ಪದ್ಯ ೬೬: ದುರ್ಯೋಧನನು ಎಂದು ಕೃತಕೃತ್ಯನಾಗುವೆನೆಂದ?

ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ (ಸಭಾ ಪರ್ವ, ೧೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತಂದೆಯ ನುಡಿಗಳನ್ನು ಕೇಳಿ, ಅಪ್ಪಾ ನೀನು ಕರುಣೆಯಿಂದ ಪಾಂಡವರನ್ನು ಕರೆಸಿದರೆ ಸಾಕು. ಆದರೆ ನನ್ನ ಇನ್ನೊಂದು ಅಭಿಲಾಷೆಯಿದೆ, ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದು, ದಾಸಿಯರೊಡನೆ ಕೂಡಿಸಿದ ದಿನ ನಾನು ಶೋಕವನ್ನು ಕಳೆದುಕೊಂಡು ಕೃತಕೃತ್ಯನಾಗುತ್ತೇನೆ ಎಂದನು.

ಅರ್ಥ:
ಕರುಣ: ದಯೆ; ಸಲಹು: ರಕ್ಷಿಸು; ಕುಮಾರ: ಮಕ್ಕಳು; ಕರೆಸು: ಬರೆಮಾಡು; ಸಾಕು: ಕೊನೆ, ಪೂರೈಸು; ಮತ್ತೊಂದು: ಇನ್ನೊಂದು; ನಂದನೆ: ಮಗಳು; ನೂಕು: ತಳ್ಳು; ಮುಂದಲೆ: ಮುಂಗುರುಳು, ಕೂದಲು; ವಿಡಿದು: ಹಿಡಿದು; ತೊತ್ತು: ದಾಸಿ, ಸೇವಕಿ; ಕುಳ್ಳಿರಿಸು: ಕೂರಿಸು; ವಿಶೋಕ: ಶೋಕರಹಿತ; ದಿವಸ: ದಿನ; ಕೃತಕೃತ್ಯ: ಧನ್ಯ, ಕೃತಾರ್ಥ;

ಪದವಿಂಗಡಣೆ:
ನೀ+ ಕರುಣದಲಿ +ನಮ್ಮ +ಸಲಹುವಡ್
ಆ+ ಕುಮಾರರ+ ಕರೆಸಿಕೊಟ್ಟರೆ
ಸಾಕು +ಮತ್ತೊಂದ್+ಇಹುದಲೇ +ಪಾಂಚಾಲ+ನಂದನೆಯ
ನೂಕಿ +ಮುಂದಲೆವಿಡಿದು +ತೊತ್ತಿರೊಳ್
ಆಕೆಯನು +ಕುಳ್ಳಿರಿಸಿದ್+ಅಂದು +ವಿ
ಶೋಕನಹೆನ್+ಆ+ ದಿವಸದಲಿ +ಕೃತಕೃತ್ಯ +ತಾನೆಂದ

ಅಚ್ಚರಿ:
(೧) ದ್ರೌಪದಿಯನ್ನು ಅಪಮಾನ ಮಾಡುವ ಹುನ್ನಾರ – ಪಾಂಚಾಲನಂದನೆಯ ನೂಕಿ ಮುಂದಲೆವಿಡಿದು ತೊತ್ತಿರೊಳಾಕೆಯನು ಕುಳ್ಳಿರಿಸಿದಂದು ವಿಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ

ಪದ್ಯ ೬೫: ಧೃತರಾಷ್ಟ್ರನು ದುರ್ಯೋಧನನ ಮನೋರಥವನ್ನು ಹೇಗೆ ಸಿದ್ಧಿಸುವುದೆಂದ?

