸ +ಸಾಮ್ರಾಜ್ಯವನು +ಸೊಗಸಿನಲಿ

ಅಚ್ಚರಿ:
(೧) ವನವಾಸವನ್ನು ಹೇಳುವ ಪರಿ – ವಿನೋದದಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ

ನುಡಿಮುತ್ತುಗಳು: ಅರಣ್ಯ ಪರ್ವ ೧೧ ಸಂಧಿ

  • ವಿನೋದದಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ – ಪದ್ಯ ೧
  • ಭರಣಿ ಮನ್ಮಥ ಪೋತವಣಿಜನ ತರಣಿ ತರುಣ ಭ್ರಮರ ಸೇವಾಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ – ಪದ್ಯ ೨
  • ತಿಳಿಗೊಳನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ – ಪದ್ಯ ೩
  • ಮೊರೆದೊಗುವ ಮರಿದುಂಬಿಗಳ ಮೋಹರದ ಮೋಡಾ ಮೋಡಿಯಲಿಡಾವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ – ಪದ್ಯ ೩
  • ಚಡಾಳಿಸುವ ಸೊಗಸಿನಲಿ ಸೊಂಪಾದಳು ಸರೋಜಮುಖಿ – ಪದ್ಯ ೪
  • ಅಬುಜವದನೆಯ ಕುರುಳನಗುರಲಿ ತಿದ್ದಿದನು – ಪದ್ಯ ೬
  • ಬೊಬ್ಬೆಗಳ ಬಿರುದಿನ ಬಾಹು ಸತ್ವದ ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ – ಪದ್ಯ ೭
  • ಒದರಿದರೆ ಪರ್ವತದ ಶಿಖರದಲುದುರಿದವು ಹೆಗ್ಗುಂಡುಗಳು ಮುರಿದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು – ಪದ್ಯ ೮
  • ಒಡೆದುದಿಳೆ ಬೊಬ್ಬಿರಿತಕೀತನ ತೊಡೆಯ ಗಾಳಿಗೆ ಹಾರಿದವು ಕಿರುಗಿಡ ಮರಂಗಳು – ಪದ್ಯ ೯
  • ಹಳುವ ತಳಪಟವಾಯ್ತು ದಿಗ್ಗಜತುಳಿದ ಬಾಳೆಯ ವನದವೊಲು – ಪದ್ಯ ೧೦
  • ಭೀಮನ ದನಿಗೆ ಬೆಚ್ಚದೆ ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ – ಪದ್ಯ ೧
  • ಈ ಉದ್ದಾಮ ಸಿಂಹಧ್ವನಿಗೆ ನಿದ್ರಾತಾಮಸದ ತನಿಮದವಡಗೆ ದಂದೆರೆದನಾ ಹನುಮ – ಪದ್ಯ ೧
  • ನಿರಿನಿರಿಲು ನಿರಿಲೆನುತ ಹೆಮ್ಮರ ಮುರಿದುದಾತನ ರೋಮ ಸೋಂಕಿನಲ್ – ಪದ್ಯ ೧
  • ಸಮೀರಣನ ಸಂಭಾವನೆಗೆ ಸೊಗಸಿದಳು ಸತಿ – ಪದ್ಯ ೧
  • ಬಾಲದ ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ – ಪದ್ಯ ೧
  • ಊರ್ದ್ವಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ – ಪದ್ಯ ೧
  • ಗೌಡೊತ್ತುಗಳ ಬಲಿದವಯವದ ಸತ್ರಾಣಿಗಳ ದೇವನು ಠಾವುರಿಯಲೊದಗಿದನು ಬಾಲದಲಿ – ಪದ್ಯ ೨೦
  • ವಿಮಲ ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ – ಪದ್ಯ ೨
  • ಈ ಮನುಷ್ಯ ಶರೀರವಪಜಯಧಾಮವಲ್ಲಾ- ಪದ್ಯ ೨
  • ಸೋಮಾಭಿಕುಲದಲಿ ಜನಿಸಿದನು ವರ ಪಾಂಡುವಾತನ ತನುಜರಾವು – ಪದ್ಯ ೨
