ಪದ್ಯ ೨೪: ಕರ್ಣನು ಯಾರ ಸೈನ್ಯವನ್ನು ಹೊಕ್ಕು ಯುದ್ಧಮಾಡಿದನು?

ಕಾಲಿಡುವಡಿದು ದುರ್ಗವೆನುತಾ
ಸಾಲ ಬಿಟ್ಟನು ದಕ್ಷಿಣಕೆ ದು
ವ್ವಾಳಿಸಿದನಾ ರಥವನವನೀಪತಿಯ ಮೋಹರಕೆ
ಏಳು ಕಲಿಯಾಗಿನ್ನು ಕೆಲಬಲ
ದಾಳ ಹಾರದಿರೆನುತ ರಾಯನ
ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ (ಕರ್ಣ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮುಂದೆ ರಥವನ್ನು ನಡೆಸುವುದು ಕಷ್ಟಸಾಧನವೆಂದು ತಿಳಿದ ಶಲ್ಯನು ರಥವನ್ನು ಬಲಕ್ಕೆ ನಡೆಸಿದನು. ನೇರವಾಗಿ ಧರ್ಮರಾಯನ ಸೈನ್ಯವನ್ನು ಹೊಕ್ಕನು, ಧರ್ಮರಾಯನನ್ನು ನೋಡಿದ ಕರ್ಣನು, ಏಳು ಧರ್ಮರಾಯ ವೀರನಾಗು, ಅವರಿವರ ಸಹಾಯವನ್ನು ಕಾದುಕುಳಿತುಕೊಳ್ಳಬೇಡ ಎನ್ನುತ್ತಾ ಮಹಾಕೋಪದಿಂದ ಅವನ ಮೇಲೆ ಬಾಣಗಳ ಮಳೆಗೆರೆದನು.

ಅರ್ಥ:
ಕಾಲು: ಪಾದ; ಕಾಲಿಡು: ಮೆಟ್ಟು; ದುರ್ಗ: ಕಷ್ಟ; ಸಾಲ: ಮಾರ್ಗ, ಬದಿ; ಬಿಟ್ಟು: ತೊರೆದು; ದಕ್ಷಿಣ; ಬಲಭಾಗ; ದುವ್ವಾಳಿ: ತೀವ್ರಗತಿ, ವೇಗ; ರಥ: ಬಂಡಿ, ತೇರು; ಅವನೀಪತಿ: ರಾಜ; ಅವನಿ: ಭೂಮಿ; ಮೋಹರ: ಯುದ್ಧ; ಏಳು: ನಿಲ್ಲು; ಕಲಿ: ಶೂರ; ಕೆಲಬಲ: ಬೇರೆಯವರ ಶಕ್ತಿ; ದಾಳ: ಕೈಗೊಂಬೆ, ಪಗಡೆಯಾಟದ ಸಾಧನ; ಹಾರು: ಬಯಸು; ರಾಯ: ರಾಜ; ಕರೆ: ಬರೆಮಾಡು; ಖತಿ: ಕೋಪ; ಕಣೆ:ಬಾಣ; ಬಿರು: ವೇಗ; ವಳೆ: ಮಳೆ;

ಪದವಿಂಗಡಣೆ:
ಕಾಲಿಡುವ್+ಅಡಿದು +ದುರ್ಗವ್+ಎನುತ್+ಆ+
ಸಾಲ+ ಬಿಟ್ಟನು +ದಕ್ಷಿಣಕೆ+ ದು
ವ್ವಾಳಿಸಿದನ್ +ಆ+ ರಥವನ್+ಅವನೀಪತಿಯ +ಮೋಹರಕೆ
ಏಳು +ಕಲಿಯಾಗಿನ್ನು +ಕೆಲಬಲ
ದಾಳ +ಹಾರದಿರ್+ಎನುತ +ರಾಯನ
ಮೇಲೆ +ಕರೆದನು +ಕರ್ಣ +ಖತಿಯಲಿ +ಕಣೆಯ +ಬಿರುವಳೆಯ

ಅಚ್ಚರಿ:
(೧) ಅವನೀಪತಿ, ರಾಯ – ಸಮನಾರ್ಥಕ ಪದ
(೨) ಧರ್ಮರಾಯನಿಗೆ ಕರ್ಣನ ಕಠೋರ ನುಡಿ – ಏಳು ಕಲಿಯಾಗಿನ್ನು ಕೆಲಬಲ ದಾಳ ಹಾರದಿರ್
(೩) ಬಾಣದ ಮಳೆಗೆರೆದನು ಎಂದು ಹೇಳಲು – ರಾಯನ ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ

ಪದ್ಯ ೨೩: ಶಲ್ಯನು ಕರ್ಣನನ್ನು ಹೇಗೆ ಹೊಗಳಿದನು?