ತಿಳುಹಿ ವಿದುರನನವರ ಕರೆಯಲು
ಕಳುಹುವೆನು ಯಮಸೂನು ನಿಮ್ಮಯ
ಬಲುಹಿನಲಿ ಬಳುಕುವನೆ ಭೀಮಾರ್ಜುನರು ಕಿರುಕುಳರೆ
ತಿಳಿವೊಡೀತನ ಬುದ್ಧಿಯೇ ನಿ
ರ್ಮಲಿನವಹುದು ನಿಧಾನವಿದು ನೀ
ಕಳವಳಿಸದಿದ್ದರೆ ಮನೋರಥ ಸಿದ್ಧಯಹುದೆಂದ (ಸಭಾ ಪರ್ವ, ೧೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ವಿದುರನ ಹಿರಿಮೆಯನ್ನರಿತ ಧೃತರಾಷ್ಟ್ರನು, ವಿದುರನಿಗೆ ತಿಳಿಹೇಳಿ ಪಾಂಡವರನ್ನು ಕರೆಸುತ್ತೇನೆ, ಧರ್ಮರಾಯ ಭೀಮಾರ್ಜುನರು ನಿಮ್ಮ ಶಕ್ತಿಗೆ ಬರಲು ಅವರೇನು ಕೆಲಸಕ್ಕೆ ಬಾರದವರೇ? ವಿದುರನ ಬುದ್ಧಿಯು ನಿರ್ಮಲವಾದುದು, ಅವನ ಮೂಲಕ ಈ ಕಾರ್ಯವನ್ನು ಮಾಡಿಸುವದೇ ನನ್ನ ನಿರ್ಣಯ. ನೀನು ಕಳವಳದಿಂದ ದುಡುಕದೆ ಸುಮ್ಮನಿದ್ದರೆ, ನಿನ್ನ ಮನೋರಥವನ್ನು ಈಡೇರುತ್ತದೆ ಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು.

ಅರ್ಥ:
ತಿಳುಹು: ಅರಿತ, ತಿಳುವಳಿಕೆ ಇರುವ; ಕರೆ: ಬರೆಮಾಡು; ಕಳುಹು: ತೆರಳು; ಸೂನು: ಮಗ; ಬಲುಹು: ಶಕ್ತಿ; ಬಳುಕು: ಬಗ್ಗು; ಕಿರುಕುಳ: ಹೀನಕುಲದವನು, ತೊಂದರೆ; ತಿಳಿ: ಅರಿ; ಬುದ್ಧಿ: ತಿಳಿವು, ಅರಿವು; ನಿರ್ಮಲಿನ: ಕೊಳೆಯಿಲ್ಲದ; ಮಲಿನ: ಕೊಳೆ, ಹೊಲಸು; ನಿಧಾನ: ವಿಳಂಬ, ಸಾವಕಾಶ; ಕಳವಳ: ಗೊಂದಲ; ಮನೋರಥ: ಇಚ್ಛೆ; ಸಿದ್ಧಿ: ಸಾಧಿಸು;

ಪದವಿಂಗಡಣೆ:
ತಿಳುಹಿ+ ವಿದುರನನ್+ಅವರ+ ಕರೆಯಲು
ಕಳುಹುವೆನು +ಯಮಸೂನು +ನಿಮ್ಮಯ
ಬಲುಹಿನಲಿ +ಬಳುಕುವನೆ +ಭೀಮಾರ್ಜುನರು +ಕಿರುಕುಳರೆ
ತಿಳಿವೊಡ್+ಈತನ +ಬುದ್ಧಿಯೇ +ನಿ
ರ್ಮಲಿನವಹುದು +ನಿಧಾನವಿದು+ ನೀ +
ಕಳವಳಿಸದಿದ್ದರೆ +ಮನೋರಥ +ಸಿದ್ಧಯಹುದೆಂದ

ಅಚ್ಚರಿ:
(೧) ತಿಳುಹಿ, ಬಲುಹಿ – ಪ್ರಾಸ ಪದ
(೨) ಬ ಕಾರದ ತ್ರಿವಳಿ ಪದ – ಬಲುಹಿನಲಿ ಬಳುಕುವನೆ ಭೀಮಾರ್ಜುನರು

ಪದ್ಯ ೬೪: ಧೃತರಾಷ್ಟ್ರನು ವಿದುರನ ಬಗ್ಗೆ ಏನು ಹೇಳಿದ?

