ಪದ್ಯ ೩೯: ದುರ್ಯೋಧನನು ತನ್ನ ಅಭಿಮಾನ ಬತ್ತಿತೆಂದು ಏಕೆ ಹೇಳಿದ?

ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತಕಾಶಿನಿಯರು ಯುಧಿಷ್ಠಿರ
ನಿತ್ತದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ (ಸಭಾ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಮತ್ತೆ ಯುಧಿಷ್ಠಿರನ ಅಂತಃಪುರದವರು ಘೊಳ್ಳನೆ ನಕ್ಕರು. ಅವನು ತರಿಸಿಕೊಟ್ಟ ಉತ್ತಮ ವಸ್ತ್ರವನ್ನು ಆ ನೀರಿನ ತಡಿಯನ್ನು ಹತ್ತಿ ಉಟ್ಟುಕೊಂಡೆನು. ನನ್ನ ಅಭಿಮಾನ ಸಮುದ್ರವು ಬತ್ತಿ ಹೋಯಿತು. ಇಷ್ಟೇ ಅಲ್ಲ ಅಪಮಾನ ಮಾರಿಯ ಹೊಡೆತವನ್ನು, ಅಪ್ಪ ನೀವು ಗಮನವಿಟ್ಟು ಕೇಳಿರಿ.

ಅರ್ಥ:
ಗೊಳ್ಳು: ನಗುವನ್ನು ಚಿತ್ರಿಸುವ ಪದ; ನೃಪಾಲ: ರಾಜ; ಮತ್ತಕಾಶಿನಿ: ಸುಂದರಿ; ದಿವ್ಯ: ಶ್ರೇಷ್ಠ; ದುಕೂಲ: ರೇಷ್ಮೆ ಬಟ್ಟೆ; ತಡಿಗಡರು: ದಡಕ್ಕೆ ಹತ್ತು; ತೊಡಚು: ಕಟ್ಟು, ಬಂಧಿಸು; ಬತ್ತು: ಒಣಗು, ಆರು, ಬರಿದಾಗು; ಅಭಿಮಾನ: ಹೆಮ್ಮೆ, ಅಹಂಕಾರ; ಜಲನಿಧಿ: ಸಾಗರ; ಮಾರಿ: ಮುಖ; ಮಸಕ: ಕಾಂತಿ, ತೇಜಸ್ಸು; ಚಿತ್ತವಿಸು: ಗಮನವಿಡು; ಬೊಪ್ಪ: ತಂದೆ; ರಾಯ: ರಾಜ;

ಪದವಿಂಗಡಣೆ:
ಮತ್ತೆ +ಗೊಳ್ಳೆಂದುದು +ನೃಪಾಲನ
ಮತ್ತಕಾಶಿನಿಯರು +ಯುಧಿಷ್ಠಿರನ್
ಇತ್ತ+ದಿವ್ಯ+ ದುಕೂಲವನು+ ತಡಿಗಡರಿ+ ತೊಡಚಿದೆನು
ಬತ್ತಿತ್+ಎನ್+ಅಭಿಮಾನ +ಜಲನಿಧಿ
ಮತ್ತೆ +ಮಾರಿಯ +ಮಸಕವನು +ನೀವ್
ಚಿತ್ತವಿಸಿರೇ +ಬೊಪ್ಪ+ಎಂದನು +ಕೌರವರ+ ರಾಯ

ಅಚ್ಚರಿ:
(೧) ಅಂತಃಪುರದ ಸ್ತ್ರೀಯರನ್ನು ಕರೆದ ಬಗೆ – ಮತ್ತಕಾಶಿನಿ
(೨) ದುರ್ಯೋಧನನ ದುಃಖವನ್ನು ತಿಳಿಸುವ ಪರಿ – ಬತ್ತಿತೆನ್ನಭಿಮಾನ ಜಲನಿಧಿ

