ಪದ್ಯ ೯: ಸಂಜಯನು ಧೃತರಾಷ್ಟ್ರನಿಗೆ ಯಾವ ಸಲಹೆ ನೀಡಿದನು?

ಎರಡು ಗಲ್ಲದ ನಯನವಾರಿಯ
ಹರಿಕುಣಿಯ ನಿಲಿಸಿದನು ಸಂಜಯ
ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ
ಅರಸ ಹದುಳಿಸು ನಿನ್ನ ಸೊಸೆಯರ
ಕರೆದು ಸಂತೈಸಕಟ ಹಸ್ತಿನ
ಪುರದ ಗಾವಳಿ ಗಜಬಜಕೆ ಡಂಗುರವ ಹೊಯ್ಸೆಂದ (ಕರ್ಣ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದುಃಖತಪ್ತನಾಗಿರಲು ಗಲ್ಲದ ಮೇಲೆ ಅವನೆರಡು ಕಣ್ಣುಗಳಿಂದ ಕಣ್ಣೀರು ಹರಿಯುತ್ತಿರಲು ಸಂಜಯನು ಅದನ್ನು ಒರಸಿ ಆತನನ್ನು ಸಮಾಧಾನ ಪಡಿಸಿ ಮಂಚದ ಮೇಲೆ ಕುಳ್ಳಿಸಿಸಿ ಒರಗಲು ದಿಂಬನ್ನಿಟ್ಟನು. ರಾಜಾ ಎಚ್ಚೆತ್ತುಕೋ, ನಿನ್ನ ಸೊಸೆಯರನ್ನು ಕರೆದು ಸಮಾಧಾನ ಪಡಿಸು, ಊರಿನಲ್ಲಿ ಡಂಗುರವನ್ನು ಹೊರಡಿಸಿ ಗುಂಪು ಗದ್ದಲವನ್ನು ನಿಲ್ಲಿಸು ಎಂದು ತಿಳಿಸಿದನು.

ಅರ್ಥ:
ಎರಡು: ದ್ವಂದ್ವ; ಗಲ್ಲ: ಕದಪು, ಕೆನ್ನೆ; ನಯನ: ಕಣ್ಣು; ವಾರಿ: ನೀರು; ಹರಿಕುಣಿ: ಕಾಲುವೆ; ನಿಲಿಸು: ತಡೆ; ಅರಸ: ರಾಜ; ಕುಳ್ಳಿರಿ: ಆಸೀನರಾಗು; ಬೆನ್ನು: ಹಿಂಬಾಗ; ಚಾಚಿ: ಹರಡು; ಮಲಗ: ದಿಂಬು; ಹದುಳಿಸು: ಸಮಾಧಾನ ಗೊಳ್ಳು; ಸೊಸೆ: ಮಗನ ಹೆಂಡತಿ; ಕರೆ: ಬರೆಮಾಡಿ; ಸಂತೈಸು: ಸಾಂತ್ವಾನ; ಅಕಟ: ಅಯ್ಯೋ; ಆವಳಿ: ಸಾಲು; ಗಜಬಜ: ಗೊಂದಲ; ಡಂಗುರ: ಪ್ರಕಟಣೆ; ಹೊಯ್ಸು: ಹೊರಡಿಸು; ಗಾವಳಿ: ಘೋಷಣೆ, ರಂಪ;

ಪದವಿಂಗಡಣೆ:
ಎರಡು +ಗಲ್ಲದ +ನಯನ+ವಾರಿಯ
ಹರಿಕುಣಿಯ +ನಿಲಿಸಿದನು +ಸಂಜಯನ್
ಅರಸನನು +ಕುಳ್ಳಿರಿಸಿ +ಬೆನ್ನಿಗೆ +ಚಾಚಿದನು +ಮಲಗ
ಅರಸ +ಹದುಳಿಸು +ನಿನ್ನ +ಸೊಸೆಯರ
ಕರೆದು +ಸಂತೈಸ್+ಅಕಟ +ಹಸ್ತಿನ
ಪುರದ +ಗಾವಳಿ+ ಗಜಬಜಕೆ+ ಡಂಗುರವ +ಹೊಯ್ಸೆಂದ

ಅಚ್ಚರಿ:
(೧) ಕಣ್ಣೀರಿನ ವರ್ಣನೆ: ಎರಡು ಗಲ್ಲದ ನಯನವಾರಿಯ ಹರಿಕುಣಿಯ
(೨) ಸಂತೈಸುವ ಪರಿ – ಅರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ

ಪದ್ಯ ೮: ಧೃತರಾಷ್ಟ್ರನನ್ನು ಮಂತ್ರಿಗಳು ಯಾಕೆ ಟೀಕಿಸಿದರು?

