ಪದ್ಯ ೪೭: ಯಾವ ಆರುಜನರನ್ನು ದೂರವಿಡಬೇಕು?

ಜಾರನನು ಕಂಟಕನ ಹಿಸುಣನ
ಚೋರನನು ಷಂಡನನು ಸಮಯ ವಿ
ಕಾರ ಭೇದಿಯ ನಿಂತರುವರನು ಕಂಡು ಮನ್ನಿಸದೆ
ದೂರದೊಳು ವರ್ಜಿಸುವುದು ಬಹಿ
ಷ್ಕಾರಿಗಳು ಸ್ವರಕ್ಕಿವರುಗಳು
ಸಾರವಿದು ಸತ್ಪುರುಷರಭಿಮತವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕಾಮುಕ, ಶತ್ರು, ಚಾಡಿಕೋರ, ಸಮಯ ಬಂದಾಗ ಕೇಡುಬಗೆಯುವವ, ಕಳ್ಳ, ಷಂಡ ಈ ಆರು ಬಗೆಯ ಜನರನ್ನು ದೂರದಲ್ಲೇ ಇಡಬೇಕು ಮತ್ತು ಬಹಿಷ್ಕರಿಸಬೇಕು ಎಂಬುದು ಸತ್ಪುರುಷರ ಅಭಿಪ್ರಾಯವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಾರ: ವ್ಯಭಿಚಾರಿ, ಹಾದರಿಗ, ಕಾಮುಕ; ಕಂಟಕ: ವಿಪತ್ತು; ಹಿಸುಣ:ಚಾಡಿ, ಕುತ್ಸಿತ; ಚೋರ: ಕಳ್ಳ; ಷಂಡ: ನಪುಂಸಕ, ಕೊಜ್ಜೆ, ಹೇಡಿ, ದುರ್ಬಲ; ಸಮಯ: ಕಾಲ; ವಿಕಾರ: ಬದಲಾವಣೆ, ಮಾರ್ಪಾಟು, ಮನಸ್ಸಿನ ವಿಕೃತಿ; ಭೇದಿ: ಒಡೆಯುವವ, ಸೀಳುವವ; ಅರುವರ: ಆರುರೀತಿಯ; ಕಂಡು: ನೋಡಿ; ಮನ್ನಿಸು: ಅಂಗೀಕರಿಸು, ದಯಪಾಲಿಸು; ದೂರ: ಬಹಳ ಅಂತರ; ವರ್ಜಿಸು:ಬಿಡು, ತ್ಯಜಿಸು; ಬಹಿಷ್ಕಾರ: ಹೊರಹಾಕುವಿಕೆ; ಸರ್ವ: ಎಲ್ಲಾ; ಸಾರ: ರಸ; ಸತ್ಪುರುಷ: ಒಳ್ಳೆಯ ಜನ; ಮುನಿ: ಋಷಿ;

ಪದವಿಂಗಡಣೆ:
ಜಾರನನು +ಕಂಟಕನ +ಹಿಸುಣನ
ಚೋರನನು +ಷಂಡನನು +ಸಮಯ +ವಿ
ಕಾರ +ಭೇದಿಯ +ನಿಂತರುವರನು +ಕಂಡು +ಮನ್ನಿಸದೆ
ದೂರದೊಳು +ವರ್ಜಿಸುವುದು +ಬಹಿ
ಷ್ಕಾರಿಗಳು +ಸ್ವರಕ್ಕ್+ಇವರುಗಳು
ಸಾರವಿದು+ ಸತ್ಪುರುಷರ್+ಅಭಿಮತವೆಂದನಾ +ಮುನಿಪ

ಅಚ್ಚರಿ:
(೧) ೬ ರೀತಿಯ ಜನರನ್ನು ವಿವರಿಸುವ ಪದ್ಯ – ಜಾರ, ಕಂಟಕ, ಹಿಸುಣ, ಚೋರ, ಷಂಡ, ವಿಕಾರಿ

ಪದ್ಯ ೪೬: ಯಾರಿಗೆ ಯಾರು ಆಧಾರ?