ಪಾರಲೌಕಿಕದುಳಿವನೈಹಿಕ
ದೋರೆ ಪೋರೆಯನಿಂದು ಬಲ್ಲವ
ರಾರು ಹೇಳಾ ವಿದುರನಲ್ಲದೆ ನಮ್ಮ ಪೈಕದಲಿ
ಸಾರವಾತನ ಮಾತು ನಯ ವಿ
ಸ್ತಾರ ಸಹಿತಿಹುದಲ್ಲಿ ನಂಬುಗೆ
ದೂರವಿಲ್ಲೆನಗರಿಯೆ ನೀ ನಿಲ್ಲೆಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತಿಗೆ ಉತ್ತರಿಸುತ್ತಾ, ವಿದುರನು ಪರಲೋಕದ ಸದ್ಗತಿಯನ್ನು ಈ ಲೋಕದ ಓರೆಕೋರೆಗಳನ್ನು ನಮ್ಮ ಪರಿವಾರದಲ್ಲಿ ವಿದುರನನ್ನು ಬಿಟ್ಟು ಇನ್ನಾರು ಬಲ್ಲರು, ನೀನೇ ಹೇಳು. ಆತನ ಮಾತು ಸಾರವತ್ತಾದುದು. ನೀತಿಯು ಅವನ ಅಭಿಪ್ರಾಯದಲ್ಲಿ ಚೆನ್ನಾಗಿ ನಿಂತಿದೆ. ನನಗೆ ಇದು ತಿಳಿದಿದೆ, ನೀನು ತಿಳಿದಿಲ್ಲ, ನಿಲ್ಲು ಎಂದು ದುರ್ಯೋಧನನಿಗೆ ಹೇಳಿದನು.

ಅರ್ಥ:
ಪಾರಲೌಕಿಕ: ಪರಲೋಕ; ಉಳಿವು: ಜೀವನ; ಐಹಿಕ: ಇಹಲೋಕ; ಓರೆ: ವಕ್ರ, ಡೊಂಕು; ಬಲ್ಲವ: ತಿಳಿದ; ಪೈಕ: ಜೊತೆ; ಸಾರ: ತಿರುಳು; ಮಾತು: ಆಣಿ; ವಿಸ್ತಾರ: ಹರಹು, ವ್ಯಾಪ್ತಿ; ಸಹಿತ: ಜೊತೆ; ನಂಬುಗೆ: ವಿಶ್ವಾಸವಿಡು; ದೂರ: ಬಹಳ ಅಂತರ; ಅರಿ: ತಿಳಿ; ನಿಲ್ಲು: ತಡಿ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಪಾರಲೌಕಿಕದ್+ಉಳಿವನ್+ಐಹಿಕದ್
ಓರೆ ಪೋರೆಯನ್+ಇಂದು +ಬಲ್ಲವರ್
ಆರು +ಹೇಳಾ +ವಿದುರನಲ್ಲದೆ+ ನಮ್ಮ +ಪೈಕದಲಿ
ಸಾರವ್+ಆತನ +ಮಾತು +ನಯ +ವಿ
ಸ್ತಾರ +ಸಹಿತಿಹುದಲ್ಲಿ+ ನಂಬುಗೆ
ದೂರವಿಲ್+ಎನಗ್+ಅರಿಯೆ +ನೀ +ನಿಲ್ಲೆಂದನ್+ಅಂಧನೃಪ

ಅಚ್ಚರಿ:
(೧) ಓರೆಪೋರೆ – ಪದದ ಬಳಕೆ
(೨) ಪಾರಲೌಕಿಕ, ಐಹಿಕ – ವಿರುದ್ಧ ಪದಗಳು

ಪದ್ಯ ೬೩: ವಿದುರನಿಗೆ ಹೇಳುವ ಬದಲು ನಮ್ಮನ್ನು ಕಳಿಸಿಬಿಡಿ ಎಂದು ದುರ್ಯೋಧನನು ಏಕೆ ಹೇಳಿದ?

