ಪದ್ಯ ೪೨: ವೀರರು ಏನೆಂದು ಯೋಚಿಸಿ ಹೋರಾಡಿದರು?

ಬಾಣಹತಿಗಕ್ಕುಡಿಸಿ ರಾಜ್ಯ
ಶ್ರೇಣಿ ಜರುಗಿತು ಶೌರ್ಯನಗರದ
ವಾಣಿಯರು ಹೊಕ್ಕಿರಿದು ಹೋಗಾಡಿದರು ಪತಿರಿಣವ
ಗೋಣಕೊಯ್ಲಿನ ಕಾವಣಕೆ ಮುಂ
ಗೇಣಿಕಾರನು ಮೊಳಗಿದನು ಫಡ
ಕೇಣವಿನ್ನೇಕೆನುತ ಕೈದೋರಿತು ಭಟಸ್ತೋಮ (ಕರ್ಣ ಪರ್ವ, ೨೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಬಾಣಗಳ ಹೊಡೆತಕ್ಕೆ ನಡುಗಿ ರಾಜ್ಯವು ಕೈಬಿಡುವ ಸ್ಥಿತಿಗೆ ತಲುಪಿದೆ, ಈ ಶೌರ್ಯನಗರದ ವಣಿಜರು ಪರಾಕ್ರಮದಿಂದ ಹೋರಾಡಿ ತಮ್ಮ ಒಡೆಯನ ಋಣವನ್ನು ತೀರಿಸಿದರು. ಕತ್ತುಗಳ ಕಡಿತದ ಚಪ್ಪರಕ್ಕೆ ಗೇಣಿಕಾರನಾದ ಅರ್ಜುನನು ಬಂದಿದ್ದಾನೆ, ಇನ್ನೇಕೆ ಸಂಕೋಚ ಎಂದುಕೊಂಡು ವೀರರು ಹೋರಾಡಿದರು.

ಅರ್ಥ:
ಬಾಣ: ಶರ; ಹತಿ: ಹೊಡೆತ; ಅಕ್ಕು: ಆಗುತ್ತದೆ; ರಾಜ್ಯ: ರಾಷ್ಟ್ರ; ಶ್ರೇಣಿ:ಪಂಕ್ತಿ, ಸಾಲು, ಗುಂಪು; ಜರುಗು: ಪಕ್ಕಕ್ಕೆ ಸರಿ, ಜರಿ; ಶೌರ್ಯ: ಧೈರ್ಯ; ನಗರ: ಊರು; ವಾಣಿ: ಮಾತು; ವಣಿ: ವ್ಯಾಪಾರಿ; ಹೊಕ್ಕು: ಸೇರು; ಇರಿ: ಚುಚ್ಚು; ಹೋಗಾಡು: ಕಳೆದುಹಾಕು; ಪತಿ: ಒಡೆಯ; ರಿಣ: ಹಂಗು; ಗೋಣು: ಕುತ್ತಿಗೆ, ಗಳ; ಕೊಯ್ಲು: ಕೊಯ್ಯುವಿಕೆ ಕಟಾವು; ಕಾವಣ: ಹಂದರ, ಚಪ್ಪರ; ಗೇಣಿಕಾರ: ; ಮೊಳಗು: ಧ್ವನಿಮಾಡು, ಶಬ್ದ ಮಾಡು; ಫಡ: ತಿರಿಸ್ಕಾರದ ಮಾತು; ಕೇಣ: ಮತ್ಸರ, ಕೋಪ; ಕೈದೋರು: ಹೋರಾಡು; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಬಾಣಹತಿಗ್+ಅಕ್ಕುಡಿಸಿ +ರಾಜ್ಯ
ಶ್ರೇಣಿ +ಜರುಗಿತು +ಶೌರ್ಯನಗರದ
ವಾಣಿಯರು +ಹೊಕ್ಕಿರಿದು+ ಹೋಗಾಡಿದರು+ ಪತಿರಿಣವ
ಗೋಣ+ಕೊಯ್ಲಿನ +ಕಾವಣಕೆ +ಮುಂ
ಗೇಣಿಕಾರನು+ ಮೊಳಗಿದನು +ಫಡ
ಕೇಣವಿನ್ನೇಕೆನುತ+ ಕೈದೋರಿತು+ ಭಟಸ್ತೋಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಶೌರ್ಯನಗರದ ವಾಣಿಯರು ಹೊಕ್ಕಿರಿದು ಹೋಗಾಡಿದರು ಪತಿರಿಣವ

ಪದ್ಯ ೪೧: ಅರ್ಜುನನು ಯಾರನ್ನು ಪರಾಕ್ರಮಿಗಳೆಂದು ಹೇಳಿ ಬಾಣವನ್ನು ಹೂಡಿದನು?

