ಪದ್ಯ ೨೯: ಕರ್ಣನ ಸಾಹಸದ ಪರಿಚಯ ಹೇಗಾಯಿತು?

ತಮ್ಮ ಸತ್ವೋದಧಿಯ ತೋರಿದ
ರೊಮ್ಮೆ ಮೊಗೆದನು ಬಳಿಕ ರಾಯನ
ಸೊಮ್ಮಿನವರಲಿ ಸೀಳಿದನು ಹದಿನೆಂಟು ಸಾವಿರವ
ಹಮ್ಮುಗೆಯ ಕೈಮನದ ಹೊಣಕೆಯ
ಹಮ್ಮಿನುಬ್ಬಟೆಯವರ ಪಾರ್ಥನ
ತಮ್ಮದಿರ ಸಾಹಸಕೆ ಸೇರಿಸಿದನು ಪಲಾಯನವ (ಕರ್ಣ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯ ಸತ್ವಸಮುದ್ರವನ್ನು ಕರ್ಣನು ದಾಳಿಯಿಟ್ಟು ಸೀಳಿದನು, ಧರ್ಮಜನ ಆಪ್ತರಾದ ಹದಿನೆಂಟು ಸಾವಿರ ಸೈನಿಕರನ್ನು ಸೀಳಿ ಹಾಕಿದನು ಕೈ ಚಳಕ ಮನಸ್ಸಿನ ನಿರ್ಧಾರಗಳಿಂದ ಅಹಂಕರಿಸಿ ಕಾದಿದವರನ್ನು ನಕುಲ ಸಹದೇವರೊಡನೆ ಓಡಿ ಹೋಗುವಂತೆ ಮಾಡಿದನು.

ಅರ್ಥ:
ಸತ್ವ:ಶಕ್ತಿ, ಬಲ; ಉದಧಿ: ಸಮುದ್ರ; ತೋರು: ಕಾಣು; ಮೊಗೆ:ದಾಳಿಯಿಡು, ಆಕ್ರಮಿಸು; ಬಳಿಕ: ನಂತರ; ರಾಯ: ರಾಜ; ಸೊಮ್ಮು: ಸ್ವತ್ತು, ಸೊಬಗು; ಸೀಳು: ಚೂರು, ತುಂಡು; ಸಾವಿರ: ಸಹಸ್ರ; ಹಮ್ಮುಗೆ: ಹಗ್ಗ, ಪಾಶ; ಕೈ: ಹಸ್ತ, ಕರ; ಮನ: ಮನಸ್ಸು; ಹೊಣಕೆ: ಯುದ್ಧ, ಕಾಳಗ; ಹಮ್ಮು: ಅಹಂಕಾರ; ಉಬ್ಬಟೆ: ಅತಿಶಯ, ಹಿರಿಮೆ; ತಮ್ಮ: ಅನುಜ; ಸಾಹಸ: ಪರಾಕ್ರಮ, ಶೌರ್ಯ; ಸೇರಿಸು: ಜೋಡಿಸು; ಪಲಾಯನ: ಓಡುವಿಕೆ, ಪರಾರಿ;

ಪದವಿಂಗಡಣೆ:
ತಮ್ಮ +ಸತ್ವ+ಉದಧಿಯ +ತೋರಿದರ್
ಒಮ್ಮೆ +ಮೊಗೆದನು +ಬಳಿಕ+ ರಾಯನ
ಸೊಮ್ಮಿನವರಲಿ +ಸೀಳಿದನು+ ಹದಿನೆಂಟು +ಸಾವಿರವ
ಹಮ್ಮುಗೆಯ +ಕೈಮನದ+ ಹೊಣಕೆಯ
ಹಮ್ಮಿನ್+ಉಬ್ಬಟೆಯವರ +ಪಾರ್ಥನ
ತಮ್ಮದಿರ+ ಸಾಹಸಕೆ+ ಸೇರಿಸಿದನು +ಪಲಾಯನವ

ಅಚ್ಚರಿ:
(೧) ಸತ್ವೋದಧಿಯ – ಪದಬಳಕೆ
(೨) ಹಿಮ್ಮೆಟ್ಟಿಸಿದನು ಎಂದು ಹೇಳಲು – ಸಾಹಸಕೆ ಸೇರಿಸಿದನು ಪಲಾಯನವ

ಪದ್ಯ ೨೮:ಕರ್ಣನು ಮಹಾರಥರ ಎದುರು ಹೇಗೆ ಹೋರಾಡಿದನು?

