ಪದ್ಯ ೮೫: ಅರ್ಜುನನನ್ನು ನೋಡಲು ಯಾರು ಬಂದರು?

ನುಸಿಗಳಿವದಿರು ಮರ್ತ್ಯರೆಂಬವ
ರೊಸಗೆಯಮರಾವತಿಯೊಳೇನಿದು
ಹೊಸತಲಾ ಬಂದಾತನಾರೋ ಪೂತುರೇಯೆನುತ
ವಸುಗಳಾದಿತ್ಯರು ಭುಜಂಗಮ
ವಿಸರ ಗಂಧರ್ವಾದಿ ದೇವ
ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ (ಅರಣ್ಯ ಪರ್ವ, ೮ ಸಂಧಿ, ೮೫ ಪದ್ಯ)

ತಾತ್ಪರ್ಯ:
ಮನುಷ್ಯರು ದೇವತೆಗಳಿಗೆ ನುಸಿಗಳಿದ್ದ ಹಾಗೆ, ಅಂತಹದರಲ್ಲಿ ಈ ಹುಲು ಮಾನವನು ಬಂದುದಕ್ಕೆ ಅಮರಾವತಿಯಲ್ಲೇಕೆ ಶುಭಸಮಾರಂಭ? ಬಂದವನು ಯಾರೋ ಹೋಗಿ ನೋಡೋಣ ಎಂದು ವಸುಗಳು, ಆದಿತ್ಯರು, ಸರ್ಪಗಳು, ಗಂಧರ್ವರ ಗುಂಪುಗಳು ಅರ್ಜುನನನ್ನು ನೋಡಲು ಬಂದರು.

ಅರ್ಥ:
ನುಸಿ: ಹುಡಿ, ಧೂಳು; ಇವದಿರು: ಇವರು; ಮರ್ತ್ಯ: ಮನುಷ್ಯ; ಒಸಗೆ: ಶುಭ, ಮಂಗಳಕಾರ್ಯ;
ಹೊಸತು: ನವೀನ; ಬಂದು: ಆಗಮಿಸು; ಪೂತುರೆ: ಭಲೇ, ಭೇಷ್; ವಸು: ದೇವತೆಗಳ ಒಂದು ವರ್ಗ; ಆದಿತ್ಯ: ಸೂರ್ಯ; ಭುಜಂಗ: ಹಾವು; ವಿಸರ: ವಿಸ್ತಾರ, ವ್ಯಾಪ್ತಿ; ಗಂಧರ್ವ: ದೇವಲೋಕದ ಸಂಗೀತಗಾರ; ಪ್ರಸರ: ಹರಡುವುದು; ಕಾಣಿಕೆ: ಉಡುಗೊರೆ, ದಕ್ಷಿಣೆ; ಪುರುಹೂತ: ಇಂದ್ರ; ನಂದನ: ಮಗ;

ಪದವಿಂಗಡಣೆ:
ನುಸಿಗಳ್+ಇವದಿರು +ಮರ್ತ್ಯರೆಂಬ್+ಅವರ್
ಒಸಗೆ+ಅಮರಾವತಿಯೊಳ್+ಏನಿದು
ಹೊಸತಲಾ +ಬಂದಾತನ್+ ಆರೋ +ಪೂತುರೇ+ಎನುತ
ವಸುಗಳ್+ಅದಿತ್ಯರು +ಭುಜಂಗಮ
ವಿಸರ +ಗಂಧರ್ವಾದಿ+ ದೇವ
ಪ್ರಸರ +ಬಂದುದು+ ಕಾಣಿಕೆಗೆ+ ಪುರುಹೂತ+ ನಂದನನ

ಅಚ್ಚರಿ:
(೧) ದೇವತೆಗಳ ವರ್ಗ: ಅದಿತ್ಯರು, ಭುಜಂಗ, ಗಂಧರ್ವ

ಪದ್ಯ ೮೪: ಅರ್ಜುನನು ಹೇಗೆ ಪ್ರಜ್ವಲಿಸಿದನು?