ಆಳು ಮುರಿದುದಲೈ ಮಹಾರಥ
ರೇಳಿರೈ ನೀವಾರುಸಾವಿರ
ಮೇಲುದಳದವರಾಕೆವಾಲರು ನಿಮ್ಮ ಥಟ್ಟಿನಲಿ
ಮೇಳುವದ ಪರಿ ಲೇಸು ಕರ್ಣನ
ಸೋಲದಲಿ ಸೀವರಿಸಿದರೆ ಭೂ
ಪಾಲನಾಣೆ ದೊಠಾರರಹಿರೆನುತೆಚ್ಚನಾ ಪಾರ್ಥ (ಕರ್ಣ ಪರ್ವ, ೨೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನೆದಿರು ಬಂದ ಮಹಾರಥರಿಗೆ, ನಿಮ್ಮ ಸೇನೆ ನಾಶವಾಯಿತು, ವೀರರಾದ ಆರುಸಾವಿರ ಜನರು ನಿಮ್ಮ ಸೇನೆಯಲ್ಲೇ ಇಹಲೋಕ ತ್ಯಜಿಸಿದರು. ಈಗ ಒಟ್ಟಾಗಿ ನೀವು ಬಂದಿದ್ದೀರಿ, ಕರ್ಣನು ಸೋತಾಗ ನೀವು ಹಿಂಜರಿದರೆ ನಿಮ್ಮರಸನಾಣೆ, ನೀವು ಮಹಾ ಪರಾಕ್ರಮಿಗಳೆಂದು ಹೇಳುತ್ತಾ ಅರ್ಜುನನು ಅವರ ಮೇಲೆ ಬಾಣವನ್ನು ಬಿಟ್ಟನು.

ಅರ್ಥ:
ಆಳು: ಸೇವಕ; ಮುರಿ: ಸೀಳು; ಮಹಾರಥ: ಪರಾಕ್ರಮಿ; ಏಳಿರಿ: ಎದ್ದೇಳಿ; ಮೇಲುದಳ: ಹೆಚ್ಚಿನ ಪರಾಕ್ರಮಿಗಳ ಸೈನ್ಯ; ಆಕೆವಾಳ:ವೀರ, ಪರಾಕ್ರಮಿ; ಥಟ್ಟು: ಗುಂಪು; ಮೇಳ: ಗುಂಪು; ಪರಿ: ರೀತಿ; ಲೇಸು: ಒಳ್ಳೆಯದು; ಸೋಲು: ಪರಾಭವ; ಸೀವರಿಸು: ಆರ್ಭಟಿಸು, ಅಬ್ಬರಿಸು; ಭೂಪಾಲ: ಅರಸ; ಆಣೆ: ಪ್ರಮಾಣ; ದೊಠಾರ: ಶೂರ, ಕಲಿ; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಆಳು +ಮುರಿದುದಲೈ+ ಮಹಾರಥರ್
ಏಳಿರೈ +ನೀವ್+ಆರು+ಸಾವಿರ
ಮೇಲುದಳದವರ್+ಆಕೆವಾಲರು +ನಿಮ್ಮ +ಥಟ್ಟಿನಲಿ
ಮೇಳುವದ+ ಪರಿ +ಲೇಸು +ಕರ್ಣನ
ಸೋಲದಲಿ+ ಸೀವರಿಸಿದರೆ+ ಭೂ
ಪಾಲನಾಣೆ+ ದೊಠಾರರಹಿರ್+ಎನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಆಕೆವಾಲ, ದೊಠಾರ, ಮಹಾರಥ – ಸಮನಾರ್ಥಕ ಪದ

ಪದ್ಯ ೪೦: ಅರ್ಜುನನು ಕೌರವ ಸೈನ್ಯವನ್ನು ಹೇಗೆ ಕೆಡಹಿದನು?

ಅರಸ ಕೇಳು ಜಯದ್ರಥನ ಮೋ
ಹರದ ಮಧ್ಯದೊಳಂದು ಸಿಲುಕದ
ನರನ ರಥವೀ ಹೊಳ್ಳುಗರ ಹೋರಟೆಗೆ ಹೆದರುವುದೇ
ಕರಿಘಟಾವಳಿಗೊಂದು ಶರವಾ
ತುರಗದಳಕೊಂದಂಬು ಬಳಿಕೆರ
ಡೆರಡು ಶರದಲಿ ಕೆಡಹಿದನು ಕಾಲಾಳುತೇರುಗಳ (ಕರ್ಣ ಪರ್ವ, ೨೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಮಹಾರಾಜ ಕೇಳು, ಹಿಂದೆ ಜಯದ್ರಥನ ಯುದ್ಧದಲ್ಲಿ ಅವನ ಸಮಸ್ತ ಸೈನ್ಯಕ್ಕೆ ಸಿಕ್ಕಿಹಾಕಿಕೊಳ್ಳದ ಅರ್ಜುನನ ರಥವು ಇಂದು ಈ ಜೊಳ್ಳು ಸೈನಿಕರ ಹೋರಾಟಕ್ಕೆ ಬೆದರುತ್ತದೆಯೇ? ಅರ್ಜುನನ ಒಂದು ಬಾಣವು ಆನೆಗಳ ಗುಂಪನ್ನು, ಇನ್ನೊಂದು ಬಾಣವು ಕುದುರೆಗಳ ಗುಂಪನ್ನು ಮತ್ತೆರಡು ಬಾಣಗಳು ಕಾಲಾಳುಗಳು ಮತ್ತು ರಥಿಕರನ್ನು ನಾಟಿ ಅವರೆಲ್ಲರನ್ನು ಕೆಡಹಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮೋಹರ: ಯುದ್ಧ; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ನರ: ಅರ್ಜುನ; ರಥ: ಬಂಡಿ; ಹೊಳ್ಳು:ನಿಷ್ಪ್ರಯೋಜಕ, ಹೊಟ್ಟು, ತೌಡು; ಹೋರಟೆ: ಕಾಳಗ, ಯುದ್ಧ; ಹೆದರು: ಭಯಬೀಳು; ಕರಿ: ಆನೆ; ಘಟಾವಳಿ: ಗುಂಪು; ಶರ: ಬಾಣ; ತುರಗ: ಕುದುರೆ; ಅಂಬು: ಬಾಣ; ಬಳಿಕ: ನಂತರ; ಕೆಡಹು: ನಾಶಮಾಡು; ಕಾಲಾಳು: ಸೈನಿಕರು; ತೇರು: ರಥ;

