ಪದ್ಯ ೪೪: ಧರ್ಮಜನು ಅರ್ಜುನನಿಗೆ ಯಾವ ಬಿನ್ನಹ ಮಾಡಿದನು?

ಸೇರುವುದು ಭೀಮನಲಿ ಸಾಹಂ
ಕಾರನಾತನ ಕೊಂಡು ನಡೆವುದು
ಕಾರಣಿಕೆ ನೀನಾದಡೀ ಸಹದೇವ ನಕುಲರನು
ಆರಯಿದು ಸಲಹುವುದು ದ್ರುಪದಕು
ಮಾರಿಯನು ಬೇಸರಿಸದೀ ಪರಿ
ವಾರವನು ಮನ್ನಿಸುವುದರ್ಜುನದೇವ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಅರ್ಜುನನೇ, ಭೀಮನು ಅಹಂಕಾರಿ, ಅವನೊಂದಿಗೆ ಹೊಂದಿಕೊಂಡು ಹೋಗು, ನಿನ್ನಲ್ಲಿ ಕರುಣೆಯಿದ್ದರೆ ನಕುಲ ಸಹದೇವರನ್ನು ಚೆನ್ನಾಗಿ ನೋಡಿಕೋ, ದ್ರುಪದನ ಮಗಳಾದ ದ್ರೌಪದಿಯನ್ನು ಬೇಸರವಾಗದಂತೆ ನೋಡಿಕೋ, ಈ ಪರಿವಾರವನ್ನು ಸಲಹಿ ಕಾಪಾಡು ಎಂದು ಹೇಳಿದನು.

ಅರ್ಥ:
ಸೇರು: ಜೊತೆಯಾಗು; ಅಹಂಕಾರ: ದರ್ಪ, ಗರ್ವ; ಕೊಂಡು: ತೆಗೆದು; ಕಾರಣಿಕ: ಗುರು, ವಿಮರ್ಶಕ; ಆರಯಿದು: ಆರೈಕೆ, ನೋಡಿಕೊಂಡು; ಸಲಹು: ಕಾಪಾಡು; ಕುಮಾರಿ: ಪುತ್ರಿ; ಬೇಸರ: ನೋವು; ಪರಿವಾರ: ಸಂಸಾರ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಕೇಳು: ಆಲಿಸು;

ಪದವಿಂಗಡಣೆ:
ಸೇರುವುದು +ಭೀಮನಲಿ +ಸ+ಅಹಂ
ಕಾರನ್+ಆತನ +ಕೊಂಡು +ನಡೆವುದು
ಕಾರಣಿಕೆ+ ನೀನಾದಡೀ +ಸಹದೇವ+ ನಕುಲರನು
ಆರಯಿದು+ ಸಲಹುವುದು+ ದ್ರುಪದ+ಕು
ಮಾರಿಯನು +ಬೇಸರಿಸದ್+ಈ+ ಪರಿ
ವಾರವನು +ಮನ್ನಿಸುವುದ್+ಅರ್ಜುನದೇವ +ಕೇಳೆಂದ

ಅಚ್ಚರಿ:
(೧) ಸೇರು, ಸಲಹು, ಮನ್ನಿಸು, ಬೇಸರಿಸದೆ, ನಡೆವುದು – ಧರ್ಮಜನು ಉಪದೇಶದ ಮಾತುಗಳು

ಪದ್ಯ ೪೩: ಧರ್ಮಜನು ಯಾರ ಜೊತೆ ರಾಜ್ಯಭಾರ ಮಾಡಲು ಅರ್ಜುನನಿಗೆ ಹೇಳಿದ?