ತರಿದ ಹೊಸ ಕುಮ್ಮರಿಯೊಳಗೆ ರಥ
ಹರಿಯಬಲ್ಲುದೆ ಕರ್ಣ ನಾವಿಂ
ದರಿದೆವೈ ನೀ ನೆಟ್ಟನೋಲೆಯಕಾರನೆಂಬುದನು
ಇರಿತಕಿವರಾರಿದಿರಹರು ನಿ
ನ್ನು ರವಣಿಯನಾರಾನುವರು ಮ
ತ್ಸರವ ಬಿಸುಟೆನು ಪೂತು ರವಿಸುತ ಎಂದನಾ ಶಲ್ಯ (ಕರ್ಣ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣನ ವೀರ ಪೌರುಷಗಳನ್ನು ಅವನು ಯುದ್ಧ ಮಾಡಿದ ರೀತಿಯನ್ನು ಕಂಡ ಶಲ್ಯನು ಬೆರಗಾಗಿ, ಕಡಿದೊಟ್ಟಿದ ಮರಗಳ ಮೇಲೆ ಕಾಡಿನಲ್ಲಿ ರಥವನ್ನು ಓಡಿಸಲು ಸಾಧ್ಯವೇ? ಈ ರಣರಂಗವು ಹಾಗೆ ಆಗಿದೆ, ನೀನಿಂತಹ ವೀರ ಸ್ವಾಮಿ ಭಕ್ತನೆಂಬುದನ್ನು ಈಗ ನಾವು ತಿಳಿದುಕೊಂಡೆವು, ನಿನ್ನ ಹೊಡೆತಕ್ಕೆ ಇದಿರಾಗಿ ಗೆಲ್ಲ ಬಲ್ಲವರಾರು? ನಿನ್ನ ಕಾಳಗದ ರಭಸವನ್ನು ಯಾರು ನಿಲ್ಲಿಸಬಲ್ಲರು? ಭಲೇ ಕರ್ಣ ನಿನ್ನ ಮೇಲಿನ ಮತ್ಸವರನ್ನು ನಾನು ಈಗ ಹೊರಹಾಕಿದ್ದೇನೆ ಎಂದು ಶಲ್ಯನು ಹೊಗಳಿದನು.

ಅರ್ಥ:
ತರಿ: ಕಡಿ, ಕತ್ತರಿಸು; ಹೊಸ: ನವೀನ; ಕುಮ್ಮರಿ: ಕಾಡನ್ನು ಕಡಿದು ಸಾಗುವಳಿ ಮಾಡಿದ ಪ್ರದೇಶ; ರಥ: ತೇರು, ಬಂಡಿ; ಹರಿ: ಚಲಿಸು; ಅರಿ: ತಿಳಿ; ಇಂದು: ಇವತ್ತು; ಓಲೆಗಾರ: ಸೇವಕ; ಇರಿತ: ಚುಚ್ಚು; ಇದಿರು: ಎದುರು; ರವಣಿ:ಅಬ್ಬರ, ಠೀವಿ; ಮತ್ಸರ: ಹೊಟ್ಟೆಕಿಚ್ಚು; ಬಿಸುಟೆ: ಹೊರಹಾಕು; ಪೂತು: ಭಲೆ; ಆನು: ಎದುರಿಸು;

ಪದವಿಂಗಡಣೆ:
ತರಿದ +ಹೊಸ +ಕುಮ್ಮರಿಯೊಳಗೆ +ರಥ
ಹರಿಯಬಲ್ಲುದೆ +ಕರ್ಣ +ನಾವ್+ಇಂದ್
ಅರಿದೆವೈ+ ನೀನ್ + ಎಟ್ಟನ್+ಓಲೆಯಕಾರನೆಂಬುದನು
ಇರಿತಕ್+ಇವರ್+ಆರ್+ಇದಿರಹರು +ನಿ
ನ್ನು +ರವಣಿಯನ್+ಆರ್+ಆನುವರು +ಮ
ತ್ಸರವ +ಬಿಸುಟೆನು +ಪೂತು +ರವಿಸುತ +ಎಂದನಾ +ಶಲ್ಯ

ಅಚ್ಚರಿ:
(೧) ಕರ್ಣನಿಗೆ ಯುದ್ಧ ಬಿಟ್ಟು ಹಿಂದಿರುಗು ಎಂದು ಉಪದೇಶಿಸಿದ ಶಲ್ಯನಿಂದ ಹೊಗಳಿಕೆ
(೨) ಉಪಮಾನದ ಪ್ರಯೋಗ – ತರಿದ ಹೊಸ ಕುಮ್ಮರಿಯೊಳಗೆ ರಥಹರಿಯಬಲ್ಲುದೆ

ಪದ್ಯ ೨೨: ಕರ್ಣನ ವೇಗವನ್ನು ಯಾವುದು ನಿಲ್ಲಿಸಿದವು?

