ಪದ್ಯ ೨೩: ಮಾತಲಿಯು ಅರ್ಜುನನಿಗೆ ಯಾವುದನ್ನು ವಿವರಿಸಿದನು?

ಕೇಳು ನೀನೆಲೆ ಪಾರ್ಥ ತಾರಾ
ಮಾಲೆಗಳ ವಿವರವನು ರವಿರಥ
ಕಾಲಚಕ್ರವನೈದಿ ಗಗನಾಂಗಣದಿ ಚರಿಯಿಪುದ
ಲೀಲೆಯಿಂದಬುಜೋದರನು ಸಲೆ
ಪಾಲಿಸುವ ಲೋಕಗಳನೆಂದವ
ಶೂಲಿಯಂಘ್ರಿಯ ನೆನೆದು ಪೇಳಿದ ಭುವನಕೋಶವನು (ಅರಣ್ಯ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಕ್ಷತ್ರಗಳ ಮಾಲೆಗಳನ್ನೂ, ರವಿರಥವು ಆಕಾಶದಂಗಳದಲ್ಲಿ ಕಾಲಚಕ್ರವು ಚರಿಸುವುದನ್ನೂ, ವಿಷ್ಣುವು ಪಾಲಿಸುವ ಲೋಕಗಳನ್ನೂ ಕುರಿತು ಹೇಳುತ್ತೇನೆ ಎಂದು ಮಾತಲಿಯು ಶಿವನ ಪಾದವನ್ನು ನೆನೆದು ಭುವನ ಕೋಶದ ವಿವರವನ್ನು ಹೇಳಿದನು.

ಅರ್ಥ:
ಕೇಳು: ಆಲಿಸು; ತಾರ: ನಕ್ಷತ್ರ; ಮಾಲೆ: ಗುಂಪು, ಸರ; ವಿವರ: ವಿವರಣೆ; ರವಿ: ಸೂರ್ಯ; ರಥ: ಬಂಡಿ; ಕಾಲ: ಸಮಯ; ಚಕ್ರ: ಗಾಲಿ; ಗಗನ: ಆಗಸ; ಅಂಗಣ: ಅಂಗಳ; ಚರಿಯಿಪು: ಚಲಿಸುವ; ಲೀಲೆ: ಆನಂದ; ಅಬುಜೋದರ: ವಿಷ್ಣು; ಅಬುಜ: ತಾವರೆ; ಉದರ: ಹೊಟ್ಟೆ; ಸಲೆ: ವಿಸ್ತೀರ್ಣ; ಪಾಲಿಸು: ರಕ್ಷಿಸು; ಲೋಕ: ಜಗತ್ತು; ಶೂಲಿ: ಶಿವ; ಅಂಘ್ರಿ: ಪಾದ; ನೆನೆ: ಜ್ಞಾಪಿಸು; ಪೇಳು: ಹೇಳು; ಭುವನ: ಜಗತ್ತು; ಕೋಶ: ಭಂಡಾರ;

ಪದವಿಂಗಡಣೆ:
ಕೇಳು+ ನೀನೆಲೆ +ಪಾರ್ಥ +ತಾರಾ
ಮಾಲೆಗಳ +ವಿವರವನು +ರವಿ+ರಥ
ಕಾಲಚಕ್ರವನ್+ಐದಿ +ಗಗನಾಂಗಣದಿ+ ಚರಿಯಿಪುದ
ಲೀಲೆಯಿಂದ್+ಅಬುಜೋದರನು +ಸಲೆ
ಪಾಲಿಸುವ +ಲೋಕಗಳನ್+ಎಂದವ
ಶೂಲಿ+ಅಂಘ್ರಿಯ +ನೆನೆದು +ಪೇಳಿದ +ಭುವನ+ಕೋಶವನು

ಅಚ್ಚರಿ:
(೧) ವಿಷ್ಣುವನ್ನು ಅಬುಜೋದರ ಎಂದು ಕರೆದಿರುವುದು

ಪದ್ಯ ೨೨: ಮಾಲತಿಯು ಅರ್ಜುನನಿಗೆ ಏನನ್ನು ತೋರಿಸಿದನು?

ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನಾತಂಗೆ ಭೂಮಿಯ
ಭುವನ ಕೋಶದ ಸನ್ನಿವೇಶವನದ್ರಿಜಾಲಗಳ
ಇವು ಕುಲಾದ್ರಿಗಳಿವು ಪಯೋನಿಧಿ
ಯಿವು ಮಹಾದ್ವೀಪಂಗಳಿವು ಮಾ
ನವರ ಧರಣಿ ಸ್ವರ್ಗವಿಲ್ಲಿನ್ನಿತ್ತ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಮಾಲತಿಯು ಅರ್ಜುನನಂಗೆ ಭೂಮಿಯನ್ನೂ ವಿಶ್ವದಲ್ಲಿ ಅದರ ಸನ್ನಿವೇಶವನ್ನು ವಿವರಿಸಿದನು. ಎಲೈ ಅರ್ಜುನ ನೋಡು ಇವು ಕುಲಪರ್ವತಗಳು, ಇವು ಸಮುದ್ರಗಳು, ಇವು ಮಹಾದ್ವೀಪಗಳು, ಇದು ಮನುಷ್ಯರಿರುವ ಭೂಮಿ, ಈ ಕಡೆಯಿರುವುದೇ ಸ್ವರ್ಗ ಎಂದನು.

ಅರ್ಥ:
ಅವನಿಪತಿ: ರಾಜ; ಸಾರಥಿ: ರಥವನ್ನು ಓಡಿಸುವವ; ವಿವರಿಸು: ಹೇಳು; ಭೂಮಿ: ಧರಣಿ; ಭುವನ: ಜಗತ್ತು, ಪ್ರಪಂಚ; ಕೋಶ: ಭಂಡಾರ; ಸನ್ನಿವೇಶ: ಪರಿಸರ, ಸುತ್ತುಮುತ್ತ; ಅದ್ರಿ: ಬೆಟ್ಟ; ಜಾಲ: ಸಮೂಹ; ಕುಲಾದ್ರಿ: ಕುಲಪರ್ವತ; ಪಯೋನಿಧಿ: ಸಮುದ್ರ; ಮಹಾದ್ವೀಪ: ದೊಡ್ಡಭೂಭಾಗ; ಮಾನವ: ಮನುಷ್ಯ; ಧರಣಿ: ಭೂಮಿ; ಸ್ವರ್ಗ: ನಾಕ;

ಪದವಿಂಗಡಣೆ:
ಅವನಿಪತಿ +ಕೇಳ್+ಇಂದ್ರ +ಸಾರಥಿ
ವಿವರಿಸಿದನ್+ಆತಂಗೆ +ಭೂಮಿಯ
ಭುವನ +ಕೋಶದ +ಸನ್ನಿವೇಶವನ್+ಅದ್ರಿಜಾಲಗಳ
ಇವು ಕುಲಾದ್ರಿಗಳಿವು+ ಪಯೋನಿಧಿ
ಯಿವು +ಮಹಾದ್ವೀಪಂಗಳಿವು+ ಮಾ
ನವರ +ಧರಣಿ +ಸ್ವರ್ಗವಿಲ್ಲಿನ್ನಿತ್ತ+ ನೋಡೆಂದ

ಅಚ್ಚರಿ:
(೧) ಅವನಿ, ಧರಣಿ – ಸಮನಾರ್ಥಕ ಪದ

ಪದ್ಯ ೨೧: ಅರ್ಜುನನು ಮತ್ತಾವ ಪ್ರಶ್ನೆಯನ್ನು ಮಾತಲಿಗೆ ಕೇಳಿದನು?

