ಪದ್ಯ ೫೨: ದುರ್ಯೋಧನನು ಪಣಕ್ಕೆ ಏನನ್ನು ಇಟ್ಟನು?

ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬಂಗಾರದಿಂದ ಮಾಡಿದ ಎರಡು ಸಾವಿರ ರಥಗಳು, ಅವಕ್ಕೆ ಕಟ್ಟಿದ ಎಂಟು ಸಾವಿರ ಕುದುರೆಗಳು ನನ್ನ ಪಣ ಎಂದು ಧರ್ಮನಂದನನು ಒಡ್ಡಿದನು. ಇದೆಲ್ಲಾ ಕೌರವರಾಯನಿಗೆ ತಾನೆ ಎಂದು ಹೇಳುತ್ತಾ ಶಕುನಿಯು ಕಾಯಿಗಳನ್ನು ನಡೆಸಿದನು. ದೈವವು ದುಷ್ಟರಿಗೊಲಿಯಿತು ಎಂದು ಶಕುನಿಯು ಬೊಬ್ಬಿರಿದನು.

ಅರ್ಥ:
ಕನಕ: ಚಿನ್ನ, ಬಂಗಾರ; ರಥ: ಬಂಡಿ; ಸಾವಿರ: ಸಹಸ್ರ; ಮೊನೆ: ತುದಿ, ಕೊನೆ; ಹೂಡಿದ: ಜೋಡಿಸಿದ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ವಾಜಿ: ಕುದುರೆ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ನಂದನ: ಮಗ; ಜನಪ: ರಾಜ; ಐಸಲೇ: ಅಲ್ಲವೇ; ಹಾಯ್ಕು: ಹಾಕು, ಹೊರಬೀಳು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಕೆದರು: ಹರಡು; ದುರ್ಜನ: ದುಷ್ಟ; ಒಲಿ: ಬಯಸು, ಅಪೇಕ್ಷಿಸು; ದೈವ: ಭಗವಂತ; ಗತಿ: ಅವಸ್ಥೆ, ದಿಕ್ಕು; ಬೊಬ್ಬಿರಿ: ಕೂಗು;

ಪದವಿಂಗಡಣೆ:
ಕನಕಮಯ +ರಥವ್+ಎರಡು +ಸಾವಿರ
ಮೊನೆಗೆ +ಹೂಡಿದವ್+ಎಂಟು +ಸಾವಿರ
ವಿನುತ+ ವಾಜಿಗಳ್+ಒಡ್ಡವ್+ಎಂದನು +ಧರ್ಮನಂದನನು
ಜನಪತಿಗೆ +ತಾನ್+ಐಸಲೇ +ಹಾ
ಯ್ಕೆನುತ +ಸಾರಿಯ +ಕೆದರಿದನು+ ದು
ರ್ಜನರಿಗ್+ಒಲಿದುದು +ದೈವಗತಿ +ಬೊಬ್ಬಿರಿದನಾ +ಶಕುನಿ

ಅಚ್ಚರಿ:
(೧) ಸಾವಿರ – ೧, ೨ ಸಾಲಿನ ಕೊನೆ ಪದ

ಪದ್ಯ ೫೧: ಮೊದಲನೇ ಹಲಗೆಯನು ಯಾರು ಗೆದ್ದರು?

ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ (ಸಭಾ ಪರ್ವ, ೧೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಧರ್ಮಜನು ಸೋತನು, ಶಕುನಿಯು ಬೇಡಿದ್ದ ಗರವು ಅವನ ಕೃತ್ರಿಮದ ಕಟ್ಟಿಗೆ ಸಿಲುಕಿ ದಾಳಗಳು ಕೊಡುತ್ತಿದ್ದವು. ಈ ಹಲಗೆಯನ್ನು ಕೌರವ ಗೆದ್ದನು, ಇನ್ನೇನು ಪಣವನ್ನು ಕಟ್ಟಿತ್ತೀಯ ಎಂದು ಶಕುನಿಯು ಯುಧಿಷ್ಠಿರನನ್ನು ನೋಡುತ್ತಾ ಕೇಳಿದನು.

