ಪದ್ಯ ೪೧: ಹಸ್ತಿನಾಪುರ ಮತ್ತಾವ ಅಪಶಕುನಗಳನ್ನು ಕಂಡಿತು?

ಉಗುಳಿದವು ಕುಳುಗಿಡಿಗಳನು ಕೈ
ದುಗಳು ವಾರುವ ಪಟ್ಟದಾನೆಗ
ಳೊಗುಮಿಗೆಯ ಕಂಬನಿಗಳಭ್ರದಿ ಧೂಮಕೇತುಗಳು
ನೆಗಳಿದವು ಬಿರುಗಾಳಿ ಗಿರಿಗಳ
ಮಗುಚಿ ಮುರಿದವು ದೇವತಾಭವ
ನಗಳ ಶಿಖರವನಂತವದ್ಭುತವಾಯ್ತು ನಿಮಿಷದಲಿ (ಸಭಾ ಪರ್ವ, ೧೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಹಸ್ತಿನಾಪುರದಲ್ಲಿ ಉತ್ಪಾತಗಳು, ಅಪಶಕುನಗಳು ಕಾಣಿಸಿಕೊಂಡವು. ಆಯುಧಗಳ ಚೂಪಾದ ಅಲಗುಗಳು ಕಿಡಿಗಳನ್ನುಗುಳಿದವು. ಪಟ್ಟದಾನೆ ಕುದುರೆಗಳು ಕಂಬನಿಗೆರೆದವು. ಆಕಾಶದಲ್ಲಿ ಧೂಮಕೇತುಗಳು ಕಾಣಿಸಿಕೊಂಡವು. ಬಿರುಗಾಳಿಯು ಬೆಟ್ಟಗಳನ್ನು ತಿರುವಿಹಾಕುವಂತೆ ಬೀಸಲು, ಅನೇಕ ದೇವಸ್ಥಾನಗಳ ಗೋಪುರಗಳು ಮುರಿದು ಬಿದ್ದವು.

ಅರ್ಥ:
ಉಗುಳು: ಹೊರಹಾಕು; ಕುಳುಗಿಡಿ: ತೀಕ್ಷ್ಣವಾದ ಕಿಡಿ; ಕೈದು: ಆಯುಧ, ಶಸ್ತ್ರ; ವಾರುವ: ಕುದುರೆ, ಅಶ್ವ; ಪಟ್ಟ: ಹಣೆಗಟ್ಟು; ಆನೆ: ಗಜ, ಕರಿ; ಒಗು: ಚೆಲ್ಲು, ಸುರಿ; ಕಂಬನಿ: ಕಣ್ಣಿರು; ಅಭ್ರ: ಆಗಸ; ಧೂಮಕೇತು: ಉಲ್ಕೆ, ಅಗ್ನಿ; ನೆಗಳು: ಕೈಗೊಳ್ಳು; ಬಿರುಗಾಳಿ: ರಭಸವಾದ ವಾಯು; ಗಿರಿ: ಬೆಟ್ಟ; ಮಗುಚಿ: ಉರುಳು; ಮುರಿ: ಸೀಳು; ದೇವತಾಭವನ: ದೇವಸ್ಥಾನ, ಗುಡಿ; ಶಿಖರ: ಗೋಪುರ; ಅದ್ಭುತ: ವಿಚಿತ್ರ, ವಿಸ್ಮಯ; ನಿಮಿಷ: ಕ್ಷಣ;

ಪದವಿಂಗಡಣೆ:
ಉಗುಳಿದವು +ಕುಳುಗಿಡಿಗಳನು+ ಕೈ
ದುಗಳು+ ವಾರುವ+ ಪಟ್ಟದಾನೆಗ
ಳೊಗುಮಿಗೆಯ ಕಂಬನಿಗಳ್+ಅಭ್ರದಿ +ಧೂಮಕೇತುಗಳು
ನೆಗಳಿದವು +ಬಿರುಗಾಳಿ+ ಗಿರಿಗಳ
ಮಗುಚಿ+ ಮುರಿದವು +ದೇವತಾಭವ
ನಗಳ +ಶಿಖರವ್+ಅನಂತವ್+ಅದ್ಭುತವಾಯ್ತು +ನಿಮಿಷದಲಿ

ಅಚ್ಚರಿ:
(೧) ಅಪಶಕುನಗಳು – ವಾರುವ ಪಟ್ಟದಾನೆಗಳೊಗುಮಿಗೆಯ ಕಂಬನಿಗಳ; ಅಭ್ರದಿ ಧೂಮಕೇತುಗಳು; ನೆಗಳಿದವು ಬಿರುಗಾಳಿ; ಗಿರಿಗಳ ಮಗುಚಿ ಮುರಿದವು; ದೇವತಾಭವ
ನಗಳ ಶಿಖರವನಂತವದ್ಭುತವಾಯ್ತು

ಪದ್ಯ ೪೦: ಹಸ್ತಿನಾಪುರದಲ್ಲಿ ಯಾವ ಉತ್ಪಾತಗಳಾದವು?

