ಪದ್ಯ ೧೪: ಶ್ರೀಕೃಷ್ಣನು ಯಾವ ವೇಷದಲ್ಲಿ ಕರ್ಣನ ಬಳಿಗೆ ಬಂದನು?

ಉರಿಯನುಗುಳುವ ಬಾಣದಲಿ ಕ
ತ್ತರಿಸಿ ಕರ್ಣನನೆಸಲು ಸಮರದ
ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ
ಹರಣ ತೊಲಗದ ಮರ್ಮವನು ಮುರ
ಹರನು ಕಂಡನು ರಥದ ವಾಘೆಯ
ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ (ಕರ್ಣ ಪರ್ವ, ೨೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನು ಬಿಟ್ಟ ಅಂಜಲಿಕ ಬಾಣವು ಉರಿಯನ್ನುಗುಳುತ್ತ ಕರ್ಣನ ಎದೆಯನ್ನು ಪೂರ್ಣಭೇದಿಸಿ ಗಟ್ಟಿಯಾಗಿ ನಾಟಿತು. ಆದರೆ ಅವನ ಪ್ರಾಣವು ಹೋಗಲಿಲ್ಲ, ಇದರ ಮರ್ಮವನ್ನು ಅರಿತ ಶ್ರೀಕೃಷ್ಣನು ತನ್ನ ಕುದುರೆಯ ಲಗಾಮನ್ನು ಬಿಟ್ಟು ಬ್ರಾಹ್ಮಣ ವೇಷದಲ್ಲಿ ಕರ್ಣನ ಬಳಿ ಬಂದನು.

ಅರ್ಥ:
ಉರಿ: ಬೆಂಕಿ; ಉಗುಳು: ಹೊರ ಸೂಸು; ಚಿಮ್ಮು; ಬಾಣ: ಶರ; ಕತ್ತರಿಸು: ಸೀಳು; ಎಸಲು: ಚಿಗುರು; ಸಮರ: ಯುದ್ಧ; ಉರ: ಎದೆ, ವಕ್ಷಸ್ಥಳ; ಕೀಲಿಸು: ತಾಟಿತು; ಅಂಬು: ಬಾಣ; ಗರಿಗಡಿ:ಪೂರ್ಣಭೇದಿಸಿ; ಗಾಢ: ಹೆಚ್ಚಳ, ಅತಿಶಯ; ಹರಣ: ಜೀವ, ಪ್ರಾಣ; ತೊಲಗು: ಹೊರಟುಹೋಗು; ಮರ್ಮ: ಒಳ ಅರ್ಥ, ಗುಟ್ಟು; ಮುರಹರ: ಕೃಷ್ಣ; ಕಂಡು: ನೋಡು; ರಥ: ಬಂಡಿ, ತೇರು; ವಾಘೆ: ಲಗಾಮು; ಇರಿಸು: ಇಟ್ಟು; ಹೊರೆ:ಹತ್ತಿರ, ಸಮೀಪ; ಬಂದು: ಆಗಮಿಸು; ವಿಪ್ರ: ಬ್ರಾಹ್ಮಣ; ವೇಷ: ಉಡುಗೆ ತೊಡುಗೆ;

ಪದವಿಂಗಡಣೆ:
ಉರಿಯನ್+ಉಗುಳುವ +ಬಾಣದಲಿ +ಕ
ತ್ತರಿಸಿ +ಕರ್ಣನನ್+ಎಸಲು +ಸಮರದಲ್
ಉರವ+ ಕೀಲಿಸಿತ್+ಅಂಬು +ಗರಿಗಡಿಯಾಗಿ +ಗಾಢದಲಿ
ಹರಣ+ ತೊಲಗದ+ ಮರ್ಮವನು +ಮುರ
ಹರನು +ಕಂಡನು +ರಥದ +ವಾಘೆಯನ್
ಇರಿಸಿ+ ಕರ್ಣನ +ಹೊರೆಗೆ +ಬಂದನು +ವಿಪ್ರವೇಷದಲಿ

ಅಚ್ಚರಿ:
(೧) ಕತ್ತರಿಸಿ, ಇರಿಸಿ – ಪ್ರಾಸ ಪದ
(೨) ಅಂಬು, ಬಾಣ – ಸಮನಾರ್ಥಕ ಪದ

ಪದ್ಯ ೧೩: ಕರ್ಣನನ್ನು ಕೊಲ್ಲಲು ಅರ್ಜುನನು ಯಾವ ಅಸ್ತ್ರವನ್ನು ಹೂಡಿದನು?