ರಾಯದಳದೊಳು ಮಡಿವ ಕರಿ ವಾ
ನಾಯುಜಕೆ ಕಡೆಯಿಲ್ಲ ರಥಿಕರು
ಪಾಯದಳವೆನಿತಳಿದುದೋ ನಾನರಿಯೆನದರೊಳಗೆ
ಬಾಯಬಿಟ್ಟುದು ಸೇನೆ ಕಡಿಖಂ
ಡಾಯತದ ಹೆಣನೊಟ್ಟಲಿನ ಮುರಿ
ದಾಯುಧದ ಸಂದಣಿಯೆ ನಿಲಿಸಿತು ಬಳಿಕ ರವಿಸುತನ (ಕರ್ಣ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಧರ್ಮರಾಯನ ಸೈನ್ಯದಲ್ಲಿ ಸತ್ತ ಆನೆ, ಕುದುರೆಗಳಿಗೆ ಕಡೆಯಿರಲಿಲ್ಲ. ರಥಗಳು ಎಷ್ಟು ನಾಶವಾದವೋ, ಎಷ್ಟು ಮಂದಿ ಕಾಲಾಳುಗಳು ಮಡಿದರೋ ಹೇಳಲಾಗುವುದಿಲ್ಲ. ಕರ್ಣನನ್ನು ತಡೆಯುವವರೇ ಇಲ್ಲವೆಂದು ವೈರಿ ಸೈನ್ಯ ಬಾಯ ಬಿಟ್ಟಿತು, ಆದರೆ ಕರ್ಣನು ಕೆಳಗುರುಳಿಸಿದ ಹೆಣಗಳು, ಆಯುಧಗಳೇ ಅವನ ವೇಗವನ್ನು ತಡೆಯುತ್ತಿದ್ದವು.

ಅರ್ಥ:
ರಾಯ: ರಾಜ,ನೃಪ; ದಳ: ಸೈನ್ಯ; ಮಡಿ: ಸಾವು; ಕರಿ: ಆನೆ; ವಾನಾಯುಜ: ಕುದುರೆ; ಕಡೆ: ಕೊನೆ; ರಥಿಕ: ರಥದಲ್ಲಿ ಯುದ್ಧ ಮಾಡುವವ; ಪಾಯದಳ: ಕಾಲಾಳು, ಸೈನಿಕ; ಅಳಿ: ಸಾವು; ಅರಿ: ತಿಳಿ; ಬಾಯಬಿಟ್ಟು: ಆಶ್ಚರ್ಯದ ಸೂಚಕ; ಸೇನೆ: ಸೈನ್ಯ; ಕಡಿಖಂಡ: ಕತ್ತರಿಸಿದ ಭಾಗ; ಆಯತ: ವಿಶಾಲವಾದ; ಹೆಣ: ಶವ; ಒಟ್ಟು: ಸೇರಿ; ಮುರಿದ: ಸೀಳು; ಆಯುಧ: ಶಸ್ತ್ರ; ಸಂದಣಿ: ಗುಂಪು, ರಾಶಿ; ನಿಲಿಸು: ತಡೆ; ಬಳಿಕ: ನಂತರ; ರವಿಸುತ: ಕರ್ಣ;

ಪದವಿಂಗಡಣೆ:
ರಾಯದಳದೊಳು+ ಮಡಿವ +ಕರಿ +ವಾ
ನಾಯುಜಕೆ+ ಕಡೆಯಿಲ್ಲ +ರಥಿಕರು
ಪಾಯದಳವ್+ಎನಿತ್+ಅಳಿದುದೋ+ ನಾನರಿಯೆನ್+ಅದರೊಳಗೆ
ಬಾಯಬಿಟ್ಟುದು +ಸೇನೆ +ಕಡಿಖಂಡ
ಆಯತದ +ಹೆಣನೊಟ್ಟಲಿನ +ಮುರಿದ್
ಆಯುಧದ +ಸಂದಣಿಯೆ +ನಿಲಿಸಿತು +ಬಳಿಕ +ರವಿಸುತನ

