ಪದ್ಯ ೪೩: ಯಾವ ಸನ್ನೆಯಿಂದ ಸೈನ್ಯದ ಶಬ್ದವು ಕಡಿಮೆಯಾಯಿತು?

ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಲಗ್ಗೆಗಳಡಗಿದವು ಕಿರು
ಗಾಳೆ ಸನ್ನೆಯಲೂದಿದವು ಮಾಣಿಸಿದವಬ್ಬರವ
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಗಶ್ರಮದ ಸೇನಾ
ಜಾಲ ಸೈವೆರಗಾಗಿ ನಿಂದುದು ಕಳನ ಮಧ್ಯದಲಿ (ಉದ್ಯೋಗ ಪರ್ವ, ೧೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ಜೋರಾಗಿ ಶಬ್ದಮಾಡುತ್ತಾ ಪಯಣ ಮಾಡಿ ಬಂದಿದ್ದ ಸೈನ್ಯವ್ಯ್ ಕಿರುಗಹಳೆಗಳು, ನಿಸ್ಸಾಳಗಳು ಮೆಲ್ಲನೆ ಸದ್ದುಮಾಡಲು ಸೈನ್ಯದ ಅಬ್ಬರವು ನಿಂತಿತು. ಕೇಳು ಜನಮೇಜಯ, ದೂರ ಪ್ರಯಾಣ ಮಾಡಿ ದಣಿದ ಸೈನ್ಯವು ಯುದ್ಧಭೂಮಿಯಲ್ಲಿ ತಳಮಳಿಸುತ್ತಾ ನಿಂತಿತು.

ಅರ್ಥ:
ಸೂಳು: ಹೆಚ್ಚಳ, ಆಧಿಕ್ಯ; ಸನ್ನೆ: ಗುರುತು, ಸಂಕೇತ; ನಿಸ್ಸಾಳ: ಚರ್ಮವಾದ್ಯ; ಲಗ್ಗೆ: ಮುತ್ತಿಗೆ, ಆಕ್ರಮಣ; ಅಡಗು: ಅವಿತುಕೊಳ್ಳು; ಕಿರು: ಚಿಕ್ಕ; ಗಾಳು: ಒರಟಾದ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಊದು: ಉರುಬು,ಧ್ವನಿ ಮಾಡು; ಮಾಣಿಸು: ನಿಲ್ಲಿಸು; ಅಬ್ಬರ: ಶಬ್ದ; ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರಿ: ಭೂಮಿ; ಮಾರ್ಗ: ದಾರಿ; ಶ್ರಮ: ಆಯಾಸ; ಸೇನೆ: ಸೈನ್ಯ; ಜಾಲ: ಹರಡು, ಹಬ್ಬುಗೆ; ಬೆರಗು: ವಿಸ್ಮಯ, ಸೋಜಿಗ; ಕಳ: ರಣರಂಗ; ಮಧ್ಯ: ನಡುವೆ;

ಪದವಿಂಗಡಣೆ:
ಸೂಳವಿಸಿದವು +ಸನ್ನೆಯಲಿ +ನಿ
ಸ್ಸಾಳ +ಲಗ್ಗೆಗಳ್+ಅಡಗಿದವು+ ಕಿರು
ಗಾಳೆ +ಸನ್ನೆಯಲೂದಿದವು ಮಾಣಿಸಿದವಬ್ಬರವ
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಗಶ್ರಮದ ಸೇನಾ
ಜಾಲ ಸೈವೆರಗಾಗಿ ನಿಂದುದು ಕಳನ ಮಧ್ಯದಲಿ

ಅಚ್ಚರಿ:
(೧) ಸನ್ನೆ ತೋರಿದ ವಾದ್ಯಗಳು – ನಿಸ್ಸಾಳ, ಕಿರುಗಹಳೆ
(೨) ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ ಬರುತ್ತಿದ್ದ ವಾಕ್ಯ ಕೇಳು ಜನಮೇಜಯ ಧರಿತ್ರೀಪಾಲ ಇಲ್ಲಿ ೪ ಸಾಲಿನಲ್ಲಿ ಬಂದಿರುವುದು; ಕಥೆಯನ್ನು ಜನಮೇಜಯನಿಗೆ ಹೇಳುತ್ತಿರುವುದೆಂದು ಕುಮಾರವ್ಯಾಸ ಆಗಾಗ ಜ್ಞಾಪಿಸುತ್ತಾರೆ.