ಧರೆಯನಾಂತವರಾರು ಧಾರುಣಿ
ಯಿರವದೇತರ ಮೇಲೆ ದಿಕ್ಪಾ
ಲರ ಪುರಂಗಳವೆಲ್ಲಿಹವು ಬ್ರಹ್ಮಾಂಡವೆನಿತಗಲ
ಉರುತರ ಗ್ರಹರಾಶಿಗಳ ವಿ
ಸ್ತರವು ತಾನೆನಿತೆನಿತು ಯೋಜನ
ವರುಹೆನಲು ಮಾತಲಿ ನಗುತ ಕಲಿಪಾರ್ಥಗಿಂತೆಂದ (ಅರಣ್ಯ ಪರ್ವ, ೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಈ ಭೂಮಿಯನ್ನು ಹೊತ್ತವರಾರು? ಇದು ಯಾವುದರ ಮೇಲಿದೆ, ಇದನ್ನು ಕಾಯುವ ದಿಕ್ಪಾಲಕರ ನಗರಗಳು ಎಲ್ಲಿವೆ? ಬ್ರಹ್ಮಾಂಡದ ವಿಸ್ತಾರವೆಷ್ಟು? ಗ್ರಹಗಳ ವಿಸ್ತಾರವೆಷ್ಟು, ಹೇಳು, ಎಂದು ಅರ್ಜುನನು ಕೇಳಲು, ಮಾತಲಿಯು ನಗುತ್ತಾ ಹೀಗೆ ಉತ್ತರಿಸಿದನು.

ಅರ್ಥ:
ಧರೆ: ಭೂಮಿ; ಧಾರುಣಿ: ಭೂಮಿ; ಅಂತರ: ದೂರ; ದಿಕ್ಕು: ದಿಶೆ; ಪಾಲಕ: ಒಡೆಯ; ಪುರ: ಊರು; ಬ್ರಹ್ಮಾಂಡ: ಜಗತ್ತು; ಅಗಲ: ವಿಸ್ತಾರ; ಉರುತರ: ಅತಿಶ್ರೇಷ್ಠ; ಗ್ರಹ: ಆಕಾಶಚರಗಳು; ರಾಶಿ: ಗುಂಪು; ವಿಸ್ತರ: ಅಗಲ, ವಿಸ್ತೀರ್ಣ; ಯೋಜನ: ಅಳತೆಯ ಪ್ರಮಾಣ; ಅರುಹು: ತಿಳಿಸು, ಹೇಳು; ನಗು: ಸಂತಸ; ಕಲಿ: ಶೂರ;

ಪದವಿಂಗಡಣೆ:
ಧರೆಯನಾಂತವರ್+ಆರು +ಧಾರುಣಿ
ಯಿರವದ್+ಏತರ +ಮೇಲೆ +ದಿಕ್ಪಾ
ಲರ+ ಪುರಂಗಳವ್+ಎಲ್ಲಿಹವು+ ಬ್ರಹ್ಮಾಂಡವ್+ಎನಿತಗಲ
ಉರುತರ+ ಗ್ರಹರಾಶಿಗಳ+ ವಿ
ಸ್ತರವು +ತಾನೆನಿತ್+ಎನಿತು+ ಯೋಜನವ್
ಅರುಹೆನಲು +ಮಾತಲಿ +ನಗುತ +ಕಲಿ+ಪಾರ್ಥಗಿಂತೆಂದ

ಅಚ್ಚರಿ:
(೧) ಧರೆ, ಧಾರುಣಿ – ಸಮನಾರ್ಥಕ ಪದ
(೨) ಅಗಲ, ವಿಸ್ತರ, ಯೋಜನ – ಅಳತೆಗೆ ಸಂಬಂಧಿಸಿದ ಪದಗಳ ಬಳಕೆ

ಪದ್ಯ ೨೦: ಅರ್ಜುನನು ಮಾತಲಿಯನ್ನು ಏನು ಕೇಳಿದನು?