ನೂರು ಪಶುಗೆಡಹಿಗೆ ಸುರೇಂದ್ರನು
ಮಾರುವನು ಗದ್ದುಗೆಯ ಬರಿದೇ
ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
ಮೂರು ಯುಗದರಸುಗಳೊಳೀತಗೆ
ತೋರಲೆಣೆಯಿಲ್ಲೆನಲು ಶಕ್ರನ
ನೂರು ಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ (ಅರಣ್ಯ ಪರ್ವ, ೮ ಸಂಧಿ, ೮೪ ಪದ್ಯ)

ತಾತ್ಪರ್ಯ:
ನೂರು ಅಶ್ವಮೇಧಗಳನ್ನು ಮಾಡಿದಂತವನಿಗೆ ಇಂದ್ರನು ತನ್ನ ಸಿಂಹಾಸನದಲ್ಲಿ ಸ್ಥಳ ಕೊಡುತ್ತಾನೆ. ಇವನಾದರೋ ಏನೂ ಇಲ್ಲದೆ ಇಂದ್ರನ ಸಿಂಹಾಸನವನ್ನು ಏರಿದನು. ಕೃತ, ತ್ರೇತಾ, ದ್ವಾಪರ ಯುಗಗಳ ಯಾವ ಅರಸರೂ ಇವನಿಗೆ ಸಮನಲ್ಲ ಎನ್ನುವಂತೆ ಅರ್ಜುನನು
ಇಂದ್ರನ ನೂರು ಪಟ್ಟು ತೇಜಸ್ಸಿನಿಂದ ಬೆಳಗಿದನು.

ಅರ್ಥ:
ನೂರು: ಶತ; ಪಶು: ಮೃಗ; ಕೆಡಹು: ಸಾಯಿಸು, ಬಲಿಕೊಡು; ಸುರೇಂದ್ರ: ಇಂದ್ರ; ಮಾರು: ನೀಡು; ಗದ್ದುಗೆ: ಪೀಠ; ಬರಿ: ಪಕ್ಕ, ಸುಮ್ಮನೆ; ಸೂರೆ: ಸುಲಿಗೆ; ಸುರಪತಿ: ಇಂದ್ರ; ಸಿಂಹಾಸನ: ರಾಜರ ಆಸನ; ಸಿರಿ: ಐಶ್ವರ್ಯ; ಯುಗ: ದೀರ್ಘವಾದ ಕಾಲಖಂಡ; ಅರಸು: ರಾಜ; ತೋರಲು: ಗೋಚರಿಸಲು ಎಣೆ: ಸರಿಸಾಟಿ; ಶಕ್ರ: ಇಂದ್ರ; ಮಡಿ: ಪಟ್ಟು; ತೇಜ: ಪ್ರಕಾಶ; ತೊಳ: ಪ್ರಕಾಶಿಸು; ಕಲಿ: ಶೂರ;

ಪದವಿಂಗಡಣೆ:
ನೂರು +ಪಶುಗೆಡಹಿಗೆ+ ಸುರೇಂದ್ರನು
ಮಾರುವನು +ಗದ್ದುಗೆಯ+ ಬರಿದೇ
ಸೂರೆಗೊಂಡನು+ ಸುರಪತಿಯ+ ಸಿಂಹಾಸನದ+ ಸಿರಿಯ
ಮೂರು +ಯುಗದ್+ಅರಸುಗಳೊಳ್+ಈತಗೆ
ತೋರಲ್+ಎಣೆಯಿಲ್ಲ್+ಎನಲು +ಶಕ್ರನ
ನೂರು +ಮಡಿ +ತೇಜದಲಿ+ ತೊಳತೊಳಗಿದನು +ಕಲಿಪಾರ್ಥ

ಅಚ್ಚರಿ:
(೧) ಸ ಕಾರದ ಸಾಲು ಪದ – ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
(೨) ಸುರೇಂದ್ರ, ಸುರಪತಿ, ಶಕ್ರ – ಇಂದ್ರನನ್ನು ಕರೆದ ಬಗೆ

ಪದ್ಯ ೮೩: ಇಂದ್ರನು ಅರ್ಜುನನನ್ನು ಹೇಗೆ ಬರಮಾಡಿಕೊಂಡನು?

ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು
ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ (ಅರಣ್ಯ ಪರ್ವ, ೮ ಸಂಧಿ, ೮೩ ಪದ್ಯ)

ತಾತ್ಪರ್ಯ:
ಅರ್ಜುನನು ರಥವನ್ನಿಳಿದು ದೇವೇಂದ್ರನ ಮನೆಯನ್ನು ಹೊಕ್ಕನು. ಹತ್ತಿರದಲ್ಲೇ ಅವನನ್ನು ಕಂಡು ಇಂದ್ರನು ನಗುತ್ತಾ ಎದುರುಬಂದನು. ಮಗನನ್ನು ಬರಸೆಳೆದು ಬಿಗಿದಪ್ಪಿ ಕೈಗೆ ಕೈಯನ್ನು ಜೋಡಿಸಿ, ಕರೆದೊಯ್ದು ತನ್ನ ಸಿಂಹಾಸನದಲ್ಲಿ ದೇವೇಂದ್ರನು ಅರ್ಜುನನನ್ನು ಕುಳ್ಳಿರಿಸಿಕೊಂಡನು.

ಅರ್ಥ:
ಇಳಿ: ಕೆಳಕ್ಕೆ ಬಾ; ರಥ: ಬಂಡಿ; ದಿವಿಜ: ದೇವತೆ; ರಾಯ: ಒಡೆಯ; ನಿಳಯ: ಮನೆ; ಹೊಕ್ಕು: ಸೇರು; ಕಿರೀಟಿ: ಅರ್ಜುನ; ಅಳವಿ: ಹತ್ತಿರ; ಕಂಡು: ನೋಡು, ಭೇಟಿ; ಇದಿರು: ಎದುರು; ಬಂದು: ಆಗಮಿಸು; ನಗುತ: ಸಂತಸ; ಶತಮನ್ಯು: ದೇವೇಂದ್ರ; ಸೆಳೆ: ಆಕರ್ಷಿಸು; ಬಿಗಿ: ಭದ್ರವಾಗಿ; ಅಪ್ಪು: ಆಲಂಗಿಸು; ಕರ: ಹಸ್ತ; ತಳುಕು: ಜೋಡಣೆ; ಕರ: ಹಸ್ತ; ತಂದು: ಬರೆಮಾಡು; ಕೆಲ: ಹತ್ತಿರ; ಕುಳ್ಳಿರಿಸು: ಆಸೀನನಾಗು; ಸಿಂಹಾಸನ: ರಾಜರ ಆಸನ; ಅರ್ಧ: ಎರಡು ಸಮಪಾಲುಗಳಲ್ಲಿ ಒಂದು;

ಪದವಿಂಗಡಣೆ:
ಇಳಿದು+ ರಥವನು +ದಿವಿಜ+ರಾಯನ
ನಿಳಯವನು +ಹೊಕ್ಕನು +ಕಿರೀಟಿಯ
ನಳವಿಯಲಿ+ ಕಂಡ್+ಇದಿರು +ಬಂದನು +ನಗುತ +ಶತಮನ್ಯು
ಸೆಳೆದು +ಬಿಗಿದಪ್ಪಿದನು +ಕರದಲಿ
ತಳುಕಿ +ಕರವನು +ತಂದು +ತನ್ನಯ
ಕೆಲದೊಳಗೆ +ಕುಳ್ಳಿರಿಸಿದನು +ಸಿಂಹಾಸನ+ಅರ್ಧದಲಿ

ಅಚ್ಚರಿ:
(೧) ಪ್ರೀತಿ, ಮಮಕಾರ, ವಾತ್ಸಲ್ಯವನ್ನು ತೋರುವ ಪರಿ – ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ

ಪದ್ಯ ೮೨: ಅರ್ಜುನನು ಅಮರಾವತಿಯನ್ನು ಹೇಗೆ ಪ್ರವೇಶಿಸಿದನು?

