ಪದ್ಯ ೨: ಅರ್ಜುನನ ಬಾಣಗಳು ಕರ್ಣನ ರಥಕ್ಕೆ ಯಾವ ಹಾನಿ ಮಾಡಿದವು?

ತೂಳಿದನು ಕಲಿ ಪಾರ್ಥನೀತನ
ಮೇಲೆ ಶಿವಶಿವ ಕಣೆಯ ಕಡೆವಳೆ
ಗಾಲ ತಪ್ಪಲ್ಲೆನುತ ಕಡಿದನು ಕರ್ಣನಂಬುಗಳ
ಮೇಲೆಮೇಲೆಚ್ಚಂಬುಗಳ ಸಲೆ
ಸೀಳಿ ಕರ್ಣಧ್ವಜದ ಕಂಭದ
ಕೂಲ ಮುರಿಯೆಸಲುಡಿದು ಬಿದ್ದುದು ವರ ರಥಾಗ್ರದಲಿ (ಕರ್ಣ ಪರ್ವ, ೨೭ ಸಂಧಿ, ೨ ಪದ್ಯ)

ತಾತ್ಪರ್ಯ:
ಶಿವ ಶಿವಾ, ಅರ್ಜುನನು ಇವನ ಮೇಲೆ ಪ್ರಳಯಕಾಲದ ಮಳೆಯಂತಹ ಬಾಣಗಳ ಮಳೆಯನ್ನು ಸುರಿಸಿದನು. ಕರ್ಣನು ಇದನ್ನು ನೋಡಿ, ಇದರಲ್ಲಿ ತಪ್ಪೇನು ಎಂದು ಹೇಳುತ್ತಾ ಆ ಬಾಣಗಳೆಲ್ಲವನ್ನು ಕಡೆದನು. ಮತ್ತೆ ಅರ್ಜುನನು ಮೇಲೆ ಮೇಲೆ ಬಿಟ್ಟ ಬಾಣಗಳು ಕರ್ಣನ ರಥದ ಧ್ವಜ, ಕಂಬಗಳನ್ನು ಕತ್ತರಿಸಲು, ಅದು ರಥದ ಮೇಲೆ ಮುರಿದು ಬಿತ್ತು.

ಅರ್ಥ:
ತೂಳು: ಆಕ್ರಮಣ; ಮೈದುಂಬು; ಕಲಿ: ಶೂರ; ಕಣೆ: ಬಾಣ; ಕಡೆ: ಕೊನೆ; ಕಡೆವಳೆಗಾಲ: ಪ್ರಳಯಕಾಲದ ಮಳೆ ಕಾಲ; ತಪ್ಪಲ್ಲ: ಸರಿಯಿದೆ; ಕಡಿ: ಸೀಳು; ಅಂಬು: ಬಾಣ; ಸಲೆ: ಒಂದೇ ಸಮನೆ; ಸೀಳು: ಕಡಿ; ಧ್ವಜ: ಬಾವುಟ; ಕಂಬ: ಆಧಾರಕ್ಕೆ ನಿಲ್ಲಿಸುವ ಮರ; ಕೂಲ: ರಾಶಿ, ಮೊತ್ತ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಉಡಿ: ತುಂಡು ಮಾಡು; ಬಿದ್ದು: ಮೇಲೆ ಬೀಳು; ವರ: ಶ್ರೇಷ್ಠ; ರಥ: ಬಂಡಿ; ಅಗ್ರ: ಮೇಲ್ಭಾಗ;

ಪದವಿಂಗಡಣೆ:
ತೂಳಿದನು +ಕಲಿ +ಪಾರ್ಥನ್+ಈತನ
ಮೇಲೆ +ಶಿವಶಿವ+ ಕಣೆಯ+ ಕಡೆವಳೆ
ಕಾಲ+ ತಪ್ಪಲ್ಲ್+ಎನುತ+ ಕಡಿದನು +ಕರ್ಣನಂಬುಗಳ
ಮೇಲೆ+ಮೇಲ್+ಎಚ್ಚ್+ಅಂಬುಗಳ +ಸಲೆ
ಸೀಳಿ +ಕರ್ಣಧ್ವಜದ+ ಕಂಭದ
ಕೂಲ +ಮುರಿ+ಎಸಲ್+ಉಡಿದು+ ಬಿದ್ದುದು +ವರ+ ರಥಾಗ್ರದಲಿ