ಅಚ್ಚರಿ:
(೧) ಆಶ್ಚರ್ಯಪಟ್ಟರು ಎಂದು ತಿಳಿಸಲು – ಬಾಯಬಿಟ್ಟುದು ಸೇನೆ
(೨) ಕರ್ಣನಿಗೆ ತಡೆಯುಂಟು ಮಾಡಿದ್ದು – ಹೆಣನೊಟ್ಟಲಿನ ಮುರಿದಾಯುಧದ ಸಂದಣಿಯೆ ನಿಲಿಸಿತು

ಪದ್ಯ ೨೧: ಕರ್ಣನ ಪರಾಕ್ರಮವು ಎಂತಹದು?

ಕೊಂಬನೇ ಬಳಿಕೀ ಮಹಾರಥ
ರಂಬುಗಿಂಬನು ನಿಮ್ಮ ಹಿರಿಯರ
ಡೊಂಬಿನಾಹವವಲ್ಲಲೇ ತಮತಮಗೆ ತುಡುಕುವಡೆ
ಅಂಬುನಿಧಿ ಮಕರಂದವಾದರೆ
ತುಂಬಿಯಾಗನೆ ವಡಬನೀತನ
ನೆಂಬ ಖುಲ್ಲರು ಸುಭಟರೇ ಧೃತರಾಷ್ಟ್ರ ಕೇಳೆಂದ (ಕರ್ಣ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನ ಯುದ್ಧವು ನಿಮಗೆ ಹಿರಿಯರಾದ ಭೀಷ್ಮ ದ್ರೋಣರ ಯುದ್ಧದಂತಲ್ಲ. ಅಂಥಿಂಥವರು ಅವನನ್ನು ತಡೆಯಲಾರರು. ಮಕರಂದ ಸಮುದ್ರಕ್ಕೆ ವಡಬನೇ ದುಂಬಿಯಾದಂತೆ ಕರ್ಣನ ಪರಾಕ್ರಮವನ್ನು ನಿಂದಿಸುವವರು ವೀರರೇ ಎಂದು ಸಂಜಯನು ಧೃತರಾಷ್ಟ್ರನಿಗೆ ಕರ್ಣನ ಪರಾಕ್ರಮದ ಬಗ್ಗೆ ತಿಳಿಸಿದನು.

ಅರ್ಥ:
ಕೊಂಬು: ಹೆಮ್ಮೆ, ಹೆಚ್ಚುಗಾರಿಕೆ; ಬಳಿಕ: ನಂತರ; ಮಹಾರಥ: ವೀರ; ಹಿರಿಯ: ದೊಡ್ಡವ,ಶ್ರೇಷ್ಠ; ಡೊಂಬು: ತೋರಿಕೆ, ಬೂಟಾಟಿಕೆ; ಆಹವ: ಯುದ್ಧ; ತುಡುಕು: ಹೋರಾಡು, ಸೆಣಸು; ಅಂಬುನಿಧಿ: ಸಾಗರ; ಮಕರಂದ: ಜೇನು; ತುಂಬಿ: ದುಂಬಿ, ಜೇನು; ವಡಬ:ಸಮುದ್ರದಲ್ಲಿರುವ ಬೆಂಕಿ; ಖುಲ್ಲ:ಅಲ್ಪನಾದವನು, ನೀಚ; ಸುಭಟ: ಶ್ರೇಷ್ಠ ಸೈನಿಕ;

ಪದವಿಂಗಡಣೆ:
ಕೊಂಬನೇ+ ಬಳಿಕ್+ಈ+ ಮಹಾರಥರ್
ಅಂಬುಗಿಂಬನು +ನಿಮ್ಮ +ಹಿರಿಯರ
ಡೊಂಬಿನ್+ಆಹವವ್+ಅಲ್ಲಲೇ +ತಮತಮಗೆ+ ತುಡುಕುವಡೆ
ಅಂಬುನಿಧಿ +ಮಕರಂದವಾದರೆ
ತುಂಬಿಯಾಗನೆ +ವಡಬನ್+ಈತನನ್
ಎಂಬ +ಖುಲ್ಲರು +ಸುಭಟರೇ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಂಬುನಿಧಿ ಮಕರಂದವಾದರೆ ತುಂಬಿಯಾಗನೆ ವಡಬನ್
(೨) ಅಂಬುಗಿಂಬು, ತಮತಮಗೆ, ಡೊಂಬಿ – ಆಡು ಪದಗಳ ಬಳಕೆ

ಪದ್ಯ ೨೦: ಪಾಂಡವರ ಸೈನ್ಯವು ಕರ್ಣನನ್ನು ಹೇಗೆ ಎದುರಿಸಿತು?