ಈಸು ಕರ್ಣನ ಮೇಲೆ ಬಹಳ
ದ್ವೇಷವೇನೋ ಎನುತ ಮನದಲಿ
ಘಾಸಿಯಾದನು ಪಾರ್ಥ ಕರುಣಕ್ರೋಧದುಪಟಳಕೆ
ಆಸೆಯಿನ್ನೇಕೆನುತ ಸೆಳೆದನು
ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ (ಕರ್ಣ ಪರ್ವ, ೨೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನಿಗೆ ಕರ್ಣನ ಮೇಲೆ ಏಕಿಷ್ಟು ದ್ವೇಷ ಎಂದು ಚಿಂತಿಸುತ್ತಾ ಅರ್ಜುನನು ಘಾಸಿಯಾದನು. ಒಮ್ಮೆ ಕರುಣೆ ಇನ್ನೊಮ್ಮೆ ಕೋಪಗಳು ಮನಸ್ಸಿನಲ್ಲಿ ಹುಟ್ಟಿದವು. ಕರ್ಣನ ಮೇಲೆ ಇನ್ನೇಕೆ ಆಶೆ ಎನ್ನುತ್ತಾ ಅಂಜಲಿಕಾಸ್ತ್ರವನ್ನು ಹೂಡಿದನು. ಆ ಅಸ್ತ್ರವು ಹೊಗೆಯ ಹೊರಳಿಗಳು, ಕಿಡಿಯ ಪುಂಜಗಳನ್ನುಗುಳುತ್ತಾ ಮುಂದುವರಿಯಿತು. ಆ ಅಸ್ತ್ರವು ಅಮೋಘವಾದುದು, ಅದನ್ನು ಗೆದ್ದವರು ಯಾರೂ ಇಲ್ಲ.

ಅರ್ಥ:
ಈಸು: ಇಷ್ಟು; ದ್ವೇಷ; ಹಗೆ; ಮನ: ಮನಸ್ಸು; ಘಾಸಿ: ಹಿಂಸೆ, ಕಷ್ಟ; ಕರುಣ: ದಯೆ; ಕ್ರೋಧ: ಕೋಪ; ಉಪಟಳ: ತೊಂದರೆ, ಹಿಂಸೆ; ಆಸೆ: ಬಯಕೆ; ಸೆಳೆ: ಎಳೆ, ಹೊರತೆಗೆ; ಸೂಸು: ಎರಚು, ಚಲ್ಲು; ಕಿಡಿ: ಬೆಂಕಿಯ ಚೂರು; ಹೊಗೆ: ಧೂಮ; ಹೊದರು: ಗುಂಪು, ಸಮೂಹ, ತೊಡಕು; ಮೀಸಲು: ಮುಡಿಪು, ಪ್ರತ್ಯೇಕತೆ; ಮಾರ್ಗಣ: ಬಾಣ;

ಪದವಿಂಗಡಣೆ:
ಈಸು+ ಕರ್ಣನ +ಮೇಲೆ +ಬಹಳ
ದ್ವೇಷವ್+ಏನೋ +ಎನುತ +ಮನದಲಿ
ಘಾಸಿಯಾದನು +ಪಾರ್ಥ +ಕರುಣ+ಕ್ರೋಧದ್+ಉಪಟಳಕೆ
ಆಸೆಯಿನ್ನೇಕೆನುತ +ಸೆಳೆದನು
ಸೂಸು+ಕಿಡಿಗಳ +ಹೊಗೆಯ +ಹೊದರಿನ
ಮೀಸಲ್+ಅಳಿದಾರ್+ಎಂಜಲಿಸದ್+ಅಂಜಳಿಕ ಮಾರ್ಗಣವ

ಅಚ್ಚರಿ:
(೧) ಅಂಜಳಿಕೆ ಬಾಣದ ವಿವರ – ಸೆಳೆದನು ಸೂಸುಗಿಡಿಗಳ ಹೊಗೆಯ ಹೊದರಿನ
ಮೀಸಲಳಿದಾರೆಂಜಲಿಸದಂಜಳಿಕ ಮಾರ್ಗಣವ

ಪದ್ಯ ೧೨: ಕೃಷ್ಣನು ಕರ್ಣನನ್ನು ಕೊಲ್ಲಲ್ಲು ಏನುಪಾಯ ಮಾಡಿದ?