ಪದವಿಂಗಡಣೆ:
ಅರಸ +ಕೇಳು +ಜಯದ್ರಥನ+ ಮೋ
ಹರದ +ಮಧ್ಯದೊಳ್+ಅಂದು+ ಸಿಲುಕದ
ನರನ+ ರಥವ್+ಈ+ ಹೊಳ್ಳುಗರ+ ಹೋರಟೆಗೆ +ಹೆದರುವುದೇ
ಕರಿಘಟಾವಳಿಗ್+ಒಂದು+ ಶರವಾ
ತುರಗದಳಕ್+ಒಂದ್+ಅಂಬು+ ಬಳಿಕ್+
ಎರಡೆರಡು +ಶರದಲಿ+ ಕೆಡಹಿದನು+ ಕಾಲಾಳು+ತೇರುಗಳ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಳ್ಳುಗರ ಹೋರಟೆಗೆ ಹೆದರುವುದೇ
(೨) ಶರ, ಅಂಬು – ಸಮನಾರ್ಥಕ ಪದ

ಪದ್ಯ ೩೯: ಕೌರವರ ಸೈನ್ಯವು ಅರ್ಜುನನನ್ನು ಮೇಲೆ ಹೇಗೆ ಆಕ್ರಮಣ ಮಾಡಿತು?

ಬೆರಸಿ ಹೊಯ್ದರು ರಾವುತರು ರಥ
ತುರಗನಿಕರದ ಬೆಸುಗೆ ಬಿಡೆ ಮದ
ಕರಿಗಳಂಘವಿಸಿದವು ರಥ ಚಾಚಿದವು ಮುಂದಣಿಗೆ
ಹರಿಗೆಗಳ ತಲೆಗೊಡ್ಡಿ ಕಕ್ಕಡ
ಪರಶು ಖಂಡೆಯದವರು ಮಂಡಿಯ
ತೆರಳದಾಂತರು ಫಲುಗುಣನ ರಥದೆರಡುಪಕ್ಕದಲಿ (ಕರ್ಣ ಪರ್ವ, ೨೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾವುತರು ಅರ್ಜುನನ ರಥವನ್ನು ಅಡ್ಡಗಟ್ಟಿ ರಥದ ಕುದುರೆಗಳನ್ನು ಹೊಯ್ದರು. ಆನೆಗಳು ರಥದ ಮುಂದೆ ನುಗ್ಗಿದವು. ಕಾಲಾಳುಗಳು ತಲೆಗೆ ಗುರಾಣಿಗಳನ್ನು ಮರೆಮಾಡಿ ಕಕ್ಕಡ, ಪರಶು, ಕತ್ತಿಗಳನ್ನು ಹಿಡಿದು ರಥವನ್ನು ಲೆಕ್ಕಿಸದೆ ಅರ್ಜುನನನ್ನು ಹೊಯ್ದರು.

ಅರ್ಥ:
ಬೆರಸು: ಕೂಡಿಸು, ಮಿಶ್ರಮಾಡು; ಹೊಯ್ದು: ಹೊಡೆ; ರಾವುತ: ಕುದುರೆಸವಾರ; ರಥ: ಬಂಡಿ; ತುರಗ: ಅಶ್ವ; ನಿಕರ: ಗುಂಪು; ಬೆಸುಗೆ: ಒಲವು; ಬಿಡೆ: ತೊರೆ; ಮದ: ದರ್ಪ; ಕರಿ: ಆಂಘವಿಸು: ಬಯಸು, ಒಪ್ಪು; ಚಾಚು: ಹರಡು; ಮುಂದಣೆ: ಮುಂದೆ; ಹರಿಗೆ: ಚಿಲುಮೆ; ತಲೆ: ಶಿರ; ಒಡ್ಡು: ತೋರು; ಕಕ್ಕಡ: ದೀವಟಿಗೆ, ಪಂಜು; ಪರಶು: ಕೊಡಲಿ, ಕುಠಾರ; ಖಂಡೆಯ:ಕತ್ತಿ, ಖಡ್ಗ; ಮಂಡಿ: ಮೊಳಕಾಲು; ತೆರಳು: ಹೊರಡು; ಪಕ್ಕ: ಹತ್ತಿರ, ಸಮೀಪ;

ಪದವಿಂಗಡಣೆ:
ಬೆರಸಿ +ಹೊಯ್ದರು +ರಾವುತರು +ರಥ
ತುರಗ+ನಿಕರದ+ ಬೆಸುಗೆ +ಬಿಡೆ +ಮದ
ಕರಿಗಳ್+ಅಂಘವಿಸಿದವು +ರಥ +ಚಾಚಿದವು +ಮುಂದಣಿಗೆ
ಹರಿಗೆಗಳ +ತಲೆಗೊಡ್ಡಿ +ಕಕ್ಕಡ
ಪರಶು+ ಖಂಡೆಯದವರು +ಮಂಡಿಯ
ತೆರಳದಾಂತರು +ಫಲುಗುಣನ +ರಥದ್+ಎರಡು+ಪಕ್ಕದಲಿ

ಪದ್ಯ ೩೮: ರಣರಂಗದ ಕೆಂಧೂಳಿ ಹೇಗೆ ಕಡಿಮೆಯಾಯಿತು?