ಅರುಹಿದರೆ ವಿದುರಂಗೆ ಕಾರ್ಯವ
ಮುರಿವನಾತನು ಬಳಿಕ ನಿಮ್ಮಯ
ಕಿರಿಯ ತಮ್ಮನ ಮಕ್ಕಳಿಗೆ ಕೊಡಿ ಹಸ್ತಿನಾಪುರವ
ಹರುಕುಗಳು ನಾವ್ ನೂರು ಮಕ್ಕಳು
ಹೊರಗೆ ಬದುಕುವೆವೈಸಲೇ ನಿ
ಮ್ಮುರುವ ಮಕ್ಕಳುಗೂಡಿ ಸುಖದಲಿ ರಾಜ್ಯವಾಳೆಂದ (ಸಭಾ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಈ ವಿಷಯವನ್ನು ವಿದುರನಿಗೆ ಹೇಳಿದರೆ ಈ ಕಾರ್ಯವು ನಡೆಯುವುದಿಲ್ಲ, ಆತ ಈ ಕಾರ್ಯವನ್ನು ಆಗದಂತೆ ತಡೆಯುತ್ತಾನೆ, ನಿಮ್ಮ ತಮ್ಮನ ಮಕ್ಕಳಿಗೇ ಹಸ್ತಿನಾಪುರವನ್ನು ಕೊಟ್ಟುಬಿಡಿ. ನಿಮ್ಮ ಮಕ್ಕಳಾದ ನಾವು ನೂರು ಜನ ಘನತೆವಿಲ್ಲದವರಲ್ಲವೇ? ನಾವು ದೂರದಲ್ಲಿ ಎಲ್ಲೋ ಹೇಗೋ ಬದುಕುತ್ತೇವೆ. ನಿಮ್ಮ ಸುಪುತ್ರರೊಡನೆ ನೀವು ಸುಖದಿಂದ ರಾಜ್ಯವಾಳಿರಿ ಎಂದು ಹಂಗಿಸಿದನು.

ಅರ್ಥ:
ಅರುಹು: ತಿಳಿಸು, ಹೇಳು; ಕಾರ್ಯ: ಕೆಲಸ; ಮುರಿ: ಸೀಳು; ಬಳಿಕ: ನಂತರ; ಕಿರಿ: ಚಿಕ್ಕವ; ತಮ್ಮ: ಸಹೋದರ; ಮಕ್ಕಳು: ಪುತ್ರರು; ಕೊಡಿ: ನೀಡಿ; ಹರುಕು: ಹರಿದುದು, ಚಿಂದಿ; ನೂರು: ಶತ; ಮಕ್ಕಳು: ಪುತ್ರರು; ಹೊರಗೆ: ಆಚೆ; ಬದುಕು: ಜೀವಿಸು; ಐಸಲೇ: ಅಲ್ಲವೇ; ಉರುವ: ಶ್ರೇಷ್ಠ; ಕೂಡಿ: ಜೊತೆ; ಸುಖ: ಸಂತಸ, ನೆಮ್ಮದಿ; ರಾಜ್ಯ: ರಾಷ್ಟ್ರ; ಆಳು: ಅಧಿಕಾರ ನಡೆಸು;

ಪದವಿಂಗಡಣೆ:
ಅರುಹಿದರೆ +ವಿದುರಂಗೆ +ಕಾರ್ಯವ
ಮುರಿವನ್+ಆತನು +ಬಳಿಕ+ ನಿಮ್ಮಯ
ಕಿರಿಯ +ತಮ್ಮನ +ಮಕ್ಕಳಿಗೆ +ಕೊಡಿ +ಹಸ್ತಿನಾಪುರವ
ಹರುಕುಗಳು +ನಾವ್ +ನೂರು +ಮಕ್ಕಳು
ಹೊರಗೆ +ಬದುಕುವೆವ್+ಐಸಲೇ +ನಿಮ್ಮ್
ಉರುವ+ ಮಕ್ಕಳು+ಕೂಡಿ +ಸುಖದಲಿ +ರಾಜ್ಯವಾಳೆಂದ