ಅರಸ ಕೇಳಾಶ್ಚರ್ಯವನು ಗಜ
ಪುರದೊಳಗೆ ನೆಲ ಬಾಯಬಿಟ್ಟುದು
ಸುರಿದುದರುಣಾಂಬುವಿನಮಳೆ ತತ್ಪುರದ ಮಧ್ಯದಲಿ
ನರಿಗಳವನಿಪನಗ್ನಿ ಹೋತ್ರದೊ
ಳೊರಲಿದವು ಸಸ್ವೇದದಲಿ ಹೂಂ
ಕರಿಸುತಿರ್ದವು ದೇವತಾ ಪ್ರತಿಮೆಗಳು ನಗರಿಯಲಿ (ಸಭಾ ಪರ್ವ, ೧೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಭೀಮಾರ್ಜುನರ ಪ್ರತಿಜ್ಞೆಗಳ ಹೊತ್ತಿನಲ್ಲೇ ಹಸ್ತಿನಾಪುರದಲ್ಲಿ ಆಶ್ಚರ್ಯಕರ ಘಟನೆಗಳು ನಡೆದವು. ಹಸ್ತಿನಾಪುರದಲ್ಲಿ ನೆಲವು ಬಿರುಕು ಬಿಟ್ಟಿತು, ಊರನಡುವೆ ರಕ್ತದ ಮಳೆ ವರ್ಷಿಸಿತು, ದುರ್ಯೋಧನನ ಅಗ್ನಿಹೋತ್ರ ಶಾಲೆಯಲ್ಲಿ ನರಿಗಳು ಕೂಗಿಕೊಂಡವು, ನಗರದ ದೇವಾಲಯಗಳಲ್ಲಿದ್ದ ಪ್ರತಿಮೆಗಳು ಬೆವರನ್ನು ಸುರಿಸುತ್ತಾ ಹೂಂಕಾರ ಮಾಡಿದವು ಎಂದು ವೈಶಂಪಾಯನರು ತಿಳಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಆಶ್ಚರ್ಯ: ವಿಸ್ಮಯ; ಗಜಪುರ: ಹಸ್ತಿನಾಪುರ; ನೆಲ: ಭೂಮಿ; ಬಾಯಬಿಟ್ಟುದು: ಒಡೆಯಿತು, ಸೀಳಿತು; ಸುರಿ: ವರ್ಷಿಸು; ಅರುಣಾಂಬು: ಕೆಂಪನೆಯ ನೀರು, ರಕ್ತದ ಮಳೆ; ಮಳೆ: ವರ್ಷ; ಪುರ: ಊರು; ಮಧ್ಯ: ನಡುವೆ; ಅವನಿಪ: ರಾಜ; ಅಗ್ನಿ: ಬೆಂಕಿ ಒರಲು: ಕೂಗು; ಸ್ವೇದ: ಬೆವರು; ಹೂಂಕರಿಸು: ಗರ್ಜಿಸು; ದೇವ: ಭಗವಂತ; ಪ್ರತಿಮೆ: ವಿಗ್ರಹ; ನಗರ: ಊರು;

ಪದವಿಂಗಡಣೆ:
ಅರಸ ಕೇಳ್+ಆಶ್ಚರ್ಯವನು +ಗಜ
ಪುರದೊಳಗೆ +ನೆಲ +ಬಾಯಬಿಟ್ಟುದು
ಸುರಿದುದ್+ಅರುಣಾಂಬುವಿನಮಳೆ +ತತ್ಪುರದ +ಮಧ್ಯದಲಿ
ನರಿಗಳ್+ಅವನಿಪನ್+ಅಗ್ನಿ +ಹೋತ್ರದೊಳ್
ಒರಲಿದವು +ಸಸ್ವೇದದಲಿ +ಹೂಂ
ಕರಿಸುತಿರ್ದವು+ ದೇವತಾ+ ಪ್ರತಿಮೆಗಳು+ ನಗರಿಯಲಿ

ಅಚ್ಚರಿ:
(೧) ಪುರ, ನಗರಿ; ಅರಸ, ಅವನಿಪ – ಸಮನಾರ್ಥಕ ಪದ
(೨) ಅಪಶಕುನಗಳು – ಸುರಿದುದರುಣಾಂಬುವಿನಮಳೆ, ನೆಲ ಬಾಯಬಿಟ್ಟುದು, ನರಿಗಳವನಿಪನಗ್ನಿ ಹೋತ್ರದೊಳೊರಲಿದವು, ಸಸ್ವೇದದಲಿ ಹೂಂಕರಿಸುತಿರ್ದವು ದೇವತಾ ಪ್ರತಿಮೆಗಳು

ಪದ್ಯ ೩೯: ಅರ್ಜುನ ಮತ್ತು ಸಹದೇವರ ಪ್ರತಿಜ್ಞೆ ಯಾವುದು?