  • ನಾವು ಹಿಂದಣ ಯುಗದ ರಾಘವದೇವನೋಲೆಯಕಾರರ್ – ಪದ್ಯ ೨
  • ಜರುಗಿನಲಿ ಜಾಂಬೂನದದ ಸಂವರಣೆಕಾರಂಗೆಡೆಯೊಳಿರ್ದುದು ಪರಮನಿಧಿ – ಪದ್ಯ ೨
  • ಲಲಿತ ವಚನಕೆ ನಿನ್ನ ಭುಜದಗ್ಗಳಿಕೆಗಾ ಮೆಚ್ಚಿದೆನು ಹಿಮಕರಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ – ಪದ್ಯ ೩೧
  • ಕಲಿಯುಗದ ದುರ್ಮತಿ ಮನುಷ್ಯವ್ರಾತ ಹೀನಾಕೃತಿ ಕಣಾ – ಪದ್ಯ ೩೪
  • ಮೇದಿನಿಯ ಹೊರೆಕಾರರಳ್ಳೆದೆ ಯಾದರಳುಕಿದವದ್ರಿಗಳು ಸಪ್ತೋದಧಿಗಳುಕ್ಕಿದವೆನಲು ಹೆಚ್ಚಿದನು ಹನುಮಂತ – ಪದ್ಯ ೩೭
  • ಮೇರುವಿನ ತಪ್ಪಲಲಿ ಬೆಳೆದ ಬಲಾರಿ ಚಾಪವೊ; ತ್ರಿವಿಕ್ರಮ ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲುಮಿಣಿಯೊ; ತ್ರಿಪುರಾರಿಯೊಡ್ಡಿನ ಹೊಳಹಿನಲಿ ಹೊಳೆಹೊಳೆದನಾ ಹನುಮ – ಪದ್ಯ ೩೮
  • ನೋಡಿದನು ನಡುಗಿದನು ಕಂಗಳ ಕೋಡಿಯಲಿ ನೀರೊರೆಯೆ ಹರುಷದ ಝಾಡಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ – ಪದ್ಯ ೩೯
  • ಮನುಜರು ಕಾಕುಬಲರು ನಿಜ ಸ್ವಭಾವವ ನೇಕೆ ಬಿಡುವೆವು ತಿಳಿದು ತಿಳಿಯೆವು ಕಂಡೊಡಂಜುವೆವು – ಪದ್ಯ ೪೦
  • ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ ಮೊರೆವ ತುಂಬಿಯ ಥಟ್ಟುಗಳ ತನಿವರಿವ ತಂಪಿನ ತುರಗಲಿನ ತತ್ಸರಸಿಯ – ಪದ್ಯ ೪೩
  • ಝಳದ ಲಳಿ ಲಟಕಟಿಸೆ ಮಾರ್ಗ ಸ್ಖಲಿತ ಖೇದ ಸ್ವೇದ ಬಿಂದುಗಳೊಳಸರಿಯೆ ರೋಮಾಳಿಕಾಣಿಸೆ ತೃಷೆಯ ದೆಸೆ ಮುರಿಯೆ – ಪದ್ಯ ೪೫
  • ಬೇಡುವುದು ಗದೆ ನಿಮ್ಮ ವಕ್ಷವ ತೋಡಿ ನೆತ್ತರುಗೊಳದೊಳೋಕುಳಿಯಾಡುವುದನೆಂದನಿಲಸುತ ತೂಗಿದನು ನಿಜಗದೆಯ – ಪದ್ಯ ೫೦
  • ಹೆಬ್ಬುಲಿಯ ಹಿಂಡಿಗೆ ಹೋತ ಹೊಡಕರಿಸಿತು – ಪದ್ಯ ೫೧
  • ತಾಗಿದೆಳೆಮುಳ್ಳಿನಲಿ ಮದಗಜ ಸೀಗುರಿಸುವುದೆ – ಪದ್ಯ ೫೨
  • ತಾಗಿದವದಿರನಿಕ್ಕಿದನು ರಣದಾಗಡಿಗರನು ಸೆಕ್ಕಿದನು ಕೈದಾಗಿಸಿದನನಿಬರಲಿ ಗಂಡುಗತನದ ಗಾಡಿಯಲಿ – ಪದ್ಯ ೫೨
  • ದಳದಲಿಜಾರಿ ತಾವರೆಯೆಲೆಯ ಮರೆಗಳ ಲಾರಡಿಗಳಡಗಿದವು – ಪದ್ಯ ೫೪
  • ತಳುವದಲೆ ತನಿಹೊರೆದ ಶೀತಳ ಜಲವ ಕೊಂಡಾಪ್ಯಾಯಿತಾಂತರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ – ಪದ್ಯ ೫೭
  • ಕಮಲವನವನು ಲೋಚಿನಲಿ ಲಾವಣಿಗೆಗೊಂಡನು ಭೀಮನಿಮಿಷದಲಿ – ಪದ್ಯ ೫೮
  • ಚಾಚಿದನು ಬರಿಕೈಯನಬುಜಕೆಚಾಚುವಿಭಪತಿಯಂತೆ; ವೀಚಿ ಮಸಗುವ ಕೊಳನು ಜಿನ ಋಷಿಯಾಚರಣೆಯೊಳು – ಪದ್ಯ ೫೮
  • ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ – ಪದ್ಯ ೫೯