ಕರಗುವರೆ ನೀ ಸಾರು ಭೀಮನ
ಕರೆದು ಕೊಲಿಸುವೆನೀತನನು ನಿ
ಷ್ಠುರನಲಾ ನೀನೆನ್ನದಿರು ತೆಗೆ ನಿನ್ನ ತನ್ನಿಂದ
ಹರಿಯದೇ ಹಗೆ ನಮ್ಮ ಚಕ್ರದ
ಲರಿಭಟನ ಮುರಿವೆನು ಯುಧಿಷ್ಥಿರ
ನರಸುತನವದು ನಿಲಲಿ ನೀನಂಜುವರೆ ಸಾರೆಂದ (ಕರ್ಣ ಪರ್ವ, ೨೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನಿಗೆ ನೀನು ಕರಗುವೆಯಾ? ನಾನು ಬೇಡವೆನ್ನುವುದಿಲ್ಲ, ಭೀಮನನ್ನು ಕರೆಸಿ ಕೊಲ್ಲಿಸುತ್ತೇನೆ, ನೀನೇಕೆ ಇಷ್ಟು ನಿಷ್ಠುರನಾಗಿರುವೆ ಎನ್ನಬೇಡ. ಕರ್ಣನನ್ನು ಕೊಲ್ಲಲು ನನ್ನಿಂದ ನಿನ್ನಿಂದ ನನ್ನಿಂದ ಆಗುವುದಿಲ್ಲವೇ? ಬೇಡ, ಸುದರ್ಶನ ಚಕ್ರದಿಂದ ಕರ್ಣನನ್ನು ಸಂಹರಿಸುತ್ತೇನೆ. ಯುಧಿಷ್ಠಿರನ ಚಕ್ರವರ್ತಿ ಪದವಿ ನಿಲ್ಲಲಿ, ನೀನು ಹೆದರುವುದಾದರೆ ನೀನು ಹೋಗು ಎಂದು ಕೃಷ್ಣನು ಅರ್ಜುನನಿಗೆ ಹೇಳಿದ

ಅರ್ಥ:
ಕರಗು: ಕನಿಕರ ಪಡು; ಸಾರು: ಹತ್ತಿರಕ್ಕೆ ಬರು, ಘೋಷಿಸು; ಕರೆ: ಬರೆಮಾಡಿ; ಕೊಲಿಸು: ಸಾಯಿಸುತ್ತೇನೆ; ನಿಷ್ಠುರ: ಕಠಿಣವಾದುದು, ಒರಟು; ತೆಗೆ: ಹೊರತರು; ಹರಿ: ಕಡಿ, ಕತ್ತರಿಸು; ಹಗೆ: ವೈರ; ಚಕ್ರ: ಸುದರ್ಶನ ಚಕ್ರ; ಅರಿ: ವೈರಿ; ಭಟ: ಪರಾಕ್ರಮ; ಮುರಿ: ಸೀಳು; ಅರಸು: ರಾಜ; ನಿಲು: ನಿಲ್ಲು, ಸುಮ್ಮನಿರು; ಅಂಜು: ಹೆದರು;

ಪದವಿಂಗಡಣೆ:
ಕರಗುವರೆ +ನೀ +ಸಾರು +ಭೀಮನ
ಕರೆದು +ಕೊಲಿಸುವೆನ್+ಈತನನು +ನಿ
ಷ್ಠುರನಲಾ+ ನೀನ್+ಎನ್ನದಿರು +ತೆಗೆ +ನಿನ್ನ +ತನ್ನಿಂದ
ಹರಿಯದೇ +ಹಗೆ+ ನಮ್ಮ +ಚಕ್ರದಲ್
ಅರಿಭಟನ+ ಮುರಿವೆನು +ಯುಧಿಷ್ಥಿರನ್
ಅರಸುತನವದು +ನಿಲಲಿ +ನೀನಂಜುವರೆ+ ಸಾರೆಂದ

ಅಚ್ಚರಿ:
(೧) ಕೃಷ್ಣನ ದೃಢ ನಿರ್ಣಯ – ಭೀಮನ ಕರೆದು ಕೊಲಿಸುವೆ; ನಮ್ಮ ಚಕ್ರದಲರಿಭಟನ ಮುರಿವೆನು

ಪದ್ಯ ೧೧: ಅರ್ಜುನನಿಗೆ ಕೃಷ್ಣನು ಏನು ಮಾಡಲು ಹೇಳಿದನು?