ಎಲೆಲೆ ರಾಯನ ಮೇಲೆ ಬಿದ್ದುದು
ಕಲಹವಕಟಾ ಹೋಗಬೇಡಿ
ಟ್ಟಳಿಸಿದವ ಹಗೆ ನಮ್ಮ ಭೀಷ್ಮ ದ್ರೋಣನಿವನಲ್ಲ
ಅಳುಕದಿರಿ ಕವಿಕವಿಯೆನುತ ಹೆ
ಬ್ಬಲ ಸಘಾಡದಲೌಕಿ ಕರ್ಣನ
ಹೊಲಬುಗೆಡಿಸಿದುದಂಬುಗಳ ಸಾಯಾರ ಸೋನೆಯಲಿ (ಕರ್ಣ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಓಹೋ ದೊರೆಗಳ ಮೇಲೇ ಯುದ್ಧವು ಬಿದ್ದಿದೆ, ಅಯ್ಯೋ ಸೈನಿಕರೇ ಯಾರು ಹಿಮ್ಮೆಟ್ಟಬೇಡಿ, ಎದುರಾಗಿರುವವನು ನಮ್ಮ ಭೀಷ್ಮನೂ ಅಲ್ಲ ದ್ರೋಣನು ಅಲ್ಲ. ಹೆದರದಿರಿ ಎಲ್ಲರೂ ಒಟ್ಟಾಗಿ ಇವನನ್ನು ಆವರಿಸಿ ಮುತ್ತಿಗೆ ಹಾಕಿರಿ ಎನ್ನುತ್ತಾ ಕರ್ಣನನ್ನು ಮುತ್ತಿ ಬಾಣಗಳ ಮಳೆಗೆರೆಯಲು ಕರ್ಣನ ದಾರಿಯನ್ನು ತಪ್ಪಿಸಿದರು.

ಅರ್ಥ:
ಎಲೆಲೆ: ಓಹೋ; ರಾಯ: ರಾಜ; ಬಿದ್ದು: ಆಕ್ರಮಣ; ಕಲಹ: ಯುದ್ಧ; ಅಕಟಾ: ಅಯ್ಯೋ; ಹೋಗು: ತೆರಳು; ಇಟ್ಟಳಿಸು: ದಟ್ಟವಾಗು, ಒತ್ತಾಗು; ಹಗೆ: ವೈರಿ; ಅಳುಕು: ಹೆದರು; ಕವಿ: ಆವರಿಸು, ಮುಚ್ಚು; ಹೆಬ್ಬಲ: ದೊಡ್ಡ ಸೈನ್ಯ; ಸಘಾಡ: ರಭಸ, ವೇಗ; ಔಕು: ಒತ್ತು; ಹೊಲಬು: ದಾರಿ, ಮಾರ್ಗ; ಕೆಡಿಸು: ತಪ್ಪಿಸು; ಅಂಬು: ಬಾಣ; ಸಾರಾಯ: ಸಾರವತ್ತಾದ, ರಸವತ್ತಾದ; ಸೋನೆ: ಮಳೆ;

ಪದವಿಂಗಡಣೆ:
ಎಲೆಲೆ +ರಾಯನ +ಮೇಲೆ +ಬಿದ್ದುದು
ಕಲಹವ್+ಅಕಟಾ +ಹೋಗಬೇಡ್
ಇಟ್ಟಳಿಸಿದವ+ ಹಗೆ +ನಮ್ಮ +ಭೀಷ್ಮ +ದ್ರೋಣನಿವನಲ್ಲ
ಅಳುಕದಿರಿ+ ಕವಿಕವಿಯೆನುತ +ಹೆ
ಬ್ಬಲ +ಸಘಾಡದಲ್+ಔಕಿ +ಕರ್ಣನ
ಹೊಲಬುಗೆಡಿಸಿದುದ್+ಅಂಬುಗಳ+ ಸಾಯಾರ +ಸೋನೆಯಲಿ

ಅಚ್ಚರಿ:
(೧) ಎಲೆಲೆ, ಅಕಟಾ, ಕವಿಕವಿ – ಪದಗಳ ಬಳಕೆ
(೨) ಬಾಣಗಳ ಆವರಿಸಿದವು ಎಂದು ಹೇಳಲು – ಅಂಬುಗಳ ಸಾಯಾರ ಸೋನೆಯಲಿ

ಪದ್ಯ ೧೯: ಕೌರವ ಪಾಂಡವರ ಸೇನೆಯಲ್ಲಿ ಯಾವ ಶಬ್ದ ಕೇಳಿಬಂತು?