ಪದ್ಯ ೪೨: ಕುರುಕ್ಷೇತ್ರದಲ್ಲಿ ಸೈನ್ಯವು ಯಾವ ದಿಕ್ಕಿಗೆ ಬೀಡು ಬಿಟ್ಟಿತು?

ಅರರೆ ನಡೆದುದು ರಾಯ ಕಟಕದ
ತೆರಳಿಕೆಯ ಸೌರಂಭವಿಳೆಗ
ಚ್ಚರಿಯ ಬೀರಿತು ವರಕುರುಕ್ಷೇತ್ರಕ್ಕೆ ಗಮಿಸಿದರು
ಅರಿವಿಜಯಿಗಳು ನೆಲನ ಗೆಲಿದರು
ಹರಿಯ ನೇಮದಲೆಡೆಯರಿದು ಬಲ
ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ (ಉದ್ಯೋಗ ಪರ್ವ, ೧೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರೆ ಈ ಸೈನ್ಯದ ಸಂಭ್ರಮ, ಸಜ್ಜುಗಳು, ಉತ್ಸಾಹದ ನಡೆ, ಹೊಸದೆಂದು ಜಗತ್ತು ಆಶ್ಚರ್ಯ ಪಟ್ಟಿತು. ಪಾಂಡವ ಸೈನ್ಯವು ಕುರುಕ್ಷೇತ್ರಕ್ಕೆ ಬಂದರು. ಶತ್ರುಗಳನ್ನು ಗೆದ್ದವರು ಭೂಮಿಯನ್ನು ಗೆದ್ದರು. ಶ್ರೀಕೃಷ್ಣನ ಅಪ್ಪಣೆಯಂತೆ ಕುರುಕ್ಷೇತ್ರದ ಪಶ್ಚಿಮ ಭಾಗದಲ್ಲಿ ಸೈನ್ಯ ಸಾಗರವು ಬೀಡು ಬಿಟ್ಟಿತು.

ಅರ್ಥ:
ನಡೆ: ಚಲಿಸು; ಅರರೆ: ಆಶ್ಚರ್ಯವನ್ನು ಸೂಚಿಸುವ ಪದ; ರಾಯ: ರಾಜ; ಕಟಕ:ಸೈನ್ಯ, ಗುಂಪು; ತೆರಳು: ಹೋಗು, ನಡೆ; ಸೌರಂಭ:ಸಂಭ್ರಮ, ಸಡಗರ; ಇಳೆ: ಭೂಮಿ; ಅಚ್ಚರಿ: ಆಶ್ಚರ್ಯ; ಬೀರು: ತೋರು; ವರ: ಶ್ರೇಷ್ಠ; ಗಮಿಸು: ಹೊರಡು; ಅರಿ: ವೈರಿ; ವಿಜಯ: ಗೆಲುವು; ನೆಲ: ಭೂಮಿ; ಗೆಲಿದು: ಗೆದ್ದು; ಹರಿ: ಕೃಷ್ಣ; ನೇಮ: ಆಜ್ಞೆ; ಎಡೆ: ಪ್ರದೇಶ, ಜಾಗ; ಅರಿ: ತಿಳಿ; ಬಲ: ಸೈನ್ಯ; ಶರಧಿ: ಸಾಗರ; ಬಿಟ್ಟುದು: ನೆಲೆಸು; ಕಳ: ರಣರಂಗ; ಪಶ್ಚಿಮ: ವಾಮ; ದೆಸೆ: ದಿಕ್ಕು; ಪಸರು: ಹಬ್ಬು, ಹರಡು;

ಪದವಿಂಗಡಣೆ:
ಅರರೆ +ನಡೆದುದು +ರಾಯ +ಕಟಕದ
ತೆರಳಿಕೆಯ +ಸೌರಂಭವ್+ಇಳೆಗ್
ಅಚ್ಚರಿಯ +ಬೀರಿತು +ವರ+ಕುರುಕ್ಷೇತ್ರಕ್ಕೆ +ಗಮಿಸಿದರು
ಅರಿವಿಜಯಿಗಳು +ನೆಲನ +ಗೆಲಿದರು
ಹರಿಯ +ನೇಮದಲ್+ಎಡೆಯರಿದು +ಬಲ
ಶರಧಿ +ಬಿಟ್ಟುದು +ಕಳನ +ಪಶ್ಚಿಮ +ದೆಸೆಯ +ಪಸರದಲಿ

ಅಚ್ಚರಿ:
(೧) ಇಳೆ, ನೆಲ, ಎಡೆ – ಸಾಮ್ಯ ಪದಗಳು;

ಪದ್ಯ ೪೧: ಸೇನೆಯ ಪಯಣವು ಹೇಗೆ ಸಾಗಿತು?

