ಪದ್ಯ ೯೨: ಭೀಮನು ಕೋಪದಿಂದ ಏನೆಂದು ನುಡಿದನು?

ಈಯವಸ್ಥೆಗೆ ತಂದ ಕೌರವ
ನಾಯಿಗಳ ನಿಟ್ಟೆಲುವ ಮುರಿದು ನ
ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ
ವಾಯುಸಖನಲಿ ಸುಡುವೆನೀಗಳೆ
ಬೀಯವಾಗಲಿ ದೇಹವಾಚಂ
ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ (ಸಭಾ ಪರ್ವ, ೧೫ ಸಂಧಿ, ೯೨ ಪದ್ಯ)

ತಾತ್ಪರ್ಯ:
ನಮಗೆ ಈ ದುರವಸ್ಥೆಯನ್ನು ತಂದ ಕೌರವ ನಾಯಿಗಳ ಬೆನ್ನು ಮೂಳೆಗಳನ್ನು ಮುರಿದು, ಹೊಸ ಠೀವಿಯಲ್ಲಿ ಬಡೆಯದಿದ್ದರೆ ನನ್ನು ತೋಳುಗಳು ಕೊಬ್ಬಿದ್ದಕ್ಕೆ ಏನು ಪ್ರಯೋಜನ> ಆದುದರಿಂದ ನನ್ನ ತೋಳುಗಳನ್ನೇ ಸುಟ್ಟು ಹಾಕುತ್ತೇನೆ. ಈ ಪ್ರಾಣವು ಸೂರ್ಯಚಂದ್ರರಿರುವರಗೇನೂ ಇರುವುದಿಲ್ಲ. ಈಗಲೇ ಈ ಪ್ರಾಣವು ಹೋಗಲಿ, ಎಂದು ಭೀಮನು ಹೆಜ್ಜೆ ಹೆಜ್ಜೆಗೂ ಕೋಪದಿಂದ ನುಡಿದನು.

ಅರ್ಥ:
ಅವಸ್ಥೆ: ಸ್ಥಿತಿ; ತಂದ: ಒಡ್ಡಿದ; ನಾಯಿ: ಶ್ವಾನ; ನಿಟ್ಟೆಲವು: ನೇರವಾದ ಎಲುಬು; ಮುರಿ: ಸೀಳು; ನವಾಯಿ: ಠೀವಿ; ಘಟ್ಟಿಸು: ಹೊಡೆ, ಅಪ್ಪಳಿಸು; ಕೊಬ್ಬು: ಸೊಕ್ಕು, ಹೆಚ್ಚಾಗು; ತೋಳು: ಬಾಹು; ವಾಯು: ಗಾಳಿ; ಸಖ: ಸ್ನೇಹಿತ; ವಾಯುಸಖ: ಅಗ್ನಿ; ಸುಡು: ದಹಿಸು; ಬೀಯ: ನಷ್ಟ, ಹಾಳು, ಆಹಾರ; ದೇಹ: ತನು; ಚಂದ್ರ: ಶಶಿ; ಆಯತ: ನೆಲೆ, ವಿಶಾಲ; ಒಡನೊಡನೆ: ಹೆಜ್ಜೆ ಹೆಜ್ಜೆ; ಮಿಡುಕು: ಅಲುಗಾಟ, ಚಲನೆ; ಕಲಿ: ಶೂರ;

ಪದವಿಂಗಡನೆ:
ಈ+ಅವಸ್ಥೆಗೆ +ತಂದ +ಕೌರವ
ನಾಯಿಗಳ+ ನಿಟ್ಟೆಲುವ +ಮುರಿದು +ನ
ವಾಯಿಯಲಿ+ ಘಟ್ಟಿಸದೆ +ಕೊಬ್ಬಿದ +ತನ್ನ +ತೋಳುಗಳ
ವಾಯುಸಖನಲಿ +ಸುಡುವೆನ್+ಈಗಳೆ
ಬೀಯವಾಗಲಿ +ದೇಹವ್+ಆಚಂ
ದ್ರಾಯತವೆ +ಎಂದ್+ಒಡನೊಡನೆ +ಮಿಡುಕಿದನು+ ಕಲಿಭೀಮ

ಅಚ್ಚರಿ:
(೧) ಕೌರವರನ್ನು ಬಯ್ಯುವ ಪರಿ – ಕೌರವ ನಾಯಿಗಳ
(೨) ಅಗ್ನಿಯನ್ನು ವಾಯುಸಖನೆಂದು ಕರೆದಿರುವುದು

ಪದ್ಯ ೯೧: ಅರ್ಜುನನ ಮಾತು ಕೇಳಿ ಭೀಮನು ಯಾರ ತೋಳನ್ನು ಸುಡುವೆನೆಂದನು?

ಹಿಂಗಿ ಹೋಗಲಿ ತನುವನಸು ಸ
ಪ್ತಾಂಗ ಬೇಯಲಿ ಖೋಡಿ ಮನದಲಿ
ಹಿಂಗುವುದೆ ಹರಹರ ಧನಂಜಯ ಕಾಕ ಬಳಸಿದೆಲ
ಅಂಗನೆಯ ಮೇಲೊಡ್ಡವೇ ಲಲಿ
ತಾಂಗಿಗೀ ವಿಧಿಯೇಕೆ ನಮಗೀ
ಭಂಗ ಸಾಲದೆ ಸುಡುವೆನಾದೊಡೆ ತನ್ನ ತೋಳುಗಳ (ಸಭಾ ಪರ್ವ, ೧೫ ಸಂಧಿ, ೯೧ ಪದ್ಯ)