ಅರ್ಥ:
ರಾಯ: ದೊರೆ, ಒಡೆಯ; ಸೋಲು: ಪರಾಭವ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ತಹ: ಒಪ್ಪಂದ; ಹಮ್ಮು: ಯೋಜಿಸು; ಒದಗು: ಲಭ್ಯ, ದೊರೆತುದು; ಆಯ: ಗುಟ್ಟು, ಉದ್ದೇಶ; ಕೃತ್ರಿಮ: ಕಪಟ, ಮೋಸ; ಸಂಕೇತ: ಚಿಹ್ನೆ; ಆಯಿತು: ಮುಗಿಯಿತು; ಹಲಗೆ: ಪಲಗೆ, ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು, ಪಗಡೆದಲ್ಲಿ ಒಂದು ಪಂದ್ಯ; ಗೆಲುವು: ಜಯ; ಮತ್ತೆ: ಪುನಃ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ನಂದನ: ಮಗ; ಈಕ್ಷಿಸು: ನೋಡು;

ಪದವಿಂಗಡಣೆ:
ರಾಯ+ ಸೋತನು +ಶಕುನಿ +ಬೇಡಿದ
ದಾಯ+ ತಹ +ಹಮ್ಮಿಗೆಯಲ್+ಒದಗಿದವ್
ಆಯತದ +ಕೃತ್ರಿಮವಲೇ +ಕೌರವರ +ಸಂಕೇತ
ಆಯಿತೀ +ಹಲಗೆಯನು +ಕೌರವ
ರಾಯ +ಗೆಲಿದನು +ಮತ್ತೆ +ಪಣವೇ
ನಾಯಿತೆಂದನು +ಶಕುನಿ +ಯಮನಂದನನನ್+ಈಕ್ಷಿಸುತ

ಅಚ್ಚರಿ:
(೧) ರಾಯ, ದಾಯ, ಆಯ – ಪ್ರಾಸ ಪದಗಳು
(೨) ಕೌರವರ ಸಂಕೇತ – ಆಯತದ ಕೃತ್ರಿಮವಲೇ ಕೌರವರ ಸಂಕೇತ

ಪದ್ಯ ೫೦: ಪಗಡೆಯಾಟವು ಹೇಗೆ ನಡೆಯಿತು?

ದುಗನ ಹಾಯಿತು ತನಗೆ ಹಾಯ್ಕಿ
ತ್ತಿಗನವೆಂಬಬ್ಬರದ ಹಾಸಂ
ಗಿಗಳ ಬೊಬ್ಬೆಯ ಸಾರಿಗಳ ಕಟಕಟತ ವಿಸ್ವನದ
ಉಗಿವಸೆರೆಗಳ ಬಳಿದು ಹಾರದ
ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾ ಧೂಳಿ ಮಸಗಿತು ಭೂಪ ಕೇಳೆಂದ (ಸಭಾ ಪರ್ವ, ೧೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ದ್ಯೂತದ ಆಟವು ಜೋರಾಗಿ ನಡೆದಿತ್ತು. ನನಗೆ ಎರಡನ್ನು ಹಾಕು, ನನಗೆ ಆರು ಬೇಕು ಎಂದು ದಾಳಗಳನ್ನು ಕಟೆಯುವರು. ಪಗಡೆ ಹಾಸಿನ ಚಿತ್ರದ ಹಲಗೆಯ ಮೇಲೆ ಕಾಯಿಗಳನ್ನು ಕಟ್ ಕಟ್ ಎಂಬ ಶಬ್ದದೊಂದಿಗೆ ನಡೆಸುವರು. ಆಟದಲ್ಲಿ ಸಿಕ್ಕ ಕಾಯನ್ನು ಬಿಡಿಸುವರು. ಜೋಡುಕಾಯಿ ಕಟ್ಟುವರು, ತಮ್ಮ ತಮ್ಮ ಕಾಯಿಗಳನ್ನು ಗರಕ್ಕನುಸಾರವಾಗಿ ನಡೆಸುವರು. ಹೀಗೆ ಪಗಡೆಯಾಟದ ಕೋಲಾಹಲವು ಮುಂದುವರೆಯಿತು.

