ಪದ್ಯ ೨೧: ಕ್ಷೇಮಧೂರ್ತನ ಅಂತ್ಯ ಹೇಗಾಯಿತು?

ಕುಣಿದು ಪುಟನೆಗೆದರಿಗಜವ ಹೊ
ಯ್ದಣೆದು ಹಿಂಗಾ ಮುನ್ನ ತಲೆ ಮೇ
ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
ಬಣಗು ನೀನಕಟಕಟ ಭೀಮನ
ಕೆಣಕಿ ಬದುಕಿದೆಯೆನುತಲಪ್ಸರ
ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ (ಕರ್ಣ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕುಣಿಯುತ್ತಾ ಕುಪ್ಪಳಿಸುತ್ತಾ ಬಂದು ಭೀಮನೇರಿದ ಆನೆಯನ್ನು ಹೊಡೆದು ಹಿಂತಿರುಗುವ ಮೊದಲೇ ಕ್ಷೇಮಧೂರ್ತಿಯ ತಲೆ ಆಕಾಶಕ್ಕೆ ಹಾರಿತು. ಅವನ ಮುಂಡವು ಕತ್ತಿಯನ್ನು ಹಿಡಿದು ನೂರು ಹೆಜ್ಜೆ ಮುನ್ನಡೆಯಿತು. ನೀನು ಕ್ಷುಲ್ಲಕ ಭೀಮನನ್ನು ಕೆಣಕಿ ಬದುಕಿದೆ! ಎಂದು ನಗುತ್ತಾ ಅಪ್ಸರೆಯರು ಅವನನ್ನು ವಿಮಾನದಲ್ಲಿ ಒಯ್ದರು.

ಅರ್ಥ:
ಕುಣಿದು: ನಾಟ್ಯ ಮಾಡಿ, ಕುಪ್ಪಳಿಸು; ಪುಟ: ನೆಗೆತ; ಅರಿ: ವೈರಿ; ಗಜ: ಆನೆ; ಹೊಯ್ದ: ಮೇಲೆ ಬಿದ್ದು; ಹಿಂಗದ: ಹಿಂದಕ್ಕೆ ಹೋಗು; ಮುನ್ನ: ಮುಂದೆ; ತಲೆ: ಶಿರ; ಮೇಲಣಿಗೆ: ಮೇಲಕ್ಕೆ; ಚಿಗಿ: ನೆಗೆ, ಹಾರು; ಮುಂಡ: ತಲೆ; ನಡೆ: ಹೆಜ್ಜೆ ಹಾಕು; ನೂರು: ಶತ; ಹೆಜ್ಜೆ: ಪಾದ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ; ಅಕಟಕಟ: ಅಯ್ಯೋ; ಕೆಣಕು: ರೇಗಿಸು; ಬದುಕು: ಜೀವನ; ಎದೆ: ಹೃದಯ; ಅಪ್ಸರ: ದೇವಲೋಕದ ಸ್ತ್ರೀ; ಗಣಿಕೆ:ವೇಶ್ಯೆ; ನಗು: ಸಂತೋಷ; ವಿಮಾನ: ಆಕಾಶಯಾನಮಾಡುವ ಒಂದು ವಾಹನ;

ಪದವಿಂಗಡಣೆ:
ಕುಣಿದು +ಪುಟನೆಗೆದ್+ಅರಿ+ಗಜವ+ ಹೊ
ಯ್ದಣೆದು +ಹಿಂಗಾ +ಮುನ್ನ +ತಲೆ +ಮೇ
ಲಣಿಗೆ+ ಚಿಗಿದುದು +ಮುಂಡ +ನಡೆದುದು +ನೂರು +ಹಜ್ಜೆಯನು
ಬಣಗು+ ನೀನ್+ಅಕಟಕಟ +ಭೀಮನ
ಕೆಣಕಿ+ ಬದುಕಿದೆ+ಯೆನುತಲ್+ಅಪ್ಸರ
ಗಣಿಕೆಯರು +ನಗುತವನ+ ಕೊಂಡೊಯ್ದರು +ವಿಮಾನದಲಿ

