ಪದ್ಯ ೫೦: ದುರ್ಯೋಧನನು ತನ್ನ ತಂದೆಗೆ ಹೇಗೆ ಉತ್ತರಿಸಿದನು?

ಅಹುದು ಬೊಪ್ಪ ವೃಥಾಭಿಮಾನದ
ಕುಹಕಿ ಹೋಗಲಿ ನಿಮ್ಮ ಚಿತ್ತಕೆ
ಬಹ ಕುಮಾರರ ಕೂಡಿ ನಡೆವುದು ಪಾಂಡುನಂದನರ
ಮಹಿಯ ಹಂಗಿಂಗೋಸುಗವೆ ಬಿ
ನ್ನಹವ ಮಾಡಿದೆನೆನಗೆ ಭಂಡಿನ
ರಹಣಿ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ (ಸಭಾ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆಯ ಮಾತಿಗೆ ಉತ್ತರಿಸುತ್ತಾ, ಅಪ್ಪಾ, ನಿನ್ನ ಮಾತು ನಿಜ, ವೃಥಾ ಅಭಿಮಾನ ಪಡುವ ಕುಹಕಿಯಾದ ನನ್ನನ್ನು ತ್ಯಜಿಸಿರಿ, ನಿಮ್ಮ ಮನಸ್ಸಿಗೆ ಉತ್ತಮರೆನಿಸುವ ಪಾಂಡುಪುತ್ರರೊಡನೆ ಜೀವಿಸಿರಿ. ಭೂಮಿಗಾಗಿ ನಾನು ನಿಮ್ಮನ್ನು ಬೇಡಿಕೊಂಡೆ, ಆದರೆ ನಾನು ಭಂಡನೆಂಬ ಅಪಖ್ಯಾತಿ ಹೊಂದಿದೆ, ಅದೇ ಸಾಕು ಬಹಳ ಒಳ್ಳೆಯದಾಯಿತು ಎಂದನು.

ಅರ್ಥ:
ಅಹುದು: ಹೌದು; ಬೊಪ್ಪ: ತಂದೆ; ವೃಥ: ವ್ಯರ್ಥ; ಅಭಿಮಾನ: ಹೆಮ್ಮೆ, ಅಹಂಕಾರ; ಕುಹಕ: ಮೋಸ, ವಂಚನೆ; ಹೋಗು: ತೆರಳು; ಚಿತ್ತ: ಬುದ್ಧಿ; ಬಹ: ಬರುವ; ಕುಮಾರ: ಮಕ್ಕಳ; ಕೂಡಿ: ಜೊತೆ; ನಡೆ: ಚಲಿಸು; ನಂದನ: ಮಕ್ಕಳು; ಮಹಿ: ಭೀಮಿ; ಹಂಗು: ದಾಕ್ಷಿಣ್ಯ, ಆಭಾರ; ಓಸುಗ: ಕಾರಣ; ಬಿನ್ನಹ: ಕೇಳು; ಭಂಡ: ನಾಚಿಕೆ, ಲಜ್ಜೆ;

ಪದವಿಂಗಡಣೆ:
ಅಹುದು +ಬೊಪ್ಪ +ವೃಥ+ಅಭಿಮಾನದ
ಕುಹಕಿ+ ಹೋಗಲಿ +ನಿಮ್ಮ +ಚಿತ್ತಕೆ
ಬಹ +ಕುಮಾರರ +ಕೂಡಿ +ನಡೆವುದು +ಪಾಂಡು+ನಂದನರ
ಮಹಿಯ +ಹಂಗಿಂಗ್+ಓಸುಗವೆ +ಬಿ
ನ್ನಹವ +ಮಾಡಿದೆನ್+ಎನಗೆ +ಭಂಡಿನ
ರಹಣಿ +ಬಂದುದು +ಸಾಕಲೇ +ಸೊಗಸಾಯ್ತು +ಲೇಸೆಂದ

ಪದ್ಯ ೪೯: ದುರ್ಯೋಧನನ ಆಲೋಚನೆ ಸರಿಯಿಲ್ಲವೆಂದು ಏಕೆ ಧೃತರಾಷ್ಟ್ರ ಹೇಳಿದ?

