ಪದ್ಯ ೧೪: ಧರ್ಮಜನು ಕೃಷ್ಣನಿಗೆ ಏನು ಹೇಳಿದ?

ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆದನವಂಗೆ ತುಸುವ
ಲ್ಲಾ ವಿರಿಂಚಾದ್ಯಮರ ಪದವಿದು ನಿಗಮಸಿದ್ಧವಲೆ
ನಾವು ಸಾಕ್ಷಾದ್ಯಜ್ಞಮೂರ್ತಿ ಸು
ಧಾವಸೇಚನ ಧೂತ ಕಲ್ಬಿಷ
ಭಾವರರಿದೇ ಬೊಪ್ಪನವರಿಗೆ ಶಕ್ರಪದವೆಂದ (ಸಭಾ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನು ಶ್ರೀಕೃಷ್ಣನಿಗೆ, ದೇವ ನಿಮ್ಮ ಪಾದಕಮಲಗಳನ್ನು ನೆನೆಯುವವರು ಬ್ರಹ್ಮನೇ ಮೊದಲಾದ ದೇವತೆಗಳ ಪದವಿಯನ್ನು ಪಡೆಯುವುದು ಬಹು ಸುಲಭ. ನಾವಾದರೋ ಸಾಕ್ಷಾತ್ ಯಜ್ಞಮೂರ್ತಿಯಾದ ನಿನ್ನ ಕರುಣೆಯೆಂಬ ಅಮೃತದಿಂದ ನೆನೆದು ಪಾಪವನ್ನು ಕಳೆದುಕೊಂಡವರು. ನಮ್ಮ ತಂದೆಗೆ ಇಂದ್ರಲೋಕವಉ ಸಿಕ್ಕದ್ದು ದೊಡ್ಡದೇನೂ ಅಲ್ಲ ಎಂದು ಧರ್ಮಜನು ಹೇಳಿದನು.

ಅರ್ಥ:
ದೇವ: ಭಗವಂತ; ಅಂಘ್ರಿ: ಪಾದ; ಕಮಲ: ಪದ್ಮ; ನೆನೆ: ಮನನ, ಜ್ಞಾಪಿಸು; ತುಸು: ಸ್ವಲ್ಪ; ವಿರಿಂಚಿ: ಬ್ರಹ್ಮ; ಆದಿ: ಮುಂತಾದ; ಪದ: ಪದವಿ, ಸ್ಥಾನ; ನಿಗಮ: ಶೃತಿ; ಸಿದ್ಧ: ಸಾಧಿಸಿದವನು; ಸಾಕ್ಷ್ಯ: ಸಾಕ್ಷಿ, ರುಜುವಾತು, ಪುರಾವೆ; ಆದಿ: ಮೂಲ; ಯಜ್ಞ: ಕ್ರತು, ಅಧ್ವರ; ಸುಧಾ: ಅಮೃತ; ಸೇಚನೆ: ಚಿಮುಕಿಸುವಿಕೆ; ಧೂತ:ನಿರ್ಧೂತ; ಕಿಲ್ಭಿಷ: ಕಳಂಕ, ಪಾಪ; ಭಾವ: ಮನೋಧರ್ಮ, ಭಾವನೆ; ಅರಿ: ತಿಳಿ; ಬೊಪ್ಪ: ಒಡೆಯ, ಸ್ವಾಮಿ; ಶಕ್ರ: ಇಂದ್ರ;

ಪದವಿಂಗಡಣೆ:
ದೇವ+ ನಿಮ್ಮಡಿ+ಅಂಘ್ರಿ +ಕಮಲವನ್
ಆವ +ನೆನೆದನ್+ಅವಂಗೆ +ತುಸುವಲ್
ಆ +ವಿರಿಂಚ+ಆದಿ+ಅಮರ+ ಪದವಿದು+ ನಿಗಮ+ಸಿದ್ಧವಲೆ
ನಾವು +ಸಾಕ್ಷ+ಆದಿ+ಯಜ್ಞಮೂರ್ತಿ +ಸು
ಧಾವ+ಸೇಚನ+ ಧೂತ +ಕಲ್ಬಿಷ
ಭಾವರರಿದೇ +ಬೊಪ್ಪನವರಿಗೆ +ಶಕ್ರ+ಪದವೆಂದ

ಪದ್ಯ ೧೩: ಶ್ರೀಕೃಷ್ಣ ಮತ್ತು ಪಾಂಡವರ ಮಾತುಕತೆ ಹೇಗಿತ್ತು?

ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವ ಲೋಚನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ (ಸಭಾ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಂಚಪಾಂಡವರು ತಮ್ಮ ಕಿರೀಟವನ್ನು ಶ್ರೀಕೃಷ್ಣನ ಪಾದಗಳಿಗೆ ಸಮರ್ಪಿಸಿ ನಮಸ್ಕರಿಸಿದರು. ದ್ರೌಪದಿಯ ಮಧುರವಾದ ಮಾತುಗಳನ್ನು ಮನ್ನಿಸಿದನು. ಕಾರುಣ್ಯದ ದೃಷ್ಠಿಯಿಂದ ಕೃಷ್ಣನು ಎಲ್ಲರನ್ನು ಆದರಿಸಿದನು. ಎಲೈ ಜನಮೇಜಯ, ನಿನ್ನ ಪೂರ್ವಜರು ಯಾವ ಜನ್ಮದಲ್ಲಿ ಶ್ರೀಕೃಷ್ಣನನ್ನು ನಿಷ್ಠೆಯಿಂದ ಸೇವಿಸಿದ್ದರೋ ಏನೋ ತಿಳಿಯದು.

ಅರ್ಥ:
ದೇವ: ಭಗವಂತ; ಅಂಘ್ರಿ: ಪಾದ; ಮುಸುಕು: ಹೊದಿಕೆ; ಮುಕುಟ: ಕಿರೀಟ; ಆವಳಿ: ಸಾಲು; ಸತಿ: ಹೆಂಡತಿ; ಸಂಭಾಷಣೆ: ಮಾತು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ರಸ: ಸಾರ; ನಗು: ಸಂತಸ; ಮನ್ನಿಸು: ಒಪ್ಪು, ಅಂಗೀಕರಿಸು; ಓವಿ: ಒಲಿದು, ಪ್ರೀತಿಯಿಂದ; ಮುರವೈರಿ: ಕೃಷ್ಣ; ಕಾರುಣ್ಯ: ದಯೆ; ಲೋಚನ:ಕಣ್ಣು; ಭವ: ಜನ್ಮ; ಭಜಿಸು: ಆರಾಧಿಸು; ನಿಷ್ಠೆ: ಸ್ಥಿತಿ; ಶ್ರದ್ಧೆ; ಹರಿ: ಕೃಷ್ಣ; ಪದ: ಪಾದ;

ಪದವಿಂಗಡಣೆ:
ದೇವನ್+ಅಂಘ್ರಿಯ +ಮುಸುಕಿದವು+ ಮುಕು
ಟಾವಳಿಗಳ್+ಐವರ +ಸತಿಯ +ಸಂ
ಭಾಷಣೆಯ +ಮಧುರೋಕ್ತಿ+ರಸದಲಿ +ನಗುತ +ಮನ್ನಿಸಿದ
ಓವಿದನು +ಮುರವೈರಿ +ಕಾರು
ಣ್ಯಾವ +ಲೋಚನದಿಂದ +ನಿನ್ನವರ್
ಆವ +ಭವದಲಿ +ಭಜಿಸಿದರೊ +ನಿಷ್ಠೆಯಲಿ +ಹರಿಪದವ

ಅಚ್ಚರಿ:
(೧) ಹರಿ, ಮುರವೈರಿ, ದೇವ – ಕೃಷ್ಣನನ್ನು ಕರೆದ ಬಗೆ
(೨) ನಮಸ್ಕರಿಸಿದರು ಎಂದು ಹೇಳಲು – ದೇವನಂಘ್ರಿಯ ಮುಸುಕಿದವು ಮುಕುಟಾವಳಿ

ಪದ್ಯ ೧೨: ಯಾಗದ ನಂತರ ಶ್ರೀಕೃಷ್ಣನು ಪಾಂಡವರನ್ನು ಹೇಗೆ ವಿಚಾರಿಸಿದನು?