ಪದ್ಯ ೩೮: ದುರ್ಯೋಧನನು ನೀರಿನಲ್ಲಿ ಬಿದ್ದು ಒದ್ದೆಯಾದುದು ಹೇಗೆ

ಊಹೆಯಲಿ ತಡವರಿಸಿ ಹೆಜ್ಜೆಯ
ಗಾಹುಗತಕದೊಳಿಡುತ ಕಾಂತಿಯ
ಸೋಹೆಯರಿಯದೆ ಬೀದಿಯಲಿ ಕಂಡೆನು ಸರೋವರವ
ಆ ಹರಿಬವನು ಮುರಿವೆನೆಂದಿದ
ನೂಹಿಸದೆನಾ ಸ್ಫಟಿಕವೆಂದು
ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಘ್ನದಲಿ (ಸಭಾ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಊಹೆಯಿಂದ ಕಾಲಿನಲ್ಲೇ ತಡವರಿಸಿ, ಹೊಂಚುಹಾಕಿ ಹೆಜ್ಜೆಯನ್ನಿಡುತ್ತಾ, ಬೆಳಕಿನ ಲೀಲೆಯೆಂದು ಅರಿಯದ ದಾರಿಯಲ್ಲಿ ಸರೋವರವನ್ನು ಕಂಡೆನು. ಹಿಂದೆ ಮೋಸಹೋದುದನ್ನು ತಪ್ಪಿಸಲು ಅದು ಸ್ಫಟಿಕ ಶಿಲೆಯಿರಬೇಕೆಂದು ಕಾಲನ್ನಿಟ್ಟೆನು. ಆ ಶಿಲೆಯು ನೀರಾಗಿತ್ತು, ನಾಭಿಯವರೆಗೂ ಶರೀರವೂ ವಸ್ತ್ರಗಳು ಒದ್ದೆಯಾದವು.

ಅರ್ಥ:
ಊಹೆ: ಅಂದಾಜು; ತಡವರಿಸು: ಗೊಂದಲ, ಏರುಪೇರು; ಹೆಜ್ಜೆ: ಪಾದ; ಗಾಹುಗತಕ: ಮೋಸ, ಭ್ರಾಂತಿ; ಇಡು: ಇರಿಸು; ಕಾಂತಿ: ಪ್ರಕಾಶ; ಸೋಹೆ: ಸುಳಿವು, ಸೂಚನೆ; ಅರಿ: ತಿಳಿ; ಬೀದಿ: ರಸ್ತೆ; ಕಂಡು: ನೋಡು; ಸರೋವರ: ಸರಸಿ; ಹರಿಬ: ಕಾರಣ, ಉದ್ದೇಶ; ಮುರಿ: ಸೀಳು; ಸ್ಫಟಿಕ: ನಿರ್ಮಲವೂ, ಪಾರದರ್ಶಕವೂ ಆದ ಒಂದು ಬಗೆಯ ಬಿಳಿಯ ಹೊಳಪಿನ ಕಲ್ಲು; ಉತ್ಸಾಹ: ಹುರುಪು, ಆಸಕ್ತಿ; ನೀರಾಯ್ತು: ಒದ್ದೆಯಾಗು; ನನೆ: ತೋಯು. ಒದ್ದೆ; ನಾಭಿ: ಹೊಕ್ಕಳು; ನಾಭಿದಘ್ನ: ಹೊಕ್ಕಳವರೆಗೆ ಮುಳುಗಿದವನು;

ಪದವಿಂಗಡಣೆ:
ಊಹೆಯಲಿ+ ತಡವರಿಸಿ+ ಹೆಜ್ಜೆಯ
ಗಾಹುಗತಕದೊಳ್+ಇಡುತ +ಕಾಂತಿಯ
ಸೋಹೆ+ಅರಿಯದೆ+ ಬೀದಿಯಲಿ+ ಕಂಡೆನು +ಸರೋವರವ
ಆ +ಹರಿಬವನು +ಮುರಿವೆನೆಂದ್+ಇದನ್
ಊಹಿಸದೆ+ನಾ +ಸ್ಫಟಿಕವೆಂದ್
ಉತ್ಸಾಹಿಸಲು +ನೀರಾಯ್ತು +ನನೆದೆನು+ ನಾಭಿದಘ್ನದಲಿ

ಅಚ್ಚರಿ:
(೧) ನಾಭಿದಘ್ನ – ಪದದ ಬಳಕೆ
(೨) ಊಹೆ, ಸೋಹೆ – ಪ್ರಾಸ ಪದಗಳು

ಪದ್ಯ ೩೭: ದುರ್ಯೋಧನನು ಲಜ್ಜೆಯಿಂದ ತಲೆಬಾಗಲು ಕಾರಣವೇನು?

