ಪದ್ಯ ೭೨: ಸಭಾ ಮಂಟಟವು ಹೇಗೆ ರಚಿತವಾಗಿತ್ತು?

ತೆಗೆಸಿ ಭಂಡಾರದಲಿ ಬಹುವ
ಸ್ತುಗಳ ನಿತ್ತನು ತರು ಶಿಲಾ ಕೋ
ಟಿಗಳ ತರಿಸಿದನುರು ಸಹಸ್ರಸ್ತಂಭ ಡಂಬರವ
ಝಗಝಗಿಪ ಬಹು ಮೌಲ್ಯ ಮುಕ್ತಾ
ಳಿಗಳನುರುತರ ರಶ್ಮಿ ಲಹರಿ
ಸ್ಥಗಿತ ದಿಗು ಭಿತ್ತಿಗಳನನುಪಮ ರತ್ನ ರಾಶಿಗಳ (ಸಭಾ ಪರ್ವ, ೧೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭಂಡಾರದಿಂದ ಅನೇಕ ವಸ್ತುಗಳನ್ನು ಅವರಿಗೆ ಕೊಡಿಸಿದನು. ಲೆಕ್ಕವಿಲ್ಲದಷ್ಟು ಮರಗಳನ್ನೂ ಶಿಲೆಗಳನ್ನೂ ತರಿಸಿದನು. ಸಹಸ್ರ ಸ್ತಂಭಗಲ ಬಹವನವನ್ನು ಕಟ್ಟಲು ಹೊಳೆ ಹೊಳೆಯುವ ರತ್ನಗಳನ್ನೂ ಮುತ್ತುಗಳನ್ನೂ ಕೊಟ್ಟನು. ಗೋಡೆಗಳನ್ನು ಅಲಂಕರಿಸಲು ನವರತ್ನದ ರಾಶಿಗಳನ್ನೇ ಕೊಟ್ಟನು.

ಅರ್ಥ:
ತೆಗೆಸು: ಹೊರತರು; ಭಂಡಾರ: ಬೊಕ್ಕಸ, ಖಜಾನೆ; ಬಹು: ಬಹಳ; ವಸ್ತು: ಸಾಮಗ್ರಿ; ಇತ್ತನು: ನೀಡಿದನು; ತರು: ಮರ; ಶಿಲ: ಕಲ್ಲು; ಕೋಟಿ: ಲೆಕ್ಕವಿಲ್ಲದಷ್ಟು; ತರಿಸು: ಕೊಳ್ಳು, ಬರೆಮಾಡು; ಸಹಸ್ರ: ಸಾವಿರ; ಸ್ತಂಭ: ಕಂಭ; ಡಂಬರ: ಆಡಂಬರ; ಝಗಝಗಿಪ: ಹೊಳೆವ; ಬಹು: ಬಹಳ; ಮೌಲ್ಯ: ಬೆಲೆಬಾಳುವ; ಮುತ್ತು: ರತ್ನ, ಮಣಿ; ಮುಕ್ತಾಳಿ: ಮುತ್ತುಗಳ ಸಾಲು; ಉರುತರ: ಬಹಳ ಶ್ರೇಷ್ಠ, ಅತಿಶ್ರೇಷ್ಠ; ರಶ್ಮಿ: ಕಾಂತಿ; ಲಹರಿ: ಕಾಂತಿ, ಪ್ರಭೆ; ಸ್ಥಗಿತ: ನಿಲ್ಲು; ಭಿತ್ತಿ: ಒಡೆಯುವುದು, ಸೀಳುವುದು; ಅನುಪಮ: ಉತ್ಕೃಷ್ಟವಾದುದು; ರತ್ನ: ಬೆಲೆಬಾಳುವ ಹವಳ, ಮುತ್ತು; ರಾಶಿ: ಗುಂಪು;