ತಾತ್ಪರ್ಯ:
ಕೋಪದ ಆವೇಶದಲ್ಲಿದ್ದ ಭೀಮನು, ಅರ್ಜುನ ಪ್ರಾಣವು ಈ ದೇಹವನ್ನು ಬಿಟ್ಟು ಹೋಗಲಿ, ಸಪ್ತಾಂಗಗಳು ಬೆಂದು ಹೋಗಲಿ, ಆದರೆ ಈ ದೋಷವು ಮನಸ್ಸನ್ನು ನೋಯಿಸದಿದ್ದೀತೆ? ಶಿವ ಶಿವಾ, ದ್ರೌಪದಿಯನ್ನು ಪಣವಾಗಿಡುವುದೇ? ನಮಗೆ ಆಗಿರುವ ಭಂಗವು ಸಾಲದೆಂದು ಅವಳಿಗೂ ದುರ್ಗತಿಯೇ? ಸಹದೇವ ಬೆಂಕಿಯನ್ನು ತಾ, ಅಣ್ಣನ ತೋಳುಗಳನ್ನು ಸುಡುವುದು ಬೇಡ, ನನ್ನ ತೋಳುಗಳನ್ನೇ ಸುಟ್ಟುಕೊಳ್ಳುತ್ತೇನೆ ಎಂದನು.

ಅರ್ಥ:
ಹಿಂಗು: ಕಡಮೆಯಾಗು, ತಗ್ಗು; ತನು: ದೇಹ; ಅಸು: ಪ್ರಾಣ; ಸಪ್ತಾಂಗ: ಏಳು ಅಂಗಗಳು; ಬೇಯು: ಪಕ್ವವಾಗು, ಖೋಡಿ: ಕೆಟ್ಟ, ಹೀನವಾದ; ಮನ: ಮನಸ್ಸು; ಹರ: ಶಿವ ; ಕಾಕ: ಕಾಗೆಯ ಪೌರುಷ, ಒಣಜಂಬ; ಬಳಸು: ಸುತ್ತುವರಿ; ಅಂಗನೆ: ಹೆಣ್ಣು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಲಲಿತಾಂಗಿ: ಬಳ್ಳಿಯಂತ ದೇಹವುಳ್ಳವಳು, ಸುಂದರಿ (ದ್ರೌಪದಿ); ವಿಧಿ: ನಿಯಮ; ಭಂಗ: ಮೋಸ, ವಂಚನೆ; ಸಾಲದೆ: ಸಾಕಾಗು; ಸುಡು: ದಹಿಸು; ತೋಳು: ಬಾಹು;

ಪದವಿಂಗಡಣೆ:
ಹಿಂಗಿ +ಹೋಗಲಿ+ ತನುವನ್+ಅಸು +ಸ
ಪ್ತಾಂಗ +ಬೇಯಲಿ +ಖೋಡಿ +ಮನದಲಿ
ಹಿಂಗುವುದೆ +ಹರಹರ+ ಧನಂಜಯ+ ಕಾಕ +ಬಳಸಿದೆಲ
ಅಂಗನೆಯ+ ಮೇಲ್+ಒಡ್ಡವೇ +ಲಲಿ
ತಾಂಗಿಗ್+ಈ +ವಿಧಿಯೇಕೆ+ ನಮಗೀ
ಭಂಗ +ಸಾಲದೆ +ಸುಡುವೆನಾದೊಡೆ +ತನ್ನ +ತೋಳುಗಳ

ಅಚ್ಚರಿ:
(೧) ಭೀಮನ ಮನಸ್ಸಿನ ಚಿತ್ರಣ – ಖೋಡಿ ಮನದಲಿ ಹಿಂಗುವುದೆ ಹರಹರ ಧನಂಜಯ ಕಾಕ ಬಳಸಿದೆಲ
(೨) ದ್ರೌಪದಿಯ ಮೇಲಿನ ಒಲವನ್ನು ಹೇಳುವ ಪರಿ – ಲಲಿತಾಂಗಿಗೀ ವಿಧಿಯೇಕೆ ನಮಗೀ
ಭಂಗ ಸಾಲದೆ
(೩) ದ್ರೌಪದಿಯನ್ನು ಕರೆದ ಬಗೆ – ಅಂಗನೆ, ಲಲಿತಾಂಗಿ

ಪದ್ಯ ೯೦: ಅರ್ಜುನನು ಭೀಮನನ್ನು ಏನು ಹೇಳಿ ತಡೆದನು?

ಏನಿದೇನೈ ಭೀಮ ನಿಲು ಯಮ
ಸೂನು ಶಿವ ಶಿವ ಗುರುವಲಾ ನಮ
ಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು
ಈ ನರೇಂದ್ರಗೆ ಸರಿಯೆ ಕುಂತೀ
ಸೂನುವೇ ಪ್ರಾಣಾರ್ಥದಿಂದ ಸ
ಘಾನನೈ ನಮಗೀತನೇ ಗತಿ ಯೆಂದನಾ ಪಾರ್ಥ (ಸಭಾ ಪರ್ವ, ೧೫ ಸಂಧಿ, ೯೦ ಪದ್ಯ)

ತಾತ್ಪರ್ಯ:
ಭೀಮ ಏನಿದು, ಶಿವ ಶಿವಾ, ಏನು ಮಾಡುತ್ತಿರುವೆ, ನಿಲ್ಲು, ಯುಧಿಷ್ಠಿರನು ನಮಗೆ ಗುರು. ದ್ರೌಪದಿಯು ಸೇರಿ ಸಮಸ್ತ ವಸ್ತುಗಳೂ ಇವನಿಗೆ ಸರಿಸಮಾನವಾಗಲಾರವು. ಹೇಚ್ಚೇನು, ಪ್ರಾಣದ ಐಶ್ವರ್ಯಕ್ಕಿಂತಲೂ ಇವನೇ ನಮಗೆ ಶ್ರೇಷ್ಠ ಎಂದು ಹೇಳಿ ಭೀಮನನ್ನು ತಡೆದನು.

