ಪದ್ಯ ೩೭: ಭೀಮನು ಯಾವ ಪ್ರತಿಜ್ಞೆ ಮಾಡಿದನು?

ಮಾಣಲದು ಕೌರವರ ನೂರ್ವರ
ಗೋಣಬನ ಕಾಳಗದೊಳೆನ್ನಯ
ಕೇಣಿ ತನ್ನಯ ಗದೆಗೆ ದುರಿಯೋಧನನ ತೊಡೆಗಳಿಗೆ
ವಾಣಿಯವು ದುಶ್ಯಾಸನನ ತನಿ
ಶೋಣಿತವ ನಾ ಕುಡಿಯದಿರೆ ನಿ
ನ್ನಾಣೆ ಸೈರಣೆಗಿದುವೆ ಫಲವೆಂದೊದರಿದನು ಭೀಮ (ಸಭಾ ಪರ್ವ, ೧೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅರ್ಜುನನು ಭೀಮನಿಗೆ ಸಮಾಧಾನಿಸಲು ಹೇಳಿದ ನಂತರ, ಭೀಮನು ಅರ್ಜುನನಿಗೆ, ಅರ್ಜುನ ಹಾಗಾದರೆ ನಾನು ಕೌರವರನ್ನು ಈಗ ತಿನ್ನುವುದಿಲ್ಲ. ಯುದ್ಧದಲ್ಲಿ ನೂರ್ವರು ಕೌರವರ ಕತ್ತುಗಳ ಕಾಡನ್ನು ನಾನು ಗುತ್ತಿಗೆ ಹಿಡಿದಿದ್ದೇನೆ. ದುರ್ಯೋಧನನ ತೊಡೆಗಳನ್ನು ನನ್ನ ಗದೆಗೆ ಕೊಂಡುಕೊಂಡಿದ್ದೇನೆ. ದುಶ್ಯಾಸನ ಬಿಸಿ ರಕ್ತವನ್ನು ನಾನು ಕುಡಿಯದಿದ್ದರೆ ನಿನ್ನಾಣೆ, ಇದಕ್ಕೆ ತಪ್ಪುವುದಿಲ್ಲ. ಈಗ ನಾನು ಸೈರಿಸಿದುದಕ್ಕೆ ಇದೇ ನನ್ನ ಫಲ ಎಂದು ಭೀಮನು ಪ್ರಮಾಣ ಮಾಡಿ ಅರ್ಜುನನಿಗೆ ಉತ್ತರಿಸಿದನು.

ಅರ್ಥ:
ಮಾಣು: ನಿಲ್ಲಿಸು; ಗೋಣು: ಕುತ್ತಿಗೆ; ಕಾಳಗ: ಯುದ್ಧ; ಕೇಣಿ: ಗುತ್ತಿಗೆ, ಗೇಣಿ; ಗದೆ: ಮುದ್ಗರ; ತೊಡೆ: ಊರು; ವಾಣಿ: ಮಾತು; ತನಿ: ರುಚಿ, ಪಕ್ವವಾದ; ಶೋಣಿತ: ರಕ್ತ; ಕುಡಿ: ಪಾನ ಮಾಡು; ಆಣೆ: ಪ್ರಮಾಣ; ಸೈರಣೆ: ತಾಳ್ಮೆ, ಸಹನೆ; ಫಲ: ಪ್ರಯೋಜನ; ಒದರು: ಹೇಳು;

ಪದವಿಂಗಡಣೆ:
ಮಾಣಲದು+ ಕೌರವರ +ನೂರ್ವರ
ಗೋಣಬನ+ ಕಾಳಗದೊಳ್+ಎನ್ನಯ
ಕೇಣಿ +ತನ್ನಯ +ಗದೆಗೆ +ದುರಿಯೋಧನನ +ತೊಡೆಗಳಿಗೆ
ವಾಣಿಯವು +ದುಶ್ಯಾಸನನ +ತನಿ
ಶೋಣಿತವ +ನಾ +ಕುಡಿಯದಿರೆ+ ನಿ
ನ್ನಾಣೆ +ಸೈರಣೆಗ್+ಇದುವೆ +ಫಲವೆಂದ್+ಒದರಿದನು +ಭೀಮ