ಪದವಿಂಗಡಣೆ:
ತೆಗೆಸಿ +ಭಂಡಾರದಲಿ +ಬಹುವ
ಸ್ತುಗಳನ್+ಇತ್ತನು +ತರು +ಶಿಲಾ +ಕೋ
ಟಿಗಳ +ತರಿಸಿದನ್+ಉರು +ಸಹಸ್ರ+ಸ್ತಂಭ +ಡಂಬರವ
ಝಗಝಗಿಪ +ಬಹು +ಮೌಲ್ಯ +ಮುಕ್ತಾ
ಳಿಗಳನ್+ಉರುತರ +ರಶ್ಮಿ +ಲಹರಿ
ಸ್ಥಗಿತ+ ದಿಗು +ಭಿತ್ತಿಗಳನ್+ಅನುಪಮ +ರತ್ನ +ರಾಶಿಗಳ

ಪದ್ಯ ೭೧: ಧೃತರಾಷ್ಟ್ರನು ಯಾವ ನಿರ್ಧಾರಕ್ಕೆ ಬಂದನು?

ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳೆ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ (ಸಭಾ ಪರ್ವ, ೧೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಗಾಂಧಾರಿಯ ಮಾತನ್ನು ಕೇಳಿ, ಅಷ್ಟೆ ಅಲ್ಲವೇ ಆಗಿದ್ದು ಆಗಲಿ, ನನಗೆ ಬೇರೆ ಅನ್ಯ ಒಳಿತಾದ ಮಾರ್ಗ ಕಾಣುತ್ತಿಲ್ಲ, ನಿನ್ನ ಮಕ್ಕಳೇ ಹೆಚ್ಚಾಗಲಿ, ಮೆರೆಯಲಿ. ಹೆಚ್ಚು ಮಾತುಬೇಡ, ಪಾಂಡವರ ಸಭಾಸ್ಥಾನಕ್ಕೆ ಸರಿಗಟ್ಟುವ ಸಭೆಯನ್ನು ನಿರ್ಮಿಸುವ ಶಿಲ್ಪಿಗಳಾರು? ಎಂದು ಕೇಳಿ ಸಭಾ ನಿರ್ಮಾಣ ಮಾಡುವ ಶಿಲ್ಪಿಗಳನ್ನು ಕರೆಸಿದನು.

ಅರ್ಥ:
ಐಸಲೇ: ಅಲ್ಲವೇ; ಲೇಸು: ಒಳಿತು; ಕಾಣು: ತೋರು; ಮಕ್ಕಳು: ಸುತರು; ವಾಸಿ: ಭಾಗ, ಪಾಲು; ವಿಸ್ತಾರ: ವಿಶಾಲ; ಮೆರೆ: ಹೊಳೆ, ಪ್ರಕಾಶಿಸು; ಹಲವು: ಬಹಳ; ಮಾತು: ವಾಣಿ; ಸಭೆ: ಓಲಗ; ಸರಿಸದ: ಸಮಾನವಾದ; ಸಭಾ: ದರ್ಬಾರು; ವಿನ್ಯಾಸ: ರಚನೆ; ಶಿಲ್ಪಿ: ಕುಶಲಕಲೆಯನ್ನು ಬಲ್ಲವನು, ಕುಶಲ ಕರ್ಮಿ; ಧರಣೀಶ: ರಾಜ; ಕರೆಸು: ಬರೆಮಾಡು; ನಿರ್ಮಾಣ: ರಚಿಸುವ; ಕೋವಿದರು: ಪಂಡಿತರು; ಉರು: ಶ್ರೇಷ್ಠ;

ಪದವಿಂಗಡಣೆ:
ಐಸಲೇ +ತಾನ್+ಆದುದಾಗಲಿ
ಲೇಸ+ ಕಾಣೆನು +ನಿನ್ನ +ಮಕ್ಕಳೆ
ವಾಸಿಗಳ+ ವಿಸ್ತಾರ +ಮೆರೆಯಲಿ +ಹಲವು +ಮಾತೇನು
ಆ +ಸಭೆಯ +ಸರಿಸದ+ ಸಭಾ +ವಿ
ನ್ಯಾಸ+ ಶಿಲ್ಪಿಗರ್+ಆರೆನುತ +ಧರ
ಣೀಶ +ಕರೆಸಿದನ್+ಉರು +ಸಭಾ +ನಿರ್ಮಾಣ +ಕೋವಿದರ