ಮುಂದೆ ವಿಮಲಸ್ಫಟಿಕ ಭೂಮಿಯ
ನೊಂದು ಠಾವಿನೊಳೀಕ್ಷಿಸುತೆ ಕೊಳ
ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆರಗ
ಅಂದು ದ್ರೌಪದಿ ಸಹಿತ ನಾರೀ
ವೃಂದ ಕೈಗಳ ಹೊಯ್ದು ಮಿಗೆ ಗೊ
ಳ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ (ಸಭಾ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಇನ್ನು ಸ್ವಲ್ಪ ಮುಂದೆ ಹೋಗಲು ನಿರ್ಮಲ ಸ್ಫಟಿಕವಾದ ಜಾಗವನ್ನು ನೋಡಿದೆ, ಅದನ್ನು ಕೊಳವೆಂದು ಭಾವಿಸಿ ನಿಂತು ನನ್ನ ಬಟ್ಟೆಯ ಸೆರಗನ್ನು ಸರಿಮಾಡಿಕೊಂಡೆ. ಆಗ ದ್ರೌಪದೀ ಸಮೇತ ಸಮಸ್ತ ಸ್ತ್ರೀಯರು ನನ್ನನ್ನು ನೋಡಿ ಕೈತಟ್ಟಿ ಗೊಳ್ಳೆಂದು ನಕ್ಕರು, ನಾನು ನೊಂದುಕೊಂಡು ನಾಚಿಕೆಯಿಂದ ತಲೆತಗ್ಗಿಸಿದೆ.

ಅರ್ಥ:
ಮುಂದೆ: ಎದುರು; ವಿಮಲ: ನಿರ್ಮಲ; ಸ್ಫಟಿಕ: ನಿರ್ಮಲವೂ, ಪಾರದರ್ಶಕವೂ ಆದ ಒಂದು ಬಗೆಯ ಬಿಳಿಯ ಹೊಳಪಿನ ಕಲ್ಲು; ಭೂಮಿ: ನೆಲ; ಠಾವು: ಎಡೆ, ಸ್ಥಳ, ತಾಣ; ಈಕ್ಷಿಸು: ನೋಡು; ಕೊಳ: ನೀರಿನ ಗುಂಡಿ; ಬಗೆ: ತಿಳಿ; ನಿಂದು: ನಿಲ್ಲು; ಸಂವರಿಸು: ಸಜ್ಜು ಮಾಡು; ಮುಂಜೆರಗ: ಸೆರಗಿನ ಮುಂಭಾಗ; ಸಹಿತ: ಜೊತೆ; ನಾರಿ: ಹೆಣ್ಣು; ವೃಂದ: ಗುಂಪು; ಕೈ: ಹಸ್ತ; ಹೊಯ್ದು: ಹೊಡೆ, ತಟ್ಟು; ಮಿಗೆ: ಅಧಿಕವಾಗಿ; ಗೊಳ್ಳ್: ನಗುವ ಶಬ್ದವನ್ನು ವಿವರಿಸುವ ಪದ; ನಕ್ಕು: ಹರ್ಷಿಸು; ನೊಂದು: ಬೇಸರ; ತಲೆ: ಶಿವ; ವಾಗು: ಬಾಗು; ಲಜ್ಜೆ: ನಾಚಿಕೆ, ಸಂಕೋಚ;

ಪದವಿಂಗಡಣೆ:
ಮುಂದೆ +ವಿಮಲ+ಸ್ಫಟಿಕ+ ಭೂಮಿಯನ್
ಒಂದು +ಠಾವಿನೊಳ್+ಈಕ್ಷಿಸುತೆ+ ಕೊಳ
ನೆಂದು +ಬಗೆದೆನು+ ನಿಂದು +ಸಂವರಿಸಿದೆನು+ ಮುಂಜೆರಗ
ಅಂದು +ದ್ರೌಪದಿ +ಸಹಿತ +ನಾರೀ
ವೃಂದ +ಕೈಗಳ+ ಹೊಯ್ದು +ಮಿಗೆ +ಗೊ
ಳ್ಳೆಂದು +ನಕ್ಕುದು +ನೊಂದು +ತಲೆವಾಗಿದೆನು +ಲಜ್ಜೆಯಲಿ

ಅಚ್ಚರಿ:
(೧) ನಗುವನ್ನು ವಿವರಿಸುವ ಪರಿ – ಕೈಗಳ ಹೊಯ್ದು ಮಿಗೆ ಗೊಳ್ಳೆಂದು ನಕ್ಕುದು

ಪದ್ಯ ೩೬: “ಸೋತೆನು ತಂದೆ”, ಎಂದು ದುರ್ಯೋಧನನು ಏಕೆ ಹೇಳಿದ?