ಅಚ್ಚರಿ:
(೧) ತಂದೆಯ ಮೇಲೆ ಕನಿಕರ ಹುಟ್ಟಿಸಲು ಹೇಳಿದ ಮಾತು – ಹರುಕುಗಳು ನಾವ್ ನೂರು ಮಕ್ಕಳು
ಹೊರಗೆ ಬದುಕುವೆವ್

ಪದ್ಯ ೬೨: ದುರ್ಯೋಧನನು ಧೃತರಾಷ್ಟ್ರನ ವಿಚಾರಕ್ಕೆ ಏನು ಹೇಳಿದ?

ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ (ಸಭಾ ಪರ್ವ, ೧೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತಂದೆಯು ಹೇಳಿದ ವಿಚಾರವನ್ನು ಕೇಳಿ ನಗುತ್ತಾ, ದುಷ್ಟರಿಗೆ ಸನ್ಮಾರ್ಗವನ್ನೂ, ಕಿವುಡರಿಗೆ ಮಂತಾಲೋಚನೆಯನ್ನು, ಕುರುಡನಿಗೆ ರೂಪ ವಿಲಾಸ ವಿಭ್ರಮಗಳನ್ನು ಹೇಳುವ ಹಾಗೆ ಏನು ಪ್ರಯೋಜನವಿಲ್ಲವೋ ಅದೇ ರೀತಿ ವಿದುರನ ಬಳಿ ಕೇಳಿದರೆ ಕೆಲಸವು ತಾಳ ತಪ್ಪುವುದಿಲ್ಲವೇ ಎಂದನು.

ಅರ್ಥ:
ಖೂಳ: ದುಷ್ಟ; ಸತ್ಕಲೆ: ಒಳ್ಳೆಯ ನಡತೆ; ನೆರೆ: ಗುಂಪು; ಕೇಳು: ಆಲಿಸು; ಮಂತ್ರ: ಆಲೋಚನೆ; ಬೀಜ: ಮೂಲ; ಆಲಿ: ಕಣ್ಣು; ರೂಪ: ಆಕಾರ, ಚೆಲುವು; ವಿಲಾಸ: ಸೊಬಗು, ಉಲ್ಲಾಸ; ವಿಭ್ರಮ: ಭ್ರಮೆ, ಭ್ರಾಂತಿ; ಹೇಳು: ತಿಳಿಸು; ಕಾರ್ಯ: ಕೆಲಸ; ಗತಿ: ಪದ್ಧತಿ, ಮಾರ್ಗ; ವಿತಾಳ: ಚಿಂತೆ, ಅಳಲು; ಬೊಪ್ಪ: ತಂದೆ; ನಗುತ: ಹಸಿತ; ರಾಯ: ರಾಜ;

ಪದವಿಂಗಡಣೆ:
ಖೂಳರಲಿ+ ಸತ್ಕಳೆಗಳನು +ನೆರೆ
ಕೇಳದವರಲಿ+ ಮಂತ್ರಬೀಜವನ್
ಆಲಿಯಿಲ್ಲದವಂಗೆ+ ರೂಪು +ವಿಲಾಸ +ವಿಭ್ರಮವ
ಹೇಳುವಂತಿರೆ+ ನಿಮ್ಮ +ವಿದುರನ
ಕೇಳಿಸಿದರ್+ಆ+ ಕಾರ್ಯಗತಿಗೆ+ ವಿ
ತಾಳವಾಗದೆ+ ಬೊಪ್ಪಯೆಂದನು +ನಗುತ +ಕುರುರಾಯ