ನಿನ್ನ ಜನನಿಯ ಜಠರದಲಿ ತಾ
ಮುನ್ನ ಜನಿಸಿದೆನೀ ಗುರುತ್ವಕೆ
ಮನ್ನಿಸಿದೆ ಸಾಕೈಸಲೇ ಸರ್ವಾಪರಾಧವನು
ಎನ್ನನೊಬ್ಬನನುಳಿಯಲುಳಿದರ
ಭಿನ್ನಸಾಹೋದರ್ಯ ಸಂಪ್ರತಿ
ಪನ್ನ ಗುಣರವರೊಡನೆ ಸುಖದಲಿ ರಾಜ್ಯ ಮಾಡೆಂದ (ಕರ್ಣ ಪರ್ವ, ೧೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ನೋವನ್ನು ಹೇಳುತ್ತಾ, ನಿನ್ನ ತಾಯಿಯ ಹೊಟ್ಟೆಯಲ್ಲಿ ನಾನು ಮೊದಲು ಜನಿಸಿದ ಕಾರಣ ನನ್ನನ್ನು ಗುರುವೆಂದು ಭಾವಿಸಿ ಇಷ್ಟು ದಿನ ಮನ್ನಿಸಿದ್ದೇ ಸಾಕು. ನಾನು ಮಾಡಿದ ಅಪರಾಧಗಳನ್ನು ಕ್ಷಮಿಸಿದುದೇ ನಿನ್ನ ಹಿರಿಮೆ. ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡು, ಉಳಿದ ನಿನ್ನ ಸಹೋದರರು ಮಹಾಗುಣಶಾಲಿಗಳು. ಆವರೊಡನೆ ನೀನು ರಾಜ್ಯವನ್ನಾಳು ಎಂದನು.

ಅರ್ಥ:
ಜನನಿ: ತಾಯಿ; ಜಠರ: ಹೊಟ್ಟೆ; ಮುನ್ನ: ಮೊದಲು; ಜನಿಸು: ಹುಟ್ಟು; ಗುರು: ಆಚಾರ್ಯ; ಮನ್ನಿಸು: ಗೌರವಿಸು; ಸಾಕು: ಇನ್ನು ಬೇಡ, ನಿಲ್ಲಿಸು; ಸರ್ವ: ಎಲ್ಲಾ; ಅಪರಾಧ: ತಪ್ಪು; ಒಬ್ಬನು: ಏಕಾಂಗಿ; ಉಳಿಯಲು: ಜೀವಿಸಲು; ಉಳಿದ: ಮಿಕ್ಕ; ಸಂಪ್ರತಿ: ತಕ್ಷಣ; ಗುಣ: ನಡತೆ; ಒಡನೆ: ಜೊತೆ; ಸುಖ: ಸೌಖ್ಯ, ಸಂತೋಷ; ಭಿನ್ನ: ಭೇದ, ಬೇರೆ; ಸಾಹೋದರ್ಯ: ಸಹೋದರ, ಭ್ರಾತೃ;

ಪದವಿಂಗಡಣೆ:
ನಿನ್ನ+ ಜನನಿಯ +ಜಠರದಲಿ +ತಾ
ಮುನ್ನ +ಜನಿಸಿದೆನ್+ಈ+ ಗುರುತ್ವಕೆ
ಮನ್ನಿಸಿದೆ +ಸಾಕ್+ಐಸಲೇ +ಸರ್ವ+ಅಪರಾಧವನು
ಎನ್ನನ್+ಒಬ್ಬನನ್+ಉಳಿಯಲ್+ಉಳಿದರ
ಭಿನ್ನ+ಸಾಹೋದರ್ಯ +ಸಂಪ್ರತಿ
ಪನ್ನ +ಗುಣರ್+ಅವರೊಡನೆ +ಸುಖದಲಿ +ರಾಜ್ಯ +ಮಾಡೆಂದ

ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚನೆ
(೨) ೧, ೩, ೫ ಸಾಲಿನಲ್ಲಿ ಜೋಡಿ ಪದಗಳು

ಪದ್ಯ ೪೨: ಧರ್ಮಜನು ನಿಟ್ಟುಸಿರು ಬಿಡಲು ಕಾರಣವೇನು?