ಕರೆಸಿದನು ಹರಿ ಪಾಂಡುಪುತ್ರರ
ನರಸಿ ಸಹಿತೇಕಾಂತಭವನ ದೊ
ಳುರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
ಭರಿತವಾಯಿತೆ ರಾಜಸೂಯಾ
ಧ್ವರ ಸದಾಹುತಿ ತೃಪ್ತ್ಯಮಾಣಾ
ಮರ ಮಹೀಶ್ವರ ವಿಭವ ವಿಳಸಿತ ಪಾಂಡುಪದವೆಂದ (ಸಭಾ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲ್ಲಾ ರಾಜರು ತೆರಳಿದ ನಂತರ, ಶ್ರೀಕೃಷ್ಣನು ಪಾಂಡವರನ್ನು ಮತ್ತು ದ್ರೌಪದಿಯನ್ನು ಏಕಾಂತಭವನಕ್ಕೆ ಕರೆಸಿದನು. ಅವರು ಬಂದ ಮೇಲೆ ಪ್ರೀತಿಯಿಂದ ಮಾತುಗಳನ್ನಾಡಿ, ಒಳ್ಳೆಯ ಆಹಿತಿಯಿಂದ ದೇವತೆಗಳಿಗೆ ತೃಪ್ತಿಯನ್ನು ನೀಡಿದ ರಾಜಸೂಯ ಯಾಗವು ಸಂಪನ್ನವಾಯಿತೆ ಎಂದು ಕೇಳುತ್ತಾ, ನಿಮ್ಮ ತಂದೆ ಪಾಂಡುರಾಜನು ಈ ಯಾಗದ ಸಮಾಪ್ತಿಯಿಂದ ವೈಭವದಿಂದ ದೇವೇಂದ್ರನ ಆಸ್ಥಾನವನ್ನು ಸೇರಿದನೇ ಎಂದು ಕೇಳಿದನು.

ಅರ್ಥ:
ಕರೆಸು: ಬರೆಮಾಡು; ಹರಿ: ಕೃಷ್ಣ; ಪುತ್ರ: ಮಗ; ಅರಸಿ: ರಾಣಿ; ಸಹಿತ: ಜೊತೆ; ಏಕಾಂತ: ಒಂಟಿಯಾದ; ಭವನ: ಆಲಯ; ಉರುತರ: ಅತಿಶ್ರೇಷ್ಠ; ಪ್ರೇಮ: ಒಲವು; ರಸ: ಸಾರ; ಸಂಸಕ್ತ: ಆಸಕ್ತ; ವಚನ: ನುಡಿ, ಮಾತು; ಭರಿತ: ತುಂಬಿದ; ಅಧ್ವರ: ಯಾಗ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ತೃಪ್ತ: ಸಂತುಷ್ಟಿ; ಅಮರ: ದೇವತೆ; ಮಹೀಶ್ವರ: ರಾಜ; ವಿಭವ: ಸಿರಿ, ಸಂಪತ್ತು; ವಿಳಸಿತ: ಮನೋಹರವಾದ; ಪದ: ಸ್ಥಾನ;

ಪದವಿಂಗಡಣೆ:
ಕರೆಸಿದನು+ ಹರಿ+ ಪಾಂಡುಪುತ್ರರನ್
ಅರಸಿ +ಸಹಿತ+ಏಕಾಂತ+ಭವನ+ ದೊಳ್
ಉರುತರ+ ಪ್ರೇಮೈಕ +ರಸ+ ಸಂಸಿಕ್ತ +ವಚನದಲಿ
ಭರಿತವಾಯಿತೆ +ರಾಜಸೂಯ
ಅಧ್ವರ +ಸದ್+ಆಹುತಿ+ ತೃಪ್ತ್ಯಮಾಣ
ಅಮರ +ಮಹೀಶ್ವರ+ ವಿಭವ +ವಿಳಸಿತ+ ಪಾಂಡುಪದವೆಂದ

