ಪದ್ಯ ೭೬: ಶ್ರೀಕೃಷ್ಣನು ಯಾವ ಆಯುಧವನ್ನು ಹಿಡಿದನು?

ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪವಿ
ಭೇದ ಶಸ್ತ್ರಾಸ್ತ್ರೌಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ (ಸಭಾ ಪರ್ವ, ೧೧ ಸಂಧಿ, ೭೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ ಶಿಶುಪಾಲರು ಅನೇಕ ಅಸ್ತ್ರಗಳನ್ನು ಪ್ರಯೋಗಿಸಿ ಕಾದಿದರು. ಪರಸ್ಪರ ರಥಗಲನ್ನು ಬಿಲ್ಲುಗಳನ್ನೂ ಕತ್ತರಿಸುವುದು, ಎದುರಾಳಿಗಳ ಶಸ್ತ್ರಾಸ್ತ್ರಗಳನ್ನು ನಾಶಮಾಡುವುದು ಈ ರೀತಿಯಾಗಿ ಬಹಳ ಸಮಯ ಯುದ್ಧವಾಯಿತು. ಶ್ರೀಕೃಷ್ಣನು ಮೂರುವೇದಗಳು, ಮೂರುಮೂರ್ತಿಗಳು ಆತ್ಮವಾದ ಸುದರ್ಶನ ಚಕ್ರವನ್ನು ಹಿಡಿದನು.

ಅರ್ಥ:
ಕಾದಿದರು: ಕಾವಲಿರು, ನೋಡು; ವಿವಿಧ: ಹಲವಾರು; ಅಸ್ತ್ರ: ಶಸ್ತ್ರ, ಆಯುಧ; ವಿದ್ಯ: ಜ್ಞಾನ; ಭೇದ: ಮುರಿ, ಸೀಳು; ರಥ: ಬಂಡಿ; ಭಂಗ: ಮುರಿಯುವಿಕೆ, ಚೂರು ಮಾಡುವಿಕೆ; ಚಾಪ: ಬಿಲ್ಲು; ವಿಭೇದ: ಒಡೆಯುವಿಕೆ, ಬೇರ್ಪಡಿಸುವಿಕೆ; ಔಘ: ಗುಂಪು, ಸಮೂಹ; ಸಂಹರಣ: ಅಳಿವು, ನಾಶ; ಪ್ರಪಂಚ: ಜಗತ್ತು; ದುರಾತ್ಮ: ದುಷ್ಟ; ನಿಲಿಸು: ತಡೆ; ನಿಮಿಷ: ಕ್ಷಣ; ದಯೆ: ಕರುಣೆ; ಅಂಬುಧಿ: ಸಾಗರ; ತುಡುಕು: ಹೋರಾಡು, ಸೆಣಸು; ತ್ರೈ: ಮೂರು; ವೇದ: ಶೃತಿ; ಮೂರ್ತಿ: ಆಕಾರ, ಸ್ವರೂಪ; ಆತ್ಮ: ಜೀವ; ವರ: ಶ್ರೇಷ್ಠ; ಸುದರ್ಶನ: ಕೃಷ್ಣನ ಆಯುಧ, ಚಕ್ರ;

ಪದವಿಂಗಡಣೆ:
ಕಾದಿದರು+ ವಿವಿಧ+ಅಸ್ತ್ರ +ವಿದ್ಯಾ
ಭೇದದಲಿ+ ರಥಭಂಗ +ಚಾಪ+ವಿ
ಭೇದ +ಶಸ್ತ್ರಾಸ್ತ್ರ+ ಔಘ +ಸಂಹರಣ+ ಪ್ರಪಂಚದಲಿ
ಈ +ದುರಾತ್ಮನ +ನಿಲಿಸಿ+ ನಿಮಿಷದೊಳ್
ಆ+ ದಯಾಂಬುಧಿ +ತುಡುಕಿದನು +ತ್ರೈ
ವೇದಮಯ +ಮೂರ್ತಿತ್ರಯಾತ್ಮಕ+ ವರ+ ಸುದರ್ಶನವ

ಅಚ್ಚರಿ:
(೧) ಸುದರ್ಶನದ ವರ್ಣನೆ – ತ್ರೈವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ

ಪದ್ಯ ೭೫: ನಾರದರು ಧರ್ಮರಾಯನಿಗೇನು ಹೇಳಿದರು?

ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ಬೇಡೆಂದು ಘನ ಸ
ನ್ನಾಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು (ಸಭಾ ಪರ್ವ, ೧೧ ಸಂಧಿ, ೭೫ ಪದ್ಯ)

ತಾತ್ಪರ್ಯ:
ನಾರದರು ಧರ್ಮರಾಯನ ಪ್ರಶ್ನೆಯನ್ನು ಉತ್ತರಿಸುತ್ತಾ, ಪರಮಾತ್ಮ ಕೃಷ್ಣನು ನಿಮಗೆ ಜೀವಸ್ನೇಹಿತನಾಗಿರಲು ನಿಮಗೆ ಯಾವ ಚಿಂತೆಯೂ ಬೇಡ. ಈ ಉತ್ಪಾತಗಳು ಶಿಶುಪಾಲನ ವಧೆಗೋ ಇನ್ನೇತಕ್ಕೋ ಎಂದು ಬಲ್ಲವರಾರು? ನೀನು ಊಹಿಸಲು ಹೋಗಬೇಡ ಎಂದು ನಾರದರು ಗಂಭೀರವಾಗಿಯೇ ಧರ್ಮರಾಯನಿಗೆ ಹೇಳಿದರು. ಶಸ್ತ್ರಸನ್ನದ್ಧರಾದ ಶ್ರೀಕೃಷ್ಣ ಶಿಶುಪಾಲರು ಯುದ್ಧ ಮಾಡಿದರು.