ಪಾಂಡುವಿನ ಮಕ್ಕಳುಗಳಾರಾ
ಪಾಂಡುವಿನಲೆನ್ನಲ್ಲಿ ಭೇದವ
ಕಂಡೆಲಾ ನೀನವರಿಗೇನಪ್ರಾಪ್ತನೇ ಧರಣಿ
ಉಂಡು ಬದುಕುವ ಬಹಳ ಭಾಗ್ಯರ
ಕಂಡಸೂಯಂಬಡುವ ಖಡ್ಡರ
ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ (ಸಭಾ ಪರ್ವ, ೧೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಅಷ್ಟಕ್ಕೂ ಪಾಂಡುವಿನ ಮಕ್ಕಳು ಯಾರು? ಅವರು ನಮ್ಮವರೇ ಅಲ್ಲವೇ? ನನಊ ಪಾಂಡುವಿಗೂ ಭೇದವನ್ನು ಕಂಡುಕೊಂಡೆಯಾ? ಅವರಿಗೆ ಭೂಮಿಯು ಸಿಗಬಾರದೆ? ಉಂಡುಟ್ಟು ಸುಖವಾಗಿ ಬಾಳುವ ಭಾಗ್ಯಶಾಲಿಗಳನ್ನು ನೋಡಿ ಅಸೂಯೆಪಡುವವರನ್ನು ಓಕವು ಭಂಡರೆಂದು ಕರೆಯುವುದಿಲ್ಲವೇ, ನಿನ್ನ ಆಲೋಚನೆ ಸರಿಯಿಲ್ಲ ಎಂದು ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಕ್ಕಳು: ಪುತ್ರರು; ಭೇದ; ವ್ಯತ್ಯಾಸ; ಕಂಡು: ನೋಡಿ; ಪ್ರಾಪ್ತ: ಯೋಗ್ಯವಾದ, ಅರ್ಹವಾದ; ಧರಣಿ: ಭೂಮಿ; ಉಂಡು: ತಿಂದು; ಬದುಕು: ಜೀವಿಸು; ಬಹಳ: ತುಂಬ; ಭಾಗ್ಯ: ಶುಭ; ಕಂಡು: ನೋಡಿ; ಅಸೂಯೆ: ಹೊಟ್ಟೆಕಿಚ್ಚು; ಖಡ್ಡ: ತಿಳಿಗೇಡಿ, ಹೆಡ್ಡ; ಭಂಡ: ನಾಚಿಕೆ, ಲಜ್ಜೆ; ಲೋಕ: ಜಗತ್ತು; ಸಾಮ್ಯ: ಸಮಾನ, ಸರಿಸಮ;

ಪದವಿಂಗಡಣೆ:
ಪಾಂಡುವಿನ+ ಮಕ್ಕಳುಗಳ್+ಆರ್
ಆ+ಪಾಂಡುವಿನಲ್+ಎನ್ನಲ್ಲಿ +ಭೇದವ
ಕಂಡೆಲಾ +ನೀನ್+ಅವರಿಗ್+ಏನ್+ಅಪ್ರಾಪ್ತನೇ +ಧರಣಿ
ಉಂಡು +ಬದುಕುವ +ಬಹಳ +ಭಾಗ್ಯರ
ಕಂಡ್+ಅಸೂಯಂಬಡುವ+ ಖಡ್ಡರ
ಭಂಡರೆನ್ನದೆ +ಲೋಕ +ನಿನಗಿದು +ಸಾಮ್ಯವಲ್ಲೆಂದ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ನೀನವರಿಗೇನಪ್ರಾಪ್ತನೇ, ನಿನಗಿದು ಸಾಮ್ಯವಲ್ಲೆಂದ

ಪದ್ಯ ೪೮: ಧೃತರಾಷ್ಟ್ರ ತನ್ನ ಮಗನ ಬಗ್ಗೆ ಏನು ಹೇಳಿದ?

ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೊಷವಿದು
ಕೃತಕವೋ ಸಹಜವೊ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೪೮
ಪದ್ಯ)

ತಾತ್ಪರ್ಯ:
ಸ್ತ್ರೀಯರಲ್ಲಿ ನಿನ್ನ ತಾಯಿ ಅತ್ಯಂತ ಪತಿವ್ರತೆ, ನೀನೋ ಮಹಾದುಷ್ಟ ಅಸುರ ಬುದ್ಧಿಯುಳ್ಳವನು. ಮೂಲದಲ್ಲೇನೂ ದೋಷವಿಲ್ಲ ಆದರೆ ಇದು ನಿನ್ನ ಬುದ್ಧಿಯ ದೋಷ. ಇದೇನು ಕೃತಕವಾಗು ಉಂಟಾಯಿತೋ ಅಥವ ಇರುವುದೇ ಹೀಗೆಯೋ ತಿಳಿಯದಾಗಿದೆ. ಶಿವ ಶಿವಾ ದುರ್ಮತಿಯುಳ್ಳವರು ಎಂತಹ ಹೀನವಿಚಾರವನ್ನೂ ನೆನೆಯದೆ ಬಿಟ್ಟಾರು ಎಂದು ಧೃತರಾಷ್ಟ್ರ ನಿಟ್ಟುಸಿರು ಬಿಟ್ಟನು.

ಅರ್ಥ:
ಸತಿ: ಪತ್ನಿ; ಅವ್ವೆ: ಅಮ್ಮ; ಪತಿವ್ರತೆ: ಸಾಧ್ವಿ, ಗರತಿ; ಖಳ: ದುಷ್ಟ; ಮಹಾ: ದೊಡ್ಡ; ಬೀಜ: ಮೂಲ; ಸ್ಥಿತಿ: ಇರವು, ಅಸ್ತಿತ್ವ; ಊಣ:ತೊಂದರೆ; ಬುದ್ಧಿ: ಮತಿ; ದೋಷ: ಕುಂದು, ಕಳಂಕ; ಕೃತಕ: ಕಪಟ; ಸಹಜ: ಸ್ವಾಭಾವಿಕವಾದುದು; ನವೀನ: ಹೊಸ; ಸ್ಥಿತಿ: ಇರವು, ಅಸ್ತಿತ್ವ; ಕಂಡೆ: ನೋಡು; ದುರ್ಮತಿ: ಕೆಟ್ಟಬುದ್ಧಿ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಸುಯ್ದು: ನಿಟ್ಟುಸಿರು;

ಪದವಿಂಗಡಣೆ:
ಸತಿಯರಲಿ+ ನಿಮ್ಮವ್ವೆ+ ಸುಪತಿ
ವ್ರತೆ+ ಮಹಾಖಳ+ ನೀನು +ಬೀಜ
ಸ್ಥಿತಿಯಲ್+ಊಣಯವಿಲ್ಲ+ ನಿನ್ನಯ +ಬುದ್ಧಿ +ದೊಷವಿದು
ಕೃತಕವೋ +ಸಹಜವೊ+ ನವೀನ
ಸ್ಥಿತಿಯ +ಕಂಡೆನು +ಶಿವ +ಶಿವಾ+ ದು
ರ್ಮತಿಗಳ್+ಆವುದ+ ನೆನೆಯರ್+ಎಂದನು +ಸುಯ್ದು +ಧೃತರಾಷ್ಟ್ರ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಮಹಾಖಳ ನೀನು; ನಿನ್ನಯ ಬುದ್ಧಿ ದೊಷವಿದು
(೨) ಕೃತಕ, ಸಹಜ – ವಿರುದ್ಧ ಪದ

ಪದ್ಯ ೪೭: ಧರ್ಮಜನ ಹಿರಿಮೆಯನ್ನು ಧೃತರಾಷ್ಟ್ರ ಹೇಗೆ ಹೇಳಿದ?