ಅಚ್ಚರಿ:
(೧) ಪ್ರೀತಿಯ ಭಾವ – ಉರುತರ ಪ್ರೇಮೈಕ ರಸ ಸಂಸಿಕ್ತ ವಚನದಲಿ
(೨) ದ್ರೌಪದಿಯನ್ನು ಅರಸಿ ಎಂದು ಕರೆದಿರುವುದು

ಪದ್ಯ ೧೧: ದಕ್ಷಿಣದ ಯಾವ ರಾಜರು ಯಾಗದ ನಂತರ ಹಿಂದಿರುಗಿದರು?

ಅರಸ ಕೇಳೈ ಪಾಂಡ್ಯ ಭೂಮೀ
ಶ್ವರ ಕಳಿಂಗ ಪ್ರಮುಖ ತೆಂಕಣ
ಧರಣಿಪರ ಬಳಿಯಲಿ ಘಟೋತ್ಕಚ ಯೋಜನಾಂತರವ
ವರಕುಮಾರರು ನಿಖಿಳ ಪೃಥ್ವೀ
ಶ್ವರರನವರವರುಚಿತದಲಿ ಸತು
ಕರಿಸಿ ಮರಳಿದು ಬಂದರಿಂದ್ರಪ್ರಸ್ಥಪುರವರಕೆ (ಸಭಾ ಪರ್ವ, ೧೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದಕ್ಷಿಣದ ದೊರೆಗಳಾದ ಪಾಂಡ್ಯರಾಜ, ಕಳಿಂಗರಾಜ ಮೊದಲಾದವರನ್ನು ಘಟೋತ್ಕಚನು ಒಂದು ಯೋಜನ ದೂರ ಕಳುಹಿಸಿ ಬಂದನು. ಪಾಂಡವರ ಮಕ್ಕಳು ಎಲ್ಲಾ ರಾಜರನ್ನು ಸರಿಯಾದ ರೀತಿಯಲ್ಲಿ ಸತ್ಕರಿಸಿ ಅವರವರ ಊರುಗಳಿಗೆ ಕಳಿಸಿ ಇಂದ್ರಪ್ರಸ್ಥಪುರಕ್ಕೆ ಮರಳಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಭೂಮೀಶ್ವರ: ರಾಜ; ಪ್ರಮುಖ: ಮುಖ್ಯ; ತೆಂಕಣ: ದಕ್ಷಿಣ; ಧರಣಿಪ: ರಾಜ; ಬಳಿ: ಹತ್ತಿರ; ಯೋಜನ: ಅಳತೆಯ ಪ್ರಮಾಣ; ಅಂತರ: ದೂರ; ವರ: ಶ್ರೇಷ್ಠ; ಕುಮಾರ: ಮಕ್ಕಳು; ನಿಖಿಳ: ಎಲ್ಲಾ; ಪೃಥ್ವೀಶ್ವರ: ರಾಜ; ಉಚಿತ: ಸರಿಯಾದ; ಸತುಕರಿಸು: ಗೌರವ; ಮರಳು: ಹಿಂದಿರುಗು; ಬಂದು: ಆಗಮಿಸು; ಪುರ: ಊರು;

ಪದವಿಂಗಡಣೆ:
ಅರಸ +ಕೇಳೈ +ಪಾಂಡ್ಯ +ಭೂಮೀ
ಶ್ವರ +ಕಳಿಂಗ +ಪ್ರಮುಖ +ತೆಂಕಣ
ಧರಣಿಪರ+ ಬಳಿಯಲಿ+ ಘಟೋತ್ಕಚ +ಯೋಜನ+ಅಂತರವ
ವರಕುಮಾರರು +ನಿಖಿಳ +ಪೃಥ್ವೀ
ಶ್ವರರನ್+ಅವರವರ್+ಉಚಿತದಲಿ+ ಸತು
ಕರಿಸಿ +ಮರಳಿದು+ ಬಂದರ್+ಇಂದ್ರಪ್ರಸ್ಥ+ಪುರವರಕೆ