ಗಜರ ಬೃಂಹಿತರವದ ವಾಜಿ
ವ್ರಜದ ಹೇಷಾಧ್ವನಿಯ ತೇರಿನ
ವಿಜಯ ಚೀತ್ಕೃತಿರವದ ಬಿಲು ಟಂಕಾರ ಕಳಕಳದ
ಗಜಬಜಿಕೆ ಗಾಢಿಸಿತು ಬೊಬ್ಬೆಯ
ಗಜರುಗಳ ಗರ್ಜನೆಗೆ ನಡುಗಿತು
ತ್ರಿಜಗವೆನಲೈದಿದರು ಪಯಣದ ಮೇಲೆ ಪಯಣದಲಿ (ಉದ್ಯೋಗ ಪರ್ವ, ೧೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಆನೆಗಳ ಘೀಂಕಾರ ಧ್ವನಿ, ಕುದುರೆಗಳ ಹೇಷಾರದ ಕೂಗು,ರಥಗಳ ವಿಜಯದ ಚೀತ್ಕಾರ, ಬಿಲ್ಲುಗಳ ಟಂಕಧ್ವನಿ, ಅತಿಶಯವಾಗಿತ್ತು. ಕೇಕೆ ಕೂಗುಗಳ ಸದ್ದಿಗೆ ಮೂರುಲೋಕಗಳು ನಡುಗಿದವು ಎಂಬಂತೆ ಪಯಣದ ಮೇಲೆ ಪಯಣ ಮಾಡುತ್ತಾ ಸೈನ್ಯವು ಮುಂದುವರೆಯಿತು.

ಅರ್ಥ:
ಗಜ: ಆನೆ; ಬೃಂಹಿತ:ಘೀಂಕಾರ; ರವ: ಧ್ವನಿ; ವಾಜಿ: ಕುದುರೆ; ವ್ರಜ: ಗುಂಪು; ಹೇಷ: ; ಧ್ವನಿ: ಶಬ್ದ; ತೇರು: ರಥ; ವಿಜಯ: ಗೆಲುವು, ಜಯ; ಬಿಲು: ಬಿಲ್ಲು, ಚಾಪ; ಗಾಢ: ಹೆಚ್ಚಳ, ಅತಿಶಯ; ಬೊಬ್ಬೆ: ಅಬ್ಬರ, ಆರ್ಭಟ; ಗರ್ಜನೆ: ಜೋರಾದ ಶಬ್ದ; ನಡುಗು: ಅಲುಗು; ತ್ರಿಜಗ: ಮೂರುಲೋಕ; ಐದು: ಸೇರು, ಹೋಗು; ಪಯಣ: ಪ್ರಯಾಣ; ಗಜಬಜ: ಗಲಾಟೆ; ಕಳಕಳ: ಉದ್ವಿಗ್ನತೆ;

ಪದವಿಂಗಡಣೆ:
ಗಜರ+ ಬೃಂಹಿತ+ರವದ+ ವಾಜಿ
ವ್ರಜದ+ ಹೇಷಾಧ್ವನಿಯ +ತೇರಿನ
ವಿಜಯ+ ಚೀತ್ಕೃತಿ+ರವದ +ಬಿಲು +ಟಂಕಾರ +ಕಳಕಳದ
ಗಜಬಜಿಕೆ+ ಗಾಢಿಸಿತು +ಬೊಬ್ಬೆಯ
ಗಜರುಗಳ+ ಗರ್ಜನೆಗೆ+ ನಡುಗಿತು
ತ್ರಿಜಗವೆನಲ್+ಐದಿದರು +ಪಯಣದ+ ಮೇಲೆ +ಪಯಣದಲಿ

ಅಚ್ಚರಿ:
(೧) ಶಬ್ದಗಳನ್ನು ಸೂಚಿಸುವ ಪದ – ಬೃಂಹಿತ, ಹೇಷ, ಟಂಕಾರ, ಚೀತ್ಕೃತಿ, ಬೊಬ್ಬೆ, ಗರ್ಜನೆ
(೨) ಕಳಕಳ, ಗಜಬಜಿ – ಪದಗಳ ಪ್ರಯೋಗ