ಅಚ್ಚರಿ:
(೧) ಕಣೆ, ಅಂಬು – ಸಮನಾರ್ಥಕ ಪದ
(೨) ಕ ಕಾರದ ಜೋಡಿ ಪದಗಳು – ಣೆಯ ಕಡೆವಳೆಗಾಲ; ಕಡಿದನು ಕರ್ಣನಂಬುಗಳ; ರ್ಣಧ್ವಜದ ಕಂಭದ ಕೂಲ
(೩) ಪ್ರಳಯಕಾಲ ಎಂದು ಹೇಳಲು – ಕಡೆವಳೆಗಾಲ ಪದದ ಪ್ರಯೋಗ

ಪದ್ಯ ೧: ಸಂಜಯನು ಧೃತರಾಷ್ಟ್ರನಿಗೆ ಯಾವುದನ್ನು ಸವಿಯಲ್ಲು ಹೇಳಿದನು?

ಸಾಲದೇ ಕಥೆಯನ್ನು ಮೇಲಣ
ಕಾಳೆಗದ ಮಾತುಗಳನಕಟಾ
ಕೇಳಿ ಜೀವವ ಹಿಡಿಯಲಾಪೈ ತಂದೆ ಧೃತರಾಷ್ಟ್ರ
ಹೇಳುವಡೆ ಕರ್ಣವ್ಯಥೆಯ ಸಂ
ಭಾಳಿಸುವಡೆನಗರಿದು ನುಡಿಗಳ
ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ (ಕರ್ಣ ಪರ್ವ, ೨೭ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧದ ವೃತ್ತಾಂತವನ್ನು ತಿಳಿಸುತ್ತಾ, ಧೃತರಾಷ್ಟ್ರ ಇನ್ನು ಕಥೆಯನ್ನು ಕೇಳಿದುದು ಸಾಕಾಗಲಿಲ್ಲವೇ? ಯುದ್ಧದಲ್ಲಿ ಮುಂದಾಗುವುದನ್ನು ಕೇಳಿ ನೀನು ಜೀವಸಹಿತನಾಗಿರುವೆಯಾ? ಅಯ್ಯೋ, ಮುಂದಿನ ಕಥೆಯು ಕಿವಿಗೆ ಶೂಲದಂತೆ ನೋವನ್ನುಂಟುಮಾಡುತ್ತದೆ. ಅದನ್ನು ಹೇಳಲೂ ಸಹಿಸಲೂ ನನಗೇ ಅಸಾಧ್ಯ. ಕಾಳಕೂಟದಂತಹ ಮಾತುಗಳನ್ನು ಬಡಿಸುತ್ತೇನೆ, ಕೇಳಿ ಆಹ್ಲಾದಿಸು.

ಅರ್ಥ:
ಸಾಲದೇ: ಸಾಕು; ಕಥೆ: ನಿರೂಪಣೆ; ಮೇಲಣಿಗೆ: ಮೇಲಕ್ಕೆ; ಕಾಳೆಗ: ಯುದ್ಧ; ಮಾತು: ವಾಣಿ, ವಾಕ್; ಅಕಟ: ಅಯ್ಯೋ; ಕೇಳು: ಆಲಿಸು; ಜೀವ: ಬದುಕು; ಹಿಡಿಯು: ಬಂಧಿಸು, ಕಟ್ಟು; ತಂದೆ: ಪಿತ; ಹೇಳು: ತಿಳಿಸು; ವ್ಯಥೆ: ನೋವು, ಯಾತನೆ; ಸಂಭಾಳಿಸು: ಸಹಿಸು; ಅರಿ: ತಿಳಿ; ನುಡಿ: ಮಾತು; ಕಾಳಕೂಟ: ವಿಷ; ಬಡಿಸು: ನೀಡು; ಕಿವಿ: ಕರ್ಣ; ಸವಿ: ಆಹ್ಲಾದಿಸು;

ಪದವಿಂಗಡಣೆ:
ಸಾಲದೇ+ ಕಥೆಯನ್ನು +ಮೇಲಣ
ಕಾಳೆಗದ +ಮಾತುಗಳನ್+ಅಕಟಾ
ಕೇಳಿ +ಜೀವವ+ ಹಿಡಿಯಲಾಪೈ+ ತಂದೆ +ಧೃತರಾಷ್ಟ್ರ
ಹೇಳುವಡೆ +ಕರ್ಣ+ವ್ಯಥೆಯ +ಸಂ
ಭಾಳಿಸುವಡ್+ಎನಗ್+ಅರಿದು+ ನುಡಿಗಳ
ಕಾಳಕೂಟವ+ ಬಡಿಸುವೆನು+ ಕಿವಿಯಾರೆ +ಸವಿಯೆಂದ

