ಪದ್ಯ ೯: ರಾಜರನ್ನು ಧರ್ಮರಾಯ ಹೇಗೆ ಬೀಳ್ಕೊಟ್ಟನು?

ರಾಜವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜರಥ
ವಾಜಿ ವಿವಿಧಾಭರಣ ವಸನ ವಧೂಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ (ಸಭಾ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗಕ್ಕೆ ಬಂದಿದ್ದ ರಾಜರನ್ನೆಲ್ಲಾ ಅವರವರ ಪರಾಕ್ರಮ, ಐಶ್ವರ್ಯಕ್ಕೆ ಅನುಗುಣವಗಿ ಸರಿಯಾದ ರೀತಿಯಲ್ಲಿ ಆನೆ, ಕುದುರೆ, ರಥ, ಆಭರಣ, ವಸ್ತ್ರ, ಸ್ತ್ರೀಯರು, ಪರಿಮಳದ ವಸ್ತುಗಳನ್ನು ನೀಡಿ ಗೌರವಿಸಿ ಧರ್ಮರಾಜನು ತನ್ನ ತಮ್ಮಂದಿರೊಡನೆ ಅವರೆಲ್ಲರನ್ನು ಬೀಳ್ಕೊಟ್ಟನು. ಕೃಷ್ಣನು ಇಂದ್ರಪ್ರಸ್ಥದಲ್ಲೇ ಉಳಿದನು.

ಅರ್ಥ:
ರಾಜ: ಅರಸ; ವರ್ಗ: ಗುಂಪು; ನಿಜ: ಸತ್ಯ; ತೇಜ: ಕಾಂತಿ, ಶ್ರೇಷ್ಠತೆ; ಮಾನ: ಮರ್ಯಾದೆ, ಗೌರವ; ಉಚಿತ: ಸರಿಯಾದ; ಗಜ: ಆನೆ; ರಥ; ಬಂಡಿ; ವಾಜಿ: ಕುದುರೆ; ವಿವಿಧ: ಹಲವಾರು; ಆಭರಣ: ಒಡವೆ; ವಸನ: ಬಟ್ಟೆ; ವಧು: ಸ್ತ್ರೀ, ಹೆಣ್ಣು; ಕದಂಬ: ಪರಿಮಳ ವಸ್ತು; ಜಗತ್ಪತಿ: ಜಗತ್ತಿನ ಒಡೆಯ (ಕೃಷ್ಣ); ಉಳಿ: ತಂಗು; ಪಾರ್ಥಿವ: ರಾಜ; ಮನ್ನಿಸು: ಗೌರವಿಸು; ಅನುಜ: ತಮ್ಮ; ಕೂಡಿ: ಜೊತೆ; ಕಳುಹಿಸು: ಬೀಳ್ಕೊಡು; ಮಹೀಶ್ವರ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ರಾಜವರ್ಗವನ್+ಅವರವರ +ನಿಜ
ತೇಜ +ಮಾನ್ಯ+ಉಚಿತದ +ಗಜ+ರಥ
ವಾಜಿ +ವಿವಿಧ+ಆಭರಣ+ ವಸನ +ವಧೂ+ಕದಂಬದಲಿ
ಆ +ಜಗತ್ಪತಿ+ಉಳಿಯೆ +ಪಾರ್ಥಿವ
ರಾಜಿಯನು +ಮನ್ನಿಸಿ +ಯುಧಿಷ್ಠಿರ
ರಾಜನ್+ಅನುಜರು +ಕೂಡಿ +ಕಳುಹಿಸಿದನು +ಮಹೀಶ್ವರರ

ಅಚ್ಚರಿ:
(೧) ರಾಜ, ಪಾರ್ಥಿವ – ಸಮನಾರ್ಥಕ ಪದ
(೨) ರಾಜ – ೧, ೬ ಸಾಲಿನ ಮೊದಲ ಪದ
(೩) ವಾಜಿ, ರಾಜಿ – ಪ್ರಾಸ ಪದಗಳು

ಪದ್ಯ ೮: ಧರ್ಮಜನು ಯಾರಂತೆ ಮೆರೆದನು?