ಅರ್ಥ:
ದುಗ: ಲೆತ್ತದ ಆಟದಲ್ಲಿ ಎರಡರ ಗರ; ಹಾಯಿತು: ಹಾಕು, ಹೊರಳಿಸು; ಇತ್ತಿಗ: ಲೆತ್ತದ ಆಟದಲ್ಲಿ ಆರರ ಗರ; ಅಬ್ಬರ: ಜೋರು; ಹಾಸಂಗಿ: ಜೂಜಿನ ದಾಳ; ಬೊಬ್ಬೆ: ಆರ್ಭಟ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಕಟಕಟ: ಶಬ್ದವನ್ನು ಸೂಚಿಸುವ ಪದ; ನಿಸ್ವನ: ಶಬ್ದ, ಧ್ವನಿ; ಉಗಿವ: ಹೊರಬೀಳುವ; ಸೆರೆ: ಬಂಧನ; ಬಳಿ: ಹತ್ತಿರ; ಹಾರದ: ಜೋಡು; ಬಿಗುಹು: ಗಟ್ಟಿ, ಬಂಧನ; ಬೀದಿ: ಮಾರ್ಗ; ತಳಿ: ಚೆಲ್ಲು; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಮಸಗು: ಹರಡು; ಕೆರಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದುಗನ +ಹಾಯಿತು +ತನಗೆ +ಹಾಯ್ಕ್
ಇತ್ತಿಗನವೆಂಬ್+ಅಬ್ಬರದ+ ಹಾಸಂ
ಗಿಗಳ +ಬೊಬ್ಬೆಯ +ಸಾರಿಗಳ +ಕಟಕಟತ+ ವಿಸ್ವನದ
ಉಗಿವ+ಸೆರೆಗಳ +ಬಳಿದು +ಹಾರದ
ಬಿಗುಹುಗಳ+ ಬೀದಿಗಳ+ ತಳಿ +ಸಾ
ರಿಗಳ +ಧಾಳಾ ಧೂಳಿ +ಮಸಗಿತು +ಭೂಪ +ಕೇಳೆಂದ

ಅಚ್ಚರಿ:
(೧) ಪಗಡೆ ಆಟದ ವೈಖರಿ – ಉಗಿವಸೆರೆಗಳ ಬಳಿದು ಹಾರದ ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾ ಧೂಳಿ ಮಸಗಿತು

ಪದ್ಯ ೪೯: ದ್ಯೂತದಾಟದಲ್ಲಿ ಇಬ್ಬರು ಹೇಗೆ ಸಾರಿದರು?

ಹೇಮಭಾರದ ವಿಮಲ ರತುನ
ಸ್ತೋಮವಿದೆ ಪಣವೆನಲು ಕೌರವ
ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸದ ಧನವ
ಆ ಮಹಿಪ ಶಕುನಿಗಳು ಸಾರಿ
ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದ್ದುದಿಬ್ಬರ ಕರಣ ವೃತ್ತಿಗಳು (ಸಭಾ ಪರ್ವ, ೧೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧರ್ಮರಾಯನು ಬಂಗಾರದ ಭಾರ (ಇಪ್ಪತ್ತು ತೊಲ) ದ ರತ್ನಗಳು ಪಣವೆನ್ನಲು, ಕೌರವನು ಸಹ ಅಷ್ಟು ಹಣವನ್ನು ಹೂಡಿದನು. ಧರ್ಮಜ, ಶಕುನಿಗಳು ಕಾಯಿಗಳನ್ನು ನಡೆಸಿದರು. ಜೂಜಿನ ತಾಮಸದಲ್ಲಿ ಇಬ್ಬರ ಮನಸ್ಸೂ ಕುಣಿದಾಡಿತು.

ಅರ್ಥ:
ಹೇಮ: ಚಿನ್ನ; ಭಾರ: ಹೊರೆ; ವಿಮಲ: ನಿರ್ಮಲ; ರತುನ: ರತ್ನ, ಬೆಲೆಬಾಳುವ ಮಣಿ; ಸ್ತೋಮ: ಗುಂಪು; ಪಣ: ಜೂಜಿಗೆ ಒಡ್ಡಿದ ವಸ್ತು; ಒಡ್ಡು: ನೀಡು, ಜೂಜಿನಲ್ಲಿ ಒಡ್ಡುವ ಹಣ; ಹೆಸರಿಸಿದ: ಹೇಳಿದ; ಧನ: ಐಶ್ವರ್ಯ, ಸಂಪತ್ತು; ಮಹಿಪ: ರಾಜ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಗ್ರಾಮ: ಸಂಗೀತದ ಸಪ್ತಸ್ವರಗಳಲ್ಲಿ ಷಡ್ಜ, ಮಧ್ಯಮ ಮತ್ತು ಗಾಂಧಾರವೆಂಬ ಮೂರು ಗುಂಪು; ಕೆದರು: ಚೆದರು, ಹರಡು; ದ್ಯೂತ: ಜೂಜು; ತಾಮಸ: ಅಂಧಕಾರ; ಉಬ್ಬೆದ್ದು: ಕುತೂಹಲ; ಹುಬ್ಬು: ಕಣ್ಣಿನ ಮೇಲಿರುವ ರೋಮಾವಳಿ; ಎದ್ದು: ಮೇಲೇಳು; ಕರಣ: ಕಿವಿ, ಮನಸ್ಸು, ಜ್ಞಾನೇಂದ್ರಿಯ; ವೃತ್ತಿ: ಸ್ಥಿತಿ;