ಕುರುಬಲದ ಸುಮ್ಮಾನ ಕಹಳೆಯ
ಬಿರಿವ ನಿಸ್ಸಾಳದ ನೃಪಾಲರ
ಹರುಷ ಪುಳುಕದ ಭುಜದ ಹೊಯ್ಲಿನ ಬೊಬ್ಬೆಯಬ್ಬರದ
ಅರಿಬಲದೊಳಕಟಕಟ ವಿಧಿ ನಿ
ಷ್ಕರುಣಿ ಹಾಹಾಯೆಂಬ ರವದ
ಬ್ಬರದ ನಿಬ್ಬರ ಕೇಳಲಾದುದು ನೃಪತಿ ಕೇಳೆಂದ (ಕರ್ಣ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರಗಳನ್ನು ಹೇಳುತ್ತಾ, ರಾಜನೇ ಕೌರವ ಸೇನೆಯಲ್ಲಿ ಕರ್ಣನ ಪರಾಕ್ರಮದಿಂದ ಸಂತೋಷದ ಅಲೆಗಳೆದ್ದವು. ಕಹಳೆಗಳ ಭೇರಿಗಳ ಸದ್ದು ಹಬ್ಬಿತು. ಸಂತೋಷದಿಂದ ಮೈಯುಬ್ಬಿ, ಭುಜವನ್ನು ತಟ್ಟಿ ಯೋಧರು ಕೇಕೆ ಹೊಡೆದರು. ಶತ್ರು ಸೈನದಲ್ಲಿ ಅಯ್ಯಯ್ಯೋ ವಿಧಿಯು ನಿಷ್ಕರುಣಿ ಎಂಬ ಸದ್ದು ಕೇಳಿ ಬಂತು ಎಂದು ಸಂಜಯನು ಹೇಳಿದನು.

ಅರ್ಥ:
ಬಲ: ಸೈನ್ಯ; ಸುಮ್ಮಾನ: ಸಂತೋಷ, ಹಿಗ್ಗು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಹೊನಲು; ಬಿರಿ:ಅರಳು, ವಿಕಾಸವಾಗು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ನೃಪಾಲ: ರಾಜ; ಹರುಷ: ಸಂತೋಷ; ಪುಳುಕ: ರೋಮಾಂಚನ; ಭುಜ: ಬಾಹು; ಹೊಯ್ಲು: ಹೊಡೆ; ಬೊಬ್ಬೆ, ಅಬ್ಬರ: ಆರ್ಭಟ; ಅರಿ:ವೈರಿ; ಬಲ: ಸೈನ್ಯ; ಅಕಟಕಟ: ಅಯ್ಯೋ; ವಿಧಿ: ಆಜ್ಞೆ, ಆದೇಶ; ನಿಷ್ಕರುಣಿ: ಕರುಣೆಯಿಲ್ಲದ; ರವ: ಶಬ್ದ; ನಿಬ್ಬರ: ಅತಿಶಯ, ಹೆಚ್ಚಳ;

ಪದವಿಂಗಡಣೆ:
ಕುರುಬಲದ+ ಸುಮ್ಮಾನ +ಕಹಳೆಯ
ಬಿರಿವ+ ನಿಸ್ಸಾಳದ+ ನೃಪಾಲರ
ಹರುಷ +ಪುಳುಕದ +ಭುಜದ +ಹೊಯ್ಲಿನ +ಬೊಬ್ಬೆ+ಅಬ್ಬರದ
ಅರಿ+ಬಲದೊಳ್+ಅಕಟಕಟ+ ವಿಧಿ+ ನಿ
ಷ್ಕರುಣಿ +ಹಾಹಾಯೆಂಬ +ರವದ್
ಅಬ್ಬರದ+ ನಿಬ್ಬರ +ಕೇಳಲಾದುದು +ನೃಪತಿ+ ಕೇಳೆಂದ

ಅಚ್ಚರಿ:
(೧) ದುಃಖದ ವರ್ಣನೆ: ಅಕಟಕಟ ವಿಧಿ ನಿಷ್ಕರುಣಿ ಹಾಹಾ
(೨) ಸಂತೋಷದ ವರ್ಣನೆ: ಹರುಷ ಪುಳುಕದ ಭುಜದ ಹೊಯ್ಲಿನ ಬೊಬ್ಬೆಯಬ್ಬರದ

ಪದ್ಯ ೧೮: ಕರ್ಣನು ಧರ್ಮರಾಯನ ಸೈನ್ಯವನ್ನು ಹೊಕ್ಕು ಏನು ನುಡಿದನು?