ಅರಸ ಚಿತ್ತೈಸಾಚೆಯಲಿ ಮುರ
ಹರನಲೇ ನಿಮ್ಮನ್ವಯವ ಸಂ
ಹರಿಸಿದಾತನು ಭೀಮಸೇನನೊ ಮೇಣ್ ಧನಂಜಯನೊ
ಸರಳ ತೊಡುತೊಡು ಪಾರ್ಥ ಕರ್ಣನ
ಶಿರವನಿಳುಹಾ ಹಾರದಿರು ಹೇ
ವರಿಸದಿರು ತೆಗೆ ದಿವ್ಯಶರವನು ಬೇಗಮಾಡೆಂದ (ಕರ್ಣ ಪರ್ವ, ೨೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ನಿನ್ನ ಕುಲವನ್ನು ಸಂಹರಿಸಿದವನು ಅರ್ಜುನನೋ ಭೀಮನೋ ಅಲ್ಲ, ಕೃಷ್ಣನೇ ನಿಮ್ಮ ವಂಶವನ್ನು ಸಂಹರಿಸಿದನು. ಕರ್ಣನು ಸಮಾಧಿಸ್ಥಿತಿಯಲ್ಲಿರುವುದನ್ನು ಕಂಡು ಅರ್ಜುನ ಬಾಣವನ್ನು ತೊಟ್ಟು ಕರ್ಣನ ತಲೆಯನ್ನು ಕೆಳಗುರುಳಿಸು, ಏನನ್ನೂ ಲೆಕ್ಕಿಸಬೇಡ, ದಿವ್ಯಾಸ್ತವನ್ನು ಬೇಗ ಹೂಡು ಎಂದು ಕೃಷ್ಣನು ಅರ್ಜುನನಿಗೆ ಹೇಳಿದನು.

ಅರ್ಥ:
ಅರಸ: ರಾಜ; ಚಿತ್ತೈಸು: ಗಮನಿಸು; ಆಚೆ: ಹೊರಗಡೆ; ಮುರಹರ: ಕೃಷ್ಣ; ಅನ್ವಯ: ವಂಶ; ಸಂಹರಿಸು: ನಾಶಗೊಳಿಸು; ಮೇಣ್: ಅಥವ; ಸರಳ: ಬಾಣ; ತೊಡು: ಹೂಡು; ಶಿರ: ತಲೆ; ಇಳುಹು: ಕಡಿ; ಹಾರು: ಅಪೇಕ್ಷಿಸು; ಹೇವರಿಸು: ಹೇಸಿಗೆಪಟ್ಟುಕೊ; ತೆಗೆ: ಹೊರಹಾಕು; ದಿವ್ಯಶರ: ಶ್ರೇಷ್ಠವಾದ ಬಾಣ; ಬೇಗ: ವೇಗ;

ಪದವಿಂಗಡಣೆ:
ಅರಸ +ಚಿತ್ತೈಸ್+ಆಚೆಯಲಿ +ಮುರ
ಹರನಲೇ+ ನಿಮ್ಮನ್+ಅನ್ವಯವ +ಸಂ
ಹರಿಸಿದಾತನು +ಭೀಮಸೇನನೊ +ಮೇಣ್ +ಧನಂಜಯನೊ
ಸರಳ+ ತೊಡುತೊಡು+ ಪಾರ್ಥ+ ಕರ್ಣನ
ಶಿರವನ್+ಇಳುಹಾ +ಹಾರದಿರು +ಹೇ
ವರಿಸದಿರು +ತೆಗೆ +ದಿವ್ಯಶರವನು+ ಬೇಗ+ಮಾಡೆಂದ

ಅಚ್ಚರಿ:
(೧) ಕೃಷ್ಣನ ಆದೆಶ – ಸರಳ ತೊಡುತೊಡು ಪಾರ್ಥ ಕರ್ಣನ ಶಿರವನಿಳುಹಾ
(೨) ಹ ಕಾರದ ಜೋಡಿ ಪದ – ಹಾರದಿರು ಹೇವರಿಸದಿರು

ಪದ್ಯ ೧೦: ಕರ್ಣನು ಯಾವ ಸ್ಥಿತಿಯಲ್ಲಿ ಕುಳಿತಿದ್ದನು?