ಮನ್ನಿಸಿದನವರುಗಳನುಡುಗೊರೆ
ಹೊನ್ನು ವಿವಿಧಾಭರಣ ಪಶುಗಳ
ಲುನ್ನತಾಶೀರ್ವಾದ ವಚನದೊಳವನಿಪನ ಹರಸಿ
ಸನ್ನುತರು ತಮ್ಮಾಶ್ರಮಕೆ ಸಂ
ಪನ್ನ ಸತ್ಯರು ಮರಳಿದರು ಪ್ರತಿ
ಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ (ಸಭಾ ಪರ್ವ, ೧೨ ಸಂಧಿ, ೮ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗಕ್ಕೆ ಆಗಮಿಸಿ ನಡೆಸಿಕೊಟ್ಟ ಮುನಿಗಳಿಗೆ ಉಡುಗೊರೆ, ಬಂಗಾರ, ಆಭರಣ, ಗೋವುಗಳನ್ನು ನೀಡಿ ಧರ್ಮರಾಯನು ಗೌರವಿಸಿದನು. ಋಷಿ ಮುನಿಗಳು ಧರ್ಮರಾಜನನ್ನು ಹೆತ್ತೇಚ್ಚವಾಗಿ ಆಶೀರ್ವದಿಸಿ ತಮ್ಮ ಆಶ್ರಮಗಳಿಗೆ ಹಿಂದಿರುಗಿದರು. ರಾಜಸೂಯ ಯಾಗವನ್ನು ಸಂಪನ್ನಗೊಳಿಸಿದ ಧರ್ಮಜನು ಇಂದ್ರನಂತೆ ವೈಭವದಿಂದಿದ್ದನು.

ಅರ್ಥ:
ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಉಡುಗೊರೆ: ಕಾಣಿಕೆ, ಬಳುವಳಿ; ಹೊನ್ನು: ಚಿನ್ನ; ವಿವಿಧ: ಹಲವಾರು; ಆಭರಣ: ಒಡವೆ; ಪಶು: ಪ್ರಾಣಿ; ಉನ್ನತ: ಶ್ರೇಷ್ಠ; ಆಶೀರ್ವಾದ: ಹರಕೆ; ವಚನ: ಮಾತು, ನುಡಿ; ಅವನಿಪ: ರಾಜ; ಹರಸು: ಆಶೀರ್ವದಿಸು; ಸನ್ನುತ: ಚೆನ್ನಾಗಿ ಹೊಗಳಲ್ಪಟ್ಟವನು, ಸ್ತುತಿಸಲ್ಪಟ್ಟವನು; ಆಶ್ರಮ: ಋಷಿಗಳು ವಾಸಿಸುವ ಸ್ಥಳ; ಸಂಪನ್ನ: ಮುಗಿದ; ಸತ್ಯರು: ಋಷಿಮುನಿಗಳು, ಧರ್ಮದಲ್ಲಿ ನಡೆಯುವವರು; ಮರಳು: ಹಿಂದಿರುಗು; ಪ್ರತಿಪನ್ನ: ಒಪ್ಪಿಗೆಯಾದುದು, ಸ್ವೀಕೃತವಾದುದು; ಯಜ್ಞ: ಕ್ರತು; ವಿಲಾಸ: ಅಂದ, ಸೊಬಗು; ಒಪ್ಪು: ಸಮ್ಮತಿ; ಇಂದ್ರ: ದೇವತೆಗಳ ಒಡೆಯ, ಸುರಪತಿ; ವಿಭವ: ಸಿರಿ, ಸಂಪತ್ತು, ವೈಭವ;

ಪದವಿಂಗಡಣೆ:
ಮನ್ನಿಸಿದನ್+ಅವರುಗಳನ್+ಉಡುಗೊರೆ
ಹೊನ್ನು +ವಿವಿಧ+ಆಭರಣ+ ಪಶುಗಳಲ್
ಉನ್ನತ+ಆಶೀರ್ವಾದ+ ವಚನದೊಳ್+ಅವನಿಪನ +ಹರಸಿ
ಸನ್ನುತರು+ ತಮ್ಮಾಶ್ರಮಕೆ+ ಸಂ
ಪನ್ನ +ಸತ್ಯರು +ಮರಳಿದರು+ ಪ್ರತಿ
ಪನ್ನ +ಯಜ್ಞವಿಳಾಸನ್+ಒಪ್ಪಿದನ್+ಇಂದ್ರ +ವಿಭವದಲಿ

ಅಚ್ಚರಿ:
(೧) ಸನ್ನುತ, ಸಂಪನ್ನ, ಸತ್ಯರು – ಪದಗಳ ಬಳಕೆ
(೨) ಧರ್ಮಜನು ಮೆರೆದ ಬಗೆ – ಪ್ರತಿಪನ್ನ ಯಜ್ಞವಿಳಾಸನೊಪ್ಪಿದನಿಂದ್ರ ವಿಭವದಲಿ

ಪದ್ಯ ೭: ಧರ್ಮರಾಯನು ಮುನಿಗಳಿಗೆ ಏನು ಹೇಳಿದನು?