ಅರ್ಥ:
ನಿಲು: ನಿಲ್ಲು, ತಡೆ; ಸೂನು: ಮಗ; ಗುರು: ಆಚಾರ್ಯ; ನಿತಂಬಿನಿ: ಹೆಣ್ಣು; ಆದಿ: ಮೊದಲಾದ; ಸಮಸ್ತ: ಎಲ್ಲಾ; ವಸ್ತು: ಸಾಮಗ್ರಿ; ನರೇಂದ್ರ: ರಾಜ; ಸರಿ: ಸಮ; ಪ್ರಾಣ: ಜೀವ; ಘನ: ಶ್ರೇಷ್ಠ; ಗತಿ: ಅವಸ್ಥೆ;

ಪದವಿಂಗಡಣೆ:
ಏನಿದ್+ಏನೈ +ಭೀಮ +ನಿಲು+ ಯಮ
ಸೂನು +ಶಿವ+ ಶಿವ+ ಗುರುವಲಾ +ನಮಗ್
ಈ+ ನಿತಂಬಿನಿ+ಆದಿಯಾದ+ ಸಮಸ್ತ+ ವಸ್ತುಗಳು
ಈ +ನರೇಂದ್ರಗೆ+ ಸರಿಯೆ+ ಕುಂತೀ
ಸೂನುವೇ+ ಪ್ರಾಣಾರ್ಥದಿಂದ +ಸ
ಘಾನನೈ+ ನಮಗ್+ಈತನೇ+ ಗತಿ+ ಯೆಂದನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ಆಶ್ಛರ್ಯವನ್ನು ವಿವರಿಸುವ ಪರಿ – ಏನಿದೇನೈ ಭೀಮ, ಶಿವ ಶಿವ
(೨) ಧರ್ಮರಾಯನನ್ನು ಇತರ ತಮ್ಮಂದಿರು ನೋಡುವ ಪರಿ – ಗುರುವಲಾ ನಮಗೀ ನಿತಂಬಿನಿಯಾದಿಯಾದ ಸಮಸ್ತ ವಸ್ತುಗಳು ಈ ನರೇಂದ್ರಗೆ ಸರಿಯೆ

ಪದ್ಯ ೮೯: ಭೀಮನು ಸಹದೇವನಿಗೆ ಏನನ್ನು ತರಲು ಹೇಳಿದನು?

ನೊಂದನೀಮಾತಿನಲಿ ಮಾರುತ
ನಂದನನು ಸಹದೇವನನು ಕರೆ
ದೆಂದನಗ್ನಿಯ ತಾ ಯುಧಿಷ್ಠಿರ ನೃಪನ ತೋಳುಗಳ
ಮಂದಿ ನೋಡಲು ಸುಡುವೆನೇಳೇ
ಳೆಂದು ಜರೆದರೆ ಹಿಡಿದು ಮಾದ್ರೀ
ನಂದನನ ನಿಲಿಸಿದನು ಫಲುಗುಣ ನುಡಿದನನಿಲಜನ (ಸಭಾ ಪರ್ವ, ೧೫ ಸಂಧಿ, ೮೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿ ಭೀಮನಿಗೆ ತುಂಬ ದುಃಖವಾಯಿತು, ತನ್ನ ತಮ್ಮ ಸಹದೇವನನ್ನು ಕರೆದು, ಹೋಗಿ ಬೆಂಕಿಯನ್ನು ತೆಗೆದುಕೊಂಡು ಬಾ, ನಮ್ಮನ್ನು ಈ ಸ್ಥಿತಿಗೆ ತಂದ ಅಣ್ಣನ ತೋಳುಗಳನ್ನು ಸುಡುತ್ತೇನೆ, ಏಳು ಏಳು ಎಂದು ಹೇಳಲು, ಅರ್ಜುನನು ಮಧ್ಯ ಪ್ರವೇಶಿಸಿ ಸಹದೇವನನ್ನು ನಿಲ್ಲಿಸಿ ಭೀಮನಿಗೆ ಹೀಗೆ ಹೇಳಿದನು

ಅರ್ಥ:
ನೊಂದು: ಬೇಜಾರು ಪಟ್ಟು, ದುಃಖಿಸು; ಮಾತು: ವಾಣಿ, ನುಡಿ; ಮಾರುತನಂದನ: ವಾಯು ಪುತ್ರ; ಕರೆ: ಬರೆಮಾಡು; ಅಗ್ನಿ: ಬೆಂಕಿ; ನೃಪ: ರಾಜ; ತೋಳು: ಬಾಹು; ಮಂದಿ: ಜನ; ನೋಡಲು: ವೀಕ್ಷಿಸಲು; ಸುಡು: ದಹಿಸು; ಜರೆ: ಬಯ್ಯು; ಹಿಡಿ: ಕಾವು, ಬಂಧನ; ನಂದನ: ಮಗ; ನಿಲಿಸು: ತಡೆ; ನುಡಿ: ಮಾತಾಡು; ಅನಿಲಜ: ವಾಯುಪುತ್ರ; ಅನಿಲ: ವಾಯು;