ಅಚ್ಚರಿ:
(೧) ಮಾಣ, ಗೋಣ – ಪ್ರಾಸ ಪದ
(೨) ಭೀಮನ ಪ್ರಮಾಣ – ದುಶ್ಯಾಸನನ ತನಿಶೋಣಿತವ ನಾ ಕುಡಿಯದಿರೆ ನಿನ್ನಾಣೆ

ಪದ್ಯ ೩೬: ಅರ್ಜುನನು ಭೀಮನಿಗೆ ಏನು ಹೇಳಿದ?

ಇಳಿದನರ್ಜುನನಾ ಸಭಾಮಂ
ಡಲದ ವೇದಿಯನಹಹ ಧರ್ಮಜ
ನುಳಿವನೇ ನುಡಿಯೆಡಹಿದರೆ ಸಿಗುರೇಳ್ಗು ಸದ್ಗುಣಕೆ
ಕಳವಳದ ಕಾಹುರದ ಕಾಲುವೆ
ಗೊಳಗುಗೊಡದಿರು ಭೀಮರಿಪುಗಳ
ಹಿಳಿವಡಿದು ಹೊತ್ತಲ್ಲೆನುತ ಹಿಡಿದನು ವೃಕೋದರನ (ಸಭಾ ಪರ್ವ, ೧೬ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ಸಭೆಯ ಜಗುಲಿಯನ್ನಿಳಿದು, ಭೀಮನನ್ನು ತಡೆದು, ತನ್ನ ಮಾತಿನ ವಿರುದ್ಧ ನಡೆದರೆ ಅಣ್ಣನು ಬದುಕಿರುವುದಿಲ್ಲ. ಸದ್ಗುಣಕ್ಕೆ ಮುಳ್ಳುಗಳು ಎದ್ದಾವು, ಗೊಂದಲದಲ್ಲಿ ಕೋಪದ ಪ್ರವಾಹವನ್ನು ಮನಸ್ಸಿನೊಳಗೆ ಹರಿಬಿಡಬೇಡ. ಭೀಮಾ, ಶತ್ರುಗಳನ್ನು ಕೊಲ್ಲಲು ಇದು ಹೊತ್ತಲ್ಲ ಎಂದು ಅರ್ಜುನನು ಹೇಳಿದನು.

ಅರ್ಥ:
ಇಳಿದು: ಕೆಳಗೆ ಬಂದು; ಸಭೆ: ಓಲಗ;
ಮಂಡಲ: ವರ್ತುಲಾಕಾರ; ವೇದಿ:ಎತ್ತರವಾದ ಜಗಲಿ, ವೇದಿಕೆ; ಉಳಿ: ಬದುಕಿರು; ನುಡಿ: ಮಾತಾಡು; ಎಡಹು: ಎಡವು, ಬೀಳು; ಸಿಗುರೇಳು: ಚೆಕ್ಕೆ ಏಳು; ಸದ್ಗುಣ: ಒಳ್ಳೆಯ ನಡತೆ; ಕಳವಳ: ಗೊಂದಲ, ಭ್ರಾಂತಿ; ಕಾಹುರ: ಆವೇಶ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಒಳಗು: ಒಳಗೆ; ರಿಪು: ವೈರಿ; ಒಡರು: ಮಾಡು, ರಚಿಸು; ಹಿಳಿ: ಹಿಂಡು; ಅಡಿ: ಪಾದ; ಹೊತ್ತು: ಸಮಯ; ಹಿಡಿ: ತಡೆ;