ತೇರು ಮೇಲಕ್ಕಡರೆ ನುಡಿದನು
ಸಾರಥಿಗೆ ಕಲಿಪಾರ್ಥ ವಿವರಿಸು
ಧಾರುಣಿಯ ಪರ್ವತ ಸಮುದ್ರದ್ವೀಪ ನದನದಿಯ
ತೋರುವೀ ಲೋಕಂಗಳಳತೆಯ
ಸೂರಿಯನ ರಥಗತಿಯನೆಸೆವಾ
ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆಂದ (ಅರಣ್ಯ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಾತಲಿಯು ಇಂದ್ರನ ತೇರನ್ನು ಮೇಲಕ್ಕೇರಿಸಿ ಓಡಿಸುತ್ತಿರಲು, ಅರ್ಜುನನು ಮಾತಲಿಗೆ, ಎಲೈ ಮಾತಲಿ, ಈ ಭೂಮಿ, ಇದರ ಮೇಲಿನ ಪರ್ವತಗಳು, ನದನದಿಗಳು, ಕಾಣುವ ಈ ಲೋಕಗಳ ಅಳತೆ, ಮೇರು ಪರ್ವತ ಮತ್ತು ಅದರೊಂದಿಗೆ ಹಬ್ಬಿರುವ ಉಳಿದ ಪರ್ವತಗಳು, ಸೂರ್ಯನ ರಥವು ಚಲಿಸುವ ದಾರಿ ಇವುಗಳನ್ನು ತಿಳಿಸು ಎಂದು ಕೇಳಿದನು.

ಅರ್ಥ:
ತೇರು: ಬಂಡಿ; ಮೇಲೆ: ಎತ್ತರ; ನುಡಿ: ಮಾತಾಡು; ಸಾರಥಿ: ರಥವನ್ನು ಓಡಿಸುವ; ಕಲಿ: ಶೂರ; ವಿವರಿಸು: ಹೇಳು, ವಿವರಣೆ; ಧಾರುಣಿ: ಭೂಮಿ; ಪರ್ವತ: ಬೆಟ್ಟ; ಸಮುದ್ರ: ಸಾಗರ; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ನದನದಿ: ಸರೋವರ; ತೋರು: ಗೋಚರಿಸು; ಲೋಕ: ಜಗತ್ತು; ಅಳತೆ: ವಿಸ್ತಾರ; ಸೂರಿಯ: ಸೂರ್ಯ, ಭಾನು; ರಥ: ಬಂಡಿ; ಗತಿ: ವೇಗ; ಎಸೆ: ತೋರು; ಮೇರು: ಪರ್ವತದ ಹೆಸರು; ಪಸರಿಸು: ಹರಡು; ಗಿರಿ:ಬೆಟ್ಟ; ತಿಳಿ: ಅರಿ; ಹೇಳು: ತಿಳಿಸು;

ಪದವಿಂಗಡಣೆ:
ತೇರು +ಮೇಲಕ್ಕಡರೆ+ ನುಡಿದನು
ಸಾರಥಿಗೆ +ಕಲಿಪಾರ್ಥ +ವಿವರಿಸು
ಧಾರುಣಿಯ +ಪರ್ವತ +ಸಮುದ್ರ+ದ್ವೀಪ +ನದನದಿಯ
ತೋರುವ್+ಈ+ಲೋಕಂಗಳ್+ಅಳತೆಯ
ಸೂರಿಯನ +ರಥ+ಗತಿಯನ್+ಎಸೆವಾ
ಮೇರುವನು+ ಪಸರಿಸಿದ+ ಗಿರಿಗಳ+ ತಿಳಿಯ +ಹೇಳೆಂದ

ಅಚ್ಚರಿ:
(೧) ತೇರು, ರಥ – ಸಮನಾರ್ಥಕ ಪದ

ಪದ್ಯ ೧೯: ಇಂದ್ರನ ರಥವು ಆಗಸದಲ್ಲಿ ಹೇಗೆ ಚಲಿಸಿತು?