ಪದವಿಂಗಡಣೆ:
ನೊಂದನ್+ಈ+ಮಾತಿನಲಿ +ಮಾರುತ
ನಂದನನು +ಸಹದೇವನನು +ಕರೆದ್
ಎಂದನ್+ಅಗ್ನಿಯ +ತಾ +ಯುಧಿಷ್ಠಿರ +ನೃಪನ +ತೋಳುಗಳ
ಮಂದಿ +ನೋಡಲು +ಸುಡುವೆನ್+ಏಳ್
ಏಳೆಂದು +ಜರೆದರೆ+ ಹಿಡಿದು +ಮಾದ್ರೀ
ನಂದನನ+ ನಿಲಿಸಿದನು +ಫಲುಗುಣ +ನುಡಿದನ್+ಅನಿಲಜನ

ಅಚ್ಚರಿ:
(೧) ಮಾರುತನಂದನ, ಅನಿಲಜ – ಭೀಮನನ್ನು ಕರೆದ ಬಗೆ
(೨) ಸಹದೇವನ, ಮಾದ್ರೀನಂದನ – ಸಹದೇವನನ್ನು ಕರೆದ ಬಗೆ

ಪದ್ಯ ೮೮: ದುರ್ಯೋಧನನು ಏಕೆ ಭೀಷ್ಮಾದಿಯರನ್ನು ಜರೆದನು?

ಸೋತ ಬಳಿಕಿವರೆಮ್ಮವಶವ
ಖ್ಯಾತಿಯಲಿ ನಾವ್ ನಡೆವರಲ್ಲವೃ
ಥಾತಿರೇಕೈ ನೀವು ಘೂರ್ಮಿಸಲಂಜುವೆವೆ ನಿಮಗೆ
ಈ ತಳೋದರಿ ತೊತ್ತಿರಲಿ ಸಂ
ಘಾತವಾಗಲಿ ಸಾಕು ನಿಮ್ಮಯ
ಮಾತೆನುತ ಕುರುರಾಯ ಜರೆದನು ಭೀಷ್ಮ ಗುರು ಕೃಪರ (ಸಭಾ ಪರ್ವ, ೧೫ ಸಂಧಿ, ೮೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ಸರ್ವಸ್ವವನ್ನು ಸೋತ ಬಳಿಕ ಅವರು ನಮ್ಮ ವಶವಾಗಿ ದಾಸರಾದರು. ಸರಿಯಲ್ಲದ ದಾರಿಯಲ್ಲಿ ನಾವು ನಡೆಯುವವರಲ್ಲ. ನೀವು ವೃಥಾ ಗರ್ಜಿಸಿದರೆ ನಾವು ಹೆದರುವವರಲ್ಲ. ದ್ರೌಪದಿಯು ದಾಸಿಯರ ಜೊತೆ ಸೇರಲಿ, ನಿಮ್ಮ ಮಾತು ಸಾಕು ಎಂದು ಭೀಷ್ಮ, ದ್ರೋಣ, ಕೃಪರನ್ನು ದುರ್ಯೋಧನನು ಜರೆದನು.

ಅರ್ಥ:
ಸೋತು: ಪರಾಭವ; ಬಳಿಕ: ನಂತರ; ವಶ: ಅಧೀನ; ಅಖ್ಯಾತಿ: ಸರಿಯಿಲ್ಲದ, ಕೀರ್ತಿಗೆ ಸಲ್ಲದ; ನಡೆ: ಚಲಿಸು; ವೃಥ: ಸುಮ್ಮನೆ; ಅತಿರೇಕ: ರೂಢಿಗೆ ವಿರೋಧವಾದ ನಡೆ, ಅತಿಶಯ; ಘೂರ್ಮಿಸು: ಆರ್ಭಟಿಸು; ಅಂಜು: ಹೆದರು; ತಳೋದರಿ: ಹೆಂಡತಿ; ತೊತ್ತು: ದಾಸಿ; ಸಂಘಾತ: ಗುಂಪು, ಸಮೂಹ; ಸಾಕು: ನಿಲ್ಲಿಸು; ಮಾತು: ವಾಣಿ, ನುಡಿ; ಜರೆ:ಬಯ್ಯು;

ಪದವಿಂಗಡಣೆ:
ಸೋತ +ಬಳಿಕ್+ಇವರ್+ಎಮ್ಮ+ವಶವ್
ಅಖ್ಯಾತಿಯಲಿ +ನಾವ್ +ನಡೆವರಲ್ಲ+ವೃ
ಥ+ಅತಿರೇಕೈ+ ನೀವು +ಘೂರ್ಮಿಸಲ್+ಅಂಜುವೆವೆ+ ನಿಮಗೆ
ಈ +ತಳೋದರಿ +ತೊತ್ತಿರಲಿ+ ಸಂ
ಘಾತವಾಗಲಿ+ ಸಾಕು +ನಿಮ್ಮಯ
ಮಾತ್+ಎನುತ +ಕುರುರಾಯ +ಜರೆದನು +ಭೀಷ್ಮ +ಗುರು +ಕೃಪರ

ಅಚ್ಚರಿ:
(೧) ಹಿರಿಯರಲ್ಲಿದ್ದ ದುರ್ಯೋಧನನ ಗೌರವವನ್ನು ಹೇಳುವ ಪರಿ – ನೀವು ಘೂರ್ಮಿಸಲಂಜುವೆವೆ ನಿಮಗೆ; ಸಾಕು ನಿಮ್ಮಯ ಮಾತೆನುತ ಕುರುರಾಯ ಜರೆದನು

ಪದ್ಯ ೮೭: ಧರ್ಮಜನ ಗುಣವನ್ನು ಭೀಷ್ಮರು ಹೇಗೆ ಹೊಗಳಿದರು?