ಇಟ್ಟಣಿಸಿಕೊಂಡೊತ್ತಿ ರಾಯನ
ಥಟ್ಟ ಹೊಕ್ಕನು ಜರುಹಿದನು ಜಗ
ಜಟ್ಟಿ ಜೋಡಿಸಿದಂಗಸುಯ್ದಾನದ ಮಹಾರಥರ
ಕೆಟ್ಟ ದಳವನಘಾಟದವರೊಳ
ಗಿಟ್ಟು ಕೊಳ್ಳರದೇನು ರಾಯನ
ಮುಟ್ಟುತಿದಲಾ ರೌದ್ರರಣವೆನುತೆಚ್ಚನಾ ಕರ್ಣ (ಕರ್ಣ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನ ಮುಂದಿದ್ದ ೫-೬ ಮಹಾರಥರನ್ನು ಕಂಡು ಮುನ್ನುಗ್ಗಿ ಧರ್ಮಜನ ದಳವನ್ನು ಹೊಕ್ಕನು. ಮಹಾಪರಾಕ್ರಮಿಯಾದ ಕರ್ಣನು ಅಲ್ಲಿ ಸೇರಿದ್ದ ಮಹಾರಥರನ್ನು ಓಡಿಸಿದನು. ಸೈನ್ಯ ಸೋತರೆ ಅದನ್ನು ರಕ್ಷಿಸುವವರೇ ಇಲ್ಲವಲ್ಲ, ಇದೇನು ವಿಚಿತ್ರ ಎಂದು ಧರ್ಮರಾಯನ ಸಮುಖಕ್ಕೆ ಯುದ್ಧ ಬಂದು ಬಿಟ್ಟಿದೆ ಎಂದು ಹೇಳುತ್ತಾ ಕರ್ಣನು ವೈರಿ ಸೈನ್ಯವನ್ನು ಬಾಣದಿಂದ ಹೊಡೆದನು.

ಅರ್ಥ:
ಇಟ್ಟಣಿಸು: ದಟ್ಟವಾಗು, ಒತ್ತಾಗು; ಒತ್ತು: ಮುತ್ತು; ರಾಯ: ಒಡೆಯ, ರಾಜ; ಥಟ್ಟು: ಪಕ್ಕ, ಕಡೆ, ಗುಂಪು; ಹೊಕ್ಕು: ಒಳಸೇರು; ಜರುಹು: ಜರುಗಿಸು; ಜಗಜಟ್ಟಿ: ಪರಾಕ್ರಮಿ, ಶೂರ; ಜೋಡಿಸು: ಹೊಂದಿಸು; ಸುಯ್ದಾನ: ರಕ್ಷಣೆ, ಕಾಪು; ಮಹಾರಥ: ಶೂರ; ಕೆಟ್ಟ: ಉಗ್ರವಾದ, ಪ್ರಚಂಡವಾದ; ದಳ: ಸೈನಿಕ, ಸೈನ್ಯ; ಅಘಾಟ: ಅದ್ಭುತ, ಅತಿಶಯ; ಕೊಳ್ಳು: ಸುಲಿಗೆ, ಸರಿಪಡಿಸು; ರಾಯ: ರಾಜ; ಮುಟ್ಟು: ಸ್ಪರ್ಶ; ರೌದ್ರ: ಭಯಂಕರ; ರಣ: ಯುದ್ಧ; ಎಚ್ಚು: ಬಾಣಬಿಡು;

ಪದವಿಂಗಡಣೆ:
ಇಟ್ಟಣಿಸಿಕೊಂಡೊತ್ತಿ+ ರಾಯನ
ಥಟ್ಟ +ಹೊಕ್ಕನು +ಜರುಹಿದನು +ಜಗ
ಜಟ್ಟಿ +ಜೋಡಿಸಿದ್+ಅಂಗ+ಸುಯ್ದಾನದ +ಮಹಾರಥರ
ಕೆಟ್ಟ+ ದಳವನ್+ಅಘಾಟದ್+ಅವರೊಳಗ್
ಇಟ್ಟು +ಕೊಳ್ಳರದೇನು+ ರಾಯನ
ಮುಟ್ಟುತಿದಲ್+ಆ+ ರೌದ್ರರಣವೆನುತ್+ಎಚ್ಚನಾ +ಕರ್ಣ

ಅಚ್ಚರಿ:
(೧) ಜ ವರ್ಣದ ತ್ರಿವಳಿ ಪದ – ಜರುಹಿದನು ಜಗಜಟ್ಟಿ ಜೋಡಿಸಿದಂಗಸುಯ್ದಾನದ

ಪದ್ಯ ೧೭: ಕರ್ಣನೆದುರು ಎಷ್ಟು ಜನ ಉಳಿದಿದ್ದರು?