ಪದವಿಂಗಡಣೆ:
ಇಳಿದನ್+ಅರ್ಜುನನ್+ಆ+ ಸಭಾಮಂ
ಡಲದ+ ವೇದಿಯನ್+ಅಹಹ +ಧರ್ಮಜನ್
ಉಳಿವನೇ +ನುಡಿ+ಎಡಹಿದರೆ+ ಸಿಗುರೇಳ್ಗು+ ಸದ್ಗುಣಕೆ
ಕಳವಳದ +ಕಾಹುರದ +ಕಾಲುವೆಗ್
ಒಳಗುಗ್+ಒಡದಿರು +ಭೀಮರಿಪುಗಳ
ಹಿಳಿವಡಿದು+ ಹೊತ್ತಲ್+ಎನುತ +ಹಿಡಿದನು +ವೃಕೋದರನ

ಅಚ್ಚರಿ:
(೧) ಅರ್ಜುನನ ಉಪದೇಶ – ಸಿಗುರೇಳ್ಗು ಸದ್ಗುಣಕೆ; ಕಳವಳದ ಕಾಹುರದ ಕಾಲುವೆ
ಗೊಳಗುಗೊಡದಿರು

ಪದ್ಯ ೩೫: ಭೀಮನ ರೌದ್ರದ ಮಾತಿನ ವರಸೆ ಹೇಗಿತ್ತು?

ಕೊಂಬೆನೇ ಧರ್ಮಜನ ಧರ್ಮದ
ಡೊಂಬನೀ ಮುದುಗರುಡನಿಕ್ಕಿದ
ನಂಬುಗೆಯ ವಿಷವೈಸಲೇ ತಲೆಗೇರಿತಗ್ರಜನ
ಡೊಂಬಿಗರ ಡಾವರಿಗರಿವದಿರ
ತಿಂಬೆನೀಗಳೆ ತರುಣಿ ಕೇಳೆನು
ತಂಬುಜಾಕ್ಷಿಯ ಸಂತವಿಟ್ಟನು ಕುರುಳನೇರಿಸುತ (ಸಭಾ ಪರ್ವ, ೧೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಮನು ತನ್ನ ರೋಷದ ಮಾತುಗಳನ್ನು ಮುಂದುವರಿಸುತ್ತಾ, ಧರ್ಮಜನ ಧರ್ಮದ ವಂಚನೆಯನ್ನು ನಾನು ಒಪ್ಪುವುದಿಲ್ಲ. ಈ ಮುದಿಗರುಡ ಧೃತರಾಷ್ಟ್ರನು ಇಟ್ಟ ಮೆಚ್ಚುಮದ್ದಿನ ವಿಷವು ಅಣ್ಣನ ತಲೆಗೇರಿದೆ. ಈ ಮೋಸಗಾರರ, ವಂಚಕರ, ದುರುದುಂಬಿಗಳನ್ನೆಲ್ಲರನ್ನೂ ಈಗಲೇ ತಿಂದು ಬಿಡುತ್ತೇನೆ, ದ್ರೌಪದಿ ನೋಡುತ್ತಿರು ಎಂದು ಅವಳ ಮುಂಗುರುಳುಗಳನ್ನು ಮೇಲಕ್ಕೆ ಎತ್ತಿ ನೇವರಿಸಿದನು.

ಅರ್ಥ:
ಕೊಂಬು: ಗರ್ವ, ಕಹಳೆ; ಧರ್ಮ: ಧಾರಣೆ ಮಾಡಿದುದು; ಡೊಂಬ: ಮೋಸಗಾರ; ಮುದು: ವಯಸ್ಸಾದ; ಇಕ್ಕು: ನೀಡು; ನಂಬು: ವಿಶ್ವಾಸವಿಡು; ವಿಷ: ನಂಜು; ಐಸಲೇ: ಅಲ್ಲವೇ; ತಲೆ: ಶಿರ; ಏರು: ಹತ್ತು, ಆರೋಹಿಸು; ಅಗ್ರಜ: ಹಿರಿಯ; ಡಾವರ: ಭೀಷಣತೆ, ಆವರಿಸುವಿಕೆ; ಅರಿ: ತಿಳಿ; ತಿಂಬೆ: ತಿನ್ನುವೆ; ತರುಣಿ: ಹೆಣ್ಣು, ಯುವತಿ; ಕೇಳು: ಆಲಿಸು; ಅಂಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಸಂತವಿಡು: ಸಂತೈಸು; ಕುರುಳ: ಮುಂಗುರುಳು; ಏರಿಸು: ಮೇಲಕ್ಕೆತ್ತು;