ಉರಿಯ ಪೇಟೆಗಳಲಿ ಪತಂಗದ
ಸರಕು ಮಾರದೆ ಮರಳುವುದೆ ನಿ
ಬ್ಬರದ ಬಿರುದಿನೊಳೀ ಮಹಾರಥ ರಾಜಿ ರವಿಸುತನ
ಕೆರಳಿಚಿದರೈ ಕೇಣವಿಲ್ಲದೆ
ಬೆರಸಿದರು ಬೇಸರಿಸಿದರು ಹೊಡ
ಕರಿಸಿದರು ಹೊಯ್ದರು ವಿಭಾಡಿಸಿದರು ವಿಘಾತಿಯಲಿ (ಕರ್ಣ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಬೆಂಕಿಯ ಜ್ವಾಲೆಯ ಸಂತೆಯಲ್ಲಿ ದೀಪದಹುಳುಗಳು ಮಾರಾಟವಾಗದೇ ಬಿಡುವುದೇ? ಕಠೋರವಾದ ಸ್ಪರ್ಧೆಯನ್ನೊಡ್ಡಿ ಮಹಾರಥರ ಗುಂಪು, ಕರ್ಣನನ್ನು ಕೆರಳಿಸಿತು. ಭಯ ಹಿಂಜರಿಕೆಗಳಿಲ್ಲದೆ ಅವನೊಡನೆ ಕಾದಿ ಬೇಸರಿಸಿದರು, ಸುತ್ತಲೂ ಮುತ್ತಿದರು, ತೆಗಳಿ ಹೊಡೆದರು.

ಅರ್ಥ:
ಉರಿ: ಜ್ವಾಲೆ; ಪೇಟೆ: ಸಂತೆ; ಪತಂಗ:ದೀಪದ ಹುಳು, ಮಿಡತೆ; ಸರಕು: ಸಾಮಾನು, ಸಾಮಗ್ರಿ; ಮಾರು: ವಿಕ್ರಯಿಸು; ಮರಳು: ಹಿಂತಿರುಗು; ನಿಬ್ಬರ:ಅತಿಶಯ, ಹೆಚ್ಚಳ; ಬಿರುದು: ಗೌರವಸೂಚಕ ಪದ; ಮಹಾರಥ: ಪರಾಕ್ರಮಿ; ರಾಜಿ: ಹೊಂದಾಣಿಕೆ; ರವಿಸುತ: ಸೂರ್ಯನ ಪುತ್ರ (ಕರ್ಣ); ಕೆರಳು: ಕೋಪಗೊಳ್ಳು; ಕೆರಳಿಚು: ರೇಗಿಸು; ಕೇಣ: ಕೋಪ; ಬೆರಸು: ಸೇರಿಸು; ಬೇಸರ: ಬೇಜಾರು; ಹೊಡಕರಿಸು: ಕಾಣಿಸು, ಬೇಗಬೆರಸು; ಹೊಯ್ದು: ಹೊಡೆ; ವಿಭಾಡಿಸು: ನಾಶಮಾಡು; ವಿಘಾತಿ: ಹೊಡೆತ, ವಿರೋಧ;

ಪದವಿಂಗಡಣೆ:
ಉರಿಯ +ಪೇಟೆಗಳಲಿ +ಪತಂಗದ
ಸರಕು +ಮಾರದೆ +ಮರಳುವುದೆ +ನಿ
ಬ್ಬರದ +ಬಿರುದಿನೊಳ್+ಈ+ಮಹಾರಥ+ ರಾಜಿ +ರವಿಸುತನ
ಕೆರಳಿಚಿದರೈ +ಕೇಣವಿಲ್ಲದೆ
ಬೆರಸಿದರು+ ಬೇಸರಿಸಿದರು +ಹೊಡ
ಕರಿಸಿದರು +ಹೊಯ್ದರು +ವಿಭಾಡಿಸಿದರು+ ವಿಘಾತಿಯಲಿ