ಅಚ್ಚರಿ:
(೧) ಉಪಮಾನದ ಪ್ರಯೊಗ – ಖೂಳರಲಿ ಸತ್ಕಳೆಗಳನು ನೆರೆ ಕೇಳದವರಲಿ ಮಂತ್ರಬೀಜವ ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
(೨) ಉಪಾಯವು ಹದಗೆಡುತ್ತದೆ ಎಂದು ಹೇಳುವ ಪರಿ – ಕಾರ್ಯಗತಿಗೆ ವಿತಾಳವಾಗದೆ

ಪದ್ಯ ೬೧: ಧೃತರಾಷ್ಟ್ರ ಯಾರ ಜೊತೆ ಉಪಾಯವನ್ನು ವಿಮರ್ಶಿಸುವುದು ಒಳಿತೆಂದನು?

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ತನ್ನ ಮಗನ ವಿಚಾರವನ್ನು ಕೇಳಿ, ಹೌದು ನೀನು ಹೇಳುತ್ತಿರುವುದು ಸರಿಯಾಗಿದೆ, ಇದರಲ್ಲೇನು ತಪ್ಪಿಲ್ಲ. ಸರಿಯಾದ ಮಾರ್ಗವೇನೋ ಹೌದು, ವಿದುರನನ್ನು ಕರೆಸಿ ಕೇಳುತ್ತೇನೆ, ವಿದುರನು ಇಹಪರಗಳಿಗೆ ಹಿತವಾವುದು ಎಂದು ಬಲ್ಲವನು. ಆತ ಕುಹಕಿಯಲ್ಲ, ಅವನು ಇದಕ್ಕೆ ಒಪ್ಪಿದರೆ ಇದೇ ಸರಿಯಾದ ಆಲೋಚನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ಸರಿಯಿಲ್ಲದ; ಸಾಧನ: ಸಾಧಿಸುವಿಕೆ, ಗುರಿಮುಟ್ಟುವಿಕೆ; ಬುದ್ಧಿ: ಚಿತ್ತ, ಅಭಿಮತ: ಅಭಿಪ್ರಾಯ; ಕರೆಸು: ಬರೆಮಾಡು; ಐಸಲೇ: ಅಲ್ಲವೇ; ಬೆಸಸು: ಹೇಳು, ಆಜ್ಞಾಪಿಸು; ಕುಹಕ: ಮೋಸ, ವಂಚನೆ; ನೋಡು: ವೀಕ್ಷಿಸು; ಇಹಪರ: ಈ ಲೋಕ ಮತ್ತು ಪರಲೋಕ; ಹಿತ: ಒಳಿತು; ನಿರ್ವಹಿಸು: ಮಾಡು, ಪೂರೈಸು; ಕೊಡು: ನೀಡು; ಮಂತ್ರ: ವಿಚಾರ, ಆಲೋಚನೆ; ಮಗ: ಪುತ್ರ;

ಪದವಿಂಗಡಣೆ:
ಅಹುದು +ತಪ್ಪೇನ್+ಇದುವೆ +ಸಾಧನ
ವಹುದು +ವಿದುರನ +ಬುದ್ಧಿಗ್+ಅಭಿಮತ
ವಹಡೆ +ಕರೆಸುವೆವ್+ಐಸಲೇ +ಬೆಸಸುವೆನು+ ವಿದುರಂಗೆ
ಕುಹಕವ್+ಆತನಲ್+ಇಲ್ಲ +ನೋಡುವನ್
ಇಹಪರತ್ರದ+ ಹಿತವನ್+ಇದ +ನಿ
ರ್ವಹಿಸಿ +ಕೊಡುವರೆ +ಮಂತ್ರವೆಂದನು+ ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ವಿದುರನ ಗುಣ – ಕುಹಕವಾತನಲಿಲ್ಲ, ನೋಡುವನಿಹಪರತ್ರದ ಹಿತವನ್