ಮಳೆಗೆ ಹೆಚ್ಚಿದ ಧೂಳಿನಬ್ಬರ
ವಳಿವವೊಲು ವಿಜಯಾಸ್ತ್ರ ಹತಿಯಲಿ
ಹಿಳಿದ ಕರಿ ನರ ತುರಗದೊಡಲರುಣಾಂಬುಧಾರೆಯಲಿ
ಕಳಚಿತೀ ಕೆಂಧೂಳಿ ಬಾಣಾ
ವಳಿಯ ಕತ್ತಲೆಯೊಳಗೆ ಕಾಣೆನು
ದಳದೊಳಾರಾರೆಂದು ಮತ್ತರೆಗಳಿಗೆ ಮಾತ್ರದಲಿ (ಕರ್ಣ ಪರ್ವ, ೨೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಯಾವ ರೀತಿ ವರ್ಷಧಾರೆಗೆ ಧೂಳಿನ ಅಬ್ಬರವು ನಶಿಸುವುದೋ ಹಾಗೆಯೇ ಅರ್ಜುನನ ಬಾಣಗಳ ಹೊಡೆತದಿಂದ ಚತುರಂಗ ಸೇನೆಯ ಮೈಯಿಂದ ಇಳಿದ ರಕ್ತದ ಧಾರೆ ರಣರಂಗದಲ್ಲೆದ್ದ ಕೆಂಧೂಳಿಯನ್ನು ಅಡಗಿಸಿತು. ಬಾಣಗಳು ಹಬ್ಬಿ ಕತ್ತಲಾಗಿ ಮತ್ತೆ ಯಾರು ಯಾರು ಎಂಬುದು ತಿಳಿಯದಾಯಿತು.

ಅರ್ಥ:
ಮಳೆ: ವರ್ಷ; ಹೆಚ್ಚು: ಅಧಿಕ; ಧೂಳು: ಮಣ್ಣಿನ ಪುಡಿ; ಅಬ್ಬರ: ರಭಸ; ಅಳಿ: ನಾಶ; ವಿಜಯ: ಗೆಲುವು; ಅಸ್ತ್ರ: ಶಸ್ತ್ರ; ಹತಿ: ಪೆಟ್ಟು, ಹೊಡೆತ; ಹಿಳಿ: ಹಿಂಡು, ಸುರಿಸು, ವರ್ಷಿಸು; ಕರಿ: ಆನೆ; ನರ: ಅರ್ಜುನ, ಮನುಷ್ಯ; ತುರಗ: ಕುದುರೆ; ಒಡಲು: ದೇಹ; ಅರುಣಾಂಬು: ಕೆಂಪಾದ ನೀರು; ಧಾರೆ: ವರ್ಷ; ಕಳಚು: ಬೇರ್ಪಡಿಸು; ಕೆಂಧೂಳಿ: ಕೆಂಪಾದ ಧೂಳು; ಬಾಣ: ಶರ; ಆವಳಿ: ಗುಂಪು, ಸಾಲು; ಕತ್ತಲೆ: ಅಂಧಕಾರ; ಕಾಣು: ನೋಡು; ದಳ: ಸೈನ್ಯ; ಅರೆ: ಅರ್ಧ; ಗಳಿಗೆ: ಕಾಲದ ಪ್ರಮಾಣ; ಮಾತ್ರ: ಕೇವಲ, ಕಾಲದ ಅವಧಿ;

ಪದವಿಂಗಡಣೆ:
ಮಳೆಗೆ +ಹೆಚ್ಚಿದ +ಧೂಳಿನ್+ಅಬ್ಬರವ್
ಅಳಿವವೊಲು +ವಿಜಯಾಸ್ತ್ರ +ಹತಿಯಲಿ
ಹಿಳಿದ +ಕರಿ +ನರ+ ತುರಗದ್+ಒಡಲ್+ಅರುಣಾಂಬು+ಧಾರೆಯಲಿ
ಕಳಚಿತೀ +ಕೆಂಧೂಳಿ +ಬಾಣಾ
ವಳಿಯ +ಕತ್ತಲೆಯೊಳಗೆ+ ಕಾಣೆನು
ದಳದೊಳ್+ಆರಾರ್+ಎಂದು +ಮತ್ತ್+ಅರೆಗಳಿಗೆ +ಮಾತ್ರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಳೆಗೆ ಹೆಚ್ಚಿದ ಧೂಳಿನಬ್ಬರವಳಿವವೊಲು
(೨) ರಕ್ತದ ಧಾರೆಯಲಿ ಕೆಂಧೂಳಿ ಕಳಚಿತು – ರಣರಂಗದ ಘೋರ ದೃಶ್ಯವನ್ನು ಹೇಳುವ ಪರಿ

ಪದ್ಯ ೩೭: ರಣರಂಗದ ಚಿತ್ರಣ ಹೇಗಿತ್ತು?