ಒಳಗೆ ಹೃದಯಾಂಬುಜದ ಮಧ್ಯ
ಸ್ಥಳದೊಳಗೆ ಮುರವೈರಿಯನು ಹೊರ
ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ
ಹೊಳೆವ ಹರಿಯನು ಕಂಡನಿದು ಹೊರ
ಗೊಳಗೆ ಹರಿ ತಾನೆಂಬಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ (ಕರ್ಣ ಪರ್ವ, ೨೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಹೃದಯಕಮಲದ ಅಂತರಂಗದಲ್ಲಿ ಶ್ರೀಕೃಷ್ಣನನ್ನು ಕಂಡನು. ತನ್ನ ಎದುರು ಅರ್ಜುನನ ಮಣಿಮಯ ರಥದ ಮುಂದೆ ಶೋಭಿಸುವ ಕೃಷ್ಣನನ್ನು ಕಂಡನು. ಒಳಗೂ ಹೊರಗೂ ಇರುಅವನು ಹರಿಯೇ ಎಂಬ ಅಭೇದವನ್ನು ತಿಳಿದು, ಜಾಗ್ರತ ಅವಸ್ಥೆಯಲ್ಲಿಯೇ ಸಮಾಧಿಯನ್ನು ಹೊಂದಿದನು.

ಅರ್ಥ:
ಒಳಗೆ: ಅಂತರ್ಯ; ಹೃದಯ: ಎದೆ, ವಕ್ಷಸ್ಥಳ; ಅಂಬುಜ: ಕಮಲ; ಮಧ್ಯ: ನಡುವೆ; ಮುರವೈರಿ: ಕೃಷ್ಣ; ಹೊರವಳಯ: ಬಾಹಿರ; ಫಲುಗುಣ: ಅರ್ಜುನ; ಮಣಿ: ಶ್ರೇಷ್ಠವಾದ ರತ್ನ; ರಥ: ಬಂಡಿ, ತೇರು; ಅಗ್ರ: ಮುಂದೆ; ಹೊಳೆ: ಪ್ರಕಾಶಿಸು; ಹರಿ: ಕೃಷ್ಣ; ಕಂಡು: ನೋಡಿ; ಹೊರಗೊಳಗೆ: ಅಂತರ, ಬಾಹಿರದಲ್ಲಿ; ಭೇದ: ವ್ಯತ್ಯಾಸ; ತಿಳಿ: ಅರಿ; ನಿಜ: ದಿಟ; ಎಚ್ಚರ: ಜಾಗೃತವಾಗಿರುವ ಸ್ಥಿತಿ; ಸಮಾಧಿ: ಏಕಾಗ್ರತೆ, ತನ್ಮಯತೆ;

ಪದವಿಂಗಡಣೆ:
ಒಳಗೆ +ಹೃದಯ+ಅಂಬುಜದ+ ಮಧ್ಯ
ಸ್ಥಳದೊಳಗೆ+ ಮುರವೈರಿಯನು+ ಹೊರ
ವಳಯದಲಿ +ಫಲುಗುಣನ+ ಮಣಿರಥದ್+ಅಗ್ರಭಾಗದಲಿ
ಹೊಳೆವ+ ಹರಿಯನು +ಕಂಡನ್+ಇದು +ಹೊರ
ಗೊಳಗೆ +ಹರಿ +ತಾನೆಂಬ್+ಅಭೇದವ
ತಿಳಿದು+ ನಿಜದೆಚ್ಚರ+ ಸಮಾಧಿಯೊಳ್+ಇರ್ದನಾ +ಕರ್ಣ

ಅಚ್ಚರಿ:
(೧) ಮುರವೈರಿ, ಹರಿ – ಕೃಷ್ಣನನ್ನು ಕರೆದಿರುವ ಬಗೆ

ಪದ್ಯ ೯: ಕರ್ಣನು ಯುದ್ಧಭೂಮಿಯಲ್ಲಿ ಯಾರನ್ನು ನೋಡುತ್ತಾ ಕುಳಿತನು?