ಅಚ್ಚರಿ:
(೧) ಕರ್ಣನಿಗೆ ಸವಾಲೊಡ್ಡುವ ಪರಿ – ಬೆರಸಿದರು, ಬೇಸರಿಸಿದರು, ಹೊಡಕರಿಸಿದರು, ಹೊಯ್ದರು, ವಿಭಾಡಿಸಿದರು
(೨) ಉಪಮಾನದ ಪ್ರಯೋಗ – ಉರಿಯ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ
(೩) ಜೋಡಿ ಪದಗಳು – ಕೆರಳಿಚಿದರೈ ಕೇಣವಿಲ್ಲದೆ; ಬೆರಸಿದರು ಬೇಸರಿಸಿದರು; ಹೊಡ
ಕರಿಸಿದರು ಹೊಯ್ದರು; ವಿಭಾಡಿಸಿದರು ವಿಘಾತಿಯಲಿ

ಪದ್ಯ ೨೭: ಕರ್ಣನು ಯಾರನ್ನು ಎದುರಿಸಿದನು?

ಭೀಮ ಫಲಗುಣ ಕೃಷ್ಣ ಧರ್ಮಜ
ರೀ ಮಹಾರಥರಲ್ಲದಿತರ
ಸ್ತೋಮವಳವಿಯ ಮೀರಿ ಕವಿದುದು ಕರ್ಣನಿದಿರಿನಲಿ
ಹಾ ಮಹಾದೇವಾ ಸಮಸ್ತ ಸ
ನಾಮರಥಿಕರು ಕರ್ಣನೊಬ್ಬನ
ಕಾಮಿಸಿದರೈ ಕದನಕವನೀಪಾಲ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಮ, ಅರ್ಜುನ, ಕೃಷ್ಣ, ಧರ್ಮಜ ಇವರನ್ನು ಹೊರತುಪಡಿಸಿ ಪಾಂಡವರ ಸೈನ್ಯದೆಲ್ಲಾ ಮಹಾರಥರು ಕರ್ಣನ ಎದುರು ಯುದ್ಧಕ್ಕೆ ಸಜ್ಜಾದರು ಶಿವಶಿವಾ ಈ ಹೆಸರಾಂತ ಮಹಾರಥರೆಲ್ಲಾ ಕರ್ಣನೊಬ್ಬನ ಮೇಲೆ ಯುದ್ಧ ಮಾಡಲು ಇಚ್ಛಿಸಿದರೇ ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸುತ್ತಿದ್ದನು.

ಅರ್ಥ:
ಮಹಾರಥ: ಪರಾಕ್ರಮಿ; ಇತರ: ಮಿಕ್ಕ; ಸ್ತೋಮ: ಗುಂಪು; ಅಳವಿ: ಯುದ್ಧ, ಶಕ್ತಿ; ಮೀರಿ: ಹೆಚ್ಚಾಗು; ಕವಿದು: ಆವರಿಸು; ಇರಿದು: ಎದುರು; ಸಮಸ್ತ: ಎಲ್ಲಾ; ಸನಾಮರಥಿಕ: ಹೆಸರಾಂತ ಪರಾಕ್ರಮಿಗಳು; ಕಾಮಿಸು: ಆಸೆಪಡು, ಇಚ್ಛಿಸು; ಕದನ: ಯುದ್ಧ; ಅವನೀಪಾಲ: ರಾಜ; ಅವನಿ: ಭೂಮಿ; ಕೇಳು: ಆಲಿಸು;

ಪದವಿಂಗಡಣೆ:
ಭೀಮ +ಫಲಗುಣ +ಕೃಷ್ಣ +ಧರ್ಮಜರ್
ಈ+ ಮಹಾರಥರಲ್ಲದ್+ಇತರ
ಸ್ತೋಮವ್+ಅಳವಿಯ +ಮೀರಿ +ಕವಿದುದು+ ಕರ್ಣನ್+ಇದಿರಿನಲಿ
ಹಾ +ಮಹಾದೇವಾ +ಸಮಸ್ತ +ಸ
ನಾಮರಥಿಕರು+ ಕರ್ಣನೊಬ್ಬನ
ಕಾಮಿಸಿದರೈ +ಕದನಕ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಕರ್ಣನೊಡನೆ ಯುದ್ದಕ್ಕೆ ನಿಂತರು ಎಂದು ಹೇಳಲು – ಕರ್ಣನೊಬ್ಬನ ಕಾಮಿಸಿದರೈ ಕದನಕ್ – ಕಾಮಿಸು ಪದದ ಬಳಕೆ
(೨) ಕ ಕಾರದ ಸಾಲು ಪದ – ಕರ್ಣನೊಬ್ಬನ ಕಾಮಿಸಿದರೈ ಕದನಕವನೀಪಾಲ ಕೇಳೆಂದ
(೩) ಅಳವಿ, ಕದನ; ಮಹಾರಥರು, ಸನಾಮರಥಿಕರು – ಸಮನಾರ್ಥಕ ಪದ