ಅರಸ ಮೈಯಿಕ್ಕಿದನು ಸನ್ಮುನಿ
ವರಸಮಾಜಕೆ ನಿಮ್ಮ ಕೃಪೆಯಲಿ
ಧರಣಿಪಾಧ್ವರ ಸಿದ್ಧಿಯಾಯ್ತು ನಿರಂತರಾಯದಲಿ
ಕರುಣ ನಿಮ್ಮದು ನಿಮ್ಮ ಮಿಗೆ ಸ
ತ್ಕರಿಸಲರಿಯೆನು ಹೆಚ್ಚು ಕುಂದಿನ
ಹುರುಳ ನೀಕ್ಷಿಸಲಾಗದೆಂದನು ಮುಗಿದು ಕರಯುಗವ (ಸಭಾ ಪರ್ವ, ೧೨ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮರಾಜನು ಮುನಿವರ್ಗಕ್ಕೆ ನಮಸ್ಕರಿಸುತ್ತಾ, ನಿಮ್ಮ ದಯೆ ಮತ್ತು ಕರುಣೆಯ ಆಶೀರ್ವಾದದಿಂದ ಈ ರಾಜಸೂಯಯಾಗವಉ ಸಿದ್ಧಿಸಿತು. ನಿಮ್ಮನ್ನು ಸತ್ಕರಿಸಲು ನನಗೆ ತಿಳಿಯದಾಗಿದೆ, ಏನು ಲೋಪ ದೋಷಗಳು ಬಂದರೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿರಿ ಎಂದು ತನ್ನೆರಡು ಕೈಗಳನ್ನುಮುಗಿದು ಬೇಡಿದನು.

ಅರ್ಥ:
ಅರಸ: ರಾಜ; ಮೈಯಿಕ್ಕು: ನಮಸ್ಕರಿಸು; ಮುನಿ: ಋಷಿ; ವರ: ಶ್ರೇಷ್ಠ; ಸಮಾಜ: ಗುಂಪು, ಗೋಷ್ಠಿ; ಕೃಪೆ: ಕರುಣೆ, ದಯೆ; ಧರಣಿ: ಭೂಮಿ; ಅಧ್ವರ: ಯಾಗ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ನಿರಂತರ: ಯಾವಾಗಲು; ಆಯ: ಅನುಕೂಲತೆ; ಕರುಣ: ದಯೆ; ಮಿಗೆ: ಮತ್ತು, ಅಧಿಕವಾಗಿ; ಸತ್ಕರಿಸು: ಉಪಚರಿಸು; ಅರಿ: ತಿಳಿ; ಹೆಚ್ಚು: ಅಧಿಕ; ಕುಂದು: ಹುಳುಕು, ತೊಂದರೆ; ಹುರುಳು: ಶಕ್ತಿ, ಸಾಮರ್ಥ್ಯ; ಈಕ್ಷಿಸು: ನೋಡು; ಮುಗಿ: ಕಣ್ಣನ್ನು ಮುಚ್ಚಿಕೊಳ್ಳು, ಕೈಗಳೆರಡನ್ನೂ ಜೋಡಿಸು; ; ಕರ: ಹಸ್ತ; ಯುಗ: ಎರಡು;

ಪದವಿಂಗಡಣೆ:
ಅರಸ +ಮೈಯಿಕ್ಕಿದನು +ಸನ್ಮುನಿ
ವರ+ಸಮಾಜಕೆ +ನಿಮ್ಮ +ಕೃಪೆಯಲಿ
ಧರಣಿಪ+ಅಧ್ವರ +ಸಿದ್ಧಿಯಾಯ್ತು +ನಿರಂತರಾಯದಲಿ
ಕರುಣ +ನಿಮ್ಮದು+ ನಿಮ್ಮ +ಮಿಗೆ+ ಸ
ತ್ಕರಿಸಲ್+ಅರಿಯೆನು +ಹೆಚ್ಚು +ಕುಂದಿನ
ಹುರುಳನ್ +ಈಕ್ಷಿಸಲಾಗದ್+ಎಂದನು +ಮುಗಿದು +ಕರಯುಗವ

ಅಚ್ಚರಿ:
(೧) ಮುಗಿದ ಕರಯುಗವ, ಮೈಯಿಕ್ಕಿದನು – ನಮಸ್ಕರಿಸಿದನು ಎಂದು ಹೇಳುವ ಪರಿ

ಪದ್ಯ ೬:ಊಟದ ವಿನಿಯೋಗವು ಹೇಗೆ ನಡೆಯುತ್ತಿತ್ತು?