ಅರ್ಥ:
ಹರಿ: ವಿಷ್ಣು; ಜೀವ: ಉಸಿರು, ಬದುಕು; ಸ್ನೇಹಿತ: ಮಿತ್ರ; ಚಿಂತೆ: ಯೋಚನೆ; ವಿಮೋಹ: ಭ್ರಮೆ, ಭ್ರಾಂತಿ; ಚೇಷ್ಟೆ: ಚೆಲ್ಲಾಟ; ವಧೆ: ಸಾವು; ಬಲ್ಲರು: ತಿಳಿದವರು; ಊಹೆ: ಎಣಿಕೆ, ಅಂದಾಜು; ಮುನಿ: ಋಷಿ; ಮುನಿಪತಿ: ನಾರದ; ಗಾಹು: ತಿಳುವಳಿಕೆ, ಮೋಸ, ವಂಚನೆ; ಘನ: ಮಹತ್ತ್ವವುಳ್ಳ; ಸನ್ನಾಹ: ಬಂಧನ; ಎಚ್ಚು: ಬಾಣಪ್ರಯೋಗ ಮಾಡು; ಅಂತಕ: ಸಾವು, ಮೃತ್ಯುದೇವತೆ;

ಪದವಿಂಗಡಣೆ:
ಆ +ಹರಿಯೆ +ನಿಮಗಿಂದು +ಜೀವ
ಸ್ನೇಹಿತನು +ನಿಮಗಾವ+ ಚಿಂತೆ +ವಿ
ಮೋಹ +ಚೇಷ್ಟೆಗಳ್+ಇವನ +ವಧೆಗೋ +ಬಲ್ಲರಾರ್+ಇದನು
ಊಹಿಸಲು +ಬೇಡೆಂದು +ಮುನಿಪತಿ
ಗಾಹಿನಲಿ+ ಬೇಡೆಂದು +ಘನ +ಸ
ನ್ನಾಹರ್+ಎಚ್ಚಾಡಿದರು +ಶಿಶುಪಾಲಕ+ ಮುರಾಂತಕರು

ಅಚ್ಚರಿ:
(೧) ಕೃಷ್ಣನ ಲೀಲೆಯನ್ನು ಹೇಳುವ ಪರಿ – ವಿಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು

ಪದ್ಯ ೨೫: ಭೀಮನ ಕೋಪವು ಯಾರನ್ನು ಯುದ್ಧಕ್ಕೆ ಸನ್ನದ್ಧ ಮಾಡಿತು?

ಪವನತನಯನ ಖತಿಯ ಝಾಡಿಯ
ಹವಣ ಕಂಡರು ಮಸಗಿದರು ಯಾ
ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ
ತವತವಗೆ ಪಾಂಚಾಲ ಕೇಕಯ
ನಿವಹ ಪಾಂಡವಸುತರು ಮೊದಲಾ
ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ (ಸಭಾ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಮನ ಕೋಪದ ಜೋರನ್ನು ಕಂಡು ಯಾದವ ಸೈನ್ಯದಲ್ಲಿ ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಕೃತವರ್ಮ ಮೊದಲಾದವರು ಪಾಂಚಾಲರೂ ಕೇಕಯರೂ ಉಪಪಾಂಡವರೂ ಮೊದಲಾದ ವೀರರೆಲ್ಲರೂ ಯುದ್ಧಸನ್ನದ್ಧರಾದರು. ಕ್ಷಣಮಾತ್ರದಲ್ಲಿ ಭಾರೀ ಸದ್ದು ಆ ಸ್ಥಾನವನ್ನು ತುಂಬಿತು.

ಅರ್ಥ:
ಪವನ: ವಾಯು; ತನಯ: ಮಗ; ಪವನತನಯ: ಭೀಮ; ಖತಿ: ಕೋಪ; ಝಾಡಿ: ಕಾಂತಿ; ಹವಣ: ಮಿತಿ, ಅಳತೆ; ಕಂಡು: ನೋಡು; ಮಸಗು: ಹರಡು, ಕೆರಳು; ಪಡೆ: ಗುಂಪು; ತವತವಗೆ: ಅವರವರಲ್ಲಿ; ನಿವಹ: ಗುಂಪು; ಸುತ: ಮಗ; ಅನುವು: ಆಸ್ಪದ, ಅನುಕೂಲ; ಗಜಬಜ: ಗಲಾಟೆ, ಕೋಲಾಹಲ; ನಿಮಿಷ: ಕ್ಷಣ;

ಪದವಿಂಗಡಣೆ:
ಪವನತನಯನ +ಖತಿಯ +ಝಾಡಿಯ
ಹವಣ +ಕಂಡರು+ ಮಸಗಿದರು+ ಯಾ
ದವರ +ಪಡೆಯಲಿ +ಸಾಂಬ+ ಸಾತ್ಯಕಿ +ಕಾಮ +ಕೃತವರ್ಮ
ತವತವಗೆ+ ಪಾಂಚಾಲ+ ಕೇಕಯ
ನಿವಹ+ ಪಾಂಡವಸುತರು +ಮೊದಲಾ
ದವಗಡೆಯರ್+ಅನುವಾಗೆ +ಗಜಬಜವಾಯ್ತು +ನಿಮಿಷದಲಿ

ಅಚ್ಚರಿ:
(೧) ತನಯ, ಸುತ; ಪಡೆ, ನಿವಹ – ಸಮನಾರ್ಥಕ ಪದ

ಪದ್ಯ ೭೪: ನಾರದರು ಧರ್ಮರಾಯನಿಗೆ ಯಾವ ಪರಿಹಾರ ಸೂಚಿಸಿದರು?