ಜನಪ ಕೇಳೈ ರಕುತಜಲದಲಿ
ನನೆದ ನೆಲ ಪುಡಿ ಮಸಗೆ ಕೆಂಧೂ
ಳಿನಲಿ ಕತ್ತಲಿಸಿತ್ತು ದಿಗ್ಭ್ರಮೆಯಾದುದಡಿಗಡಿಗೆ
ಇನಿಬರಾವೆಡೆ ಕರ್ಣನೋ ಫಲು
ಗುಣನೊ ಪಾಂಡವಬಲವೊ ನಿನ್ನಾ
ತನೊ ನಿಧಾನಿಸಲರಿಯೆನೊಂದರೆಗಳಿಗೆ ಮಾತ್ರದಲಿ (ಕರ್ಣ ಪರ್ವ, ೨೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ರಕ್ತದಿಂದ ನೆನೆದಿದ್ದ ರಣರಂಗದಲ್ಲಿ ಸೈನಿಕರ ತುಳಿತದಿಂದ ಕೆಂಧೂಳಿ ಎದ್ದಿತು. ಎಲ್ಲೆಡೆ ಕತ್ತಲಾಯಿತು. ಕರ್ಣನೆತ್ತ, ಅರ್ಜುನನೆತ್ತ, ಕುರುಸೇನೆಯೆತ್ತ, ಪಾಂಡವಸೇನೆಯೆತ್ತ ಎಂಬುದು ಒಂದರ್ಧಗಳಿಗೆ ತಿಳಿಯಲೇ ಇಲ್ಲ.

ಅರ್ಥ:
ಜನಪ: ರಾಜ; ಕೇಳು: ಆಲಿಸು; ರಕುತ: ರಕ್ತ, ರುಧಿರ; ಜಲ: ನೀರು; ನನೆ: ತೋಯು; ನೆಲ: ಭೂಮಿ; ಪುಡಿ: ಚೂರು; ಮಸಗು: ಸಿಟ್ಟುಗೊಳ್ಳು, ರೇಗು; ಕೆಂಧೂಳಿ: ಕೆಂಪಾದ ಮಣ್ಣಿನ ಪುಡಿ; ಕತ್ತಲು: ಅಂಧಕಾರ; ದಿಗ್ಭ್ರಮೆ: ದಿಕ್ಕು ತೋರದಿರುವುದು, ಗಾಬರಿ; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಇನಿಬರ್: ಇಷ್ಟುಜನ; ಆವೆಡೆ: ಎತ್ತಕಡೆ; ಬಲ: ಸೈನ್ಯ; ನಿಧಾನಿಸು: ವಿಚಾರಮಾಡು; ಅರಿ: ತಿಳಿ; ಅರೆ: ಅರ್ಧ; ಗಳಿಗೆ: ಕಾಲಪ್ರಮಾಣ;

ಪದವಿಂಗಡಣೆ:
ಜನಪ +ಕೇಳೈ +ರಕುತ+ಜಲದಲಿ
ನನೆದ +ನೆಲ +ಪುಡಿ +ಮಸಗೆ+ ಕೆಂಧೂ
ಳಿನಲಿ +ಕತ್ತಲಿಸಿತ್ತು+ ದಿಗ್ಭ್ರಮೆಯಾದುದ್+ಅಡಿಗಡಿಗೆ
ಇನಿಬರ್+ಆವೆಡೆ+ ಕರ್ಣನೋ +ಫಲು
ಗುಣನೊ +ಪಾಂಡವಬಲವೊ +ನಿನ್ನಾ
ತನೊ +ನಿಧಾನಿಸಲ್+ಅರಿಯೆನ್+ಒಂದರೆಗಳಿಗೆ+ ಮಾತ್ರದಲಿ

ಅಚ್ಚರಿ:
(೧) ರಣರಂಗದ ದೃಶ್ಯ – ರಕುತಜಲದಲಿ ನನೆದ ನೆಲ ಪುಡಿ ಮಸಗೆ ಕೆಂಧೂಳಿನಲಿ ಕತ್ತಲಿಸಿತ್ತು

ಪದ್ಯ ೩೬: ಅರ್ಜುನನನ್ನು ಯಾರು ತಡೆದರು?

ಫಡಫಡೆಲವೋ ಪಾರ್ಥ ರಾಯನ
ತುಡುಕಲಹುದೇ ಕೂಟಗಿರಿಯಲಿ
ಕಡಲು ಹೂಳುವುದೇ ಸಧಾರನಲಾ ಮಹಾದೇವ
ಹಿಡಿ ಮಹಾಸ್ತ್ರವನಿನ್ನು ಮುಂದದಿ
ಮಿಡುಕಿದಡೆ ತಮ್ಮಾಣೆಯೆನುತವ
ಗಡಿಸಿ ನೂಕಿತು ನಿನ್ನವನ ಮನ್ನಣೆಯ ಪರಿವಾರ (ಕರ್ಣ ಪರ್ವ, ೨೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜ ನಿನ್ನ ಮಗನ ಗೌರವಯುತ ಪರಿವಾರದವರು ಮಹಾರಥರು ಮುಂದಾಗಿ ಛಿ, ಎಲೋ ಅರ್ಜುನ ದೊರೆಯನ್ನು ಹಿಡಿಯಲು ಬಂದೆಯಾ? ಕೃತಕವಾದ ಬೆಟ್ಟದಿಂದ ಸಮುದ್ರ ಹೂಣಿ ಹೋಗುತ್ತದೆಯೇ? ಶಿವ ಶಿವಾ! ನೀನು ಮಹಾ ಬಿಲ್ಲುಗಾರನಲ್ಲವೇ, ನಿನ್ನಲ್ಲಿರುವ ಮಹಾಸ್ತ್ರಗಳನ್ನು ಹೂಡು ಮುಂದಕ್ಕೆ ಹೆಜ್ಜೆಯಿಡಲು ಪಾದವನ್ನೆತ್ತಿದರೆ ನಮ್ಮಾಣೆ ಎನ್ನುತ್ತಾ ಅರ್ಜುನನನ್ನು ತಡೆದರು.