ಪದ್ಯ ೨೬: ಕರ್ಣನನು ಯಾವ ಮಹಾರಥರು ಮುತ್ತಿದರು?

ನಕುಲ ಧೃಷ್ಟದ್ಯುಮ್ನ ಸುತಸೋ
ಮಕ ಶಿಖಂಡಿ ಯುಯುತ್ಸು ವರಸಾ
ತ್ಯಕಿ ಶತಾನೀಕಾಖ್ಯ ಪ್ರತಿವಿಂಧ್ಯಕರು ಶ್ರುತಕೀರ್ತಿ
ಸಕಲ ಕೈಕೆಯ ಪಾಂಡ್ಯ ಶಿಶುಪಾ
ಲಕಸುತ ಯುಧಾಮನ್ಯು ಸಹದೇ
ವಕರು ಸನ್ನಾಹದಲಿ ಕವಿದುದು ವರಮಹಾರಥರು (ಕರ್ಣ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಕುಲ, ಧೃಷ್ಟದ್ಯುಮ್ನ, ಸುತಸೋಮ, ಶಿಖಂಡಿ, ಯುಯುತ್ಸು, ಸಾತ್ಯಕಿ, ಶತಾನೀಕ, ಪ್ರತಿವಿಂಧ್ಯ, ಶ್ರುತಕೀರ್ತಿ, ಕೈಕೆಯರು, ಪಾಂಡ್ಯ, ಶಿಶುಪಾಲನ ಮಗ, ಯುಧಾಮನ್ಯು ಸಹದೇವ ಇವರೆಲ್ಲಾ ಕರ್ಣನನ್ನು ಮುತ್ತಿದರು.

ಅರ್ಥ:
ವರ: ಶ್ರೇಷ್ಠ; ಸಕಲ: ಎಲ್ಲಾ; ಸನ್ನಾಹ: ಅಣಿ ಮಾಡಿಕೊಳ್ಳುವುದು; ಕವಿ: ಆವರಿಸು; ಮಹಾರಥ: ಶೂರ;

ಪದವಿಂಗಡಣೆ:
ನಕುಲ +ಧೃಷ್ಟದ್ಯುಮ್ನ +ಸುತಸೋ
ಮಕ +ಶಿಖಂಡಿ +ಯುಯುತ್ಸು +ವರ+ಸಾ
ತ್ಯಕಿ +ಶತಾನೀಕಾಖ್ಯ+ ಪ್ರತಿವಿಂಧ್ಯಕರು +ಶ್ರುತಕೀರ್ತಿ
ಸಕಲ +ಕೈಕೆಯ +ಪಾಂಡ್ಯ +ಶಿಶುಪಾ
ಲಕಸುತ +ಯುಧಾಮನ್ಯು +ಸಹದೇ
ವಕರು +ಸನ್ನಾಹದಲಿ +ಕವಿದುದು +ವರಮಹಾರಥರು

ಅಚ್ಚರಿ:
(೧) ೧೪ ಹೆಸರುಗಳನ್ನು ಪ್ರಸ್ತಾಪಿಸುವ ಪದ್ಯ

ಪದ್ಯ ೨೫: ಪಾಂಚಾಲನ ಸೈನ್ಯದವರು ಕರ್ಣನ ಮೇಲೆ ಹೇಗೆ ದಾಳಿ ಮಾಡಿದರು?