ಈ ನೆಗಳಿದುತ್ಪಾತ ಶಾಂತಿ ವಿ
ಧಾನವೇನೆನೆ ಕೃಷ್ಣ ಚೇಷ್ಟೆಯೆ
ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ
ಮಾನನಿಧಿಯೇ ವೇದಸೂಕ್ತ ವಿ
ಧಾನದಲಿ ಪರಿಹಾರ ವಿಷ್ವ
ಕ್ಸೇನಮಯವೀ ಲೋಕಯಾತ್ರೆಗಳೆಂದನಾ ಮುನಿಪ (ಸಭಾ ಪರ್ವ, ೧೧ ಸಂಧಿ, ೭೪ ಪದ್ಯ)

ತಾತ್ಪರ್ಯ:
ಭಯಗೊಂಡ ಧರ್ಮರಾಯನು ನಾರದರನ್ನು ಈಗ ಬಂದ ಈ ಉಪ್ತಾತಗಳಿಗೆ ಯಾವ ಶಾಂತಿಯನ್ನು ಮಾಡಬೇಕೆಂದು ಕೇಳಿದನು. ನಾರದರು, ಈ ಪ್ರಪಂಚದಲ್ಲಿ ಹುಟ್ಟು ಹೆಚ್ಚಳ, ನಾಶಗಳಿಗೆ ಶ್ರೀಕೃಷ್ಣನೇ ಪ್ರೇರಣೆ, ಇದಕ್ಕೆ ವೇದೋಕ್ತ ವಿಧಾನದಲ್ಲಿಯೇ ಪರಿಹಾರವಿದೆ, ಈ ಲೋಕಯಾತ್ರೆಯು ವಿಷ್ಣುಮಯ ಎಂದನು.

ಅರ್ಥ:
ನೆಗಳು: ಆಚರಿಸು, ಉಂಟಾಗು; ಉತ್ಪಾತ: ಮೇಲಕ್ಕೆ ಹಾರುವುದು; ವಿಧಾನ: ರೀತಿ, ಬಗೆ; ಚೇಷ್ಟೆ: ಚೆಲ್ಲಾಟ; ಹಾನಿ: ಹಾಳು, ನಾಶ; ವೃದ್ಧಿ: ಹೆಚ್ಚಳ; ವಿನಾಶ: ಹಾಳು; ಅಭ್ಯುದಯ: ಅಭಿವೃದ್ಧಿ, ಹೆಚ್ಚಳ; ಪ್ರಪಂಚ: ಜಗತ್ತು; ಮಾನ: ಗೌರವ; ನಿಧಿ: ಐಶ್ವರ್ಯ; ವೇದ: ಜ್ಞಾನ, ಶೃತಿ; ಸೂಕ್ತ: ಒಳ್ಳೆಯ ಮಾತು, ಹಿತವಚನ; ವಿಧಾನ: ರೀತಿ, ಕ್ರಮ; ಪರಿಹಾರ: ನಿವಾರಣೆ; ವಿಷ್ವಕ್ಸೇನ: ನಾರಾಯಣ, ಯಾದವ ಸೇನಾಧಿಪತಿ; ಮಯ: ತುಂಬಿದ; ಲೋಕ: ಜಗತ್ತು; ಯಾತ್ರೆ: ಪ್ರಯಾಣ; ಮುನಿ: ಋಷಿ;

ಪದವಿಂಗಡಣೆ:
ಈ+ ನೆಗಳಿದ್+ಉತ್ಪಾತ +ಶಾಂತಿ +ವಿ
ಧಾನವ್+ಏನ್+ಎನೆ+ ಕೃಷ್ಣ+ ಚೇಷ್ಟೆಯೆ
ಹಾನಿ+ ವೃದ್ಧಿ+ ವಿನಾಶವ್+ಅಭ್ಯುದಯ +ಪ್ರಪಂಚದಲಿ
ಮಾನನಿಧಿಯೇ +ವೇದಸೂಕ್ತ +ವಿ
ಧಾನದಲಿ+ ಪರಿಹಾರ +ವಿಷ್ವ
ಕ್ಸೇನಮಯವೀ+ ಲೋಕಯಾತ್ರೆಗಳ್+ಎಂದನಾ +ಮುನಿಪ

ಅಚ್ಚರಿ:
(೧) ಧರ್ಮರಾಯನನ್ನು ಮಾನನಿಧಿ ಎಂದು ಕರೆದಿರುವುದು
(೨) ಕೃಷ್ಣ, ವಿಷ್ವಕ್ಸೇನ – ಸಮನಾರ್ಥಕ ಹೆಸರುಗಳು

ಪದ್ಯ ೭೩: ಉತ್ಪಾತವುಂಟಾಗಲು ಕಾರಣವೇನು?