ಅರ್ಥ:
ಫಡ: ಛೀ, ಮೂದಲಿಸುವ ಶಬ್ದ; ರಾಯ: ರಾಜ; ತುಡುಕ: ಹೋರಾಡು, ಸೆಣಸು; ಕೂಟ: ಮೋಸ, ವಂಚನೆ; ಗಿರಿ: ಬೆಟ್ಟ; ಕಡಲು: ಸಮುದ್ರ; ಹೂಳು: ಮುಚ್ಚು, ಕವಿ; ಸಧಾರ: ಬಲಯುತ, ಶೂರ; ಹಿಡಿ: ಗ್ರಹಿಸು; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಮುಂದೆ: ಎದುರು, ಮುಂಭಾಗ; ಮಿಡುಕು: ಅಲುಗಾಟ, ಚಲನೆ; ಆಣೆ: ಪ್ರಮಾಣ; ಅವಗಡಿಸು: ಕಡೆಗಣಿಸು, ಸೋಲಿಸು; ನೂಕು: ತಳ್ಳು; ಮನ್ನಣೆ: ಗೌರವ, ಮರ್ಯಾದೆ; ಪರಿವಾರ: ಬಂಧುಜನ;

ಪದವಿಂಗಡಣೆ:
ಫಡಫಡ್+ಎಲವೋ +ಪಾರ್ಥ +ರಾಯನ
ತುಡುಕಲ್+ಅಹುದೇ +ಕೂಟಗಿರಿಯಲಿ
ಕಡಲು +ಹೂಳುವುದೇ+ ಸಧಾರನಲಾ+ ಮಹಾದೇವ
ಹಿಡಿ+ ಮಹಾಸ್ತ್ರವನ್+ಇನ್ನು +ಮುಂದದಿ
ಮಿಡುಕಿದಡೆ+ ತಮ್ಮಾಣೆ+ಎನುತ್+ಅವ
ಗಡಿಸಿ+ ನೂಕಿತು +ನಿನ್ನವನ +ಮನ್ನಣೆಯ +ಪರಿವಾರ

ಅಚ್ಚರಿ:
(೧) ಬೈಯ್ಯುವ ಪದ – ಫಡಫಡ
(೨) ಉಪಮಾನದ ಪ್ರಯೋಗ – ಕೂಟಗಿರಿಯಲಿ ಕಡಲು ಹೂಳುವುದೇ

ಪದ್ಯ ೩೫: ಅರ್ಜುನನೆಡೆಗೆ ಯಾರು ಮುನ್ನುಗ್ಗಿದರು?

ಅರಸ ಚಿತ್ತೈಸಾರುಸಾವಿರ
ವರಮಹಾರಥರೌಕಿದರು ಝ
ಲ್ಲರಿಯ ಝಾಡಿಯ ಸೆಳೆಯ ಸಿಂಧದ ಸುಳಿವ ಸೀಗುರಿಯ
ಬಿರಿಯೆ ನೆಲನುಬ್ಬೇಳ್ವ ಬೊಬ್ಬೆಯ
ಮುರಜ ಡಿಂಡಿಮ ಪಟಹದಾಡಂ
ಬರದಲೊದಗಿತು ಕೆಲನ ಕೈವಾರಿಗಳ ರಭಸದಲಿ (ಕರ್ಣ ಪರ್ವ, ೨೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಆರು ಸಾವಿರ ಕೌರವನ ಮಹಾರಥರು ಪಾಂಡವರ ಸೇನೆಯ ಮೇಲೆ ದಾಳಿ ಮಾಡಲು ಮುನ್ನುಗ್ಗಿದರು, ಅವರ ರಥದ ಬಾವುಟ, ಚಾಮರ ಹಾರುತ್ತಾ ಮುನ್ನಡೆಯಿತು, ಪಕ್ಕದಲ್ಲಿದ್ದ ವಂದಿಮಾಗಧರ ಪ್ರಶಂಸೆಯ ನುಡಿಗಳು ರಣವಾದ್ಯದೊಡನೆ ಶಬ್ದಮಾಡುತ್ತಾ ಅರ್ಜುನನೆಡೆಗೆ ನಡೆದರು.