ಅಳಿಯದಂತಿರೆ ಸತ್ಯ ಧರ್ಮದ
ನೆಳಲು ನೆಗ್ಗದೆ ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯಸುರಕುಜದ
ಹಳವಿಗಳುಕದೆ ವೈರಿವರ್ಗದ
ಕಳಕಳಕೆ ಮೈಗೊಡದೆ ನೃಪನಿ
ರ್ಮಳದೊಳಿದ್ದರೆ ನಿಮಗೆ ಸದರವೆಯೆಂದನಾ ಭೀಷ್ಮ (ಸಭಾ ಪರ್ವ, ೧೫ ಸಂಧಿ, ೮೭ ಪದ್ಯ)

ತಾತ್ಪರ್ಯ:
ಸತ್ಯವು ನಾಶವಾಗದೆ, ಧರ್ಮದ ನೆರಳು ಬಾಡದೆ, ಕೀರ್ತಿ ಕಾಂತೆಯ ಸುಳಿವಿಗೆ ಅಡ್ಡಿಯಾಗದೆ, ಧೈರ್ಯವೆಂಬ ಕಲ್ಪವೃಕ್ಷದ ಇಗುರು ಬಾಡದೆ, ಅಪಮಾನಕ್ಕೆ ಬೆದರದೆ, ಅರಿಷಡ್ವರ್ಗಗಳ ಆಕ್ರಮಣಕ್ಕೆ ಒಳಗಾಗದೆ, ಧರ್ಮಜನು ನಿರ್ಮಲನಾಗಿದ್ದರೆ ನಿನಗೆ ಅದು ಸದರವಾಯಿತೋ ಎಂದು ಭೀಷ್ಮರು ದುರ್ಯೋಧನನನ್ನು ಕೇಳಿದರು.

ಅರ್ಥ:
ಅಳಿ: ನಾಶ; ಸತ್ಯ: ನಿಜ; ಧರ್ಮ: ಧಾರಣೆ ಮಾಡಿದುದು, ನಿಯಮ; ನೆಳಲು: ನೆರಳು; ನೆಗ್ಗು: ಕುಗ್ಗು, ಕುಸಿ; ಕೀರ್ತಿ: ಖ್ಯಾತಿ; ವಧು: ಹೆಣ್ಣು; ಸುಳಿವು: ಚಿಹ್ನೆ, ಗುರುತು; ನೋಯದೆ: ಪೆಟ್ಟು ತಿನ್ನದೆ; ತಳಿರು: ಚಿಗುರು; ಬಾಡು: ಕಳೆಗುಂದು, ಒಣಗು; ಧೈರ್ಯ: ದಿಟ್ಟತನ; ಸುರ: ದೇವತೆ; ಕುಜ: ಮರ; ಸುರಕುಜ: ದೇವಮರ, ಕಲ್ಪವೃಕ್ಷ; ಹಳವಿಗೆ: ಅಭಿಮಾನ; ಅಳುಕು: ಹೆದರು; ವೈರಿ: ಶತ್ರು; ವರ್ಗ: ಗುಂಪು; ಕಳಕಳ: ಗೊಂದಲ; ಮೈಗೊಡು: ಒಳಗಾಗು; ನೃಪ: ರಾಜ; ನಿರ್ಮಳ: ಶುದ್ಧ; ಸದರ: ಸಲಿಗೆ, ಸುಲಭ;

ಪದವಿಂಗಡಣೆ:
ಅಳಿಯದಂತಿರೆ +ಸತ್ಯ +ಧರ್ಮದ
ನೆಳಲು+ ನೆಗ್ಗದೆ+ ಕೀರ್ತಿವಧುವಿನ
ಸುಳಿವು +ನೋಯದೆ +ತಳಿರು +ಬಾಡದೆ +ಧೈರ್ಯ+ಸುರಕುಜದ
ಹಳವಿಗ್+ಅಳುಕದೆ +ವೈರಿ+ವರ್ಗದ
ಕಳಕಳಕೆ+ ಮೈಗೊಡದೆ +ನೃಪ+ನಿ
ರ್ಮಳದೊಳ್+ಇದ್ದರೆ +ನಿಮಗೆ +ಸದರವೆ+ಎಂದನಾ +ಭೀಷ್ಮ

ಅಚ್ಚರಿ:
(೧) ಧರ್ಮಜನ ಗುಣಗಾನದಲ್ಲಿ ಉಪಮಾನಗಳ ಪ್ರಯೋಗ – ಕೀರ್ತಿವಧುವಿನ
ಸುಳಿವು ನೋಯದೆ ತಳಿರು ಬಾಡದೆ ಧೈರ್ಯಸುರಕುಜದ

ಪದ್ಯ ೮೬: ಭೀಷ್ಮನು ಧರ್ಮರಾಯನ ಬಗ್ಗೆ ಏನು ಹೇಳಿದ?

ತುಟ್ಟಿಸಲಿ ಧನ ಮಾನಗರ್ವದ
ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು
ನೆಟ್ಟನೇ ನಿಶ್ಚಯಿಸಿದುದನೊಡ
ಹುಟ್ಟಿದರು ಮನ್ನಿಸಿದರಲ್ಲದೆ
ಹುಟ್ಟಿ ಹೊಂದಲು ಗತಿಯಹುದೆ ನಿನಗೆಂದನಾ ಭೀಷ್ಮ (ಸಭಾ ಪರ್ವ, ೧೫ ಸಂಧಿ, ೮೬ ಪದ್ಯ)