ಸೂರೆ ಹೋದುದು ನಗರಿ ಖಳರಿಗೆ
ಮಾರಿದರು ಪಟ್ಟಣವನಕಟಾ
ಕಾರುಮದ್ದಿಗೆ ಹೋಹುದೇ ಕೈಮಸಕವವನಿಪನ
ನೂರುಮಕ್ಕಳನಿಕ್ಕಿ ಸಾಧಿಸ
ಲಾರನೇ ಜಯಸಿರಿಯನೆಂದುರೆ
ಮೀರಿ ನುಡಿದುದು ಮಂತ್ರಿಗಳು ಧೃತರಾಷ್ಟ್ರನಿದಿರಿನಲಿ (ಕರ್ಣ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಹಸ್ತಿನಾಪುರವನ್ನು ಲೂಟಿಕೋರರು ಕೊಳ್ಳೆ ಹೊಡೆದರು. ದುಷ್ಟರಿಗೆ ಊರನ್ನು ಮಾರಿದ ಹಾಗಾಯಿತು. ಕೈಮಸಕವಾದವನಿಗೆ ವಾಂತಿಗೆ ಜೌಷದಿಕೊಟ್ಟರೆ ಗುಣವಾದೀತೇ? ನೂರು ಮಕ್ಕಳನ್ನು ಕಳೆದುಕೊಂಡವನು ಜಯವನ್ನು ಸಾಧಿಸಲಾರನೇ? ಎಂದು ಮಂತ್ರಿಗಳು ಧೃತರಾಷ್ಟ್ರನನ್ನು ಕುರಿತು ಟೀಕಿಸಲಾರಂಭಿಸಿದರು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ನಗರಿ: ಊರು; ಖಳರು: ಕಳ್ಳರು, ದುಷ್ಟರು; ಮಾರು: ವಿಕ್ರಯಿಸು; ಪಟ್ಟಣ: ಊರು; ಅಕಟಾ: ಅಯ್ಯೋ; ಕಾರು: ಕೆಸರು; ಕೈಮಸಕ: ಇಕ್ಕುಮದ್ದು, ಮಾಟ; ಹೋಹುದು: ತೆರಳು; ನೂರು: ಶತ; ಮಕ್ಕಳು: ಕುಮಾರರು; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಜಯ: ಗೆಲುವು; ಸಿರಿ: ಐಶ್ವರ್ಯ; ಮೀರಿ: ಹೆಚ್ಚು; ನುಡಿ: ಮಾತು; ಮಂತ್ರಿ: ಸಚಿವ; ಇದಿರು: ಎದುರು; ಉರೆ: ಅಧಿಕವಾಗಿ;

ಪದವಿಂಗಡಣೆ:
ಸೂರೆ +ಹೋದುದು +ನಗರಿ +ಖಳರಿಗೆ
ಮಾರಿದರು +ಪಟ್ಟಣವನ್+ಅಕಟಾ
ಕಾರುಮದ್ದಿಗೆ +ಹೋಹುದೇ +ಕೈಮಸಕವ್+ಅವನಿಪನ
ನೂರುಮಕ್ಕಳನ್+ಇಕ್ಕಿ +ಸಾಧಿಸ
ಲಾರನೇ +ಜಯಸಿರಿಯನ್+ಎಂದ್+ಉರೆ
ಮೀರಿ +ನುಡಿದುದು +ಮಂತ್ರಿಗಳು+ ಧೃತರಾಷ್ಟ್ರನ್+ಇದಿರಿನಲಿ

ಅಚ್ಚರಿ:
(೧) ಹಸ್ತಿನಾಪುರದ ಸ್ಥಿತಿ- ಸೂರೆ ಹೋದುದು ನಗರಿ, ಖಳರಿಗೆ ಮಾರಿದರು ಪಟ್ಟಣವ
(೨) ಉಪಮಾನದ ಪ್ರಯೋಗ – ಕಾರುಮದ್ದಿಗೆ ಹೋಹುದೇ ಕೈಮಸಕವ

ಪದ್ಯ ೭: ಹಸ್ತಿನಾಪುರದಲ್ಲಿ ಯಾರ ಆಟ ಜೋರಾಗಿತ್ತು?