ಅರ್ಥ:
ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಸಾವಿರ: ಸಹಸ್ರ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಔಕು: ನೂಕು; ಝಲ್ಲರಿ: ಗೊಂಡೆ; ಝಾಡಿ: ಕಾಂತಿ; ಸೆಳೆ: ಜಗ್ಗು, ಎಳೆ, ಆಕರ್ಷಿಸು; ಸಿಂಧ: ಪತಾಕೆ, ಬಾವುಟ; ಸುಳಿ: ಬೀಸು, ತೀಡು, ಕಾಣಿಸಿಕೊಳ್ಳು; ಸೀಗುರಿ: ಚಾಮರ; ಬಿರಿ: ತಡೆ, ನಿಯಂತ್ರಣ, ಒಡೆ; ನೆಲ: ಭೂಮಿ; ಉಬ್ಬು: ಹಿಗ್ಗು, ವೃದ್ಧಿಯಾಗು; ಬೊಬ್ಬೆ: ಆರ್ಭಟ; ಮುರಜ: ಮೃದಂಗ, ಚರ್ಮವಾದ್ಯ; ಡಿಂಡಿಮ: ಚರ್ಮವಾದ್ಯದ ಶಬ್ದ, ಒಂದು ಬಗೆಯ ಚರ್ಮವಾದ್ಯ; ಪಟಹ: ನಗಾರಿ; ಆಡಂಬರ: ತೋರಿಕೆ, ಢಂಭ; ಒದಗು: ಲಭ್ಯ, ದೊರೆತುದು; ಕೆಲ: ಪಕ್ಕ, ಮಗ್ಗುಲು; ಕೈವಾರಿ: ಹೊಗಳು ಭಟ್ಟ, ಸ್ತುತಿಪಾಠಕ; ರಭಸ: ವೇಗ;

ಪದವಿಂಗಡಣೆ:
ಅರಸ +ಚಿತ್ತೈಸ್+ಆರು+ಸಾವಿರ
ವರ+ಮಹಾರಥರ್+ಔಕಿದರು +ಝ
ಲ್ಲರಿಯ +ಝಾಡಿಯ+ ಸೆಳೆಯ +ಸಿಂಧದ +ಸುಳಿವ +ಸೀಗುರಿಯ
ಬಿರಿಯೆ +ನೆಲನ್+ಉಬ್ಬೇಳ್ವ +ಬೊಬ್ಬೆಯ
ಮುರಜ+ ಡಿಂಡಿಮ +ಪಟಹದ್+ಆಡಂ
ಬರದಲ್+ಒದಗಿತು +ಕೆಲನ +ಕೈವಾರಿಗಳ+ ರಭಸದಲಿ

ಅಚ್ಚರಿ:
(೧) ಮುರಜ, ಡಿಂಡಿಮ, ಪಟಹ – ರಣವಾದ್ಯಗಳ ಹೆಸರು
(೨) ಸ ಕಾರದ ಸಾಲು ಪದಗಳು – ಸೆಳೆಯ ಸಿಂಧದ ಸುಳಿವ ಸೀಗುರಿಯ

ಪದ್ಯ ೩೪: ಕುರುಸೇನೆಯು ಏನು ಮಾತಾಡುತ್ತಿದ್ದರು?

ಸಿಕ್ಕಿದನು ಕುರುರಾಯನಾದುದು
ಮಕ್ಕಳಾಟಕೆ ಗುರುನದೀಸುತ
ರಿಕ್ಕಿ ಹೋದರು ನಮ್ಮ ದಳಪತಿ ಕಾದಿ ಬಳಲಿದನು
ಪೊಕ್ಕನರ್ಜುನನಿವರ ದರ್ಪವ
ನೊಕ್ಕಿ ತೂರಿದನಿನ್ನು ಪರಿವಾ
ರಕ್ಕೆ ಬಂದುದು ಪಂಥವೆನುತಿದ್ದುದು ಭಟಸ್ತೋಮ (ಕರ್ಣ ಪರ್ವ, ೨೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕುರುಸೇನೆಯ ಯೋಧರು ಯುದ್ಧದ ಬಗ್ಗೆ ವಿಚಾರಿಸುತ್ತಾ, ಕೌರವನು ಸೆರೆಯಾಗಲಿದ್ದಾನೆ, ಮಕ್ಕಳಾಟದಂತೆ ಭೀಷ್ಮ ದ್ರೋಣರು ಕೌರವನನ್ನು ಬಿಟ್ಟು ಹೋಗಿಬಿಟ್ಟರು, ಕರ್ಣನು ಯುದ್ಧಮಾಡಿ ಬಳಲಿದನು. ಅರ್ಜುನನು ನಮ್ಮ ಸೈನ್ಯವನ್ನು ಹೊಕ್ಕು, ಇವರೆಲ್ಲರ ದರ್ಪವನ್ನು ಒಕ್ಕಿ ತೂರಿದನು. ದುರ್ಯೋಧನನನ್ನು ಉಳಿಸುವ ಹೊಣೆ ಪರಿವಾರದವರಾದ ನಮ್ಮಮೇಲಿದೆ ಎಂದು ಮಾತಾಡಿಕೊಂಡರು.

ಅರ್ಥ:
ಸಿಕ್ಕು: ಗೊಂದಲ, ತೊಡಕು, ಅಡ್ಡಿ; ರಾಯ: ರಾಜ; ಮಕ್ಕಳು; ಚಿಕ್ಕ ಹುಡುಗರು: ಆಟ: ಕ್ರೀಡೆ; ಗುರು: ಆಚಾರ್ಯ; ನದೀಸುತ: ಭೀಷ್ಮ; ಇಕ್ಕು: ಹಾಕು, ತೊಡಿಸು; ಹೋದರು: ತೆರಳು; ದಳಪತಿ: ಸೇನಾಧಿಪತಿ; ಕಾದಿ: ಹೋರಾಡು; ಬಳಲು: ಆಯಾಸ, ದಣಿವು; ಪೊಕ್ಕು: ಹೊಕ್ಕು; ದರ್ಪ: ಅಹಂಕಾರ; ಒಕ್ಕು: ಹರಿ, ಪ್ರವಹಿಸು; ತೂರು: ಎಸೆ, ಬೀಸು, ನಿವಾರಿಸು; ಪಂಥ: ಯೋಗ್ಯವಾದ ಮಾರ್ಗ, ಕ್ರಮ, ಮತ, ಶಪಥ; ಭಟಸ್ತೋಮ: ಸೈನ್ಯ;