ಬರೆಸಿರೈ ಭಾಷೆಯನು ದೇವಾ
ಸುರರ ಸಾಕ್ಷಿಯೊಳಾಯ್ತು ಕರ್ಣನ
ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ
ಸುರನರೋರಗರರಿದಿರೆಂದ
ಬ್ಬರಿಸಿದನು ಕಲಿಪಾರ್ಥ ಶಕುನಿಯ
ಶಿರಕೆ ಕೊಟ್ಟೆನು ಸಂಚಕಾರವನೆಂದ ಸಹದೇವ (ಸಭಾ ಪರ್ವ, ೧೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನ ಪ್ರತಿಜ್ಞೆಯ ನಂತರ ಅರ್ಜುನನು, ಎಲೇ ದೇವತೆಗಳೇ ರಾಕ್ಷಸರೇ ನನ್ನ ಪ್ರತಿಜ್ಞೆಗೆ ನೀವೆ ಸಾಕ್ಷಿ, ಕರ್ಣನ ಕೊರಳಿಗೆ ನನ್ನ ಬಾಣದ ಉಂಗುರವುಡಿಕೆಯನ್ನು ತೊಡಿಸುತ್ತೇನೆ, ಇದನ್ನು ದೇವತೆಗಳು, ಮಾನವರು, ರಾಕ್ಷಸರು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ಗರ್ಜಿಸಿದನು, ಶಕುನಿಯ ತಲೆಗೆ ನಾನು ಸಂಚಕಾರ ಕೊಟ್ಟಿದ್ದೇನೆ ಎಂದು ಸಹದೇವನು ಪ್ರತಿಜ್ಞೆ ಮಾಡಿದನು.

ಅರ್ಥ:
ಬರೆ: ಲೇಖಿಸು, ಅಕ್ಷರದಲ್ಲಿರಿಸು; ಭಾಷೆ: ನುಡಿ, ಪ್ರಮಾಣ; ದೇವ: ಸುರ, ದೇವತೆ; ಅಸುರ: ರಾಕ್ಷಸ; ಸಾಕ್ಷಿ: ಪುರಾವೆ, ರುಜುವಾತು; ಕೊರಳು: ಕಂಠ; ಬಾಣ: ಅಂಬು; ಉಂಗುರ: ಬೆರಳಿಗೆ ಹಾಕುವ ಆಭರನ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಇದಿರು: ಎದುರ್; ಅಬ್ಬರಿಸು: ಗರ್ಜಿಸು; ಕಲಿ: ಶೂರ; ಶಿರ: ತಲೆ; ಸಂಚಕಾರ: ಮುಂಗಡ, ಕೇಡು;

ಪದವಿಂಗಡಣೆ:
ಬರೆಸಿರೈ +ಭಾಷೆಯನು +ದೇವ
ಅಸುರರ+ ಸಾಕ್ಷಿಯೊಳ್+ಆಯ್ತು +ಕರ್ಣನ
ಕೊರಳಿಗ್+ಎನ್ನಯ +ಬಾಣಕ್ + ಉಂಗುರವ್+ಉಡಿಕೆ+ಇಂದಿನಲಿ
ಸುರ+ನರ+ಉರಗರ್+ಇದಿರೆಂದ್
ಅಬ್ಬರಿಸಿದನು +ಕಲಿಪಾರ್ಥ +ಶಕುನಿಯ
ಶಿರಕೆ+ ಕೊಟ್ಟೆನು +ಸಂಚಕಾರವನೆಂದ+ ಸಹದೇವ

ಅಚ್ಚರಿ:
(೧) ದೇವ, ಸುರ – ಸಮನಾರ್ಥಕ ಪದ
(೨) ಕರ್ಣನನ್ನು ಕೊಲ್ಲುತ್ತೇನೆಂದು ಹೇಳುವ ಪರಿ – ಕರ್ಣನ ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ

ಪದ್ಯ ೩೮: ಕೌರವರು ಏಕೆ ಧೃತಿಗೆಟ್ಟರು?