ಅಚ್ಚರಿ:
(೧) ಸಾಯಿಸಿದನು ಎಂದು ಸೂಚಿಸಲು – ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
(೨) ಸತ್ತನು ಎಂದು ತಿಳಿಸಲು – ಅಪ್ಸರಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ

ಪದ್ಯ ೨೦: ಕ್ಷೇಮಧರ್ಮನ ಮತ್ತು ಭೀಮನ ಕಾಳಗ ಹೇಗಿತ್ತು?

ಸರಳ ಮಳೆಯಲಿ ನೆನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದೊಡಾಯುಧದಿ (ಕರ್ಣ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಯುಗಕಾಲದ ಅಂತ್ಯದಲ್ಲಿ ಮಳೆಯಿಂದ ಕೆಳಗುರುಳುವ ಬೆಟ್ಟಗಳಂತೆ ಬಾಣಗಳ ಮಳೆಯಲ್ಲಿ ನೆನೆದು ಆನೆಗಳು ಕೆಳಕ್ಕೆ ಭೂಮಿಯ ಮೇಲೆ ಬಿದ್ದವು. ಕ್ಷೇಮಧೂರ್ತಿಯ ಆನೆ ಎರಡು ಸೀಳಾಯಿತು. ಅವನು ಕೆಳಕ್ಕೆ ಧುಮುಕಿ ಖಡ್ಗವನ್ನೆಳೆದು ಕೋಪದಿಂದ ಭೀಮನ ಮೇಲೆ ನುಗ್ಗಿದನು.

ಅರ್ಥ:
ಸರಳ: ಬಾಣ; ಮಳೆ: ವರ್ಷ; ನೆನೆದು:ಒದ್ದೆಯಾಗು; ಕರಿಘಟೆ: ಆನೆಯ ಗುಂಪು; ಉರುಳು: ಜಾರಿ ಬೀಳು; ಕಲ್ಪಾಂತ: ಯುಗದ ಅಂತ್ಯ; ವರುಷ: ಸಂವತ್ಸರ; ಅದ್ರಿ: ಬೆಟ್ಟ; ವೈರಿ: ರಿಪು; ದಂತಿ: ಆನೆ; ಸೀಳು: ಚೂರು, ತುಂಡು; ಕರಿ: ಆನೆ; ಧರೆ: ಭೂಮಿ; ದೊಪ್ಪನೆ: ಒಮ್ಮೆಲೆ; ಹಾಯ್ದು: ಮೇಲೆ ಬಿದ್ದು; ಖಾತಿ: ಕೋಪ, ಕ್ರೋಧ; ಉರವಣಿಸು: ಆತುರಿಸು; ಸೆಳೆದು: ಎಳೆತ, ಸೆಳೆತ; ಆಯುಧ: ಶಸ್ತ್ರ;

ಪದವಿಂಗಡಣೆ:
ಸರಳ +ಮಳೆಯಲಿ +ನೆನೆದು +ಕರಿಘಟೆ
ಯುರುಳಿದವು+ ಕಲ್ಪಾಂತ+ವರುಷದೊಳ್
ಉರುಳುವ್+ಅದ್ರಿಗಳಂತೆ+ಯೆಸೆದವು+ ವೈರಿ+ದಂತಿಗಳು
ಎರಡು +ಸೀಳಾಯ್ತ್+ಅವನ +ಕರಿ +ಧರೆ
ಗಿರದೆ+ ದೊಪ್ಪನೆ +ಹಾಯ್ದು +ಖಾತಿಯೊಳ್
ಉರವಣಿಸಿದನು +ಕ್ಷೇಮಧೂರ್ತಕ +ಸೆಳೆದೊಡ್+ಆಯುಧದಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪಾಂತವರುಷದೊಳುರುಳುವದ್ರಿಗಳಂತೆ
(೨) ದಂತಿ, ಕರಿ – ಸಮನಾರ್ಥಕ ಪದ

ಪದ್ಯ ೧೯: ಬಾಣಗಳು ಯಾರ ಮೈಯನ್ನು ನಾಟಿದವು?