ಇರಿದು ಮೆರೆವ ವಿನೋದ ವಿಗ್ರಹ
ದಿರಿತವೇ ಹಿಂದಾಯ್ತು ಹರಹಿನೊ
ಳುರುವ ಫಲಿತದ ಬೀಡು ಬಿಟ್ಟುದು ನಮ್ಮ ತನುವಿನಲಿ
ಇರಿದ ಕರ್ಣನೆ ಸಾಲದೇ ಪೆಣ
ನಿರಿದು ಪಗೆಯೇಕೆಂಬ ಮಾತನು
ಮರೆದು ಕಳೆದೈ ತಮ್ಮ ಎಂದವನೀಶ ಬಿಸುಸುಯ್ದ (ಕರ್ಣ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರ್ಜುನ, ನನಗೆ ಲೀಲಾಜಾಲವಾಗಿ ಯುದ್ಧಮಾಡುವ ಕಾಲ ಕಳೆದು ಹೋಗಿದೆ. ನಮ್ಮ ದೇಹದಲ್ಲಿ ನೆರೆಗೂದಲು ಬಂದಿವೆ. ನನ್ನನ್ನು ಯುದ್ಧದಲ್ಲಿ ಇರಿದು ಹಾಕಿದ ಕರ್ಣನ ಹೊಡೆತವೇ ಸಾಲದೇ? ನೀನು ಮತ್ತೆ ನನ್ನ ಹೆಣವನ್ನು ಇರಿಯಬೇಕೆ? ಎನ್ನುತ್ತಾ ಧರ್ಮಜನು ನಿಟ್ಟುಸಿರು ಬಿಟ್ಟನು.

ಅರ್ಥ:
ಇರಿ: ಚುಚ್ಚು; ಮೆರೆ: ಹೊಳೆ, ಪ್ರಕಾಶಿಸು; ವಿನೋದ: ಸಂತೋಷ; ವಿಗ್ರಹ: ದೇಹ, ಶರೀರ; ಹಿಂದೆ: ಮೊದಲು; ಹರಹು: ವ್ಯಾಪಿಸು, ಹಬ್ಬು;ಉರುವ: ಶ್ರೇಷ್ಠ; ಫಲಿತ: ಹಣ್ಣಾದ; ಬೀಡು: ವಸತಿ;ತನು: ದೇಹ; ಸಾಲದೇ: ಸಾಕಾಗದೆ; ಪೆಣ: ಹೆಣ; ಪಗೆ: ಶತ್ರು, ವೈರಿ, ದ್ವೇಷ; ಮಾತು: ವಾಣಿ; ಮರೆ: ನೆನಪಿನಿಂದ ದೂರಮಾಡು; ತಮ್ಮ: ಅನುಜ; ಅವನೀಶ: ರಾಜ; ಬಿಸುಸು: ನಿಟ್ಟುಸಿರುಬಿಡು;

ಪದವಿಂಗಡಣೆ:
ಇರಿದು+ ಮೆರೆವ +ವಿನೋದ +ವಿಗ್ರಹದ್
ಇರಿತವೇ +ಹಿಂದಾಯ್ತು +ಹರಹಿನೊಳ್
ಉರುವ +ಫಲಿತದ +ಬೀಡು +ಬಿಟ್ಟುದು +ನಮ್ಮ +ತನುವಿನಲಿ
ಇರಿದ+ ಕರ್ಣನೆ +ಸಾಲದೇ +ಪೆಣನ್
ಇರಿದು +ಪಗೆಯೇಕೆಂಬ+ ಮಾತನು
ಮರೆದು +ಕಳೆದೈ +ತಮ್ಮ +ಎಂದ್+ಅವನೀಶ +ಬಿಸುಸುಯ್ದ

ಅಚ್ಚರಿ:
(೧) ಇರಿ – ೧,೨, ೪, ೫ ಸಾಲಿನ ಮೊದಲ ಪದ
(೨) ವಯಸ್ಸಾಯಿತು ಎಂದು ಹೇಳಲು – ಹರಹಿನೊಳುರುವ ಫಲಿತದ ಬೀಡು ಬಿಟ್ಟುದು ನಮ್ಮ ತನುವಿನಲಿ

ಪದ್ಯ ೪೧: ಯಾರಿಗೆ ಪಟ್ಟವನ್ನು ಕಟ್ಟಲು ಧರ್ಮಜನು ತಿಳಿಸಿದನು?