ತಾತ್ಪರ್ಯ:
ಐಶ್ವರ್ಯವು ದುರ್ಲಭವಾಗಲಿ, ಸ್ವಾಭಿಮಾನದ ಗರ್ವದ ಬೆಟ್ಟ ಪುಡಿ ಪುಡಿಯಾಗಲಿ, ಜೀವವು ದೇಹವನ್ನು ಬಿಟ್ಟು ಹೋಗಲಿ, ನಾನು ಸತ್ಯವನ್ನು ಬಿಡುವುದಿಲ್ಲ ಎಂದು ಯುಧಿಷ್ಠಿರನು ನಿಶ್ಚಯಿಸಿದನು. ಅವನ ತಮ್ಮಂದಿರು ಅನುಮೋದಿಸಿದರು. ಹಾಗಿಲ್ಲದಿದ್ದರೆ ನೀವು ಹುಟ್ಟಿ ಏನನ್ನೂ ಪಡೆಯುತ್ತಿರಲಿಲ್ಲ, ಹೋಗಲು ಯಾವ ಜಾಗವೂ ನಿಮಗಿಲ್ಲ ಎಂದು ಭೀಷ್ಮನು ನುಡಿದನು.

ಅರ್ಥ:
ತುಟ್ಟಿ:ಅಭಾವ, ದುಬಾರಿ; ಧನ: ಐಶ್ವರ್ಯ; ಮಾನ: ಮರ್ಯಾದೆ, ಗೌರವ; ಗರ್ವ: ಅಹಂಕಾರ; ಬೆಟ್ಟ: ಶೈಲ; ಮುರಿ: ಸೀಳು; ಜೀವ: ಪ್ರಾಣ; ಒಡಲು: ದೇಹ; ಬಿಟ್ಟು: ತೊರೆ; ಹಿಂಗು: ಕಾಣದಂತಾಗು; ಬಿಡೆ: ತೊರೆ; ಸತ್ಯ: ನಿಜ; ಸೂನು: ಮಗ; ನೆಟ್ಟು: ದಿಟ್ಟ, ನೆಲೆಗೊಳ್ಳು; ನಿಶ್ಚಯ: ನಿರ್ಧಾರ; ಒಡಹುಟ್ಟು: ಅಣ್ಣ ತಮ್ಮಂದಿರು; ಮನ್ನಿಸು: ಗೌರವಿಸು; ಹುಟ್ಟು: ಜನಿಸು; ಗತಿ: ಅವಸ್ಥೆ;

ಪದವಿಂಗಡಣೆ:
ತುಟ್ಟಿಸಲಿ +ಧನ +ಮಾನಗರ್ವದ
ಬೆಟ್ಟ +ಮುರಿಯಲಿ +ಜೀವ+ಒಡಲನು
ಬಿಟ್ಟು +ಹಿಂಗಲಿ+ ಬಿಡೆನು+ ಸತ್ಯವನೆಂದು +ಯಮಸೂನು
ನೆಟ್ಟನೇ +ನಿಶ್ಚಯಿಸಿದುದನ್+ಒಡ
ಹುಟ್ಟಿದರು +ಮನ್ನಿಸಿದರ್+ಅಲ್ಲದೆ
ಹುಟ್ಟಿ +ಹೊಂದಲು +ಗತಿಯಹುದೆ+ ನಿನಗೆಂದನಾ+ ಭೀಷ್ಮ

ಅಚ್ಚರಿ:
(೧) ಧರ್ಮಜನ ಸತ್ಯನಿಷ್ಠೆ: ತುಟ್ಟಿಸಲಿ ಧನ ಮಾನಗರ್ವದ ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು

ಪದ್ಯ ೮೫: ಭೀಷ್ಮರು ಶಕುನಿಯ ಮಾತಿಗೆ ಹೇಗೆ ಉತ್ತರಿಸಿದರು?

ವಾರಕದ ವಿವಿಧಾಭರಣ ಶೃಂ
ಗಾರವಂತಿರಲೀಕೆಯಾಡಿದ
ಸಾರ ಭಾಷೆಗೆ ನೆನೆಯಿರೈ ನಿರ್ವಾಹ ಸಂಗತಿಯ
ಓರೆ ಪೋರೆಯೊಳಾಡಿ ಧರ್ಮದ
ಧಾರಣಿಯ ಧಟ್ಟಿಸುವದಿದು ಗಂ
ಭೀರರಿಗೆ ಗರುವಾಯಿಯೇ ಸುಡಲೆಂದನಾ ಭೀಷ್ಮ (ಸಭಾ ಪರ್ವ, ೧೫ ಸಂಧಿ, ೮೫ ಪದ್ಯ)

ತಾತ್ಪರ್ಯ:
ಶಕುನಿಯು ದ್ರೌಪದಿಯನ್ನು ವಿವಿಧಾಭರಣದಿಂದ ಮೆರೆ ಎಂದು ಹೀಯಾಳಿಸಿದ ಬಳಿಕ ಭೀಷ್ಮರು ಆ ವಿವಿಧಾಭರಣದ ವಿಷಯ ಹಾಗಿರಲಿ, ಈಕೆ ಕೇಳಿರುವ ಸಾರವತ್ತಾದ ಪ್ರಶ್ನೆಗೆ ಉತ್ತರವನ್ನು ಸರಿಯಾಗಿ ಕೊಡುವುದನ್ನು ಯೋಚಿಸಿರಿ, ಓರೆ ಕೋರೆಗಳನ್ನೇ ಕುರಿತು ಮಾತಾಡಿ ಧರ್ಮಪಾಲನೆಯನ್ನು ಕೈಬಿಡುವುದು ಗಂಭೀರರಾದವರಿಗೆ ಶೋಭೆ ತರುತ್ತದೆಯೇ, ಅಂತಹದು ಸುಡಲಿ ಎಂದು ಭೀಷ್ಮರು ನುಡಿದರು.