ಸಲಹಿದೊಡೆಯನ ಜೋಳವಾಳಿಗೆ
ತಲೆಯ ಮಾರುವುದೊಂದು ಪುಣ್ಯದ
ಫಲವು ಮರಣದ ಹೊತ್ತು ಕೃಷ್ಣನ ಕಾಬ ಸುಕೃತಫಲ
ಇಳೆಯ ಮೇಲೆನಗಲ್ಲದಾರಿಗೆ
ಫಲಿಸುವುದು ತಾ ಧನ್ಯನೆನುತವೆ
ಹಳಚದಸುರಾಂತಕನನ್ನೀಕ್ಷಿಸುತಿರ್ದನಾ ಕರ್ಣ (ಕರ್ಣ ಪರ್ವ, ೨೭ ಸಂಧಿ, ೯ ಪದ್ಯ)

ತಾತ್ಪರ್ಯ:
ನನ್ನನ್ನು ಸಲಹಿದ ಒಡೆಯನ ಅನ್ನ ತಿಂದ ಋಣಕ್ಕೆ ನನ್ನ ತಲೆಯನ್ನೇ ಕೊಡುವುದೊಂದೇ ಉಚಿತ, ಮರಣಕಾಲದಲ್ಲಿ ಭಗವಂತ ಶ್ರೀಕೃಷ್ಣನನ್ನು ನೋಡುವ ಪುಣ್ಯಫಲ ನನಗೆ ದೊರೆತ ಮತ್ತೊಂದು ಪುಣ್ಯ, ಈ ಭೂಮಿಯಲ್ಲಿ ಈ ಎರಡು ಸುಕೃತಗಳು ನನಗಲ್ಲದೇ ಮತ್ತಿನ್ನಾರಿಗೆ ದೊರೆಯುವುದು, ನಾನೇ ಧನ್ಯ ಎಂದು ಚಿಂತಿಸಿ ಕರ್ಣನು ಯುದ್ಧಮಾಡದೆ ಶ್ರೀಕೃಷ್ಣನನ್ನೇ ನೋಡುತ್ತಾ ಕುಳಿತನು.

ಅರ್ಥ:
ಸಲಹು: ಕಾಪಾಡು, ರಕ್ಷಿಸು; ಒಡೆಯ: ದೊರೆ, ರಾಜ; ಜೋಳದಪಾಳಿಗೆ: ಅನ್ನ ತಿಂದ ಹಂಗಿಗೆ; ತಲೆ: ಶಿರ; ಮಾರುವುದು: ನೀಡುವುದು; ಪುಣ್ಯ: ಸುಕೃತ್ಯ; ಫಲ: ಪರಿಣಾಮ, ಫಲಿತಾಂಶ; ಮರಣ: ಸಾವು; ಹೊತ್ತು: ಸಮಯ; ಕಾಬ: ನೋಡುವ; ಸುಕೃತ: ಒಳ್ಳೆಯ; ಫಲ: ಲಾಭ, ಪ್ರಯೋಜನ; ಇಳೆ: ಭೂಮಿ; ಫಲಿಸು: ಲಭಿಸು; ಧನ್ಯ: ಪುಣ್ಯವಂತ, ಕೃತಾರ್ಥ; ಹಳಚು: ಮೇಲೆ ಬೀಳು, ಪ್ರಕಾಶಿಸು; ಅಸುರಾಂತಕ: ಕೃಷ್ಣ; ಈಕ್ಷಿಸು: ನೋಡು;

ಪದವಿಂಗಡಣೆ:
ಸಲಹಿದ್+ಒಡೆಯನ +ಜೋಳವಾಳಿಗೆ
ತಲೆಯ+ ಮಾರುವುದ್+ಒಂದು +ಪುಣ್ಯದ
ಫಲವು+ ಮರಣದ +ಹೊತ್ತು +ಕೃಷ್ಣನ +ಕಾಬ +ಸುಕೃತಫಲ
ಇಳೆಯ+ ಮೇಲ್+ಎನಗಲ್ಲದ್+ಆರಿಗೆ
ಫಲಿಸುವುದು +ತಾ +ಧನ್ಯನ್+ಎನುತವೆ
ಹಳಚದ್+ಅಸುರಾಂತಕನನ್+ಈಕ್ಷಿಸುತಿರ್ದನಾ +ಕರ್ಣ

ಅಚ್ಚರಿ:
(೧) ಕರ್ಣನು ತನ್ನ ಸುಕೃತಗಳನ್ನು ಎಣಿಸುವ ಪರಿ
(೨) ಜೋಳವಾಳಿಗೆ, ಕಾಬ – ಪದಗಳ ಪ್ರಯೋಗ

ಪದ್ಯ ೮: ಕರ್ಣನು ದುರ್ಯೋಧನನನ್ನು ನೆನೆದು ಏಕೆ ಮರುಗಿದನು – ೨?