ಅಚ್ಚರಿ:
(೧) ನುಡಿಯನ್ನು ಬಡಿಸುವ – ಕವಿಯ ಪದಗಳ ಪ್ರೌಢಿಮೆ
(೨) ವಿಷವನ್ನು ಸವಿಯೆಂದು ಹೇಳುವ ಪರಿ – ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ

ನುಡಿಮುತ್ತುಗಳು: ಕರ್ಣ ಪರ್ವ, ೨೭ ಸಂಧಿ

  • ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ – ಪದ್ಯ ೧
  • ಧೂಮಚುಂಬಿತ ಚಿತ್ರದಂತೆ ಸನಾಮರಿದ್ದುದು – ಪದ್ಯ ೩
  • ನೆತ್ತರಲಿ ನಾದಿದನು ನಾನಾವಿಧ ಶರಾವಳಿಯ – ಪದ್ಯ ೪
  • ಪ್ರಾಣ ಪಾಂಡವರೆಂಬ ನುಡಿಯನು ಜಾಣಿನಲಿ ಹರಿ ಬಲಿದನು – ಪದ್ಯ ೫
  • ಒಡೆಯಗೆ ಕಾಣೆನಾಪ್ತರನೆಂದು ಮನದಲಿ ಮರುಗಿದನು ಕರ್ಣ – ಪದ್ಯ ೫
  • ಕುಲದ ಮಲಿನವ ತೊಳೆದ ಕೌರವ ಕುಲದೊಳೊಡಬೆಚ್ಚವನಿಪಾಲಕ ತಿಲಕ ಕುರುಪತಿಗಾಪ್ತ್ರರಿಲ್ಲೆಂದಳಲಿದನು ಕರ್ಣ – ಪದ್ಯ ೬
  • ಕರುಣೆಗೆ ಕರುಣದನುಸಂಧಾನ ಮಾಣದು ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದುದಮರಗಣ – ಪದ್ಯ ೧೯
  • ಮಂದರಾಚಲ ನಡುಗೆ ಕಿಡಿಗಳ ಸಂದಣಿಯ ಸುರಿವಂಬನಾ – ಪದ್ಯ ೨೦
  • ಕೌರವ ಕುಲದ ನಿಖಿಳೈಶ್ವರ್ಯವಿಳೆಗೊರ್ಗುಡಿಸಿ ಕೆಡೆವಂತೆ – ಪದ್ಯ ೨೪
  • ಕಂಬನಿಯ ಕಡಲೊಳು ಹಾಯಿದೆದ್ದುದು ಹೊರಳುತಿರ್ದುದು ಕೂಡೆ ಪರಿವಾರ – ಪದ್ಯ ೨೬
  • ಕಿತ್ತರೋ ಕಲ್ಪದ್ರುಮವ ಕೆಡೆಗುತ್ತಿದರೊ ಸುರಧೇನುವನು ಕೈವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ – ಪದ್ಯ ೨೮
  • ಕಡಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ – ಪದ್ಯ ೩೦
  • ದ್ಯುಮಣಿ ಕರ್ಣದ್ಯುಮಣಿಸಹಿತಸ್ತಮಿಸೆ ಕಮಲಿನಿ ಕೌರವನ ಮುಖಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ – ಪದ್ಯ ೩೧
  • ಅಮಳ ಚಕ್ರಾಂಗಕ್ಕೆ ಭೂಪೋತ್ತಮನ ವಿಜಯಾಂಗನೆಗೆ ಅಗಲಿಕೆ ಸಮನಿಸಿತು – ಪದ್ಯ ೩೧

ಪದ್ಯ ೫೩: ಕರ್ಣನ ಶೌರ್ಯಾಗ್ನಿಗೆ ಯಾರು ಅಳುಕಿದರು?