ಹೊಕ್ಕನಮರಾವತಿಯನರ್ಜುನ
ಎಕ್ಕತುಳದಲುಪಾರ್ಜಿಸಿದಪು
ಣ್ಯಕ್ಕೆ ಸರಿಯೇ ನಳನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರಸೂಳೆಗೇರಿಗಳೊಳಗೆ ನಡೆ ತಂದ (ಅರಣ್ಯ ಪರ್ವ, ೮ ಸಂಧಿ, ೮೨ ಪದ್ಯ)

ತಾತ್ಪರ್ಯ:
ಅರ್ಜುನನು ಅಮರಾವತಿಯನ್ನು ಪ್ರವೇಶಿಸಿದನು. ತನ್ನ ಪರಾಕ್ರಮದಿಮ್ದ ಅವನು ಗಳಿಸಿದ ಪುಣ್ಯಕ್ಕೆ ಸರಿ ಸಮಾನವಾದುದು ಇಲ್ಲ. ನಳ ನಹುಷ ಭರತನೇ ಮೊದಲಾದವರ ಪುಣ್ಯವು ಇವನ ಪುಣ್ಯಕ್ಕೆ ಸಮವಲ್ಲ. ಅರ್ಜುನನು ಅಮರಾವತಿಯ ಸೂಳೆಕೇರಿಗಳಲ್ಲಿ ರಥದಲ್ಲಿ ಚಲಿಸಿದನು, ಅಲ್ಲಿ ಸುಗಂಧ, ಸೌಂದರ್ಯ ತೇಜದ ತೆಕ್ಕೆಗಳು ಲಾವಣ್ಯದ ತೆರೆಗಳು ಕೊಬ್ಬಿ ಕಂಗೊಳಿಸುತ್ತಿದ್ದವು.

ಅರ್ಥ:
ಹೊಕ್ಕು: ಸೇರು; ಎಕ್ಕತುಳ: ಪರಾಕ್ರಮ; ಆರ್ಜಿಸು: ಸಂಪಾದಿಸು; ಪುಣ್ಯ: ಸದಾಚಾರ; ಸರಿ: ಸಮಾನವಾದ; ಭೂಮಿಪ: ರಾಜ; ಉಕ್ಕು: ಸುರಿ; ಪರಿಮಳ: ಸುಗಂಧ; ತೇಜ: ಕಾಂತಿ; ತೆಕ್ಕೆ: ಗುಂಪು; ಲಾವಣ್ಯ: ಚೆಲುವು, ಸೌಂದರ್ಯ; ಲಹರಿ: ರಭಸ, ಆವೇಗ; ಸೊಕ್ಕು:ಅಮಲು, ಮದ; ಸುರ: ದೇವತೆ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ನಡೆ: ಚಲಿಸು, ಹೋಗು;

ಪದವಿಂಗಡಣೆ:
ಹೊಕ್ಕನ್+ಅಮರಾವತಿಯನ್+ಅರ್ಜುನ
ಎಕ್ಕತುಳದಲು+ಪಾರ್ಜಿಸಿದ+ಪು
ಣ್ಯಕ್ಕೆ +ಸರಿಯೇ +ನಳ+ನಹುಷ+ ಭರತಾದಿ+ ಭೂಮಿಪರು
ಉಕ್ಕಿದವು+ ಪರಿಮಳದ +ತೇಜದ
ತೆಕ್ಕೆಗಳು +ಲಾವಣ್ಯ +ಲಹರಿಯ
ಸೊಕ್ಕುಗಳ+ ಸುರಸೂಳೆ+ಕೇರಿಗಳ್+ಒಳಗೆ +ನಡೆ ತಂದ

ಅಚ್ಚರಿ:
(೧) ಲಾವಣ್ಯ ಲಹರಿ, ಸೋಕ್ಕುಗಳ ಸುರಸೂಳೆಕೇರಿ; ಭರತಾದಿ ಭೂಮಿಪರು; ತೇಜದ ತೆಕ್ಕೆಗಳು – ಜೋಡಿ ಅಕ್ಷರದ ಪದಗಳು

ಪದ್ಯ ೮೧: ಇಂದ್ರನ ಆಲಯ ಹೇಗಿದೆ?