ಸತಿಯರಿಗೆ ಗತಿ ಯಾವುದೈ ನಿಜ
ಪತಿಯದಲ್ಲದೆ ವಿಪ್ರಜಾಗಿತೆ
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು
ಕ್ಷಿತಿಯೊಳಧಿಕವದಾವುದೈ ಭೂ
ಪತಿಯೆ ಕೇಳಿಹಪರದ ಸುಖಸಂ
ಗತಿಯನೊಲುವೊಡೆ ಪೂಜಿಸೈ ಬ್ರಾಹ್ಮಣರ ನೀನೆಂದ (ಉದ್ಯೋಗ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪತ್ನಿಗೆ ಆಧಾರವಾವುದಾದರು ಯಾರು ಎಂದು ಕೇಳಿದರೆ ಅದಕ್ಕೆ ಉತ್ತರ ಅವಳ ನಿಜವಾದ ಪತಿಯೆ, ಹಾಗೆಯೆ ಬ್ರಾಹ್ಮಣರಿಗೆ ಅಗ್ನಿಯೇ ಆಧಾರ, ಜಗತ್ತಿನಲ್ಲುಳಿದ ಮೂರು ವರ್ಣಗಳಿಗೆ ಬ್ರಾಹ್ಮಣರೇ ಆಧಾರ. ಭೂಮಿಯಲ್ಲಿ ಇದೇ ನೀತಿ, ನಿನಗೆ ಇಹಪರಗಳಲ್ಲಿ ಸುಖವು ಬೇಕಾದರೆ ಬ್ರಾಹ್ಮಣರನ್ನು ಪೂಜಿಸು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಸತಿ: ಪತ್ನಿ; ಗತಿ:ಆಧಾರ, ಆಶ್ರಯ; ನಿಜ: ನೈಜ, ಸತ್ಯ; ಪತಿ: ಗಂಡ, ಯಜಮಾನ; ವಿಪ್ರ: ಬ್ರಾಹ್ಮಣ; ಜಾತಿ: ಕುಲ; ಹುತ: ಯಜ್ಞಯಾಗಾದಿಗಳಲ್ಲಿ ಅಗ್ನಿಗೆ ಅರ್ಪಿಸಿದುದು, ಹವಿಸ್ಸು; ವರ್ಣ: ಪ್ರಾಚೀನ ಸಾಮಾಜಿಕ ವ್ಯವಸ್ಥೆಯಲ್ಲಿನ ಪಂಗಡ; ತ್ರಯ: ಮೂರು; ಭೂದೇವ: ಬ್ರಾಹ್ಮಣ; ಕ್ಷಿತಿ: ಭೂಮಿ; ಅಧಿಕ: ಹೆಚ್ಚು; ಭೂಪತಿ: ರಾಜ; ಕೇಳು: ಆಲಿಸು; ಇಹಪರ: ಈ ಲೋಕ ಮತ್ತು ಪರಲೋಕ; ಸುಖ: ನೆಮ್ಮದಿ; ಸಂಗತಿ: ಸೇರುವಿಕೆ, ಸಹವಾಸ; ಒಲವು: ಸ್ನೇಹ, ಪ್ರೀತಿ; ಪೂಜಿಸು: ಅರ್ಚಿಸು; ಬ್ರಾಹ್ಮಣ: ವಿಪ್ರ, ಭೂಸುರ;

ಪದವಿಂಗಡಣೆ:
ಸತಿಯರಿಗೆ+ ಗತಿ +ಯಾವುದೈ +ನಿಜ
ಪತಿ+ಯದಲ್ಲದೆ +ವಿಪ್ರ+ಜಾತಿಗೆ
ಹುತವಹನು +ವರ್ಣತ್ರಯಕೆ+ ಭೂದೇವರುಗಳ್+ಇರಲು
ಕ್ಷಿತಿಯೊಳ್+ಅಧಿಕವದ್+ಆವುದೈ +ಭೂ
ಪತಿಯೆ +ಕೇಳ್+ಇಹಪರದ +ಸುಖ+ಸಂ
ಗತಿಯನ್+ಒಲುವೊಡೆ +ಪೂಜಿಸೈ +ಬ್ರಾಹ್ಮಣರ +ನೀನೆಂದ

ಅಚ್ಚರಿ:
(೧) ಸತಿ, ಪತಿ, ಕ್ಷಿತಿ, ಗತಿ – ಪ್ರಾಸ ಪದಗಳು
(೨) ವಿಪ್ರ, ಭೂದೇವ, ಬ್ರಾಹ್ಮಣ – ಸಮನಾರ್ಥಕ ಪದ

ಪದ್ಯ ೪೫: ವಿದ್ವಾಂಸನ ಲಕ್ಷಣವೇನು?