ಬಲಜಲಧಿ ಸುಳಿಗೊಂಡು ಪಾರ್ಥನ
ಬಳಿಗೆ ತೆಗೆದುದು ತೆಗೆದುದೀತನ
ಕಲಿತನದ ವಿಕ್ರಮ ಧನಂಜಯನಾ ಧನಂಜಯನ
ಅಳುಕಿದರು ಭೀಮಾದಿಗಳು ತ
ಲ್ಲಳಿಸಿತಾಚೆಯ ಥಟ್ಟು ಕೌರವ
ದಳದ ಕಳಕಳ ಕೆಟ್ಟುದೊಂದರೆಗಳಿಗೆ ಮಾತ್ರದಲಿ (ಕರ್ಣ ಪರ್ವ, ೨೬ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪಾಂಡವಸೇನೆಯ ಸಮುದ್ರದಂತಿದ್ದ ಸೈನಿಕರು ಅರ್ಜುನನ ಬಳಿ ಸುಳಿಯಂತೆ ಸೇರಿದರು. ಕರ್ಣನು ತೋರುತ್ತಿದ್ದ ಶೌರ್ಯಾಗ್ನಿಯು ಅರ್ಜುನನನ್ನು ಮುತ್ತಿತು. ಭೀಮನೇ ಮೊದಲಾದವರು ಅಳುಕಿದರು. ವೈರಿಸೇನೆಯು ತಲ್ಲಣಿಸಿತು. ಕೌರವಸೈನ್ಯದ ಕಳವಳವು ಒಂದರೆಗಳಿಗೆಗೆ ಮಾಯವಾಯಿತು.

ಅರ್ಥ:
ಬಲ: ಸೈನ್ಯ; ಜಲಧಿ: ಸಾಗರ; ಬಲಜಲಧಿ: ಸೈನ್ಯಸಾಗರ; ಸುಳಿ: ತಿರುಗಣಿ, ಜಲಾವರ್ತ; ಬಳಿ: ಹತ್ತಿರ; ತೆಗೆ: ಪ್ರಕಟವಾಗು; ಕಲಿ: ಶೂರ, ಪರಾಕ್ರಮ; ವಿಕ್ರಮ: ಶೌರ್ಯ; ಧನಂಜಯ: ಅರ್ಜುನ; ಅಳುಕು: ಹೆದರು; ಆದಿ: ಮುಂತಾದ; ತಲ್ಲಳಿಸು: ಅಂಜಿಕೆ, ಭಯ; ಥಟ್ಟು: ಗುಂಪು; ದಳ: ಸೈನ್ಯ; ಕಳಕಳ: ಗೊಂದಲ; ಕೆಟ್ಟುದು: ದೂರವಾಗು, ಕಡಿಮೆಯಾಗು;

ಪದವಿಂಗಡಣೆ:
ಬಲಜಲಧಿ +ಸುಳಿಗೊಂಡು +ಪಾರ್ಥನ
ಬಳಿಗೆ+ ತೆಗೆದುದು +ತೆಗೆದುದ್+ಈತನ
ಕಲಿತನದ +ವಿಕ್ರಮ +ಧನಂಜಯನ್+ಆ+ ಧನಂಜಯನ
ಅಳುಕಿದರು+ ಭೀಮಾದಿಗಳು +ತ
ಲ್ಲಳಿಸಿತ್+ಆಚೆಯ +ಥಟ್ಟು +ಕೌರವ
ದಳದ+ ಕಳಕಳ+ ಕೆಟ್ಟುದ್+ಒಂದ್+ಅರೆಗಳಿಗೆ +ಮಾತ್ರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ- ಸೈನ್ಯವು ಹೇಗೆ ಸೇರಿತು? ಬಲಜಲಧಿ ಸುಳಿಗೊಂಡು ಪಾರ್ಥನ
ಬಳಿಗೆ ತೆಗೆದುದು
(೨) ಜೋಡಿ ಪದಗಳು – ತೆಗೆದು, ಧನಂಜಯ
(೩) ಧನಂಜಯ ಪದವನ್ನು ಎರಡು ಅರ್ಥದಲ್ಲಿ ಬಳಸಿರುವುದು – ಅಗ್ನಿ ಮತ್ತು ಅರ್ಜುನ
(೪) ಥಟ್ಟು, ಬಲ, ದಳ – ಸೈನ್ಯಕ್ಕೆ ಬಳಸಿದ ಪದಗಳು

ಪದ್ಯ ೫೨: ಕರ್ಣನ ಎಷ್ಟು ಬಾಣಗಳಿಂದ ಅರ್ಜುನನನ್ನು ಎದುರಿಸಿದನು?