ಬೆದರಿದನು ಯಮಸೂನು ಭಯದಲಿ
ಗದಗದಿಸಿ ನಾರದನ ಕೇಳಿದ
ನಿದನಿದೇನೀ ಪ್ರಕೃತಿ ವಿಕೃತಿಯ ಸಕಳ ಚೇಷ್ಟೆಗಳು
ಇದು ಕಣಾ ಚೈದ್ಯಾದಿಗಳ ವಧೆ
ಗುದುಭವಿಸಿದುದಲೇ ಮುರಾರಿಯೊ
ಳುದಯಿಸುವವುತ್ಪಾತ ಚೇಷ್ಟೆಗಳೆಂದನಾ ಮುನಿಪ (ಸಭಾ ಪರ್ವ, ೧೧ ಸಂಧಿ, ೭೩ ಪದ್ಯ)

ತಾತ್ಪರ್ಯ:
ವೈಶಂಪಾಯರು ಶಿಶುಪಾಲ ಕೃಷ್ಣರ ಯುದ್ಧವನ್ನು ಜನಮೇಜಯನಿಗೆ ವಿವರಿಸುತ್ತಾ, ಈ ವಿಚಿತ್ರ ಆಗುಹೋಗುಗಳನ್ನು ನೋಡಿದ ಯುಧಿಷ್ಥಿರನು ಹೆದರಿದನು, ನಡುಗುತ್ತಾ ನಾರದರನ್ನು ಕೇಳಿದ, ಏನಿವು, ಹೀಗೆ ನಡೆಯಲು ಕಾರಣವೇನೆಂದು. ನಾರದರಉ ಶಿಶುಪಾಲನೇ ಮೊದಲಾದವರ ವಧಾಕಾಲದಲ್ಲಿ ಶ್ರೀಕೃಷ್ಣನಿಂದಲೇ ಈ ಉತ್ಪಾತಗಳುಂಟಾಗುತ್ತಿವೆ ಎಂದು ಹೇಳಿದರು.

ಅರ್ಥ:
ಬೆದರು: ಹೆದರು, ಭಯಭೀತನಾಗು; ಸೂನು: ಮಗ; ಭಯ: ಅಂಜಿಕೆ; ಗದಗದಿಸು: ನಡುಗು; ಕೇಳು: ಆಲಿಸು; ಪ್ರಕೃತಿ: ಮೂಲಸ್ವರೂಪ; ವಿಕೃತಿ: ವ್ಯತ್ಯಾಸ, ಮಾರ್ಪಾಡು; ಸಕಳ: ಎಲ್ಲಾ; ಚೇಷ್ಟೆ: ಸರಸ, ಚೆಲ್ಲಾಟ; ಕಣಾ: ಕಾರಣ; ಚೈದ್ಯ: ಶಿಶುಪಾಲ; ಆದಿ: ಮುಂತಾದ; ವಧೆ: ಸಾವು; ಉದುಭವಿಸು: ಹುಟ್ಟು; ಮುರಾರಿ: ಕೃಷ್ಣ; ಉದಯಿಸು: ಹುಟ್ಟು; ಉತ್ಪಾತ: ಅಪಶಕುನ, ಆಕಸ್ಮಿಕವಾದ ಘಟನೆ; ಮುನಿಪ: ಋಷಿ;

ಪದವಿಂಗಡಣೆ:
ಬೆದರಿದನು +ಯಮಸೂನು +ಭಯದಲಿ
ಗದಗದಿಸಿ+ ನಾರದನ+ ಕೇಳಿದನ್
ಇದನ್+ಇದೇನ್+ಈ+ ಪ್ರಕೃತಿ+ ವಿಕೃತಿಯ +ಸಕಳ +ಚೇಷ್ಟೆಗಳು
ಇದು+ ಕಣಾ +ಚೈದ್ಯಾದಿಗಳ+ ವಧೆಗ್
ಉದುಭವಿಸಿದುದಲೇ+ ಮುರಾರಿಯೊಳ್
ಉದಯಿಸುವವ್+ಉತ್ಪಾತ +ಚೇಷ್ಟೆಗಳೆಂದನಾ +ಮುನಿಪ

ಅಚ್ಚರಿ:
(೧) ಪ್ರಕೃತಿ, ವಿಕೃತಿ – ಪ್ರಾಸ ಪದ
(೨) ಉದುಭವಿಸು, ಉದಯಿಸು – ಸಾಮ್ಯಾರ್ಥಪದಗಳ ಬಳಕೆ
(೩) ಹೆದರುವಿಕೆಯನ್ನು ಚಿತ್ರಿಸುವ ಬಗೆ – ಭಯದಲಿ ಗದಗದಿಸಿ

ಪದ್ಯ ೭೨: ಇಂದ್ರಪ್ರಸ್ಥದ ನಗರದಲ್ಲಾದ ವಿಚಿತ್ರ ಬದಲಾವಣೆಗಳಾವುವು?