ಓಗರದ ರಾಶಿಗಳ ಗಿರಿ ಕಂ
ಡಾಗಲಂತಿರೆ ಮರಳಿ ಕಾಣೆನು
ಸಾಗರದವೊಲೆ ದಧಿ ಘೃತಾದಿ ಮಹಾಪ್ರವಾಹ ಚಯ
ಅಗಳಂತಿರೆ ಬತ್ತುವುವು ನಿಮಿಷಾ
ಗಮಕೆ ತುಂಬುವವು ಯಮಜನ
ಯಾಗಲಕ್ಷ್ಮಿಯನಲ್ಪಮತಿ ಬಣ್ಣಿಸುವಡರಿದೆಂದ (ಸಭಾ ಪರ್ವ, ೧೨ ಸಂಧಿ, ೬ ಪದ್ಯ)

ತಾತ್ಪರ್ಯ:
ಬೆಟ್ಟದಂತಿದ್ದ ಅನ್ನದ ರಾಶಿಗಳು ಕಂಡಕೂಡಲೇ ಇಲ್ಲದಂತಾಗುತ್ತಿದ್ದವು. ಹಾಲು, ಮೊಸರು, ತುಪ್ಪಗಳ ಪ್ರವಾಹ ಒಂದು ನಿಮಿಷಕ್ಕೆ ವಿನಿಯೋಗವಾದರೆ, ಮರುನಿಮಿಷವೇ ತುಂಬುತ್ತಿತ್ತು. ಧರ್ಮಜನ ಯಾಗಲಕ್ಷ್ಮಿಯನ್ನು ಅಲ್ಪಮತಿಗಳು ಹೇಗೆತಾನೆ ವರ್ಣಿಸಲು ಸಾಧ್ಯ?

ಅರ್ಥ:
ಓಗರ: ಅನ್ನ, ಆಹಾರ, ಊಟ; ರಾಶಿ: ಗುಂಪು, ಸಮೂಹ; ಗಿರಿ: ಬೆಟ್ಟ; ಕಂಡು: ನೋಡು; ಮರಳಿ: ಮತ್ತೆ; ಕಾಣು: ತೋರು; ಸಾಗರ: ಸಮುದ್ರ; ದಧಿ: ಮೊಸರು; ಘೃತ: ತುಪ್ಪ; ಪ್ರವಾಹ: ಹರಿಯುವಿಕೆ, ಪ್ರವಹಿಸುವಿಕೆ; ಮಹಾ: ದೊಡ್ಡ; ಚಯ: ಸಮೂಹ, ರಾಶಿ; ಬತ್ತು: ಒಣಗು, ಆರು, ಬರಿದಾಗು; ನಿಮಿಷ: ಕ್ಷಣ; ಆಗಮ: ಬರುವ; ತುಂಬು: ಪೂರ್ಣವಾಗು; ಯಾಗ: ಕ್ರತು; ಲಕ್ಷ್ಮಿ: ದೇವತೆ; ಅಲ್ಪಮತಿ: ತುಚ್ಛ,ಚಿಕ್ಕದು; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ಓಗರದ +ರಾಶಿಗಳ+ ಗಿರಿ+ ಕಂ
ಡಾಗಲಂತಿರೆ +ಮರಳಿ +ಕಾಣೆನು
ಸಾಗರದವೊಲೆ +ದಧಿ +ಘೃತಾದಿ +ಮಹಾಪ್ರವಾಹ +ಚಯ
ಆಗಳಂತಿರೆ+ ಬತ್ತುವುವು +ನಿಮಿ
ಷಾಗಮಕೆ+ ತುಂಬುವವು +ಯಮಜನ
ಯಾಗಲಕ್ಷ್ಮಿಯನ್+ಅಲ್ಪಮತಿ +ಬಣ್ಣಿಸುವಡ್+ಅರಿದೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಗರದ ರಾಶಿಗಳ ಗಿರಿ, ಸಾಗರದವೊಲೆ ದಧಿ, ಘೃತಾದಿ
(೨) ಬತ್ತು, ತುಂಬು – ವಿರುದ್ಧಾರ್ಥಕ ಪದ

ಪದ್ಯ ೫: ಭೋಜನದ ಪ್ರಮಾಣ ಹೇಗಿತ್ತು?