ಮೊದಲಲಾತ್ಮಜರಳಿವನೊಡವು
ಟ್ಟಿದರ ಮೆಯ್ಯಲಿ ಮರೆದನೊಡವು
ಟ್ಟಿದರು ನೂರ್ವರು ಮಡಿಯೆ ಮರೆದನು ತನ್ನ ಸುಳಿವಿನಲಿ
ಕದನವೆನ್ನಯ ಸುಳಿವನೊಳಕೊಂ
ಡುದು ಸುಯೋಧನನೃಪತಿಗಿನ್ನಾ
ಸ್ಪದರ ಕಾಣೆನು ಶಿವಶಿವಾ ಎಂದಳಲಿದನು ಕರ್ಣ (ಕರ್ಣ ಪರ್ವ, ೨೭ ಸಂಧಿ, ೮ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಕ್ಕಳು ಯುದ್ಧದಲ್ಲಿ ಮಡಿದಾಗ ತನ್ನ ಸಹೋದರರ ಮುಖವನ್ನು ನೋಡಿ ತನ್ನ ದುಃಖವನ್ನು ಮರೆತನು, ತನ್ನ ನೂರ್ವರು ಸೋದರರು ಸತ್ತಾಗ ನನ್ನನ್ನು ನೋಡಿ ತನ್ನ ದುಃಖವನ್ನು ಮರೆತನು. ನಾನೀಗ ಕದನದ ಸುಳಿಯಲ್ಲಿ ಸಿಕ್ಕಿ ಮುಳುಗಿದ್ದೇನೆ, ಕೌರವನು ಇನ್ನಾರ ಮುಖವನ್ನು ನೋಡಿ ದುಃಖವನ್ನು ಮರೆಯಬೇಕು ಎಂದು ಚಿಂತಿಸುತ್ತಾ ಕರ್ಣನು ಮನಸ್ಸಿನಲ್ಲೇ ದುಃಖಪಟ್ಟನು.

ಅರ್ಥ:
ಮೊದಲು: ಮುಂಚೆ ಆತ್ಮಜ: ಮಗ; ಅಳಿ: ಮಡಿ; ಒಡವುಟ್ಟು: ತನ್ನ ಜೊತೆ ಹುಟ್ಟಿದ, ಬಾಂಧವರು; ಮೆಯ್ಯ: ದೇಹ; ಮರೆ: ನೆನಪಿನಿಂದ ದೂರ ತಳ್ಳು; ನೂರು: ಶತ; ಮಡಿ: ಸಾವು; ಸುಳಿ: ಹತ್ತಿರ, ತಿರುಗು; ಕದನ: ಯುದ್ಧ; ಸುಳಿ: ಆವರಿಸು; ನೃಪ: ರಾಜ; ಆಸ್ಪದ: ನೆಲೆ, ಅಶ್ರಯ; ಕಾಣೆ: ತೋರು; ಅಳಲು: ದುಃಖಿಸು;

ಪದವಿಂಗಡಣೆ:
ಮೊದಲಲ್+ಆತ್ಮಜರ್+ಅಳಿವನ್+ಒಡವು
ಟ್ಟಿದರ +ಮೆಯ್ಯಲಿ +ಮರೆದನ್+ಒಡವು
ಟ್ಟಿದರು +ನೂರ್ವರು +ಮಡಿಯೆ +ಮರೆದನು +ತನ್ನ +ಸುಳಿವಿನಲಿ
ಕದನವ್+ಎನ್ನಯ +ಸುಳಿವನ್+ಒಳಕೊಂ
ಡುದು+ ಸುಯೋಧನ+ನೃಪತಿಗ್+ಇನ್+
ಆಸ್ಪದರ+ ಕಾಣೆನು+ ಶಿವಶಿವಾ+ ಎಂದ್+ಅಳಲಿದನು +ಕರ್ಣ

ಅಚ್ಚರಿ:
(೧) ಕರ್ಣನಿಗೆ ದುರ್ಯೋಧನ ಮೇಲಿದ್ದ ಪ್ರೀತಿಯನ್ನು ತೋರುವ ಪದ್ಯ
(೨) ಅಳಿ, ಮಡಿ -ಸಮನಾರ್ಥಕ ಪದ
(೩) ಒಡವು – ೨, ೩ ಸಾಲಿನ ಕೊನೆ ಪದ

ಪದ್ಯ ೭: ಕರ್ಣನು ದುರ್ಯೋಧನನನ್ನು ನೆನೆದು ಏಕೆ ಮರುಗಿದನು?