ಪದವಿಂಗಡಣೆ:
ಕೊಂಬೆನೇ +ಧರ್ಮಜನ +ಧರ್ಮದ
ಡೊಂಬನ್+ಈ+ ಮುದುಗರುಡನ್+ಇಕ್ಕಿದನ್
ಅಂಬುಗೆಯ +ವಿಷವ್+ಐಸಲೇ +ತಲೆಗೇರಿತ್+ಅಗ್ರಜನ
ಡೊಂಬಿಗರ+ ಡಾವರಿಗರ್+ಇವದಿರ
ತಿಂಬೆನ್+ಈಗಳೆ +ತರುಣಿ +ಕೇಳ್+ಎನುತ್
ಅಂಬುಜಾಕ್ಷಿಯ +ಸಂತವಿಟ್ಟನು+ ಕುರುಳನ್+ಏರಿಸುತ

ಅಚ್ಚರಿ:
(೧) ಡ ಕಾರದ ಜೋಡಿ ಪದ – ಡೊಂಬಿಗರ ಡಾವರಿಗರಿವದಿರ
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಮುದುಗರುಡ

ಪದ್ಯ ೩೪: ದುಷ್ಟರನ್ನು ಏನು ಮಾಡುವೆನೆಂದು ಭೀಮನು ಹೇಳಿದನು?

ಉರಿವ ಕೋಪಾಗ್ನಿಯಲಿ ಕರ್ಣನ
ಶಿರದ ಭಾಂಡದಲಿವನ ನೊರೆ ನೆ
ತ್ತರಿನಲಿವನಗ್ರಜನಕೊಬ್ಬಿದ ನೆಣನ ಕೊಯ್ಕೊಯ್ದು
ದುರುಳ ಶಕುನಿಯ ಕಾಳಿಜದೊಳೊಡೆ
ವೆರಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳೆಂದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ನನ್ನಲ್ಲಿ ಹೊಮ್ಮುತ್ತಿರುವ ಕೋಪಾಗ್ನಿಯಲ್ಲಿ ಕರ್ಣನ ತಲೆಯ ಪಾತ್ರೆಯನ್ನಿಟ್ಟು, ದುಶ್ಯಾಸನ ರಕ್ತದಲ್ಲಿ ಕೊಬ್ಬಿದ ದುರ್ಯೋಧನನ ಮಾಂಸವನ್ನು ಕಡಿದು ಕಡಿದು ಹಾಕಿ, ಶಕುನಿಯ ಪಿತ್ತಕೋಶವನ್ನು ಸೇರಿಸಿ ಹದವಾಗಿ ಕುಇಸಿ ಮಹೋಗ್ರವಾದ ಭೂತಗಳ ಹಿಂಡಿಗೆ ಊಟಕ್ಕೆ ಹಾಕುತ್ತೇನೆ ಕೇಳು ಎಂದು ಭೀಮನು ದ್ರೌಪದಿಗೆ ಹೇಳಿದನು.