ಭರತ ಕುಲದಲಿ ಭಾಗಧೇಯ
ಸ್ಫುರಣ ಹೀನರನೆಮ್ಮನುರೆ ಧಿ
ಕ್ಕರಿಸಿದಾದಡೆ ಮುನಿದು ಮಾಡುವದೇನು ವಿಧಿಯೊಡನೆ
ಅರಿನೃಪಾಲರ ಗೆಲಿದು ವಿಶ್ವಂ
ಭರೆಯ ಕೊಂಡರೆ ಭೀಮಸೇನನ
ನರಸುತನದಲಿ ನಿಲಿಸು ಸುಖದಲಿ ಬದುಕಿ ನೀವೆಂದ (ಕರ್ಣ ಪರ್ವ, ೧೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಭರತವಂಶದಲ್ಲಿ ಹುಟ್ಟಿ ನಮ್ಮ ಪಾಲಿನ ರಾಜ್ಯವನ್ನು ಪಡೆಯಲಾಗದಿರುವ ನಮ್ಮನ್ನು ನೀನು ಧಿಕ್ಕರಿಸಿದೆ. ಆದರೆ ನಾನೀಗೆ ವಿಧಿಯ ಮೇಲೆ ಕೋಪಗೊಂಡು ಮಾಡುವುದಾದರೂ ಏನು? ನೀನು ಶತ್ರುಗಳನ್ನು ಗೆದ್ದು ಭೂಮಿಯನ್ನು ಪಡೆದುದೇ ಆದರೆ ಭೀಮನಿಗೆ ಪಟ್ಟವನ್ನು ಕಟ್ಟಿ ನೀವೆಲ್ಲರೂ ಸುಖದಿಂದ ಬಾಳಿರಿ ಎಂದು ಧರ್ಮಜನು ಅರ್ಜುನನಿಗೆ ಹೇಳಿದನು?

ಅರ್ಥ:
ಕುಲ: ವಂಶ; ಭಾಗಧೇಯ: ಅದೃಷ್ಟ; ಸ್ಫುರಣ: ಕಂಪನ, ಹೊಳಪು; ಹೀನ: ಕೀಳು; ಉರೆ: ಅತಿಶಯವಾಗಿ; ಧಿಕ್ಕರಿಸು: ನಿಂದೆ, ತಿರಸ್ಕಾರ; ಮುನಿ: ಕೋಪ; ವಿಧಿ: ಆಜ್ಞೆ, ಆದೇಶ; ಅರಿ: ವೈರಿ; ನೃಪಾಲ: ರಾಜ; ಗೆಲಿದು: ಜಯಗಳಿಸು; ವಿಶ್ವಂಭರೆ: ಭೂಮಿ; ಕೊಂಡು: ಪಡೆದು; ಅರಸುತನ: ರಾಜ; ನಿಲಿಸು: ಸ್ಥಾಪಿಸು; ಸುಖ: ಸಂತೋಷ; ಬದುಕು: ಜೀವಿಸು;

ಪದವಿಂಗಡಣೆ:
ಭರತ +ಕುಲದಲಿ +ಭಾಗಧೇಯ
ಸ್ಫುರಣ+ ಹೀನರನ್+ಎಮ್ಮನ್+ಉರೆ +ಧಿ
ಕ್ಕರಿಸಿದಾದಡೆ+ ಮುನಿದು +ಮಾಡುವದೇನು +ವಿಧಿಯೊಡನೆ
ಅರಿ+ನೃಪಾಲರ+ ಗೆಲಿದು+ ವಿಶ್ವಂ
ಭರೆಯ +ಕೊಂಡರೆ +ಭೀಮಸೇನನನ್
ಅರಸುತನದಲಿ +ನಿಲಿಸು +ಸುಖದಲಿ +ಬದುಕಿ +ನೀವೆಂದ

ಅಚ್ಚರಿ:
(೧) ಭೂಮಿಯನ್ನು ವಿಶ್ವಂಭರೆ ಎಂದು ಕರೆದಿರುವುದು
(೨) ಧರ್ಮಜನು ಸ್ಥಿತಿ – ಮುನಿದು ಮಾಡುವದೇನು ವಿಧಿಯೊಡನೆ

ಪದ್ಯ ೪೦: ಅರ್ಜುನನಿಗೆ ಯುಧಿಷ್ಠಿರನು ಹೇಗೆ ಉತ್ತರಿಸಿದನು?