ಪದವಿಂಗಡಣೆ:
ಹೇಮಭಾರದ +ವಿಮಲ +ರತುನ
ಸ್ತೋಮವಿದೆ+ ಪಣವೆನಲು+ ಕೌರವ
ಭೂಮಿಪತಿ+ಒಡ್ಡಿದನು+ ಧರ್ಮಜ+ ಹೆಸರಿಸದ +ಧನವ
ಆ +ಮಹಿಪ +ಶಕುನಿಗಳು+ ಸಾರಿ
ಗ್ರಾಮವನು+ ಕೆದರಿದರು +ದ್ಯೂತದ
ತಾಮಸದಲ್+ಉಬ್ಬೆದ್ದುದ್+ಇಬ್ಬರ +ಕರಣ +ವೃತ್ತಿಗಳು

ಅಚ್ಚರಿ:
(೧) ಭೂಮಿಪತಿ, ಮಹಿಪ – ಸಮನಾರ್ಥಕ ಪದ
(೨) ದ್ಯೂತದಲ್ಲಿ ತಲ್ಲೀನರಾದರ ಎಂದು ಹೇಳಲು – ಸಾರಿ ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದ್ದುದಿಬ್ಬರ ಕರಣ ವೃತ್ತಿಗಳು

ಪದ್ಯ ೪೮: ಧರ್ಮರಾಯನು ದುರ್ಯೋಧನನಿಗೆ ಏನು ಹೇಳಿದ?

ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈಹೊದ್ಯನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನಬರಲಿದಕೇನೆನುತೆ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ (ಸಭಾ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನನ್ನ ಪರವಾಗಿ ಗಂಧಾರದ ದೊರೆ ಶಕುನಿಯು ನಿನ್ನೊಡನೆ ಕಣಕ್ಕಿಳಿದಿದ್ದಾನೆ. ಪಣವನ್ನು ನನಗೇ ಹೇಳು, ಎಂದು ದುರ್ಯೋಧನನು ಹೇಳಲು, ಯುಧಿಷ್ಠಿರನು, ನೀನಾದರೂ ಬಾ, ಇಲ್ಲವೇ ನಿನ್ನ ಮಾವನೇ ಬರಲಿ ಅದರಿಂದೇನಾಯಿತು ಎಂದು ಧೂರ್ತರಾದ ಶಕುನಿ, ದುರ್ಯೋಧನನನ್ನು ಪಣಕ್ಕೆ ಆಹ್ವಾನಿಸಿದನು.

ಅರ್ಥ:
ಲೆಕ್ಕ: ಎಣಿಕೆ; ಭೂಪತಿ: ರಾಜ; ಕೈಹೊಯ್ದ: ಸೆಣಸು, ಆಡು; ಕೈ: ಹಸ್ತ; ಹೊಯ್ದು: ಹೊಡೆದು; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಹೇಳು: ತಿಳಿಸು; ನುಡಿ: ಮಾತು; ರಾಯ: ದೊರೆ; ಮಾವ: ತಾಯಿಯ ಸಹೋದರ; ಮುನ್ನ: ಮುಂದೆ; ಬರಲಿ: ಆಗಮಿಸು; ಸಂಪನ್ನ: ಸಮೃದ್ಧವಾದ; ಶಠ: ದುಷ್ಟ, ಧೂರ್ತ; ಅಳವಿ: ಯುದ್ಧ, ಹತ್ತಿರ; ಅವನೀಶ: ರಾಜ;

ಪದವಿಂಗಡಣೆ:
ಎನ್ನ+ ಲೆಕ್ಕಕೆ+ ಶಕುನಿ+ ಭೂಪತಿ
ನಿನ್ನೊಡನೆ +ಕೈಹೊಯ್ದನ್+ಒಡ್ಡವನ್
ಎನ್ನೊಡನೆ+ ಹೇಳೆಂದು +ನುಡಿದನು +ಕೌರವರರಾಯ
ನಿನ್ನೊಳಾಗಲಿ+ ನಿನ್ನ +ಮಾವನೆ
ಮುನ್ನಬರಲ್+ಇದಕೇನ್+ಎನುತೆ +ಸಂ
ಪನ್ನ +ಶಠರೊಡನ್+ಅಳವಿಗೊಟ್ಟ್+ಅವನೀಶನ್+ಇಂತೆಂದ

ಅಚ್ಚರಿ:
(೧) ರಾಯ, ಅವನೀಶ, ಭೂಪತಿ – ಸಮನಾರ್ಥಕ ಪದ
(೨) ದುರ್ಯೋಧನನನ್ನು ಸಂಪನ್ನ ಶಠರೊಡನ ಪದದ ಬಳಕೆ