ತೆರಳಿದನು ಸಹದೇವ ನಸು ಪೈ
ಸರಿಸಿದನು ನಕುಳನು ಶಿಖಂಡಿಯ
ಕರಣ ತಲೆಕೆಳಕಾಯ್ತು ಕಾಣೆನು ಸಾತ್ಯಕಿಯ ರಥದ
ಮುರಿವ ಕಂಡೆನು ಭೀಮ ದುಗುಡದ
ಭರದಲಿದ್ದನು ಮಿಕ್ಕ ಬಲ ನಾ
ಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ (ಕರ್ಣ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕರ್ಣನ ಭಯಂಕರ ಸ್ವರೂಪದ ಯುದ್ಧವನ್ನು ಕಂಡು ಎಲ್ಲರೂ ಪೆಟ್ಟುತಿಂದರು. ಸಹದೇವ ಹಿನ್ನಡೆದನು, ನಕುಲನು ಸ್ವಲ್ಪಹೊತ್ತು ಹಿಮ್ಮೆಟ್ಟಿದನು, ಶಿಖಂಡಿಯ ಮನಸ್ಸು ಯುದ್ಧವನ್ನು ಬಿಟ್ಟು ತಲೆಕೆಳಗಾಯಿತು, ಸಾತ್ಯಕಿಯ ರಥ ಮುರಿಯಿತು, ಭೀಮನು ದುಃಖಾಕ್ರಾಂತನಾದನು. ಅಲ್ಲಿ ಐದೋ ಆರೋ ಜನರು ಮಾತ್ರ ಕರ್ಣನೆದುರು ನಿಂತಿದ್ದರು.

ಅರ್ಥ:
ತೆರಳು: ಹೋಗು, ನಡೆ; ನಸು:ಕೊಂಚ, ಸ್ವಲ್ಪ; ಸೈರಿಸು: ತಾಳು, ಸಹಿಸು; ಕರಣ: ಮನಸ್ಸು; ತಲೆಕೆಳಗೆ: ಮೇಲೆ ಕೆಳಗೆ, ಉಲ್ಟ; ಕಾಣೆ: ತೋರದ; ರಥ: ಬಂಡಿ; ಮುರಿ: ಸೀಳು ದುಗುಡ: ದುಃಖ; ಭರ: ವೇಗ; ಮಿಕ್ಕ: ಉಳಿದ; ಬಲ: ಸೈನ್ಯ; ನಿಧಾನ: ತಾಳು; ಅರಿ: ತಿಳಿ;

ಪದವಿಂಗಡಣೆ:
ತೆರಳಿದನು+ ಸಹದೇವ +ನಸು +ಪೈ
ಸರಿಸಿದನು+ ನಕುಳನು +ಶಿಖಂಡಿಯ
ಕರಣ+ ತಲೆಕೆಳಕಾಯ್ತು +ಕಾಣೆನು +ಸಾತ್ಯಕಿಯ +ರಥದ
ಮುರಿವ+ ಕಂಡೆನು +ಭೀಮ +ದುಗುಡದ
ಭರದಲಿದ್ದನು +ಮಿಕ್ಕ +ಬಲ +ನಾ
ಲ್ಕೆರಡೊ +ನಾಲ್ಕೊಂದೋ +ನಿಧಾನಿಸಲ್+ಅರಿಯೆ +ನಾನೆಂದ

ಅಚ್ಚರಿ:
(೧) ೫, ೬ ಎಂದು ಹೇಳಲು – ನಾಲ್ಕೆರಡೊ ನಾಲ್ಕೊಂದೋ
(೨) ನ ಕಾರದ ಸಾಲು ಪದಗಳು – ನಾಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ
(೩) ಭೀಮನ ಸ್ಥಿತಿಯನ್ನು ವಿವರಿಸಲು – ಭೀಮ ದುಗುಡದ ಭರದಲಿದ್ದನು
(೪) ಕಾಣೆ, ಕಂಡೆ ಪದಗಳ ಬಳಕೆ