ನೋಡಿ ದಣಿಯನು ನಿಚ್ಚಲುಚಿತವ
ಮಾಡಿ ದಣಿಯನು ಖೇಳ ಮೇಳದ
ಲಾಡಿ ದಣಿಯನು ಶಿವಶಿವಾ ತನ್ನೊಡನೆ ಕುರುರಾಯ
ಓಡಲರಿಯದೆ ದ್ರೋಣ ಭೀಷ್ಮರು
ಗೂಡ ತಲೆಗೊಟ್ಟೈಸರಲಿ ತಾ
ಮಾಡಿತೇನರಸಂಗೆನುತ ಮರುಗಿದನು ಕಲಿಕರ್ಣ (ಕರ್ಣ ಪರ್ವ, ೨೭ ಸಂಧಿ, ೭ ಪದ್ಯ)

ತಾತ್ಪರ್ಯ:
ದುರ್ಯೋಧನನಿಗೆ ನನ್ನನ್ನು ಎಷ್ಟು ನೋಡಿದರೂ ತೃಪ್ತಿಯಾಗುತ್ತಿರಲಿಲ್ಲ. ಪ್ರತಿನಿತ್ಯವೂ ನನ್ನನ್ನು ಗೌರವಿಸಿದರೂ ಅವನಿಗೆ ದಣಿವಿಲ್ಲ. ನನ್ನೊಡನೆ ಎಷ್ಟು ಆಡಿದರೂ ತೃಪ್ತಿಯಿಲ್ಲ. ದ್ರೋಣ, ಭೀಷ್ಮರು ಯುದ್ಧವನ್ನು ಸರಿಯಾಗಿ ಮಾಡದೆ ಮಡಿದರು ಎಂದು ನಾನು ಆಕ್ಷೇಪಿಸುತ್ತಿದ್ದೆ, ನಾನು ಇಂತಹ ಅರಸನಿಗೆ ಮಾಡಿದ್ದಾದರೂ ಏನು ಎಂದು ಕರ್ಣನು ನೆನೆದು ಮರುಗಿದನು.

ಅರ್ಥ:
ನೋಡು: ವೀಕ್ಷಿಸು; ದಣಿ: ಆಯಾಸ; ನಿಚ್ಚ: ನಿತ್ಯ, ಒಂದೇ ಸಮನಾದ; ಉಚಿತ: ಸರಿಯಾದ; ಖೇಳ: ಆಟ; ಮೇಳ: ಸೇರುವಿಕೆ, ಗುಂಪು; ಓಡು: ಧಾವಿಸು; ಅರಿ: ತಿಳಿ; ತಲೆಗೊಟ್ಟು: ಸಾವನಪ್ಪು; ಐಸು: ಅಷ್ಟು; ಅರಸ: ರಾಜ; ಮರುಗು: ದುಃಖಿಸು; ಕಲಿ: ಶೂರ;

ಪದವಿಂಗಡಣೆ:
ನೋಡಿ +ದಣಿಯನು +ನಿಚ್ಚಲ್+ಉಚಿತವ
ಮಾಡಿ+ ದಣಿಯನು +ಖೇಳ +ಮೇಳದಲ್
ಆಡಿ +ದಣಿಯನು +ಶಿವಶಿವಾ+ ತನ್ನೊಡನೆ +ಕುರುರಾಯ
ಓಡಲರಿಯದೆ +ದ್ರೋಣ +ಭೀಷ್ಮರು
ಗೂಡ+ ತಲೆಗೊಟ್ಟ್+ಐಸರಲಿ +ತಾ
ಮಾಡಿತೇನ್+ಅರಸಂಗ್+ಎನುತ +ಮರುಗಿದನು +ಕಲಿಕರ್ಣ

ಅಚ್ಚರಿ:
(೧) ನೋಡಿ, ಮಾಡಿ, ಆಡಿ – ಪ್ರಾಸ ಪದಗಳು
(೨) ಸರಿಯಾಗಿ ಯುದ್ಧಮಾಡದೆ ಎಂದು ಹೇಳಲು – ಓಡಲರಿಯದೆ ಪದದ ಬಳಕೆ