ಅಚ್ಚರಿ:
(೧) ಧೃತರಾಷ್ಟ್ರನ ವಿವೇಕ ರಹಿತ ನಡೆ – ಆದುದಾಗಲಿ, ಲೇಸ ಕಾಣೆನು, ನಿನ್ನ ಮಕ್ಕಳೆ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು

ಪದ್ಯ ೭೦: ಗಾಂಧಾರಿಯು ಧೃತರಾಷ್ಟ್ರನಿಗೆ ಏನು ಹೇಳಿದಳು?

ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ (ಸಭಾ ಪರ್ವ, ೧೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ನಿಮಗೆ ಚಿಂತೆಯಾದರು ಏಕೆ, ಈಗ ಎರಡು ಕಾರ್ಯಗಳು ಎದುರಾಗಿವೆ, ವಿವೇಕದ ಕೆಲಸ ಅಥವ ದುಷ್ಕಾರ್ಯದಲ್ಲಿ ಕಾರ್ಯ. ನಮ್ಮ ಮಕ್ಕಳಾದ ನೂರ್ವರು ಕೌರವರನ್ನು ಹಿಡಿದು ಪಾಂಡವರನ್ನು ಬಿಡುವುದು, ಇಲ್ಲವೇ ನಮ್ಮ ಮಕ್ಕಳನ್ನು ಹೊರಹಾಕಿ ಪಾಂಡವರನ್ನು ಹಿಡಿಯುವುದು, ಎರಡರಲ್ಲೊಂದನ್ನು ಮಾಡಿದರಾಯಿತು ಎಂದಳು.

ಅರ್ಥ:
ಚಿಂತೆ: ಯೋಚನೆ; ಔಕು: ನೂಕು, ತಳ್ಳು; ದುಷ್ಕಾರ್ಯ: ಕೆಟ್ಟ ಕೆಲಸ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಸಂಧಿ: ಸೇರಿಕೆ, ಸಂಯೋಗ; ನಿಕರ: ಗುಂಪು; ಒರೆ: ಶೋಧಿಸಿ ನೋಡು; ಮೋಹರ: ಯುದ್ಧ; ಬಾಹೆ: ಪಕ್ಕ, ಪಾರ್ಶ್ವ; ವ್ರಜ: ಗುಂಪು; ಹಿಡಿ: ಹಿಡಿಕೆ, ಕಾವು; ಬಿಡು: ತೊರೆ; ನೂಕು: ತಳ್ಳು; ತನೂಜ: ಮಕ್ಕಳು;

ಪದವಿಂಗಡಣೆ:
ಏಕೆ+ ನಿಮಗೀ +ಚಿಂತೆ+ಇಂದ್+ಎರಡ್
ಔಕಿದವು +ದುಷ್ಕಾರ್ಯ +ಸಂಧಿ +ವಿ
ವೇಕ +ನಿಕರದಲ್+ಒರೆದು +ಮೋಹರಿಸೊಂದು+ ಬಾಹೆಯಲಿ
ಈ +ಕುರುವ್ರಜ +ನೂರ +ಹಿಡಿ +ಕುಂ
ತೀ +ಕುಮಾರರ +ಬಿಡು +ತನೂಜರ
ನೂಕು +ಹಿಡಿ +ಪಾಂಡವರನ್+ಎಂದಳು +ಪತಿಗೆ +ಗಾಂಧಾರಿ

ಅಚ್ಚರಿ:
(೧) ಬಿಡು, ನೂಕು – ಸಾಮ್ಯಾರ್ಥ ಪದಗಳ ಬಳಕೆ

ಪದ್ಯ ೬೯: ಧೃತರಾಷ್ಟ್ರನ ತಳಮಳಕ್ಕೆ ಕಾರಣವೇನು?

ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವೆನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವಶಿವಯೆನುತ ಮರುಗಿದನು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ನಾನೇನಾದರು ಕೌರವನ ವಿರುದ್ಧವಾಗಿ ನಡೆದರೆ ಇವನು ಇವರ ಸಹೋದರರ ಜೊತೆ ಸೇರಿ ನಮ್ಮನ್ನು ಬಿಟ್ಟುಬಿಡುತ್ತಾರೆ. ಅವರು ಹೇಳಿದಂತೆ ಕೇಳಿದರೆ ಮುಂದೆ ಪಾಂಡವರು ಈ ನೂರ್ವರನ್ನು ಕತ್ತರಿಸಿ ಹಾಕುತ್ತಾರೆ. ಹೀಗಿರಲು ಏನುಮಾಡಬೇಕೆಂದು ನಿರ್ಧರಿಸಲಾರೆ. ಮಕ್ಕಳ ಮೋಹ ಜೀವದಿಂದಿರುವವರೆಗೆ ಬಿಡುವುದಿಲ್ಲ, ಶಿವ ಶಿವಾ ಎಂದು ಧೃತರಾಷ್ಟ್ರನು ಮರುಗಿದನು.

ಅರ್ಥ:
ಮುರಿ: ಸೀಳು; ಮುನಿ: ಸಿಟ್ಟಾಗು, ಕೋಪಗೊಳ್ಳು; ನೂರು: ಶತ; ತೊರೆ: ಬಿಡು, ತ್ಯಜಿಸು; ತೊಡಕು: ಸಿಕ್ಕಿಕೊಳ್ಳು; ತೊಡಕಿಸು: ಸಿಕ್ಕಿಸು; ತರಿ: ಕಡಿ, ಕತ್ತರಿಸು, ಛೇದಿಸು; ಬಿಸುಡು: ಹೊರಹಾಕು, ಬಿಸಾಕು, ತ್ಯಜಿಸು; ಬಳಿಕ: ನಂತರ; ಹೊರಗೆ: ಆಚೆ; ಒಳಗೆ: ಆಂತರ್ಯ; ಹದ: ಸ್ಥಿತಿ; ನಿಧಾನಿಸು: ಪರೀಕ್ಷಿಸು, ವಿಚಾರಮಾಡು; ಅರಿ: ತಿಳಿ; ಅಸು: ಜೀವ; ಹೃದಯ: ಎದೆ; ಸೆರೆ: ಬಂಧನ; ಬಿಡು: ತ್ಯಜಿಸು; ಮರುಗು: ತಳಮಳ, ಸಂಕಟ;

ಪದವಿಂಗಡಣೆ:
ಮುರಿವೆನೇ +ಮುನಿದ್+ಇವರು +ನೂರ್ವರು
ತೊರೆವರ್+ಎನ್ನನು +ತೊಡಕಿಸುವೆನ್+
ಈತರಿದು+ ಬಿಸುಡುವರ್+ಅವರು +ಕೌರವ +ಶತಕವನು +ಬಳಿಕ
ಹೊರಗೊಳಗೆ+ ಹದನಿದು +ನಿಧಾನಿಸಲ್
ಅರಿಯೆನ್+ಎನ್+ಅಸುವಿನಲಿ +ಹೃದಯದ
ಸೆರೆ+ ಬಿಡದು +ಶಿವಶಿವಯೆನುತ+ ಮರುಗಿದನು +ಧೃತರಾಷ್ಟ್ರ

ಅಚ್ಚರಿ:
(೧) ಮಕ್ಕಳ ವ್ಯಾಮೋಹ – ಅಸುವಿನಲಿ ಹೃದಯದ ಸೆರೆ ಬಿಡದು
(೨) ನೂರು, ಶತ – ಸಮನಾರ್ಥಕ ಪದ

ಪದ್ಯ ೬೮: ಧೃತರಾಷ್ಟ್ರನೇಕೆ ಮರುಗಿದನು?