ಒರ್ವನಹನೈ ಶೂರನೂರ
ಕ್ಕೊರ್ವನಹ ಸಾವಿರಕೆ ಪಂಡಿತ
ನೊರನಹನೈ ವಕ್ತ ಶತಸಾವಿರಕೆ ಲೋಕದೊಳು
ಒರ್ವದಾನಿಯ ಕಾಣೆನೈ ತಾ
ನೊರ್ವರೊರ್ವರಿಗೊಂದೆ ಗುಣವದು
ಸರ್ವಗುಣಸಂಪನ್ನರೈ ವಿದ್ವಾಂಸರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಜಗತ್ತಿನಲ್ಲಿ ನೂರಕ್ಕೆ ಒಬ್ಬ ಶೂರನಿರುತ್ತಾನೆ, ಸಾವಿರ ಜನರಲ್ಲಿ ಒಬ್ಬ ಪಂಡಿತನಿರುತ್ತಾನೆ, ಒಳ್ಳೆಯ ಮಾತುಗಾರನು ಲಕ್ಷಕ್ಕೆ ಒಬ್ಬನಿರುತ್ತಾನೆ, ಆದರೆ ಒಬ್ಬ ದಾನಿಯನ್ನು ನಾನು ಕಾಣೆ. ಒಬ್ಬೊಬ್ಬರಿಗೆ ಒಂದೇ ಗುಣವಿರುತ್ತದೆ ಆದರೆ ಎಲ್ಲಾ ಗುಣಗಳ ಸಂಪನ್ನನೇ ವಿದ್ವಾಂಸನೆಂದು ಕರೆಸಿಕೊಳ್ಳುತ್ತಾನೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಒರ್ವ: ಒಬ್ಬನೆ; ಶೂರ: ಧೀರ; ನೂರು: ಶತ; ಸಾವಿರ: ಸಹಸ್ರ; ಪಂಡಿತ: ಕೋವಿದ; ವಕ್ತ: ವಕ್ತಾರ; ಶತಸಾವಿರ: ಲಕ್ಷ; ಲೋಕ: ಜಗತ್ತು; ದಾನಿ: ದಾನ ಮಾಡುವವನು; ಕಾಣೆ: ನೋಡಲು ಸಿಗದು; ಗುಣ: ನಡತೆ, ಸ್ವಭಾವ; ಸರ್ವ: ಎಲ್ಲಾ; ಸಂಪನ್ನ: ಸಜ್ಜನ, ಸತ್ಪುರುಷ, ಹೊಂದಿದವನು; ವಿದ್ವಾಂಸ: ಜ್ಞಾನಿ, ಪಂಡಿತ;

ಪದವಿಂಗಡಣೆ:
ಒರ್ವನಹನೈ +ಶೂರ+ ನೂರಕ್
ಒರ್ವನಹ +ಸಾವಿರಕೆ+ ಪಂಡಿತನ್
ಒರನಹನೈ+ ವಕ್ತ +ಶತಸಾವಿರಕೆ+ ಲೋಕದೊಳು
ಒರ್ವದಾನಿಯ +ಕಾಣೆನೈ +ತಾನ್
ಒರ್ವರ್+ಒರ್ವರಿಗ್+ಒಂದೆ +ಗುಣವದು
ಸರ್ವಗುಣ+ಸಂಪನ್ನರೈ +ವಿದ್ವಾಂಸರುಗಳೆಂದ

ಅಚ್ಚರಿ:
(೧) ಒರ್ವ – ೧-೫ ಸಾಲಿನ ಮೊದಲ ಪದ
(೨) ನೂರು, ಸಾವಿರ, ಶತಸಾವಿರ – ಸಂಖ್ಯೆಗಳ ಬಳಕೆ
(೩) ಶೂರ, ಪಂಡಿತ, ವಕ್ತಾರ, ದಾನಿ, ವಿದ್ವಾಂಸ ರ ಬಗ್ಗೆ ತಿಳಿಸುವ ಪದ್ಯ