ವೈರಿ ಪಾಂಚಾಲಕರೊಳೈವರು
ಧಾರುಣಿಶ್ವರರಸುವ ಬಿಟ್ಟರು
ಚಾರು ಚಾಪಳ ಚಾತುರಂಗದ ನಿಧನ ನಿರ್ಣಯವ
ಆರು ಬಲ್ಲರು ಖಾತಿಯಲಿ ಜ
ಝ್ಝಾರರೆದ್ದುದು ಮತ್ತೆ ಸಕಲ ಮ
ಹಾರಥರು ನೂಕಿದರು ಲಗ್ಗೆಯ ಲಳಿಯ ಲಹರಿಯಲಿ (ಕರ್ಣ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ವೈರಿಯಾದ ಪಾಂಚಾಲನ ಸೈನ್ಯದಲ್ಲಿ ಐವರು ರಾಜರು ಸತ್ತರು. ಚತುರಂಗ ಸೈನ್ಯ ಸತ್ತುದಕ್ಕೆ ಲೆಕ್ಕವೇ ಇರಲಿಲ್ಲ. ಮತ್ತೆ ಪಾಂಚಾಲನ ಸೈನ್ಯದ ಮಹಾರಥರು ಕೋಪದಿಂದ ಸಮುದ್ರದ ಅಲೆಗಳು ಒಂದರ ಹಿಂದೆ ಒಂದು ಬರುವಂತೆ ಕರ್ಣನ ಮೇಲೆ ದಾಳಿ ಮಾಡಿದರು.

ಅರ್ಥ:
ವೈರಿ: ರಿಪು; ಧಾರುಣಿ: ಭೂಮಿ; ಧಾರುಣೀಶ್ವರ: ರಾಜ; ಅಸು: ಪ್ರಾಣ; ಬಿಡು: ತ್ಯಜಿಸು; ಚಾರು: ಮನೋಹರವಾದ; ಚಾಪ: ಬಿಲ್ಲು, ಧನುಸ್ಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ನಿಧನ: ಮರಣ; ನಿರ್ಣಯ: ತೀರ್ಮಾನ; ಬಲ್ಲರು: ತಿಳಿದವರು; ಖಾತಿ: ಕೋಪ, ಕ್ರೋಧ; ಜಝ್ಝಾರ: ಪರಾಕ್ರಮಿ, ಶೂರ; ಎದ್ದು: ಮೇಲೇಳು; ಸಕಲ: ಎಲ್ಲಾ; ಮಹಾರಥ: ಶೂರರು, ಪರಾಕ್ರಮಿ; ನೂಕು: ತಳ್ಳು; ಲಗ್ಗೆ: ಮುತ್ತಿಗೆ, ಆಕ್ರಮಣ; ಲಳಿ: ರಭಸ; ಲಹರಿ:ಅಲೆ, ತೆರೆ;

ಪದವಿಂಗಡಣೆ:
ವೈರಿ +ಪಾಂಚಾಲಕರೊಳ್ +ಐವರು
ಧಾರುಣಿಶ್ವರರ್+ಅಸುವ +ಬಿಟ್ಟರು
ಚಾರು +ಚಾಪಳ +ಚಾತುರಂಗದ +ನಿಧನ +ನಿರ್ಣಯವ
ಆರು +ಬಲ್ಲರು +ಖಾತಿಯಲಿ +ಜ
ಝ್ಝಾರರ್+ಎದ್ದುದು +ಮತ್ತೆ +ಸಕಲ +ಮ
ಹಾರಥರು+ ನೂಕಿದರು +ಲಗ್ಗೆಯ +ಲಳಿಯ +ಲಹರಿಯಲಿ

ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಾರು ಚಾಪಳ ಚಾತುರಂಗದ
(೨) ಲ ಕಾರದ ತ್ರಿವಳಿ ಪದ – ಲಗ್ಗೆಯ ಲಳಿಯ ಲಹರಿಯಲಿ
(೩) ಜಝ್ಝಾರ, ಮಹಾರಥ – ಸಮನಾರ್ಥಕ ಪದ

ಪದ್ಯ ೨೪: ಪಾಂಚಾಲ ಸೈನ್ಯದವರು ಹೇಗೆ ಸತ್ತರು?