ಅರ್ಥ:
ವಾರಕ: ಉಡುಗೊರೆ; ವಿವಿಧ: ಹಲವಾರು; ಆಭರಣ: ಒಡವೆ; ಶೃಂಗಾರ: ಅಲಂಕಾರ; ಅಂತಿರಲಿ: ಹಾಗಿರಲಿ; ಆಡಿದ: ನುಡಿದ; ಸಾರ: ರಸ; ಭಾಷೆ: ಮಾತು; ನೆನೆ: ಜ್ಞಾಪಿಸಿಕೊ; ನಿರ್ವಾಹ: ನಿವಾರಣೋಪಾಯ, ಆಧಾರ; ಸಂಗತಿ: ಜೊತೆ; ಓರೆ: ವಕ್ರ; ಧರ್ಮ: ಧಾರಣೆ ಮಾಡಿದುದು, ನಿಯಮ; ಧಾರಣೆ: ಧರಿಸು; ಧಟ್ಟಿಸು: ಒರಸಿಹಾಕು, ಉಜ್ಜು; ಗಂಭೀರ: ಆಳ, ಗಹನ; ಗರುವಾಯಿ: ದೊಡ್ಡತನ, ಠೀವಿ; ಸುಡು: ಭಸ್ಮ;

ಪದವಿಂಗಡಣೆ:
ವಾರಕದ +ವಿವಿಧ+ಆಭರಣ +ಶೃಂ
ಗಾರವ್+ ಅಂತಿರಲಿ+ಈಕೆ+ಆಡಿದ
ಸಾರ +ಭಾಷೆಗೆ +ನೆನೆಯಿರೈ +ನಿರ್ವಾಹ +ಸಂಗತಿಯ
ಓರೆ+ ಪೋರೆಯೊಳಾಡಿ +ಧರ್ಮದ
ಧಾರಣಿಯ +ಧಟ್ಟಿಸುವದ್+ಇದು ಗಂ
ಭೀರರಿಗೆ+ ಗರುವಾಯಿಯೇ +ಸುಡಲೆಂದನಾ +ಭೀಷ್ಮ

ಅಚ್ಚರಿ:
(೧) ಧ ಕಾರದ ತ್ರಿವಳಿ ಪದ – ಧರ್ಮದ ಧಾರಣಿಯ ಧಟ್ಟಿಸುವದಿದು
(೨) ಆಡು ಭಾಷೆಯನ್ನು ಬಳಸುವ ಪರಿ – ಓರೆ ಪೋರೆ

ಪದ್ಯ ೮೪: ಶಕುನಿಯು ದ್ರೌಪದಿಯನ್ನು ಹೇಗೆ ಹಂಗಿಸಿದ?

ಅಹುದಲೇ ಬಳಿಕೇನು ದಾಸ್ಯಕೆ
ವಿಹಿತವಾಯಿತು ನಿನ್ನ ತನುವಿನ
ಲಹ ಮನೋವ್ಯಥೆಯೇಕೆ ರಾಣಿವಾಸ ವೀಧಿಯಲಿ
ಮಹಿಳೆಯರ ಸಖ್ಯದಲಿ ಸೌಖ್ಯದ
ರಹಣಿಗೊಡಬಡು ವಾರಕದಲತಿ
ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೮೪ ಪದ್ಯ)

ತಾತ್ಪರ್ಯ:
ಹೌದು ಕರ್ಣನು ಹೇಳುತ್ತಿರುವುದು ಸರಿ, ಮತ್ತೇನು, ನಿನ್ನ ದೇಹವು ಈಗ ದಾಸ್ಯಕ್ಕೆಂದೇ ಆಯಿತು. ನಿನಗೇಕೆ ಮನಸ್ಸಿನ ವ್ಯಥೆ? ರಾಣೀವಾಸದ ಬೀದಿಯಲ್ಲಿ ದಾಸಿಯರ ಜೊತೆಯಲ್ಲಿ ಸೌಖ್ಯವನ್ನು ಅನುಭವಿಸಲು ಒಪ್ಪು. ನಿನಗೆ ಬರುವ ಹೇರಳವಾದ ಆಭರಣಗಳ ಭಾರದಿಂದ ಮೆರೆ ಎಂದು ಶಕುನಿಯು ಹಂಗಿಸಿದನು.

ಅರ್ಥ:
ಅಹುದು: ನಿಜ; ಬಳಿಕ: ನಂತರ; ದಾಸ್ಯ: ಸೇವೆ; ವಿಹಿತ: ಯೋಗ್ಯ; ತನು: ದೇಹ; ವ್ಯಥೆ: ನೋವು, ಯಾತನೆ; ಮನ: ಮನಸ್ಸು; ರಾಣಿ: ಅರಸಿ; ವಾಸ: ಮನೆ; ವೀಧಿ: ದಾರಿ; ಮಹಿಳೆ: ಸ್ತ್ರೀ; ಸಖ್ಯ: ಸ್ನೇಹ; ಸೌಖ್ಯ: ಕ್ಷೇಮ; ಅಣಿ: ಅವಕಾಶ; ಕೊಡಬಡು: ಒಪ್ಪು; ವಾರಕ: ಉಡುಗೊರೆ; ಅತಿಬಹಳ: ತುಂಬ; ಭೂಷಣ: ಅಲಂಕರಿಸುವುದು; ಭಾರ: ಹೊರೆ; ಮೆರೆ: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಅಹುದಲೇ +ಬಳಿಕೇನು +ದಾಸ್ಯಕೆ
ವಿಹಿತವಾಯಿತು +ನಿನ್ನ +ತನುವಿನ
ಲಹ+ ಮನೋವ್ಯಥೆಯೇಕೆ +ರಾಣಿವಾಸ+ ವೀಧಿಯಲಿ
ಮಹಿಳೆಯರ+ ಸಖ್ಯದಲಿ +ಸೌಖ್ಯದ
ರಹಣಿ+ಕೊಡಬಡು +ವಾರಕದಲ್+ಅತಿ
ಬಹಳ +ಭೂಷಣ+ ಭಾರದಲಿ+ ಮೆರೆಯೆಂದನಾ +ಶಕುನಿ