ಆವಜವವೇನೆಂಬ ಗತಿ ಮೇ
ಣಾವ ದೃಢ ವೇಗಾಯ್ಲತನ ತಾ
ನಾವ ಸೂಟಿಯದಾರು ಬಲ್ಲರು ವಹಿಲ ವಿವರಣವ
ತೀವಿತಾಕಾಶವನು ಹೇಷಾ
ರಾವವೀತನ ಹುಂಕೃತ ಧ್ವನಿ
ಯಾ ಇಗಡ ರಥ ಚಕ್ರ ಚೀತ್ಕೃತಿ ಚಪಲ ನಿರ್ಘೋಷ (ಅರಣ್ಯ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಇಂದ್ರನ ರಥವನ್ನು ಮಾತಲಿಯು ನಡೆಸಲಾರಂಭಿಸಿದನು. ಆ ವೇಗ, ದೃಢತೆಯನ್ನು ಯಾರು ಹೇಳಬಲ್ಲವರು? ಕುದುರೆಗಳ ಕೂಗು, ಮಾತಲಿಯ ಹೂಂಕಾರ, ರಥ ಚಕ್ರಗಳ ಚೀತ್ಕಾರವು ಆಕಾಶವನ್ನು ಆವರಿಸಿತು.

ಅರ್ಥ:
ಜವ: ಶಕ್ತಿ, ಸಾಮರ್ಥ್ಯ; ಗತಿ: ವೇಗ; ಮೇಣ್: ಅಥವ, ಮತ್ತು; ದೃಢ: ಗಟ್ಟಿ; ವೇಗ: ರಭಸ; ಸೂಟಿ: ವೇಗ, ರಭಸ, ಚುರುಕು; ಬಲ್ಲರು: ತಿಳಿ; ವಹಿಲ: ಬೇಗ, ತ್ವರೆ; ವಿವರ: ವಿಸ್ತಾರ; ತೀವು: ತುಂಬು, ಭರ್ತಿಮಾಡು; ಆಕಾಶ: ಆಗಸ; ಹೇಷಾರವ: ಕುದುರೆಯ ಕೂಗು; ಹುಂಕೃತ: ಹೂಂಕಾರ; ಧ್ವನಿ: ರವ, ಶಬ್ದ; ವಿಗಡ: ಶೌರ್ಯ, ಪರಾಕ್ರಮ; ರಥ: ಬಂಡಿ; ಚೀತ್ಕೃತಿ: ಚೀತ್ಕಾರ; ಚಪಲ: ಚಂಚಲ ಸ್ವಭಾವದವ; ನಿರ್ಘೋಷ: ದೊಡ್ಡ ಘೋಷಣೆ;

ಪದವಿಂಗಡಣೆ:
ಆವ+ಜವವ್+ಏನೆಂಬ +ಗತಿ+ ಮೇಣ್
ಆವ+ ದೃಢ+ ವೇಗಾಯ್ಲತನ +ತಾನ್
ಆವ+ ಸೂಟಿಯದಾರು+ ಬಲ್ಲರು+ ವಹಿಲ +ವಿವರಣವ
ತೀವಿತ್+ಆಕಾಶವನು +ಹೇಷಾರ
ಆವವ್+ಈತನ+ ಹುಂಕೃತ +ಧ್ವನಿ
ಯಾ+ ವಿಗಡ +ರಥ +ಚಕ್ರ +ಚೀತ್ಕೃತಿ +ಚಪಲ+ ನಿರ್ಘೋಷ

ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಕ್ರ ಚೀತ್ಕೃತಿ ಚಪಲ
(೨) ಹೇಷಾರ, ಹುಂಕೃತ, ಧ್ವನಿ, ರವ – ಶಬ್ದವನ್ನು ವಿವರಿಸುವ ಪದ

ಪದ್ಯ ೧೮: ಮಾತಲಿಯು ರಥವನ್ನು ಹೇಗೆ ಮುನ್ನಡೆಸಿದನು?