ಅವರು ಕಪಟವನರಿಯರೀತನ
ಹವಣ ನೀನೇ ಕಂಡೆ ಕರೆಸಿದ
ಡವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ
ನವಗೆ ಬಹುದಪಕೀರ್ತಿಯೀಗಿ
ನ್ನವನ ಕುಹಕವ ಲೋಕವರಿಯದು
ಶಿವ ಶಿವಾಯೆಂದಳಲಿ ಮರುಗಿದನಂದು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೮ ಪದ್ಯ)

ತಾತ್ಪರ್ಯ:
ಗಾಂಧಾರಿಗೆ ತನ್ನ ಮನಸ್ಸಿನ ಮಾತುಗಳನ್ನು ಹೇಳುತ್ತಾ, ಪಾಂಡವರು ಕಪಟವನ್ನರಿಯದವರು, ಇವನ ಯೋಗ್ಯತೆಯನ್ನು ನೀನೇ ನೋಡಿದೆ, ನಾವು ಕರೆಸಿದರೆ, ಬೇಟೆಗಾರನ ಸಂಗೀತಕ್ಕೆ ಮರುಳಾಗಿ ಬರುವ ಜಿಂಕೆಯಂತೆ ಬಂದು ಬಿಡುತ್ತಾರೆ. ಮಗನ ಕುಹಕವು ಲೋಕಕ್ಕೆ ತಿಳಿಯದು. ಪಾಂಡವರನ್ನು ಕರೆಸಿದರೆ ನಮಗೆ ಅಪಖ್ಯಾತಿ ಬರುತ್ತದೆ, ಶಿವ ಶಿವಾ ಏನು ಗತಿ ಎಂದು ಧೃತರಾಷ್ಟ್ರ ಚಿಂತಿಸಿದ.

ಅರ್ಥ:
ಕಪಟ: ಮೋಸ; ಅರಿ: ತಿಳಿ; ಹವಣ: ಉಪಾಯ; ಕಂಡೆ: ನೋಡಿದೆ; ಕರೆಸು: ಬರೆಮಾಡು; ನಿಲ್ಲು: ತಡೆ, ನಿಂತುಕೊ; ಗೋರಿ: ಒಂದು ಬಗೆಯ ಬೇಟೆ, ಆಕರ್ಷಣೆ; ಬಳಿ: ಹತ್ತಿರ; ಮೃಗ: ಜಿಂಕೆ; ನವಗೆ: ನಮಗೆ; ಬಹು: ತುಂಬ; ಅಪಕೀರ್ತಿ: ಅಗೌರವ, ಅಪಖ್ಯಾತಿ; ಕುಹಕ: ಮೋಸ; ಲೋಕ: ಜಗತ್ತು; ಅರಿ: ತಿಳಿ; ಅಳಲು: ದುಃಖ; ಮರುಗು:ತಳಮಳ, ಸಂಕಟ;

ಪದವಿಂಗಡಣೆ:
ಅವರು +ಕಪಟವನ್+ಅರಿಯರ್+ಈತನ
ಹವಣ+ ನೀನೇ +ಕಂಡೆ +ಕರೆಸಿದಡ್
ಅವರು+ ನಿಲ್ಲರು+ ಗೋರಿಯಲಿ+ ಬಳಿಸಂದ +ಮೃಗದಂತೆ
ನವಗೆ+ ಬಹುದ್+ಅಪಕೀರ್ತಿಯೀಗ್
ಇನ್ನವನ+ ಕುಹಕವ+ ಲೋಕವರಿಯದು
ಶಿವ +ಶಿವಾ+ಎಂದ್+ಅಳಲಿ +ಮರುಗಿದನ್+ಅಂದು +ಧೃತರಾಷ್ಟ್ರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ

ಪದ್ಯ ೬೭: ಧೃತರಾಷ್ಟ್ರ ಗಾಂಧಾರಿಯ ಬಳಿ ಯಾವ ವಿಷಯವನ್ನು ತೋಡಿಕೊಂಡ?