ಅಚ್ಚರಿ:
(೧) ಹಂಗಿಸುವ ಪರಿ – ದಾಸ್ಯಕೆವಿಹಿತವಾಯಿತು ನಿನ್ನ ತನು; ವಾರಕದಲತಿ ಬಹಳ ಭೂಷಣ ಭಾರದಲಿ ಮೆರೆ

ಪದ್ಯ ೮೩: ಕರ್ಣನು ದ್ರೌಪದಿಗೆ ಏನು ಹೇಳಿದ?

ಚಪಳೆ ಫಡ ಹೋಗಿವಳು ಹಲಬರ
ನುಪಚರಿಸಿದುದನರಿಯಲಾದುದು
ದ್ರುಪದ ನಂದನೆ ನಡೆ ವಿಳಾಸಿನಿಯರ ನಿವಾಸದಲಿ
ಕೃಪಣನೇ ಕುರುರಾಯ ನಿನಗಿ
ನ್ನಪದೆಸೆಯ ಹೊಲೆ ಹೋಯ್ತು ರಾಯನ
ವಿಪುಳ ವಿಭವವನನುಭವಿಸು ನಡೆಯೆಂದನಾಕರ್ಣ (ಸಭಾ ಪರ್ವ, ೧೫ ಸಂಧಿ, ೮೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಸಬಿಕರಿಗೆ ಪ್ರಶ್ನೆಯನ್ನು ಕೇಳಲು, ಕರ್ಣನು ಎಲೈ ದ್ರುಪದ ನಂದನೆ, ನೀನು ಚಪಲೆ, ನಡೆ, ಹಲವರನ್ನು ಉಪಚರಿಸಿ ಹೀಗೆಲ್ಲಾ ಮಾತನಾಡುವುದನ್ನು ಕಲಿತಿದ್ದೀಯ, ನೀನು ವಿಲಾಸಿನಿಯರ ಮನೆಗೆ ಹೋಗು, ದುರ್ಯೋದನನೇನು ಜಿಪುಣನೇ ಅಥವ ದರಿದ್ರನೆ, ಇನ್ನು ನಿನ್ನ ಅಪದೆಸೆ ಕಳೆಯಿತೆಂದು ತಿಳಿದುಕೋ, ರಾಜನ ಸಮಸ್ತ ಐಶ್ವರ್ಯವನ್ನು ಅನುಭವಿಸು ಎಂದು ಕರ್ಣನು ಹೇಳಿ ದ್ರೌಪದಿಯನ್ನು ಹಂಗಿಸಿದನು.

ಅರ್ಥ:
ಚಪಳೆ: ಆಸೆಪಡುವವಳು; ಫಡ; ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಹಲಬರು: ಹಲವಾರು; ಉಪಚಾರ: ಶೂಶ್ರೂಷೆ, ಹತ್ತಿರ ನಡೆಯುವುದು; ಅರಿ: ತಿಳಿ; ನಂದನೆ: ಮಗಳು; ನಡೆ: ಹೋಗು; ವಿಳಾಸಿನಿ: ದಾಸಿ; ನಿವಾಸ: ಮನೆ; ಕೃಪಣ: ಜಿಪುಣ, ಬಡವ; ರಾಯ: ರಾಜ; ಅಪದೆಸೆ: ದುರ್ದೆಸೆ; ಹೊಲೆ: ಕೊಳಕು, ಕೀಳುತನ; ಹೋಯ್ತು: ದೂರಹೋಗು; ವಿಪುಳ: ಬಹಳ; ವಿಭವ: ಸಿರಿ, ಸಂಪತ್ತು; ಅನುಭವಿಸು: ಭೋಗಿಸು; ನಡೆ: ತೆರಳು;

ಪದವಿಂಗಡಣೆ:
ಚಪಳೆ+ ಫಡ +ಹೋಗ್+ಇವಳು +ಹಲಬರನ್
ಉಪಚರಿಸಿದುದನ್+ಅರಿಯಲಾದುದು
ದ್ರುಪದ +ನಂದನೆ +ನಡೆ +ವಿಳಾಸಿನಿಯರ +ನಿವಾಸದಲಿ
ಕೃಪಣನೇ +ಕುರುರಾಯ +ನಿನಗಿನ್ನ್
ಅಪದೆಸೆಯ +ಹೊಲೆ +ಹೋಯ್ತು +ರಾಯನ
ವಿಪುಳ +ವಿಭವವನ್+ಅನುಭವಿಸು +ನಡೆ+ಎಂದನಾ+ಕರ್ಣ

ಅಚ್ಚರಿ:
(೧) ದ್ರೌಪದಿಯನ್ನು ಬಯ್ಯುವ ಪರಿ – ಚಪಳೆ, ಫಡ, ಹಲಬರನುಪಚರಿಸಿದುದ
(೨) ನಡೆ ಪದದ ಬಳಕೆ – ನಡೆ ವಿಳಾಸಿನಿಯರ ನಿವಾಸದಲಿ; ರಾಯನ ವಿಪುಳ ಭವವನನುಭವಿಸು ನಡೆ