ಸ್ಥಳವೆ ಜಲರೂಪದಲಿ ಜಲವೇ
ಸ್ಥಳದ ಪಾಡಿನಲಿದ್ದುದನು ಕೆಲ
ಬಲನ ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು
ಹೂಳಹನೇ ಕಂಡೆನು ವಿವೇಕದ
ಕಳಿವು ಚಿತ್ತದ ಸೆರೆದುಹಾರದೊ
ಳುರಿದವಕ್ಷಿಗಳಿಂತು ಸೋತೆನು ತಂದೆ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಆ ಆಲಯದಲ್ಲಿ ನೆಲವು ನೀರಿನಂತೆ ನೀರೇ ನೆಲದಂತೆ ಕಾಣುತ್ತಿತ್ತು. ಅಕ್ಕಪಕ್ಕದ ಭಿತ್ತಿಯ ಕಂಬಗಳು, ಕಂಬದ ನಡುವೆ ಭಿತ್ತಿಗಳು ಇರುವಂತೆ ಬೆಳಕಿನಲ್ಲಿ ಕಾಣಿಸಿತು. ವಿವೇಕ ಹಾರಿಹೋಯಿತು, ಮನಸ್ಸಿನ ನಿರ್ಧಾರ ತಪ್ಪಿ ಕಣ್ಣುಗಳು ಉರಿದ ಹಾಗಾಯಿತು, ಅಪ್ಪಾ ನಾನು ಸೋತುಹೋದೆ ಎಂದು ತನ್ನ ಅಳಲನ್ನು ತೋಡಿಕೊಂಡನು.

ಅರ್ಥ:
ಸ್ಥಳ: ಜಾಗ; ಜಲ: ನೀರು; ರೂಪ: ಆಕಾರ, ಆಕೃತಿ; ಪಾಡಿ: ಕಾಡು, ಪ್ರಾಂತ್ಯ; ಕೆಲಬಲ:ಅಕ್ಕಪಕ್ಕ; ಭಿತ್ತಿ: ಮುರಿಯುವ, ಒಡೆಯುವ; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ನಡುವೆ: ಮಧ್ಯ; ಭಿತ್ತಿ: ಗೋಡೆ, ಆಶ್ರಯ; ಹೊಳಹು: ಪ್ರಕಾಶ, ಕಾಂತಿ; ಕಂಡು: ನೋಡು; ವಿವೇಕ: ಯುಕ್ತಾಯುಕ್ತ ವಿಚಾರ; ಅಳಿವು: ಸಾವು; ಚಿತ್ತ: ಮನಸ್ಸು; ಸೆರೆ: ಹಿಡಿತ; ಹಾರು: ಲಂಘಿಸು, ಜಿಗಿ; ಉರಿ: ಜ್ವಾಲೆ; ಅಕ್ಷಿ: ಕಣ್ಣು; ಸೋಲು: ಪರಾಭವ; ತಂದೆ: ಅಪ್ಪ; ಕೇಳು: ಆಲಿಸು;

ಪದವಿಂಗಡಣೆ:
ಸ್ಥಳವೆ +ಜಲರೂಪದಲಿ+ ಜಲವೇ
ಸ್ಥಳದ +ಪಾಡಿನಲ್+ಇದ್ದುದನು +ಕೆಲ
ಬಲನ+ ಭಿತ್ತಿಯ+ ಕಂಬ +ಕಂಬದ+ ನಡುವೆ +ಭಿತ್ತಿಗಳು
ಹೂಳಹನೇ +ಕಂಡೆನು +ವಿವೇಕದ
ಕಳಿವು +ಚಿತ್ತದ +ಸೆರೆದು+ಹಾರದೊಳ್
ಉರಿದವ್+ಅಕ್ಷಿಗಳ್+ಇಂತು +ಸೋತೆನು+ ತಂದೆ+ ಕೇಳೆಂದ

ಅಚ್ಚರಿ:
(೧) ಪದಗಳ ಬಳಕೆ – ಸ್ಥಳವೆ ಜಲರೂಪದಲಿ ಜಲವೇ ಸ್ಥಳ; ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು

ಪದ್ಯ ೩೫: ಇಂದ್ರಪ್ರಸ್ಥದ ರಾಜಾಲಯವು ಹೇಗೆ ಕಂಗೊಳಿಸುತ್ತಿತ್ತು?

