ಪದ್ಯ ೩೬: ಶಲ್ಯನು ಸಾರಥಿಯಾಗಲು ಒಪ್ಪಿದನೆ?

ಶಿವಶಿವಾ ನಿರ್ಬಂಧವಿದು ಕೌ
ರವನಲಾಯಿತೆ ಮದ್ಯಮಯ ಗಂ
ಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
ಅವನಿಪತಿಗಳ ಸೇವೆಯಿದು ಕ
ಷ್ಟವಲೆ ಮೊದಲಲಿ ಬಳಿಕ ನಾವಿ
ನ್ನವಗಡಿಸಲೇನಹದು ಸಾರಥಿಯಾದೆವೇಳೆಂದ (ಕರ್ಣ ಪರ್ವ, ೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಪಾದಗಳಿಗೆರಗಿದನ್ನು ಕಂಡು, ಶಿವಶಿವಾ ಕೌರವನು ಎಂತಹ ನಿರ್ಬಂಧವನ್ನು ತಂದೊಡ್ಡಿದ್ದಾನೆ, ದುಂಬಿಗಳನ್ನೆಳೆತಂದು ಹೆಂಡದ ವಾಸನೆಯನ್ನು ಕುಡಿಸುವ ಹಾಗಾಯಿತು. ರಾಜ ಸೇವೆಯೆಂಬುದೇ ಕಷ್ಟಕರವಲ್ಲವೇ? ಹೀಗಿರುವಾಗ ನಾವು ಬೇಡವೆಂದರಾದೀತೆ? ಸಾರಥಿಯಾಗಲೊಪ್ಪಿದ್ದೇನೆ ಮೇಲೇಳು ಎಂದು ಶಲ್ಯನು ದುರ್ಯೋಧನನಿಗೆ ನುಡಿದನು.

ಅರ್ಥ:
ಶಿವಶಿವಾ: ಭಗವಂತ, ಆಡು ಭಾಷೆಯಲ್ಲಿ ದೇವರ ಹೆಸರನ್ನು ಹೇಳುವ ಪರಿ; ನಿರ್ಬಂಧ: ಬಲವಂತ, ಒತ್ತಾಯ; ಮದ್ಯ: ಹೆಂಡ, ಮಾದಕ ದ್ರವ್ಯ; ಗಂಧ: ವಾಸನೆ; ಕುಡಿ: ಸೇವಿಸು; ಪರಿ: ರೀತಿ; ತುಂಬಿ: ದುಂಬಿ; ಸೆರೆ: ಬಂಧಿಸು; ಅವನಿಪತಿ: ರಾಜ; ಸೇವೆ: ಊಳಿಗ, ಚಾಕರಿ; ಕಷ್ಟ: ಕಠಿಣ; ಬಳಿಕ: ನಂತರ; ಅವಗಡಿಸು:ಕಡೆಗಣಿಸು; ಸಾರಥಿ: ಸೂತ, ರಥವನ್ನು ಓಡಿಸುವವ; ಏಳು: ಮೇಲೆ ಬಾ, ನಿಲ್ಲು;

ಪದವಿಂಗಡಣೆ:
ಶಿವಶಿವಾ +ನಿರ್ಬಂಧವಿದು +ಕೌ
ರವನಲಾಯಿತೆ +ಮದ್ಯಮಯ +ಗಂ
ಧವನು +ಕುಡಿಸುವ +ಪರಿಯಲಾ +ತುಂಬಿಗಳ +ಸೆರೆವಿಡಿದು
ಅವನಿಪತಿಗಳ +ಸೇವೆಯಿದು +ಕ
ಷ್ಟವಲೆ+ ಮೊದಲಲಿ+ ಬಳಿಕ+ ನಾವಿನ್ನ್
ಅವಗಡಿಸಲೇನಹದು +ಸಾರಥಿಯಾದೆವ್+ಏಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮದ್ಯಮಯ ಗಂಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
(೨) ರಾಜರ ಸೇವೆ ಎಂತಹದು? -ಅವನಿಪತಿಗಳ ಸೇವೆಯಿದು ಕಷ್ಟವಲೆ ಮೊದಲಲಿ

ನಿಮ್ಮ ಟಿಪ್ಪಣಿ ಬರೆಯಿರಿ