ಕೇಳಿದನು ಬಿಸುಸುಯ್ದನಕಟ ವಿ
ಕಾಳಿಸಿತೆ ಕೌರವನ ಬುದ್ಧಿ ವಿ
ಟಾಳ ಸಂಗತಿಯಾಯ್ತಲಾ ಪಿಸುಣಾರ ಕೆರಳಿಚದು
ಕೇಳು ಮಗನೇ ಧರ್ಮಪುತ್ರನ
ಮೇಲೆ ಮುನಿವರೆ ರಾಜಋಷಿ ನರ
ಪಾಲ ಮಾತ್ರವೆ ಶಿವ ಮಹಾದೇವೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ತನ್ನ ಪುತ್ರ ದುರ್ಯೋಧನನ ಮಾತನ್ನು ಧೃತರಾಷ್ಟ್ರ ಆಲಿಸಿ ನಿಟ್ಟುಸಿರುಬಿಟ್ಟು ಅಯ್ಯೋ ಇವನಿಗೇಕೆ ಈ ಕೆಟ್ಟಬುದ್ಧಿ ಬಂದಿತು. ಚಾಡಿಯ ಮಾತು ಯಾರನ್ನು ತಾನೆ ಕೆರಳಿಸುವುದಿಲ್ಲ. ಮಗನ ಬುದ್ಧಿ ಅಪವಿತ್ರವಾಯಿತೇ ಎಂದುಕೊಂಡು, ಮಗನೇ, ಧರ್ಮಜನ ಮೇಲೆ ಕೋಪಗೊಳ್ಳುವುದು ಸರಿಯೇ? ಅವನು ಎಲ್ಲರಂತೆ ಸಾಮಾನ್ಯ ರಾಜನೇ? ಅವನು ರಾಜರ್ಷಿ, ಶಿವ ಶಿವ ನಿನಗೇಕೆ ಈ ಬುದ್ಧಿ ಬಂದಿತು ಎಂದು ಕೇಳಿದನು.

ಅರ್ಥ:
ಕೇಳು: ಆಲಿಸು; ಬಿಸುಸುಯ್ದ: ನಿಟ್ಟುಸಿರು; ಅಕಟ: ಅಯ್ಯೋ; ವಿಕಳ: ಭ್ರಮೆ, ಭ್ರಾಂತಿ; ಬುದ್ಧಿ: ಮನಸ್ಸು, ಚಿತ್ತ; ವಿಟಾಳ: ಅಪವಿತ್ರತೆ, ಮಾಲಿನ್ಯ; ಸಂಗತಿ: ವಿಚಾರ; ಪಿಸುಣ: ಚಾಡಿಕೋರ; ಕೆರಳು: ಪ್ರಚೋದಿಸು; ಮಗ: ಪುತ್ರ; ಮುನಿ: ಕೋಪಗೊಳ್ಳು; ರಾಜಋಷಿ: ರಾಜ ಹಾಗೂ ಋಷಿಯ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು; ನರಪಾಲ: ರಾಜ; ನರ: ಮನುಷ್ಯ; ಮಾತ್ರ: ಕೇವಲ; ಶಿವ: ಶಂಕರ, ಭಗವಂತ; ಭೂಪ: ರಾಜ;

ಪದವಿಂಗಡಣೆ:
ಕೇಳಿದನು+ ಬಿಸುಸುಯ್ದನ್+ಅಕಟ +ವಿ
ಕಾಳಿಸಿತೆ+ ಕೌರವನ+ ಬುದ್ಧಿ +ವಿ
ಟಾಳ +ಸಂಗತಿ+ಆಯ್ತಲಾ+ ಪಿಸುಣಾರ +ಕೆರಳಿಚದು
ಕೇಳು +ಮಗನೇ +ಧರ್ಮಪುತ್ರನ
ಮೇಲೆ +ಮುನಿವರೆ +ರಾಜಋಷಿ +ನರ
ಪಾಲ +ಮಾತ್ರವೆ +ಶಿವ+ ಮಹಾದೇವ+ಎಂದನಾ +ಭೂಪ

ಅಚ್ಚರಿ:
(೧) ವಿಕಾಳಿಸಿತೆ, ವಿಟಾಳ – ಪದಗಳ ಬಳಕೆ
(೨) ಧರ್ಮಜನ ಹಿರಿಮೆ – ಧರ್ಮಪುತ್ರನ ಮೇಲೆ ಮುನಿವರೆ ರಾಜಋಷಿ ನರಪಾಲ ಮಾತ್ರವೆ

ಪದ್ಯ ೪೬: ಪಾಂಡವರ ದಾನದ ಹಿರಿಮೆ ಎಂತಹುದು?