ಉಂಟು ಫಲಗುಣ ನಿನ್ನ ಹೋಲಿಸ
ಲುಂಟೆ ಸುಭಟರು ದೇವ ದೈತ್ಯರೊ
ಳೆಂಟು ಮಡಿ ನಾವರಿಯೆವೇ ಕೈವಾರವೇನದಕೆ
ಕಂಟಣಿಸದಿರು ಕೃಷ್ಣ ನಿಕ್ಕಿದ
ಗಂಟನಲಿ ಸಿಲುಕದಿರು ತನ್ನಯ
ಗಂಟಲಿದೆ ಶಸ್ತ್ರೌಘವಿದೆ ನೀ ಬೇಗ ಮಾಡೆಂದ (ಕರ್ಣ ಪರ್ವ, ೧೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನನ್ನು ಹೊಗಳುವುದನ್ನು ನೋಡಿದ ಧರ್ಮರಾಯನು, ಅರ್ಜುನ ದೇವತೆಗಳಲ್ಲಾಗಲಿ, ದಾನವರಲ್ಲಾಗಲಿ ನಿನ್ನ ಹೋಲಿಕೆಗೆ ಬರುವ ವೀರರು ಯಾರಿದ್ದಾರೆ? ನಿನ್ನ ಮಾತು ನಿಜ ಅರ್ಜುನ, ಅದೇನೂ ಹೊಗಳಿಕೆಯಲ್ಲ ಅದು ವಾಸ್ತವ ಸಂಗತಿಯೇ ಆಗಿದೆ. ಕೃಷ್ಣನು ಹಾಕಿರುವ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳದೆ, ಹೇಸದೆ ಒಂದು ಕೆಲಸ ಮಾಡು, ಇದೋ ನನ್ನ ಗಂಟಲು, ಈ ಶಸ್ತ್ರಗಳನ್ನು ತೆಗೆದುಕೋ, ಬೇಗ ನನ್ನ ಕುತ್ತಿಗೆಯನ್ನು ಕಡಿದು ಹಾಕು ಎಂದು ಧರ್ಮರಾಯನು ಅರ್ಜುನನಿಗೆ ಹೇಳಿದನು.

ಅರ್ಥ:
ಉಂಟು: ಇದೆ; ಹೋಲಿಸು: ತುಲನೆಮಾಡು; ಸುಭಟ: ಒಳ್ಳೆಯ ಸೈನಿಕ; ದೇವ: ಅಮರರು; ದೈತ್ಯ: ರಾಕ್ಷಸ; ಮಡಿ: ಬಾರಿ, ಪಟ್ಟು; ಅರಿ: ತಿಳಿ; ಕೈವಾರ: ಕೊಂಡಾಟ, ಹೊಗಳಿಕೆ; ಕಂಟಣಿಸದಿರು: ಕುಗ್ಗಬೇಡ, ಗೋಳಾಡಬೇಡ; ಇಕ್ಕಿದ: ಕೊಟ್ಟ; ಗಂಟಲು: ಕಂಠ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಔಘ: ಗುಂಪು, ಸಮೂಹ; ಬೇಗ: ತ್ವರೆ, ಶೀಘ್ರ;

ಪದವಿಂಗಡಣೆ:
ಉಂಟು+ ಫಲಗುಣ+ ನಿನ್ನ +ಹೋಲಿಸಲ್
ಉಂಟೆ +ಸುಭಟರು +ದೇವ +ದೈತ್ಯರೊಳ್
ಎಂಟು +ಮಡಿ +ನಾವರಿಯೆವೇ+ ಕೈವಾರವೇನ್+ಅದಕೆ
ಕಂಟಣಿಸದಿರು +ಕೃಷ್ಣನ್ +ಇಕ್ಕಿದ
ಗಂಟನಲಿ+ ಸಿಲುಕದಿರು+ ತನ್ನಯ
ಗಂಟಲಿದೆ +ಶಸ್ತ್ರೌಘವಿದೆ+ ನೀ +ಬೇಗ+ ಮಾಡೆಂದ

ಅಚ್ಚರಿ:
(೧) ಇಕ್ಕಿದ, ಎಂಟು ಮಡಿ – ಆಡು ಭಾಷೆಯ ಪ್ರಯೊಗ

ಪದ್ಯ ೩೯: ಅರ್ಜುನನು ಹೇಗೆ ತನ್ನ್ ಆತ್ಮ ಪ್ರಶಂಸೆ ಮಾಡಿದನು?