ನೆಳಲು ಸುತ್ತಲು ಸುಳಿದುದಿನಮಂ
ಡಳಕೆ ಕಾಳಿಕೆಯಾಯ್ತು ಫಲದಲಿ
ಫಲದ ಬೆಳವಿಗೆ ಹೂವಿನಲಿ ಹೂವಾಯ್ತು ತರುಗಳಲಿ
ತಳಿತ ಮರನೊಣಗಿದವು ಕಾಷ್ಠಾ
ವಳಿಗಳುರೆ ತಳಿತವು ತಟಾಕದ
ಸಲಿಲವುಕ್ಕಿತು ಪಾಂಡುಪುತ್ರರ ಪುರದವಳಯದಲಿ (ಸಭಾ ಪರ್ವ, ೧೧ ಸಂಧಿ, ೭೨ ಪದ್ಯ)

ತಾತ್ಪರ್ಯ:
ಪಾಂಡವರ ಪುರವಾದ ಇಂದ್ರಪ್ರಸ್ಥದ ಪ್ರದೇಶದ ಸುತ್ತಲೂ ನೆರಳು ಕಾಣಿಸಿತು, ಸೂರ್ಯ ಮಂಡಲವು ಕಪ್ಪಾಯಿತು, ಒಂದು ಹಣ್ಣಿನಲ್ಲಿ ಮತ್ತೊಂದು ಹಣ್ಣು, ಒಂದು ಹೂವಿನಲ್ಲಿ ಮತ್ತೊಂದು ಹೂವು ಕಾಣಿಸಿತು, ಚಿಗುರಿದ ಮರಗಳು ಬಾಡಿದವು, ಬಾಡಿದ ಕಟ್ಟಿಗೆಗಳಲ್ಲಿ ವಿಶೇಷವಾಗಿ ಚಿಗುರು ಮೂಡಿತು, ಕೆರೆ ಬಾವಿಗಳ ನೀರು ಉಕ್ಕಿ ಹೊರಹರಿಯಿತು.

ಅರ್ಥ:
ನೆಳಲು: ನೆರಳು; ಸುತ್ತ: ಎಲ್ಲಾ ಕಡೆ; ಸುಳಿ: ಕಾಣಿಸು; ಇನ: ಸೂರ್ಯ; ಮಂಡಲ: ವರ್ತುಲಾಕಾರ; ಕಾಳಿಕೆ: ಕತ್ತಲು; ಫಲ: ಹಣ್ಣು; ಬೆಳವು: ಚಿಗುರು, ವಿಕಸಿಸು; ಹೂವು: ಪುಷ್ಪ; ತರು: ಮರ; ತಳಿತ: ಚಿಗುರಿದ; ಮರ: ತರು,ವೃಕ್ಷ; ಒಣಗು: ಜೀವರಹಿತವಾಗು, ಬರಡಾಗು; ಕಾಷ್ಠ: ಕಟ್ಟಿಗೆ, ಸೌದೆ; ಆವಳಿ: ಗುಂಪು; ಉರೆ: ಹೆಚ್ಚು, ವಿಶೇಷ; ತಟಾಕ: ಕೆರೆ, ಜಲಾಶಯ; ಸಲಿಲ: ನೀರು; ಉಕ್ಕು: ಹೆಚ್ಚಾಗು; ಪುರ: ಊರು; ವಳಯ: ಆವರಣ;

ಪದವಿಂಗಡಣೆ:
ನೆಳಲು+ ಸುತ್ತಲು +ಸುಳಿದುದ್+ಇನ+ಮಂ
ಡಳಕೆ +ಕಾಳಿಕೆಯಾಯ್ತು +ಫಲದಲಿ
ಫಲದ+ ಬೆಳವಿಗೆ+ ಹೂವಿನಲಿ+ ಹೂವಾಯ್ತು +ತರುಗಳಲಿ
ತಳಿತ+ ಮರನ್+ಒಣಗಿದವು+ ಕಾಷ್ಠಾ
ವಳಿಗಳ್+ಉರೆ +ತಳಿತವು+ ತಟಾಕದ
ಸಲಿಲವ್+ಉಕ್ಕಿತು +ಪಾಂಡುಪುತ್ರರ+ ಪುರದ+ವಳಯದಲಿ

ಅಚ್ಚರಿ:
(೧) ತಳಿತ ಪದದ ಬಳಕೆ – ತಳಿತ ಮರನೊಣಗಿದವು ಕಾಷ್ಠಾವಳಿಗಳುರೆ ತಳಿತವು
(೨) ಸೂರ್ಯ ಕಾಣಿಸಲಿಲ್ಲ ಎಂದು ಹೇಳಲು – ಇನಮಂಡಳಕೆ ಕಾಳಿಕೆಯಾಯ್ತು

ಪದ್ಯ ೭೧: ಬೆಳಗಿನ ಆಗಸದಲ್ಲಿ ಏನು ಕಂಡವು?

ನಡುಗಿತವನಿಯಕಾಲದಲಿ ಬರ
ಸಿಡಿಲು ಸುಳಿದುದು ಹಗಲು ತಾರೆಗ
ಳಿಡಿದುವರ್ಭ್ರದಲಿಳೆಗೆ ಸುಳಿದುದು ರುಧಿರಮಯ ವರ್ಷ
ಮಿಡುಕಿದವು ಪ್ರತಿಮೆಗಳು ಶಿಖರದಿ
ನುಡಿದು ಬಿದ್ದುದು ಕಳಶ ಹೆಮ್ಮರ
ವಡಿಗಡಿಗೆ ಕಾರಿದವು ರುಧಿರವನರಸಕೇಳೆಂದ (ಸಭಾ ಪರ್ವ, ೧೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು ಆ ಯುದ್ಧದ ತೀವ್ರತೆಯನು. ಅಕಾಲದಲ್ಲಿ ಭೂಮಿಯು ನಡುಗಿತು, ಬರಸಿಡಿಲು ಬಡಿಯಿತು, ಹಗಲು ಹೊತ್ತಿನಲ್ಲಿ ಆಕಾಶದ ತುಂಬಾ ನಕ್ಷತ್ರಗಳು ದಂಡವು. ರಕ್ತದ ಮಳೆ ಸುರಿಯಿತು. ದೇವಾಲಯಗಳಲ್ಲಿ ವಿಗ್ರಹವು ಅಲುಗಾಡಿದವು, ದೇವಾಲಯದ ಶಿಖರದಿಂದ ಕಳಶವು ಕಳಚಿಬಿತ್ತು. ದೊಡ್ಡ ದೊಡ್ಡ ಮರಗಳು ರಕ್ತವನ್ನು ಕಾರಿದವು.