ಆಗಲೀ ನಾಲಗೆಯ ಸಾಲವ
ನೀಗ ಕೈಯಲಿ ತಿದ್ದಿ ಕೊಡುವರೆ
ಹೋಗದೇ ಹೊತ್ತಿಹವೆ ಹೇಳೆನುತೆಚ್ಚ ನಾ ಭೀಮ
ಆಗಳಾವುದು ನೆಲನು ನಭ ದಿಗು
ಭಾಗವೆಲ್ಲಿಯದೆನಲು ಕಣಿಗಳ
ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ (ಕರ್ಣ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕ್ಷೇಮಧೂರ್ತಿಯು ಭೀಮನನ್ನು ಸಂಭೋದಿಸುತ್ತಾ, ಎಲವೋ ಭೀಮ ನಿನ್ನ ನಾಲಿಗೆಯಿಂದ ನುಡಿದು ನಮ್ಮ ಮೇಲೆ ಸಾಲ ಹೊರಿಸಿದೆ, ಅದನ್ನು ತೀರಿಸಲು ಕಾಲವೇನಾದರೂ ಇದ್ದರೆ ಹೇಳು ಎನ್ನುತ್ತಾ ಬಾಣಗಳನ್ನು ಬಿಡಲು ಯಾವುದು ಯಾವ ದಿಕ್ಕು ಎಂದು ತಿಳಿಯದಂತೆ ಹಾರಿಬಂದು ಆನೆಗಳ ಮೈಯ್ಯಲ್ಲಿ ನಟ್ಟವು.

ಅರ್ಥ:
ನಾಲಗೆ: ಜಿಹ್ವೆ; ಸಾಲ:ಎರವು; ಕೈ: ಕರ; ತಿದ್ದಿ: ಸರಿಪಡಿಸು; ಕೊಡು: ನೀಡು; ಹೋಗು: ತೆರಳು; ಹೊತ್ತು: ಕಾಲ; ಹೇಳು: ತಿಳಿಸು; ಎಚ್ಚು: ಬಾಣಬಿಡು; ನೆಲ: ಭೂಮಿ; ನಭ: ಆಗಸ; ದಿಗು: ದಿಕ್ಕು; ಭಾಗ: ಅಂಶ; ಕಣಿ:ನೋಟ; ತೂಗು: ಅಲ್ಲಾಡಿಸು; ತುರುಗು: ಸಂದಣಿ, ದಟ್ಟಣೆ, ಹೆಚ್ಚಾಗು; ಅರಿ: ವೈರಿ; ಭಟ: ಸೈನ್ಯ; ಕರಿಘಟೆ: ಆನೆಗಳ ಗುಂಪು; ಮೈ: ದೇಹ;

ಪದವಿಂಗಡಣೆ:
ಆಗಲೀ +ನಾಲಗೆಯ+ ಸಾಲವನ್
ಈಗ +ಕೈಯಲಿ +ತಿದ್ದಿ +ಕೊಡುವರೆ
ಹೋಗದೇ +ಹೊತ್ತಿಹವೆ +ಹೇಳೆನುತೆಚ್ಚ +ನಾ +ಭೀಮ
ಆಗಳಾವುದು +ನೆಲನು +ನಭ +ದಿಗು
ಭಾಗವೆಲ್ಲಿಯದ್+ಎನಲು +ಕಣಿಗಳ
ತೂಗಿ+ ತುರುಗಿದವ್+ಅರಿ+ಭಟನ+ ಕರಿಘಟೆಯ +ಮೈಗಳಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೋಗದೇ ಹೊತ್ತಿಹವೆ ಹೇಳೆನುತೆಚ್ಚ

ಪದ್ಯ ೧೮: ಕ್ಷೇಮಧೂರ್ತಿಯು ಭೀಮನನ್ನು ಮೇಲೆ ಹೇಗೆ ಆಕ್ರಮಣ ಮಾಡಿದನು?

ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ (ಕರ್ಣ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಇದು ಸಂತೋಷವಲ್ಲವೇ, ನಮ್ಮ ಏಳಿಗೆಯ ಕಾಲ, ಇವನು ನಮಗೆ ವಿರೋಧಿಯಾಗಿ ಬಂದವನಲ್ಲವೇ ಎನ್ನುತ್ತಾ ಭೀಮನು ಕ್ಷೇಮಧೂರ್ತಿಯ ಮೇಲೆ ಬಾಣಗಳನ್ನು ಬಿಟ್ಟನು. ಎಲವೋ ತುಚ್ಛ, ನಮ್ಮ ಆನೆಯನ್ನು ಬಡಿದು ಅದನ್ನೇರಿ ಬಂದವನೇ ಎನ್ನುತ್ತಾ ಕ್ಷೇಮಧೂರ್ತಿಯು ಭೀಮನನ್ನು ಬಾಣಗಳಿಂದ ಹೊಡೆದನು.

ಅರ್ಥ:
ವಿನೋದ:ಹಾಸ್ಯ, ತಮಾಷೆ; ಮದೀಯ: ತನ್ನ; ಅಭ್ಯುದಯ: ಏಳಿಗೆ; ಕೋಪ: ರೋಷ; ಇದಿರು: ಎದುರು; ಅವನಿವನು: ಸಿಕ್ಕವರು; ಎನುತ: ಹೇಳುತ್ತಾ; ಎಚ್ಚು: ಸವರು, ಬಾಣಬಿಡು; ಸದೆ:ಹೊಡಿ, ಬಡಿ; ಸಾರೆ: ಹತ್ತಿರ, ಸಮೀಪ, ಬಾರಿ; ಭಾರಿ: ಹೆಚ್ಚು; ಮದ: ಮತ್ತು, ಸೊಕ್ಕು; ಗಜ: ಆನೆ; ಬಡಿಹೋರಿ: ಹೋರಿಯಂತೆ ಹೊಡಿಸಿಕೊಳ್ಳುವವನು; ಹೋಗು: ತೆರಳು; ಒದರು:ಕೂಗು; ಮುಸುಕು: ಆವರಿಸು; ನಾರಾಚ: ಬಾಣ; ಸೋನೆ: ಮಳೆ;

ಪದವಿಂಗಡಣೆ:
ಇದು +ವಿನೋದವಲೇ +ಮದೀಯ
ಅಭ್ಯುದಯವ್+ಇದಲೇ +ನಮ್ಮ +ಕೋಪವನ್
ಇದಿರುಗೊಂಡವನ್+ಇವನಲೇ +ಎನುತ್+ಎಚ್ಚನಾ +ಭೀಮ
ಸದೆಗ+ ನೀ +ಸಾರೆಲವೊ +ಭಾರಿಯ
ಮದಗಜದ +ಬಡಿಹೋರಿ +ಹೋಗೆನುತ್
ಒದರಿ+ ಭೀಮನ +ಮುಸುಕಿದನು+ ನಾರಾಚ+ಸೋನೆಯಲಿ

ಅಚ್ಚರಿ:
(೧) ಇಬ್ಬರು ಬಾಣ ಬಿಟ್ಟರು ಎಂದು ಹೇಳಲು – ಎಚ್ಚನಾ ಭೀಮ, ನಾರಾಚ ಸೋನೆಯಲಿ
(೨) ಕ್ಷೇಮಧೂರ್ತಿಯು ಭೀಮನನ್ನು ಕರೆಯುವ ಬಗೆ – ಬಡಿಹೋರಿ, ಭಾರಿಯ ಮದಗಜ

ಪದ್ಯ ೧೭: ಭೀಮನು ಕ್ಷೇಮಧೂರ್ತನನ್ನು ಹೇಗೆ ಆಕ್ರಮಣ ಮಾಡಿದನು?