ಹೊಳೆವುತಿದೆ ದೂರದಲಿ ರಜತಾ
ಚಲವ ಕಂಡಂದದಲಿ ಕೆಲದಲಿ
ಬಲವಿರೋಧಿಯ ಪಟ್ಟದಾನೆ ಸುರೆಂದ್ರ ನಂದನನೆ
ನಿಳಯವದೆ ನಸುದೂರದಲಿ ಥಳ
ಥಳಿಸುವಮಳ ಮಣಿ ಪ್ರಭಾಪರಿ
ವಳಯ ರಶ್ಮಿ ನಿಬದ್ಧವಮರಾವತಿಯ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೮೧ ಪದ್ಯ)

ತಾತ್ಪರ್ಯ:
ದೂರದಲ್ಲಿ ಬೆಳ್ಳಿಯ ಬೆಟ್ಟವೋ ಎಂಬಂತೆ ಇಂದ್ರನ ಪಟ್ಟದಾನೆ ಐರಾವತವು ಕಾಣಿಸುತ್ತಿದೆ. ಸ್ವಲ್ಪವೇ ದೂರದಲ್ಲಿ ಅತಿ ಶ್ರೇಷ್ಠವಾದ ದೋಷವಿಲ್ಲದ ಮಣಿ ರಶ್ಮಿಗಳಿಂದ ಕೂಡಿದ ದೇವೇಂದ್ರನ ಮನೆಯಿದೆ. ಅದೋ ಹೊಳೆಯುವ ಅಮರಾವತಿಯನ್ನು ನೋಡು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಹೊಳೆ: ಪ್ರಕಾಶಿಸು; ದೂರ: ಬಹಳ ಅಂತರ; ರಜತ: ಬೆಳ್ಳಿ; ಅಚಲ: ಬೆಟ್ಟ; ಕಂಡು: ನೋಡು; ಅಂದ: ಚೆಲುವು; ಕೆಲ: ಕೊಂಚ, ಸ್ವಲ್ಪ, ಮಗ್ಗಲು; ಬಲ: ರಾಕ್ಷಸನ ಹೆಸರು; ವಿರೋಧಿ: ವೈರಿ; ಬಲವಿರೋಧಿ: ಇಂದ್ರ; ಆನೆ: ಗಜ; ಸುರೇಂದ್ರ: ಇಂದ್ರ; ನಂದನ: ಮಗ; ನಿಳಯ: ಮನೆ; ನಸು: ಸ್ವಲ್ಪ; ಥಳಥಳಿಸು: ಹೊಳೆ, ಪ್ರಕಾಶಿಸು; ಅಮಳ: ನಿರ್ಮಲ; ಮಣಿ: ಬೆಲೆಬಾಳುವ ರತ್ನ; ಪ್ರಭೆ: ಕಾಂತಿ; ವಳಯ: ಆವರಣ; ರಶ್ಮಿ: ಕಾಂತಿ; ನಿಬದ್ಧ: ಕಟ್ಟಲ್ಪಟ್ಟ; ನೋಡು: ವೀಕ್ಷಿಸು;

ಪದವಿಂಗಡಣೆ:
ಹೊಳೆವುತಿದೆ +ದೂರದಲಿ +ರಜತಾ
ಚಲವ +ಕಂಡಂದದಲಿ +ಕೆಲದಲಿ
ಬಲವಿರೋಧಿಯ +ಪಟ್ಟದಾನೆ +ಸುರೆಂದ್ರ+ ನಂದನನೆ
ನಿಳಯವ್+ಅದೆ+ ನಸು+ದೂರದಲಿ +ಥಳ
ಥಳಿಸುವ್+ಅಮಳ +ಮಣಿ +ಪ್ರಭಾಪರಿ
ವಳಯ +ರಶ್ಮಿ+ ನಿಬದ್ಧವ್+ಅಮರಾವತಿಯ +ನೋಡೆಂದ

ಅಚ್ಚರಿ:
(೧) ಇಂದ್ರನನ್ನು ಬಲವಿರೋಧಿ, ಸುರೇಂದ್ರ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ರಜತಾಚಲವ ಕಂಡಂದದಲಿ ಕೆಲದಲಿ ಬಲವಿರೋಧಿಯ ಪಟ್ಟದಾನೆ

ಪದ್ಯ ೮೦: ಸ್ವರ್ಗಕ್ಕೆ ಭರತವರ್ಷದಿಂದ ಯಾರು ಹೋಗಿದ್ದಾರೆ?