ನೆರೆದುದಲ್ಲಿಯದಲ್ಲಿ ಸೂರೆಗೆ
ಹರಿದುದಲ್ಲಿಯದಲ್ಲಿ ಮನ ಮ
ತ್ಸರದ ಜಗಳಕೆ ಸೂಳುಬಂಟರು ಹೊಯ್ದರೊಳಗೊಳಗೆ
ಅರಮನೆಯಲಾ ಬೊಬ್ಬೆ ಹಸ್ತಿನ
ಪುರದಲೀ ಬೊಬ್ಬಾಟವಿನ್ನುಳಿ
ದರಸುಗಳ ಪಾಡಾವುದೆಂದನು ಮುನಿ ನೃಪಾಲಂಗೆ (ಕರ್ಣ ಪರ್ವ, ೧ ಸಂಧಿ, ೭ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯ ರಾಜನಿಗೆ ರಾಜಧಾನಿ ಹಸ್ತಿನಾಪುರದಲ್ಲಾದ ಬದಲಾವಣೆಯನ್ನು ವಿವರಿಸುತ್ತಾ, ಕೊಳ್ಳೆಹೊಡೆಯಲು ಜರನು ಅಲ್ಲಲ್ಲೇ ಗುಂಪಾಗಿ ಸೇರಿದರು. ಹಿಂದಿನ ಯಾವುದೋ ಕಾರಣ ತೆಗೆದು ಜಗಳವಾಡಲು ಶುರುಮಾಡಿದರು. ಭಂಟರು ಮತ್ತೆ ಹೊಟ್ಟೆಕಿಚ್ಚಿನಿಂದ ಹೊಡೆದಾಡಿದರು. ಧೃತರಾಷ್ಟ್ರನ ಮೂರ್ಛೆಯಿಂದ ಹಸ್ತಿನಾಪುರದಲ್ಲಿ ಈ ಗತಿಯಾದರೆ (ಹೇಳುವವರು ಕೇಳುವವರು ಯಾರು ಇಲ್ಲದ ಸ್ಥಿತಿ), ಉಳಿದ ರಾಜರ ಪಾಡೇನು ಎಂದು ವೈಶಂಪಾಯನರು ಕೇಳಿದರು.

ಅರ್ಥ:
ನೆರೆ: ಪಕ್ಕ, ಪಾರ್ಶ್ವ, ಸಮೀಪ; ಸೂರೆ: ಕೊಳ್ಳೆ, ಲೂಟಿ; ಹರಿ: ದಾಳಿ, ಮುತ್ತಿಗೆ, ರಭಸ; ಮನ: ಮನಸ್ಸು; ಮತ್ಸರ: ಹೊಟ್ಟೆಕಿಚ್ಚು; ಜಗಳ: ಕಾದಾಟ; ಸೂಳು:ಆರ್ಭಟ, ಬೊಬ್ಬೆ; ಬಂಟರು: ಕಾವಲುಗಾರ, ಸೇವಕ; ಹೊಯ್ದು: ಹೊಡೆದಾಡು; ಅರಮನೆ: ರಾಜರ ವಾಸಸ್ಥಾನ; ಬೊಬ್ಬೆ: ಆರ್ಭಟ; ಪುರ: ಊರು; ಉಳಿದ: ಮಿಕ್ಕ; ಅರಸು: ರಾಜ; ಪಾಡು: ಸ್ಥಿತಿ; ಮುನಿ: ಋಷಿ; ನೃಪ: ರಾಜ;

ಪದವಿಂಗಡಣೆ:
ನೆರೆದುದ್+ಅಲ್ಲಿಯದ್+ಅಲ್ಲಿ +ಸೂರೆಗೆ
ಹರಿದುದ್+ಅಲ್ಲಿಯದಲ್ಲಿ +ಮನ +ಮ
ತ್ಸರದ +ಜಗಳಕೆ +ಸೂಳು+ಬಂಟರು +ಹೊಯ್ದರ್+ಒಳಗೊಳಗೆ
ಅರಮನೆಯಲಾ+ ಬೊಬ್ಬೆ +ಹಸ್ತಿನ
ಪುರದಲೀ+ ಬೊಬ್ಬಾಟವ್+ಇನ್ನುಳಿದ್
ಅರಸುಗಳ +ಪಾಡಾವುದ್+ಎಂದನು +ಮುನಿ +ನೃಪಾಲಂಗೆ

ಅಚ್ಚರಿ:
(೧) ನೆರೆದು, ಹರಿದು – ಪ್ರಾಸ ಪದ
(೨) ಅರಮೆನೆಯಲಾ ಬೊಬ್ಬೆ, ಹಸ್ತಿನಪುರದಲೀ ಬೊಬ್ಬಾಟ – ಪದ ಪ್ರಯೋಗ

ಪದ್ಯ ೬: ಹಸ್ತಿನಾಪುರದ ಸ್ಥಿತಿ ಏನಾಯಿತು?

ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನ ಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನಕವಾಟತತಿ ಗಾಳಾಯ್ತು ಗಜನಗರ (ಕರ್ಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಸುದ್ದಿ ತಿಳಿಯುತ್ತಿದ್ದಂತೆ ರಾಣೀವಾಸದಲ್ಲಾದ ಅವ್ಯವಸ್ಥೆಯನ್ನು ನಾನು ಹೇಗೆ ಹೇಳಲಿ ಜನಮೇಜಯ. ಕರ್ಣನೇ ಮೊದಲಾದವರ ಪತ್ನಿಯೂ ಜೋರಾಗಿ ಅಳಲು ಪ್ರಾರಂಭಿಸಿದರು. ಈ ಅವ್ಯವಸ್ಥೆಯ ನಡುವೆ ಹಸ್ತಿನಾವತಿಯ ಊರೊಳಗಿನ ಕೊಳ್ಳೆಹೊಡೆಯುವವರು ಮುಂದಾದರು. ಕೋಟೆ ಕಾವಲಿನವರು ಗುಜುಗುಜು ಎಂದು ಮಾತಾಡಲು, ಮನೆ ಬಾಗಿಲುಗಲು ಮುಚ್ಚಿದವು, ಹಸ್ತಿನಾವತಿ ಕೆಟ್ಟು ಹೋಯಿತು.

ಅರ್ಥ:
ರವ: ಶಬ್ದ; ರವಕುಳ: ಅವ್ಯವಸ್ಥೆ, ಆಕ್ರಂದನ; ಹೇಳು: ತಿಳಿಸು; ಅವನಿ: ಭೂಮಿ; ಅವನಿಪತಿ: ರಾಜ; ಮೊದಲಾದ: ಮುಂತಾದ; ರಾಣಿ: ಅರಸಿ; ರಾಣೀವಾಸ: ಅಂತಃಪುರ; ಬಹಳ: ತುಂಬ; ಆಕ್ರಂದನ: ಅಳುವ ಧ್ವನಿ; ಧ್ವನಿ: ಶಬ್ದ; ಕವಿದು: ಆವರಿಸು; ಸೂರೆ: ಕೊಳ್ಳೆ, ಲೂಟಿ; ಒಳ: ಆಂತರ್ಯ; ಕೋಟೆ: ದುರ್ಗ; ತವಕಿಗ: ಉತ್ಸಾಹಿ, ಆತುರಗಾರ; ಗುಜುಗುಜು: ಬಿಸುಗುನುಡಿ; ಬಿಗಿ: ಬಂಧನ; ಭವನ: ಅರಮನೆ; ಕವಾಟ: ಬಾಗಿಲು; ಗಾಳ: ಕೊಕ್ಕೆ, ಕುತಂತ್ರ; ಗಜ: ಆನೆ; ನಗರ: ಊರು; ಗಜನಗರ: ಹಸ್ತಿನಾಪುರ; ತತಿ: ಗುಂಪು, ಸಮೂಹ;

ಪದವಿಂಗಡಣೆ:
ರವಕುಳವ +ನಾನೇನ +ಹೇಳುವೆನ್
ಅವನಿಪತಿಯಾ +ಕರ್ಣ +ಮೊದಲಾ
ದವರ+ ರಾಣೀವಾಸ +ಬಹಳ+ಆಕ್ರಂದನ +ಧ್ವನಿಯ
ಕವಿದುದ್+ಒಳಸೂರೆಗರು+ ಕೋಟೆಯ
ತವಕಿಗರು+ ಗುಜುಗುಜಿಸೆ +ಬಿಗಿದವು
ಭವನ+ ಭವನ+ಕವಾಟ+ತತಿ +ಗಾಳಾಯ್ತು +ಗಜನಗರ

ಅಚ್ಚರಿ:
(೧) ರಾಜನ ಅಳಿವಿನ ಬಳಿಕ ಯಾವ ರೀತಿ ಅರಾಜಕತೆ ಶುರುವಾಗುತ್ತದೆ ಎಂದು ತಿಳಿಸುವ ಪದ್ಯ
(೨) ಬ ಕಾರದ ತ್ರಿವಳಿ ಪದ – ಬಿಗಿದವು ಭವನ ಭವನಕವಾಟತತಿ