ಪುರದಲೆಂಬತ್ತೆಂಟು ಸಾವಿರ
ಧರಣಿಯಮರರು ನಿತ್ರ್ಯ ಪಡೆಯುವ
ರರಸ ಕೇಳೈ ಹತ್ತು ಸಾವಿರ ಹೊನ್ನತಳಿಗೆಯಲಿ
ವರ ಯತೀಶರು ಹತ್ತು ಸಾವಿರ
ವರಮನೆಯಲುಂಬುದು ನೃಪಾಲಾ
ಧ್ವರದ ಸಿರಿಯನು ನೀವೆ ಕಂಡಿರೆಯೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥ ಪುರದಲ್ಲಿ ಪಾಂಡವರ ಮನೆಯಲ್ಲಿ ಎಂಬತ್ತೆಂಟು ಸಾವಿರ ಬ್ರಾಹ್ಮಣರು ನಿತ್ಯವೂ ಹತ್ತು ಸಾವಿರ ಹೊನ್ನಿನ ನಾಣ್ಯಗಳನ್ನು ಚಿನ್ನದ ತಟ್ಟೆಯಲ್ಲಿ ತೆಗೆದುಕೊಳ್ಳುತ್ತಾರೆ. ಪ್ರತಿದಿನವೂ ಹತ್ತು ಸಾವಿರ ಸನ್ಯಾಸಿಗಳು ಅವರ ಮನೆಯಲ್ಲಿ ಭಿಕ್ಷಾವಂದನೆಯನ್ನು ಸ್ವೀಕರಿಸುತ್ತಾರೆ. ಇನ್ನು ರಾಜಸೂಯಯಾಗದ ಮಹಾವೈಭವವನ್ನು ನೀವೇ ನೋಡಿದ್ದೀರಿ ಎಂದು ದುರ್ಯೋಧನನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಪುರ: ಊರು; ಸಾವಿರ: ಸಹಸ್ರ; ಧರಣಿ: ಭೂಮಿ; ಅಮರರು: ದೇವತೆ; ಧರಣಿಯಮರರು: ಬ್ರಾಹ್ಮಣ; ನಿತ್ಯ: ಪ್ರತಿದಿನ; ಪಡೆ: ತೆಗೆದುಕೊಳ್ಳುವ; ಅರಸ: ರಾಜ; ಕೇಳು: ಆಲಿಸು; ಹತ್ತು: ದಶ; ಹೊನ್ನು: ಚಿನ್ನ; ತಳಿಗೆ: ತಟ್ಟೆ; ವರ: ಶ್ರೇಷ್ಠ; ಯತಿ: ಋಷಿ, ಮುನಿ; ಉಂಬುದು: ಊಟಮಾಡು; ಅಧ್ವರ: ಯಾಗ; ನೃಪಾಲಾಧ್ವರ: ರಾಜಸೂಯ ಯಾಗ; ಸಿರಿ: ಐಶ್ವರ್ಯ; ಕಂಡಿರಿ: ನೋಡಿರುವಿರಿ; ಭೂಪ: ರಾಜ;

ಪದವಿಂಗಡಣೆ:
ಪುರದಲ್+ಎಂಬತ್ತೆಂಟು +ಸಾವಿರ
ಧರಣಿಯಮರರು+ ನಿತ್ಯ+ ಪಡೆಯುವರ್
ಅರಸ +ಕೇಳೈ +ಹತ್ತು +ಸಾವಿರ+ ಹೊನ್ನ+ತಳಿಗೆಯಲಿ
ವರ+ ಯತೀಶರು+ ಹತ್ತು +ಸಾವಿರವ್
ಅರಮನೆಯಲ್+ಉಂಬುದು +ನೃಪಾಲ
ಅಧ್ವರದ +ಸಿರಿಯನು +ನೀವೆ +ಕಂಡಿರೆ+ಎಂದನಾ +ಭೂಪ

ಅಚ್ಚರಿ:
(೧) ಅರಸ, ಭೂಪ, ನೃಪ – ಸಮನಾರ್ಥಕ ಪದ
(೨) ಅರಸ, ಅರಮನೆ, ಅಧ್ವರ – ಪದಗಳ ಬಳಕೆ