ಹತ್ತು ಶರದಲಿ ತುರಗವನು ಮೂ
ವತ್ತರಲಿ ಮುರವೈರಿಯನು ತೊಂ
ಬತ್ತರಲಿ ಫಲುಗುಣನನೈವತ್ತಂಬಿನಲಿ ಕಪಿಯ
ಮತ್ತೆ ಮೂವತ್ತರಲಿ ಮಗುಳರು
ವತ್ತರಲಿ ನರರಥವ ನೂರೈ
ವತ್ತು ಶರದಲಿ ಘಾಯಗಾಣಿಸಿದನು ಚತುರ್ಬಲವ (ಕರ್ಣ ಪರ್ವ, ೨೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕರ್ಣನು ಹತ್ತು ಬಾಣಗಳಿಂದ ಅರ್ಜುನನ ರಥದ ಕುದುರೆಗಳನ್ನು, ಮೂವತ್ತು ಬಾಣಗಳಿಂದ ಶ್ರೀಕೃಷ್ಣನನ್ನು, ತೊಂಬತ್ತು ಬಾಣಗಳಿಂದ ಅರ್ಜುನನನ್ನು, ಐವತ್ತು ಬಾಣಗಳಿಂದ ಹನುಮನನ್ನು, ಮತ್ತೆ ಮೂವತ್ತು ನಂತರ ಅರವತ್ತು ಬಾಣಗಳಿಂದ ಅರ್ಜುನನ ರಥವನ್ನು ನೂರೈವತ್ತು ಬಾಣಗಳಿಂದ ಸೇನೆಯನ್ನು ಹೊಡೆದನು.

ಅರ್ಥ:
ಹತ್ತು: ದಶ; ಶರ: ಬಾಣ; ತುರಗ: ಕುದುರೆ; ಮುರವೈರಿ: ಕೃಷ್ಣ; ಅಂಬು: ಬಾಣ; ಕಪಿ: ಹನುಮ; ಮಗುಳು: ಮತ್ತೆ; ನರ: ಅರ್ಜುನ; ರಥ: ಬಂಡಿ; ಘಾಯ: ಪೆಟ್ಟು; ಬಲ: ಸೈನ್ಯ;
ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ;

ಪದವಿಂಗಡಣೆ:
ಹತ್ತು +ಶರದಲಿ +ತುರಗವನು +ಮೂ
ವತ್ತರಲಿ +ಮುರವೈರಿಯನು +ತೊಂ
ಬತ್ತರಲಿ +ಫಲುಗುಣನನ್+ಐವತ್ತಂಬಿನಲಿ+ ಕಪಿಯ
ಮತ್ತೆ +ಮೂವತ್ತರಲಿ+ ಮಗುಳ್+ಅರು
ವತ್ತರಲಿ+ ನರ+ರಥವ+ ನೂರೈ
ವತ್ತು +ಶರದಲಿ+ ಘಾಯಗಾಣಿಸಿದನು+ ಚತುರ್ಬಲವ

ಅಚ್ಚರಿ:
(೧) ಮೂವತ್ತರಲಿ, ತೊಂಬತ್ತರಲಿ, ಅರುವತ್ತರಲಿ – ಪದಗಳ ಜೋಡಣೆ
(೨) ಮ ಕಾರದ ಪದಗಳು – ಮೂವತ್ತರಲಿ ಮುರವೈರಿಯನು; ಮತ್ತೆ ಮೂವತ್ತರಲಿ ಮಗುಳರು
ವತ್ತರಲಿ
(೩) ಶರದಲಿ – ೧, ೬ ಸಾಲಿನ ೨ನೇ ಪದ

ಪದ್ಯ ೫೧: ಕರ್ಣನು ಮತ್ತೆ ಯುದ್ಧಕ್ಕೆ ನಿಲ್ಲಲ್ಲು ಸೈನ್ಯದಲ್ಲಾದ ಎಂತ ಬದಲಾವಣೆಯಾಯಿತು?