ಅರ್ಥ:
ನಡುಗು: ಅಲುಗಾಡು; ಅವನಿ: ಭೂಮಿ; ಕಾಲ: ಸಮಯ; ಅಕಾಲ: ಸರಿಯಲ್ಲದ ಸಮಯ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಸುಳಿ: ಬೀಸು, ತೀಡು; ಹಗಲು: ಬೆಳಗ್ಗೆ; ತಾರೆ:ನಕ್ಷತ್ರ; ಅಭ್ರ: ಆಕಾಶ; ಇಡಿ: ತೋರು; ಇಳೆ: ಭೂಮಿ; ರುಧಿರ; ರಕ್ತ; ವರ್ಷ: ಮಳೆ; ಮಿಡುಕು: ಅಲುಗಾಡು; ಪ್ರತಿಮೆ: ವಿಗ್ರಹ; ಶಿಖರ: ತುದಿ; ಉಡಿ: ಮುರಿ, ತುಂಡು ಮಾಡು; ಬಿದ್ದು: ಕೆಳಗೆ ಬೀಳು; ಕಳಶ: ದೇವಸ್ಥಾನದ ಗೋಪುರಗಳ ತುದಿಯಲ್ಲಿರುವ ಕುಂಭ; ಹೆಮ್ಮರ: ದೊಡ್ಡದಾದ ಮರ/ತರು; ಅಡಿಗಡಿಗೆ: ಮತ್ತೆ ಮತ್ತೆ; ಕಾರು: ಕೆಸರು; ಅರಸ: ರಾಜ;

ಪದವಿಂಗಡಣೆ:
ನಡುಗಿತ್+ಅವನಿ+ಅಕಾಲದಲಿ +ಬರ
ಸಿಡಿಲು +ಸುಳಿದುದು +ಹಗಲು +ತಾರೆಗಳ್
ಇಡಿದುವ್+ಅರ್ಭ್ರದಲ್+ಇಳೆಗೆ +ಸುಳಿದುದು +ರುಧಿರಮಯ +ವರ್ಷ
ಮಿಡುಕಿದವು+ ಪ್ರತಿಮೆಗಳು +ಶಿಖರದಿನ್
ಉಡಿದು +ಬಿದ್ದುದು +ಕಳಶ +ಹೆಮ್ಮರವ್
ಅಡಿಗಡಿಗೆ +ಕಾರಿದವು +ರುಧಿರವನ್+ಅರಸ+ಕೇಳೆಂದ

ಅಚ್ಚರಿ:
(೧) ರಕ್ತದ ಮಳೆ ಎಂದು ಹೇಳಲು – ಇಳೆಗೆ ಸುಳಿದುದು ರುಧಿರಮಯ ವರ್ಷ
(೨) ಉಡಿ, ಅಡಿ, ಇಡಿ, ಸಿಡಿ – ಪ್ರಾಸ ಪದಗಳು
(೩) ನಡುಗು, ಮಿಡುಕು – ಸಾಮ್ಯಾರ್ಥ ಪದಗಳು

ಪದ್ಯ ೭೦: ಕೃಷ್ಣ ಶಿಶುಪಾಲರ ಯುದ್ಧದಲ್ಲಿ ಏನಾಯಿತು?

ಧರಣಿಪತಿ ಕೇಳ್ ಕೃಷ್ಣ ಶಿಶುಪಾ
ಲರ ಮಹಾ ಸಂಗ್ರಾಮ ಮಧ್ಯದೊ
ಳುರಿದುದಿಳೆ ಹೊಗೆದುದು ದಿಶಾವಳಿ ಧೂಮಕೇತುಗಳು
ತರಣಿಮಂಡಲ ಮಾಲೆಗಳು ವಿ
ಸ್ತರಿಸಿತಾಕಾಶದಲಿ ಪರ್ವದ
ಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ (ಸಭಾ ಪರ್ವ, ೧೧ ಸಂಧಿ, ೭೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೃಷ್ಣ ಶಿಶುಪಾಲರು ಯುದ್ಧ ಮಾಡುತ್ತಿರುವಾಗ ಭೂಮಿಗೆ ಉರಿಹತ್ತಿತ್ತು. ದಿಕ್ಕುಗಳನ್ನು ಹೊಗೆಯ ಸುರುಳಿಗಳು ಆವರಿಸಿದವು. ಧೂಮಕೇತುಗಳು ಕಾಣಿಸಿಕೊಂಡವು. ಆಕಾಶದಲ್ಲಿ ಅನೇಕ ಸೂರ್ಯರು ಕಾಣಿಸಿದರು, ರಾಹುವು ಸೂರ್ಯ ಚಂದ್ರರನ್ನು ನುಂಗಲು ಗ್ರಹಣವಾಯಿತು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಕೇಳು: ಆಲಿಸು; ಮಹಾ: ದೊಡ್ಡ; ಸಂಗ್ರಾಮ: ಯುದ್ಧ; ಮಧ್ಯ: ನಡುವೆ; ಉರಿ: ಬೆಂಕಿ, ತಾಪ; ಇಳೆ: ಭೂಮಿ; ಹೊಗೆ: ಧೂಮ; ದಿಶ: ದಿಕ್ಕು; ಆವಳಿ: ಸಾಲು, ಗುಂಪು; ಧೂಮಕೇತು: ಉಲ್ಕೆ, ಬಾಲಚುಕ್ಕಿ; ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ಮಾಲೆ: ಸರ; ವಿಸ್ತರಿಸು: ಹರಡು; ಆಕಾಶ: ಗಗನ; ಪರ್ವ: ಸೇರಿಕೆ, ಬೆಸುಗೆ; ಉರವಣೆ: ಆತುರ, ಅವಸರ; ಆದಿತ್ಯ: ಸೂರ್ಯ; ಚಂದ್ರ: ಶಶಿ;