ಅಚ್ಚರಿ:
(೧) ಅರಸ, ಭೂಮೀಶ್ವರ, ಧರಣಿಪ, ಪೃಥ್ವೀಶ್ವರ – ರಾಜ ಪದದ ಸಮನಾರ್ಥಕ ಪದಗಳು
(೨) ೧ ಸಾಲಿನ ಮೊದಲ ಮತ್ತು ಕೊನೆ ಪದ ಸಮಾನಾರ್ಥಕ ಪದ

ಪದ್ಯ ೧೦: ಯಾವ ರಾಜರು ರಾಜಸೂಯಯಾಗದ ನಂತರ ಹಿಂದಿರುಗಿದರು?

ಫಲುಗುಣನು ಧೃತರಾಷ್ಟ್ರಭೀಷ್ಮರ
ಕಳುಹಿದನು ಗುರು ಗುರುತನೂಜರ
ಬಳಿಯೊಳನಿಲಜ ಬಂದನಾ ಕೃಪನೊಡನೆ ಸಹದೇವ
ಬಲಿಯಲೈದಿದ ನಕುಲನಾ ಸೌ
ಬಲನ ಸೈಂಧವ ಶಲ್ಯನನು ಕೌ
ಸಲ ವಿರಾಟ ದ್ರುಪದ ಭಗದತ್ತಾದಿ ಭೂಪರನು (ಸಭಾ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಧೃತರಾಷ್ಟ್ರ ಭೀಷ್ಮರನ್ನು ಬೀಳ್ಕೊಟ್ಟನು. ಭೀಮನು ದ್ರೋಣ, ಅಶ್ವತ್ಥಾಮರನ್ನು ಕಳುಹಿಸಿದನು. ಕೃಪನನ್ನು ಸಹದೇವನು, ನಕುಲನು ಶಕುನಿ, ಜಯದ್ರಥ, ಶಲ್ಯ, ಕೌಸಲ, ವಿರಾಟ, ದ್ರುಪದ, ಭಗದತ್ತನೇ ಮೊದಲಾದವರನ್ನು ಕಳುಹಿಸಿದನು.

ಅರ್ಥ:
ಫಲುಗುಣ: ಅರ್ಜುನ; ಕಳುಹು: ಬೀಳ್ಕೊಡು; ಗುರು: ಆಚಾರ್ಯ; ತನೂಜ: ಮಗ; ಬಳಿ: ನಂತರ; ಅನಿಲಜ: ವಾಯುಪುತ್ರ (ಭೀಮ); ಐದು: ಹೋಗಿಸೇರು; ಭೂಪ: ರಾಜ;

ಪದವಿಂಗಡಣೆ:
ಫಲುಗುಣನು +ಧೃತರಾಷ್ಟ್ರ+ಭೀಷ್ಮರ
ಕಳುಹಿದನು +ಗುರು +ಗುರು+ತನೂಜರ
ಬಳಿಯೊಳ್+ಅನಿಲಜ +ಬಂದನಾ+ ಕೃಪನೊಡನೆ+ ಸಹದೇವ
ಬಳಿಯಲ್+ಐದಿದ +ನಕುಲನಾ+ ಸೌ
ಬಲನ +ಸೈಂಧವ +ಶಲ್ಯನನು +ಕೌ
ಸಲ +ವಿರಾಟ +ದ್ರುಪದ +ಭಗದತ್ತಾದಿ +ಭೂಪರನು

ಅಚ್ಚರಿ:
(೧) ಸೌಬಲ, ಕೌಸಲ – ೪,೫ ಸಾಲಿನ ಕೊನೆಯ ಅಕ್ಷರಗಳು