ಮೇಲೆ ಬಿದ್ದುದು ಮತ್ತೆ ರಿಪು ಪಾಂ
ಚಾಲ ಬಲ ಸಾವುದಕೆ ಕಡೆಯಿ
ಲ್ಲಾಳ ಬರವಿಂಗರಿಯೆ ನಾನವಸಾನವನು ಮರಳಿ
ಕೋಲುಗಳ ತೆಗೆದೆಸುವನೋ ಶರ
ಜಾಳವನು ವಿರಚಿಸುವನೋ ಹಗೆ
ಯಾಳಿ ಮುರಿದುದ ಕಾಬೆನೆಸುಗೆಯ ಕಾಣೆ ನಾನೆಂದ (ಕರ್ಣ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ವಿವರಣೆಯನ್ನು ಮುಂದುವರೆಸುತ್ತಾ, ಮತ್ತೆ ಪಾಂಚಾಲನ ಸೇನೆಯು ಕರ್ಣನ ಮೇಲೆ ಬಿದ್ದಿತು. ಅವರ ಮರಣ ಅವ್ಯಾಹತವಾಗಿ ಮುಂದುವರೆಯಿತು. ಕರ್ಣನು ಬಾಣಗಳನ್ನು ಬಿಟ್ಟನೋ, ಬಾಣಗಳ ಜಾಲವನ್ನೇ ರಚಿಸಿದನೋ ನನಗೆ ತಿಳಿಯಲಿಲ್ಲ. ಶತ್ರುಗಳು ಸತ್ತುದು ಕಾಣಿಸಿತು, ಕರ್ಣನು ಬಾಣಗಳನ್ನು ಬಿಟ್ಟುದು ಕಾಣಲಿಲ್ಲ ಎಂದು ವಿವರಿಸಿದನು.

ಅರ್ಥ:
ಮೇಲೆ: ಅಗ್ರಭಾಗ; ಬಿದ್ದು: ಕುಸಿ; ರಿಪು: ವೈರಿ; ಬಲ: ಸೈನ್ಯ; ಸಾವು: ಮರಣ; ಕಡೆ: ಕೊನೆ; ಆಳ: ಸೈನಿಕ; ಬರ:ಅಭಾವ, ಕೊರತೆ; ಅರಿ: ತಿಳಿ; ಅವಸಾನ: ಅಳಿ, ಮರಣ; ಮರಳಿ: ಮತ್ತೆ; ಕೋಲು: ಬಾಣ; ತೆಗೆದು: ಹೊರತಂದು; ಎಸುವ: ಹೂಡುವ; ಶರ: ಬಾಣ; ಜಾಲ: ಗುಂಪು, ಸಮೂಹ; ವಿರಚಿಸು: ನಿರ್ಮಿಸು; ಹಗೆ: ವೈರ; ಮುರಿ: ಸೀಳು; ಆಳಿ: ಗುಂಪು, ಸಮೂಹ; ಕಾಬೆ: ಕಾಣು; ಎಸು: ಬಾಣ ಪ್ರಯೋಗ ಮಾಡು; ಕಾಣೆ: ನೋಡಲಿಲ್ಲ;

ಪದವಿಂಗಡಣೆ:
ಮೇಲೆ +ಬಿದ್ದುದು +ಮತ್ತೆ +ರಿಪು +ಪಾಂ
ಚಾಲ +ಬಲ +ಸಾವುದಕೆ +ಕಡೆಯಿಲ್
ಆಳ +ಬರವಿಂಗ್+ಅರಿಯೆ +ನಾನ್+ಅವಸಾನವನು +ಮರಳಿ
ಕೋಲುಗಳ +ತೆಗೆದ್+ಎಸುವನೋ +ಶರ
ಜಾಳವನು +ವಿರಚಿಸುವನೋ+ ಹಗೆ
ಯಾಳಿ +ಮುರಿದುದ +ಕಾಬೆನ್+ಎಸುಗೆಯ +ಕಾಣೆ +ನಾನೆಂದ

ಅಚ್ಚರಿ:
(೧) ಸಾವು, ಅವಸಾನ, ಮುರಿ – ಸಾಮ್ಯಾರ್ಥ ಪದಗಳು
(೨) ಕರ್ಣನು ಏನು ಮಾಡಿರಬಹುದು – ಕೋಲುಗಳ ತೆಗೆದೆಸುವನೋ ಶರಜಾಳವನು ವಿರಚಿಸುವನೋ

ಪದ್ಯ ೨೨: ಕರ್ಣನು ಏಕೆ ಕಾಣಿಸಲಿಲ್ಲ?