ಪದವಿಂಗಡಣೆ:
ಧರಣಿಪತಿ +ಕೇಳ್ +ಕೃಷ್ಣ +ಶಿಶುಪಾ
ಲರ +ಮಹಾ +ಸಂಗ್ರಾಮ +ಮಧ್ಯದೊಳ್
ಉರಿದುದ್+ಇಳೆ +ಹೊಗೆದುದು +ದಿಶಾವಳಿ+ ಧೂಮಕೇತುಗಳು
ತರಣಿಮಂಡಲ +ಮಾಲೆಗಳು +ವಿ
ಸ್ತರಿಸಿತ್+ಆಕಾಶದಲಿ +ಪರ್ವದಲ್
ಉರವಣಿಸಿದನು +ರಾಹು +ಚಂದ್ರ+ಆದಿತ್ಯ +ಮಂಡಲವ

ಅಚ್ಚರಿ:
(೧) ಸೂರ್ಯ ಮಂಡಲಕ್ಕೆ ಬಳಸಿದ ಪದಗಳು – ತರಣಿಮಂಡಲ, ಆದಿತ್ಯಮಂಡಲ
(೨) ಗ್ರಹಣವಾಯಿತು ಎಂದು ಹೇಳಲು – ಪರ್ವದಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ

ಪದ್ಯ ೬೯: ಕೃಷ್ಣ ಶಿಶುಪಾಲರ ಕಾಳಗವನ್ನು ಯಾರು ನೋಡುತ್ತಿದ್ದರು?

ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರ್ಷಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುತಿರ್ದುದು ಸಮರ ಸಂಭ್ರಮವ (ಸಭಾ ಪರ್ವ, ೧೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಜೊತೆಯಲ್ಲಿದ್ದ ಭಂಡ ಜನರು ಶ್ರೀಕೃಷ್ಣನು ಸೋತ ಎಂಬ ಭಂಡತನದ ಮಾತನ್ನಾಡಿದರು. ಯಾದವ ಸೈನ್ಯವು ಇಬ್ಬರ ಕಾಳಗವನ್ನು ಸಂತೋಷದ ವೀಕ್ಷಿಸುತ್ತಿತ್ತು. ಶಿಶುಪಾಲನು ಹಿಂದೆ ಭೂಮಿಯಲ್ಲಿ ಪ್ರಸಿದ್ಧನಾದ ರಾವಣನಾಗಿದ್ದವ, ಇವನ ಕಾಳಗವನ್ನು ನೋಡೋಣ ಎಂದು ಆಕಾಶದಲ್ಲಿ ದೇವತೆಗಳು ವಿಮಾನದಲ್ಲಿ ಕುಳಿತು ನೋಡುತ್ತಿದ್ದರು.

ಅರ್ಥ:
ಸೋತು: ಪರಾಭವ; ಹರಿ: ಕೃಷ್ಣ; ಚೈದ್ಯ: ಶಿಶುಪಾಲ; ಬೂತು:ಭಂಡ; ಬಣ್ಣಿಸು: ವರ್ಣಿಸು; ನಿರ್ಭೀತ: ಭಯವಿಲ್ಲದ; ಸೈನ್ಯ: ಪಡೆ; ಹರ್ಷ: ಸಂತೋಷ; ಕೇಳಿ: ವಿನೋದ, ಕ್ರೀಡೆ; ಮುನ್ನ: ಹಿಂದೆ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಅಮರ: ದೇವತೆ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ವ್ರಾತ: ಗುಂಪು; ನೆರೆ: ಜೊತೆಗೂಡು; ನೋಡು: ವೀಕ್ಷಿಸು; ಸಮರ: ಯುದ್ಧ; ಸಂಭ್ರಮ: ಉತ್ಸಾಹ, ಸಡಗರ;