ಅರ್ಥ:
ಉರಿ: ಜ್ವಾಲೆ; ಕೋಪ: ರೋಷ; ಅಗ್ನಿ: ಬೆಂಕಿ; ಶಿರ: ತಲೆ; ಭಾಂಡ: ಬಾಣಲಿ, ಮಡಿಕೆ; ನೊರೆ: ಬುರುಗು, ಫೇನ; ನೆತ್ತರು: ರಕ್ತ; ಅಗ್ರಜ: ಅಣ್ಣ; ಕೊಬ್ಬು: ಸೊಕ್ಕು; ನೆಣ: ಕೊಬ್ಬು; ಕೊಯ್ದು: ಸೀಳು; ದುರುಳ: ದುಷ್ಟ; ಕಾಳಿಜ: ಪಿತ್ತಾಶಯ; ವೆರಸಿ: ಸೇರಿಸು; ಕುದಿ: ಬೇಯಿಸು; ಮಹ: ದೊಡ್ಡ; ಉಗ್ರ: ಭಯಂಕರ; ಭೂತ: ದೆವ್ವ, ಪಿಶಾಚ; ನೆರವು: ಸಹಾಯ; ಉಣಲು: ತಿನ್ನಲು; ಸತಿ: ಹೆಂಡತಿ; ಕೇಳು: ಆಲಿಸು;

ಪದವಿಂಗಡಣೆ:
ಉರಿವ+ ಕೋಪಾಗ್ನಿಯಲಿ +ಕರ್ಣನ
ಶಿರದ +ಭಾಂಡದಲ್+ಇವನ +ನೊರೆ +ನೆ
ತ್ತರಿನಲ್+ಇವನ್+ಅಗ್ರಜನ+ಕೊಬ್ಬಿದ +ನೆಣನ +ಕೊಯ್ಕೊಯ್ದು
ದುರುಳ+ ಶಕುನಿಯ+ ಕಾಳಿಜದೊಳ್+ಒಡೆ
ವೆರಸಿ+ ಕುದಿಸಿ+ ಮಹೋಗ್ರ+ಭೂತದ
ನೆರವಿಗ್+ಉಣಲಿಕ್ಕುವೆನು +ಸತಿ+ ಕೇಳೆಂದನಾ+ ಭೀಮ

ಅಚ್ಚರಿ:
(೧) ಭೀಮನ ಕೋಪವನ್ನು ಪಾಕಶಾಲ ಪ್ರವೀಣತೆಯಲ್ಲಿ ತೋರುವ ಪದ್ಯ

ಪದ್ಯ ೩೩: ಭೀಮನನ್ನು ಕಂಡು ದುಶ್ಯಾಸನ ಎಲ್ಲಿಗೆ ಓಡಿದನು?

ಒಡೆಯನೈತರಲಿಕ್ಷು ತೋಟದ
ಬಡನರಿಗಳೋಡುವವೊಲೀಕೆಯ
ಹಿಡಿದೆಳೆವ ಖಳ ಹಾಯ್ದನಾ ಕೌರವನ ಹೊರೆಗಾಗಿ
ನುಡಿ ತರುಣಿ ನನ್ನಾಣೆ ಭೀತಿಯ
ಬಿಡಿಸಿದೆನಲಾ ರಾಯನಾಜ್ಞೆಯ
ತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕಬ್ಬಿನ ಗದ್ದೆಯ ಒಡೆಯನು ತೋಟವನ್ನು ಕಾಯಲು ಬರುತ್ತಿದ್ದಂತೆ ಅಲ್ಲಿ ನೆರೆದಿದ್ದು ಬಡನರಿಗಳ ಗುಂಪು ಓಡುವಂತೆ, ದ್ರೌಪದಿಯ ಸೆರಗನ್ನು ಹಿಡಿದಿದ್ದ ದುಶ್ಯಾಸನನು ಕೈಬಿಟ್ಟು ಕೌರವನ ಕಡೆಗೆ ಓಡಿಹೋದನು. ಭೀಮನು ದ್ರೌಪದಿ ನನ್ನಾಣೆ ಹೇಳು, ನಿನಗೆ ಬಂದಿದ್ದ ಭೀತಿಯನ್ನು ನಾನು ಬಿಡಿಸಲಿಲ್ಲವೇ? ಅಣ್ಣನಾಜ್ಞೆಯ ತಡಿಕೆಬಲೆ ಪುಡಿಯಾಯಿತು ಹೋಗಲಿ ಬಿಡು ಎಂದು ನುಡಿದನು.