ಬಳಿಕ ಹೇಳುವುದೇನು ರಣದ
ಗ್ಗಳೆಯರವದಿರು ಮುತ್ತಿದರು ಕೈ
ಚಳಕಿಗರು ಕವಿದೆಚ್ಚರೀತನನೆಂಟು ದೆಸೆಗಳಲಿ
ಲುಳಿತ ಜಲಧರಪಟಲ ಜಠರದೊ
ಳಿಳಿದ ರವಿಮಂಡಲದವೋಲರೆ
ಘಳಿಗೆ ಕರ್ಣನ ಕಾಣೆನೈ ನರನಾಥ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಯುದ್ಧದ ಸನ್ನಿವೇಶವನ್ನು ಧೃತರಾಷ್ಟ್ರನಿಗೆ ವಿವರಿಸುತ್ತಿದ್ದ ಸಂಜಯನು ಕರ್ಣನು ಗುರುಸುತನಿಗೆ ನೀವು ನಿಂತು ನೋಡಿರಿ ಎಂದು ಹೇಳಿದ ನಂತರ ಯುದ್ಧ ವಿಶಾರದರಾದ ಪಾಂಚಾಲ ಸೈನ್ಯವು ಕರ್ಣನನ್ನು ಮುತ್ತಿ ಎಂಟು ದಿಕ್ಕುಗಳಿಂದಲೂ ಅವನ ಮೇಲೆ ಬಾಣಗಳನ್ನು ಬಿಟ್ಟರು. ದಟ್ಟವಾಗಿ ಕವಿದು ಬಂದ ಮೋಡಗಳ ಮರೆಗೆ ಹೋಗಿ ಸೂರ್ಯನು ಮರೆಯಾಗುವಂತೆ ಅರ್ಧಗಳಿಗೆಯ ಕಾಲ ಕರ್ಣನು ಕಾಣಿಸಲೇ ಇಲ್ಲ ಎಂದು ವಿವರಿಸಿದನು.

ಅರ್ಥ:
ಬಳಿಕ: ನಂತರ; ಹೇಳು: ತಿಳಿಸು; ರಣ: ಯುದ್ಧ; ಅಗ್ಗ: ಶ್ರೇಷ್ಠ; ಅವದಿರು: ಅವರು; ಮುತ್ತು:ಸುತ್ತುವರೆ; ಕೈಚಳಕ: ನಿಪುಣ, ಚಾಣಾಕ್ಷ; ಕವಿ: ಆವರಿಸು; ಎಚ್ಚರ: ಹುಷಾರಾಗಿರು; ಎಂಟು: ಅಷ್ಟ; ದೆಸೆ: ದಿಕ್ಕು; ಲುಳಿ: ರಭಸ, ವೇಗ; ಜಲಧರ: ಮೋಡ; ಪಟಲ: ತೆರೆ, ಪರದೆ; ಸಮೂಹ; ಜಠರ: ಹೊಟ್ಟೆ; ಇಳಿ: ಕೆಳ್ಳಕ್ಕೆ ಬಾ, ಜಾರು; ರವಿ: ಸೂರ್ಯ; ಮಂಡಲ: ವರ್ತುಲಾಕಾರ; ಘಳಿಗೆ: ಕಾಲ; ಅರೆ: ಅರ್ಧ; ನರನಾಥ: ರಾಜ;

ಪದವಿಂಗಡಣೆ:
ಬಳಿಕ +ಹೇಳುವುದೇನು +ರಣದ್
ಅಗ್ಗಳೆಯರ್+ಅವದಿರು +ಮುತ್ತಿದರು +ಕೈ
ಚಳಕಿಗರು+ ಕವಿದೆಚ್ಚರ್+ಈತನನ್+ಎಂಟು +ದೆಸೆಗಳಲಿ
ಲುಳಿತ+ ಜಲಧರಪಟಲ+ ಜಠರದೊಳ್
ಇಳಿದ +ರವಿಮಂಡಲದವೋಲ್+ಅರೆ
ಘಳಿಗೆ +ಕರ್ಣನ +ಕಾಣೆನೈ +ನರನಾಥ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲುಳಿತ ಜಲಧರಪಟಲ ಜಠರದೊಳಿಳಿದ ರವಿಮಂಡಲದವೋಲು