ಉಬ್ಬಿದನು ನಿನ್ನಾತನಾತನ
ತುಬ್ಬಿನಲಿ ಕುರುಬಲದ ಹರುಷದ
ಜಬ್ಬುರಿಯ ಹುರಿಗೂಡಿ ತೋರಿತು ಚಾರು ಚತುರಂಗ
ತೆಬ್ಬಿ ತುಳುಕುವ ಕಣೆಯ ಕಣೆಯಲಿ
ಹಬ್ಬಿ ಹರೆದುದು ತೋರದಲಿ ಬಲಿ
ದುಬ್ಬುಗವಳದ ಕಣ್ಣುಗಳು ಕರ್ಣಾವಸಾನದಲಿ (ಕರ್ಣ ಪರ್ವ, ೨೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಕರ್ಣನು ಮತ್ತೆ ಬಿಲ್ಲನ್ನು ತೊಡಲು, ದುರ್ಯೋಧನನು ಉಬ್ಬಿದನು, ಅವನ ಉತ್ಸಾಹದಿಂದ ಕುರುಸೈನ್ಯವು ಉತ್ಸಾಹಗೊಂಡು ಜೋರಾದ ಧ್ವನಿಮಾಡುತ್ತಾ ಮುಂದುವರೆಯಿತು. ಬಿಟ್ಟ ಬಾಣಗಳು ಒಂದನ್ನೊಂದು ಘಟ್ಟಿಸಿದವು, ಕರ್ಣನು ಇನ್ನೇನು ಸೋತನು ಎನ್ನುವ ಕಾಲದಲ್ಲಿ ಜಯವನ್ನು ಹಾರೈಸಿದ ಕಣ್ಣುಗಳು ಈಗ ಮತ್ತೆ ಉಬ್ಬಿದವು.

ಅರ್ಥ:
ಉಬ್ಬು: ಹೆಚ್ಚಾಗು, ಹಿಗ್ಗು; ನಿನ್ನಾತ: ಮಗ; ತುಬ್ಬು: ಹಬ್ಬು, ಹರಡು; ಬಲ: ಸೈನ್ಯ; ಹರುಷ: ಸಂತೋಷ; ಜಬ್ಬುಲಿ: ಬೈಗಳಿಂದ ಕೂಡಿದ ಕೂಗು, ದುರ್ಬಲ; ಹುರಿ: ಸತ್ವಶಾಲಿಯಾದುದು, ಹುರುಪು; ತೋರು: ಗೋಚರಿಸು; ಚಾರು: ಸುಂದರ; ಚತುರಂಗ: ಸೈನ್ಯದ ನಾಲ್ಕು ಅಂಗಗಳು; ತೆಬ್ಬು: ಬಿಲ್ಲಿನ ತಿರುವು; ಕಣೆ: ಬಾಣ; ಹಬ್ಬು: ಹರದು; ಹರಿ: ಚೆಲ್ಲು; ತೋರು: ಗೋಚರಿಸು; ಬಲಿದ: ಗಟ್ಟಿ, ದೃಢ; ಕಣ್ಣು: ನೇತ್ರ; ಅವಸಾನ: ಕೊನೆ, ಅಂತ್ಯ;

ಪದವಿಂಗಡಣೆ:
ಉಬ್ಬಿದನು+ ನಿನ್ನಾತನ್+ಆತನ
ತುಬ್ಬಿನಲಿ +ಕುರುಬಲದ +ಹರುಷದ
ಜಬ್ಬುರಿಯ +ಹುರಿಗೂಡಿ+ ತೋರಿತು +ಚಾರು +ಚತುರಂಗ
ತೆಬ್ಬಿ+ ತುಳುಕುವ+ ಕಣೆಯ +ಕಣೆಯಲಿ
ಹಬ್ಬಿ +ಹರೆದುದು +ತೋರದಲಿ+ ಬಲಿ
ದುಬ್ಬುಗವಳದ+ ಕಣ್ಣುಗಳು +ಕರ್ಣಾವಸಾನದಲಿ

ಅಚ್ಚರಿ:
(೧) ಉಬ್ಬಿ, ತುಬ್ಬಿ, ತೆಬ್ಬಿ, ಹಬ್ಬಿ – ಪ್ರಾಸ ಪದಗಳು
(೨) ಸೈನಿಕರ ಉತ್ತೇಜನೆಯನ್ನು ವಿವರಿಸುವ ಬಗೆ – ತೆಬ್ಬಿ ತುಳುಕುವ ಕಣೆಯ ಕಣೆಯಲಿ
ಹಬ್ಬಿ ಹರೆದುದು ತೋರದಲಿ ಬಲಿ ದುಬ್ಬುಗವಳದ ಕಣ್ಣುಗಳು ಕರ್ಣಾವಸಾನದಲಿ

ಪದ್ಯ ೫೦: ಯಾವುದು ಕಾಮನಬಿಲ್ಲಿನಂತಿರುತ್ತವೆ?