ಇದೆಯಸಂಖ್ಯಾತ ಕ್ಷಿತೀಶ್ವರ
ರುದಿತ ಕೃತಪುಣ್ಯೋಪಚಯ ಭೋ
ಗದಲಿ ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ
ಇದರೊಳಗೆ ಜಪ ಯಜ್ಞ ದಾನಾ
ಭ್ಯುದಯ ವೈದಿಕ ಕರ್ಮನಿಷ್ಠರ
ಪದವಿಗಳ ಪರುಠವಣೆಯನು ಕಲಿಪಾರ್ಥನೋಡೆಂದ (ಅರಣ್ಯ ಪರ್ವ, ೮ ಸಂಧಿ, ೮೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಿಮ್ಮದು ಪುಣ್ಯಭೂಮಿಯಾದ ಭರತವರ್ಷ, ಇಲ್ಲಿ ಅಸಂಖ್ಯಾತ ರಾಜರು ತಾವು ಮಾಡಿದ ಪುಣ್ಯ ಕರ್ಮ ಸಂಗ್ರಹದಿಂದ ಸ್ವರ್ಗವನ್ನು ಸಂಪಾದಿಸಿದ್ದಾರೆ. ಇಲ್ಲಿ ಜಪ, ತಪ, ಯಜ್ಞ, ದಾನ ಅಭ್ಯುದಯವನ್ನುಂಟು ಮಾಡುವ ವೈದಿಕ ಕರ್ಮಗಳಿಂದ ಸ್ವರ್ಗಕ್ಕೆ ಬಂದು ಸುಖವನ್ನನುಭವಿಸುತ್ತಿದ್ದಾರೆ, ಈ ವ್ಯವಸ್ಥೆಯನ್ನು ಗಮನಿಸು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಅಸಂಖ್ಯಾತ: ಲೆಕ್ಕವಿಲ್ಲದಷ್ಟು; ಕ್ಷಿತೀಶ್ವರ: ರಾಜ; ಕ್ಷಿತಿ: ಭೂಮಿ; ಉದಿತ: ಹುಟ್ಟಿದ; ಕೃತ: ಮಾಡಿದ; ಪುಣ್ಯ: ಸದಾಚಾರ; ಉಪಚಯ: ಶೇಖರಣೆ, ರಾಶಿ; ಭೋಗ: ಸುಖವನ್ನು ಅನುಭವಿಸುವುದು; ಪುಣ್ಯಭೂಮಿ: ಶ್ರೇಷ್ಠವಾದ ನೆಲೆ; ಜಪ: ತಪಸ್ಸು; ಯಜ್ಞ: ಯಾಗ; ದಾನ: ನೀಡು; ಅಭ್ಯುದಯ: ಏಳಿಗೆ; ವೈದಿಕ: ವೇದದಲ್ಲಿ ಹೇಳಿರುವ; ಕರ್ಮ: ಕಾರ್ಯ; ನಿಷ್ಠ: ಶ್ರದ್ಧೆಯುಳ್ಳವನು; ಪದವಿ: ಸ್ಥಾನ; ಪರುಠವ: ವಿಸ್ತಾರ, ಹರಹು; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ಇದೆ+ಅಸಂಖ್ಯಾತ +ಕ್ಷಿತೀಶ್ವರರ್
ಉದಿತ +ಕೃತ+ಪುಣ್ಯ+ಉಪಚಯ +ಭೋ
ಗದಲಿ +ಭಾರತ +ವರುಷ +ನಿಮ್ಮದು +ಪುಣ್ಯಭೂಮಿ +ಕಣ
ಇದರೊಳಗೆ+ ಜಪ +ಯಜ್ಞ +ದಾನ
ಅಭ್ಯುದಯ +ವೈದಿಕ+ ಕರ್ಮನಿಷ್ಠರ
ಪದವಿಗಳ +ಪರುಠವಣೆಯನು +ಕಲಿ+ಪಾರ್ಥ+ನೋಡೆಂದ

ಅಚ್ಚರಿ:
(೧) ಭರತ ಭೂಮಿಯನ್ನು ಹೊಗಳುವ ಪರಿ – ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