ಬಳಿಕ ಭೀಷ್ಮನನಾರು ರಣದಲಿ
ಗೆಲಿದವನು ದ್ರೋಣ ಪ್ರತಾಪಾ
ನಳನ ನಂದಿಸಿದಾತನಾರು ಮಹಾಹವಾಗ್ರದಲಿ
ಮಲೆತು ನಿಂದರೆ ಸೂತತನಯನ
ಕೊಲುವನಾವನು ಎನ್ನ ಟಿಕ್ಕರಿ
ಗಳೆವೆ ನೀನೆನ್ನೊಡನೆ ಸೆಣಸುವ ಭಟನ ತೋರೆಂದ (ಕರ್ಣ ಪರ್ವ, ೧೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಆ ಬಳಿಕ ಯುದ್ಧದಲ್ಲಿ ಭೀಷ್ಮನನ್ನು ಗೆದ್ದವರಾರು? ದ್ರೋಣನ ಪ್ರತಾಪಾಗ್ನಿಯನ್ನು ಮಹಾ ಯುದ್ಧದಲ್ಲಿ ಆರಿಸಿದವನಾರು? ಸಿಟ್ಟಿನಿಂದ ಇದಿರಾಗಿ ನಿಂತರೆ ಕರ್ಣನನ್ನು ಕೊಲ್ಲುವವನು ನಾನಲ್ಲದೆ ಇನ್ನಾರು? ಇಂತಹ ನನ್ನನ್ನು ನೀನು ಹೀಯಾಳಿಸುತ್ತಿರುವೆ, ನನ್ನೆದುರು ಯುದ್ಧ ಮಾಡಬಲ್ಲ ವೀರನನ್ನು ತೋರಿಸು ಎಂದು ಅರ್ಜುನನು ತನ್ನ ಆತ್ಮ ಪ್ರಶಂಸೆ ಮಾಡಿಕೊಂಡನು.

ಅರ್ಥ:
ಬಳಿಕ: ನಂತರ; ರಣ: ಯುದ್ಧಭೂಮಿ; ಗೆಲಿದು: ಗೆದ್ದು, ಜಯಗಳಿಸು; ಪ್ರತಾಪ: ಶೌರ್ಯ; ಅನಲ: ಬೆಂಕಿ; ಪ್ರತಾಪಾನಳ: ಶೌರ್ಯವೆಂಬ ಬೆಂಕಿ; ನಂದಿಸು: ಆರಿಸು; ಮಹಾ: ದೊಡ್ಡ, ಶ್ರೇಷ್ಠ; ಆಹವ: ಯುದ್ಧ; ಅಗ್ರ: ತುದಿ, ಮುಂಭಾಗ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ನಿಲ್ಲು: ಎದುರು ನೋಡು, ತಡೆ; ತನಯ: ಮಗ; ಸೂತ: ದಾಸ, ರಥವನ್ನು ಓಡಿಸುವವ; ಕೊಲು: ಕೊಲ್ಲು, ಸಾಯಿಸು; ಟಿಕ್ಕರಿಗಳೆ: ನಿಂದಿಸು, ಹೀಯಾಳಿಸು; ಸೆಣಸು: ಸ್ಪರ್ಧೆ, ಪೈಪೋಟಿ; ಭಟ: ಸೈನಿಕ; ತೋರು: ಕಾಣು, ದೃಷ್ಟಿಗೆ ಬೀಳು;

ಪದವಿಂಗಡಣೆ:
ಬಳಿಕ +ಭೀಷ್ಮನನ್+ಆರು +ರಣದಲಿ
ಗೆಲಿದವನು +ದ್ರೋಣ +ಪ್ರತಾಪಾ
ನಳನ +ನಂದಿಸಿದ್+ಆತನಾರು +ಮಹ+ಆಹವ+ಅಗ್ರದಲಿ
ಮಲೆತು +ನಿಂದರೆ +ಸೂತ+ತನಯನ
ಕೊಲುವನ್+ಆವನು +ಎನ್ನ +ಟಿಕ್ಕರಿ
ಗಳೆವೆ +ನೀನ್+ಎನ್ನೊಡನೆ +ಸೆಣಸುವ +ಭಟನ +ತೋರೆಂದ

ಅಚ್ಚರಿ:
(೧) ಗೆಲಿದವನು, ನಂದಿಸಿದವನು, ಕೊಲುವನಾವನು – ಅರ್ಜುನನ ಹೆಮ್ಮೆಯ ನುಡಿಗಳು

ಪದ್ಯ ೩೮: ಅರ್ಜುನನು ತನ್ನ ಬಗ್ಗೆ ಏನು ಹೇಳಿದನು?