ಪದವಿಂಗಡಣೆ:
ಸೋತನೈ +ಹರಿಯೆಂದು +ಚೈದ್ಯನ
ಬೂತುಗಳು+ ಬಣ್ಣಿಸಿದರ್+ಈ+ ನಿ
ರ್ಭೀತ +ಯಾದವ +ಸೈನ್ಯವಿದ್ದುದು +ಹರ್ಷ+ಕೇಳಿಯಲಿ
ಈತ+ ರಾವಣ+ ಮುನ್ನ +ಭುವನ
ಖ್ಯಾತನೆಂದ್+ಅಮರರು +ವಿಮಾನ
ವ್ರಾತದಲಿ +ನೆರೆ +ನೋಡುತಿರ್ದುದು +ಸಮರ +ಸಂಭ್ರಮವ

ಅಚ್ಚರಿ:
(೧) ಜೋಡಿ ಪದಗಳಾಕ್ಷರ – ವಿಮಾನ ವ್ರಾತದಲಿ; ನೆರೆ ನೋಡುತಿರ್ದುದು; ಸಮರ ಸಂಭ್ರಮವ

ಪದ್ಯ ೬೮: ಶಿಶುಪಾಲನು ಹೇಗೆ ಯುದ್ಧ ಮಾಡಿದನು?

ಬಿಡುವ ತೊಡಚುವ ಸಂಧಿಸುವ ಜೇ
ವಡೆವ ಹೂಡುವ ತಾಗಿಸುವ ಹಿಳು
ಕಿಡುವ ಹರಿಸುವ ಬೆಸುವ ಭೇದಿಸುವ ಸಮಕೌಶಲವ
ನುಡಿವ ಕವಿ ಯಾರೈ ಬರಿಯ ಬಾ
ಯ್ಬಡಿಕನೇ ಶಿಶುಪಾಲನೀಪರಿ
ನಡೆಸುತಿರ್ದನು ಹರಿಯೊಡನೆ ಸಮಬೆಸನ ಬಿಂಕದಲಿ (ಸಭಾ ಪರ್ವ, ೧೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ಬಿಲ್ಲಿಗೆ ಹೆದೆಯನ್ನು ಕಟ್ಟಿ ಅದರ ಧ್ವನಿಯನ್ನು ಮಾಡುತ್ತಾ, ಬಾಣವನ್ನಿಟ್ಟು ಗುರಿಯಿಡುವ, ಎದುರಾಳಿಯ ಬಾಣಗಳನ್ನು ನಿಲ್ಲಿಸುವ, ಬಾಣವನ್ನು ಬಿಡುವ ರೀತಿ, ಗುರಿಯನ್ನು ಭೇದಿಸುವ ನೈಪುಣ್ಯ, ಇವೆಲ್ಲವನ್ನು ವರ್ಣಿಸುವ ಕವಿಯಾದರೂ ಯಾರು? ಶಿಶುಪಾಲನು ಕೇವಲ ಬಾಯಿಬಡುಕನಲ್ಲ. ಶ್ರೀಕೃಷ್ಣನಿಗೆ ಸರಿಸಮಾನನಾಗಿ ಠೀವಿಯಿಂದ ಯುದ್ಧಮಾಡುತ್ತಿದ್ದನು.

ಅರ್ಥ:
ಬಿಡು: ತೊರೆ; ತೊಡಚು: ಕಟ್ಟು, ಬಂಧಿಸು; ಸಂಧಿಸು: ಕೂಡು, ಸೇರು; ಜೇವಡೆ:ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಹೂಡು: ತೊಡು; ತಾಗಿಸು: ಮುಟ್ಟು; ಹಿಳುಕು: ಬಾಣದ ಹಿಂಭಾಗ; ಹರಿಸು: ಕೀಳು, ಕಿತ್ತುಹಾಕು, ಚಲಿಸು; ಬೆಸು: ಕೂಡಿಸು, ಹೊಂದಿಸು; ಭೇದಿಸು: ಮುರಿಯುವುದು, ಒಡೆ; ಅಸಮ: ಅಸಮಾನ್ಯ; ಕೌಶಲ: ನೈಪುಣ್ಯತೆ; ನುಡಿ: ಮಾತು; ಕವಿ: ವಿದ್ವಾಂಸ; ಬರಿ: ಕೇವಲ; ಬಾಯ್ಬಡಿಕ: ಕೇವಲ ಮಾತಾಡುವ; ಪರಿ: ರೀತಿ; ನಡೆಸು: ನಿರ್ವಹಿಸು; ಸಮ: ಸಮಾನವಾದ; ಬೆಸನ: ಕೆಲಸ, ಕಾರ್ಯ; ಬಿಂಕ: ಠೀವಿ;

ಪದವಿಂಗಡಣೆ:
ಬಿಡುವ +ತೊಡಚುವ +ಸಂಧಿಸುವ +ಜೇ
ವಡೆವ +ಹೂಡುವ +ತಾಗಿಸುವ +ಹಿಳು
ಕಿಡುವ +ಹರಿಸುವ +ಬೆಸುವ +ಭೇದಿಸುವ +ಸಮಕೌಶಲವ
ನುಡಿವ +ಕವಿ +ಯಾರೈ +ಬರಿಯ +ಬಾ
ಯ್ಬಡಿಕನೇ +ಶಿಶುಪಾಲನ್+ಈ+ಪರಿ
ನಡೆಸುತಿರ್ದನು +ಹರಿಯೊಡನೆ +ಸಮಬೆಸನ +ಬಿಂಕದಲಿ

ಅಚ್ಚರಿ:
(೧) ೧-೩ ಸಾಲಿನ ಎಲ್ಲಾ ಪದಗಳು ವ ಕಾರದಲ್ಲಿ ಅಂತ್ಯವಾಗಿರುವುದು