ಎಂದು ರಥವೇರಿದನು ಪಾರ್ಥ ಪು
ರಂದರನ ಸಾರಥಿ ಗುಣೌಘವ
ನೊಂದು ನಾಲಿಗೆಯಿಂದ ಹೊಗಳಿದನಾ ಧನಂಜಯನ
ಗೊಂದಣದ ವಾಘೆಗಳನೆಲವ
ನೊಂದುಗೂಡಿ ಕಿರೀಟಿ ದೃಢವಾ
ಗೆಂದು ಮಾತಲಿ ಚಪ್ಪರಿಸಿದನು ಚಪಲವಾಜಿಗಳ (ಅರಣ್ಯ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಬಳಿಕ ಅರ್ಜುನನು ರಥವನೇಏರಿದನು. ಮಾತಲಿಯು ಅರ್ಜುನನ ಗುಣಗಳನ್ನು ತನ್ನ ನಾಲಿಗೆಯಲ್ಲಿ ಮನಸಾರೆ ಹೊಗಳಿದನು, ನಂತರ ಕುದುರೆಗಳ ಲಗಾಮುಗಳನ್ನೆಲ್ಲಾ ಸರಿಯಾಗಿ ಜೋಡಿಸಿ ಹಿಡಿದು, ಅರ್ಜುನಾ ಗಟ್ಟಿಯಾಗಿ ಕುಳಿತುಕೋ ಎಂದೆಚ್ಚರಿಸಿ ರಥದ ಕುದುರೆಗಳನ್ನು ಹೊಡೆದನು.

ಅರ್ಥ:
ರಥ: ಬಂಡಿ; ಏರು: ಮೇಲೆ ಹತ್ತು; ಪುರಂದರ: ಇಂದ್ರ; ಸಾರಥಿ: ರಥವನ್ನು ಓಡಿಸುವವ; ಗುಣ: ನಡತೆ, ಸ್ವಭಾವ; ಔಘ: ಗುಂಪು, ಸಮೂಹ; ಒಂದು: ಏಕ; ನಾಲಿಗೆ: ಜಿಹ್ವೆ; ಹೊಗಳು: ಪ್ರಶಂಶಿಸು; ಗೊಂದಣ: ಗುಂಪು; ವಾಘೆ: ಲಗಾಮು; ಒಂದುಗೂಡು: ಒಟ್ಟಾಗಿಸು; ಕಿರೀಟಿ: ಅರ್ಜುನ; ದೃಢ: ಗಟ್ಟಿ; ಚಪ್ಪರಿಸು: ಅಪ್ಪಳಿಸು, ಹೊಡೆ; ಚಪಲ: ಚಂಚಲ; ವಾಜಿ: ಕುದುರೆ;

ಪದವಿಂಗಡಣೆ:
ಎಂದು+ ರಥವೇರಿದನು+ ಪಾರ್ಥ +ಪು
ರಂದರನ +ಸಾರಥಿ +ಗುಣೌಘವನ್
ಒಂದು +ನಾಲಿಗೆಯಿಂದ +ಹೊಗಳಿದನ್+ಆ+ ಧನಂಜಯನ
ಗೊಂದಣದ +ವಾಘೆಗಳನೆಲ್ಲವನ್
ಒಂದುಗೂಡಿ +ಕಿರೀಟಿ +ದೃಢವಾ
ಗೆಂದು +ಮಾತಲಿ +ಚಪ್ಪರಿಸಿದನು +ಚಪಲ+ವಾಜಿಗಳ

ಅಚ್ಚರಿ:
(೧) ಪುರಂದರನ ಸಾರಥಿ, ಮಾತಲಿ – ಪದಗಳ ಬಳಕೆ
(೨) ಕಿರೀಟಿ, ಧನಂಜಯ, ಪಾರ್ಥ – ಅರ್ಜುನನನ್ನು ಕರೆದ ಬಗೆ