ಏಸು ಲಕ್ಷವದೇಸು ಕೋಟಿಯ
ದೇಸು ನಿರ್ಬುದವೇಸು ಖರ್ವವ
ದೇಸು ಪದ್ಮದ್ವಿಜರ ಗಣನೆಯನರಿವರಾರದನು
ಏಸು ಭಕ್ಷ್ಯೋದನದ ಪರ್ವತ
ರಾಶಿ ದಧಿ ಘೃತ ದುಗ್ಧ ಮಧು ವಾ
ರಾಸಿಯೊಡ್ಡಣೆ ಮೆರೆದುದಿಂದ್ರ ಪ್ರಸ್ಥ ನಗರಿಯಲಿ (ಸಭಾ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದಲ್ಲಿ ಎಷ್ಟು ಲಕ್ಷ, ಕೋಟಿ, ನಿರ್ಬುದ, ಖರ್ವ, ಪದ್ಮಗಳಷ್ಟು ಬ್ರಾಹ್ಮಣರು ಊಟ ಮಾಡಿದರೋ ಲೆಕ್ಕವಿಲ್ಲ. ಭಕ್ಷ್ಯ, ಅನ್ನಗಳ ಪರ್ವತರಾಶಿಗಳು ಕಂಡವು. ಎಷ್ಟು ಹಾಲು, ಮೊಸರು, ಜೇನುತುಪ್ಪಗಳ ಸಮುದ್ರಗಳಿದ್ದವೋ ತಿಳಿಯದು.

ಅರ್ಥ:
ಏಸು: ಎಷ್ಟು; ನಿರ್ಬುದ: ದೊಡ್ಡ ಸಂಖ್ಯೆ; ಖರ್ವ: ಮುರಿದ, ಕುಳ್ಳನಾದ, ಕುಬ್ಜನಾದ; ಪದ್ಮ: ಕಮಲ; ದ್ವಿಜ: ಬ್ರಾಹ್ಮಣ; ಗಣನೆ: ಎಣಿಕೆ; ಅರಿ: ತಿಳಿ; ಭಕ್ಷ: ತಿಂಡಿ, ಭಕ್ಷ್ಯ, ಆಹಾರ, ಉಣಿಸು; ಪರ್ವತ: ಬೆಟ್ಟ; ರಾಶಿ: ಗುಪ್ಪೆ, ಬಟ್ಟಲು; ದಧಿ: ಮೊಸರು; ಘೃತ: ತುಪ್ಪ; ದುಗ್ಧ: ಹಾಲು; ಮಧು: ಜೇನುತುಪ್ಪ; ವಾರಾಸಿ: ಸಮುದ್ರ; ಒಡ್ಡಣ: ಗುಂಪು, ಸಮೂಹ; ಮೆರೆ: ಹೊಳೆ, ಪ್ರಕಾಶಿಸು; ನಗರ: ಊರು;

ಪದವಿಂಗಡಣೆ:
ಏಸು+ ಲಕ್ಷವದ್+ಏಸು +ಕೋಟಿಯದ್
ಏಸು +ನಿರ್ಬುದವ್+ಏಸು +ಖರ್ವವದ್
ಏಸು +ಪದ್ಮ+ದ್ವಿಜರ+ ಗಣನೆಯನ್+ಅರಿವರ್+ಆರದನು
ಏಸು+ ಭಕ್ಷ್ಯೋದನದ +ಪರ್ವತ
ರಾಶಿ +ದಧಿ +ಘೃತ +ದುಗ್ಧ +ಮಧು +ವಾ
ರಾಸಿಯೊಡ್ಡಣೆ+ ಮೆರೆದುದ್+ಇಂದ್ರಪ್ರಸ್ಥ+ ನಗರಿಯಲಿ

ಅಚ್ಚರಿ:
(೧) ಏಸು – ೧-೪ ಸಾಲಿನ ಮೊದಲ ಪದ
(೨) ಪರ್ವತ, ವಾರಾಸಿ ಎಂಬ ಉಪಮಾನಗಳ ಪ್ರಯೋಗ