ಪೋಗು ನೀನೆಂದವನ ಕಳುಹಿದ
ನಾಗ ಮನದೊಳಗಧಿಕ ಚಿಂತಾ
ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ
ಈಗಳಿನ ಸವಿಗಳುಪಿ ಮೇಲಣ
ತಾಗನರಿಯನು ಕಂದನಿದಕಿ
ನ್ನೇಗುವೆನು ಗಾಂಧಾರಿ ನೀ ಹೇಳೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದುರ್ಯೋಧನನನ್ನು ಹೋಗೆಂದು ಹೇಳಿ ಚಿಂತೆಯ ಸಾಗರದ ನೀರಿನಲ್ಲಿ ಒದ್ದೆಯಾಗಿ ಅದರಲ್ಲೇ ಮುಳುಗಿದನು. ನನ್ನ ಮಗ ಈಗಿನ ರುಚಿಯನ್ನು ಸವಿಯಲು ಮನಸ್ಸನ್ನಿಟ್ಟನೇ ಹೊರತು ಮುಂದೆ ಬೀಳುವ ಪೆಟ್ಟನ್ನು ಇವನು ಅರಿತಿಲ್ಲ. ಗಾಂಧಾರಿ ಇದನ್ನು ನಾನು ಹೇಗೆ ಸಹಿಸಿಕೊಳ್ಳಲಿ ಹೇಳು ಎಂದು ತನ್ನ ಚಿಂತೆಯನ್ನು ಪತ್ನಿಗೆ ಹೇಳಿದನು.

ಅರ್ಥ:
ಪೋಗು: ಹೋಗು; ಕಳುಹು: ಕಳಿಸಿ, ಬೀಳ್ಕೊಟ್ಟು; ಮನ: ಮನಸ್ಸು; ಅಧಿಕ: ಹೆಚ್ಚು; ಚಿಂತೆ: ಯೋಚನೆ; ಸಾಗರ: ಸಮುದ್ರ; ಊರು: ಒದ್ದೆಯಾಗು; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಗಳಿಗೆ: ಸಮಯ; ಸವಿ: ಸಂತೋಷ; ಮೇಲಣ: ಮುಂದೆ; ಅರಿ: ತಿಳಿ; ಕಂದ: ಮಗ; ಏಗು: ಸಾಗಿಸು, ನಿಭಾಯಿಸು; ಭೂಪ: ರಾಜ;

ಪದವಿಂಗಡಣೆ:
ಪೋಗು +ನೀನೆಂದ್+ಅವನ +ಕಳುಹಿದನ್
ಆಗ+ ಮನದೊಳಗ್ +ಅಧಿಕ +ಚಿಂತಾ
ಸಾಗರದೊಳ್+ಊರಂತೆ +ಮುಳುಗಿದನ್+ಅಂದು +ಧೃತರಾಷ್ಟ್ರ
ಈಗಳಿನ +ಸವಿಗಳುಪಿ+ ಮೇಲಣ
ತಾಗನ್+ಅರಿಯನು +ಕಂದನ್+ಇದಕಿನ್
ಏಗುವೆನು +ಗಾಂಧಾರಿ+ ನೀ +ಹೇಳೆಂದನಾ +ಭೂಪ

ಅಚ್ಚರಿ:
(೧) ಧೃತರಾಷ್ಟ್ರನ ಕುರುಡು ಪ್ರೀತಿ – ಕಂದ ಎಂದು ಸಂಭೋದಿಸುವ ಬಗೆ
(೨) ಚಿಂತೆಯ ಘಾಢತೆ – ಮನದೊಳಗಧಿಕ ಚಿಂತಾ ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