ನಾನಲಾ ದ್ರೌಪದಿಯ ಮದುವೆಯೊ
ಳಾ ನರೇಂದ್ರರ ಗೆಲಿದವನು ಬಳಿ
ಕಾ ನಿಳಿಂಪವ್ರಜವ ಮುರಿದುರುಪಿದೆನು ಖಾಂಡವವ
ಏನನೆಂಬೆನು ಸಕಲ ಕೌರವ
ಸೇನೆಯನು ಗೋಗ್ರಹಣದಲಿ ಸಲೆ
ನಾನಲೇ ರಥವೊಂದರಿಂದವೆ ಗೆಲಿದೆ ದಿಟವೆಂದ (ಕರ್ಣ ಪರ್ವ, ೧೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ನಾನಲ್ಲವೇ ದ್ರೌಪದಿಯನ್ನು ಸ್ವಯಂವರದಲ್ಲಿ ಎಲ್ಲಾ ರಾಜರ ನಡುವೆ ಮತ್ಸ್ಯಯಂತ್ರವನ್ನು ಭೇದಿಸಿ ಗೆದ್ದವನು. ಖಾಂಡವವನ ದಹನಕಾಲದಲ್ಲಿ ಸಮಸ್ತ ದೇವತೆಗಳನ್ನು ಗೆದ್ದು ವನವನ್ನು ಸುಟ್ಟೆ. ಉತ್ತರ ಗೋಗ್ರಹಣದಲ್ಲಿ ನಾನೊಬ್ಬನೇ ಒಂದೇ ರಥದಲ್ಲಿ ಕುಳಿತು ಕೌರವ ಸೇನೆಯನ್ನೆಲ್ಲಾ ಜಯಿಸಿದೆ ಎಂದು ತನ್ನನ್ನು ಹೊಗಳಿಕೊಂಡನು.

ಅರ್ಥ:
ಮದುವೆ: ಕಲ್ಯಾಣ; ನರೇಂದ್ರ: ರಾಜ; ಗೆಲಿದು: ಜಯಗಳಿಸಿ; ಬಳಿಕ: ನಂತರ; ನಿಳಿಂಪ: ದೇವತೆ; ವ್ರಜ: ಗುಂಪು; ಮುರಿ: ಸೀಳು; ಉರುಪು:ಸುಡು; ಸಕಲ: ಎಲ್ಲಾ; ಸೇನೆ: ಸೈನ್ಯ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ಸಲೆ: ಸಂಪೂರ್ಣವಾಗಿ; ರಥ: ಬಂಡಿ; ದಿಟ: ಸತ್ಯ;

ಪದವಿಂಗಡಣೆ:
ನಾನಲಾ+ ದ್ರೌಪದಿಯ +ಮದುವೆಯೊಳ್
ಆ+ ನರೇಂದ್ರರ +ಗೆಲಿದವನು +ಬಳಿಕ
ಆ +ನಿಳಿಂಪವ್ರಜವ +ಮುರಿದ್+ಉರುಪಿದೆನು +ಖಾಂಡವವ
ಏನನೆಂಬೆನು +ಸಕಲ +ಕೌರವ
ಸೇನೆಯನು +ಗೋಗ್ರಹಣದಲಿ +ಸಲೆ
ನಾನಲೇ +ರಥವ್+ಒಂದರಿಂದವೆ +ಗೆಲಿದೆ +ದಿಟವೆಂದ

ಅಚ್ಚರಿ:
(೧) ಅರ್ಜುನನು ತನ್ನ ಮೂರು ಸಾಧನೆಗಳ ಬಗ್ಗೆ ಹೊಗಳಿಕೊಳ್ಳುವ ಬಗೆ
(೨) ನಾನಲಾ, ನಾನಲೇ – ೧, ೬ ಸಾಲಿನ ಮೊದಲ ಪದ

ಪದ್ಯ ೩೭: ಯಾವುದು ಸಾಮಾನ್ಯವಾದ ಹಿಂಸಿಸುವ ಪ್ರಕ್ರಿಯೆ?