ಅರಸ ಕೇಳೈ ಜೂಜುಗಾರರ
ಸಿರಿಯ ಸಡಗರ ಕಳಿವಗಲ ತಾ
ವರೆಯ ನಗೆ ಸಜ್ಜನರ ಖಾತಿ ನಿತಂಬಿನೀ ಸ್ನೇಹ
ಪರಮಯೋಗಿಯ ಲೀಲೆ ಕೌರವ
ರರಸನೊಡ್ಡಿನ ಜವಿದೀಸರ
ಗರುಡಿಯೊಂದೇ ಶ್ರಮವ ಕೊಡುವುದು ಶಕ್ರಧನುವೆಂದ (ಕರ್ಣ ಪರ್ವ, ೨೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಜೂಜುಗಾರರ ಐಶ್ವರ್ಯ ಮತ್ತು ಅವರ ಸಂಭ್ರಮ, ಸಂಜೆಯ ಕಾಲದ ಕಮಲದ ನಗೆ, ಸಜ್ಜನರ ಸಿಟ್ಟು, ಸ್ತ್ರೀ ಸ್ನೇಹ, ಯೋಗಿಯ ಲೀಲೆ, ಕೌರವ ಸೇನೆಯ ಗೆಲುವು ಇವೆಲ್ಲವೂ ಕಾಮನ ಬಿಲ್ಲಿನಂತೆ ಕ್ಷಣಿಕವಾದವು ಎಂದು ಸಂಜಯನು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಜೂಜು:ಜುಗಾರಿ, ಸಟ್ಟ, ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಸಿರಿ: ಐಶ್ವರ್ಯ; ಸಡಗರ: ಉತ್ಸಾಹ, ಸಂಭ್ರಮ; ಕಳಿವಗಲ: ಸಂಜೆ; ತಾವರೆ: ಕಮಲ; ನಗೆ: ಸಂತಸ; ಸಜ್ಜನ: ಒಳ್ಳೆಯ ನಡೆತೆಯ ಜನರು; ಖಾತಿ: ಸಿಟ್ಟು; ನಿತಂಬಿನಿ: ಸ್ತ್ರೀ; ಸ್ನೇಹ: ಮೈತ್ರಿ; ಪರಮ: ಶ್ರೇಷ್ಠ; ಯೋಗಿ: ಯತಿ, ಚಿತ್ತವೃತ್ತಿ ನಿರೋಧ ಮಾಡುವವನು; ಲೀಲೆ: ಆನಂದ, ಸಂತೋಷ; ಒಡ್ಡು: ಗುಂಪು; ಜಯ: ಗೆಲುವು; ಗರುಡಿ: ವ್ಯಾಯಾಮ ಶಾಲೆ; ಸರ: ಸ್ವರ, ಧ್ವನಿ; ಶ್ರಮ: ದಣಿವು, ಆಯಾಸ; ಕೊಡು: ನೀಡು; ಶಕ್ರ: ಇಂದ್ರ; ಧನು: ಬಿಲ್ಲು; ಶಕ್ರಧನು: ಕಾಮನಬಿಲ್ಲು;

ಪದವಿಂಗಡಣೆ:
ಅರಸ +ಕೇಳೈ +ಜೂಜುಗಾರರ
ಸಿರಿಯ +ಸಡಗರ+ ಕಳಿವಗಲ+ ತಾ
ವರೆಯ +ನಗೆ +ಸಜ್ಜನರ+ ಖಾತಿ +ನಿತಂಬಿನೀ +ಸ್ನೇಹ
ಪರಮಯೋಗಿಯ +ಲೀಲೆ+ ಕೌರವರ್
ಅರಸನ್+ಒಡ್ಡಿನ +ಜಯವಿದ್+ಈ+ಸರ
ಗರುಡಿಯೊಂದೇ +ಶ್ರಮವ +ಕೊಡುವುದು +ಶಕ್ರಧನುವೆಂದ

ಅಚ್ಚರಿ:
(೧) ಹಲವು ಉಪಮಾನಗಳ ಪ್ರಯೋಗ
(೨) ಸಂಜೆಗೆ ಕಳಿವಗಲ, ಕಾಮನಬಿಲ್ಲಿಗೆ ಶಕ್ರಧನು ಪದದ ಪ್ರಯೋಗ