ಪದವಿಂಗಡಣೆ:
ಸಿಕ್ಕಿದನು+ ಕುರುರಾಯನ್+ಆದುದು
ಮಕ್ಕಳಾಟಕೆ+ ಗುರುನದೀಸುತರ್
ಇಕ್ಕಿ +ಹೋದರು+ ನಮ್ಮ +ದಳಪತಿ+ ಕಾದಿ+ ಬಳಲಿದನು
ಪೊಕ್ಕನ್+ಅರ್ಜುನನ್+ ಇವರ+ ದರ್ಪವನ್
ಒಕ್ಕಿ +ತೂರಿದನಿನ್ನು +ಪರಿವಾ
ರಕ್ಕೆ+ ಬಂದುದು +ಪಂಥವ್+ಎನುತಿದ್ದುದು +ಭಟಸ್ತೋಮ

ಅಚ್ಚರಿ:
(೧) ಸಿಕ್ಕಿ, ಇಕ್ಕಿ, ಒಕ್ಕಿ – ಪ್ರಾಸ ಪದಗಳು

ಪದ್ಯ ೩೩: ಅರ್ಜುನನ ಬಾಣವು ಯಾರನ್ನು ಹೊಕ್ಕಿತು?

ದಳಪತಿಯ ದುಮ್ಮಾನದಲಿ ಕಳ
ವಳಿಸಿತೀಚೆಯ ಥಟ್ಟು ಪಾರ್ಥನ
ಹಿಳುಕು ಹೊಕ್ಕವು ಹರಹಿ ತಿವಿದುವು ರಾಯನಿದಿರಿನಲಿ
ಹಲವು ಮಾತೇನಾ ಕೃಪನ ಕೌ
ಸಲನನಾ ಗುರುಸುತನನಾ ಸೌ
ಬಲನನಾ ಕೃತವರ್ಮಕನ ಮುರಿಯೆಚ್ಚು ಬೊಬ್ಬಿರಿದ (ಕರ್ಣ ಪರ್ವ, ೨೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕರ್ಣನ ಸೋಲಿನಿಂದ ಕುರುಸೇನೆಯು ಕಳವಳಿಸಿತು. ಅರ್ಜುನನ ಬಾಣಗಳು ದುರ್ಯೋಧನ, ಕೃಪ, ಕೋಸಲ, ಅಶ್ವತ್ಥಾಮ, ಶಕುನಿ, ಕೃತವರ್ಮರೆಲ್ಲರನ್ನು ನೋಯಿಸಿ ಕೆಡವಿದವು. ವಿಜಯೋತ್ಸಾಹದಿಂದ ಅರ್ಜುನನು ಬೊಬ್ಬಿರಿದನು.

ಅರ್ಥ:
ದಳಪತಿ: ಸೇನಾಧಿಪತಿ; ದುಮ್ಮಾನ: ಮನಸ್ಸಿನ ಉಮ್ಮಳ, ದುಗುಡ; ಕಳವಳ: ಆತಂಕ; ಥಟ್ಟು: ಗುಂಪು, ಸಮೂಹ; ಹಿಳುಕು: ಬಾಣದ ಹಿಂಭಾಗ; ಹೊಕ್ಕು: ತೂರು, ಸೀಳು; ಹರಹು: ವಿಸ್ತಾರ, ವೈಶಾಲ್ಯ; ತಿವಿದು: ಹೊಡೆತ, ಗುದ್ದು, ಇರಿತ; ರಾಯ: ರಾಜ; ಇದಿರು: ಎದುರು; ಹಲವು: ಬಹಳ; ಮಾತು: ನುಡಿ; ಸುತ: ಮಗ; ಮುರಿ: ಸೀಳು; ಎಚ್ಚು: ಬಾಣ ಬಿಡು; ಬೊಬ್ಬಿರಿ: ಕೂಗು, ಅರಚು;

ಪದವಿಂಗಡಣೆ:
ದಳಪತಿಯ +ದುಮ್ಮಾನದಲಿ +ಕಳ
ವಳಿಸಿತ್+ಈಚೆಯ +ಥಟ್ಟು +ಪಾರ್ಥನ
ಹಿಳುಕು +ಹೊಕ್ಕವು +ಹರಹಿ+ ತಿವಿದುವು +ರಾಯನ್+ಇದಿರಿನಲಿ
ಹಲವು +ಮಾತೇನಾ +ಕೃಪನ+ ಕೌ
ಸಲನನಾ +ಗುರುಸುತನನಾ+ ಸೌ
ಬಲನನಾ +ಕೃತವರ್ಮಕನ+ ಮುರಿ+ಎಚ್ಚು+ ಬೊಬ್ಬಿರಿದ

ಅಚ್ಚರಿ:
(೧) ಕೌಸಲ, ಸೌಬಲ – ೪, ೫ ಸಾಲಿನ ಕೊನೆಯಕ್ಷರ ಔ ಕಾರವಾಗಿರುವುದು
(೨) ಹ ಕಾರದ ತ್ರಿವಳಿ ಪದ – ಹಿಳುಕು ಹೊಕ್ಕವು ಹರಹಿ