ಅರ್ಥ:
ಒಡೆಯ: ರಾಜ, ಯಜಮಾನ; ಐತರು: ಬಾ, ಬಂದು ಸೇರು; ಇಕ್ಷು: ಕಬ್ಬು; ತೋಟ: ಗದ್ದೆ; ಬಡ: ಪಾಪ, ಸೊರಗು; ಓಡು: ಪಲಾಯನ; ಹಿಡಿ: ಬಂಧಿಸು; ಖಳ: ದುಷ್ಟ; ಹಾಯ್ದು: ಓಡು; ಹೊರೆ: ಆಸರೆ; ನುಡಿ: ಮಾತು; ತರುಣಿ: ಹೆಣ್ಣು; ಭೀತಿ: ಭಯ; ಆಣೆ: ಪ್ರಮಾಣ; ಬಿಡಿಸು: ಕಳಚು, ಸಡಿಲಿಸು; ರಾಯ: ಒಡೆಯ; ಆಜ್ಞೆ: ಆದೇಶ; ತಡಿಕೆ: ಚಪ್ಪರ, ಹಂದರ; ನುಗ್ಗು: ಒಳಹೊಕ್ಕು; ಹೋಗು: ತೆರಳು;

ಪದವಿಂಗಡಣೆ:
ಒಡೆಯನ್+ಐತರಲ್+ಇಕ್ಷು +ತೋಟದ
ಬಡನರಿಗಳ್+ಓಡುವವೊಲ್+ಈಕೆಯ
ಹಿಡಿದ್+ಎಳೆವ +ಖಳ +ಹಾಯ್ದನಾ +ಕೌರವನ+ ಹೊರೆಗಾಗಿ
ನುಡಿ +ತರುಣಿ +ನನ್ನಾಣೆ +ಭೀತಿಯ
ಬಿಡಿಸಿದೆನಲಾ+ ರಾಯನ್+ಆಜ್ಞೆಯ
ತಡಿಕೆವಲೆ +ನುಗ್ಗಾಯ್ತು +ಹೋಗಿನ್+ಎಂದನಾ +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಡೆಯನೈತರಲಿಕ್ಷು ತೋಟದ ಬಡನರಿಗಳೋಡುವವೊಲ್
(೨) ಅಣ್ಣನ ಆಜ್ಞೆಯನ್ನು ಧಿಕ್ಕರಿಸುವ ಪರಿ – ರಾಯನಾಜ್ಞೆಯತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ

ಪದ್ಯ ೩೨: ಭೀಮನ ರೌದ್ರಾವತಾರವು ಸಭೆಯನ್ನು ಹೇಗೆ ಆವರಿಸಿತು?

ಹೆದರು ಹೊಕ್ಕುದು ಸಭೆಗೆ ಕೌರವ
ನೆದೆ ಬಿರಿದುದಾಸ್ಥಾನ ಜಲನಿಧಿ
ಕದಡಿತುಕ್ಕಿದ ಬೆರಗಿನಲಿ ಬೆಳ್ಳಾದನವನೀಶ
ಹದನಹುದು ಹಾ ಎನುತಲಿದ್ದರು
ವಿದುರ ಭೀಷ್ಮದ್ರೋಣರಿತ್ತಲು
ಕೆದರುಗೇಶದ ಕಾಂತೆ ಹುದಿದಳು ಹರ್ಷಪುಳಕದಲಿ (ಸಭಾ ಪರ್ವ, ೧೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಮನು ಗರ್ಜನೆ ಮತ್ತು ಕೋಪದ ರೂಪವನ್ನು ಕಂಡು ಸಭೆಯಲ್ಲಿದ್ದವರು ಹೆದರಿದರು. ದುರ್ಯೋಧನನ ಎದೆ ಒಡೆಯಿತು. ಆಸ್ಥಾನ ಸಮುದ್ರವು ಕದಡಿಹೋಯಿತು. ಧರ್ಮಜನು ಬೆರಗಿನಿಂದ ಭೀಮನ ರೂಪವನ್ನು ನೋಡಿ ದಿಗ್ಭ್ರಾಂತನಾದನು. ವಿದುರ, ಭೀಷ್ಮ, ದ್ರೋಣರು ಆಹಾ ಇದೇ ಸರಿ ಎನ್ನುತ್ತಿದ್ದರು. ಕೂದಲುಗಳನ್ನು ಕೆದರಿಕೊಂಡಿದ್ದ ದ್ರೌಪದಿಯು ಭೀಮನ ರೂಪವನ್ನು ಕಂಡು ಹರ್ಷದಿಂದ ರೋಮಾಂಚನಗೊಂಡಳು.