ಧರಣಿ ಜಲ ಪವಕ ಸಮೀರಾ
ದ್ಯರುಗಳರಿತಿರಿ ಶಕ್ರ ನೈಋತ
ವರುಣವಾಯು ಕುಬೇರ ಯಮರೆಂಬಖಿಳ ದಿಗಧಿಪರು
ಬರೆದುಕೊಂಡಿರಿ ಭಾಷೆಯನು ಸುರ
ನರ ಫಣಿವ್ರಜವೆಂಬ ಭೀಮನ
ಧರಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ (ಸಭಾ ಪರ್ವ, ೧೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೂಮಿ, ಜಲ, ಅಗ್ನಿ, ವಾಯು ಮೊದಲಾದ ಪಂಚಮಹಾಭೂತಗಳೇ, ನೀವೇ ಸಾಕ್ಷಿ, ಇಂದ್ರ, ನಿರಋತಿ, ವರುಣ, ವಾಯು, ಕುಬೇರ, ಯಮರೆಂಬ ಅಷ್ಟದಿಕ್ಪಾಲಕರೇ ನಾನು ಮಾಡಿದ ಪ್ರತಿಜ್ಞೆಯನ್ನು ಬರೆದುಕೊಂಡಿರಿ. ಮನುಷ್ಯರು, ದೇವತೆಗಳು, ನಾಗರೆಂಬ ಮೂರು ಲೋಕದ ನಿವಾಸಿಗಳೇ ನಿಮ್ಮ ಆಣೆ, ನನ್ನ ಪ್ರತಿಜ್ಞೆಯನ್ನು ನಿಮ್ಮ ಸಮ್ಮುಖದಲ್ಲೇ ನೆರವೇರಿಸುತ್ತೇನೆಂಬ ಭೀಮನ ಅಬ್ಬರದ ಆಟಾಟೋಪಕ್ಕೆ ಕೌರವಉ ಎದೆಗೆಟ್ಟು ಧೈರ್ಯವನ್ನು ಕಳೆದುಕೊಂಡರು.

ಅರ್ಥ:
ಧರಣಿ: ಭೂಮಿ; ಜಲ: ನೀರು; ಪಾವಕ: ಅಗ್ನಿ; ಸಮೀರ: ವಾಯು; ಆದಿ: ಮುಂತಾದ; ಅರಿ: ತಿಳಿ; ಶಕ್ರ: ಇಂದ್ರ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ವಾಯು: ಗಾಳಿ, ಅನಿಲ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಯಮ: ಮೃತ್ಯುದೇವತೆ; ಅಖಿಳ: ಎಲ್ಲಾ; ದಿಗಧಿಪ: ದಿಕ್ಪಾಲಕ; ಬರೆದು: ಲೇಖಿಸು, ಅಕ್ಷರದಲ್ಲಿರಿಸು; ಭಾಷೆ: ಮಾತು, ಪ್ರಮಾಣ; ಸುರ: ದೇವತೆ; ನರ: ಮನುಷ್ಯ; ಫಣಿ: ಹಾವು; ವ್ರಜ: ಗುಂಪು; ಧರಧುರ: ಆರ್ಭಟ, ಕೋಲಾ ಹಲ; ಧಟ್ಟಣೆ: ಗುಂಪು; ಧೃತಿ: ಧೈರ್ಯ; ಸ್ತೋಮ: ಗುಂಪು;

ಪದವಿಂಗಡಣೆ:
ಧರಣಿ +ಜಲ +ಪಾವಕ +ಸಮೀರಾ
ದ್ಯರುಗಳ್+ಅರಿತಿರಿ+ ಶಕ್ರ +ನೈಋತ
ವರುಣ+ವಾಯು +ಕುಬೇರ +ಯಮರೆಂಬ್+ಅಖಿಳ +ದಿಗಧಿಪರು
ಬರೆದುಕೊಂಡಿರಿ+ ಭಾಷೆಯನು +ಸುರ
ನರ+ ಫಣಿ+ವ್ರಜವೆಂಬ+ ಭೀಮನ
ಧರಧುರದ +ಧಟ್ಟಣೆಗೆ +ಧೃತಿಗೆಟ್ಟುದು +ಕುರುಸ್ತೋಮ

ಅಚ್ಚರಿ:
(೧) ಸಮೀರ, ವಾಯು – ಸಮನಾರ್ಥಕ ಪದ
(೨) ಧ ಕಾರದ ತ್ರಿವಳಿ ಪದ – ಧರಧುರದ ಧಟ್ಟಣೆಗೆ ಧೃತಿಗೆಟ್ಟುದು