ಪದ್ಯ ೩೮: ಬದರಿಕಾಶ್ರಮದಲ್ಲಿ ಎಷ್ಟು ದಿನ ಕಳೆದನು?

ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭವನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆಂಟು ದಿನವನು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬದರಿಕಾಶ್ರಮದಲ್ಲಿದ್ದ ಮುನಿಗಳು, ಪಾಂಡವರನನ್ನು ಆದರಿಸಿ ಆತಿಥ್ಯವನ್ನು ಮಾಡಿ ಮಧುರ ಮಾತುಗಳಿಂದ ಸಂಭಾವಿಸಿದರು. ಧರ್ಮಜನು ಸಕಲ ಮುನಿಜರನ್ನು ಮನ್ನಿಸಿ ಎಂಟು ದಿನಗಳ ಕಾಲ ಅಲ್ಲಿದ್ದನು.

ಅರ್ಥ:
ಅಖಿಳ: ಎಲ್ಲಾ; ಋಷಿ: ಮುನಿ; ವ್ರಜ: ಗುಂಪು; ಭೂವಲ್ಲಭ: ರಾಜ; ಆತಿಥ್ಯ: ಅತಿಥಿಸತ್ಕಾರ; ಪೂಜೆ: ಆರಾಧನೆ; ಸಲ್ಲಲಿತ: ಅಂದ, ಚೆಲುವು; ಸಂಭಾವನೆ: ಮನ್ನಣೆ; ಮಧುರ: ಸಿಹಿ; ಉಕ್ತಿ: ಮಾತು; ರಚನೆ: ಸೃಷ್ಟಿ; ಸಕಲ: ಎಲ್ಲಾ; ಮುನಿ: ಋಷಿ; ಮನ್ನಿಸು: ಗೌರವಿಸು; ವನ: ಕಾಡು; ನೂಕು: ತಳ್ಳು; ದಿನ: ದಿವಸ; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅಲ್ಲಿ+ಅಖಿಳ +ಋಷಿ+ವ್ರಜವು +ಭೂ
ವಲ್ಲಭವನನ್+ಆತಿಥ್ಯ+ ಪೂಜಾ
ಸಲ್ಲಲಿತ +ಸಂಭಾವನಾ +ಮಧುರೋಕ್ತಿ +ರಚನೆಯಲಿ
ಅಲ್ಲಿಗಲ್ಲಿಗೆ +ಸಕಲ +ಮುನಿಜನ
ವೆಲ್ಲವನು+ ಮನ್ನಿಸಿದನಾ+ ವನ
ದಲ್ಲಿ +ನೂಕಿದನ್+ಎಂಟು +ದಿನವನು +ನೃಪತಿ+ ಕೇಳೆಂದ

ಅಚ್ಚರಿ:
(೧) ಋಷಿವ್ರಜ, ಮುನಿಜನ; ಅಖಿಳ, ಸಕಲ; ಭೂವಲ್ಲಭ, ನೃಪತಿ – ಸಮನಾರ್ಥಕ ಪದ