ಹಿಡಿದವೆನ್ನೊಹೆಯನು ಮಣಿರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಫಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಆಲಯದಲ್ಲಿದ್ದ ಮಣಿಗಳ ಕಾಂತಿಯು ನನ್ನ ಊಹೆಯನ್ನೂ ಮೀರಿಸಿತ್ತು. ನನ್ನ ತಿಳುವಳಿಕೆ ಹೆಚ್ಚು ಕಡಿಮೆಯಾಯಿತು. ಗೋಡೆಯ ಫಲಕದಲ್ಲಿ ಹೊಳೆಯುವ ನೀಲಿಯ ಬೆಳಕಿನ ದೆಸೆಯಿಂದ ನೀರಿನ ಪಾತ್ರದ ದಡ ಕಾಣದಾಯಿತು, ಸ್ಫಟಿಕ ಶಿಲೆಯಲ್ಲಿ ಕಂಡ ನೀರಿನಲ್ಲಿ ಕಾಲನ್ನು ಎತ್ತಿಡಲು ಹೆದರಿದೆನು ಎಂದು ಅಲ್ಲಿಯ ವಿಸ್ಮಯ ರಚನೆಗಳನ್ನು ವಿವರಿಸಿದನು.

ಅರ್ಥ:
ಹಿಡಿ: ಬಂಧಿಸು; ಊಹೆ: ಎಣಿಕೆ, ಅಂದಾಜು; ಮಣಿ: ಬೆಲೆಬಾಳುವ ಹವಳ; ರುಚಿ: ಕಾಂತಿ, ಪ್ರಕಾಶ; ಎಡತರ: ತಡವಡಿಕೆ; ಇಕ್ಕು: ಇರಿಸು, ಇಡು; ಭಿತ್ತಿ: ಮುರಿಯುವ, ಒಡೆಯುವ; ಬಿಡಯ: ದಾಕ್ಷಿಣ್ಯ, ಸಂಕೋಚ; ಝಳ: ತಾಪ, ಶೆಖೆ; ನೀಲ: ಉದ್ದ; ಲಳಿಯ: ರಭಸ, ಆವೇಶ; ಲಹರಿ: ಚಾಕಚಕ್ಯತೆ, ಚುರುಕು, ಚಮತ್ಕಾರ; ತಡಿ: ದಡ, ತಟ,ತೇವ; ಕಾಣೆ: ತೋರು; ತಳಿತ: ಚಿಗುರಿದ; ಕಾಂತಿ: ಪ್ರಕಾಶ; ಕಡಲ: ಸಾಗರ; ವಿಮಲ: ನಿರ್ಮಲ; ಸ್ಫಟಿಕ: ನಿರ್ಮಲವೂ, ಪಾರದರ್ಶಕವೂ ಆದ ಒಂದು ಬಗೆಯ ಬಿಳಿಯ ಹೊಳಪಿನ ಕಲ್ಲು; ಜಲ: ನೀರು; ಮಿಡುಕು: ಅಲುಗಾಟ, ಚಲನೆ; ಅಂಜು: ಹೆದರು; ಅಂಘ್ರಿ: ಪಾದ; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹಿಡಿದವ್+ಎನ್+ಊಹೆಯನು+ ಮಣಿರುಚಿ
ಎಡತರದೊಳ್+ಇಕ್ಕಿದವು +ಭಿತ್ತಿಯ
ಬಿಡೆಯದಲಿ +ಝಳುಪಿಸುವ+ ನೀಲದ+ ಲಳಿಯ+ ಲಹರಿಯಲಿ
ತಡಿಯ +ಕಾಣೆನು +ತಳಿತ+ ಕಾಂತಿಯ
ಕಡಲ+ ವಿಮಲ+ ಸ್ಫಟಿಕ +ಜಲದಲಿ
ಮಿಡುಕಲ್+ಅಂಜಿದವ್+ಅಂಘ್ರಿಗಳು +ನರನಾಥ+ ಕೇಳೆಂದ

ಅಚ್ಚರಿ:
(೧) ತ, ಕ ಕಾರದ ಅಕ್ಷರಗಳ ಬಳಕೆ – ತಡಿಯ ಕಾಣೆನು ತಳಿತ ಕಾಂತಿಯ

ಪದ್ಯ ೩೪: ಯಾವುದು ದುರ್ಯೋಧನನ ಮನಸ್ಸನ್ನು ನಾಶಮಾಡಿತು?

ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕುಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು (ಸಭಾ ಪರ್ವ, ೧೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಆ ಆಲಯದಲ್ಲಿ ಒಂದು ಕಡೆ ಮನಿಗಳ ಸಾಲು ಕಣ್ನನ್ನು ಕುಕ್ಕುತ್ತಿದ್ದವು, ಒಳಕ್ಕೆ ಹೋಗಿ ನೋಡಿದರೆ ಕಣ್ಣುಗುಡ್ಡೆಗಳು ಒಳಕ್ಕೆ ಸರಿದಂತಾಯಿತು. ನಿರ್ಮಲವಾದ ರತ್ನಗಳ ಕಾಂತಿಯಿಂದ ಮನಸ್ಸು ಮೋಹಿಸಿ ದಾರಿತಪ್ಪಿತು. ಅನೇಕ ವಿಧವಾದ ರತ್ನಗಳ ಕಾಂತಿಯು ವಿವೇಕವನ್ನು ನಾಶಮಾಡಿತು ಎಂದು ದುರ್ಯೋಧನನು ವಿವರಿಸಿದನು.

ಅರ್ಥ:
ಹೊಕ್ಕು: ಸೇರಿ; ಸಾಲು: ಆವಳಿ; ಹೊಳೆ: ಪ್ರಕಾಶಿಸು; ಮಣಿ: ಬೆಲೆಬಾಳುವ ರತ್ನ; ಮುಕ್ಕುಳಿಸು: ಹೊರಹಾಕು; ಕಂಗಳು: ಕಣ್ಣು; ನಡೆ: ಚಲಿಸು; ದಿಕ್ಕು: ದಿಶೆ; ನೋಡು: ವೀಕ್ಷಿಸು; ಮುರಿ: ಸೀಳು; ಆಲಿ: ಕಣ್ಣು; ಸರಿ: ಪಕ್ಕಕ್ಕೆ ಹೋಗು; ಉಕ್ಕು: ಹೆಚ್ಚು, ಹೊರಹೊಮ್ಮು; ಅಮಲ: ಸ್ವಚ್ಛ, ನಿರ್ಮಲ; ಚ್ಛವಿ: ಕಾಂತಿ; ಮನ: ಮನಸ್ಸು; ಸಿಕ್ಕಿ: ಬಂಧನ; ಹೊಲಬಳಿ: ದಾರಿ ಕೆಡು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಡೊಕ್ಕರಿಸು: ಗುದ್ದು, ನಾಶಮಾಡು; ಕೆಡಹು: ನಾಶಮಾದು; ಬಹುವಿಧ; ಹಲವಾರು ಬಗೆ; ರತ್ನ: ಮಣಿ; ಕಾಂತಿ: ಪ್ರಕಾಶ;

ಪದವಿಂಗಡಣೆ:
ಹೊಕ್ಕ+ ಸಾಲಲಿ +ಹೊಳೆವ +ಮಣಿರುಚಿ
ಮುಕ್ಕುಳಿಸಿದವು+ ಕಂಗಳನು+ ನಡೆ
ದಿಕ್ಕೆಲನ +ನೋಡಿದರೆ +ಮುರಿದೊಳ+ಸರಿದವ್+ಆಲಿಗಳು
ಉಕ್ಕುವ್+ಅಮಲಚ್ಛವಿಗಳಲಿ+ ಮನ
ಸಿಕ್ಕಿ+ ಹೊಲಬಳಿದುದು +ವಿವೇಕವ
ಡೊಕ್ಕರಿಸಿ+ ಕೆಡಹಿದವು +ಬಹುವಿಧ +ರತ್ನ+ಕಾಂತಿಗಳು

ಅಚ್ಚರಿ:
(೧) ಆಲಿ, ಕಂಗಳು – ಸಮನಾರ್ಥಕ ಪದ
(೨) ಮನಸ್ಸು ಚಂಚಲವಾದುದನ್ನು ಹೇಳುವ ಪರಿ – ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು
(೩) ಮಣಿರುಚಿ – ರುಚಿ ಪದದ ಬಳಕೆ