ಮೇಲುವಾಯ್ದಾರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ (ಕರ್ಣ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ತನ್ನ ಮೇಲೆ ಆಕ್ರಮಣ ಮಾಡಿದ ಯೋಧರ ಕಾಲನ್ನು ಹಿಡಿದೆಸೆದನು. ತಾನೂ ಒಂದು ಆನೆಯನ್ನು ಹತ್ತಿ ಗರ್ಜಿಸಿ, ಆನೆಯು ಘೀಳಿಡಲು ಅಂಕುಶದಿಂದ ಅದರ ನೆತ್ತಿಯನ್ನೊತ್ತಿ ಕ್ಷೇಮಧೂರ್ತಿಯ ಆನೆಯ ಮುಂದೆ ಅದನ್ನು ತಂದು ನಿಲ್ಲಿಸಿದನು.

ಅರ್ಥ:
ಮೇಲೆ: ಎತ್ತರದ ಜಾಗ; ಆರೋಹಕ: ಮೇಲೆ ಕುಳಿತಿರುವ; ಹಿಂಗಾಲ: ಹಿಂಬದಿಯ ಕಾಲು; ಹಿಡಿ: ಬಂಧಿಸಿ; ಈಡಾಡಿ: ಸುತ್ತಾಡಿ, ಆಚೆಯಿಂದ ಈಚೆಗೆ ಸುತ್ತಿಸು; ರಿಪು: ವೈರಿ; ಗಜ: ಆನೆ; ಜಾಲ: ಬಲೆ, ಕಪಟ; ಆನೆ: ಗಜ; ಬೊಬ್ಬೆ: ಗರ್ಜನೆ; ಘೀಳು: ಆನೆಯ ಶಬ್ದ, ಜೋರಾಗಿ ಕೂಗು; ಕರಿ: ಆನೆ; ಕೆದರು: ಹರಡು, ಚೆಲ್ಲಾಪಿಲ್ಲಿ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ನೆತ್ತಿ: ಶಿರ; ಅಗೆ: ಬಗಿ; ದಂತಿ: ಆನೆ; ತೂಳು: ಹೊಡೆ, ತಳ್ಳು; ಗಜ: ಆನೆ; ಸಮ್ಮುಖ: ಎದುರು;

ಪದವಿಂಗಡಣೆ:
ಮೇಲುವಾಯ್ದ್+ಆರೋಹಕರ+ ಹಿಂ
ಗಾಲ +ಹಿಡಿದ್+ಈಡಾಡಿ +ರಿಪುಗಜ
ಜಾಲದೊಳಗ್+ಒಂದ್+ಆನೆಯನು +ತಾನೇರಿ +ಬೊಬ್ಬಿರಿದು
ಘೀಳಿಡುವ +ಕರಿ +ಕೆದರಲ್+ಅಂಕುಶ
ವಾಳೆ +ನೆತ್ತಿಯನ್+ಅಗೆದು+ ದಂತಿಯ
ತೂಳಿಸಿದನಾ +ಕ್ಷೇಮಧೂರ್ತಿಯ +ಗಜದ+ ಸಮ್ಮುಖಕೆ

ಅಚ್ಚರಿ:
(೧) ಕರಿ, ಗಜ, ದಂತಿ, ಆನೆ – ಸಮನಾರ್ಥಕ ಪದ
(೨) ಹಿಡಿದು, ಈಡಾಡಿ, ಬೊಬ್ಬಿರಿದು, ಅಗೆದು, ತೂಳಿಸು – ಹೋರಾಟವನ್ನು ತಿಳಿಸುವ ಶಬ್ದಗಳು

ಪದ್ಯ ೧೬: ಭೀಮನು ಕ್ಷೇಮಧೂರ್ತಿಯನು ಹೇಗೆ ಹಂಗಿಸಿದನು?

ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲು ನಾರಾಚ ಸೋನೆಯಲಿ
ಅಂಘವಣಿಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ (ಕರ್ಣ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕ್ಷೇಮಧೂರ್ತಿಯು ಮುಂದಿದ್ದ ಸೈನ್ಯವನ್ನು ಭೇದಿಸಿ, ಭೀಮನ ಮೇಲೆ ಆಕ್ರಮಣ ಮಾಡುತ್ತು ಆನೆಯ ಮೇಲಿಂದ ಬಾಣಗಳ ಮಳೆಗಳನ್ನು ಸುರಿದನು. ಭೀಮನು ಅದನ್ನು ನೋಡಿ, ಹೌದು ಸಾಹಸವೆಂದರೆ ಇದೆ! ಶಿವನಿಗೂ ಇದು ಅಸಾಧ್ಯ ಭಲೇ ಭಲೇ ನಿನಗೆ ಸೋಲೇ ಇಲ್ಲ ಎಂದು ಭೀಮನು ಕ್ಷೇಮಧೂರ್ತಿಯನು ಹಂಗಿಸಿದನು.

ಅರ್ಥ:
ಮುಂಗುಡಿ: ಮುಂದೆ; ಮುರಿದು: ಸೀಳಿ; ಔಕು: ಒತ್ತು; ಅಂಘವಿಸು: ಮೇಲೆಬೀಳು; ಮತಂಗ: ಆನೆ; ಮೇಲೆ: ಎತ್ತರದಲ್ಲಿರುವ; ಬಲು: ಬಹಳ; ನಾರಾಚ: ಬಾಣ, ಸರಳು; ಸೋನೆ:ಮಳೆ, ವೃಷ್ಟಿ; ಅಂಘವಣಿ: ಬಯಕೆ, ಉದ್ದೇಶ; ಮಹಾದೇವ: ಶಿವ; ಪೂತು: ಭಲೇ, ಭೇಷ್; ಮಝ: ಭಲೆ, ಕೊಂಡಾಟದ ನುಡಿ; ಭಂಗ: ಮುರಿಯುವಿಕೆ; ಮೂದಲಿಸು: ಹೀಯಾಳಿಸು, ಹಂಗಿಸು; ಕಲಿ: ಶೂರ;

ಪದವಿಂಗಡಣೆ:
ಮುಂಗುಡಿಯ +ಮುರಿದ್+ಔಕಿ+ ಭೀಮಂಗ್
ಅಂಘವಿಸಿದನು +ಕ್ಷೇಮಧೂರ್ತಿ +ಮ
ತಂಗಜದ+ ಮೇಲೆಸುತ +ಬಲು +ನಾರಾಚ +ಸೋನೆಯಲಿ
ಅಂಘವಣಿಯಹುದೋ +ಮಹಾದೇ
ವಂಗೆ+ ನೂಕದು+ ಪೂತು +ಮಝರೆಯ
ಭಂಗನೋ +ನೀನೆನುತ+ ಮೂದಲಿಸಿದನು +ಕಲಿಭೀಮ

ಅಚ್ಚರಿ:
(೧) ಪೂತು, ಮಝರೆ, ಭಂಗನೋ – ಮೂದಲಿಸುವ ಪದಗಳು
(೨) ಮ ಕಾರದ ಸಾಲಿನ ಕೊನೆ ಪದಗಳು – ಮತಂಗಜ, ಮಹಾದೇವ, ಮಝರೆ

ಪದ್ಯ ೧೫: ಭೀಮನ ಸೈನಿಕರು ಎಷ್ಟು ಕೌರವರ ಸೈನಿಕರನ್ನು ಕೊಂದರು?