ಅರ್ಥ:
ಹೆದರು: ಬೆದರು; ಹೊಕ್ಕು: ಸೇರು; ಸಭೆ: ಓಲಗ; ಎದೆ: ವಕ್ಷಸ್ಥಳ; ಬಿರಿ: ಬಿರುಕು, ಸೀಳು; ಆಸ್ಥಾನ: ದರ್ಬಾರು, ಓಲಗ; ಜಲನಿಧಿ: ಸಮುದ್ರ; ಕದಡು: ಕಲಕು; ಉಕ್ಕು: ಹಿಗ್ಗುವಿಕೆ, ಉತ್ಸಾಹ; ಬೆರಗು: ವಿಸ್ಮಯ, ಸೋಜಿಗ; ಬೆಳ್ಳಾಗು: ಮೂಢನಾಗು; ಅವನೀಶ: ರಾಜ; ಹದ: ಸರಿಯಾದ ಸ್ಥಿತಿ; ಕೆದರು: ಹರಡು; ಕೇಶ: ಕೂದಲು; ಕಾಂತೆ: ಹೆಣ್ಣು; ಹುದು: ಕೂಡುವಿಕೆ; ಹರ್ಷ: ಸಂತಸ; ಪುಳಕ:ಮೈನವಿರೇಳುವಿಕೆ, ರೋಮಾಂಚನ;

ಪದವಿಂಗಡಣೆ:
ಹೆದರು +ಹೊಕ್ಕುದು +ಸಭೆಗೆ +ಕೌರವನ್
ಎದೆ +ಬಿರಿದುದ್+ಆಸ್ಥಾನ +ಜಲನಿಧಿ
ಕದಡಿತ್+ಉಕ್ಕಿದ +ಬೆರಗಿನಲಿ +ಬೆಳ್ಳಾದನ್+ಅವನೀಶ
ಹದನ್+ಅಹುದು +ಹಾ+ ಎನುತಲ್+ಇದ್ದರು
ವಿದುರ+ ಭೀಷ್ಮ+ದ್ರೋಣರ್+ಇತ್ತಲು
ಕೆದರು+ಕೇಶದ +ಕಾಂತೆ +ಹುದಿದಳು+ ಹರ್ಷಪುಳಕದಲಿ

ಅಚ್ಚರಿ:
(೧) ದ್ರೌಪದಿಯನ್ನು ಕೆದರುಗೇಶದ ಕಾಂತೆ ಎಂದು ಕರೆದಿರುವುದು
(೨) ಪದ್ಯದ ಆದಿ ಮತ್ತು ಅಂತ್ಯ ಹ ಕಾರದ ಜೋಡಿ ಪದಗಳು – ಹೆದರು ಹೊಕ್ಕುದು, ಹುದಿದಳು ಹರ್ಷಪುಳಕದಲಿ
(೩) ದುರ್ಯೋಧನ, ಧರ್ಮರಾಯನ ಸ್ಥಿತಿ – ಕೌರವನೆದೆ ಬಿರಿದುದ್; ಬೆರಗಿನಲಿ ಬೆಳ್ಳಾದನವನೀಶ
(೪) ಆಸ್ಥಾನವನ್ನು ಹೋಲಿಸುವ ಪರಿ – ಆಸ್ಥಾನ ಜಲನಿಧಿ ಕದಡಿತುಕ್ಕಿದ