ಸಂದ ಪರಿಯಿದು ಜಗಕೆ ಲೋಗರ
ನಿಂದಿಸುವುದೇ ಹಿಂಸೆ ತನ್ನನೆ
ಕೊಂದವನು ತನ್ನಾಳುತನವನು ತಾನೆ ಹೊಗಳಿದರೆ
ಎಂದಡರ್ಜುನನವನಿಪಾಲಂ
ಗೆಂದನೆನಗಿದಿರಾಗಿ ರಣದಲಿ
ನಿಂದು ಕಾದುವನಾರು ದನುಜಾಮರರ ಥಟ್ಟಿನಲಿ (ಕರ್ಣ ಪರ್ವ, ೧೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಬುದ್ಧಿವಾದವನ್ನು ಹೇಳುತ್ತಾ, ಅರ್ಜುನ ಇದು ಲೋಕದಲ್ಲಿ ಸಾಮಾನ್ಯವಾದ ಸಂಗತಿ,ಜನರನ್ನು ನಿಂದಿಸುವುದೇ ಹಿಂಸೆ, ತನ್ನ ಪರಾಕ್ರಮವನ್ನು ತಾನೇ ಹೊಗಳಿಕೊಂಡರೆ ತನ್ನನ್ನು ಕೊಂದುಕೊಂಡ ಹಾಗೆ ಎಂದನು. ಆಗ ಅರ್ಜುನನು ಧರ್ಮಜನ ಮುಂದೆ ನಿಂತು ದೇವದಾನವರ ಸಮೂಹದಲ್ಲಿ ನನಗಿದಿರಾಗಿ ಯುದ್ಧಮಾಡಬಲ್ಲವನಾರು ಎಂದು ಹೊಗಳಿಕೊಂಡನು.

ಅರ್ಥ:
ಸಂದ: ಸಾಮಾನ್ಯ; ಪರಿ: ರೀತಿ; ಜಗ: ಜಗತ್ತು; ಲೋಗರು: ಮನುಷ್ಯರು; ನಿಂದಿಸು: ಹೀಯಾಳಿಸು; ಹಿಂಸೆ: ತೊಂದರೆ, ನೋವು; ಕೊಂದು: ಸಾವು; ಆಳುತನ: ಪರಾಕ್ರಮ; ಹೊಗಳು: ಸ್ತುತಿ, ಕೊಂಡಾಟ; ಎನಲು: ಹೇಳಲು; ಅವನಿಪಾಲ: ರಾಜ; ಅವನಿ: ಭೂಮಿ; ಎಂದನು: ಹೇಳಿದನು; ಇದಿರು: ಎದುರು; ರಣ: ಯುದ್ಧ; ಕಾದುವ: ಹೋರಾಡುವ; ದನುಜ: ರಾಕ್ಷಸ; ಅಮರ: ದೇವತೆ; ಥಟ್ಟು: ಗುಂಪು;

ಪದವಿಂಗಡಣೆ:
ಸಂದ +ಪರಿಯಿದು +ಜಗಕೆ +ಲೋಗರ
ನಿಂದಿಸುವುದೇ +ಹಿಂಸೆ +ತನ್ನನೆ
ಕೊಂದವನು +ತನ್ನಾಳುತನವನು +ತಾನೆ +ಹೊಗಳಿದರೆ
ಎಂದಡ್+ಅರ್ಜುನನ್+ಅವನಿಪಾಲಂಗ್
ಎಂದನ್+ಎನಗ್+ಇದಿರಾಗಿ +ರಣದಲಿ
ನಿಂದು +ಕಾದುವನಾರು+ ದನುಜ+ಅಮರರ +ಥಟ್ಟಿನಲಿ

ಅಚ್ಚರಿ:
(೧) ಹಿಂಸೆ ಯಾವುದು – ಜಗಕೆ ಲೋಗರ ನಿಂದಿಸುವುದೇ ಹಿಂಸೆ
(೨) ತನ್ನನ್ನು ಕೊಲ್ಲುವ ಪರಿ – ತನ್ನನೆಕೊಂದವನು ತನ್ನಾಳುತನವನು ತಾನೆ ಹೊಗಳಿದರೆ