ಗರುಡನೂರವರೆರೆವರೇ ನಾ
ಗರಿಗೆ ತನಿಯನು ಭೀಮಸೇನನ
ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ
ಕರಿಘಟೆಯ ಕೆದರಿದರು ಕೇಣದ
ಧುರವ ಬಲ್ಲರೆ ಗಜದ ಕರುಳಲಿ
ಕರುಳ ತೊಡಕಲು ಬಿದ್ದು ದೈಸಾವಿರ ಮಹಾರಥರು (ಕರ್ಣ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಗರುಡಪುರದಲ್ಲಿರುವವರು ಹಾವಿಗೆ ಹಾಲನೆರೆಯುವರೇ? ಭೀಮನ ವೀರಸೈನಿಕರು ವಿರೋಧ ಬಲಕ್ಕೆ ಹೆದರುವರೆ? ಅವರು ಯಾವ ಭಯವೂ ಇಲ್ಲದೆ ಯೋಧರ ಕರುಳುಗಳು ಆನೆಯ ಕರುಳುಗಳು ಒಂದಕ್ಕೊಂದು ತೊಡಕುವಂತೆ ದಾಳಿಮಾಡಿದರು, ಸಾವಿರ ಕೌರವ ಮಹಾರಥರು ಮಡಿದರು.

ಅರ್ಥ:
ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ; ಊರು: ಪುರ; ಎರೆ: ಹಾಕು, ಸುರಿ; ನಾಗರ: ಹಾವ್; ತನಿ:ಸವಿಯಾದುದು, ತೃಪ್ತಿಪಡಿಸುವಿಕೆ; ಬಿರುದು: ಗೌರವ ಸೂಚಕವಾದ ಹೆಸರು; ಓಲೆಯಕಾರ: ಸೇವಕ; ಅಂಜು: ಹೆದರು; ಮಾರ್ಬಲ: ಶತ್ರು ಸೈನ್ಯ; ಕರಿಘಟೆ: ಆನೆಯ ಗುಂಪು; ಕೆದರು: ಹರಡು; ಕೇಣ: ಹೊಟ್ಟೆಕಿಚ್ಚು, ಮತ್ಸರ; ಧುರ: ಯುದ್ಧ, ಕಾಳಗ; ಬಲ್ಲರು: ತಿಳಿದವರು; ಗಜ: ಆನೆ; ಕರುಳು: ಹೊಟ್ಟೆಯ ಅಂಗ; ತೊಡಕು: ಸಿಕ್ಕು, ಗೋಜು; ಬಿದ್ದು: ಕೆಳಕ್ಕೆ ಜಾರು; ಸಾವಿರ: ಸಹಸ್ರ; ಮಹಾರಥ: ವೀರರು;

ಪದವಿಂಗಡಣೆ:
ಗರುಡನ್+ಊರ್+ಅವರ್+ಎರೆವರೇ+ ನಾ
ಗರಿಗೆ+ ತನಿಯನು +ಭೀಮಸೇನನ
ಬಿರುದಿನ್+ಓಲೆಯಕಾರರ್+ ಏನ್+ಅಂಜುವರೆ +ಮಾರ್ಬಲಕೆ
ಕರಿಘಟೆಯ +ಕೆದರಿದರು +ಕೇಣದ
ಧುರವ +ಬಲ್ಲರೆ +ಗಜದ +ಕರುಳಲಿ
ಕರುಳ +ತೊಡಕಲು +ಬಿದ್ದುದೈ +ಸಾವಿರ +ಮಹಾರಥರು

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರಿಘಟೆಯ ಕೆದರಿದರು ಕೇಣದ
(೨) ಕರಿ, ಗಜ – ಸಮನಾರ್ಥಕ ಪದ